ಬೆಂಗಳೂರು: ಚೇತೇಶ್ವರ್ ಪೂಜಾರ ಅವರು ಟೆಸ್ಟ್ ಕ್ರಿಕೆಟ್ ರಂಗಕ್ಕೆ ಪದಾರ್ಪಣೆ ಮಾಡುವ ಹೊತ್ತಿಗೆ ಭಾರತವು ಟ್ವೆಂಟಿ–20 ವಿಶ್ವಕಪ್ ಗೆದ್ದು ಮೂರು ವರ್ಷಗಳಾಗಿದ್ದವು. ಇಂಡಿಯನ್ ಪ್ರೀಮಿಯರ್ ಲೀಗ್ ಎಂಬ ಶ್ರೀಮಂತ ಟೂರ್ನಿಯ ಭರಾಟೆ ಆರಂಭವಾಗಿ ಎರಡು ವರ್ಷಗಳು ಕಳೆದಿದ್ದವು. ಅದಾಗಲೇ ಕ್ರಿಕೆಟ್ ಅಂಗಳದತ್ತ ಬರುವ ಹುಡುಗರು ‘ಹೊಡಿ ಬಡಿ’ ವೀರರಾಗಿ ಬೆಳೆಯುವ ಕನಸು ಕಾಣುತ್ತಿದ್ದರು.

ಆದರೆ ಪೂಜಾರ ಅವರನ್ನು ಮಾತ್ರ ಚುಟುಕು ಕ್ರಿಕೆಟ್ನ ತಳಕು, ಬಳಕು ಆಕರ್ಷಿಸಲೇ ಇಲ್ಲ. ಅದರಲ್ಲೂ ಕಳೆದ 15 ವರ್ಷಗಳಲ್ಲಿ ಟಿ20 ಕ್ರಿಕೆಟ್ ಮತ್ತು ಐಪಿಎಲ್ ಟೂರ್ನಿಯ ಜನಪ್ರಿಯತೆ ಅಗಾಧವಾಗಿ ಬೆಳೆದಿದೆ. ಈ ಅವಧಿಯಲ್ಲಿ ಹಲವು ಆಟಗಾರರು ಐಪಿಎಲ್ನಲ್ಲಿ ದೊಡ್ಡ ಮೊತ್ತವನ್ನು ತಮ್ಮ ಜೇಬಿಗಿಳಿಸಿದ್ದಾರೆ. 14 ವರ್ಷದ ವೈಭವ್ ಸೂರ್ಯವಂಶಿ ಅಂತಹ ಹುಡುಗರೂ ಕೋಟಿ ರೂಪಾಯಿ ಗಳಿಸಿದ್ದಾರೆ. ಈ ಎಲ್ಲ ಆಕರ್ಷಣೆ, ಆಮೀಷಗಳ ನಡುವೆಯೂ ‘ಬಂಡೆ’ಯಂತೆ ನಿಂತು ‘ಟೆಸ್ಟ್ ಪರಿಣತ’ ಎಂಬ ಹೆಗ್ಗಳಿಕೆಯೊಂದಿಗೆ ವೃತ್ತಿಜೀವನಕ್ಕೆ ವಿದಾಯ ಹೇಳಲು ಎಂಟೆದೆಯೇ ಬೇಕಲ್ಲವೇ?

ಹೌದು; ಪೂಜಾರ ಅವರ ಮನೋದಾರ್ಢ್ಯಕ್ಕೆ ಹಲವು ಉದಾಹರಣೆಗಳಿವೆ. 2021ರಲ್ಲಿ ಗಾಬಾ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾದ ಬಿರುಗಾಳಿ ವೇಗದ ಬೌಲರ್ಗಳು ಹಾಕಿದ 135 ರಿಂದ 145 ಕಿ.ಮೀ ವೇಗದ ಎಸೆತಗಳು ಪೂಜಾರ ಅವರ ತಲೆ, ತೋಳು, ಮುಂಬೈ, ಹೊಟ್ಟೆ, ಸೊಂಟಗಳಿಗೆ ಅಪ್ಪಳಿಸಿದ್ದವು. ಹಲ್ಲುಕಚ್ಚಿ ನೋವು ಸಹಿಸಿಕೊಂಡ ಪೂಜಾರ ಅರ್ಧಶತಕ ಗಳಿಸಿದರು. 319 ನಿಮಿಷಗಳವರೆಗೆ ಕ್ರೀಸ್ನಲ್ಲಿದ್ದು 211 ಎಸೆತಗಳನ್ನು ಎದುರಿಸಿದ್ದು ಅವರ ದೈಹಿಕ ಶಕ್ತಿಯಷ್ಟೇ ಅಲ್ಲ. ಅವರ ಗಟ್ಟಿ ಮನೋಬಲದ ಪ್ರತೀಕವೂ ಆಗಿತ್ತು. ಗಾಬಾದಲ್ಲಿ ಭಾರತವು ಮೊಟ್ಟಮೊದಲ ಬಾರಿ ಟೆಸ್ಟ್ ಗೆದ್ದು ಇತಿಹಾಸ ಬರೆಯುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ದಕ್ಕಾಗಿಯೇ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿರುವ 19 ಶತಕಗಳು ಒಂದು ತೂಕವಾದರೆ, ಗಾಬಾದ ಅರ್ಧಶತಕದ್ದೇ ಒಂದು ತೂಕ.

ರಾಜಕೋಟ್ನಲ್ಲಿ ಜನಿಸಿದ ಚೇತೇಶ್ವರ್ ಅವರು ಅಪ್ಪ ಅರವಿಂದ್ ಅವರಿಂದ ಕ್ರಿಕೆಟ್ ಕಲಿತರು. ಅಮ್ಮ ರೀನಾ ಅವರಿಂದ ಆಧ್ಯಾತ್ಮ ರೂಢಿಸಿಕೊಂಡರು. ತಮ್ಮ ಹದಿವಯದಲ್ಲಿಯೇ ಚೇತೇಶ್ವರ್ ಅವರಿಗೆ ಅಮ್ಮನ ಅಗಲಿಕೆಯ ನೋವು ಕಾಡಿತು. ಆದರೆ ಅಪ್ಪನ ನೆರಳಲ್ಲಿ ಕ್ರಿಕೆಟ್ ಮೇಲೆ ಸಂಪೂರ್ಣ ಗಮನ ಹರಿಸಿದರು. ಅಮ್ಮನಿಂದ ಬಂದ ಶಾಂತ ಮತ್ತು ಸಮಚಿತ್ತದ ಗುಣಗಳು ಅವರನ್ನು ಎತ್ತರಕ್ಕೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಸುಳ್ಳಲ್ಲ.

ಸೌರಾಷ್ಟ್ರ ತಂಡದಲ್ಲಿ ರನ್ಗಳ ಹೊಳೆ, ಶತಕಗಳ ಮಳೆ ಸುರಿಸಿದ ಚೇತೇಶ್ವರ್ ಅವರಿಗೆ 2010ರಲ್ಲಿ ಭಾರತ ಟೆಸ್ಟ್ ತಂಡದ ಬಾಗಿಲು ತೆರೆಯಿತು. ಆಸ್ಟ್ರೇಲಿಯಾ ಎದುರಿನ ಸರಣಿಯ ಮೊದಲ ಪಂದ್ಯ ಮೊಹಾಲಿಯಲ್ಲಿ ನಡೆದಿತ್ತು. ಆ ಪಂದ್ಯದಲ್ಲಿ ತಮ್ಮ ಗಾಯದ ನೋವಿನಲ್ಲಿಯೂ ವಿವಿಎಸ್ ಲಕ್ಷ್ಮಣ್ ಅವರು ತಂಡವನ್ನು ರೋಚಕ ಗೆಲುವಿನತ್ತ ಮುನ್ನಡೆಸಿದ್ದರು. ಆ ಪಂದ್ಯದಲ್ಲಿ ಪೂಜಾರ ಡ್ರೆಸಿಂಗ್ ರೂಮ್ನಲ್ಲಿದ್ದು ಲಕ್ಷ್ಮಣ್ ಆಟ ಕಣ್ತುಂಬಿಕೊಂಡಿದ್ದರು.

ಅದರ ನಂತರದ ಪಂದ್ಯ ಬೆಂಗಳೂರಿನಲ್ಲಿತ್ತು. ಲಕ್ಷ್ಮಣ್ ಗಾಯ ಉಲ್ಬಣಿಸಿದ್ದರಿಂದ ಪೂಜಾರಗೆ ಅವಕಾಶ ಒಲಿಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪದಾರ್ಪಣೆ ಮಾಡಿದರು. ಮಹೇಂದ್ರಸಿಂಗ್ ಧೋನಿ ನಾಯಕತ್ವದ ಆ ತಂಡದಲ್ಲಿ ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಅವರಂತಹ ಅನುಭವಿ ಬ್ಯಾಟರ್ಗಳಿದ್ದರು. ಅವರ ನಡುವೆ ತಮ್ಮ ಹೆಜ್ಜೆಗುರುತು ಮೂಡಿಸುವಲ್ಲಿ ಪೂಜಾರ ಯಶಸ್ವಿಯಾದರು. ಆ ಪಂದ್ಯದ ಎರಡನೇ ಇನಿಂಗ್ಸ್ನಲ್ಲಿ 129 ನಿಮಿಷ ಬ್ಯಾಟಿಂಗ್ ಮಾಡಿ 72 ರನ್ ಗಳಿಸಿದರು. ಸಚಿನ್ ಜೊತೆಗೆ ಚೆಂದದ ಜೊತೆಯಾಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಅಂದು ಮೂಡಿಸಿದ್ದ ಭರವಸೆಯನ್ನು ಕಳೆದ ಒಂದೂವರೆ ದಶಕ ಕೂಡ ಉಳಿಸಿಕೊಂಡರು. ಸುನಿಲ್ ಗಾವಸ್ಕರ್, ಸಚಿನ್ , ವಿವಿಎಸ್ ಲಕ್ಷ್ಮಣ್, ದ್ರಾವಿಡ್ ಅವರ ನಂತರ ‘ಕಲಾತ್ಮಕ ಬ್ಯಾಟಿಂಗ್’ ಸೊಬಗನ್ನು ಚುಟುಕು ಕ್ರಿಕೆಟ್ ಅಬ್ಬರದ ಕಾಲದಲ್ಲಿಯೂ ಜೀವಂತವಾಗಿಟ್ಟರು. ‘ಗೋಡೆ’ ಖ್ಯಾತಿಯ ದ್ರಾವಿಡ್ ಅವರ ತವರಿನಂಗಳದಲ್ಲಿ ಪೂಜಾರ ಟೆಸ್ಟ್ ಪಯಣ ಅರಂಭವಾಗಿದ್ದು ಕಾಕತಾಳೀಯವಿರಬಹುದು. ಆದರೆ, ನಂತರದ ವರ್ಷಗಳಲ್ಲಿ ದ್ರಾವಿಡ್ ಅವರ ಸ್ಥಾನ ತುಂಬುವಲ್ಲಿ ಪೂಜಾರ ಬಹುತೇಕ ಯಶಸ್ವಿಯಾದರು.

ಆದರೆ 2023ರ ವಿಶ್ವ ಟೆಸ್ಟ್ ಫೈನಲ್ ಪಂದ್ಯದಲ್ಲಿ ಆಡಿದ ನಂತರ ಅವರಿಗೆ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಕಳೆದೆರಡು ವರ್ಷಗಳಲ್ಲಿ ದೇಶಿ ಕ್ರಿಕೆಟ್ ಟೂರ್ನಿಗಳು ಮತ್ತು ಇಂಗ್ಲಿಷ್ ಕೌಂಟಿಯಲ್ಲಿ ಆಡಿದರು. ತಮಲ್ಲಿನ್ನೂ ಕ್ರಿಕೆಟ್ ಇದೆ ಎಂದು ಆಟದ ಮೂಲಕವೇ ಸಂದೇಶ ನೀಡಿದರು. ಆದರೂ ಆಯ್ಕೆ ಸಮಿತಿಯ ಚಿತ್ತ ಅವರತ್ತ ಹೊರಳಲಿಲ್ಲ. ಅದಕ್ಕಾಗಿಯೇ ಭಾನುವಾರ ಎಲ್ಲ ಮಾದರಿಗಳ ಕ್ರಿಕೆಟ್ಗೆ ಪೂಜಾರ ವಿದಾಯ ಹೇಳಿದ್ದಾರೆ. ಇನ್ನೇನಿದ್ದರೂ ಅವರನ್ನು ‘ಮಾತಿನ ಮಂಟಪ’ದಲ್ಲಿ ಕಾಣಬಹುದು.

ಟಿ20 ಆಡಲಿಲ್ಲ..!

ಚೇತೇಶ್ವರ್ ಪೂಜಾರ ಅವರಿಗೆ ತಮ್ಮ ವೃತ್ತಿಜೀವನದುದ್ದಕ್ಕೂ ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡುವ ಅವಕಾಶ ಸಿಗಲಿಲ್ಲ. ಕೇವಲ 5 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಆದರೆ ಐಪಿಎಲ್ನಲ್ಲಿ 30 ಪಂದ್ಯಗಳನ್ನು ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂಜಾಬ್ ಕಿಂಗ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಲ್ಲಿ ಅವರು ಆಡಿದ್ದರು.

ಹುಬ್ಬಳ್ಳಿಯಲ್ಲಿ ತ್ರಿಶತಕ ಬಾರಿಸಿದ್ದ ಪೂಜಾರ

ಹುಬ್ಬಳ್ಳಿ: ಚೇತೇಶ್ವರ್ ಪೂಜಾರ ಅವರಿಗೆ ಕರ್ನಾಟಕದ ನೆಲದಲ್ಲಿ ಚೆಂದದ ನೆನಪುಗಳಿವೆ. ಬೆಂಗಳೂರು ಅವರ ಪದಾರ್ಪಣೆಯ ತಾಣ. ಅಲ್ಲದೇ ಹುಬ್ಬಳ್ಳಿಯಲ್ಲಿ ತ್ರಿಶತಕ ಗಳಿಸಿದ ಸವಿನೆನಪು ಕೂಡ ಇದೆ.

ಅವರು 2013ರ ಅಕ್ಟೋಬರ್ನಲ್ಲಿ ಹುಬ್ಬಳ್ಳಿಯ ರಾಜನಗರದ ಕೆಎಸ್ಸಿಎ ಕ್ರೀಡಾಂಗಣದಲ್ಲಿ ತ್ರಿಶತಕ (306) ದಾಖಲಿಸಿದ್ದರು. ವೆಸ್ಟ್ ಇಂಡೀಸ್ ‘ಎ’ ಮತ್ತು ಭಾರತ ‘ಎ’ ತಂಡಗಳ ನಡುವೆ ನಡೆದಿದ್ದ ನಾಲ್ಕು ದಿನಗಳ ಟೆಸ್ಟ್ ಪಂದ್ಯದ ನಾಯಕತ್ವವನ್ನು ಚೇತೇಶ್ವರ ಪೂಜಾರ ವಹಿಸಿದ್ದರು. ಗೌತಮ್ ಗಂಭೀರ್, ವೀರೇಂದ್ರ ಸೆಹ್ವಾಗ್, ಜಹೀರ್ ಖಾನ್ ಅವರಂತಹ ಖ್ಯಾತ ಆಟಗಾರರೂ ಈ ಸರಣಿಯಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಆತಿಥೇಯ ತಂಡ ಇನಿಂಗ್ಸ್ ಹಾಗೂ 54 ರನ್ಗಳಿಂದ ಗೆದ್ದಿತ್ತು. ಒಂಬತ್ತು ತಾಸು ಕ್ರೀಸ್ನಲ್ಲಿದ್ದ ಪೂಜಾರ, 415 ಎಸೆತ ಎದುರಿಸಿ, 33 ಬೌಂಡರಿ ಸಿಡಿಸಿದ್ದರು. ಪಂದ್ಯದ ಬಳಿಕ ಮಾತನಾಡಿದ್ದ ಪೂಜಾರ, ‘ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಇದು ನನ್ನ ಅತ್ಯುತ್ತಮ ಇನಿಂಗ್ಸ್. ಹುಬ್ಬಳ್ಳಿಯ ಕ್ರೀಡಾಂಗಣ ಉತ್ತಮ ಪಿಚ್ ಹೊಂದಿದ್ದು, ಇಲ್ಲಿ ಇನ್ನೂ ಹೆಚ್ಚು ಪ್ರಥಮ ದರ್ಜೆ ಪಂದ್ಯಗಳನ್ನು ಆಯೋಜಿಸಬಹುದು’ ಎಂದಿದ್ದರು.

‘ಫಾರ್ಮ್ ಕೊರತೆ ಎದುರಿಸುತ್ತಿದ್ದ ಚೇತೇಶ್ವರ ಪೂಜಾರ, ಇಲ್ಲಿ ನಡೆದಿದ್ದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಇಲ್ಲಿನ ಪಂದ್ಯದ ಬಳಿಕ ಭಾರತ ತಂಡಕ್ಕೆ ಪುನರಾಗಮನ ಮಾಡಿದರು’ ಎಂದು ಕೆಎಸ್ಸಿಎ ಧಾರವಾಡ ವಲಯದ ಮಾಜಿ ನಿಮಂತ್ರಕ ಬಾಬಾ ಭೂಸದ ಸ್ಮರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.