ಕೇರಳ ರಾಜ್ಯದಲ್ಲಿ ಸೀಲ್ ಆಗಿರುವ ಬಟ್ಟೆ ಅಂಗಡಿಯಲ್ಲಿ ಆಕಸ್ಮಿಕವಾಗಿ ಸಿಲುಕಿ ಹೊರಬರಲು ಪರದಾಡುತ್ತಿದ್ದ ಗುಬ್ಬಚ್ಚಿಯ ಬಿಡುಗಡೆ ಪ್ರಸಂಗ.

ಉಳಿಕ್ಕಲ್… ಕೇರಳದ ಕಣ್ಣೂರು ಜಿಲ್ಲೆಯ ಇರಿಟ್ಟಿ ತಾಲ್ಲೂಕಿನ ವೈತೂರು ಗ್ರಾಮ ಪಂಚಾಯಿತಿಯಲ್ಲಿರುವ ಗ್ರಾಮ. ಏಪ್ರಿಲ್ 10 ರಂದು ಅಲ್ಲಿನ ಅಂಗಡಿಯೊಂದರ ಮುಂದೆ ನಿಂತು, ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಕೆ.ಟಿ. ನಿಸಾರ್ ಅಹಮದ್ ಅವರು ಆಡಿದ ಮಾತುಗಳು ಪುಟ್ಟ ಜೀವಿಯೊಂದರ ಬದುಕು, ಸ್ವಾತಂತ್ರ್ಯದ ಮೌಲ್ಯ ಸಾರುತ್ತಿತ್ತು.

‘ಕಾನೂನಿನ ಹೆಸರಿನಲ್ಲಿ ಯಾವುದೇ ಜೀವಿಯ ಬದುಕುವ ಹಕ್ಕು ಕಸಿದುಕೊಳ್ಳಬಾರದು. ಪ್ರತಿಯೊಂದು ಜೀವಿಯ ಪ್ರಾಣ ಬೆಲೆಯುಳ್ಳದ್ದು. ಊರಿನವರೆಲ್ಲ ಸೇರಿ ಒಂದು ಜೀವವನ್ನು ರಕ್ಷಿಸುವ ಮಹತ್ಕಾರ್ಯ ಮಾಡಿದ್ದೀರಿ..’

ಅವರ ಬಾಯಿಂದ ಈ ಮಾತುಗಳು ಬರುವಾಗ ಅವರ ಸುತ್ತ ಊರಿನ ಹತ್ತು ಸಮಸ್ತರು ಸೇರಿದ್ದರು. ಗ್ರಾಮ ಪಂಚಾಯಿತಿಯ ಸಿಬ್ಬಂದಿ ಸ್ಥಳದಲ್ಲಿದ್ದರು. ಪುಟ್ಟ ಮಕ್ಕಳು ‘ಜಡ್ಜ್ ಸಾಹೇಬ’ರ ಮುಖವನ್ನೇ ದಿಟ್ಟಿಸುತ್ತಿದ್ದರು. ಅಲ್ಲಿ ಸೇರಿದ್ದವರ ಮುಖದಲ್ಲಿ ಸಾರ್ಥಕ ಭಾವವಿತ್ತು, ಸಂತಸದ ಹೊನಲು ಹರಿಯುತ್ತಿತ್ತು. ಪುಟ್ಟ ಗುಬ್ಬಚ್ಚಿಯೊಂದರ ಪ್ರಾಣ ರಕ್ಷಣೆಗೆ ಇಡೀ ಊರೇ ಟೊಂಕ ಕಟ್ಟಿ, ಹೈಕೋರ್ಟ್ ಕದ ಬಡಿದ ಅಪರೂಪದ ಘಟನೆ ಇದು. ಗುಬ್ಬಚ್ಚಿಯ ರಕ್ಷಣೆಗೆ ಗ್ರಾಮಸ್ಥರು ತೋರಿದ ಕಾಳಜಿ ನ್ಯಾಯಧೀಶರ ಮೆಚ್ಚುಗೆಗೆ ಪಾತ್ರವಾಗಿತ್ತು.

ಉಳಿಕ್ಕಲ್ನಲ್ಲೊಂದು ಬಟ್ಟೆ ಅಂಗಡಿ. ಅದರ ಮಾಲೀಕತ್ವಕ್ಕಾಗಿ ಇಬ್ಬರ ನಡುವೆ ತಕರಾರು. ಪ್ರಕರಣ ಹೈಕೋರ್ಟ್ವರೆಗೂ ತಲುಪಿತ್ತು. ಅಂತಿಮ ಆದೇಶದವರೆಗೂ ಅಂಗಡಿಯನ್ನು ಸೀಲ್ ಮಾಡಬೇಕು ಎಂದು ಕೋರ್ಟ್ ಆದೇಶಿಸಿ ವರ್ಷವೇ ಉರುಳಿತ್ತು. ಇಡೀ ಪ್ರಕರಣದ ಕೇಂದ್ರ ಬಿಂದು ಇದೇ ‘ಮುಚ್ಚಿದ ಅಂಗಡಿ’. ಗುಬ್ಬಚ್ಚಿ ಎರಡನೇ ಬಾರಿಗೆ ಸ್ವಾತಂತ್ರ್ಯದ ಸಿಹಿ ಉಂಡಿದ್ದು ಇಲ್ಲಿಂದಲೇ.

ಅಂಗಡಿಯ ಇನ್ನೊಂದು ಪಕ್ಕದಲ್ಲಿ ಬಟ್ಟೆಗಳ ಪ್ರದರ್ಶನಕ್ಕಾಗಿ ಗೋಡೆಗೆ ತಾಗಿಕೊಂಡಂತೆ ಗಾಜಿನ ಬೃಹತ್ ಕೋಣೆ ಇದೆ. ಅದರೊಳಗೆ ಗುಬ್ಬಚ್ಚಿ ಹೇಗೋ ಸಿಲುಕಿಕೊಂಡಿತ್ತು. ಗೋಡೆ ಹಾಗೂ ಗಾಜಿನ ನಡುವೆ ಇರುವ ಸಣ್ಣದೊಂದು ಸಂದಿನ ಮೂಲಕ ಒಳಗೆ ಸೇರಿಕೊಂಡಿದೆ ಎನ್ನುವುದು ಜನರ ಊಹೆ ಆಗಿತ್ತು.

ಒಂದು ವರ್ಷಕ್ಕೂ ಮಿಕ್ಕಿ ಮುಚ್ಚಿಯೇ ಇರುವ ಸ್ಥಿತಿಯಲ್ಲಿ ಅಂಗಡಿ ಇದ್ದುದರಿಂದ ಯಾರ ಗಮನವೂ ಅತ್ತ ಕಡೆ ಇರಲಿಲ್ಲ. ಅಚಾನಕ್ಕಾಗಿ ಯಾರದ್ದೋ ಕಣ್ಣಿಗೆ ಗಾಜಿನೊಳಗೆ ಬಂಧಿಯಾಗಿರುವ ಗುಬ್ಬಚ್ಚಿ ಕಾಣಿಸಿತು. ಗುಬ್ಬಚ್ಚಿಯ ಪರದಾಟ, ಅಸಹಾಯಕತೆ ಊರಿಡೀ ಸುದ್ದಿಯಾಗುವಾಗ ಎರಡು ದಿನಗಳು ಕಳೆದಿದ್ದವು.

ಕೆಲವರು ಬಂದು ಗುಬ್ಬಚ್ಚಿಯನ್ನು ರಂಧ್ರದ ಮೂಲಕ ಹೊರತೆಗೆಯುವ ಪ್ರಯತ್ನ ಮಾಡಿ ಸೋತರು. ರಂಧ್ರದೊಳಗೆ ಪೈಪ್ ತೂರಿಸಿ ಅದನ್ನು ಹೊರಗೆ ಕರೆತರುವ ಯತ್ನವೂ ವಿಫಲವಾಯಿತು. ಅದೇ ರಂಧ್ರದ ಮೂಲಕ ಅದಕ್ಕೆ ಆಹಾರ, ನೀರು ನೀಡಿದರು. ಗುಬ್ಬಚ್ಚಿಯ ವಿಚಾರ ಬಾಯಿಂದ ಬಾಯಿಗೆ ಹರಡಿ ಅದನ್ನು ನೋಡಲೆಂದು ಜನ ನೆರೆದರು. ಬಿಸಿಲಿಗೆ ಕಾದ ಗಾಜಿನ ಶಾಖಕ್ಕೆ ಚಡಪಡಿಸುವ ಗುಬ್ಬಚ್ಚಿಯ ಅಸಹಾಯಕತೆಗೆ ಊರವರು ಮರುಗಿದರು.

ಈ ವಿಚಾರ ವಕೀಲ ಚಂದ್ರನ್ ಕೆ.ಎ. ಅವರಿಗೆ ಗೊತ್ತಾಯಿತು. ಪ್ರಾಣಿ ಪ್ರಿಯರೂ ಆಗಿರುವ ಅವರು ಕೂಡಲೇ ಸ್ಥಳಕ್ಕೆ ಧಾವಿಸಿ, ಗುಬ್ಬಚ್ಚಿ ರಕ್ಷಣೆಗೆ ಮುಂದಾದರು. ಕೋರ್ಟ್ ಆದೇಶಾನುಸಾರ ಅಂಗಡಿ
ಸೀಲ್ ಆಗಿದ್ದರಿಂದ ಅದರ ಬಾಗಿಲು ತೆರೆಯುವಂತಿರಲಿಲ್ಲ. ಹೀಗೆ ಇನ್ನೆರಡು ದಿನ ಕಳೆದರೆ ಗುಬ್ಬಚ್ಚಿ ಉಸಿರು ಚೆಲ್ಲುತ್ತಿತ್ತು. ಕೂಡಲೇ ಗ್ರಾಮಸ್ಥರನ್ನು ಸೇರಿಸಿಕೊಂಡು ಗ್ರಾಮ ಪಂಚಾಯಿತಿಗೆ ತೆರಳಿ ಘಟನೆ ವಿವರಿಸಿದರು. ಕಾನೂನಿನ ತೊಡಕು ಇದ್ದಿದ್ದರಿಂದ ಪಂಚಾಯಿತಿ ಸಿಬ್ಬಂದಿ ಅಸಹಾಯಕತೆ ವ್ಯಕ್ತಪಡಿಸಿದರು. ಮಾಧ್ಯಮಗಳಿಗೆ ವಿಷಯ ಮುಟ್ಟಿಸಿದ ಚಂದ್ರನ್ ಅವರ ತಂಡ, ತಕ್ಷಣ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿತು.

ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಲೇ, ಗುಬ್ಬಚ್ಚಿ ನೋಡಲು ಬರುವವರ ಸಂಖ್ಯೆ ಹೆಚ್ಚಾಯಿತು. ಪೇಟೆಗೆ ಬಂದವರೆಲ್ಲಾ ಟಿ.ವಿಯಲ್ಲಿ ಕಂಡ ಗುಬ್ಬಚ್ಚಿಯನ್ನು ನೋಡಲು ಬಂದರು. ಬರುವ ಮಕ್ಕಳದ್ದು ಕುತೂಹಲದ ನೋಟ. ಗಾಜಿನೊಳಗೆ ಅತ್ತಿಂದಿತ್ತ ಹಾರಾಡುತ್ತಾ ಬಂಧಿಯಾಗಿದ್ದ ಗುಬ್ಬಚ್ಚಿಯನ್ನು ಮೊಬೈಲ್ನಲ್ಲಿ ಸೆರೆಹಿಡಿಯುವವರ ಸಂಖ್ಯೆಯೂ ಕಡಿಮೆ ಇರಲಿಲ್ಲ. ಉಳಿಕ್ಕಲ್ನ ಅಂಗಡಿಯಲ್ಲಿ ಬಂಧಿಯಾಗಿದ್ದ ಗುಬ್ಬಚ್ಚಿಯ ಅಸಹಾಯಕ ಕೂಗು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿದಾಡಿತು.

‘ಸೆರೆಯಾದ ಗುಬ್ಬಚ್ಚಿ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿ
ದ್ದಂತೆಯೇ, ಜಿಲ್ಲಾ ಮೃಗ ಸಂರಕ್ಷಣಾ ವೇದಿಕೆಯ ಮುಖ್ಯಸ್ಥರೂ ಆಗಿರುವ ಜಿಲ್ಲಾಧಿಕಾರಿ, ಇರಿಟ್ಟಿ ತಹಶೀಲ್ದಾರರಿಂದ ವರದಿ ಕೇಳಿದರು. ಅವರು ಮಾಹಿತಿ ಬಯಸಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿದರು. ಪಂಚಾಯಿತಿ ಸಿಬ್ಬಂದಿ ಮಾಹಿತಿ ಒದಗಿಸಿದ್ದಲ್ಲದೆ, ನಮ್ಮಿಂದ ಲಿಖಿತ ಮನವಿಯನ್ನೂ ಪಡೆದುಕೊಂಡರು’ ಎಂದು ಗುಬ್ಬಚ್ಚಿಯ ಸಂರಕ್ಷಣೆಯ ಮುಂದಾಳತ್ವ ವಹಿಸಿದ್ದ ಚಂದ್ರನ್ ವಿವರಿಸಿದರು.

ವರದಿ ಬಂದ ಕೂಡಲೇ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ನಿಸಾರ್ ಅಹಮದ್ ಅವರನ್ನು ಸಂಪರ್ಕಿಸಿದ ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್, ಘಟನೆ ಬಗ್ಗೆ ಮಾಹಿತಿ ನೀಡಿದರು. ಹೈಕೋರ್ಟ್ ಆದೇಶ ಪ್ರಕಾರ ಅಂಗಡಿ ಸೀಲ್ ಆಗಿದ್ದರಿಂದ ಅವರು ಹೈಕೋರ್ಟ್ಗೆ ತಿಳಿಸಿದರು. ಗುಬ್ಬಚ್ಚಿಯ ರಕ್ಷಣೆಗೆ ಗ್ರಾಮಸ್ಥರು ತೋರಿದ ಉಮೇದನ್ನೂ ವಿವರಿಸಿದರು. ಸೆಷನ್ಸ್ ನ್ಯಾಯಾಧೀಶರ ಸಮ್ಮುಖದಲ್ಲಿ ಅಂಗಡಿ ಬಾಗಿಲನ್ನು ತೆರೆದು ಗುಬ್ಬಚ್ಚಿಯನ್ನು ಬಂಧಮುಕ್ತಗೊಳಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು. ಊರಲ್ಲಿ ಸಂಭ್ರಮ, ಇದರ ಹಿಂದೆ ಓಡಾಡಿದವರಲ್ಲಿ ಸಾರ್ಥಕ ಭಾವ.

ಮರುದಿನ ಬೆಳಿಗ್ಗೆಯೇ ಎಲ್ಲಾ ಕಾರ್ಯೋತ್ತಡಗಳನ್ನು ಬದಿಗಿರಿಸಿ 50 ಕಿ.ಮೀ ದೂರದಿಂದ ಉಳಿಕ್ಕಲ್ಗೆ ಬಂದ ನ್ಯಾ. ನಿಸಾರ್ ಅಹಮದ್ ಅವರಿಗೆ ಸೇರಿದ್ದ ಊರಿನ ನೂರಾರು ಜನರ ಸ್ವಾಗತ ಲಭಿಸಿತು.

ಕೀಲಿ ಹಿಡಿದುಕೊಂಡು ತಯಾರಾಗಿದ್ದ ಗ್ರಾಮ ಪಂಚಾಯಿತಿ ಸಿಬ್ಬಂದಿ ನ್ಯಾಯಾಧೀಶರ ನಿರ್ದೇಶನಕ್ಕಾಗಿ ಕಾಯುತ್ತಿದ್ದರು. ಬಿಡುಗಡೆಯ ಸ್ವಾತಂತ್ರ್ಯಕ್ಕಾಗಿ ಎದುರು ನೋಡುತ್ತಿದ್ದ ಗುಬ್ಬಚ್ಚಿ, ಸೇರಿದ್ದ ಭಾರಿ ಜನರನ್ನು ನೋಡಿ ಗಾಬರಿಗೊಂಡಿತ್ತು. ಗಲಿಬಿಲಿಯಿಂದ ಕಂಗಾಲಾಗಿ ಮೂಲೆಯಲ್ಲಿ ಮುದುಡಿ ಕುಳಿತಿತ್ತು. ಕೀಲಿ ತೆರೆಯುವ ಕೆಲಸ ಆರಂಭವಾಗುತ್ತಿದ್ದಂತೆಯೇ ಚಪ್ಪಾಳೆ ಮೊಳಗಿತು. ಕೀಲಿ ಗೊಂಚಲಿನ ಒಂದೊಂದು ಕೀ ಹಾಕಿ ಸಿಬ್ಬಂದಿ ತಿರುಗಿಸುತ್ತಿದ್ದರೆ, ಜನರೆಲ್ಲಾ ಹೃದಯವನ್ನು ಅಂಗೈಲಿ ಇಟ್ಟುಕೊಂಡು ಕಾಯುತ್ತಿದ್ದರು. ಕೇರಳದ ಮಾಧ್ಯಮಗಳು ಈ ಪ್ರಕ್ರಿಯೆಯನ್ನು ನೇರಪ್ರಸಾರ ಮಾಡುತ್ತಿದ್ದವು. ಹಲವು ಮೊಬೈಲ್ಗಳಲ್ಲಿಯೂ ದೃಶ್ಯಗಳು ಸೆರೆಯಾಗುತ್ತಿದ್ದವು.

ಕೀಲಿ ಉಪಯೋಗಿಸಿ ಒಂದು ಬೀಗ ತೆಗೆದರೆ, ಇನ್ನೊಂದನ್ನು ಒಡೆದು ತೆಗೆಯಬೇಕಾಯಿತು. ಗಾಜಿನ ಕೋಣೆಯೊಳಗೆ ತೆರಳಿದ ಚಂದ್ರನ್, ಗುಬ್ಬಚ್ಚಿಯನ್ನು ಹಿಡಿದು ಹೊರತರುವಾಗ ಹರ್ಷೋದ್ಘಾರ ಮೊಳಗಿದತು. ಅದನ್ನು ಗಾಳಿಯಲ್ಲಿ ಹಾರಿಬಿಟ್ಟಾಗ ಅಲ್ಲಿದ್ದವರ ಮುಖದ ಮೇಲೂ ಬಿಡುಗಡೆಯ ಭಾವವಿತ್ತು. ನಾಲ್ಕು ದಿನ ಬಂಧಿಯಾಗಿದ್ದ ಗುಬ್ಬಚ್ಚಿ ಗಾಳಿಯಲ್ಲಿ ರೆಕ್ಕೆ ಬಡಿದು ಮಾಯವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.