ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಬೆಟ್ಟಕ್ಕೆ ಹಳ್ಳಿಗರೇ ಕಾವಲು

ಬೆಟ್ಟಾರಣ್ಯಕ್ಕೆ ಹಳ್ಳಿಗರೇ ಕಾವಲಿಗರು
Last Updated 16 ಏಪ್ರಿಲ್ 2019, 12:42 IST
ಅಕ್ಷರ ಗಾತ್ರ

ಬೆಟ್ಟಗುಡ್ಡಗಳ ಸಾಲುಗಳು ನಮ್ಮ ಪಾವಗಡದ ಅವಿಭಾಜ್ಯ ಅಂಗ. ಗತಕಾಲದ ವೈಭವದ ದ್ಯೋತಕವಾಗಿ ಇಂದಿಗೂ ಕೆಲವೆಡೆ ಕೋಟೆಯ ಅವಶೇಷಗಳಿವೆ. ಪ್ರತಿ ಸಣ್ಣ ಹಳ್ಳಿಯೂ ಒಂದು ಬೆಟ್ಟಕ್ಕೆ ಒರಗಿಕೊಂಡೇ ಇರುತ್ತದೆ. ಇವುಗಳಲ್ಲಿ ಕೆಲವು ಬೋಳಾಗಿವೆ. ಆದರೆ, ಮುಗದಾಳ ಬೆಟ್ಟ, ತಿಮ್ಮಪ್ಪನ ಬೆಟ್ಟ, ಕೆ.ರಾಂಪುರಬೆಟ್ಟ, ಹೊಸದುರ್ಗ ಬೆಟ್ಟಗಳು ಈಗಲೂ ಹಸಿರಾಗಿವೆ.

ಈ ಬೆಟ್ಟಗಳನ್ನು ದೂರದಿಂದ ನೋಡಿದಾಗ ಒಂದು ರೀತಿ ಹಸಿರು ಸೀರೆ ಉಡಿಸಿದಂತೆ ಕಾಣುತ್ತವೆ. ಹತ್ತಿರ ಹೋಗಿ ನೋಡಿದರೆ ಬಂಡೆಗಳೇ ಕಾಣದಷ್ಟು ಬೃಹದಾಕಾರವಾಗಿ ಮರಗಳು ಬೆಳೆದಿರುವುದು ಕಾಣುತ್ತವೆ. ಅಷ್ಟೇ ಅಲ್ಲ, ಕಡಿದುಳಿದ ಮತ್ತು ಗಾಳಿ ಮಳೆಗೆ ಉರುಳಿಬಿದ್ದ ಮರದ ತುಂಡುಗಳಲ್ಲೂ ಚಿಗುರು ಒಡೆಯಲು ತವಕಿಸುತ್ತಿರುವುದನ್ನೂ ನೋಡಬಹುದು. ಇವುಗಳ ಜತೆಗೆ ಗಿಡಮೂಲಿಕೆ ಸಸ್ಯಗಳು, ಹುಲ್ಲಿನ ಜಾತಿಯ ಗಿಡಗಳಿವೆ. ಇಲ್ಲಿ ಪಶ್ಚಿಮಘಟ್ಟದಂತಹ ಹಸಿರು ಕಾಣದಿದ್ದರೂ, ಕುರುಚಲು ಕಾಡಿನ ವನಸಿರಿಯಂತೂ ಗೋಚರಿಸುತ್ತದೆ.

ಕಡಿಮೆ ಮಳೆ ಬೀಳುವ, ಹೆಚ್ಚು ಬಿಸಿಲಿರುವ, ಅಂತರ್ಜಲ ಪಾತಾಳಕ್ಕಿಳಿದಿರುವ ಪಾವಗಡದ ಬೆಟ್ಟಗಳಲ್ಲಿ ಇಂಥದ್ದೊಂದು ಪರಿಸರವಿರುವುದು ಅಚ್ಚರಿಯ ಸಂಗತಿಯೇ. ಈ ಬೆಟ್ಟಗಳು ಈಗಲೂ ಹಸಿರು ಬೆಳೆಸುವ ಸಾಮರ್ಥ್ಯ ಹೊಂದಿರಲು ಮೂಲ ಕಾರಣವೆಂದರೆ, ಸುತ್ತಲಿನ ಗ್ರಾಮಸ್ಥರು ಈ ಬೆಟ್ಟಕ್ಕೆ ನೀಡಿರುವ ರಕ್ಷಣೆ. ಬೆಟ್ಟದ ತಪ್ಪಲಿನ ಗ್ರಾಮಗಳ ಜನ ಗ್ರಾಮ ಅರಣ್ಯ ಸಮಿತಿ ರಚಿಸಿಕೊಂಡು, ನಾಲ್ಕು ದಶಕಗಳಿಂದ ಈ ಬೆಟ್ಟವನ್ನು ರಕ್ಷಿಸುತ್ತಿದ್ದಾರೆ.

ಹೇಗೆ ರಕ್ಷಣೆಯಾಯಿತು?
ಪಾವಗಡ ತಾಲ್ಲೂಕಿನ ಚನ್ನಕೇಶವಪುರದಿಂದ ಕೋಟಗುಡ್ಡದ ದಾರಿಯಲ್ಲಿ ಮುಗದಾಳ ಬೆಟ್ಟವಿದೆ. ಸುಮಾರು 500 ಎಕರೆ ವಿಸ್ತೀರ್ಣ, 2870 ಅಡಿ ಎತ್ತರ. ದಕ್ಷಿಣಕ್ಕೆ ಮುಗದಾಳ ಬೆಟ್ಟದ ಗ್ರಾಮವಿದೆ, ಉತ್ತರಕ್ಕೆ ಕರಿಯಮ್ಮನ ಪಾಳ್ಯ.

ಇಪ್ಪತ್ತೈದು ವರ್ಷಗಳ ಹಿಂದಿನ ಘಟನೆ. ಆಗ ಬೆಟ್ಟದಲ್ಲಿ ಸಾಕಷ್ಟು ಕಾಡು ಮರಗಳಿದ್ದವು. ಊರಿನ ಜನ, ಮನೆ ಕಟ್ಟುವುದಕ್ಕೆ, ಉರುವಲಿಗಾಗಿ ಇಲ್ಲಿನ ಮರಗಳನ್ನು ಕಡಿದು ಬೆಟ್ಟವನ್ನು ಬೋಳು ಮಾಡುತ್ತಿದ್ದರು. ಇದರಿಂದ ರೋಸಿ ಹೋಗಿದ್ದ ಗ್ರಾಮದ ಕೆಲವು ಹಿರಿಯರು ಬೆಟ್ಟದ ಮರಗಳ ರಕ್ಷಣೆಗೆ ಸಂಕಲ್ಪ ಮಾಡಿದರು. 1996-97ರಲ್ಲಿ ಇಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಿಕೊಂಡರು. ಮುಗದಾಳುಬೆಟ್ಟದ ಆನಂದ ನಾಯಕರು ಸಮಿತಿ ನೇತೃತ್ವ ವಹಿಸಿಕೊಂಡರು. ಈ ಸಮಿತಿಯ ಸದಸ್ಯರು ಬೆಟ್ಟದಲ್ಲಿ ಮರ ಕಡಿಯದಂತೆ ರಕ್ಷಣೆಗೆ ನಿಂತರು.

‘ಒಂದು ಹೊರೆ ಸೌದೆ ಕಡಿದರೆ ₹1001 ದಂಡ. ಅದಕ್ಕಿಂತ ಹೆಚ್ಚಿಗೆ ಕಡಿದರೆ ₹ 2,000, ₹3,000, ₹5000ದವರೆಗೂ ದಂಡ ಹಾಕುತ್ತಿದ್ದರು. ಇದು ಒಣಕಟ್ಟಿಗೆ ಅನ್ವಯಿಸುತ್ತಿರಲಿಲ್ಲ. ಈ ಕಟ್ಟುನಿಟ್ಟಿನ ನಿಯಮದಿಂದ ಬೆಟ್ಟ ರಕ್ಷಣೆಗೆ ಚಾಲನೆ ಸಿಕ್ಕಿತು’ ಎಂದು ನೆನಪಿಸಿಕೊಳ್ಳುತ್ತಾರೆ ಕರಿಯಮ್ಮನಪಾಳ್ಯದ ಬೀದಿನಾಟಕಗಳ ರಚನೆಕಾರ ಲಿಂಗಪ್ಪ.

ಸಮಿತಿಯ ನಿರ್ಧಾರವನ್ನು ಪರಿಸರ ಕಾಳಜಿ ಇರುವ ಕೆಲವರು ಗೌರವಿಸಿದರು. ಹೀಗಾಗಿ ಬೆಟ್ಟದಲ್ಲಿನ ಮರಗಳ ಕಡಿತಕ್ಕೆ ಕಡಿವಾಣ ಬಿತ್ತು. ಕೆಲವು ವರ್ಷಗಳ ನಂತರ, ಬೆಟ್ಟದಲ್ಲಿ ಮರಗಳ ಸಂಖ್ಯೆ ಹೆಚ್ಚಾಯಿತು. ಪರಿಣಾಮವಾಗಿ, ಇಲ್ಲಿನ ಆಸುಪಾಸಿನ ಊರಿನಲ್ಲಿ ಅಂತರ್ಜಲ ಉತ್ತಮವಾಯಿತು. ಈಗಲೂ ಜಂಟಿ ಅರಣ್ಯ ಸಮಿತಿ ಬೆಟ್ಟದ ರಕ್ಷಣೆಗೆ ಬದ್ಧವಾಗಿದೆ. ಅರಣ್ಯ ಇಲಾಖೆಯಿಂದ ಯಾವುದೇ ಸಹಾಯ ಪಡೆಯದೇ, ‘ನಮ್ಮ ಬೆಟ್ಟವನ್ನು ನಾವೇ ರಕ್ಷಣೆ ಮಾಡುತ್ತೇವೆ’ ಎಂದು ಹಳ್ಳಿಯವರು ನಿರ್ಧರಿಸಿ, ಹಾಗೇ ನಡೆದು ಕೊಳ್ಳುತ್ತಿದ್ದಾರೆ.

ಬೆಟ್ಟದಲ್ಲಿ ಚಿಗರೆ ಮರ, ಅರಳಿ ಮರ, ಮರಾಲೆ, ತಬಸೆ, ದೊಡ್ಡ ಚಿಗರೆ, ಸಣ್ಣಚಿಗರೆ, ಹೊಂಗೆ, ಬಂಡ್ರೆ, ಚೊಗಚೆ, ಕಾರೆ ಕಳ್ಳಿ, ಊಣೆಹಣ್ಣು, ಔಷದಿ ಗಿಡಗಳು ಬೆಳೆಯುತ್ತಿವೆ. ಈಗ ಜಂಟಿ ಅರಣ್ಯ ಸಮಿತಿಯವರ ಜಮೀನು ಇದೆ, ಪ್ರತಿ ವರ್ಷ ಹರಾಜಿನಿಂದ (ಗುತ್ತಿಗೆ) ಹಣ ಬರುತ್ತದೆ. ‘ಈ ಹಣವನ್ನು ಹಳ್ಳಿಯ ಅಭಿವೃದ್ಧಿ ಕಾರ್ಯಗಳಿಗೆ, ಹಬ್ಬ, ಜಾತ್ರೆಯಂತಹ ಕಾರ್ಯಕ್ರಮಗಳಿಗೂ ಬಳಸುತ್ತಾರೆ’ ಎನ್ನುತ್ತಾರೆ ಲಿಂಗಪ್ಪ.

ಮರಗಳ ರಕ್ಷಣೆ, ಬೆಟ್ಟದಲ್ಲಿ ಮಾತ್ರವಲ್ಲ. ಕೆರೆಯ ಅಂಗಳದಲ್ಲಿರುವ ಮರಗಳನ್ನು ರಕ್ಷಿಸಲು ಸಮಿತಿ ಇದೇ ಉಪಕ್ರಮ ತೆಗೆದುಕೊಂಡಿತು. ಮುಗದಾಳ ಬೆಟ್ಟದ ಸುತ್ತಲಿನ ಹಳ್ಳಿಗಳಾದ ಬ್ಯಾಡನೂರು, ಕನ್ನಮೇಡಿ, ರಾಜವಂತಿ, ಪಳವಳ್ಳಿಯಲ್ಲೂ ಇಂಥ ಉದಾಹರಣೆಗಳು ಸಿಗುತ್ತವೆ.

ಬೆಟ್ಟಗಳ ರಕ್ಷಣೆ ನಂತರ...
ಈ ನಾಲ್ಕು ಬೆಟ್ಟಗಳಲ್ಲಿನ ಅರಣ್ಯಕ್ಕೆ ಸಮಿತಿಯವರು ರಕ್ಷಣೆ ನೀಡಿದ ನಂತರ, ಮರಗಳ ಸಂಖ್ಯೆ ಹೆಚ್ಚಾಗಿದೆ. ಅರಣ್ಯ ನಿರ್ವಹಣೆ ವೆಚ್ಚವೂ ಶೂನ್ಯವಾಗಿದೆ, ಸ್ಥಳೀಯರಿಗೆ ಹೆಚ್ಚು ಕಡಿಮೆ ಯಾವುದೇ ಸಂಘರ್ಷವಿಲ್ಲ. ಬದಲಿಗೆ ಸ್ನೇಹಪರ ವಾತಾವರಣವಿದೆ. ಇದು ಕಾಡಿನಲ್ಲಿ ಜೀವ ಸಂಕುಲಗಳ ಬೆಳವಣಿಗೆಗೂ ಸಹಾಯವಾಗಿದೆ. ಪರಿಣಾಮವಾಗಿ ಬೆಟ್ಟದ ತಪ್ಪಲಿನಲ್ಲಿರುವ ಈ ಗ್ರಾಮಗಳ ಬಾವಿಗಳಲ್ಲಿ ನೀರು ಇದೆ. ಕೊಳವೆ ಬಾವಿಗಳಲ್ಲಿ ಮೇಲ್ಮಟ್ಟದಲ್ಲೇ 200 ಅಡಿಯಿಂದ 300 ಅಡಿಗೆ ನೀರು ದೊರೆಯುತ್ತಿದೆ. ಆದರೆ ಅದೇ ಪಕ್ಕದ ಊರಿನಲ್ಲಿ ಪರಿಸ್ಥಿತಿ ಹೀಗಿಲ್ಲ.

ಆದಾಯದ ಮೂಲಗಳು
‘ಬೆಟ್ಟಗಳನ್ನು ಅಲ್ಲಿನ ಜನರೇ ಕಾಪಾಡುತ್ತಿದ್ದಾರೆ. ಈ ರಕ್ಷಣಾ ಕೆಲಸದಿಂದ, ತಮಗೆ ಏನು ಅನುಕೂಲವಾಗುತ್ತಿದೆ ಎಂಬುದನ್ನು ಅವರು ಅರಿತಿದ್ದಾರೆ’ ಎನ್ನುವುದು ತುಮಕೂರಿನ ನಿವೃತ್ತ ಅರಣ್ಯ ಅಧಿಕಾರಿ ನಾಗೇಂದ್ರ ಅಭಿಪ್ರಾಯ.

ಅದಕ್ಕೆ ಅವರು ಈ ಉದಾಹರಣೆ ಕೊಡುತ್ತಾರೆ; ಪಾವಗಡ ತಾಲ್ಲೂಕು ಹೊಸದುರ್ಗದ ಕರಿಯಮ್ಮ ಅರಣ್ಯ ಸಮಿತಿಯವರು ಹಿಂದೆ ಬೆಟ್ಟದಲ್ಲಿರುವ ಸೀತಾಫಲ ಹಣ್ಣಿನ ಹರಾಜಿನಿಂದ ಬಂದ ಹಣದಿಂದ ಚೀಟಿ ಶುರು ಮಾಡಿದರು. ಇದು ಒಂದು ಆದಾಯದ ಮೂಲವಾಯಿತು. ಅದನ್ನು ಗ್ರಾಮದ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳಿಗೆ ಬಳಸಲಾರಂಭಿಸಿದರು. ಇದು ಹೆಚ್ಚಾಗಿ ಯುವ ಪೀಳಿಗೆಯವರನ್ನು ಅರಣ್ಯ ರಕ್ಷಣೆಗೆ ಆಕರ್ಷಿಸಲು ಕಾರಣವಾಗಿದೆ. ಹೀಗಾಗಿ ಬೆಟ್ಟ ಸಂರಕ್ಷಣೆ ಒಂದು ಹೆಮ್ಮೆಯ ಉದ್ದೇಶವಾಗಿದೆ’ ಎಂದು ಅವರು ವಿವರಿಸುತ್ತಾರೆ.

ಈ ಭಾಗದಲ್ಲಿ ಹಬ್ಬದ ನೆಪದಲ್ಲಿ ಬೇಟೆ, ಬೆಂಕಿ ಎಲ್ಲವೂ ಇತ್ತು. ಆದರೆ, ಬೆಟ್ಟಗಳಿಂದ ಪ್ರಯೋಜನ ಪಡೆಯವ ಗ್ರಾಮಸ್ಥರೇ, ಅವುಗಳ ರಕ್ಷಣೆಗೆ ನಿಂತಿರುವುದರಿಂದ, ಹೊರಗಿನವರು ಯಾರೂ ಬೆಟ್ಟಗಳಲ್ಲಿರುವ ಕಾಡಿಗೆ ತೊಂದರೆ ಕೊಡಲು ಸಾಧ್ಯವಾಗುತ್ತಿಲ್ಲ !

ಬೆಟ್ಟ ರಕ್ಷಣೆಯಿಂದಾದ ಪ್ರಯೋಜನ
‘ಬೆಟ್ಟಗಳನ್ನು ರಕ್ಷಿಸುವುದರಿಂದ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಮರಗಳು ಬೆಳೆದಂತೆ ಕಾಡುಪಾಣಿಗಳು, ಪಕ್ಷಿಗಳ ಜೀವವೈವಿಧ್ಯ ಹೆಚ್ಚಾಗುತ್ತದೆ. ಈಗ ಪಾವಗಡ ತಾಲ್ಲೂಕಿನ ಬೆಟ್ಟಗಳಲ್ಲೂ ಇದೇ ರೀತಿಯ ಬದಲಾವಣೆಗಳನ್ನು ಗಮನಿಸಬಹುದು’ ಎನ್ನುತ್ತಾರೆ ಕೃಷಿ ಮತ್ತು ಪರಿಸರ ಕುರಿತು ಸಂಶೋಧನೆ ನಡೆಸುತ್ತಿರುವ ವಿಜ್ಞಾನಿ ಚನ್ನಕೇಶವಪುರದ ಶೇಷಗಿರಿರಾವ್ .

ಬೆಟ್ಟದಲ್ಲಿ ಕಾಡಿದ್ದರೆ, ಸುತ್ತಲೂ ನೀರಿನ ಒರತೆ ಹೆಚ್ಚಾಗುತ್ತದೆ. ಸಸ್ಯ ಸಂಕುಲ ಹೆಚ್ಚಾದರೆ, ಸುತ್ತಲಿನ ಹಳ್ಳಿಗಳಲ್ಲಿರುವ ಪ್ರಾಣಿಗಳಿಗೆ ಮೇವು ಲಭ್ಯವಾಗುತ್ತದೆ. ಈ ಬೆಟ್ಟಗಳಲ್ಲಿ ಚಿರತೆ, ಕರಡಿ, ಮೊಲ, ಗುಳ್ಳೇನರಿ, ಹನುಮಾನ್ ಲಂಗೂರ್ ನಂತಹ ಪ್ರಾಣಿಗಳಿಗೆ ಆಶ್ರಯ ಪಡೆದಿವೆ. ಕಾಡು ಸೃಷ್ಟಿಗಿಂತ, ಸೃಷ್ಟಿಯಾಗಿರುವ ಕಾಡನ್ನು ರಕ್ಷಿಸಿದರೆ, ಇಷ್ಟೆಲ್ಲ ಪ್ರಯೋಜನಗಳಾಗುತ್ತವೆ ಎನ್ನುತ್ತಾರೆ ಅವರು.

ಐತಿಹಾಸಿಕ ತಾಣ
ಮುಗದಾಳ ಬೆಟ್ಟದಲ್ಲಿ ಕೋಟೆಯ ಪಳಯುಳಿಕೆಗಳಿವೆ. ಶಾಸನಗಳನ್ನು ಹುಡುಕಿದಾಗ, 1667ರಲ್ಲಿ ವಿಜಯನಗರ ರಾಜರ ಆಳ್ವಿಕೆ ಇತ್ತು ಎನ್ನುವುದು ಗೊತ್ತಾಗುತ್ತದೆ. ಬೆಟ್ಟದ ಮೇಲೆ ಎರಡು ದೊಣೆ ಇವೆ. ಅದನ್ನು ಅಕ್ಕಮ್ಮನ ದೊಣೆ ಎನ್ನುತ್ತಾರೆ. ಇಲ್ಲಿ ವರ್ಷವಿಡಿ ನೀರು ಇರುತ್ತದೆ. ಆ ನೀರು ಫ್ರಿಡ್ಜ್ ನಲ್ಲಿ ಇಟ್ಟಂತೆ ಯಾವಾಗಲೂ ತಣ್ಣಗಿರುತ್ತದೆ. ಅಲ್ಲಿಯೇ ಕರಿಯಮ್ಮ, ಮಾರಮ್ಮ, ಪಾಲಾಯಾಕು ಸ್ವಾಮಿ ದೇವಸ್ಥಾನಗಳು ಇದೆ. ಈ ಬೆಟ್ಟದಲ್ಲಿ ಶಿಲಾಯುಗದ ಕೆಲವು ಪಳೆಯುಳಿಕೆಗಳು ದೊರೆತಿವೆ ಎಂದು ವಿವರಿಸುತ್ತಾರೆ ಲಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT