ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯದರ್ಶಿನಿ ಇಂದಿರಾಗಾಂಧಿ

ಮಿನುಗು ಮಿಂಚು
Last Updated 31 ಅಕ್ಟೋಬರ್ 2023, 13:08 IST
ಅಕ್ಷರ ಗಾತ್ರ

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪುಣ್ಯ ತಿಥಿ ಇಂದು. ಅವರ ಬಗೆಗಿನ ಒಂದಿಷ್ಟು ಮಾಹಿತಿ ಇಲ್ಲಿದೆ.

*ಎಷ್ಟು ಕಾಲ ಇಂದಿರಾಗಾಂಧಿ ಭಾರತದ ಪ್ರಧಾನಿ ಆಗಿದ್ದರು?
1966ರಲ್ಲಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಅಕಾಲಿಕ ಮರಣದ ನಂತರ ಇಂದಿರಾಗಾಂಧಿ ಪ್ರಧಾನಿ ಗಾದಿ ಏರಿದರು. 1977ರವರೆಗೆ ಆ ಸ್ಥಾನದಲ್ಲಿ ಅವರಿದ್ದರು. ಮತ್ತೆ 1980ರಲ್ಲಿ ಪ್ರಧಾನಿ ಆದ ಅವರು 1984, ಅಕ್ಟೋಬರ್‌ 31ರಲ್ಲಿ ಹತ್ಯೆಗೆ ಈಡಾಗುವವರೆಗೂ ಆ ಸ್ಥಾನದಲ್ಲೇ ಇದ್ದರು. ಭಾರತದ ಏಕೈಕ ಮಹಿಳಾ ಪ್ರಧಾನಿ ಎಂಬ ಹೆಗ್ಗಳಿಕೆ ಅವರದ್ದು. ವಿಶ್ವದಲ್ಲೇ ಸುದೀರ್ಘ ಕಾಲ ಪ್ರಧಾನಿಯಾದ ಮಹಿಳೆ ಎನ್ನುವ ವಿಶೇಷವೂ ಅವರದ್ದು.

*ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಅವರು ಭಾಗಿಯಾಗಿದ್ದರೇ?
1929ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಕ್ಕಳ ದಳ ‘ವಾನರ ಸೇನೆ’ಯನ್ನು ರೂಪಿಸುವ ಹೊಣೆಗಾರಿಕೆಯನ್ನು ನಿರ್ವಹಿಸಿದಾಗ ಅವರಿಗಿನ್ನೂ 13 ವರ್ಷ ವಯಸ್ಸಾಗಿತ್ತು. ಧ್ವಜ ಪಥಸಂಚಲನದಲ್ಲಿ ಬಾಲಕ, ಬಾಲಕಿಯರ ತಂಡದ ನೇತೃತ್ವವನ್ನು ಇಂದಿರಾ ವಹಿಸಿದ್ದರು. ಆಗ ಮಕ್ಕಳನ್ನು ಉದ್ದೇಶಿಸಿ ದೇಶಭಕ್ತಿಯ ಕುರಿತು ಅವರು ಭಾಷಣಗಳನ್ನು ಮಾಡಿದರು. ದೇಶಭಕ್ತಿಗೀತೆಗಳನ್ನು ಹಾಡಿದರು. ಸ್ವಾತಂತ್ರ್ಯ ಹೋರಾಟದ ಕುರಿತ ಮಾಹಿತಿಯನ್ನು ಕೂಡ ಹಂಚಿದರು. 1942ರಲ್ಲಿ ಇಂದಿರಾ ಕ್ವಿಟ್‌ ಇಂಡಿಯಾ ಚಳವಳಿ ಸೇರಿಕೊಂಡರು. ಅವರ ಜೊತೆ ಪತಿ ಫಿರೋಜ್‌ ಗಾಂಧಿ ಕೂಡ ಚಳವಳಿಯಲ್ಲಿ ಪಾಲ್ಗೊಂಡರು.

*ಪ್ರಧಾನಿಯಾಗಿ ಇಂದಿರಾ ಮಾಡಿದ ಸಾಧನೆಗಳೇನು?
ಭಾರತದ ಅಭಿವೃದ್ಧಿಯಲ್ಲಿ ಇಂದಿರಾಗಾಂಧಿ ಮಹತ್ವದ ಪಾತ್ರ ವಹಿಸಿದರು. ಅವರ ಅಧಿಕಾರಾವಧಿಯಲ್ಲಿ 1971ರ ಭಾರತ–ಪಾಕ್‌ ಯುದ್ಧದಲ್ಲಿ ದೇಶದ ಸೇನಾಪಡೆಗಳು ಜಯ ಗಳಿಸಿದವು. ಅದರ ಫಲವಾಗಿಯೇ ಬಾಂಗ್ಲಾದೇಶ ರಚನೆಯಾದದ್ದು. ದೇಶ ಮೊದಲ ನ್ಯೂಕ್ಲಿಯರ್‌ ಪರೀಕ್ಷೆ ನಡೆಸಿದ್ದು, ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದ್ದು, ಹಸಿರು ಕ್ರಾಂತಿ ಆದದ್ದು ಅವರ ಅಧಿಕಾರಾವಧಿಯಲ್ಲಿಯೇ. ಹಸಿರು ಕ್ರಾಂತಿಯಿಂದ ಉತ್ತರ ಭಾರತದ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗಳಾದವು.

*ಅವರ ಜನಪ್ರಿಯತೆ ಕುಂದಿದ್ದು ಯಾಕೆ?
1975ರಲ್ಲಿ ಇಂದಿರಾಗಾಂಧಿ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದರು. ಆಗ ಅವರ ಎರಡು ವರ್ಷಗಳ ಕಾರ್ಯವೈಖರಿಯಿಂದ ಜನಪ್ರಿಯತೆ ಕುಂದಿತು.

1984ರ ಜೂನ್‌ನಲ್ಲಿ ಭಾರತೀಯ ಸೇನಾಪಡೆಗಳಿಗೆ ‘ಆಪರೇಷನ್‌ ಬ್ಲೂ ಸ್ಟಾರ್‌’ಗೆ ಅವರು ಅನುಮತಿ ನೀಡಿದರು. ಸಿಖ್ ಪ್ರತ್ಯೇಕತಾವಾದಿಗಳ ಮೇಲೆ ಸೇನಾಪಡೆಯವರು ಗುಂಡಿನ ಮಳೆಗರೆದರು. ಅದರಿಂದ ಸಿಖ್‌ ಸಮುದಾಯ ಕುಪಿತಗೊಂಡಿತು. ಇದರ ಪರಿಣಾಮದಿಂದಾಗಿಯೇ ಇಂದಿರಾಗಾಂಧಿ ಹತ್ಯೆ ನಡೆದದ್ದು.

*ಅವರಿಗೆ ಪ್ರಿಯದರ್ಶಿನಿ ಎನ್ನುವ ಹೆಸರು ಕೊಟ್ಟಿದ್ದು ಯಾರು?
ರವೀಂದ್ರನಾಥ ಟ್ಯಾಗೋರರು ಅವರಿಗೆ ಪ್ರಿಯದರ್ಶಿನಿ ಎಂಬ ಹೆಸರನ್ನು ಕೊಟ್ಟರು. ತಮ್ಮ ಶಾಲಾ ಶಿಕ್ಷಣ ಮುಗಿಸಿ ಶಾಂತಿನಿಕೇತನಕ್ಕೆ ದಾಖಲಾದಾಗ ನೋಡಲು ಆಪ್ತ ಎನಿಸುವಂತಿದ್ದ ಅವರ ಚಹರೆಯನ್ನು ಕಂಡು ಪ್ರಿಯದರ್ಶಿನಿ ಎಂಬ ಹೆಸರನ್ನು ಇಟ್ಟರು.
ನವದೆಹಲಿಯಲ್ಲಿ ಇಂದಿರಾ ಹಿಂದೆ ವಾಸವಾಗಿದ್ದ ಮನೆ ಈಗ ಇಂದಿರಾ ಗಾಂಧಿ ಸ್ಮಾರಕ ಮ್ಯೂಸಿಯಂ ಆಗಿದೆ. ಛಾಯಾಚಿತ್ರಗಳಲ್ಲದೆ ಇಂದಿರಾಗಾಂಧಿ ಅವರ ಹತ್ಯೆಗೆ ಸಂಬಂಧಿಸಿದ ವಸ್ತುಗಳೂ ಅಲ್ಲಿ ಪ್ರದರ್ಶನಕ್ಕೆ ಇವೆ. ಅವರ ರಕ್ತಸಿಕ್ತ ಸೀರೆ ಕೂಡ ಅಲ್ಲಿ ನೋಡಲು ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT