ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್‌ರನ್ನು ನೋಡುವ ನೋಟ ಬದಲಾಗಲಿ: ಅಂಬೇಡ್ಕರ್‌ ಜಯಂತಿ ಪ್ರಯುಕ್ತ ಲೇಖನ

ದೇಶಕ್ಕೆ ಸಮಾನತೆ ತತ್ವಬೋಧಿಸಿದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾನ್‌ ಮಾನವತಾವಾದಿ.
Published 13 ಏಪ್ರಿಲ್ 2024, 21:30 IST
Last Updated 13 ಏಪ್ರಿಲ್ 2024, 21:30 IST
ಅಕ್ಷರ ಗಾತ್ರ

ದೇಶಕ್ಕೆ ಸಮಾನತೆ ತತ್ವಬೋಧಿಸಿದ ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಮಹಾನ್‌ ಮಾನವತಾವಾದಿ. ಅಹಿಂಸಾ ಪ್ರತಿಪಾದಕರು. ಸಂವಿಧಾನದಲ್ಲಿ ಅದು ಉಸಿರಾಗಿರುವಂತೆ ಕಾಪಿಟ್ಟವರು. ಜಾತಿ-ಮತ-ಧರ್ಮ ನಿರಪೇಕ್ಷ ಮನೋಧರ್ಮದ ಹೊಸ ಅರಿವಿನ ಬೀಜ ಬಿತ್ತಿದವರು. ಪ್ರಜಾಪ್ರಭುತ್ವದ ಅಪೂರ್ವ ಚೆಲುವು ಉಳಿಯಬೇಕಾದರೆ, ಅಂಬೇಡ್ಕರ್ ಅವರು ಪ್ರತಿಪಾದಿಸಿರುವ ಅಹಿಂಸಾ ಪಥ ಭ್ರಷ್ಟವಾಗದಂತೆ ನೋಡಿಕೊಳ್ಳಬೇಕು. ಇದನ್ನು ಸಾಮೂಹಿಕ ಜವಾಬ್ದಾರಿಯಿಂದ ನಾವೆಲ್ಲರೂ ಅಗತ್ಯವಾಗಿ ಕಾಪಾಡಿಕೊಳ್ಳಬೇಕಾಗಿದೆ.

ಜ್ಞಾನ ಸಂಪತ್ತು ಹಾಗೂ ಮಾನವೀಯ ಸಂಪತ್ತು ಅಂಬೇಡ್ಕರ್ ಅವರು ಗಳಿಸಿದ ಮಹಾ ಸಂಪತ್ತು. ತಪಸ್ಸು ರೀತಿಯ ಶಿಸ್ತಿನ ಅಧ್ಯಯನ ಮತ್ತು ತಮ್ಮ ಒಳನೋಟದ ಚಿಂತನೆಯಿಂದ ಇದು ಸಾಧ್ಯವಾಗಿದೆ. ಜಗತ್ತಿನ ಜ್ಞಾನದ ವಿವಿಧ ಶಾಖೆಗಳು, ಶ್ರೇಷ್ಠ ಸಂವಿಧಾನಗಳು ಹಾಗೂ ಜಗತ್ತಿನ ಬಹುಪಾಲು ಎಲ್ಲ ಧರ್ಮಗಳನ್ನು ಹಾಗೂ ಕಡುನಿಷ್ಠೆಯಿಂದ ಅಧ್ಯಯನ ಮಾಡಿ ಗಳಿಸಿದ್ದ ಅಂಬೇಡ್ಕರ್ ಅವರ ಜ್ಞಾನದ ಮೂಸೆ, ಅವರು ನಡೆಸಿರುವ ಹೋರಾಟಗಳು, ಚಿಂತನೆಗಳು ಅವರ ಬರೆಹಗಳಲ್ಲಿ ಮೇಳೈಸಿವೆ.

ಬಹುಮುಖ ಸಂಸ್ಕೃತಿಯ ಭಾರತಕ್ಕೆ ಸಂವಿಧಾನ ರೂಪಿಸಿದ ಅಂಬೇಡ್ಕರ್‌ ಸಂವಿಧಾನ ಪೀಠಿಕೆಯಲ್ಲಿ: ‘ಭಾರತದ ಪ್ರಜೆಗಳಾದ ನಾವು ಭಾರತವನ್ನು ಸಾರ್ವಭೌಮ ಸಮಾಜವಾದಿ ಜಾತ್ಯತೀತ ಪ್ರಜಾಸತ್ತಾತ್ಮಕ ಗಣರಾಜ್ಯವನ್ನಾಗಿ ರೂಪಿಸುವುದಕ್ಕಾಗಿ, ಭಾರತದ ಎಲ್ಲ ಪ್ರಜೆಗಳಿಗೆ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ವಿಚಾರ, ಅಭಿವ್ಯಕ್ತಿ ನಂಬಿಕೆ ಶ್ರದ್ಧೆ ಮತ್ತು ಉಪಾಸನೆಯ ಸ್ವಾತಂತ್ರ್ಯವನ್ನು, ಸ್ಥಾನಮಾನ ಮತ್ತು ಅವಕಾಶಗಳ ಸಮತೆ ದೊರೆಯುವಂತೆ ಮಾಡುವುದಕ್ಕಾಗಿ, ವ್ಯಕ್ತಿ ಗೌರವ ದೇಶದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರಲ್ಲಿ ಭ್ರಾತೃತ್ವ ಭಾವನೆಯನ್ನು ಮೂಡಿಸುವುದಕ್ಕಾಗಿ ದೃಢಸಂಕಲ್ಪ ಮಾಡಿ’ ಎಂದು ಸಾರಿದ್ದಾರೆ.

ಇಲ್ಲಿ ಸರ್ವರ ಹಿತವೂ ಇದೆ. ಸಂವಿಧಾನದ ಆಶಯದಂತೆ ಯಾರೂ ಮೇಲೂ ಅಲ್ಲ, ಕೀಳೂ ಅಲ್ಲ. ಎಲ್ಲರೂ ಸಮಾನರು. ಇದು ಸರಳವಾಗಿ ಅರ್ಥವಾಗಬೇಕಾಗಿರುವ ವಿಷಯ. ಸಾವಿರಾರು ಜಾತಿ-ಉಪಜಾತಿ, ನೂರಾರು ಭಾಷೆ, ಧರ್ಮಗಳ ಈ ದೇಶಕ್ಕೆ ‘ಸರ್ವಜನ ಸಮಭಾವ’ದ ಸಂವಿಧಾನವೇ ರಕ್ಷಣೆಯಾಗಿದೆ. ಇಂಥ ಸಕಲ ಜೀವಪರ ಸಂವಿಧಾನದ ನಿಯಮದಂತೆ; ಸರ್ಕಾರವು ಯಾವ ಜಾತಿ ಮತ ಧರ್ಮಕ್ಕೂ ಸೇರಿರುವುದಿಲ್ಲ. ಯಾವ ಜಾತಿ ಮತ ಧರ್ಮವೂ ತನ್ನದೆಂದು ಹೇಳುವಾಗಿಲ್ಲ. ಜಾತಿ ಮತ ಧರ್ಮಗಳು ಇದ್ದರೆ ಅದು ಖಾಸಗಿ ನಂಬಿಕೆ, ಸ್ವಂತ ಬದುಕಿನ ಭಾಗವಾಗಿರಬೇಕಷ್ಟೆ. ಇದು ತನ್ನೊಡನೆ ಬದುಕುತ್ತಿರುವ ಯಾವುದೇ ಸಹಜೀವಿಗಳಿಗೆ ಧಕ್ಕೆ ಆಗಬಾರದು. ಸಂವಿಧಾನ ಆಶಯಗಳಿಗೆ ವಿರುದ್ಧವಾಗಿರಬಾರದು. ಹೀಗೆ ಈ ಎಚ್ಚರದಿಂದ ಎಲ್ಲರೂ ನಡೆದುಕೊಂಡರೆ, ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ಭ್ರಾತೃತ್ವವು ಏರ್ಪಡುತ್ತದೆ. ಪ್ರೀತಿ ಪ್ರೇಮ ಉತ್ತಮ ನಡವಳಿಕೆಯಿಂದ ಮನಸ್ಸು ಸಂಬಂಧ ಗಟ್ಟಿಗೊಳ್ಳುತ್ತದೆಯೇ ವಿನಾ ಅರ್ಥವಿಲ್ಲದ ಜಾತಿ ಮತ ಅಂತಸ್ತು ಐಶ್ವರ್ಯಗಳಿಂದಲ್ಲ. ಇದನ್ನು ಧಾರ್ಮಿಕ ಸಂಘ ಸಂಸ್ಥೆಗಳು ರಾಜಕೀಯ ಪಕ್ಷಗಳು ಅಗತ್ಯವಾಗಿ ಅರ್ಥಮಾಡಿಕೊಳ್ಳಬೇಕು.‌

ಹೃದಯ ವೈಶಾಲ್ಯತೆಯ ಅಂಬೇಡ್ಕರ್, ಇಡೀ ಭಾರತ ಸಮಾಜದ ಶ್ರೇಯೋಭಿವೃದ್ಧಿ ಬಯಸಿದವರು. ಇದಕ್ಕೆ ಅವರು ಹುಟ್ಟಿ ಬೆಳೆದ ಹಾಗೂ ಪ್ರೇರಣೆಗೊಂಡ ಸಮಾಜವೂ ಕಾರಣವಾಗಿದೆ. ಕಟ್ಟುನಿಟ್ಟಾದ ಧಾರ್ಮಿಕ ಆಚರಣೆಯ ಕಬೀರ್‌ ಮನೆತನದಲ್ಲಿ ಹುಟ್ಟಿ ಬೆಳೆದ ಅಂಬೇಡ್ಕರ್ ಅವರಿಗೆ ಅಸ್ಪೃಶ್ಯತೆಯ ಕಾರಣದಿಂದ ಕರಾಳ ಅವಮಾನವಾಗಿರುವುದು ನಿಜ. ಜೊತೆಗೆ ಇದೇ ಸಮಾಜದ ಒಳಗೆ ಪ್ರೀತಿಯೂ ಪ್ರೋತ್ಸಾಹವೂ ಸಿಕ್ಕಿರುವುದು ಅಷ್ಟೇ ನಿಜ. ಮಳೆಯಲ್ಲಿ ತೊಯ್ದ ಬಾಲಕ ಭೀಮನನ್ನು ತಾಯಿ ಮಮತೆಯಿಂದ ಮರುಗಿದ ಬ್ರಾಹ್ಮಣ ಶಿಕ್ಷಕ ಪೆಂಡ್ಸೆ ಅವರು ಮನೆಗೆ ಕರೆದುಕೊಂಡು ಹೋಗಿ ಬೇರೆ ಬಟ್ಟೆ, ಬಿಸಿ ಆಹಾರ ಕೊಡಿಸಿದರು. ಇನ್ನೊಬ್ಬ ಬ್ರಾಹ್ಮಣ ಶಿಕ್ಷಕರು ಪ್ರತಿದಿನ ತಮ್ಮ ಊಟವನ್ನು ಬಾಲಕ ಭೀಮನೊಟ್ಟಿಗೆ ಹಂಚಿ ಊಟಮಾಡುತ್ತಿದ್ದರು. ಈ ಬಾಲಕ ಮುಂದೆ ಸಮಾಜಕ್ಕೆ ಬಹುದೊಡ್ಡ ಆಸ್ತಿ ಆಗುತ್ತಾನೆಂಬುದನ್ನು ಗುರುತಿಸಿದರು. ಭೀಮರಾವ್‌ ಸಕ್ಪಾಲ್ ಹೆಸರಿನ ಮುಂದೆ ಕಡುಪ್ರೀತಿಯಿಂದ ಅಂಬೇಡ್ಕರ್ ಎಂಬ ತಮ್ಮ ಹೆಸರನ್ನೆ ಇಟ್ಟು ಹರಸಿದರು.

ಸಮಾಜಸುಧಾರಕ ಎಸ್.ಕೆ.ಬೋಲೆ, ಮರಾಠಿ ಪಂಡಿತ ಕೆ.ಎ.ಕೇಲುಸ್ಕರ್ ಶಾಹುಮಹರಾಜ್, ಸಯ್ಯಾಜಿರಾವ್ ಗಾಯಕ್‌ವಾಡ್, ಜ್ಯೋತಿರಾವ್‌ಫುಲೆ, ಮುಂತಾದವರು ಅಂಬೇಡ್ಕರ್ ಪ್ರತಿಭೆ ಮೆಚ್ಚಿ ಪ್ರೋತ್ಸಾಹಿಸಿದ್ದಾರೆ. ಅಂಬೇಡ್ಕರ್‌ 1927ರಲ್ಲಿ ದಲಿತರು ಚೌಡರಕೆರೆ ನೀರುಮುಟ್ಟುವ ಹೋರಾಟ ಮಾಡಿದರು. 1930ರಲ್ಲಿ ಕಾಳಾರಾಂ ದೇವಾಲಯ ಪ್ರವೇಶ ಹೋರಾಟ ಮಾಡಿದರು. ಅಂಬೇಡ್ಕರ್ ಮಾಡಿದ ಈ ಹೋರಾಟಗಳಲ್ಲಿ ಬಾಪುರಾವ್‌ಜೋಷಿ ಸಹಸ್ರಬುದ್ದೆ, ನಾಮ್‌ಸಾಹೀಬ್, ಸುರ್ವಾಟಿಫ್ನೀಸ್, ಬಿ.ಜಿ.ಕೇರ್ ಮುಂತಾದ ಮಾನವೀಯ ಅನುಕಂಪದ ಬ್ರಾಹ್ಮಣರು ಭಾಗಿಯಾದರು. ನಾವು ಅರ್ಥ ಮಾಡಿಕೊಳ್ಳಬೇಕು, ಇದು ಪೂರ್ಣ ಕೆಟ್ಟಜಾತಿ, ಇದು ಪೂರ್ಣ ಒಳ್ಳೆಜಾತಿ ಎಂಬುದು ಇಲ್ಲ. ಮಾನವೀಯವಾಗಿ ಚಿಂತಿಸುವ ಮನಸ್ಸುಗಳು ಎಲ್ಲೆಡೆಯೂ ಇವೆ.  ಎಲ್ಲಾ ಜಾತಿಯಲ್ಲಿರುವ ಒಳ್ಳೆಯ ಮನಸ್ಸುಗಳು ಒಗ್ಗೂಡುವ ಕೆಲಸ ದೊಡ್ಡ ಪ್ರಮಾಣದಲ್ಲಿಯೇ ನಿರಂತರವಾಗಿ ಆಗಬೇಕು. ಆಗ ಬದಲಾವಣೆ ಸಹಜವಾಗಿಯೇ ಆಗುತ್ತದೆ. ಸಣ್ಣ ಪ್ರಮಾಣದಲ್ಲಿಯಾದರೂ ಬದಲಾವಣೆಯಾಗಿರುವುದು ನಿಜ. ಬದಲಾವಣೆಯನ್ನು ಒಪ್ಪಿಕೊಳ್ಳುವುದು ಕೂಡ ಗುಣಾತ್ಮಕ ಚಿಂತನೆಯ ಮೆಟ್ಟಿಲೆ ಆಗುತ್ತದೆ.

ಅಂಬೇಡ್ಕರ್‌ ಗುಣಾತ್ಮಕ ಚಿಂತನೆಯ ಮಹಾನಾಯಕರು, ಅವರ ಬಹುಮುಖಿ ನೆಲೆಯ ಅಧ್ಯಯನ, ಚಿಂತನೆ, ಹೋರಾಟ, ಬರಹಗಳೆಲ್ಲವೂ ಗುಣಾತ್ಮಕ ನೆಲೆಯಲ್ಲಿಯೇ ಸಾಗಿದಂತವು. ಈ ಎತ್ತರದ ವ್ಯಕ್ತಿತ್ವ ಮಾನವತವಾದಿಯಾಗಿದ್ದರಿಂದಲೇ ಭಾರತದ ಸರ್ವಜನಾಂಗದ ಹಿತದೃಷ್ಟಿಯಲ್ಲಿಟ್ಟುಕೊಂಡು ಬಹುತಾಳ್ಮೆಯಿಂದ, ಬಹುವಿವೇಕದಿಂದ, ಬಹುದೂರದೃಷ್ಟಿತ್ವದಿಂದ ಸಂವಿಧಾನ ರೂಪಿಸಿದರು. ಹಾಗಾಗಿ ಅದು ಸರ್ವಸಮತೆಗೆ ದಾರಿ ಮಾಡಿಕೊಡುತ್ತಿದೆ.

ಒಬ್ಬ ತಾಯಿಗೆ ನಾಲ್ಕು ಮಕ್ಕಳು. ಅವರಲ್ಲಿ ಇಬ್ಬರು ಜನ ಬಲಶಾಲಿಗಳು. ಇನ್ನಿಬ್ಬರು ಕೃಶರು. ಹಡೆದ ಆ ತಾಯಿ ಕೃಶ ಮಕ್ಕಳನ್ನು ಬಲಶಾಲಿ ಮಕ್ಕಳ ಸಮಕ್ಕೆ ತರಬೇಕಾದರೆ ವಿಶೇಷ ಆರೈಕೆ ಮಾಡುತ್ತಾಳೆ. ಆದರೆ ಬಲಶಾಲಿ ಮಕ್ಕಳನ್ನು ನಿರ್ಲಕ್ಷಿಸುವುದಿಲ್ಲ. ಅಂಬೇಡ್ಕರ್‌ ಶೋಷಣೆಗೊಳಗಾದವರ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದರು. ಇನ್ನಿತರ ಭಾರತೀಯ ಜನತೆಯ ಬಗ್ಗೆ ಕೂಡ ಅಷ್ಟೆ ಕಳಕಳಿಯಿಂದಲೇ ಸರ್ವರಹಿತವನ್ನು ತಾವು ರೂಪಿಸಿದ ಸಂವಿಧಾನದಲ್ಲಿ ಅಳವಡಿಸಿರುವುದು ಗಮನಾರ್ಹ.

ಜಾತಿ ಶ್ರೇಣಿಯ ಬೇರೆ ಬೇರೆ ಗ್ರೇಡಿನಲ್ಲಿರುವ ಜಾತಿ ವ್ಯವಸ್ಥೆಯನ್ನು ಅಂಬೇಡ್ಕರ್ ವಿರೋಧಿಸುತ್ತಾರೆಯೇ ವಿನಾಃ ಯಾವುದೋ ಒಂದು ಜಾತಿಯ ವಿರುದ್ಧ ಅಂಬೇಡ್ಕರ್ ಎಂದೂ ಇರಲಿಲ್ಲ. ಶೋಷಕರು ಹಾಗೂ ಶೋಷಣೆಗೊಳಗಾದವರೆಲ್ಲರಲ್ಲಿಯೂ ಇರುವ ಅಜ್ಞಾನ, ಮೌಢ್ಯ ಹೋಗಬೇಕು, ಎಲ್ಲರೂ ವಿಚಾರವಂತರಾಗಬೇಕು. ಕ್ರಿಯಾಶೀಲರಾಗಬೇಕು. ಸಾಮಾಜಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಸರ್ವಸಮತೆಯಿಂದ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂಬುದೇ ಅಂಬೇಡ್ಕರ್‌ ಅವರ ಮಹಾದಾಶೆಯಾಗಿತ್ತು. ಅವರ ಹೋರಾಟ ಚಿಂತನೆ ಬರಹಗಳೆಲ್ಲೆಲ್ಲಾ ಈ ಬಗೆಯ ಪರಿಪೂರ್ಣತೆಯ ಆಶಯಗಳೆ ಇವೆ. ಜಡ್ಡುಗಟ್ಟಿದ ಸಮಾಜವನ್ನು ವೈಚಾರಿಕವಾಗಿ ಚಿಂತಿಸಲು ಅಣಿಗೊಳಿಸುವಾಗ, ಹೋರಾಟ ರೂಪಿಸುವಾಗ ಬರಹಗಳನ್ನು ಬರೆಯುವಾಗ ಆ ಒಂದು ದಿಟ್ಟ ನಿಲುವು ಅಗತ್ಯವಾಗಿಬೇಕಾಗಿತ್ತು. ಅದು ಚಾರಿತ್ರಿಕವಾದ ಅನಿವಾರ್ಯವೂ ಆಗಿತ್ತು. ಇದನ್ನು ಭಾರತೀಯ ಇಡೀ ಸಮಾಜ ತುಂಬು ತಾಳ್ಮೆಯಿಂದ ಗ್ರಹಿಸಬೇಕಾಗಿದೆ. ಒಂದರ್ಥದಲ್ಲಿ ಅಂಬೇಡ್ಕರ್ ಬೆಂಕಿಯಲ್ಲಿ ಅರಳಿದಹೂವು. ಆ ಕಾವಿನಿಂದ ಜಾಗೃತಿಯನ್ನು ಮೂಡಿಸಿದೆ. ‘ಸರ್ವಜನಸಮಭಾವ’ ಎಂಬ ಸಂದೇಶವನ್ನು ಸಾರುತ್ತಿದೆ, ಇದನ್ನು ನಾವೆಲ್ಲರೂ ಬಹುತಾಳ್ಮೆಯಿಂದ ಸಾಮೂಹಿಕ ಜವಾಬ್ದಾರಿಯಿಂದ ಗ್ರಹಿಸಬೇಕಾಗಿದೆ.

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT