ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲ್ಪಕಲಾ ವೈಭವದ ಹಲಸಿಯ ದೇಗುಲ

Last Updated 1 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಶಾಲಾ–ಕಾಲೇಜುಗಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಶಿಲ್ಪಕಲೆಯ ಗತವೈಭವ ಕಣ್ತುಂಬಿಕೊಳ್ಳಬೇಕು ಎನ್ನುವವರು ಹಾಗೂ ಐತಿಹಾಸಿಕ ಸ್ಥಳಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಆಸಕ್ತಿ ಹೊಂದಿರುವವರಿಗೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲ್ಲೂಕಿನಲ್ಲಿರುವ ಹಲಸಿ ಪ್ರಶಸ್ತವಾದುದು. ಕನ್ನಡಿಗರ ಪ್ರಥಮ ರಾಜಮನೆತನವಾದ ಕದಂಬರ ಕಾಲದಲ್ಲಿ ಉಪರಾಜಧಾನಿಯಾಗಿದ್ದ ಐತಿಹಾಸಿಕ ಸ್ಥಳವಿದು. ಹಲವು ವಿಶೇಷಗಳು ಮತ್ತು ಕೌತುಕಗಳನ್ನು ಒಡಲಲ್ಲಿ ಇಟ್ಟುಕೊಂಡಿರುವ ಪ್ರವಾಸಿತಾಣ. ಮನೆಮಂದಿಯೆಲ್ಲಾ ಬರುವುದಕ್ಕೆ ತಕ್ಕದಾದ ಜಾಗ.

5ನೇ ಶತಮಾನಕ್ಕೆ ಸಂಬಂಧಿಸಿದ ಶಾಸನಗಳು, ಇತಿಹಾಸದ ಗತವೈಭವವನ್ನು ಕಟ್ಟಿಕೊಡುತ್ತವೆ. ಕದಂಬರ ಆರಾಧ್ಯ ದೈವವಾಗಿದ್ದ ಭೂವರಾಹ ನರಸಿಂಹ ದೇವರ (ಸ್ವಯಂಭು) ಹಾಗೂ ಯೋಗಿ ನಾರಾಯಣ ದೇವರ ಮೂರ್ತಿಗಳು ಎದುರು–ಬದರಿನಲ್ಲಿರುವ ದೇವಾಲಯ ಇಲ್ಲಿನ ವಿಶೇಷ ಆಕರ್ಷಣೆ. ಕಪ್ಪುಶಿಲೆಯಿಂದ ಕೆತ್ತಲಾಗಿರುವ ಈ ಮೂರ್ತಿಗಳು ನೋಡುಗರನ್ನು ಸೆಳೆಯುತ್ತವೆ. ಇಲ್ಲಿಗೆ ಬಂದರೆ, ದೇವರ ದರ್ಶನವೂ ಆಯಿತು; ಪುರಾತತ್ವ ಸ್ಥಳ ವೀಕ್ಷಿಸಿದಂತೆಯೂ ಆಗುತ್ತದೆ.

ಶಿಲ್ಪಕಲೆಯ ದರ್ಪಣದಂತಿರುವ ಈ ದೇವಾಲಯವನ್ನು ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಆವಶೇಷಗಳ ಅಧಿನಿಯಮದ ಪ್ರಕಾರ, ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಘೋಷಿಸಲಾಗಿದೆ.

ದೇವಾಲಯಕ್ಕೆ ಮುಂಬಾಗಿಲಿಲ್ಲ!
ಸಾಮಾನ್ಯವಾಗಿ ಎಲ್ಲ ದೇವಾಲಯಗಳಿಗೆ ಮುಂಬಾಗಿಲಿರುತ್ತದೆ. ಆದರೆ, ಹಲಸಿಯ ಈ ಪ್ರಾಚೀನ ದೇವಾಲಯದಲ್ಲಿ ಎಡ ಭಾಗದಲ್ಲೊಂದು ಹಾಗೂ ಬಲದಲ್ಲೊಂದು ಬಾಗಿಲುಗಳನ್ನು ಮಾಡಲಾಗಿದೆ. ಹೊರಾವರಣದಲ್ಲಿ ಚಿಕ್ಕದಾದ ಗಣಪತಿ, ಆದಿಶಕ್ತಿ, ವೀರಭದ್ರೇಶ್ವರ, ವಿಠ್ಠಲರುಕ್ಮಾಯಿ ಮತ್ತು ಲಕ್ಷ್ಮಿನರಸಿಂಹ ದೇವಾಲಯಗಳು ಇವೆ. ಇವು ಸೂಕ್ಷ್ಮ ಕೆತ್ತನೆಯಿಂದಾಗಿ ಆಕರ್ಷಿಸುತ್ತವೆ. ಕದಂಬರ ಕಾಲದ ಕಲಾ ನೈಪುಣ್ಯತೆಗೆ ಕನ್ನಡಿಯಂತಿವೆ. ಹೊರಗೆ ಎಷ್ಟೇ ಬಿಸಿಲಿದ್ದರೂ, ದೇವಾಲಯದ ಒಳಾವರಣವು ತಂಪಿನ ಅನುಭವ ನೀಡುತ್ತದೆ.

ದೇವಾಲಯದ ಆವರಣದಲ್ಲಿರುವ ಪುಷ್ಕರಣಿಯು ಆಕರ್ಷಕವಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ನಲುಗುತ್ತಿದೆ. ನೀರು ಪಾಚಿ ಕಟ್ಟಿದೆ. ಪುಷ್ಕರಣಿಯ ದ್ವಾರದ ಗೇಟಿಗೆ ಬೀಗ ಹಾಕಲಾಗಿದ್ದು, ಸಮೀಪಕ್ಕೆ ಹೋಗುವುದಕ್ಕೆ ಅವಕಾಶವಿಲ್ಲ.

ಪ್ರವಾಸಿಗರು, ಭಕ್ತರು
ದೇವಾಲಯ ಆವರಣದಲ್ಲಿ ಕಿರುಉದ್ಯಾನ ನಿರ್ವಹಣೆ ಮಾಡಲಾಗುತ್ತಿದೆ. ವಿವಿಧ ಬಗೆಯ ಹೂವುಗಳು ಮನಸ್ಸಿಗೆ ಮುದ ನೀಡುತ್ತವೆ. ಇಲ್ಲಿಗೆ ನೆರೆಯ ಮಹಾರಾಷ್ಟ್ರ, ಗೋವಾ ಮೊದಲಾದ ಕಡೆಗಳಿಂದಲೂ ಹೆಚ್ಚಿನ ಪ್ರವಾಸಿಗರು ಬರುತ್ತಾರೆ. ಈ ಭಾಗದಲ್ಲಿನ ಶಾಲಾ ಮಕ್ಕಳನ್ನು ಪಿಕ್‌ನಿಕ್‌ಗೆಂದು ಕರೆದುಕೊಂಡು ಬರುವವರೂ ಇದ್ದಾರೆ. ನರಸಿಂಹ ಹಾಗೂ ನಾರಾಯಣ ದೇವರ ಭಕ್ತರು ಅಪಾರ ಪ್ರಮಾಣದಲ್ಲಿ ಬರುತ್ತಾರೆ.

ಪ್ರವಾಸಿಗರನ್ನು ಮತ್ತಷ್ಟು ಆಕರ್ಷಿಸಬೇಕು ಎಂಬ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತದಿಂದ 2014 ಮತ್ತು 2015ರಲ್ಲಿ ಹಲಸಿಯಲ್ಲಿ ಕದಂಬೋತ್ಸವ ನಡೆಸಲಾಗಿತ್ತು. ನಂತರ ಈ ಉತ್ಸವದ ಪರಂಪರೆ ಮುಂದುವರಿದಿಲ್ಲ. ಇದರೊಂದಿಗೆ ಗಡಿ ತಾಲ್ಲೂಕಿನ ಐತಿಹಾಸಿಕ ಸ್ಥಳದ ಅಭಿವೃದ್ಧಿಯನ್ನು ನಿರ್ಲಕ್ಷಿಸಲಾಗಿದೆ ಎನ್ನುವ ಕೊರಗು ಅಲ್ಲಿನ ಜನರಲ್ಲಿದೆ. ಸರ್ಕಾರ ಗಮನಹರಿಸಿದರೆ, ಈ ಜಾಗವನ್ನು ಅತ್ಯುತ್ತಮ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಬಹಳಷ್ಟು ಅವಕಾಶಗಳಿವೆ.

ಮಾರ್ಗ, ಊಟ, ವಸತಿ
ಬೆಂಗಳೂರು ಕಡೆಯಿಂದ ಬಂದರೆ ಧಾರವಾಡ, ಕಿತ್ತೂರು, ಬೀಡಿ, ಕಾರವಾರದಿಂದ ಜೋಯಿಡಾ, ಗಣೇಶಗುಡಿ, ರಾಮನಗರ ಮೂಲಕ, ಬೆಳಗಾವಿ ಯಿಂದ ಬರುವವರು ಖಾನಾಪುರ, ನಂದಗಡದ ಮಾರ್ಗದಲ್ಲಿ ಬರಬೇಕು. ಖಾನಾಪುರದಿಂದ 15 ಕಿ.ಮೀ. ದೂರದಲ್ಲಿದೆ.

ಸಾರಿಗೆ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಸಿಗುತ್ತವೆ. ಆದರೆ, ಸ್ವಂತ ವಾಹನದಲ್ಲಿ ಹೋಗುವುದು ಹೆಚ್ಚು ಅನುಕೂಲಕರ. ಊಟ, ಉಪಾಹಾರಕ್ಕೆ ಇಲ್ಲಿ ವ್ಯವಸ್ಥೆಗಳಿಲ್ಲ. ಖಾನಾಪುರದಲ್ಲಿ ವಸತಿ–ಊಟಕ್ಕೆ ಅವಕಾಶವಿದೆ. ಹಲಸಿ ಗ್ರಾಮದಿಂದ 3 ಕಿ.ಮೀ. ದೂರದಲ್ಲಿ ಬೆಟ್ಟದಲ್ಲಿ ಪುರಾತನ ರಾಮೇಶ್ವರ ದೇಗುಲವಿದೆ. ಇದಲ್ಲದೇ, ಹಲವಾರು ದೇವಾಲಯಗಳಿವೆ. ಅಲ್ಲಿಂದ ಬರುವಾಗ ಅಥವಾ ಹೋಗುವ ಮುನ್ನ ನಂದಗಡದಲ್ಲಿರುವ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಸಮಾಧಿ, ನೇಣುಗೇರಿಸಿದ ಸ್ಥಳವನ್ನು ವೀಕ್ಷಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT