ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪಾಠ | ಚಿಣ್ಣರ ಪ್ರಯೋಗ ಪ್ರಜ್ಞೆಗೆ ‘ಕಿಟ್’

Published 11 ನವೆಂಬರ್ 2023, 20:30 IST
Last Updated 11 ನವೆಂಬರ್ 2023, 20:30 IST
ಅಕ್ಷರ ಗಾತ್ರ

ಎಂದಿನಂತೆ ಕ್ಲಾಸಿನಲ್ಲಿ ಮಕ್ಕಳ ಗಲಾಟೆ. ಒಂದು ಪೀರಿಯಡ್ ಮುಗಿದು, ಮುಂದಿನ ಪೀರಿಯಡ್‌ನ ಮೇಷ್ಟ್ರು ಇನ್ನೇನು ಬರಬೇಕು. ಹೇಳಿಕೇಳಿ ಅದು ವಿಜ್ಞಾನದ ಪೀರಿಯಡ್. ವಿಜ್ಞಾನ ಪಾಠ ಮಾಡುವ ಮೇಷ್ಟ್ರು ಬರುವಷ್ಟರಲ್ಲಿ ಒಂದಿಷ್ಟು ಗಲಾಟೆ ಸಹಜವೇ. ಮೇಷ್ಟ್ರು ಕ್ಲಾಸಿನೊಳಗೆ ಕಾಲಿಟ್ಟಿದ್ದೇ ಎಲ್ಲರೂ ಗಪ್‌ಚುಪ್‌.

ಮೇಷ್ಟ್ರು ಕೈಯಲ್ಲಿ ಎರಡು ಬಲೂನ್, ಒಂದು ಕ್ಯಾಂಡಲ್ ಮತ್ತು ಬೆಂಕಿಪೊಟ್ಟಣ. ಅವನ್ನು ಮೇಜಿನ ಮೇಲೆ ಇಟ್ಟರು. ಮುಂದಿನ ಬೆಂಚಿನಲ್ಲಿ ಇದ್ದ ಒಬ್ಬ ವಿದ್ಯಾರ್ಥಿಗೆ ಒಂದು ಬಲೂನ್ ಊದಲು ಹೇಳಿ, ಇನ್ನೊಬ್ಬ ವಿದ್ಯಾರ್ಥಿಗೆ ಇನ್ನೊಂದು ಬಲೂನಿನಲ್ಲಿ ಒಂದೆರಡು ಲೋಟ ನೀರು ತುಂಬಲು ತಿಳಿಸಿದರು. ನಂತರ ಬೆಂಕಿಕಡ್ಡಿ ಗೀರಿ ಕ್ಯಾಂಡಲ್‌ ಹೊತ್ತಿಸಿದರು. ಅದರ ಜ್ವಾಲೆ ಗಾಳಿಗೆ ಆಚೀಚೆ ಆಡುತ್ತ ಕ್ಯಾಂಡಲ್‌ನ ಮೇಣವನ್ನು ಕರಗಿಸುತ್ತ ಬೆಳಗುತ್ತಿತ್ತು. ಮಕ್ಕಳು ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಮೇಷ್ಟ್ರು ಸವಾಲೊಡ್ಡಿದರು: ‘ಮಕ್ಕಳೇ, ನನ್ನ ಬಳಿ ಎರಡು ಬಲೂನಿದೆ. ಒಂದು ಬಲೂನಿನಲ್ಲಿ ಗಾಳಿ, ಇನ್ನೊಂದರಲ್ಲಿ ನೀರು. ಉರಿಯುತ್ತಿರುವ ಕ್ಯಾಂಡಲ್‌ ಬಳಿಗೆ ಅವನ್ನು ತಂದಾಗ ಏನಾಗುತ್ತದೆ?”

ಒಂದೆಡೆ, ಕ್ಲಾಸಿನಲ್ಲಿ ಇದಾನಾಗುತ್ತಿದೆ ಎಂಬ ಗೊಂದಲ ಮಕ್ಕಳಲ್ಲಿ. ಇನ್ನೊಂದೆಡೆ, ಮೇಷ್ಟ್ರು ಸವಾಲಿಗೆ ಉತ್ತರವೇನು ಎಂದು ತಲೆ ಕೆಡಿಸಿಕೊಳ್ಳಬೇಕಾದ ಸ್ಥಿತಿ. ಪ್ರಶ್ನೆಗಳನ್ನು ತುಂಬಿಕೊಂತೆ ಮಕ್ಕಳು ನೋಡುತ್ತಿರುವಾಗಲೇ ಮೇಷ್ಟ್ರು ಒಬ್ಬ ವಿದ್ಯಾರ್ಥಿಗೆ ಗಾಳಿ ಊದಿದ ಬಲೂನನ್ನು ಕ್ಯಾಂಡಲ್‌ನ ಜ್ವಾಲೆ ಬಳಿ ತರಲು ಸೂಚಿಸಿದರು. ಇನ್ನೊಬ್ಬ ವಿದ್ಯಾರ್ಥಿಗೆ ನೀರು ತುಂಬಿದ ಬಲೂನನ್ನೂ ಕ್ಯಾಂಡಲ್ ಜ್ವಾಲೆಯ ಬಳಿ ತರಲು ಸನ್ನೆ ಮಾಡಿದರು.

ಗಾಳಿ ಊದಿದ ಬಲೂನ್ ‘ಭಡ್’ ಎಂದು ಒಡೆಯಿತು. ಆದರೆ ನೀರು ತುಂಬಿದ ಬಲೂನು ಇನ್ನೂ ಹಾಗೆಯೇ ಇತ್ತು. ಬಲೂನ್ ಹಿಡಿದುಕೊಂಡಿದ್ದ ವಿದ್ಯಾರ್ಥಿಗಳಿಗೆ ತಮ್ಮ ಜಾಗಕ್ಕೆ ವಾಪಸ್ ಹೋಗಿ ಕುಳಿತುಕೊಳ್ಳುವಂತೆ ಮೇಷ್ಟ್ರು ಸಂಜ್ಞೆಯಲ್ಲೇ ಸೂಚಿಸಿದರು.

ಮಕ್ಕಳೆಲ್ಲರ ಗಮನ ಈಗ ಮೇಷ್ಟ್ರ ಮೇಲೆ. ‘ನೀರು ತುಂಬಿದ ಬಲೂನು ಒಡೆಯದೇ ಇರಲು ಕಾರಣವೇನು ಇದ್ದೀತು?’ ಎಂಬಂತೆ ಮಕ್ಕಳಿಂದ ಉತ್ತರಕ್ಕೆ ಮೇಷ್ಟ್ರು ಎದುರು ನೋಡಿದರು. ಒಂದಿಬ್ಬರು ತಮಗೆ ತೋಚಿದಂತೆ ಕಾರಣ ಕೊಟ್ಟರು. ಅಂದಿನ ‘ಗಾಳಿ ಮತ್ತು ನೀರಿನ ಮೇಲೆ ಶಾಖದ ಪರಿಣಾಮ’ ಎಂಬ ಪಾಠದ ಸಾರವನ್ನು ಅರ್ಥ ಮಾಡಿಕೊಳ್ಳುವುದೇ ಬಲೂನು ಪ್ರಯೋಗದ ಉದ್ದೇಶ ಎಂದು ಮೇಷ್ಟ್ರು ತಿಳಿಸಿದರು.

ನಂಜನಗೂಡು ತಾಲ್ಲೂಕಿನ ತಗಡೂರಿನ ಶಾಲೆಯಲ್ಲಿ ಬಲೂನುಗಳ ಪ್ರಯೋಗ ನಡೆದಾಗ...

ನಂಜನಗೂಡು ತಾಲ್ಲೂಕಿನ ತಗಡೂರಿನ ಶಾಲೆಯಲ್ಲಿ ಬಲೂನುಗಳ ಪ್ರಯೋಗ ನಡೆದಾಗ...

‘ಗಾಳಿಯಲ್ಲಿನ ಅಣುಗಳು ನೀರಿನ ಅಣುಗಳಿಗಿಂತ ಬೇಗ ಬಿಸಿಯಾಗುತ್ತವೆ. ಹಾಗಾಗಿ ಶಾಖ ಹೆಚ್ಚಾದಂತೆ ಗಾಳಿಯ ಅಣುಗಳು ವಿಸ್ತರಿಸುತ್ತವೆ.  ಅದಕ್ಕೇ ಬಲೂನ್ ಒಡೆದದ್ದು. ನೀರಿನ ಅಣುಗಳು ಗಾಳಿಯಲ್ಲಿನ ಅಣುಗಳಷ್ಟು ಬೇಗ ಕಾಯದ ಕಾರಣ ಅವುಗಳು ವಿಸ್ತರಿಸಲು ಇನ್ನೂ ಹೆಚ್ಚು ಕಾಲಾವಕಾಶ ಬೇಕು’ ಎಂದೆನ್ನುತ್ತಾ ಅಂದಿನ ಪಾಠವನ್ನು ಮುಂದುವರಿಸಿದರು. 

ಪಾಠವನ್ನು ಚಟುವಟಿಕೆಯ ರೂಪದಲ್ಲಿ ನೋಡಿದ ಮಕ್ಕಳಿಗೆ ರೋಮಾಂಚನ. ಕಲಿತದ್ದು ಜೀವನಪರ್ಯಂತ ಮನಸ್ಸಿನಲ್ಲಿಯೇ ಉಳಿಯುತ್ತದೆ ಎಂಬ ಸಾರ್ಥಕ್ಯಭಾವ ಮೇಷ್ಟ್ರದ್ದು.

ಇಂಡಿಯಾ ಲಿಟರಸಿ ಪ್ರಾಜೆಕ್ಟ್ (ಐಎಲ್‌ಪಿ) ಎಂಬ ಸ್ವಯಂ ಸೇವಾ ಸಂಸ್ಥೆ ಅಭಿವೃದ್ಧಿಪಡಿಸಿದ ವಿಜ್ಞಾನ ಪ್ರಯೋಗದ ಕಿಟ್ (ಸೈನ್ಸ್ ಕಿಟ್) ಹೇಗೆ ಉಪಯೋಗಕ್ಕೆ ಬರುತ್ತಿದೆ ಎನ್ನುವುದಕ್ಕೆ ಈ ಪ್ರಸಂಗವೊಂದು ಉದಾಹರಣೆಯಷ್ಟೆ. 

ಐಎಲ್‌ಪಿ ಸಂಸ್ಥೆಯು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಕಾರ್ಯನಿರ್ವಹಿಸುತ್ತಿರುವ ಒಂದು ಸ್ವಯಂ ಸೇವಾ ಸಂಸ್ಥೆ (NGO). ಬಹು ಆಯಾಮ ಕಲಿಕಾ ನೆಲೆ (ಮಲ್ಟಿ ಡೈಮೆನ್ಷನಲ್ ಲರ್ನಿಂಗ್ ಸ್ಪೇಸ್, MDLS) ಎಂಬ ಕಾರ್ಯಕ್ರಮದ ಅಡಿಯಲ್ಲಿ ಇಂತಹ ಕಿಟ್‌ ಅನ್ನು ಅಭಿವೃದ್ಧಿಪಡಿಸಲಾಗಿದೆ. ಇದರ ಮೊದಲ ಆವೃತ್ತಿ 2015-16ರಲ್ಲಿ ಪ್ರಮೋದ್ ಶ್ರೀಧರಮೂರ್ತಿ, ಹರೀಶ್ ಕೆ. ಮತ್ತು ಕೀರ್ತನಾ ಸತ್ಯಮೂರ್ತಿ ನೇತೃತ್ವದ ಸ್ವಯಂಸೇವಕರ ತಂಡದಿಂದ ರೂಪುಗೊಂಡಿತು.

ಹೊಸ ಉಪಕರಣಗಳು (ಫೋಲ್ಡ್ ಸ್ಕೋಪ್‌ನಂತಹವು) ಮತ್ತು ಶಿಕ್ಷಕರಿಗೆ ತಮ್ಮ ತರಗತಿಗಳಲ್ಲಿ ಬಳಸಲು ಅನುವು ಮಾಡಿಕೊಡುವ ಪರಿಕರಗಳನ್ನು ಒಳಗೊಂಡಂತೆ ಅನೇಕ ಬದಲಾವಣೆಗಳನ್ನು ಸೇರಿಸಿ, ಇದರ ನವೀಕರಿಸಿದ ಆವೃತ್ತಿಯನ್ನು ಇಂದು ಹಲವೆಡೆ ಬಳಸಲಾಗುತ್ತಿದೆ. ಶಿಕ್ಷಕರು ಮೊದಲ ಹಂತದಲ್ಲಿ ಬಳಸಿದ ಮೇಲೆ, ಅವರಿಂದ ಪಡೆದ ಪ್ರತಿಕ್ರಿಯೆ ಮತ್ತು ಸಲಹೆಗಳಿಗೆ ಸ್ಪಂದಿಸಿ ಈ ಹೊಸ ಆವೃತ್ತಿಯನ್ನು ಅಭಿವೃದ್ಧಿಪಡಿಸಲಾಗಿದೆ.

ಐಎಲ್‌ಪಿಯ ಸೈನ್ಸ್ ಕಿಟ್‌ನಿಂದ ಸುಮಾರು 150 ಪ್ರಯೋಗಗಳನ್ನು ಮಾಡಬಹುದು. ಸುಲಭವಾಗಿ ಲಭ್ಯವಿರುವ, ಕೈಗೆಟುಕುವ ವಸ್ತುಗಳನ್ನು ಬಳಸಿಕೊಂಡು 5ರಿಂದ 10ನೇ ತರಗತಿಯವರೆಗೆ 200ಕ್ಕೂ ಹೆಚ್ಚು ಪರಿಕಲ್ಪನೆಗಳನ್ನು ತಿಳಿಯಲು ಇದು ಸಹಾಯಕ. ವಿದ್ಯಾರ್ಥಿಗಳು ತಾವೇ ಪ್ರಯೋಗ ಮಾಡಿ ಕಲಿಯುವ ಅವಕಾಶವನ್ನು ಇದು ಸೃಷ್ಟಿಸುತ್ತದೆ.

ನಾಲ್ಕರಿಂದ ಹತ್ತನೇ ತರಗತಿಗಳಿಗೆ NCERT ಪಠ್ಯಕ್ರಮದ ಆಧಾರದ ಮೇಲೆ ಐಎಲ್‌ಪಿ ಕಿಟ್‌ನೊಂದಿಗೆ ಪ್ರಯೋಗಗಳನ್ನು ಮಾಡಲು ಅನುವಾಗುವಂತೆ ಇದನ್ನು ರೂಪಿಸಲಾಗಿದೆ. ಈ ತರಗತಿಗಳ ವಿಜ್ಞಾನದ ಎಲ್ಲಾ ಅಧ್ಯಾಯಗಳಿಗೆ ಡಿಜಿಟಲ್ ಕಂಟೆಂಟ್ (ಡಿಜಿಟಲ್ ಪಾಠಗಳು, ಚಟುವಟಿಕೆಗಳು ಮತ್ತು ರಸಪ್ರಶ್ನೆಗಳು) ರಚಿಸಿರುವುದು ವಿಶೇಷ. ಪ್ರಯೋಗಗಳ ಜೊತೆಗೆ ಅದರ ಹಿಂದಿನ ಅಂಶಗಳನ್ನು ತಿಳಿಯಲು ಪೂರಕವಾಗಿ ವಿಡಿಯೊಗಳನ್ನು ರಚಿಸಿ ಯೂಟ್ಯೂಬ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಇವೆಲ್ಲವನ್ನೂ ಇಲ್ಲಿ ಉಚಿತವಾಗಿ ಪಡೆಯಬಹುದು: https://www.ilpnet.org/ resources/ 

ತುಮಕೂರು ಜಿಲ್ಲೆಯ ಗುಬ್ಬಿಯಲ್ಲಿ ಒಂದು ದಶಕದ ಹಿಂದೆ ಈ ಕಲಿಕಾ ಕಿಟ್‌ ಬಳಕೆಯನ್ನು ಪ್ರಾರಂಭಿಸಲಾಗಿತ್ತು. ನಂತರ ಈ ಕಾರ್ಯಕ್ರಮದ ಅಂಶಗಳನ್ನು ನೋಡಿ- ವಿಶ್ಲೇಷಿಸಿ, ಶಿಕ್ಷಣ ಇಲಾಖೆಯು ತನ್ನ ವ್ಯವಸ್ಥೆಯೊಳಗೆ ಹಲವಾರು ಅಂಶಗಳನ್ನು ಅಳವಡಿಸಿಕೊಂಡಿದೆ.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಶಿಕ್ಷಣ ಇಲಾಖೆಯ ನಿರ್ದೇಶನ ಮತ್ತು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಬೆಂಬಲದೊಂದಿಗೆ, ಏಳೂ ಜಿಲ್ಲೆಗಳ ಎಲ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 5,500 ಕಿಟ್‌ಗಳನ್ನು ವಿತರಿಸಲಾಗಿದೆ. ಈ ಕಿಟ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಶಿಕ್ಷಕರಿಗೆ ತರಬೇತಿಯನ್ನೂ ನೀಡಲಾಗಿದೆ. ಇಲ್ಲಿಯವರೆಗೆ, ಐಎಲ್‌ಪಿ ಸುಮಾರು 12,000ಕ್ಕೂ ಹೆಚ್ಚು ಶಿಕ್ಷಕರಿಗೆ ತರಬೇತಿ ನೀಡಿದೆ. 

ಪ್ರತಿವರ್ಷವೂ ಶಾಲೆಗಳು ವಿಜ್ಞಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಐಎಲ್‌ಪಿ ಪ್ರೋತ್ಸಾಹಿಸುತ್ತದೆ. ವಿಶೇಷವಾಗಿ ಫೆಬ್ರುವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ವಿಜ್ಞಾನ ಮಾದರಿ ಪ್ರದರ್ಶನದಂತಹ ಕಾರ್ಯಕ್ರಮ ನಡೆಸಲು ಪ್ರೋತ್ಸಾಹಿಸುತ್ತದೆ. ಅಂದಹಾಗೆ, ತುಮಕೂರು ಜಿಲ್ಲೆಯೊಂದರಲ್ಲೇ 1000ಕ್ಕೂ ಹೆಚ್ಚು ಶಾಲೆಗಳು ಕಿಟ್‌ಗಳನ್ನು ಬಳಸಿ ಕಳೆದ ವರ್ಷ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಭಾಗವಹಿಸಿದ್ದವು.

2016ರಿಂದ ಇಲ್ಲಿಯವರೆಗೆ ಐಎಲ್‌ಪಿ ಎಂಟು ರಾಜ್ಯಗಳಲ್ಲಿ 11,634 ಶಾಲೆಗಳಿಗೆ 16,645 ವಿಜ್ಞಾನ ಕಿಟ್‌ಗಳನ್ನು ವಿತರಿಸಿದೆ. ಕಲ್ಯಾಣ ಕರ್ನಾಟಕದಲ್ಲಿ ಡೆಲ್‌ ಸಂಸ್ಥೆಯ ಬೆಂಬಲದೊಂದಿಗೆ ಇದನ್ನು ಅನುಷ್ಠಾನಗೊಳಿಸುತ್ತಿದೆ.

ರಾಜ್ಯ ಸರ್ಕಾರದ ತಂತ್ರಜ್ಞಾನ ಸಹಾಯಕ ಕಲಿಕೆ ಕಾರ್ಯಕ್ರಮದ (TALP) ಅಡಿಯಲ್ಲಿ ಶಿಕ್ಷಣ ಇಲಾಖೆಯು ಈ ಹಿಂದೆ ಅಭಿವೃದ್ಧಿಗೊಳಿಸಿದ ಸುಮಾರು 2500 ಶಾಲೆಗಳಲ್ಲಿನ ಕಂಪ್ಯೂಟರ್ ಲ್ಯಾಬ್‌ಗಳನ್ನು ಇದಕ್ಕಾಗಿ ಬಳಸಲಾಗಿದೆ. ಈ ಕಂಪ್ಯೂಟರ್‌ಗಳನ್ನು ನಿರ್ದಿಷ್ಟ ‘ಉಬುಂಟು’ ಓಎಸ್‌ನೊಂದಿಗೆ ಸಜ್ಜುಗೊಳಿಸಲಾಗಿದೆ. ಜಿಮ್ಪ್ (GIMP), ಅಡಾಸಿಟಿ (Audacity), ಲಿಬ್ರೆ (Libre)ಯಂತಹ ಸಾಫ್ಟ್‌ವೇರ್‌ಗಳೊಂದಿಗೆ ಹೇಗೆ ಬಳಸುವುದು ಮತ್ತು ಕೆಲಸ ಮಾಡುವುದು ಎಂಬುದನ್ನು ವಿವರಿಸುವ 30ಕ್ಕೂ ಹೆಚ್ಚು ಸ್ವಯಂ-ಕಲಿಕಾ ವಿಡಿಯೊಗಳನ್ನು ಇವುಗಳಲ್ಲಿ ಲೋಡ್ ಮಾಡಲಾಗಿದೆ. ಹೀಗಾಗಿ ಇಂಟರ್‌ನೆಟ್ ಅನ್ನು ಅವಲಂಬಿಸುವ ಅಗತ್ಯವಿಲ್ಲ.

ಇದರ ಜೊತೆಗೆ ವಿದ್ಯಾರ್ಥಿಗಳಿಗೆ ವೃತ್ತಿಗಳ ಅರಿವು ಮತ್ತು ವೃತ್ತಿ ಮಾರ್ಗದರ್ಶನಕ್ಕೆ ಪೂರಕವಾಗಿ ವಿಶೇಷ ಕಾರ್ಯಕ್ರಮವನ್ನು ಕೂಡ ಐಎಲ್‌ಪಿ ರೂಪಿಸಿದೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸುಮಾರು 16 ಸೆಷನ್‌ಗಳನ್ನು ಪರಿಣತರು ಮಾಡುತ್ತಾರೆ. ತಮ್ಮನ್ನು ತಾವು ಅರಿತುಕೊಳ್ಳಲು, ಗುರಿ ರೂಪಿಸಿಕೊಳ್ಳಲು, ರೋಲ್ ಮಾಡೆಲ್‌ಗಳನ್ನು ಗುರುತಿಸಿ ಶ್ಲಾಘಿಸಲು ಇದು ಒಂದು ರೀತಿಯಲ್ಲಿ ದಾರಿದೀಪ.

ಕರ್ನಾಟಕವೊಂದರಲ್ಲೇ ಈ ಎಲ್ಲ ಕಾರ್ಯಕ್ರಮಗಳಿಂದ 10 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದಕ್ಕೆ ಅಡಿಗೆರೆ ಎಳೆಯಬೇಕು.

ಲೇಖಕರು ಐಎಲ್‌ಪಿಯ ಒಬ್ಬ ಸ್ವಯಂಸೇವಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT