ರಾಜ್ಯ ಕಂಡ ಅಪರೂಪದ ರಾಜಕಾರಣಿ ಎಂದೇ ಜನಪ್ರಿಯರಾಗಿದ್ದ ಕೆ.ಹೆಚ್. ಶ್ರೀನಿವಾಸ ಅವರು ಡಿ. ದೇವರಾಜ ಅರಸು ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಕೇವಲ ರಾಜಕಾರಣಿ ಮಾತ್ರವಲ್ಲದೆ ಉತ್ತಮ ಕವಿ, ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆಗೆ ಕಾರಣರಾದ ತಮ್ಮ ತಂದೆಯ ಕುರಿತು ಮಗಳು ಬರೆದಿದ್ದಾರೆ...

‘‘ಶ್ರೀನಿವಾಸರು ತಮ್ಮ ಕವನಗಳನ್ನು ನನಗೆ ಓದುತ್ತಿದ್ದಂತೆ ನಾನು ಕಾಲದಿಂದ ಕಾಲಕ್ಕೆ ಕುಪ್ಪಳಿಸುತ್ತ, ಶ್ರೀನಿವಾಸರನ್ನು ಅವರ ಹಲವು ಅವತಾರಗಳಲ್ಲಿ ನೆನೆಯುತ್ತ ಒಂದಕ್ಕೊಂದನ್ನು ಬೆಸೆಯುತ್ತ, ಮೆಚ್ಚುತ್ತ ಕೇಳಿಸಿಕೊಂಡಿದ್ದು, ಈವರೆಗೂ ಹಲವು ಉಪದ್ವ್ಯಾಪಗಳನ್ನು ಹಚ್ಚಿಕೊಂಡು ಮಂತ್ರಿಯಾಗಿಬಿಟ್ಟಿದ್ದ ಶ್ರೀನಿವಾಸ ಇಷ್ಟು ಸೊಗಸಾಗಿ ಇಂಥ ಒಳ್ಳೆಯ ಕವನಗಳನ್ನು ಬರೆದರೆಂದು ನನಗೆ ಆಶ್ಚರ್ಯವಾಯಿತು. ಪ್ರಾಯಶಃ ಈ ಆಶ್ಚರ್ಯವೂ ನನಗೆ ಈ ರಚನೆಗಳು ಅಷ್ಟೊಂದು ಇಷ್ಟವಾಗುವುದಕ್ಕೆ ಕಾರಣವಾಗಿರಬೇಕು. ಆದರೆ ಇವಕ್ಕೆ ನನ್ನ ಮನಸ್ಸು ಸೋಲಲಿಲ್ಲ, ನಾನು ಸೋತದ್ದು ಇವರ ‘ಕಾನುಗೋಡು ಮನೆ’ ಪದ್ಯಕ್ಕೆ. ಈಗ ಯೋಚಿಸಿದಾಗ ನಾನು ಅಷ್ಟು–ಕಣ್ಣು ಹನಿಯಾಗುವಷ್ಟು–ಈ ಪದ್ಯಕ್ಕೆ ಸೋತಿದ್ದಕ್ಕೆ ಕಾರಣ ನನ್ನ ಬಾಲ್ಯದ ಪ್ರಪಂಚಕ್ಕೆ ಹೋಲುವ ಪ್ರಪಂಚದ ಮನೋಜ್ಞ ವಿವರಗಳು ಈ ಪದ್ಯದಲ್ಲಿ ನನಗೆ ಎದುರಾದದ್ದೇ ಇರಬಹುದು’’- ಯು.ಆರ್.ಅನಂತಮೂರ್ತಿ.

ನನ್ನ ತಂದೆ ಕೆ.ಹೆಚ್. ಶ್ರೀನಿವಾಸ ಅವರ ಪ್ರಥಮ ಕವನ ಸಂಕಲನ ‘ಕಾನುಗೋಡು ಮನೆ’ಗೆ ಅಪ್ಪನ ಮೇಷ್ಟ್ರೂ, ತದನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಸಹೋದ್ಯೋಗಿಯೂ ಆಗಿದ್ದ ಅನಂತಮೂರ್ತಿಯವರು ಬರೆದ ಪ್ರಾಸ್ತಾವಿಕ ನುಡಿಯಿಂದ ಆಯ್ದ ಸಾಲುಗಳಿವು.

ರಾಜ್ಯ ಕಂಡ ಅಪರೂಪದ ರಾಜಕಾರಣಿ ಎಂದೇ ಗುರುತಿಸಲ್ಪಟ್ಟ ಶ್ರೀನಿವಾಸ ಅವರು ಡಿ. ದೇವರಾಜ ಅರಸು ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದರು. ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕರಾಗಿ ಪ್ರಬುದ್ಧ ಸಂಸದೀಯಪಟು ಎಂದು ಜನಮನ್ನಣೆಯನ್ನು ಗಳಿಸಿದ್ದರು. ಸಾಗರ ಪ್ರಾಂತ್ಯದಲ್ಲಿ 1963ಕ್ಕಿಂತ ಮುಂಚೆ ಶಿಕ್ಷಣ ಎನ್ನುವುದು ಗಗನಕುಸುಮವಾಗಿತ್ತು. ಆಗ ಶಿಕ್ಷಣ ಸಂಸ್ಥೆಯೊಂದನ್ನು ಪ್ರಾರಂಭಿಸಿ, ವಿಶೇಷವಾಗಿ ಸಮಾಜದ ಮಧ್ಯಮ ಮತ್ತು ಬಡವರ್ಗದ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಸಿಗುವಂತಾಗಲು ಶ್ರೀನಿವಾಸ ಅವರು ಅಪಾರವಾದ ಕೊಡುಗೆ ನೀಡಿದರು.

ಸಾಗರ ಪ್ರಾಂತ್ಯದಲ್ಲಿ ವಿದ್ಯಾವರ್ಧಕ ಸಂಘವನ್ನು ಸಂಘಟಿಸಿ, ಆ ಮೂಲಕ ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಮತ್ತು ಸೊಲಬಖ್ೞಿ ಶೆಟ್ಟಿ ವಾಣಿಜ್ಯ ಮಹಾವಿದ್ಯಾಲಯವನ್ನು ಪ್ರಾರಂಭಿಸಿ, ಸಂಸ್ಥಾಪಕ ಅಧ್ಯಕ್ಷರಾಗಿದ್ದ ಕೆ.ಜಿ ಒಡೆಯರ್ ಅವರೊಂದಿಗೆ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಅವರನ್ನು ಆಹ್ವಾನಿಸಿ ಜನವರಿ 24, 1965 ರಂದು ಕಾಲೇಜಿಗೆ ಶಿಲಾನ್ಯಾಸ ಮಾಡಿಸಿದ್ದು ಸಂಚಲನ ಮೂಡಿಸಿತ್ತು. ಅದೊಂದು ಚರಿತ್ರಾರ್ಹವಾದ ಶೈಕ್ಷಣಿಕ ಕ್ರಾಂತಿಯೆಂದೇ ಪರಿಗಣಿಸಲ್ಪಟ್ಟಿತ್ತು. ಈ ಸಂಸ್ಥೆಯನ್ನು ಪ್ರಾರಂಭಿಸಿದ್ದರಿಂದ ಸಾಗರ, ಸೊರಬ , ಹೊಸನಗರ ಮತ್ತಿತರ ಭಾಗದ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದು ಈ ಭಾಗವು ಬೌದ್ಧಿಕವಾಗಿ ಶ್ರೀಮಂತವಾಗಲು ನಾಂದಿಯಾಯಿತು. ಈವರೆಗೆ ಲಕ್ಷಾಂತರ ವಿದ್ಯಾಥಿಗಳು ಕಾಲೇಜು ಶಿಕ್ಷಣ ಪಡೆದು, ಇಂದು ದೇಶ-ವಿದೇಶಗಳಲ್ಲಿ ದೊಡ್ಡ ಹುದ್ದೆಗಳಲ್ಲಿ ಇರುವುದು ಹೆಮ್ಮೆಯ ವಿಷಯ. ಸುಮಾರು ಐವತ್ತು ವರ್ಷಗಳ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದ ಶ್ರೀನಿವಾಸ ಅವರು, ಲಾಲ್ ಬಹದ್ದೂರ್ ಕಲಾ, ವಿಜ್ಞಾನ ಕಾಲೇಜು, ಡಿ.ದೇವರಾಜ ಅರಸು ಕಲಾಕ್ಷೇತ್ರ, ಪದವಿಪೂರ್ವ ಕಾಲೇಜುಗಳು, ಕೆ.ಹೆಚ್. ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಡಾ.ಜಿ.ಎ. ನಾರೀಬೋಲಿ ಶಿಕ್ಷಣ ಮಹಾವಿದ್ಯಾಲಯ, ಪ್ರಗತಿ ಸಂಯುಕ್ತ ಶಾಲೆ, ವಿದ್ಯಾರ್ಥಿ/ವಿದ್ಯಾರ್ಥಿನಿ ನಿಲಯಗಳು ಇವೇ ಮೊದಲಾದ ಪ್ರಮುಖ ಅಂಗ ಸಂಸ್ಥೆಗಳನ್ನು ಕೂಡ ಹುಟ್ಟುಹಾಕಿ, ಸಂಸ್ಥೆಗೆ ಎಂಬತ್ತು ಎಕರೆಗಳ ವಿಶಾಲ ಆವರಣವನ್ನು ಕೂಡ ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾದರು.

ಸಾರ್ವಜನಿಕ ಕ್ಷೇತ್ರದಲ್ಲಿ ರಾಜಕಾರಣಿಯಾಗಿ, ಜನಪ್ರತಿನಿಧಿಯಾಗಿ, ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಿದ ಶ್ರೀನಿವಾಸ ಅವರು ಉತ್ಕಟ ಸಾಹಿತ್ಯ ಪ್ರೇಮಿಯೂ ಆಗಿದ್ದರು. ಅವರು ಸಂಗ್ರಹಿಸಿದ ನಮ್ಮ ಮನೆಯಲ್ಲಿರುವ ಅಮೂಲ್ಯವಾದ ಗ್ರಂಥ ಭಂಡಾರದಲ್ಲಿ ಸಾವಿರಾರು ಸಾಹಿತ್ಯ, ತತ್ತ್ವಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, ಸಂಗೀತ, ರಾಜ್ಯಶಾಸ್ತ್ರಗಳಿಗೆ ಸಂಬಂಧಿಸಿದ ಪುಸ್ತಕಗಳ ಸಾಗರವೇ ಇದ್ದು, ಅವರು ತಮ್ಮ ಬಿಡುವಿನ ಸಮಯದಲ್ಲಿ ಗಾಢವಾದ ಅಧ್ಯಯನದಲ್ಲಿ ತಲ್ಲೀನರಾಗಿರುತ್ತಿದ್ದರು. ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಅಲ್ಪಮತಗಳ ಅಂತರದಲ್ಲಿ ಸೋತಾಗ, ಅವರು ತಮ್ಮ ಜೀವನದ ಮೊದಲ ಸೋಲನ್ನು ಸ್ವಾನುಕಂಪದಿಂದ ವಿಜೃಂಭಿಸಿಕೊಳ್ಳಲಿಲ್ಲ, ನೋವಿನಿಂದ ಕುಗ್ಗಿಹೋಗಲೂ ಇಲ್ಲ. ಈ ಸಂದರ್ಭದಲ್ಲಿ ರೂಪುಗೊಂಡಿದ್ದೇ ‘ಕಾನುಗೋಡು ಮನೆ’ ಕವನ ಸಂಕಲನ. ಈ ಸಂಕಲನವನ್ನು ಕವಿ ಗೋಪಾಲಕೃಷ್ಣ ಅಡಿಗ ಅವರಿಗೆ ಅರ್ಪಿಸಿದ್ದರು. ಇದಾದ ಒಂದು ದಶಕದ ತರುವಾಯ ‘ಒಳಸೊನ್ನೆ-ಹೊರಸೊನ್ನೆ’ ಕವನ ಸಂಕಲನವನ್ನು ಹೊರತಂದರು. ಭವ ನಿಮಜ್ಜನ ಮತ್ತು ಲಘಿಮಾ ಕೌಶಲ ಎರಡೂ ಸೇರಿದಾಗ ಕಾವ್ಯ ಹುಟ್ಟುತ್ತದೆಯೆಂದು ತಾನು ಕೇಳಿರುವುದಾಗಿಯೂ, ಪ್ರಾಯಶಃ ಅಂಥದ್ದೊಂದರಿಂದ ಸಂಭವಿಸಬಹುದಾದ ಸಮಸ್ಥಿತಿಯೇ ತನ್ನ ‘ಒಳಸೊನ್ನೆ-ಹೊರಸೊನ್ನೆ’ ಎಂದು ಅವರು ವಿಶದೀಕರಿಸಿದ್ದರು.

ನಾಲ್ಕು ಕವನ ಸಂಕಲನಗಳಲ್ಲದೇ, ಫ್ರೆಂಚ್ ಸಾಹಿತಿ ಜೀನ್ ಪಾಲ್ ಸಾರ್ತೃನ ‘ಕೀನ್’ ನಾಟಕದ ಕನ್ನಡ ಅನುವಾದವೂ ಪ್ರಕಟಗೊಂಡಿದೆ. ಸಾರ್ತೃನ ಆತ್ಮಚರಿತ್ರೆ ‘The Words’ (ಫ್ರೆಂಚ್ ಮೂಲ -ಲೇ ಮೋ) ಕೃತಿಯನ್ನು ಅವರು ನನ್ನೊಡನೆ ಕುಳಿತು ಮೂಲ ಫ್ರೆಂಚ್ ಕೃತಿಯನ್ನು ಓದಿಸಿ ಕೇಳಿ ಸವಿಸ್ತಾರವಾದ ಟಿಪ್ಪಣಿಗಳನ್ನು ಅಸ್ತಿತ್ವವಾದ ಕುರಿತು ಬರೆದದ್ದು, ಫ್ರೆಂಚ್ ಸಾಹಿತ್ಯದ ಒಂದು ಇತಿಹಾಸವನ್ನೇ ಕಟ್ಟಿಕೊಡುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದರು. ಈ ಕೃತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿತು. ‘ತೋಬಾ ತೇಕ್ ಸಿಂಗ್’ನಂಥ ಭಾರತ-ಪಾಕಿಸ್ತಾನದ ವಿಭಜನೆಯ ಕುರಿತಾಗಿ ಶ್ರೇಷ್ಠ ಕತೆಗಳನ್ನು ಬರೆದ ಸಾದತ್ ಹಸನ್ ಮಂಟೋವಿನ ಜೀವನ ಚರಿತ್ರೆಯನ್ನೂ ಕೂಡ ಶ್ರೀನಿವಾಸ ಅವರು ಕನ್ನಡಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಅನುವಾದಿಸಿದರು. ನ್ಯಾಷನಲ್ ಬುಕ್ ಟ್ರಸ್ಟಿಗಾಗಿ ಅವರು ಮಾನವ ಹಕ್ಕುಗಳ ಮೇಲಿನ ಒಂದು ಪಸ್ತಕವನ್ನೂ ಅನುವಾದಿಸಿ ಪ್ರಕಟಿಸಿದ್ದರು. ತಮ್ಮ ಸುದೀರ್ಘವಾದ ರಾಜಕೀಯ ವೃತ್ತಿಯಲ್ಲಿ, ಶಾಸಕರಾಗಿ, ಮಂತ್ರಿಯಾಗಿ, ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ಮಾಡಿದ ವಿದ್ವತ್ಪೂರ್ಣ ಭಾಷಣಗಳ 600 ಪುಟಗಳ ಅಪರೂಪದ ಸಂಕಲನ ‘ಮಲೆನಾಡಿನ ಮಾತುಗಾರ’ ಪುಸ್ತಕಕ್ಕಾಗಿ ತಾವು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸಮಯದಲ್ಲೂ ಹಗಲಿರುಳೆನ್ನದೇ ಶ್ರಮಿಸಿದ್ದನ್ನು ನೆನೆಸಿ ನನ್ನ ಹೃದಯ ಭಾರವಾಗುತ್ತದೆ.

ಈಗ ಅವರು ಇಲ್ಲ, ಅವರ ಅಪೂರ್ವ ನೆನಪುಗಳು ಸದಾ ನನ್ನೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.