ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರುಷರ ಕೇಶಕ್ಕೆ ಟ್ರೆಂಡಿ ವಿನ್ಯಾಸ

Last Updated 9 ನವೆಂಬರ್ 2020, 17:32 IST
ಅಕ್ಷರ ಗಾತ್ರ

ಈ ಹಿಂದೆ ಮಹಿಳೆಯರ ಕೇಶ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳು ಕ್ಷಿಪ್ರ ಗತಿಯಲ್ಲಾದವು. ನಂತರದ ಕೆಲವು ವರ್ಷಗಳಲ್ಲಿ ಪುರುಷರ ಕೇಶದಲ್ಲೂ ಸಾಕಷ್ಟು ಟ್ರೆಂಡಿ ವಿನ್ಯಾಸಗಳು ಕಾಣಿಸಿಕೊಂಡವು. ಯುವಕರು ಮಾತ್ರವಲ್ಲ, ಮಧ್ಯ ವಯಸ್ಕರೂ ಕೂಡ ಸಲೂನ್‌ಗೆ, ಸ್ಪಾಗೆ ಹೋಗಿ ವಿವಿಧ ವಿನ್ಯಾಸದ ಕಟ್‌, ತಲೆಗೆ ಮಸಾಜ್‌ ಮಾಡಿಸಿಕೊಳ್ಳುವ ಪರಿಪಾಠ ಬೆಳಸಿಕೊಂಡಿದ್ದಾರೆ. ಆದರೆ ಲಾಕ್‌ಡೌನ್‌ ಆದಾಗ ಸಲೂನ್‌ಗಳು ಬಂದ್‌ ಆದವು. ತಲೆಗೂದಲು ಕತ್ತರಿಸುವುದನ್ನು ದೀರ್ಘ ಕಾಲ ಮುಂದೂಡುವುದು, ಮನೆಯವರಿಂದಲೇ ಟ್ರೆಂಡಿ ಕಟ್‌ ಮಾಡಿಸಿಕೊಳ್ಳುವುದು ಶುರುವಾಯಿತು. ಸದ್ಯಕ್ಕೆ ಸಲೂನ್‌ಗಳನ್ನು ತೆರೆಯಲಾಗಿದ್ದು, ಸುರಕ್ಷಿತ ಕ್ರಮಗಳನ್ನು ಅನುಸರಿಸಿ ನಿಮಗೆ ಇಷ್ಟವಾದ ಹೊಸ ಕೇಶ ವಿನ್ಯಾಸದಲ್ಲಿ ಮಿಂಚಬಹುದು.

ಕ್ರ್ಯೂಕಟ್: ಅಪ್ಪಟ ಕನ್ನಡದಲ್ಲಿ ಹೇಳುವುದಾದರೆ ತಂಡವೊಂದರ ಸಿಬ್ಬಂದಿ/ ಸದಸ್ಯರು ಏಕರೂಪದಲ್ಲಿ ಕಾಣಿಸಬೇಕು ಎಂದು ವಿನ್ಯಾಸ ಮಾಡಿಸಿಕೊಳ್ಳುವ ಶೈಲಿ ಇದು. ಕೋಲು ಮುಖ ಉಳ್ಳವರಿಗೆ ಚೆನ್ನಾಗಿ ಹೊಂದುತ್ತದೆ ಎನ್ನುತ್ತಾರೆ ಕೇಶ ವಿನ್ಯಾಸಕರು.

ಕಿವಿ, ಹಿಂದಲೆಯ ಭಾಗದ ಕೂದಲನ್ನು ಗಿಡ್ಡಕ್ಕೆ ಇಳಿಜಾರಿನ ಮಾದರಿಯಲ್ಲಿ ಕತ್ತರಿಸುತ್ತಾರೆ. ನೆತ್ತಿಯ ಮೇಲ್ಭಾಗ ದಟ್ಟ ಕೂದಲು ಇರುತ್ತದೆ. ಇದು ಇನ್ನಷ್ಟು ಎದ್ದು ಕಾಣಿಸಲು ಒಂದು ಗೀರನ್ನು (ಕೂದಲನ್ನು ಪೂರ್ತಿ ಕತ್ತರಿಸಿ ಚರ್ಮ ಕಾಣುವಂತೆ ಮಾಡುವುದು) ಎಳೆಯುವುದುಂಟು.

ಅಂಡರ್‌ಕಟ್: ಇದು ಕ್ರ್ಯೂ ಕಟ್‌ನ ಮುಂದುವರಿದ ಭಾಗ. ಹೆಚ್ಚು ಕಡಿಮೆ ಕ್ರ್ಯೂಕಟ್ ಅನ್ನೇ ಹೋಲುತ್ತದೆ. ಈ ಶೈಲಿ ಎಲ್ಲ ಪ್ರಕಾರದ ಮುಖದ ಆಕಾರ ಇರುವವರಿಗೆ ಹೊಂದುತ್ತದೆ.

ಡಿಸ್‌ಕನೆಕ್ಟೆಡ್‌ ಅಂಡರ್‌ಕಟ್‌: ಹೆಸರೇ ಹೇಳುವಂತೆ ನೆತ್ತಿಗೂ ತಲೆಯ ಕೆಳಭಾಗಕ್ಕೂ ಸಂಪರ್ಕವೇ ಇಲ್ಲದಂತೆ ವಿನ್ಯಾಸಗೊಳಿಸುವ ಕಟ್‌ ಇದು. ಕಿವಿ ಮತ್ತು ಹಿಂದಲೆಯ ಭಾಗದಲ್ಲಿ ಬಹುಭಾಗ ಕೂದಲನ್ನು ಕತ್ತರಿಸಲಾಗುತ್ತದೆ. ಅಥವಾ ಬೋಳಿಸುವುದೂ ಉಂಟು. ನೆತ್ತಿಯಲ್ಲಿ ಕೂದಲು ಇರುತ್ತದೆ. ಮುಖದಲ್ಲಿ ದಟ್ಟ ಗಡ್ಡ ಇರುವವರಿಗೆ ಈ ಶೈಲಿ ಚೆನ್ನಾಗಿ ಕಾಣಿಸುತ್ತದೆ.

ಲೋ ಫೇಡ್‌: ತಲೆಯ ಕೆಳಭಾಗ (ಕಿವಿಗೆ ಸಮಾನಾಂತರವಾಗಿ) ಪೂರ್ಣ ಕೂದಲನ್ನು ಕತ್ತರಿಸಿ ಮೇಲ್ಭಾಗಕ್ಕೆ ಹೋಗುತ್ತಿದ್ದಂತೆಯೇ ಕೂದಲನ್ನೂ ಸ್ವಲ್ಪ ದಪ್ಪ ಇರುವಂತೆ ಕಾಣುವ ಹಾಗೆ ಕತ್ತರಿಸಲಾಗುತ್ತದೆ. ಹೀಗೆ ಮುಂದುವರಿದ ಕೇಶರಾಶಿ ನೆತ್ತಿಯ ದಟ್ಟ ರಾಶಿಯ ಜತೆ ಬೆರೆತುಬಿಡುತ್ತದೆ. ಹಣೆಯಿಂದ ಕೂದಲನ್ನು ಹಿಮ್ಮುಖವಾಗಿ ಬಾಚಿದರೆ ಚೆನ್ನಾಗಿ ಕಾಣುತ್ತದೆ.

ಮಿಡ್‌ ಫೇಡ್‌: ಉತ್ತಮ ವಿನ್ಯಾಸದ ನೋಟಕ್ಕಾಗಿ ಮಿಡ್‌ಫೇಡ್‌ ಕಟ್‌ (ಮಧ್ಯಮ ಪ್ರಮಾಣದಲ್ಲಿ ಕೂದಲನ್ನು ಕತ್ತರಿಸುತ್ತಾ ನೆತ್ತಿಯ ಪಾರ್ಶ್ವಗಳಲ್ಲಿ ಕೂದಲು ದಟ್ಟವಿರುವಂತೆ ಕಾಣಿಸುವುದು) ಉತ್ತಮ ಆಯ್ಕೆ. ಲೋಫೇಡ್‌ ಮತ್ತು ಮಿಡ್‌ ಫೇಡ್‌ ನೋಡಲು ಅಂಥ ವ್ಯತ್ಯಾಸವೇನಿಲ್ಲ.

ಹೈ ಫೇಡ್: ಉದ್ದ ಕೂದಲನ್ನು ಹದ ಪ್ರಮಾಣದಲ್ಲಿ ತಲೆಯ ಎರಡೂ ಬದಿಗಳಲ್ಲಿ ಕತ್ತರಿಸುತ್ತಾ ಬರುವ ವಿನ್ಯಾಸ ಇದು. ಹೈಫೇಡ್ ಹೆಚ್ಚು ಗಮನ ಸೆಳೆಯುತ್ತದೆ. ಅನುಭವಿಗಳು ಇದನ್ನು ಚೆನ್ನಾಗಿ ವಿನ್ಯಾಸ ಮಾಡಬಲ್ಲರು.

ಸೈಡ್‌ ಪಾರ್ಟ್‌: ತಲೆಯ ಎಡ ಅಥವಾ ಬಲ ಒಂದು ಪಾರ್ಶ್ವದ ಕೂದಲನ್ನು ಇಳಿಜಾರು ಮಾದರಿಯಲ್ಲಿ ಕತ್ತರಿಸುವುದು. ನೆತ್ತಿಯಲ್ಲಿ ದಟ್ಟವಾಗಿರುವ ಕೂದಲನ್ನು ಒಂದು ಪಾರ್ಶ್ವಕ್ಕೆ (ಇಳಿಜಾರು ಮಾದರಿಯಲ್ಲಿ ಕತ್ತರಿಸಲ್ಪಟ್ಟ ವಿರುದ್ಧ ದಿಕ್ಕಿಗೆ) ಬಾಚುವುದು. ಇದು ಯುವಜನರ ಸದ್ಯದ ಆಯ್ಕೆ.

ಬಝ್‌ ಕಟ್‌: ಗಿಡ್ಡ ಮಾದರಿಯ ಕೇಶ ಶೈಲಿ ಬಯಸುವವರ ಆಯ್ಕೆಯಿದು. ಈ ರೀತಿ ಶೈಲಿಯು ಸ್ವಲ್ಪ ಒರಟುತನ ಬಿಂಬಿಸುವಂತೆ ಕಾಣುತ್ತದೆ. ಜೀನ್ಸ್‌/ ಡೆನಿಮ್‌ ಉಡುಗೆ ಧರಿಸುವವರಿಗೆ ಈ ಶೈಲಿ ತುಂಬಾ ಚೆನ್ನಾಗಿ ಹೊಂದುತ್ತದೆ.

ಪೊಂಪಡೋರ್‌ ಕಟ್‌: ಸ್ವಲ್ಪ ಉದ್ದ ಕೂದಲು ಇರುವವರಿಗೆಹೊಂದುವಶೈಲಿ ಇದು. ನೆತ್ತಿಯ ಭಾಗದಲ್ಲಿ ಕೇಶರಾಶಿಯಲ್ಲಿ ಉಬ್ಬು, ತಗ್ಗುಗಳಿರುವಂತೆ ವಿನ್ಯಾಸ ಮಾಡಲಾಗುತ್ತದೆ. ಆಗಾಗ ಕೇಶರಾಶಿಯ ಮೇಲೆ ಕೈಯಾಡಿಸಿ ಸ್ಟೈಲಿಷ್‌ ಆಗಿ ಕಾಣಿಸಲು ಬಯಸುವವರಿಗೆ ಹೊಂದುವ ಶೈಲಿ ಇದು.

ಫ್ರೆಂಚ್‌ ಕ್ರಾಪ್‌: ಈಗಾಗಲೇ ಪ್ರಚಲಿತದಲ್ಲಿರುವ ಈ ಶೈಲಿ ಗ್ರಾಮೀಣ ಪ್ರದೇಶಗಳಲ್ಲೂ ಜನಪ್ರಿಯವಾಗುತ್ತಿದೆ. ನೆತ್ತಿಯ ಸುತ್ತ ಗಿಡ್ಡವಾಗಿ ಕೂದಲು ಕತ್ತರಿಸಿ ನೆತ್ತಿಯ ಭಾಗದಲ್ಲಿ ಕೇಶ ಒಪ್ಪವಾಗಿ ಹೊಂದುವಂತೆ ಜೋಡಿಸುವ ರೀತಿ ಇದು.ಗಡ್ಡ ಇರುವವರಿಗೆ ಅಥವಾ ಫ್ರೆಂಚ್‌ ಶೈಲಿಯ ಗಡ್ಡ ಬಿಟ್ಟವರಿಗೆ ಈ ಶೈಲಿಯ ಕೇಶವಿನ್ಯಾಸ ಚೆನ್ನಾಗಿ ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT