‘ಇದು ಇಡೀ ಭಾರತದಲ್ಲೇ ದಾಖಲೆ ಬರೆದಿದೆ’ ಎಂದು ತಮ್ಮ ಕೈಯಲ್ಲಿದ್ದ ಪಾರಿವಾಳವನ್ನು ತೋರಿಸುತ್ತಾ ದೇವನಹಳ್ಳಿಯ ರವಿ ಬೀಗಿದರು. ಅವರು ಸಾಕಿರುವ ಈ ಪಾರಿವಾಳ ದೆಹಲಿಯಿಂದ 1,750 ಕಿಲೋಮೀಟರ್ ದೂರದ ದೇವನಹಳ್ಳಿಗೆ ನಾಲ್ಕು ದಿನಗಳಲ್ಲೇ ತಲುಪಿತ್ತು. ದೇಶದ ಪಾರಿವಾಳ ರೇಸಿಂಗ್ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ಇಷ್ಟು ದೂರ ಕ್ರಮಿಸಿದ್ದು ಇದೇ ಮೊದಲು!

‘ನಾನು ರೇಸ್ಗೆ ಹಾಕಿದ್ದ ಏಳು ಪಾರಿವಾಳಗಳೂ ಹಿಂದಿರುಗಿ ಬಂದವು. ಅದೂ ಕೂಡ ದಾಖಲೆಯೇ’ ಎನ್ನುತ್ತಾ ರವಿ ಪಾರಿವಾಳಗಳನ್ನು ಮುದ್ದಿಸಿದರು. ಅವರ ಬಳಿ ರೇಸ್ಗೆಂದೇ ಸಾಕಿರುವ 250 ಪಾರಿವಾಳಗಳಿವೆ. ಅವುಗಳಲ್ಲಿ ಹಲವು ದಾಖಲೆ ಬರೆದಿವೆ. ಅವರು ಹದಿನೈದು ವರ್ಷಗಳಿಂದ ಪಾರಿವಾಳ ರೇಸ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

‘ಹೋಮರ್’ ಜಾತಿಯ ಪಾರಿವಾಳಗಳನ್ನು ಮಾತ್ರ ರೇಸ್ಗೆ ಬಳಸಲಾಗುತ್ತದೆ. ಈ ಜಾತಿಯ ಪಾರಿವಾಳಗಳನ್ನು ರಾಜರ ಕಾಲದಲ್ಲಿ ಸಂದೇಶ ಕಳುಹಿಸಲು ಬಳಸುತ್ತಿದ್ದರು. ಈ ಪಾರಿವಾಳಗಳು ಹುಟ್ಟಿನಿಂದ ಒಂದು ಸ್ಥಳದಲ್ಲಿ ರೂಢಿಯಾದರೆ, ಜೀವಂತ ಇರುವವರೆಗೂ ಬೇರೆ ಎಲ್ಲಿಗೂ ಹೋಗುವುದಿಲ್ಲ. ಬೇರೆಡೆ ಅವುಗಳನ್ನು ತೆಗೆದುಕೊಂಡು ಹೋಗಿ ಬಿಟ್ಟು ಬಂದರೂ ಮತ್ತೆ ಮೂಲಸ್ಥಾನಕ್ಕೆ ಮರಳುತ್ತವೆ. ಈ ಜಾತಿಯ ಪಾರಿವಾಳಗಳ ಸ್ವಭಾವವೇ ಹಾಗೆ. ಹಾಗಾಗಿ ‘ಹೋಮರ್’ ಜಾತಿಯ ಪಾರಿವಾಳಗಳನ್ನೇ ರೇಸ್ಗೆ ಬಳಸುತ್ತಾರೆ.

‘ಅಯಸ್ಕಾಂತಿಯ ಶಕ್ತಿಯಿಂದ, ಮೂಗಿನ ಮೇಲಿರುವ ವಿದ್ಯುತ್ಕಾಂತದ ಮೂಲಕ, ಸೂರ್ಯನ ಕಿರಣದಿಂದ, ವಾಸನೆಯಿಂದ ಅವುಗಳು ದಿಕ್ಕುಗಳನ್ನು ಗುರುತಿಸುತ್ತವೆ ಎನ್ನುವ ಚರ್ಚೆಗಳು ಇವೆ. ಈ ಬಗ್ಗೆ ಇನ್ನೂ ಸಂಶೋಧನೆ ನಡೆಯುತ್ತಿದೆ’ ಎನ್ನುತ್ತಾರೆ ಕರ್ನಾಟಕ ಹೋಮಿಂಗ್ ಪಿಜನ್ ಸೊಸೈಟಿಯ ಕಾರ್ಯದರ್ಶಿ ವಿಕಾಸ್ ಬಿ.ಆರ್.

ನಿತ್ಯ ಅಭ್ಯಾಸ ಮತ್ತು ಆಹಾರ

ಪಾರಿವಾಳಗಳನ್ನು ರೇಸ್ಗೆ ತಯಾರು ಮಾಡುವ ಮೊದಲು ಅವುಗಳಿಗೆ ನಿರಂತರ ಅಭ್ಯಾಸ ಮಾಡಿಸಬೇಕು. ಮರಿಯಾಗಿದ್ದಾಗಲೇ ತರಬೇತಿ ಆರಂಭವಾಗುತ್ತದೆ. ನಿತ್ಯವೂ ಎರಡರಿಂದ ಮೂರು ಗಂಟೆ ಅವುಗಳಿಗೆ ಹಾರಾಟ ಮಾಡಿಸಬೇಕು. ಅಭ್ಯಾಸಕ್ಕೆ ತಕ್ಕಂತೆ ಅವುಗಳ ಆರೈಕೆ, ಪೋಷಣೆ ಮಾಡಬೇಕು. ರೇಸ್ ಶೋಕಿ ಇರುವವರ ಬಳಿ ಕನಿಷ್ಠ 100-300 ಪಾರಿವಾಳಗಳು ಇರುತ್ತವೆ. ಈ ಪೈಕಿ ಸಂತಾನೋತ್ಪತ್ತಿಗೆ ಇರುವ ಹಕ್ಕಿಗಳನ್ನು ಬೇರೆ ಗೂಡುಗಳಲ್ಲಿ ಸಾಕುತ್ತಾರೆ. ಬೆಳಿಗ್ಗೆ ಮನೆಯ ಸುತ್ತ 1-3 ಕಿ.ಮೀ ಹಾರಿಸಿ ಅಭ್ಯಾಸ ಮಾಡಿಸುತ್ತಾರೆ. ರೇಸ್ ದಿನ ಹತ್ತಿರವಾಗುತ್ತಿದ್ದಂತೆಯೇ 5,10, 20, 50 ಕಿ.ಮೀ ದೂರ ಬಿಟ್ಟು ಬರುತ್ತಾರೆ. ಬೇಗನೇ ಮರಳಿ ಬರುವ ಪಾರಿವಾಳಗಳನ್ನು ಗುರುತಿಸಿ ಅವುಗಳನ್ನು ರೇಸ್ಗೆ ಆಯ್ಕೆ ಮಾಡುತ್ತಾರೆ. ನಿತ್ಯ ಅಭ್ಯಾಸದ ಮೂಲಕ ಅವುಗಳಲ್ಲಿ ಶಿಸ್ತನ್ನು ರೂಢಿಸಲಾಗುತ್ತದೆ.

ರೇಸಿಂಗ್ ಪಾರಿವಾಳಗಳಿಗೆ ನೀಡುವ ಆಹಾರದಲ್ಲೂ ವಿಶೇಷ ಕಾಳಜಿ ವಹಿಸಬೇಕು. ಅವುಗಳು ದಿನಕ್ಕೆ ಒಂದು ಬಾರಿಗೆ 30-50 ಗ್ರಾಂ ಮಾತ್ರ ಆಹಾರ ತಿನ್ನುತ್ತವೆ. ರಾಗಿ, ಗೋಧಿ, ಜೋಳ, ಹೆಸರು, ಕಡಲೆ, ಅಗಸೆ, ತೊಗರಿ, ಉದ್ದು, ಅವರೆ, ಸಜ್ಜೆ, ಬಟಾಣಿ ಸೇರಿದಂತೆ 30-40 ಬಗೆಯ ಕಾಳುಗಳನ್ನು ಮಿಶ್ರಣ ಮಾಡಿ ಕೊಡಲಾಗುತ್ತದೆ. ಪಾರಿವಾಳದ ದೇಹಕ್ಕೆ ಬೇಕಾದ ನಾರು, ಕಾರ್ಬೊಹೈಡ್ರೆಟ್, ಪ್ರೋಟೀನ್, ಕ್ಯಾಲೊರಿ ಹಾಗೂ ಕೊಬ್ಬಿನ ಅಂಶಗಳುಳ್ಳ ಕಾಳುಗಳನ್ನು ನಿಗದಿತ ಪ್ರಮಾಣದಲ್ಲಿ ಬೆರೆಸಿ ನೀಡಲಾಗುತ್ತದೆ. ಆಹಾರದಲ್ಲಿಯೇ ಅವುಗಳ ತೂಕ ಸಮತೋಲನ ಕಾಪಾಡಿಕೊಳ್ಳಬೇಕು. ‘ಪ್ರೋಟೀನ್ ಹೆಚ್ಚು ನೀಡಿದರೆ ತೂಕ ಹೆಚ್ಚಾಗುತ್ತದೆ. ತೂಕ ಹೆಚ್ಚಾದರೆ ದೂರ ಹಾರುವಾಗ ಅವುಗಳು ಬಳಲುತ್ತವೆ. ಅಂಥವುಗಳು ಹೆಚ್ಚು ದೂರ ಹಾರುವುದಿಲ್ಲ. ರೇಸ್ಗೆ ಬಿಡುವ ಪಾರಿವಾಳಗಳಿಗೆ ಪ್ರೋಟೀನ್ ಕಡಿಮೆ ನೀಡಿ, ಕಾರ್ಬೊಹೈಡ್ರೆಟ್ ಹೆಚ್ಚಿಸಬೇಕು. ರೇಸ್ನ ಸಮಯದಲ್ಲಿ ಆಹಾರ ನೀಡುವಾಗ ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಬೇಕು. ಅದಕ್ಕೆ ತಕ್ಕಂತೆ ಆಹಾರ ನೀಡಿ, ಆಹಾರದಲ್ಲಿಯೇ ಅವುಗಳ ದೇಹ ತೂಕದಲ್ಲಿ ಸಮತೋಲನ ತರಬೇಕು’ ಎನ್ನುತ್ತಾರೆ ರವಿ.

‘ಕಂಬಳಕ್ಕೆ ಕೋಣಗಳನ್ನು, ರೇಸ್ಗೆ ಕುದುರೆಗಳನ್ನು ತಯಾರಿ ಮಾಡುವಷ್ಟೇ ಮುತುವರ್ಜಿಯಿಂದ ಪಾರಿವಾಳಗಳನ್ನು ಸಲಹಬೇಕು. ಒಂದು ಪಾರಿವಾಳಕ್ಕೆ ತಿಂಗಳಿಗೆ ಕನಿಷ್ಠ ₹5-6 ಸಾವಿರ ಖರ್ಚಾಗುತ್ತದೆ. ನಿತ್ಯ 3-4 ಗಂಟೆ ಅವುಗಳ ಆರೈಕೆಗೆ ಮೀಸಲಿಡಬೇಕು. ನಾಲ್ಕು ತಿಂಗಳು ಮಾತ್ರ ರೇಸ್ ಇರುತ್ತದೆ. ವರ್ಷದ ಉಳಿದ ಅವಧಿಯನ್ನು ತರಬೇತಿಗೆ, ಸಂತಾನೋತ್ಪತ್ತಿಗಾಗಿ ಮೀಸಲಿಡುತ್ತೇವೆ’ ಎಂದರು ರವಿ.

ರೇಸ್ಗೆ ಆಯ್ಕೆ ಹೀಗಿದೆ...

ದೇಹ ಸಣ್ಣದಾಗಿದ್ದು, ರೆಕ್ಕೆ ದೊಡ್ಡದಿದ್ದರೆ ಅಂತಹ ಪಾರಿವಾಳಗಳು ವೇಗವಾಗಿ ಹಾರುತ್ತವೆ. ವೇಗವಾಗಿ ಹಾರಿದ್ದ ಪಾರಿವಾಳಗಳ ಮರಿಗಳಿಗೂ ವೇಗ ಇರುತ್ತದೆ. ಹೀಗಾಗಿ ರೇಸ್ಗೆ ಪಾರಿವಾಳಗಳನ್ನು ಸೂಕ್ಷ್ಮವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ರೆಕ್ಕೆಗಳ ವಿನ್ಯಾಸ, ದೇಹದ ತೂಕ, ದೇಹ ರಚನೆ, ಕಣ್ಣಿನ ಆರೋಗ್ಯ, ಎದೆಭಾಗದ ರಚನೆ ಹೀಗೆ ಹಲವು ವಿಷಯಗಳು ಅವುಗಳ
ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಿಂದಿನ ರೇಸ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಪಾರಿವಾಳಗಳ ಮರಿಗಳಿಗೆ ಬೇಡಿಕೆ ಹೆಚ್ಚು. ಅವುಗಳು ರೇಸಿಂಗ್ಗೆ ಸೂಕ್ತ ಎನ್ನುವುದು ನಂಬಿಕೆ. ಬೆಂಗಳೂರಿನಲ್ಲಿ ಶೋಕಿಗಾಗಿ ಈ ರೇಸ್ಗಳು ನಡೆಯುತ್ತಿದ್ದು, ಹೆಚ್ಚು ವಾಣಿಜ್ಯೀಕರಣಗೊಂಡಿಲ್ಲ. ಹೀಗಾಗಿ ಮರಿಗಳನ್ನು ಮಾರಾಟ ಮಾಡುವವರ ಸಂಖ್ಯೆ ಬೆರಳೆಣಿಕೆಯಷ್ಟಿರಬಹುದು ಎನ್ನುವುದು ಕ್ಲಬ್ಗಳ ಸದಸ್ಯರ ಅಭಿಪ್ರಾಯ. ವಿದೇಶಗಳಲ್ಲಿ ‘ರೇಸಿಂಗ್ ಪಿಜನ್’ಗಳಿಗೆ ಭಾರಿ ಬೆಲೆ ಇದೆ. ಅವುಗಳು ಜಗತ್ತಿನ ದುಬಾರಿ ಹಕ್ಕಿಗಳೂ ಹೌದು. ಬೆಲ್ಜಿಯಂ, ಇಂಗ್ಲೆಂಡ್ನಲ್ಲಿ ರೇಸಿಂಗ್ ಪಾರಿವಾಳಗಳಿಗೆ ಭಾರೀ ಹಣ ವ್ಯಯಿಸಲಾಗುತ್ತದೆ.

ಹೆಣ್ಣು ಪಾರಿವಾಳಗಳನ್ನು ರೇಸ್ಗೆ ಬಳಸಿಕೊಳ್ಳುವುದು ಹೆಚ್ಚು. ಹಟಮಾರಿ ಸ್ವಭಾವದ ಹೆಣ್ಣು ಪಾರಿವಾಳಗಳು ಎಂಥಹುದೇ ಅಡೆತಡೆಗಳನ್ನು ಮೀರಿ ಗುರಿ ತಲುಪುತ್ತವೆ. ಅವುಗಳ ದೇಹ ತೂಕವೂ ಕಡಿಮೆ ಇರುವುದರಿಂದ ಹಾರಾಟದ ವೇಗವೂ ಹೆಚ್ಚು. ಗಿಡುಗಗಳ ದಾಳಿಯಿಂದ ಗಾಯಗೊಂಡರೂ ಗುರಿಯತ್ತ ಸಾಗುತ್ತವೆ. ಆದರೆ ಗಂಡು ಪಾರಿವಾಳಗಳು ಉದಾಸೀನ ಪ್ರವೃತ್ತಿಯವು. ದೇಹದ ತೂಕವೂ ಹೆಚ್ಚಿರುವುದರಿಂದ ಹಾರಾಟ ಆರಂಭಿಸಿದ ಸ್ವಲ್ಪ ಹೊತ್ತಿನಲ್ಲಿಯೇ ಬಳಲುತ್ತವೆ. ಪದೇ ಪದೇ ವಿಶ್ರಾಂತಿ ಪಡೆಯುತ್ತವೆ. ಹೀಗಾಗಿ ಅವುಗಳನ್ನು ರೇಸಿಂಗ್ಗೆ ನೆಚ್ಚಿಕೊಳ್ಳುವುದು ಕಷ್ಟ. ಕಡಿಮೆ ದೂರದ ರೇಸಿಂಗ್ಗೆ ಮಾತ್ರ ಗಂಡು ಹಕ್ಕಿಗಳನ್ನು ಬಳಸುತ್ತಾರೆ.

ರೇಸ್ನಲ್ಲಿ ಪಾಲ್ಗೊಳ್ಳುವ ಪಾರಿವಾಳಗಳನ್ನು ಗುರುತಿಸಲು ಅವುಗಳ ಕಾಲಿಗೆ ಉಂಗುರ ಹಾಕಲಾಗುತ್ತದೆ. ಹುಟ್ಟಿದ 4-5 ದಿನದೊಳಗೆ ಕಾಲಿಗೆ ಉಂಗುರ ಹಾಕಲಾಗುತ್ತದೆ. ರೇಸ್ನಲ್ಲಿ ಮೋಸ ಆಗದಂತೆ ಉಂಗುರಗಳನ್ನು ವಿನ್ಯಾಸ ಮಾಡಲಾಗುತ್ತದೆ. ಉಂಗುರದಲ್ಲಿ ಪಾರಿವಾಳವನ್ನು ಗುರುತಿಸಲು ವಿಶೇಷ ಸಂಖ್ಯೆ ನೀಡಲಾಗುತ್ತದೆ. ಹುಟ್ಟಿದ ವರ್ಷ ಸೇರಿ ಹಲವು ಮಾಹಿತಿಗಳು ಅದರಲ್ಲಿ ಅಡಕವಾಗಿರುತ್ತವೆ. ಕ್ಲಬ್ಗಳಿಂದಲೇ ಈ ಉಂಗುರಗಳನ್ನು ನೀಡಲಾಗುತ್ತದೆ. ಪ್ರತಿ ಸದಸ್ಯನಿಗೆ ವಾರ್ಷಿಕವಾಗಿ ನೂರು ಉಂಗುರಗಳು ಸಿಗುತ್ತವೆ. ಉಂಗುರ ಇಲ್ಲದ ಪಾರಿವಾಳಗಳು ರೇಸ್ನಲ್ಲಿ ಪಾಲ್ಗೊಳ್ಳುವ ಹಾಗಿಲ್ಲ.

ರೇಸಿಂಗ್ ಹೇಗೆ?

ಜನವರಿ–ಏಪ್ರಿಲ್ ರೇಸ್ನ ಅವಧಿ. ಮೊದಲು ಕ್ಲಬ್ಗಳಿಂದ ರೇಸ್ ಆರಂಭವಾಗುತ್ತದೆ. ಬೆಂಗಳೂರಿನಲ್ಲಿ ಐದಾರು ಕ್ಲಬ್ಗಳು ಇರಬಹುದು. ಪ್ರತಿ ಕ್ಲಬ್ನಲ್ಲಿ 25-30 ಮಂದಿ ಸದಸ್ಯರಿರುತ್ತಾರೆ. ಜನವರಿ ಮೊದಲ ವಾರದಲ್ಲಿ 150 ಕಿ.ಮೀ ದೂರದ ‘ಪರೀಕ್ಷಾರ್ಥ ಹಾರಾಟ’ ನಡೆಸಲಾಗುತ್ತದೆ. ಬಳಿಕ 200, 300 ಹಾಗೂ 500 ಕಿ.ಮೀ ದೂರದ ರೇಸ್ಗಳನ್ನು ನಡೆಸಲಾಗುತ್ತದೆ. ಪ್ರತಿ ರೇಸ್ ನಡುವೆ ಒಂದು ವಾರದ ಅಂತರ ಇರುತ್ತದೆ.

500 ಕಿ.ಮೀ ವರೆಗಿನ ರೇಸ್ ಅನ್ನು ಕ್ಲಬ್ನ ವತಿಯಿಂದಲೇ ನಡೆಸಲಾಗುತ್ತದೆ. ಬೆಂಗಳೂರು ಕೇಂದ್ರವಾಗಿಟ್ಟುಕೊಂಡು ವಾಯುಮಾರ್ಗ ಅಳತೆಯಲ್ಲಿ (ಏರಿಯಲ್ ಡಿಸ್ಟೆನ್ಸ್) ರೇಸ್ ಪಾಯಿಂಟ್ ಅನ್ನು ನಿರ್ಧರಿಸಲಾಗುತ್ತದೆ. ಉದಾಹರಣೆಗೆ 200 ಕಿ.ಮೀ ದೂರದ ರೇಸ್ ಅನ್ನು ಬೆಂಗಳೂರಿನಿಂದ ವಾಯುಮಾರ್ಗದಲ್ಲಿ ಇಷ್ಟೇ ದೂರ ಇರುವ ಆಂಧ್ರ ಪ್ರದೇಶ ಅನಂತಪುರದಿಂದ ಮಾಡಲಾಗುತ್ತದೆ. ರೇಸ್ನಲ್ಲಿ ಭಾಗಿಯಾಗುವವರು ತಮ್ಮ ಕ್ಲಬ್ನ ಮುಖಾಂತರ ಪಾರಿವಾಗಳನ್ನು ಅಲ್ಲಿಗೆ ಸಾಗಿಸುತ್ತಾರೆ. ಅಲ್ಲಿ ಎಲ್ಲಾ ಪಾರಿವಾಳಗಳನ್ನು ಒಂದೇ ಸಮಯದಲ್ಲಿ ಹಾರಿಸಲಾಗುತ್ತದೆ. ಬೇಗ ಮರಳಿ ಬಂದ ಪಾರಿವಾಳ ಗೆದ್ದಂತೆ.

1000–1750 ಕಿ.ಮೀ ದೂರದ ರೇಸ್ ಅನ್ನು ಫೆಡರೇಷನ್ ವತಿಯಿಂದ ನಡೆಸಲಾಗುತ್ತದೆ. ‘ಕರ್ನಾಟಕ ಹೋಮಿಂಗ್ ಪಿಜನ್ ಫೆಡರೇಷನ್’ ಅಡಿಯಲ್ಲಿ ಸುಮಾರು ಹನ್ನೊಂದು ಕ್ಲಬ್ಗಳಿವೆ. ಈ ಎಲ್ಲಾ ಕ್ಲಬ್ ಸದಸ್ಯರ ಪಾರಿವಾಳಗಳನ್ನು ಫೆಡರೇಷನ್ ವತಿಯಿಂದಲೇ ರೇಸ್ ಮಾಡಲಾಗುತ್ತದೆ. ಪ್ರತಿ ಪಾರಿವಾಳಕ್ಕೂ ಇಂತಿಷ್ಟು ಎಂದು ಪ್ರವೇಶ ಶುಲ್ಕ ಇರುತ್ತದೆ. ಒಬ್ಬ ಸ್ಪರ್ಧಿಗೆ 15 ಪಾರಿವಾಳಗಳನ್ನು ಬಿಡಲು ಮಾತ್ರ ಅವಕಾಶ ಇರುತ್ತದೆ. ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯುತ್ತದೆ. 1000 ಕಿ.ಮೀ ದೂರ ರೇಸ್ ಮಧ್ಯಪ್ರದೇಶ ಛಿಂದ್ವಾಡದಿಂದಲೂ 1500 ಕಿ.ಮೀ ಗ್ವಾಲಿಯರ್ನಿಂದಲೂ 1750 ಕಿ.ಮೀ ದೆಹಲಿಯಿಂದಲೂ ನಡೆಯುತ್ತದೆ. ನಗದು ಸೇರಿ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ.

ಫಲಿತಾಂಶ ನಿರ್ಧಾರ ಹೇಗೆ?

ಫೆಡರೇಷನ್ ರೇಸಿಂಗ್ನಲ್ಲಿ ಪಾಲ್ಗೊಳ್ಳುವ ಪಾರಿವಾಳಗಳಿಗೆ ತಾತ್ಕಾಲಿಕವಾಗಿ ರಬ್ಬರ್ ಉಂಗುರ ಹಾಕಲಾಗುತ್ತದೆ. ಅದರ ಒಳಗೆ ಗೋಪ್ಯಸಂಖ್ಯೆ ಇರುತ್ತದೆ. ರೇಸ್ ಮುಗಿದ ಬಳಿಕ ಈ ಹಿಂದೆ ಹಾಕಿರುವ ಉಂಗುರ ಹಾಗೂ ರಬ್ಬರ್ ಉಂಗುರದಲ್ಲಿರುವ ಗೋಪ್ಯಸಂಖ್ಯೆಯನ್ನು ತಾಳೆ ಮಾಡಲಾಗುತ್ತದೆ. ಬ್ಯಾಸ್ಕೆಟಿಂಗ್ (ಹಕ್ಕಿಗಳನ್ನು ಬ್ಯಾಸ್ಕೆಟ್ನಲ್ಲಿ ಹಾಕುವ ಪ್ರಕ್ರಿಯೆ) ವೇಳೆ ಎಲ್ಲಾ ಹಕ್ಕಿಗಳ ಮಾಹಿತಿಗಳನ್ನು ಪರಿಶೀಲಿಸಿ, ಅವುಗಳನ್ನು ಬಿಡುವ ಸ್ಥಳಕ್ಕೆ ಟೆಂಪೊ, ರೈಲು ಅಥವಾ ವಿಮಾನದ ಮೂಲಕ ಸಾಗಿಸುತ್ತಾರೆ. ‘ರಿಲೀಸಿಂಗ್ ಪಾಯಿಂಟ್’ನಲ್ಲಿ ಬಿಡುವಾಗ ಪಾರಿವಾಳ ರೇಸ್ಗೆಂದೇ ತಯಾರಿಸಲಾದ ವಿಶೇಷ ಆ್ಯಪ್ ಮೂಲಕ ಚಿತ್ರ ತೆಗೆದುಕೊಳ್ಳಲಾಗುತ್ತದೆ. ಬಿಟ್ಟ ಸಮಯ, ಸ್ಥಳವನ್ನು ಆ್ಯಪ್ ದಾಖಲಿಸಿಕೊಳ್ಳುತ್ತದೆ. ಪಾರಿವಾಳವನ್ನು ಸಾಕುವ ‘ಲಾಫ್ಟ್’ನ (ಪಾರಿವಾಳ ಸಾಕುವ ಸ್ಥಳ) ಜಿಪಿಎಸ್ ಮಾಹಿತಿಯನ್ನು ಸ್ಪರ್ಧೆಗೂ ಮೊದಲೇ ಆ್ಯಪ್ ಮೂಲಕ ದಾಖಲಿಸಿಕೊಳ್ಳಲಾಗುತ್ತದೆ. ಹಕ್ಕಿ ಮರಳಿ ಬಂದ ಕೂಡಲೇ ಮತ್ತೊಮ್ಮೆ ಫೋಟೊ ತೆಗೆದು ಅಪ್ಲೋಡ್ ಮಾಡಬೇಕು. ಸಮಯ ಹಾಗೂ ವೇಗವನ್ನು ಅದೇ ಲೆಕ್ಕ ಮಾಡುತ್ತದೆ. ದೇವನಹಳ್ಳಿ ಹಾಗೂ ಬನಶಂಕರಿಯ ಇಬ್ಬರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ, ಎರಡೂ ಸ್ಥಳಗಳಿಗೆ ಇರುವ ದೂರ ಹಾಗೂ ಹಕ್ಕಿಯ ವೇಗವನ್ನು ಲೆಕ್ಕ ಹಾಕಿ ಸರಾಸರಿ ತೆಗೆದು ಫಲಿತಾಂಶವನ್ನು ಆ್ಯಪ್ ನಿರ್ಧರಿಸುತ್ತದೆ. ಯಾವ ಹಾದಿಯಲ್ಲಿ ಬಂದಿದೆ. ಎಲ್ಲೆಲ್ಲಾ ತಂಗಿದೆ ಎಂದು ದಾಖಲಿಸುವ ದುಬಾರಿ ಆ್ಯಪ್ ವಿದೇಶಗಳಲ್ಲಿ ಇದೆ.

ಹವಾಮಾನ ಬದಲಾವಣೆ, ಭೌಗೋಳಿಕ ವ್ಯತ್ಯಾಸ, ಬೀಸುವ ಗಾಳಿ, ಶತ್ರು ಪಕ್ಷಿಗಳು, ಬೇಟೆಗಾರರಿಂದ ರಕ್ಷಿಸಿಕೊಂಡು ಈ ಪಾರಿವಾಳಗಳು ಗಮ್ಯ ತಲುಪಬೇಕು. ಗಿಡುಗಗಳ ದಾಳಿಗೆ ಒಳಗಾಗಿ ಗಾಯಗೊಂಡರೂ ರೇಸ್ ಪೂರ್ಣಗೊಳಿಸಿದ ಪಾರಿವಾಳಗಳೂ ಇವೆ. ‘ಈ ಎಲ್ಲಾ ಅಡೆತಡೆಗಳನ್ನು ಮೀರಿ ಮತ್ತೆ ಬಂದಾಗ ಅವುಗಳ ಛಲ ನೋಡಿ ಹೆಮ್ಮೆಯಾಗುತ್ತದೆ. ಕಣ್ಣಿಂದ ಹನಿಗಳೂ ಜಾರುತ್ತವೆ. ಹೀಗೆ ಹಾರಲು ಬಿಟ್ಟ ಎಲ್ಲಾ ಹಕ್ಕಿಗಳು ಮರಳಿ ಬರಬೇಕು ಎಂದೇನಿಲ್ಲ. ಕ್ಲಬ್ ರೇಸ್ ಒಂದರಲ್ಲಿ ನಾವೆಲ್ಲಾ ಸೇರಿ ಹಾರಿಸಿದ್ದ 250 ಹಕ್ಕಿಗಳು ಬರಲೇ ಇಲ್ಲ. ಆ ದಿನ ಅನಿರೀಕ್ಷಿತವಾಗಿ ಜೋರು ಗಾಳಿ ಮಳೆಯಾಗಿತ್ತು’ ಎಂದು ರವಿ ನೆನಪಿಸಿಕೊಂಡರು.

ವಿದೇಶಗಳಲ್ಲಿ ಪ್ರಸಿದ್ಧಿ

ಪಾರಿವಾಳ ರೇಸ್ ಹವ್ಯಾಸವಾಗಿ 1818ರಲ್ಲಿ ಬೆಲ್ಜಿಯಂನಲ್ಲಿ ಪ್ರಾರಂಭವಾಯಿತು ಎನ್ನಲಾಗುತ್ತದೆ. ಈಗಲೂ ಬೆಲ್ಜಿಯಂನಲ್ಲಿ ಈ ಕ್ರೀಡೆ ಭಾರಿ ಜನಪ್ರಿಯ. ಗೆದ್ದವರಿಗೆ ದೊಡ್ಡ ಮೊತ್ತದ ಬಹುಮಾನವೂ ಸಿಗುತ್ತದೆ. ಬ್ರಿಟಿಷರ ಮೂಲಕ ಈ ಶೋಕಿ ಭಾರತಕ್ಕೆ ಬಂತು. ಬೆಂಗಳೂರಿನಲ್ಲಿ 50 ವರ್ಷದಿಂದ ಪಾರಿವಾಳಗಳ ರೇಸ್ ನಡೆಯುತ್ತಿದೆ. ಶೋಕಿಗಾಗಿ ಮಾತ್ರ ಈ ರೇಸ್ ಇರುವುದರಿಂದ ಆರ್ಥಿಕವಾಗಿ ಶಕ್ತರಾದವರು ಪಾಲ್ಗೊಳ್ಳುತ್ತಾರೆ. ಬೆಂಗಳೂರು ಉತ್ತರ, ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಕ್ಲಬ್ಗಳಿವೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಗ್ರಾಮೀಣರಿಗೂ ಪಾರಿವಾಳಗಳ ರೇಸ್ ನಡೆಸುವ ಹವ್ಯಾಸ ಇದ್ದು, ತಾವು ಸಾಕಿದ ಸ್ಥಳದಿಂದ ಕೆಲವು ಕಿ.ಮೀ ದೂರ ತೆಗೆದುಕೊಂಡು ಹೋಗಿ ಬಿಟ್ಟು ಬರುತ್ತಾರೆ. ಅಲ್ಲಿ ಬಾಜಿ ಕಟ್ಟುವುದೂ ಇದೆ.

ರೇಸ್ಗಾಗಿಯೇ ಸಾಕುವ ಪ್ರಾಣಿ ಪಕ್ಷಿಗಳನ್ನು ಅತ್ಯಂತ ಮುತುವರ್ಜಿಯಿಂದ ಮಾಲೀಕರು ನೋಡಿಕೊಳ್ಳುತ್ತಾರೆ. ಅವುಗಳು ಗೆದ್ದಾಗ ಬೀಗುತ್ತಾರೆ, ಸೋತಾಗ ಬೇಸರಗೊಳ್ಳುತ್ತಾರೆ. ಮತ್ತೆ ಮತ್ತೆ ಪ್ರಯತ್ನಿಸುತ್ತಲೇ ಇರುತ್ತಾರೆ; ಗೆಲುವಿಗಾಗಿ, ಆನಂದಕ್ಕಾಗಿ.

ಹಲವು ತೊಡಕುಗಳು

ಪಾರಿವಾಳ ರೇಸ್ಗೆ ಕಾನೂನು ಮಾನ್ಯತೆ ಇಲ್ಲ. ಹೀಗಾಗಿ ಹಕ್ಕಿಗಳನ್ನು ರೇಸಿಂಗ್ ಪಾಯಿಂಟ್ಗೆ ಸಾಗಿಸುವುದೇ ಸಾಹಸದ ಕೆಲಸ. ಹಲವು ಇಲಾಖೆಗಳ ಅನುಮತಿ ಬೇಕು. ಪೊಲೀಸರ ಪ್ರಶ್ನೆಗಳನ್ನು ಎದುರಿಸಬೇಕು. ಪಾರಿವಾಳಗಳ ಮೂಲಕ ಶತ್ರು ರಾಷ್ಟ್ರಗಳು ಗೂಢಚಾರಿಕೆ ಮಾಡುವುದರಿಂದ ಅದರ ಬಗ್ಗೆಯೂ ಎಚ್ಚರಿಕೆಯಿಂದ ಇರಬೇಕು. ಪೊಲೀಸರು ಪಾರಿವಾಳಗ
ಳನ್ನು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಿದ ಉದಾಹರಣೆಗಳಿವೆ. ಪ್ರಾಣಿ ಹಿಂಸೆ ಎಂದು ರೇಸ್ಗೆ ಹಲವು ಬಾರಿ ತೊಂದರೆ ಉಂಟಾಗಿದೆ. ‘ನಾವು ಪಕ್ಷಿಗಳನ್ನು ನಮ್ಮ ಮಕ್ಕಳಂತೆ ನೋಡಿಕೊಳ್ಳುತ್ತೇವೆ. ಅವುಗಳಿಗೆ ಅತ್ಯುತ್ತಮ ಆಹಾರವನ್ನು ನೀಡುತ್ತೇವೆ. ಅವುಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ರವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.