ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುವೆಂಪು ಪದ ಸೃಷ್ಟಿ: ಅರಣ್ಯಮಯ ಕೋಶ

Published 9 ಜೂನ್ 2024, 0:02 IST
Last Updated 9 ಜೂನ್ 2024, 0:02 IST
ಅಕ್ಷರ ಗಾತ್ರ

ಅರಣ್ಯಮಯ ಕೋಶ

ಮನುಷ್ಯನ ಪಂಚಕೋಶಗಳು: ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ. ಈ ಸ್ಥೂಲ ಶರೀರವೇ ಅನ್ನ ಪರಿಣಾಮವಾದುದರಿಂದ ಪ್ರತ್ಯಕ್ಷವಾದ ಕೋಶವು ಅನ್ನಮಯ.

ಕುವೆಂಪು ಅವರು ಕಾಡಿನಲ್ಲಿ ಹುಟ್ಟಿ ಬೆಳೆದು ಅದರ ಭವ್ಯಾನುಭವದಲ್ಲಿ ಕವಿಯಾಗಿ ರೂಪುಗೊಂಡಿರುವವರು. ಹಾಗಾಗಿ ಅವರು ತಮಗೊಂದು ‘ಅರಣ್ಯಮಯಕೋಶ’ವಿದೆ ಎಂದು ಹೀಗೆ ಕಾವ್ಯದಲ್ಲಿ ಅಭಿವ್ಯಕ್ತಿಸಿದ್ದಾರೆ. ಅದು ಅವರ ಅರಣ್ಯಾನುಭವದ ವಿಶಿಷ್ಟ ಪದ ಸೃಷ್ಟಿ.

‘ಅನ್ನಮಯದಾಚೆಯಲಿ

ಪ್ರಾಣಮಯದೀಚೆಯಲಿ

ನನಗಿರುವುದೊಂದಲೆ, ಅರಣ್ಯಮಯ ಕೋಶ?’

ಬರಲುವೋಗು

ಬರಲುವೋಗು (ಕ್ರಿ). ಎಲೆಗಳು ಉದುರಿ ಬೋಳಾಗಿರು

(ಬರಲು + ಪೋಗು)
ಸೀತೆಯನ್ನು ಆಕರ್ಷಿಸುತ್ತ ಸುಳಿದಾಡಿದ ಬಂಗಾರದ ಜಿಂಕೆಯನ್ನು ಕವಿ ಅನನ್ಯವಾಗಿ ವರ್ಣಿಸಿದ್ದಾರೆ. ಅದರ ಕೊಂಬುಗಳನ್ನು ವರ್ಣಿಸುವಾಗ, ಅದು ಮಾಗಿಯ ಕಾಲದಲ್ಲಿ ಎಲೆಗಳು ಉದುರಿ ಬೋಳಾಗಿರುವ ಬೂರುಗ ಮರ ಕವಲುಗಣೆಗಳಿಂದ ಮಲೆ ತಲೆಗೆ ಕೋಡು ಮೂಡಿದಂತೆ ಹೇಗೊಹಾಗೆ ಇದ್ದಿತು ಎಂದು ಅರಣ್ಯಾನುಭವವನ್ನು ಹೊಸ ಪ್ರತಿಮೆಯಲ್ಲಿ ಮೂಡಿಸಿದ್ದಾರೆ. ಇಂದ್ರಿಯಾನುಭವದ ‘ಬರಲುವೋಗು’ ಪದ ಅವರ ಬೌದ್ಧಿಕ ಕಲ್ಪನೆಯಲ್ಲಿ ಹೊಸ ನುಡಿಯಾಗಿ ಜಿಂಕೆಯ ಕೋಡಿನ ಚಿತ್ರಣದಲ್ಲಿ ಕನ್ನಡ ಕಾವ್ಯದಲ್ಲಿ ಸೇರ್ಪಡೆಗೊಂಡಿದೆ.

ಮಾಗಿಗೆ ಬರಲುವೋದ ಬೂರುಗ ಮರಂ

ಕೋಡುಕೋಡಿನ ಕವಲ್ಗಣೆಗಳಿಂ ಮಲೆತಲೆಗೆ

ಕೋಡು ಮೂಡಿದ ತೆರನ ತೋರ್ಪಂತೆ,

ನಿಡುಸೊರ್ಕ್ಕಿ

ಮಲೆತು ನಿಮಿರಿದುವದರ ಹೇಮರತ್ನ ಪ್ರಭೆಯ

ಚಾರು ಶೃಂಗಧ್ವಯಂ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT