ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ಗೃಹಶ್ರೀ

Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಗೃಹಶ್ರೀ

ಕುವೆಂಪು ಅವರು ‘ಮನೆ ಮನೆಯ ತಪಸ್ವಿನಿಗೆ’ ಕವನದಲ್ಲಿ ಗೃಹಿಣಿಯನ್ನು ‘ತಪಸ್ವಿನಿ’ಯಾಗಿ ಕಂಡಿದ್ದಾರೆ. ಅವಳು ಮನೆಯನ್ನು ಉಳಿಸಿ ಬೆಳೆಸುವವಳು. ಕುಟುಂಬದ ಜವಾಬ್ದಾರಿ ನಿರ್ವಹಿಸುವವಳು. ಅವಳು ಮನೆಗೆ ಅಲಂಕಾರ, ಮಂಗಳ, ಸಿರಿ, ಸಮೃದ್ಧಿ. ಹಾಗಾಗಿ ಕವಿಯು ಅವಳನ್ನು ‘ಗೃಹಶ್ರೀ’ ಎಂದು ನವನವೀನ ಹೆಸರಿಟ್ಟು ಕರೆದು ‘ನಮೋ ನಿತ್ಯ ಧನ್ಯೆ’ ಎಂದು ನಮಸ್ಕರಿಸಿದ್ದಾರೆ.

ಮನೆಮನೆಯಲಿ ನೀನಾಗಿಹೆ ‘ಗೃಹಶ್ರೀ’:

ಹೆಸರಿಲ್ಲದ ಹೆಸರು ನಿನಗೆ ‘ಗೃಹಸ್ತ್ರೀ!’

ಹೇ ದಿವ್ಯ ಸಾಮಾನ್ಯೆ,

ಹೇ ಭವ್ಯೆ ದೇವಮಾನ್ಯೆ,

ಚಿರಂತನ ಅಕೀರ್ತಿಕನ್ಯೆ,

ಅನ್ನಪೂರ್ಣೆ, ಅಹಂಶೂನ್ಯೆ,

ನಮೋ ನಿನಗೆ ನಿತ್ಯಧನ್ಯೆ!’

(ಮನೆಮನೆಯ ತಪಸ್ವಿನಿಗೆ: ಇಕ್ಷುಗಂಗೋತ್ರಿ)

ಇಕ್ಷುಗಂಗೋತ್ರಿ

ಇಕ್ಷು (ನಾ). ಕಬ್ಬು

ಗಂಗೋತ್ರಿ (ನಾ).ಗಂಗಾನದಿ ಹುಟ್ಟುವ ಸ್ಥಳ.

ಇಕ್ಷುವಿನೊಡನೆ ಪರಿಚಿತವಾಗಿರುವ ಪದ. ಇಕ್ಷು ಕೋದಂಡ, ಇಕ್ಷು ಛಾಪ. ಅದರ ಅರ್ಥ ಕಬ್ಬಿನ ಕೋಲಿನಿಂದ ಬಿಲ್ಲುಳ್ಳುವನು; ಮನ್ಮಥ. ಕುವೆಂಪು ಅವರು ತಮ್ಮ ಜೀವನದಲ್ಲಿ ಸವಿದ ರಸ ಘಳಿಗೆಯನ್ನು ರಸದಾಳಿ ಕಬ್ಬಿನಂತೆ ಸವಿಯುತ್ತ, ಅದರ ಆನಂದವನ್ನು ‘ಇಕ್ಷುಗಂಗೋತ್ರಿ’ ಎಂಬ ಪದದಿಂದ ಅಭಿವ್ಯಕ್ತಿಸಿದ್ದಾರೆ. 1957ರಲ್ಲಿ ‘ಇಕ್ಷುಗಂಗೋತ್ರಿ’ ಎಂಬ ಹೆಸರಿನ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.

ಕುವೆಂಪು ಅವರು ಮಾನಸಯಾತ್ರಿಯಾಗಿ ಗಂಗೋತ್ರಿಯನ್ನು ಪರಿಭಾವಿಸಿ ರಚಿಸಿರುವ ಕವನ ‘ಇಕ್ಷುಗಂಗೋತ್ರಿ’. ಭಾರತ ದೇಶದ ಜೀವನದಿಯಾದ ಗಂಗೆಯು ಸಹಸ್ರಾರು ವರ್ಷಗಳಿಂದ ಈ ನೆಲದ ಜಲಚರ, ಪಶುಪಕ್ಷಿ, ಮಾನವರಿಗೆ ಸುಮಧುರ ಜೀವಪೋಷಕವಾಗಿದೆ. ಅದು ಭಾರತ ಸಂಸ್ಕೃತಿಯ ತೊಟ್ಟಿಲಾಗಿದ್ದು, ಎಲ್ಲ ತತ್ವ ಚಿಂತನದ ಕಡಲಾಗಿದೆ. ಅದು ಮನೋಲೋಕದಲ್ಲಿ ಆತ್ಮಕ್ಕೆ ಉನ್ನತ ಭಾವದ ಮಧುರತೆಯನ್ನು ನೀಡಿ ಅಧ್ಯಾತ್ಮ ಸಿದ್ಧಿಗೊಯ್ಯುವ ನೆಲೆಯಾಗಿದೆ.

ಗಂಗೋತ್ರಿ ಹಿಮಾಲಯದಲ್ಲಿರುವ ಗಂಗಾತೀರದ ಒಂದು ಪುಣ್ಯಕ್ಷೇತ್ರ. ಕವಿಯು ಅದನ್ನು ಮಧುರವಾದ ಸವಿ, ಸಿಹಿ, ಚೈತನ್ಯ ನೀಡಿ ತಣಿಸುವ ಕಬ್ಬು ಎಂಬ ರೂಪಕದಲ್ಲಿ ‘ಇಕ್ಷುಗಂಗೋತ್ರಿ’ ಕವನ ರಚಿಸಿದ್ದಾರೆ. ಅವರು ಅದನ್ನು ‘ಮಧು ಗಂಗೋತ್ರಿ’ ‘ಋತ್‍ಚಿದ್ ಗಂಗೋತ್ರಿ’ (ಸತ್ಯ ಚೈತನ್ಯ ಗಂಗೋತ್ರಿ) ಎಂದು ವಿವಿಧ ಬಗೆಯಲ್ಲಿ ವರ್ಣಿಸಿದ್ದಾರೆ.

ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದಾಗ, ವಿಶಾಲಸ್ಥಳದಲ್ಲಿ ಅದನ್ನು ವಿಸ್ತರಿಸಿ ಅದಕ್ಕೆ ನೀಡಿದ ಹೆಸರು ‘ಮಾನಸ ಗಂಗೋತ್ರಿ’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT