ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಪದ ಸೃಷ್ಟಿ: ಜತುಮುದ್ರೆ, ತಣ್ಬೂಳಿಗ

Published 20 ಏಪ್ರಿಲ್ 2024, 23:30 IST
Last Updated 20 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ
ಜತುಮುದ್ರೆ

ಜತುಮುದ್ರೆ (ನಾ). 1. ಅರಗಿನ ಮುದ್ರೆ 2. (ಆಲಂ) ಮುಚ್ಚಿಡುವಿಕೆ, ರಹಸ್ಯ

(ಜತು + ಮುದ್ರೆ)

ಕೈಕೆ ತನ್ನ ಕೆಲಸ ಸಾಧನೆಗೆ ಕಾಮಾಕಾಂಕ್ಷಿಯಾದ ದಶರಥನಿಗೆ ‘ನಾನು ಕೇಳುವುದನ್ನು ಕೊಡುವೆಯೆಂದು ಚುಂಬನದ ಜುತುಮುದ್ರೆಯೊತ್ತಿ, ಆಣೆಯಿಟ್ಟು ಹೇಳುವಾಗ, ನಾನು ಮನದಾಸೆ ಕೋರಿಕೆಯನ್ನು ನಿನಗೆ ಹೇಳದಿರುವೆನೆ?’ ಎಂದು ಪ್ರಶ್ನಿಸುತ್ತಾಳೆ.

ಕವಿ ದಾಂಪತ್ಯದ ಆಂತರ್ಯ ಭಾವಾಭಿವ್ಯಕ್ತಿಗೆ ಕಾವ್ಯ ತೊಡಿಗೆ ಇಟ್ಟಂತೆ, ಅರಗಿನ ಮುದ್ರೆ ತೆಗೆಯಲಾಗದು ಎಂಬ ಅರ್ಥದಲ್ಲಿ ‘ಜತುಮುದ್ರೆ’ ಪದವನ್ನು ಟಂಕಿಸಿದ್ದಾರೆ. ಗುಟ್ಟಾದ ಚುಂಬನದ ಜತುಮುದ್ರೆಯಲ್ಲಿ ಅವನು ತನ್ನ ನುಡಿಯನ್ನು ಅಡಗಿಸಬೇಕಾದ ಆಲಂಕಾರಿಕ ಚಾತುರ್ಯವು; ಕೈಕೆಯು ಅವನನ್ನು ಅಡಕದಲ್ಲಿಟ್ಟುಕೊಳ್ಳುವ ವ್ಯವಹಾರ ಜಾಣ್ಮೆಯು ಏಕತ್ರಗೊಂಡಿದೆ.

ಮನವನೊರೆಯನೆ ನಿನಗೆ, ಮನದನ್ನ, ಕೋರ್ದುದಂ ಕೊಡುವೆನೆಂದಾ ಣೆಯಿಟ್ಟಾಡಿದೊಡೆ,

ಚುಂಬನದ ಜತುಮುದ್ರೆಯೊತ್ತಿ?

ತಣ್ಬೂಳಿಗ

ತಣ್ಬೂಳಿಗ (ನಾ). ತಂಪನ್ನುಂಟುಮಾಡುವ ಸೇವೆ; ಶೈತ್ಯೋಪಚಾರ

(ತಣ್ಪು + ಊಳಿಗ)

ಭರತನು ಮಾವನ ಮನೆಯಿಂದ ಶತ್ರುಘ್ನನೊಡನೆ ಹಿಂತಿರುಗಿ ಬಂದನು. ತನ್ನ ತಾಯಿಯ ಕಾರಣದಿಂದ ಅಣ್ಣ ರಾಮಚಂದ್ರನು ವನವಾಸಕ್ಕೆ ಹೋದುದನ್ನು, ತಂದೆ ಮಡಿದುದನ್ನು ತಿಳಿದು ದುಃಖಿತನಾದನು. ತಾಯಿಯಿಂದ ಎಲ್ಲ ವಿಷಯವನ್ನು ಅರಿತು ಮಂಥರೆಯನ್ನು ಹಳಿದನು. ಪತಿ,ಪುತ್ರ ಹೀನೆಯಾದ ದೊಡ್ಡಮ್ಮ ಕೌಸಲ್ಯೆಯನ್ನು ಕಾಣಲು ಹೋದನು.

ಅವಳು ಕೈಕೆಯ ಕುಮಾರನನ್ನು ಕಂಡು ದುಃಖ ಮರುಕೊಳಿಸಿ ಪ್ರಜ್ಞೆ ತಪ್ಪಿ ಒರಗಿದಳು. ಆಗ ಭರತನು ಆ ತಾಯಿಗೆ ಮಾಡಿದ ಶೈತ್ಯೋಪಚಾರವನ್ನು ಕವಿಯು ಆ ಸಂದರ್ಭಕ್ಕೆ ಅನುಸರಿಸಿ ಹೊಸನುಡಿ ‘ತಣ್ಪೂಳಿಗ’ ನೇಯ್ದು ಪ್ರಯೋಗಿಸಿದ್ದಾರೆ.

ಕೈಕೆಯ ಕುಮಾರನಂ ಕಾಣುತಂ

ಮರುಕೊಳಿಸಿದಳಲ ಹೊಡೆತವನಾನಲಾರದೆಯೆ

ಮೈಮರೆತೊರಗಲಾಕೆ, ಪಿಡಿದೆತ್ತಿ ಕುಳ್ಳಿರಿಸಿ

ತಣ್ಪೂಳಿಗವನೆಸಗಿ, ಕರ್ಚಿದನ್ ಕಣ್ಬನಿ ವೊನಲ್ಗಳಿಂ

ಭರತನಾ ರಘುರಾಮನಂಬಿಕೆಯ ಪುಣ್ಯಮಯ

ಪದ್ಮಪಾದಂಗಳಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT