ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದಾ ನಮ್ಮೊಡನೆ ಶೇಕ್ಸ್‌ಪಿಯರ್

Last Updated 15 ಏಪ್ರಿಲ್ 2023, 19:31 IST
ಅಕ್ಷರ ಗಾತ್ರ

ಮೈ ಕೇಲ್‌ ಆಂಜೆಲೋ ನವೋದಯ ಕಾಲದ ಇಟಲೀ ದೇಶದ ಅಪ್ರತಿಮ ಕಲಾವಿದ. ಅವನ ಕಲಾಕೃತಿಗಳು ಇಂದಿಗೂ ನೋಡುಗನನ್ನು ಬೆರಗುಗೊಳಿಸುತ್ತದೆ. ಸಂತಸ ಮೂಡಿಸುತ್ತದೆ. 1564ರ ಫೆಬ್ರುವರಿ ಹದಿನೆಂಟು ಮೈಕೇಲ್‌ ಆಂಜೆಲೊ ಮರಣ ಹೊಂದಿದ ದಿನ.

ಪ್ರಕೃತಿ 1564ರಲ್ಲಿಯೇ ಯುರೋಪಿನ ಮತ್ತೊಂದು ದೇಶದಲ್ಲಿ, ಇನ್ನೊಬ್ಬ ಕಲಾವಿದನ ಅನಾವರಣಕ್ಕಾಗಿ ಗಳಿಗೆ ಎಣಿಸುತ್ತಿತ್ತು. 1564, ಏಪ್ರಿಲ್ 26ರಂದು ಲಂಡನ್ ಸಮೀಪದ ಸ್ಟ್ರಾಟ್‌ಫೋರ್ಡ್‌ ಅಪ್‌ ಆನ್‌ ಆವೊನ್‌ನಲ್ಲಿ ಶೇಕ್ಸ್‌ಪಿಯರ್ ಎಂಬ ಅಚ್ಚರಿಗೆ ಬಳುವಳಿ ನೀಡಿತು. ಇಂಗ್ಲೆಂಡ್‌ ಜನರಲ್ಲಿ ನಾಟಕಕಾರನ ಕೃತಿಗಳು ತಮ್ಮ ಭಾಷೆಯಲ್ಲಿವೆ ಎಂಬ ಗರ್ವವಿದೆ. ಈ ಮೂಲಸತ್ಯವೇ, ಅವನು ಇಂದಿಗೂ ಚರ್ಚಿತನಾಗಿದ್ದಾನೆ. ಆಂಗ್ಲ ಭಾಷೆ ಬಲ್ಲವರು ಅವನತ್ತ ಹೆಜ್ಜೆ ಹಾಕಬಹುದು. ಭಾಷಾಂತರಿಸಬಹುದು. ವಿಮರ್ಶಿಸಬಹುದು.

ಹೆಲೆನ್ ಮಿರ‍್ರೆನ್‌ ಲಂಡನ್ನಿನ ಹಿರಿಯ, ಖ್ಯಾತ ನಟಿ. ಆಕೆಯ ಅಂತರ್ಜಾಲದ ಮಾಸ್ಟರ್ ಕ್ಲಾಸುಗಳಿಗೆ ನಾನೊಮ್ಮೆ ಹೆಸರು ನೋಂದಾಯಿಸಿದ್ದೆ. ಅವರ ಪ್ರಾಸ್ತಾವಿಕ ಭಾಷಣದಲ್ಲಿ, ‘ಶೇಕ್ಸ್‌ಪಿಯರ್ ಕುರಿತಾಗಿ ನೀವೇನೂ ಪ್ರಜ್ಞಾಪೂರ್ವಕವಾಗಿ ಆಸಕ್ತರಾಗಬೇಕಿಲ್ಲ. ಆದರೆ ಅವನೇ ನಿಮ್ಮ ಗೋಣು ಹಿಡಿದರೆ, ಆಗ ನಾನೇನೂ ಮಾಡಲಾರೆ’ ಎಂದು ಎಚ್ಚರಿಸುತ್ತಾರೆ.

ನಾನು ಬೆಳೆದ ವಾತಾವರಣದಲ್ಲಿ ಶೇಕ್ಸ್‌ಪಿಯರ್ ರಾರಾಜಿಸುತ್ತಿದ್ದ! ನನ್ನ ತಂದೆ ಜಿ.ಕೆ. ಗೋವಿಂದರಾವ್‌ ಅವರ ನಿತ್ಯ ನಮನಗಳಿಗೆ ಆಶೀರ್ವಚನ ನೀಡುತ್ತಲೇ, ನಮ್ಮ ಮನೆಯಲ್ಲಿ ಗಟ್ಟಿಯಾಗಿ ತಳವೂರಿದ್ದ. ನಾಟಕಕಾರ ನೇರಾನೇರ ಬಿ.ಎ. ತರಗತಿ ಅಂತಿಮ ವರ್ಷದಲ್ಲಿ ‘ಮ್ಯಾಕ್‌ಬೆತ್’ ಪಠ್ಯರೂಪದಲ್ಲಿ ನನ್ನೆದುರು ಪ್ರಕಟಗೊಂಡಿದ್ದ. ನಂತರ ಅವನನ್ನು ಓದುವ ಅವಕಾಶಗಳು, ಒತ್ತಾಯಗಳು ನನ್ನತ್ತ ಸುಳಿಯಲಿಲ್ಲ.

ಈಗ, ಅಗೋಚರ ಕಿಂಡಿಯಿಂದ ತೂರಿಕೊಂಡು, ಮುನ್ಸೂಚನೆಗಳಿಲ್ಲದೆಯೇ ಒಲಿದು ಬಂದ ದೇವರಂತೆ, ನನ್ನೆದುರಿಗೆ ಧುತ್ತೆಂದು ನಿಂತಿದ್ದಾನೆ. ನಾನೀಗ ನಾಟಕಕಾರನನ್ನು ಮುಖಾಮುಖಿಯಾಗಬೇಕು. ಅವನೆಂದರೆ ತಳಕಾಣದ ಜಿಗಿತವೆಂದು ಹೆದರಿದ್ದೆ. ಪೀಟರ್‌ ಆಕ್ರ್ಯಾಡ್ ಬರೆದ ಜೀವನಚರಿತ್ರೆ ಓದಲಾರಂಭಿಸಿದೆ. ಶೇಕ್ಸ್‌ಪಿಯರ್ ಎಂಬ ಮಹಾನ್ ವ್ಯಕ್ತಿ ನನ್ನ ಅನುಭವಕ್ಕೆ ಸಿಗಲಾರಂಭಿಸಿದ. ಇದು ನನ್ನೊಳಗೊಂದು ಅನುದ್ದಿಷ್ಟ ಭಾವ ಸೃಷ್ಟಿಸಿದೆ. ಪೀಟರ್‌ ಆಕ್ರ್ಯಾಡ್‌ ಒಂದು ಅಧ್ಯಾಯದಲ್ಲಿ ‘ಶೇಕ್ಸ್‌ಪಿಯರ್‌ನಲ್ಲಿ ಭಾಷೆ ಸದಾ ಗುಣುಗುಣುತ್ತಿತ್ತಂತೆ’ ಎಂದು ಉದ್ಗರಿಸುತ್ತಾರೆ! ನನಗೆ ಈ ಪದಗುಚ್ಛ ಬಲು ಆಪ್ಯಾಯಮಾನವೆನ್ನಿಸಿ, ಇದನ್ನೇ ವಿಷಯವನ್ನಾಗಿಟ್ಟುಕೊಂಡು ಏನಾದರೂ ಬರೆಯಲೇ ಎನಿಸಿತು. ಶೇಕ್ಸ್‌ಪಿಯರ್‌ನ ಭಾಷೆಯ ಗುಣುಗುಣು ಎಂದರೆ ಪದಕೋಶಗಳ ಗುಂಗಿನಲ್ಲಿದ್ದು ಬಿಡುವುದು. ಹೊಸ ಪದಗಳ ಸಂಶೋಧನೆಯ ಜೊತೆಗೆ ಜಿಜ್ಞಾಸೆ ನಡೆಸುವುದು. ಈ ಗುದ್ದಾಟದಲ್ಲಿ ತನ್ನ ಸ್ವತ್ತಾದ ಪದಗಳನ್ನು ಮನಸೋಇಚ್ಛೆ ಕಿತ್ತು, ಹರಿದು ಮರುಜೋಡಿಸುತ್ತಿದ್ದ. ಭಾಷೆ ಮತ್ತು ಶೇಕ್ಸ್‌ಪಿಯರ್ ಸಂಬಂಧ ರೋಚಕವಾಗಿರುತ್ತಿತ್ತು. ಇಷ್ಟೆಲ್ಲ ಸಾಹಸಗಳ ನಂತರವೂ ತನ್ನ ಕೈಯ್ಯಾರೆ ಸೃಷ್ಟಿಗೊಂಡ ಪದಗುಚ್ಛಗಳನ್ನು ಅನುಮಾನದಿಂದಲೋ, ಅಪನಂಬುಗೆಯಿಂದಲೋ ದೃಷ್ಟಿಸುತ್ತಿದ್ದನಂತೆ. ತನ್ನ ನಾಟಕಗಳ ಭಾವನೆಗಳನ್ನು ಹೊರ ಹಾಕುವಷ್ಟು, ಬಲಶಾಲಿಯಾಗಿಲ್ಲ ಎನ್ನಿಸಿಬಿಡುತ್ತಿತ್ತಂತೆ. ಈ ದ್ವಂದ್ವಗಳನ್ನು ಏನೆಂದು ಕರೆಯೋಣ?

ಭಾಷೆಯಿಂದ ಗಣಿತದ ನಿಖರತೆ ಬೇಡುತ್ತಿದ್ದ. ಅವನ ಮೆದುಳಿಗೆ ಪದಗಳು ಅಂಟಿಕೊಂಡಿರುತ್ತಿದ್ದವು. ಯಾರೋ ಹಿಂದಿನಿಂದ ಗುಮುಕಿದಂತೆ ಶರವೇಗದಲ್ಲಿ ಬರೆಯಬಲ್ಲವನಾಗಿದ್ದ. ಕವಿ ಕೋಲ್‌ರಿಡ್ಜ್ ಶೇಕ್ಸ್‌ಪಿಯರ್‌ನನ್ನು ಹೀಗೆ ವಿವರಿಸುತ್ತಾರೆ: ‘ಕತ್ತಲಲ್ಲಿ ಭೂಮಿಗೆ ಬೀಳುವ ಉಲ್ಕೆಯ ವೇಗದಲ್ಲಿ ಅವನಿಂದ ವಾಕ್ಯಗಳು ಒಂದಾದ ನಂತರ ಒಂದರಂತೆ ಹೊರಬರುತ್ತಿದ್ದವು.’ ಬೇರೆಯವರು ಸೃಷ್ಟಿಸಿದ ನಾಟಕಗಳು, ಕವನಗಳು, ಭಾಷಣಗಳು, ರಸ್ತೆ ಬದಿಯ ಭಾಷಣಗಳು ಈ ಎಲ್ಲ ಭಾಷಾ ವೈವಿಧ್ಯ ಸದಾ ಅವನನ್ನು ಜಾಗೃತಾವಸ್ಥೆಯಲ್ಲಿ ಇಟ್ಟಿರುತ್ತಿತ್ತು.‌

ಶೇಕ್ಸ್‌ಪಿಯರ್‌ನ ಏಳು ವರ್ಷಗಳ ಶಿಕ್ಷಣ ಮಟ್ಟ ಹೇಗಿತ್ತೆಂದರೆ, ವಯಸ್ಕ ಬದುಕಿನ ಮಿತಿಗಳು, ಬಾಲ್ಯದಲ್ಲಿದ್ದ ಬಿಡುಗಡೆ ಭಾವ ಕಾಣಿಸದಾದಾಗ, ಅಸಹನೆ, ಅತೃಪ್ತಿ ಉಂಟುಮಾಡುವಷ್ಟು. ಲ್ಯಾಟಿನ್ ಶಾಸ್ತ್ರಬದ್ಧ ಕಲಿಕೆ ಅವನಲ್ಲಿ ಜೀವನಪರ್ಯಂತದ ಪರಿಶ್ರಮದ ಅರಿವು ಮೂಡಿಸಿತ್ತು. ಕ್ಲಿಷ್ಟವಾದ ಲ್ಯಾಟಿನ್ ಕಲಿಕೆಗೆ ವಯಸ್ಸಿಗೂ ಮೀರಿದ ಏಕಾಗ್ರತೆ ಒಟ್ಟುಗೂಡಿಸಿಕೊಂಡು, ಶಾಲಾ ಕಟ್ಟುಪಾಡುಗಳಿಗೆ ಹೆದರುತ್ತಲೆ ತಪಸ್ವಿಯಂತೆ ಮನನ ಮಾಡಿದ. ವಾಕ್ಯರಚನೆ, ಗದ್ಯ ಪದ್ಯಗಳ ಪುನರುಚ್ಚಾರ, ಯಾವ ವಿಶ್ವವಿದ್ಯಾಲಯಕ್ಕೂ ಸ್ಫರ್ಧಿಸುವಂತಿತ್ತು. ಶಾಲೆ, ಮೌಖಿಕ ಸಂಸ್ಕೃತಿಗೆ ಒತ್ತುನೀಡಿತ್ತು. ಮಕ್ಕಳು ಕಥೆಗಳನ್ನು ಕೇಳುವುದು, ಐತಿಹಾಸಿಕ, ಪೌರಾಣಿಕ ನಾಟಕಗಳನ್ನು ನೋಡುವುದು ಕಡ್ಡಾಯವಾಗಿತ್ತು. ಆಲಂಕಾರಿಕ ಭಾಷೆ, ವಾಕ್ಚಾತುರ್ಯ ಕಲಿಕೆ ಇವೆಲ್ಲದ್ದಕ್ಕೂ ಕಲಶಪ್ರಾಯವಾಗಿತ್ತು. ಆಗಿನಿಂದಲೇ ಮೋಹಕ ಶೈಲಿಯಲ್ಲಿ ನಾಟಕಗಳಿಗೆ ಸಂಭಾಷಣೆ ಬರೆಯುತ್ತಿದ್ದ. ವ್ಯಾಕರಣ ಶಾಲೆಯ ವಿಷಯಗಳು ಸೃಜನಶೀಲ ವ್ಯಕ್ತಿತ್ವ ವಿಕಸಕ್ಕೆ ದಾರಿ ತೋರುವಂಥವು. ಶೇಕ್ಸ್‌ಪಿಯರ್ ಒಬ್ಬನೇ ಶಾಲೆಯ ನಟನೆಯ ಸಂಸ್ಕಾರವನ್ನು ಜೀವನದ ಕೊನೆತನಕ ಆದರದಿಂದ ಕಾಯ್ದುಕೊಂಡವನು. ಸ್ಟ್ರಾಟ್‌ಫೋರ್ಡ್ ವ್ಯಾಕರಣ ಶಾಲೆ ಸ್ಥಾಪನೆಗೊಂಡದ್ದೇ ಅವನಿಗಾಗಿ ಎಂಬಂತೆ ಅನ್ನಿಸಿಬಿಡುತ್ತದೆ.

ಜಾನ್‌ ಆಬ್ರೇ, ಪ್ರಾಚೀನ ಅನ್ವೇಷಕ. ಶೇಕ್ಸ್‌ಪಿಯರ್ ಮರಣದ ನಲ್ವತ್ತು ವರ್ಷಗಳ ಬಳಿಕ ಸ್ಟ್ರಾಟ್‌ಫೋರ್ಡ್‌ಗೆ ಭೇಟಿ ನೀಡಿದ್ದ. ಐದು ವರ್ಷದ ಬಾಲಕ ಅವನಪ್ಪನ ವಧಾಗೃಹದಲ್ಲಿ ಗೆಳೆಯರ ಸಮ್ಮುಖದಲ್ಲಿ, ನಾಟಕೀಯ ರೀತಿಯಲ್ಲಿ ಕರುವಿನ ಹತ್ಯೆಗೈದಿದ್ದ. ನಂತರ ಒಂದು ಮನೋಜ್ಞವಾದ ಭಾಷಣ ಮಾಡಿದ್ದ. ಘಟನೆಯನ್ನು ನೆನೆದ ಗೆಳೆಯರು ತಮ್ಮ ಹಳ್ಳಿ ಒಂದು ಅನನ್ಯ ಪ್ರತಿಭೆಗೆ ಜನ್ಮ ನೀಡಿದೆಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಚಾರ್ಲ್ಸ್‌ ಡಿಕನ್ಸನ್‌ನ ವಿಶ್ಲೇಷಣೆಯಲ್ಲಿ ಆತನಿಗೆ ನಟನೆ ಎಂಬುದು ನಾಟಕೀಯತೆ ಅಥವಾ ಪ್ರದರ್ಶನವಾಗಿರದೇ ಸಹಜ ಪ್ರತಿಕ್ರಿಯೆಯೇ ಆಗಿರುತ್ತಿತ್ತು. ಮುಂದುವರೆಯುತ್ತಾ ಹೀಗೆ ಅಭಿವ್ಯಕ್ತಗೊಳಿಸಿಕೊಳ್ಳುವ ಹಂಬಲ ಯಾವುದೋ ಅದೃಶ್ಯ ಸರಪಳಿಗಳಿಂದ ಬಿಡುಗಡೆ ಹೊಂದಬೇಕೆನ್ನುವ ಶಕ್ತಿಯುತವಾದ, ಆಸಕ್ತಿಕರವಾದ ಸ್ಥಿತಿ ನಿರ್ಮಾಣ ಮಾಡುತ್ತದೆ ಎನ್ನುತ್ತಾರೆ.

ಶೇಕ್ಸ್‌ಪಿಯರ್‌ನ ಸ್ವಚ್ಛಂದ ಬದುಕಿನ ಒಲವು, ಪಕ್ಷಿ-ಕಾನನದ ಗುಣಸೂಚಕವಾಗಿರುತ್ತದೆ. ಪ್ರಕೃತಿರಮ್ಯ ಹಳ್ಳಿಯಲ್ಲಿ ಜನಿಸಿದ ನಾಟಕಕಾರನ ಬೆಳವಣಿಗೆಯಲ್ಲಿ ಪರಿಸರದ ಪ್ರಭಾವ ಸಹಜವಾಗಿ ಮಿಶ್ರಗೊಂಡಿತ್ತು. ಪಕ್ಷಿಗಳ ಒಂದು ಕೂಗು, ಒಂದು ಧ್ವನಿ, ರೆಕ್ಕೆಗಳ ಬಡಿತ, ಬಾನಲ್ಲಿ ಹಾರಾಟ ತನ್ನೊಳಗೆ ಅನೂಹ್ಯ ರೀತಿಯಲ್ಲಿ ದಾಖಲಿಸಿಕೊಳ್ಳತೊಡಗಿದ್ದ. ಅವನ ನಾಟಕಗಳ ದಿವ್ಯ ಸೌಂದರ್ಯದ ಹಿನ್ನೆಲೆ, ಅವನು ಪ್ರಕೃತಿಯಿಂದ ಪಡೆದ ಜ್ಞಾನದ ಗುರುತು. ಶಾಲಾ ಶಿಕ್ಷಣಕ್ಕಿಂತಲೂ ಅಮೂಲ್ಯವಾದ ಗ್ರಹಿಕೆಯಿದು. ಅವನ ನಾಟಕಗಳಲ್ಲಿ ಕಾಣುವ ಮನುಷ್ಯನ ಅಂತಃಶಕ್ತಿಯ ಜಿಗಿತದಲ್ಲಿ, ಶೇಕ್ಸ್‌ಪಿಯರ್‌ನ ಕಲ್ಪನಾಶಕ್ತಿ, ಜ್ಞಾನಸಂಪತ್ತು ಗೋಚರಿಸುತ್ತದೆ. ಅದೊಂದು ವ್ಯಕ್ತಿಗತವಲ್ಲದ, ಆಳವಾದ ಪ್ರಬುದ್ಧಕಲೆ ಎಂದು ತಜ್ಞರು ಬಣ್ಣಿಸುತ್ತಾರೆ. ಹದಿನೆಂಟನೇ ಶತಮಾನದ ವಿಮರ್ಶಕರು ಶೇಕ್ಸ್‌ಪಿಯರ್‌ನನ್ನು ಪ್ರಕೃತಿಯ ಬಂಧು ಎಂದು ಉಲ್ಲೇಖಿಸುತ್ತಾರೆ.

ಹದಿನಾರನೇ ಶತಮಾನದ ಇಂಗ್ಲೆಂಡಿನಲ್ಲಿ ಜನರ ಆಯುಷ್ಯ ನಲವತ್ತು, ನಲವತ್ತೈದು, ದಾಟುತ್ತಿರಲಿಲ್ಲ. ಶೇಕ್ಸ್‌ಪಿಯರ್ ಸಹ ಅಲ್ಪಾಯುಷಿ ಆಗಿದ್ದ. ತನ್ನ 52ನೇ ವಯಸ್ಸಿನಲ್ಲಿ ಮರಣ ಹೊಂದಿದ.ನಾಟಕಕಾರನ ಜನನವು 1564ರ ಏಪ್ರಿಲ್‌ 26ರಂದು ನಡೆದರೆ, ಕಾಕತಾಳೀಯವೆಂಬಂತೆ ಏಪ್ರಿಲ್‌ ಇಪ್ಪತ್ಮೂರು 1916ರಂದು ಕಾಲವಾದನು. ಶೇಕ್ಸ್‌ಪಿಯರ್‌ನನ್ನು ಭೂಮಿಗೆ ಉಡುಗೊರೆ ನೀಡಿದ್ದ ಸೃಷ್ಟಿ ಅವನನ್ನು ಇನ್ನಷ್ಟು ಕಾಲ ಬದುಕಿ, ಬಾಳಿಸಲು ಉದಾಸೀನಗೊಂಡಿತು. ಯಾವುದೋ ತರಾತುರಿಗೆ ಬಿದ್ದಂತೆ ನಾಟಕಕಾರನಿಗೆ ಅಂತ್ಯ ಕಾಣಿಸಿತು. ಸೃಷ್ಟಿ ಹಾಗೂ ಶೇಕ್ಸ್‌ಪಿಯರ್ ಕೊಡು–ಕೊಳ್ಳುವಿಕೆಯಲ್ಲಿ ಕಡೆಯ ನಗು ಶೇಕ್ಸ್‌ಪಿಯರ್‌ನದು. ಶತಮಾನದಿಂದ ಶತಮಾನಕ್ಕೆ ನಾಟಕಕಾರ, ಓದುಗನಲ್ಲಿ ಕೌತುಕ ಹುಟ್ಟಿಸುತ್ತಲೇ ಇದ್ದಾನೆ. ಅವನ ಸಮಗ್ರ ನಾಟಕಗಳು ಸೃಷ್ಟಿಸಿರುವ ಮನುಷ್ಯ ಸಂಬಂಧಗಳ ಅಮೂರ್ತ ಕಲ್ಪನೆಗಳಿಗೆ ತಜ್ಞರು ಅರ್ಥ ಹುಡುಕುತ್ತಲೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT