ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧರ ಸ್ವಾವಲಂಬನೆಗೆ ಕಂಪ್ಯೂಟರ್‌ ಕಲಿಕೆ

Last Updated 15 ಜೂನ್ 2019, 9:32 IST
ಅಕ್ಷರ ಗಾತ್ರ

ಉದ್ಯೋಗ ಗಿಟ್ಟಿಸಲು ಶೈಕ್ಷಣಿಕ ಅರ್ಹತೆಯೊಂದೇ ಈಗ ಮಾನದಂಡವಾಗಿ ಉಳಿದಿಲ್ಲ. ವಿದ್ಯಾರ್ಹತೆಯೊಂದಿಗೆ ಆಯಾ ವಿಷಯದಲ್ಲಿ ಕೌಶಲ ಹಾಗೂ ಪರಿಣತಿ ಹೊಂದಿರಬೇಕು. ಆಧುನಿಕತೆ ಓಘಕ್ಕೆ ತೆರೆಕೊಂಡ ಬಳಿಕ ಕಂಪ್ಯೂಟರ್ ಕಲಿಕೆ ಅತ್ಯಗತ್ಯ. ಸಾಮಾನ್ಯರು ಸುಲಭವಾಗಿ ಕಂಪ್ಯೂಟರ್ ಸಾಕ್ಷರತೆ ಪಡೆಯುತ್ತಾರೆ. ಆದರೆ, ಅಂಧ ವಿದ್ಯಾರ್ಥಿಗಳು ಎಲ್ಲಿ, ಹೇಗೆ ಕಲಿಯಬೇಕು? ಕಂಪ್ಯೂಟರ್‌ ಜ್ಞಾನವಿಲ್ಲದಿದ್ದರೆ ಉದ್ಯೋಗ ಸಿಗುವುದು ದುಸ್ತರ. ಹಾಗಿದ್ದಾಗ ಅಂಧ ವಿದ್ಯಾರ್ಥಿಗಳ ಭವಿಷ್ಯ? ಇಂತಹ ವಿದ್ಯಾರ್ಥಿಗಳಿಗೆ ಕೌಶಲಾಧಾರಿತ ತರಬೇತಿ ನೀಡುವ ಜೊತೆಗೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಬಲರನ್ನಾಗಿ ಮಾಡಲು ಸ್ಥಾಪನೆಗೊಂಡ ಸಂಸ್ಥೆಯೇ ಲೂಯಿಬ್ರೈಲ್‌ ದೃಷ್ಟಿ ವಿಕಲಚೇತನರ ಸೇವಾ ಪ್ರತಿಷ್ಠಾನ.

ಶಾರದಾದೇವಿನಗರದ 2ನೇ ಮುಖ್ಯರಸ್ತೆಯಲ್ಲಿರುವ ಈ ಪ್ರತಿಷ್ಠಾನವನ್ನು 2015ರಲ್ಲಿ ಸ್ಥಾಪಿಸಲಾಯಿತು. ಸುಮಾರು 150 ವಿದ್ಯಾರ್ಥಿಗಳು ಇಲ್ಲಿ ಹೆಸರು ನೋಂದಾಯಿಸಿದ್ದಾರೆ. ಅವರಿಗೆ ಶೈಕ್ಷಣಿಕ ಪಠ್ಯಪುಸ್ತಕಗಳು ಹಾಗೂ ಸ್ಪರ್ಧಾತ್ಮಕ ಮಾರ್ಗದರ್ಶಿ ಕೈಪಿಡಿಗಳನ್ನು ಧ್ವನಿಮುದ್ರಿಸಿ ಸಿ.ಡಿ ರೂಪದಲ್ಲಿ ಒದಗಿಸಲಾಗುತ್ತಿದೆ. ಶೈಕ್ಷಣಿಕ ಪಠ್ಯಪುಸ್ತಕಗಳನ್ನು ಹೊರತುಪಡಿಸಿ ಮಾರ್ಗ ದರ್ಶಿ ಕೈಪಿಡಿಗಳನ್ನು ಪ್ರತಿ ತಿಂಗಳು ಧ್ವನಿಮುದ್ರಿಸಿ ಸಿ.ಡಿ.ಗಳನ್ನು ಅಂಚೆ ಮೂಲಕ ವಿತರಿಸಲಾಗುತ್ತಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಉದ್ಯೋಗ ಪಡೆದು ಉತ್ತಮ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ.

ಇದಲ್ಲದೆ, ಪ್ರತಿ ತಿಂಗಳು ಮಕ್ಕಳ ಸಾಹಸ ಕಥೆ ಪುಸ್ತಕಗಳನ್ನು ಬ್ರೈಲ್‌ ಲಿಪಿಯಲ್ಲಿ ಮುದ್ರಿಸಿ ರಂಗರಾವ್‌ ಸ್ಮಾರಕ ಅಂಧ ಹೆಣ್ಣುಮಕ್ಕಳ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ನೀಡುವ ಮೂಲಕ ಅವರಲ್ಲಿ ಸಾಹಿತ್ಯದ ಅಭಿರುಚಿ ಹಾಗೂ ಸಾಹಸ ಮನೋಭಾವವನ್ನು ವೃದ್ಧಿಸುವ ಕೆಲಸವನ್ನೂ ಮಾಡಲಾಗುತ್ತಿದೆ.

ಕಂಪ್ಯೂಟರ್‌ ತರಬೇತಿ: ಅಂಧರಿಗಾಗಿ ಜಾಸ್‌ (ಜಾಬ್‌ ಆಕ್ಸೆಸ್‌ ವಿತ್‌ ಸ್ಪೀಚ್‌‌’) ಎಂಬ ಅಪ್ಲಿಕೇಷನ್‌ ಲಭ್ಯವಿದೆ. ಇದನ್ನು ಕಂಪ್ಯೂಟರ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಂಡರೆ, ಪರದೆ ಮೇಲೆ ಯಾವ ಅಪ್ಲಿಕೇಷನ್ ತೆರೆದಿರುತ್ತದೆಯೋ ಅದನ್ನು ಓದಿ ಹೇಳುತ್ತದೆ. ಅದರ ಸಹಾಯದಿಂದ ಅಪ್ಲಿಕೇಷನ್‌ಗಳನ್ನು ಬಳಸಬಹುದು. ಅಂತರ್ಜಾಲ, ಫೇಸ್‌ಬುಕ್‌ ಬಳಕೆ, ಇ–ಮೇಲ್ ಮಾಡುವುದು, ಎಂಎಸ್‌ ಆಫೀಸ್‌, ಎಂಎಸ್‌ ಎಕ್ಸೆಲ್‌, ಪವರ್‌ ಪಾಯಿಂಟ್‌, ಎಂಎಸ್‌ ವರ್ಡ್‌ ಅಪ್ಲಿಕೇಷನ್‌ಗಳನ್ನು ಬಳಸಬಹುದು. ಎಂಎಸ್‌ ಆಫೀಸ್‌ನಲ್ಲಿ ಟೈಪಿಸುವ ಅಕ್ಷರ ಅಥವಾ ಪದವನ್ನು ಧ್ವನಿ ಮೂಲಕ ಹೇಳುತ್ತದೆ. ಈ ಧ್ವನಿಯನ್ನು ಆಲಿಸುತ್ತಾ ಟೈಪಿಸಬಹುದು. ಟೈಪಿಸಿದ್ದು ಸರಿ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬಹುದು.

ಒಂದು ವರ್ಷದವರೆಗೆ ಈ ಕೋರ್ಸ್‌ನ ತರಬೇತಿ ನೀಡಲಾಗುತ್ತದೆ. ಪ್ರತಿ ವರ್ಷ 10 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಪೂರೈಸಿರುವ ಅಂಧ ವಿದ್ಯಾರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು. ಬೆಳಿಗ್ಗೆಯಿಂದ ಸಂಜೆವರೆಗೆ ತರಬೇತಿ ನೀಡಲಾಗುತ್ತದೆ. ಕಾಲೇಜು ವಿದ್ಯಾರ್ಥಿಗಳಿಗೆ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ತರಬೇತಿ ಇರುತ್ತದೆ. ಮಧುಕುಮಾರ್‌ ಕಂಪ್ಯೂಟರ್‌ ಶಿಕ್ಷಕರಾಗಿದ್ದಾರೆ.

ಇದಲ್ಲದೆ ಸ್ಪೋಕನ್‌ ಇಂಗ್ಲಿಷ್‌ ತರಬೇತಿಯನ್ನು ನೀಡಲಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಅಂಧರ ಸಬಲೀಕರಣಕ್ಕಾಗಿ ದುಡಿಯುತ್ತಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರತಿ ವರ್ಷ ‘ಲೂಯಿ ಬ್ರೈಲ್‌ ಪ್ರಶಸ್ತಿ’ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿಯು ₹10 ಸಾವಿರ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಅಂಧ ವ್ಯಕ್ತಿ ಈ ಪ್ರತಿಷ್ಠಾನದ ಸ್ಥಾಪಕ

ಈ ಪ್ರತಿಷ್ಠಾನದ ಸ್ಥಾಪಕರು ಎಚ್‌.ಜಿ.ಯೋಗೇಶ್‌. ಅಂಧರಾಗಿರುವ ಇವರು ಶ್ರೀರಂಗಪಟ್ಟಣ ತಾಲ್ಲೂಕಿನ ನಗುವಿನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.

‘1ರಿಂದ 10ನೇ ತರಗತಿವರೆಗೆ ಬ್ರೈಲ್‌ ಪಠ್ಯಪುಸ್ತಕಗಳು ಸಿಗುತ್ತಿದ್ದವು. ಆದರೆ, ಪಿಯು, ಪದವಿ, ಸ್ನಾತಕೋತ್ತರ ಪದವಿಗೆ ಯಾವುದೇ ರೀತಿಯ ಬ್ರೈಲ್‌ ಪಠ್ಯಪುಸ್ತಕಗಳು ಸಿಗುತ್ತಿರಲಿಲ್ಲ. ಇದರಿಂದ ನಮ್ಮ ಕಲಿಕೆಗೆ ತುಂಬಾ ತೊಂದರೆ ಆಗಿತ್ತು. 2003–04ರಲ್ಲಿ ‘ಮಿತ್ರಜ್ಯೋತಿ’ ಸಂಸ್ಥೆಯವರು ಪಠ್ಯ ಪುಸ್ತಕಗಳನ್ನು ಟೇಪ್‌ ರೆಕಾರ್ಡರ್‌ ಮೂಲಕ ಧ್ವನಿ ಮುದ್ರಿಸಿ ಕೊಡುತ್ತಿದ್ದರು. ಒಂದೊಂದು ಪುಸ್ತಕವು 90 ನಿಮಿಷಗಳ 6ರಿಂದ 7 ಕ್ಯಾಸೆಟ್‌ಗಳಷ್ಟು ಆಗುತ್ತಿತ್ತು. ಅವುಗಳನ್ನು ಕೇಳಿಸಿಕೊಂಡು ತಿಳಿದುಕೊಳ್ಳಬೇಕಿತ್ತು. ದಿನ ಕಳೆದಂತೆ ಸಿ.ಡಿ, ಡಿವಿಡಿ, ಎಸ್‌ಡಿ ಕಾರ್ಡ್‌ಗಳು ಬಂದಿವೆ. ಧ್ವನಿಮುದ್ರಣ ಈಗ ಸುಲಭವಾಗಿದೆ. ಆಧುನಿಕ ತಂತ್ರಜ್ಞಾನವು ಅಂಧರ ಸ್ನೇಹಿಯಾಗಬೇಕು. ಈಗೆಲ್ಲಾ ಸರ್ಕಾರಿ ಸುತ್ತೋಲೆಗಳು, ಆದೇಶಗಳು ಎಲ್ಲವೂ ಡಿಜಿಟಲ್‌ ರೂಪದಲ್ಲಿ ಇರುತ್ತವೆ. ಸರ್ಕಾರಿ ಉದ್ಯೋಗಕ್ಕೆ ಸೇರಿದರೆ ಇ–ಮೇಲ್‌ ಮಾಡುವುದು ಸೇರಿದಂತೆ ಆನ್‌ಲೈನ್‌ ಬಳಕೆ ಅನಿವಾರ್ಯ. ಹೀಗಾಗಿ, ಅಂಧರು ಸ್ವಾವಲಂಬಿ ಜೀವನ ಸಾಧಿಸುವಂತೆ ಮಾಡುವ ಉದ್ದೇಶದಿಂದ ಈ ಪ್ರತಿಷ್ಠಾನವನ್ನು ಸ್ಥಾಪಿಸಿದ್ದೇವೆ’ ಎಂದು ಯೋಗೇಶ್‌ ಹೇಳಿದರು.

‘ನಿರುದ್ಯೋಗಿ ಅಂಧ ದಂಪತಿಗಳ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲು ಹಾಗೂ ವಸತಿ ನಿಲಯವನ್ನು ನಡೆಸಲು ಉದ್ದೇಶಿಸಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ನಿವೇಶನ ನೀಡಿದ್ದು, ಇದಕ್ಕಾಗಿ ₹11 ಲಕ್ಷ ಪಾವತಿಸಬೇಕಿದೆ. ಸದ್ಯ ₹3 ಲಕ್ಷ ಪಾವತಿಸಿದ್ದೇವೆ. ಉಳಿದ ಕಂತು ಕಟ್ಟಲು ಹಣಕಾಸಿನ ಸಮಸ್ಯೆ ಇದೆ. ಈ ನಿವೇಶನದಲ್ಲಿ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ನಿರ್ಮಾಣ, ಕಂಪ್ಯೂಟರ್‌ ತರಬೇತಿ, ಬ್ರೈಲ್‌ ಹಾಗೂ ಆಡಿಯೊ ಗ್ರಂಥಾಲಯ ನಿರ್ಮಾಣ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶವಿದೆ. ದಾನಿಗಳು ಆರ್ಥಿಕ ಸಹಾಯ ಮಾಡಿದರೆ ಅನುಕೂಲವಾಗುತ್ತದೆ’ ಎಂದು ಮನವಿ ಮಾಡಿದರು.

ದಾನಿಗಳು ಪ್ರತಿಷ್ಠಾನದ ಅಧ್ಯಕ್ಷ ಎಚ್‌.ಜಿ.ಯೋಗೇಶ್ ಮೊ: 8105959957, ಕಾರ್ಯದರ್ಶಿ ಟಿ.ಡಿ.ಮಹೇಶ್‌ ಮೊ: 7353654885 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT