ನಮ್ಮ ಬಯಲಾಟ ಪಠ್ಯಗಳ ಅಧ್ಯಯನದ ಸಂದರ್ಭದಲ್ಲಿ ‘ತ್ರಿಪುರ ಸಂಹಾರ’ಕ್ಕೆ ಎರಡು ಸಾವಿರ ವರ್ಷ ಎನ್ನುವ ಹೊಸ ವಿಚಾರ ಲೇಖಕರ ಗಮನಕ್ಕೆ ಬಂದಿದೆ. ಅದು ಹೇಗೆ ಮತ್ತು ಏಕೆ ಮುಖ್ಯ ಎನ್ನುವುದನ್ನು ಉಲ್ಲೇಖಗಳ ಮೂಲಕ ಪ್ರಸ್ತುತಪಡಿಸಿದ್ದಾರೆ.

‘ಭಲಲೈ ಸೇವಕ, ನಾವು ದಾರೆಂದರೆ

ಈ ಧರಾಮಂಡಲದೊಳ್..

ಮಹೇಂದ್ರ ನಗರಕ್ಕೆ ಚಕ್ರವರ್ತಿ ಪಾಲಕ..

ಯನ್ನ ಕರದೊಳ್ ಪಿಡಿದಿರುವ

ಕರವಾಳವಂ ಧಡಲ್ ಧಡಲ್ ಯೆಂದು ಚಪ್ಪರಿಸಿ

ಥಳಥಳಿಸಿ ಹೊಳೆಯುವ ಬೆಳಕಿನೊಳ್,

ಧಡಧಡನೆ ಅಂಬರಕ್ಕೆ ಇಂಬುಕೊಡದೆ
ನೆಲಕ್ಕಪ್ಪಳಿಸಿ ..’

-ಅಟ್ಟದ ಮೇಲೆ ದಡದಡನೇ ಹಾರಿ ಕುಣಿದು, ತುತ್ತತುದಿಯಲ್ಲಿ ಕಡಲೆಕಾಯಿ ತಿನ್ನುತ್ತಾ ಕೂತವರೂ ಬೆಚ್ಚಿ ತಿರುಗಿ ನೋಡುವಂತೆ ತನ್ನ ಪರಿಚಯವನ್ನು ಉಗ್ಗಡಿಸುವವರು ದಾರು ದಾರೆಂದರೆ...

ನಮ್ಮ ಪ್ಯಾಟೆ ಮಂದಿಗೆ ಇವರು ಯಾರೆಂದು ಖಂಡಿತಾ ಅರ್ಥವಾಗಲಾರದು. ಹಳೇ ಹಳ್ಳಿ ಮಂದಿಗೆ ತಕ್ಷಣ, ಎಲಾ, ಇದು ನಮ್ಮ ಅಪ್ಪಂದಿರು ಆಡುತ್ತಿದ್ದ, ನಾವೂ ಅಬ್ಬರಿಸಿ ಕುಣಿದಿದ್ದ ತಾರಕಾಕ್ಷನ ನಾಮಾಂಕಿತ ಮಾತುಗಳಲ್ಲವೇ! ಎಂದು ತಕ್ಷಣ ಮೈ ನವಿರೇಳುತ್ತದೆ; ಕಣ್ಣಲಿ ‘ತ್ರಿಪುರ ಸಂಹಾರ’ ಯಕ್ಷಗಾನ ಬಯಲಾಟದ ಸಂಗತಿಗಳು ಚಿತ್ರಪಟವಾಗುತ್ತವೆ.

ಊರೆಲ್ಲಾ ಒಗ್ಗೂಡಿ ಮೇಷ್ಟರನ್ನೂ ಹುಡುಕಿ, ಸಂಜೆಗೇ ಉಂಡು, ಹೊತ್ತಿಗೆ ಮನೇಲಿ, ಮೇಷ್ಟರಿಂದ ಪದೇ ಪದೇ ಬಯ್ಯಿಸಿಕೊಂಡು, ಹೊಲ ಉಳುವಾಗಲೂ ಡೈಲಾಗುಗಳನ್ನು ಉರು ಹೊಡೆದುಕೊಂಡು, ಊರ ಹಬ್ಬಕ್ಕೆ ನೆಂಟರನ್ನೆಲ್ಲಾ ಆಹ್ವಾನಿಸಿ, ಅವರ ಮುಂದೆ ತನ್ನ ಅಭಿನಯದ ತಾಕತ್ತು ತೋರುವುದೆಂದರೆ, ಆತನಿಗಷ್ಟೇ ಅಲ್ಲ, ಅವನ ಅರ್ಧಾಂಗಿಗೂ ದೊಡ್ಡ ಸಂಭ್ರಮದ ಕ್ಷಣಗಳು.. ಕೆಲವೇ ದಶಕಗಳ ಹಿಂದೆ ಬಯಲಾಟಗಳಿಗೆ ಇದ್ದದ್ದು ಕೇವಲ ಆಕರ್ಷಣೆ ಅಲ್ಲ; ಅದೊಂದು ದೇವರಕಾರ್ಯ, ರಿಚುವಲ್! ಆದ್ದರಿಂದಲೇ ಆ ಪಾತ್ರಧಾರಿಗಳು ಅನೇಕರು ಆ ಹೊತ್ತಿನಲ್ಲಿ ಮಡಿ ಮೈಲಿಗೆಯನ್ನೂ ಪಾಲಿಸುವವರಿದ್ದರು.

ಈಗಿನ ಪಡ್ಡೆಗಳಿಗೆ ತೊಡೆಯಲ್ಲಿ ತ್ರಾಣ ಕಡಿಮೆ ಆಗಿ, ಎದೆ ಏದುಸುರು ಬಿಟ್ಟಂತಾಗಿ..ಅಬ್ಬಬ್ಬಾ, ಆ ಕುಣಿತದ ಆಟಗಳು ಈ ಬಯಲುಸೀಮೆಯಲ್ಲಿ ಮರೆಯಾಗುತ್ತಿವೆ; ಲಕ್ಷಾಂತರ ಖರ್ಚುಮಾಡುವ ಝಗಮಗಿಸುವ ಸೀನರಿಗಳ ಪೌರಾಣಿಕ ನಾಟಕಗಳು ಹೆಚ್ಚಿವೆ. ಅಂಥ, ಸಂಗೀತ ಪ್ರಧಾನ ಪೌರಾಣಿಕ ನಾಟಕವಾಗಿಯೂ ‘ತ್ರಿಪುರ ಸಂಹಾರ’ ಆಡುವ ಆಕರ್ಷಣೆ ಹಲವೆಡೆ ಉಳಿದಿದೆ.

ದೇವೀ ಮಹಾತ್ಮೆ, ಕುರುಕ್ಷೇತ್ರ, ಸುಂದರಕಾಂಡ, ಅಭಿಮನ್ಯು ವಧೆ, ನಳ ದಮಯಂತಿ..ಇಂತಹವೆಲ್ಲಾ ಒಂದೊಂದು ಊರಲ್ಲಿ ಒಂದೊಂದು ಜನಪ್ರಿಯ. ಅಂತಹವುಗಳ ನಡುವೆ ‘ತ್ರಿಪುರ ಸಂಹಾರ’ವೂ ಏಕೆ ಜನಾಕರ್ಷಕ ಎಂದರೆ ನನಗೆ ತಿಳಿದಂತೆ, ಅದರಲ್ಲಿ ಮೂರು ರಾಕ್ಷಸ ಪಾತ್ರಗಳು ಬರುತ್ತವೆ. ಒಂದೊಂದೂ ಸಮಬಲವೆಂಬಂತೆ ಆಡುವಂತಹವು. ಖರ್ಚು ಎಷ್ಟೇ ಬಿದ್ದರೂ ತಾನೂ ಜೋರೇ ಆಡಬೇಕೆಂಬ ಉತ್ಸಾಹಿಗಳಿಗೆ ಹಂಚಬಹುದಾದುವು. ಮಿಗಿಲಾಗಿ, ಅದರಲ್ಲಿ ರಂಬೆ, ಊರ್ವಶಿಯರೂ ಇದ್ದು, ಮೇಷ್ಟರಿಗೆ ಹೇಳಿ ಜನಪ್ರಿಯ ಸಿನಿಮಾ ಗೀತೆಗಳನ್ನೇ ಹಾಕಿಸಿಕೊಂಡು ಇಂದ್ರನ ಸಭೆಯಲ್ಲಿ ಕುಣಿತ ಮಾಡಿ ಸೈ ಎನ್ನಿಸಿಕೊಳ್ಳಬಹುದು; ಅಥವಾ ಆ ಪ್ಯಾಟೆ ನಟಿಯರ ಡಾನ್ಸ್ ನೋಡಲಾದರೂ ಜನ ಸುತ್ತಲ ಹತ್ತೂ ಹಳ್ಳಿಗಳಿಂದ ಬರುತ್ತಾರೆ; ಇನ್ನೂ ಮಿಗಿಲಾಗಿ, ಅದರಲ್ಲಿ ಬುಡುಬುಡುಕೆ ವೇಷದವನಿಗೂ ಅವಕಾಶವಿದ್ದು, ಅವನು, ‘ಜಯತು ಜಯತು ಜಯವಾಗಲಿ ಬುದ್ಧಿ..’ ಎಂದು ಪ್ರೇಕ್ಷಕರನ್ನು ಮಣಿಸಬಹುದು. ಮತ್ತೂ ಮಿಗಿಲಾಗಿ, ಆ ಮಹಾಪತಿವ್ರತೆಯರಾದ ಅಸುರ ಪತ್ನಿಯರನ್ನು ಕೃಷ್ಣ ಪರಮಾತುಮನೇ ಬಂದು ಪಾತಿವ್ರತ್ಯಭಂಗ ಮಾಡುತ್ತಾನೆ. ಈ ಎಲ್ಲವನ್ನೂ ಮರೆಸುವಂತೆ ಅದು ಶಿವ ಸ್ಮರಣೆಯ ಪುಣ್ಯ ಕತೆ..

ಹೌದು, ‘ಸುರಾಸುರ ಯುದ್ಧ’ ನಾಟಕ ನೋಡಿ ತಮಗೆ ಅವಮಾನವಾಯಿತೆಂದು ಅಬ್ಬರ ಎಬ್ಬಿಸಿದ್ದ ರಾಕ್ಷಸ ಸಮೂಹ ಈ ‘ತ್ರಿಪುರ ಸಂಹಾರ’ ನೋಡಿ ಭೇಷ್ ಎಂದಿತಂತೆ. ಏಕೆಂದರೆ, ಅದು ಶಿವ ಕತೆ; ಶಿವ ಅಸುರರಿಗೆ ಪರಮದೈವ! ಇಂಥ ಈ ‘ತ್ರಿಪುರ ಸಂಹಾರ’ ನಾಟಕವನ್ನು ಅಥವಾ ಬಯಲಾಟವನ್ನು ಮೊದಲು ಯಾರು ಆಡಿದರು? ಎಲ್ಲಿ? ಬರೆದವರು ಯಾರು..?-ಇವೆಲ್ಲಾ ಪ್ರಶ್ನೆ ನನಗೆ ಸಕಾರಣವಾಗಿ ಬಂದುಬಿಟ್ಟವು.

ಹಳ್ಳಿಗಳಲ್ಲಿ ಮೂಲೆಗುಂಪಾಗುತ್ತಿರುವ ಈ ‘ಯಕ್ಷಗಾನ’ಗಳ ಪ್ರತಿಗಳನ್ನು ಸಂಗ್ರಹಿಸಿ, ಪರಿಷ್ಕರಿಸಿ ಪುಸ್ತಕರೂಪದಲ್ಲಿ ಮುಂದಿನವರಿಗೆ ಉಳಿಸಬೇಕೆಂಬ ಇರಾದೆಯಿಂದ ಕಾರ್ಯಪ್ರವೃತನಾದೆ. ಮೂರು ವರ್ಷಗಳ ಹಿಂದೆ ಮಿತ್ರರೊಬ್ಬರು ‘ಬೌದ್ಧಾವತಾರ ಕಥಾ’ ಎಂದರು. ಕಿವಿ ನೆಟ್ಟಗಾಯಿತು. ಅದು ಆಂಧ್ರ ಗಡಿ ಭಾಗದ್ದು. ತೆಲುಗು ಲಿಪಿ, ಕನ್ನಡ ಪಠ್ಯ! ಕುಂಬಾರ ಭೀಮಣ್ಣ ವ್ರಾಲು ಪ್ರತಿ. ಇದು ನಮ್ಮ ಜನಪ್ರಿಯ ‘ತ್ರಿಪುರ ಸಂಹಾರ’ವೇ. ಪ್ರಸ್ತಾವನೆ ಬರೆವಾಗ, ಈ ಕತೆ ಮೂಲದಲ್ಲಿ ಯಾರು ಬರೆದಿರಬಹುದು ಎಂದು ಹುಡುಕಾಟಕ್ಕೆ ಬಿದ್ದೆ. ಬಿದ್ದದ್ದೇನು, ಶಿವಪುರಾಣದಿಂದ ಆರಂಭಿಸಿ ಅನೇಕ ಪುರಾಣ, ಕಾವ್ಯ, ಕರಾವಳಿಯ ಯಕ್ಷಗಾನ ಪಠ್ಯಗಳನ್ನೂ ಜಾಲಾಡಿ, ಮೇಲೆದ್ದೆ. ತಟ್ಟಿ ಮೇಲೆಬ್ಬಿಸಿದ್ದು ನಮ್ಮ ಪ್ರಸಿದ್ಧ ‘ನಾಟ್ಯಶಾಸ್ತ್ರ’ ಕೃತಿ!

ಮೂರೂವರೆ ವರ್ಷದ ಮೊಮ್ಮಗ ಆಡುತ್ತಾ, ಪುಸ್ತಕ ರಾಶಿಯಿಂದ ಒಂದನ್ನು ತಂದು ನೋಡುತ್ತಿದ್ದ. ಹಾಳು ಮಾಡಿಯಾನೆಂದು ತೆಗೆದು, ಕಣ್ಣಾಡಿಸಿದೆ. ಅಲ್ಲಿತ್ತು ವಸಂತ ಕವಲಿಯವರ ಒಂದು ಉಪನ್ಯಾಸ ಬರಹ. ಜಾನಪದ ಸಂಗೀತಕ್ಕೆ ಸಂಬಂಧಿಸಿದ ಅದನ್ನು ಸುಮ್ಮನೇ ತಿರುವಿದೆ. ಅಗೋ ಅಲ್ಲಿ ಸಾಲುಗಳ ನಡುವೆ ಅಡಗಿತ್ತು ‘ತ್ರಿಪುರ ಸಂಹಾರ’! ಆರ್ಕಿಮಿಡೀಸನಂತೆ ‘ಹುರ್ರೇ’ ಎಂದೆ. ನಮ್ಮ ಅಧ್ಯಯನ ಕ್ಷೇತ್ರಕ್ಕೆ ಹೊಸ ಸಂಗತಿಯೊಂದನ್ನು ಶೋಧಿಸಿಕೊಟ್ಟ ಧನ್ಯತೆ ನನ್ನದಾಗಿತ್ತು.

ಭರತಮುನಿ ‘ನಾಟ್ಯಶಾಸ್ತ್ರ’ದಲ್ಲಿ ಇದರ ‘ಚರಿತ್ರೆ’ ದಾಖಲಿಸಿದ್ದಾನೆ. ನಮ್ಮ ರಂಗಭೂಮಿ ಹೇಗೆ ಹುಟ್ಟಿತು ಎಂದು ಹೇಳುತ್ತಾ, ‘ನಾಲ್ಕು ವೇದಗಳಿಂದ ಪಂಚಮ ವೇದ ಎಂದರೆ, ನಾಟ್ಯವೇದ ಹುಟ್ಟಿತು. ಅದನ್ನು ಎಲ್ಲರೂ ನೋಡಲು ಅನುಕೂಲವಾಗುವಂತೆ ಬ್ರಹ್ಮನೇ ಹತ್ತು ಬಗೆಯ ರೂಪಕಗಳನ್ನು ರಚಿಸಿದ. ಅವುಗಳಲ್ಲಿ ‘ಸುರಾಸುರ ಯುದ್ಧ’ ಎಂಬ ವ್ಯಾಯೋಗ (ನಾಟಕ)ವನ್ನು ದೇವತೆಗಳ ಆಹ್ವಾನದಂತೆ ಭರತಮುನಿಯೂ, ಅವನ ಶಿಷ್ಯರೂ ಅಮರಾವತಿಗೆ ಹೋಗಿ ಯಶಸ್ವಿಯಾಗಿ ಪ್ರದರ್ಶಿಸಿದರು (ಎಂದರೆ, ಭಾರತೀಯ ರಂಗಭೂಮಿಯ ಮೊದಲ ಪ್ರದರ್ಶಿತ ನಾಟಕ: ಸುರಾಸುರ ಯುದ್ಧ).

ತ್ರಿಪುರ ಸಂಹಾರದ ಮೂಲ ಕರ್ತೃ ಬ್ರಹ್ಮ!

ಅಮೃತ ಮಥನದ ಹಿನ್ನೆಲೆಯ ಸುರಾಸುರ ಯುದ್ಧ ನೋಡಿದ ರಾಕ್ಷಸರು ತಮಗೆ ಅವಮಾನವಾಗಿದೆ ಎಂದು ಸಿಟ್ಟಾಗಿ, ಗಲಾಟೆ ಎಬ್ಬಿಸಿದರು. ಅವರ ಖುಷಿಗಾಗಿ ಬ್ರಹ್ಮ, ಇನ್ನೊಂದು ನಾಟಕ ರಚಿಸಿದ. ತ್ರಿಪುರ ದಹನವೆಂಬ ಶಿವನ ಲೀಲೆ ವಸ್ತುವಾಗುಳ್ಳ ‘ಡಿಮ’ ಎಂಬ ರೂಪಕವದು. ಅದನ್ನು ಕೈಲಾಸದಲ್ಲಿ ಪ್ರಯೋಗಿಸಲಾಯಿತು. ನೋಡಿ ಶಿವ ಪ್ರಸನ್ನನಾದ (ಶಿವನ ಪರಮಭಕ್ತರಾದ ರಾಕ್ಷಸರಿಗೂ ಆ ಶಿವ ಕತೆ ಇಷ್ಟವಾಯಿತು!). ಆದರೆ, ನಾಟಕದಲ್ಲಿ ಸಂಗೀತ ಹಾಗೂ ನೃತ್ಯಗಳಿದ್ದರೆ ಇನ್ನೂ ಚೆನ್ನ ಎಂದಿದ್ದರಿಂದ ಭರತಮುನಿ ಅವನ್ನೂ ಹೊಸದಾಗಿ ಸೇರಿಸಿದ’ (ಇತರ ಆಕರಗಳನ್ನೂ ಹುಡುಕಿ, ಕವಲಿಯವರ ಉಲ್ಲೇಖ ಸರಿ ಎಂಬುದನ್ನು ಖಚಿತಪಡಿಸಿಕೊಂಡಿದ್ದೇನೆ).

ಎಂದರೆ, ‘ತ್ರಿಪುರ ಸಂಹಾರ’ ಬರೆದದ್ದು ಬ್ರಹ್ಮ; ಆಡಿಸಿದ್ದು ಭರತಮುನಿ; ನಟರು ಆತನ ಶಿಷ್ಯರು; ಮೊದಲ ಪ್ರದರ್ಶನ ಕೈಲಾಸದಲ್ಲಿ!

ನಿಜ; ಇದು ಐತಿಹ್ಯವೇ ಆಗಿದ್ದರೂ, ಕತೆ ಆ ಕಾಲಕ್ಕೇ ಸೃಷ್ಟಿಯಾಗಿದ್ದನ್ನೇ ಭರತ ಮುನಿ ದಾಖಲಿಸಿ ನಮಗೆ ಮಹದುಪಕಾರ ಮಾಡಿದ್ದಾನೆ. ದೇವಲೋಕವೂ ಸುಳ್ಳು, ಭೂ ಲೋಕದವರು ಹೋಗಿ ಅಲ್ಲಿ ‘ಆಟ’ ಮಾಡಿದ್ದೂ ಸುಳ್ಳು ಎಂದರೂ, ‘ನಾಟ್ಯಶಾಸ್ತ್ರ’ ಕೃತಿ ಇರುವುದು ನಿಜ. ವಿದ್ವಾಂಸರ ಪ್ರಕಾರ ಅದರ ಕಾಲ ಕ್ರಿ.ಶ. ಸುಮಾರು 1-2ನೆಯ ಶತಮಾನ. ಎಂದರೆ, ಇಲ್ಲಿಗೆ 2000 ವರ್ಷಗಳಾದವು. ಮತ್ತೂ ನಿಜವಾದುದೇನೆಂದರೆ, ನಮ್ಮ ಈಗಿನ ಯಕ್ಷಗಾನ ಬಯಲಾಟ ರೂಪಗಳಿಗೆ ಸಾವಿರಾರು ವರ್ಷಗಳ ಚರಿತ್ರೆಯ ಅನ್ಯ ದಾಖಲೆಗಳೇನೂ ದೊರೆತಿಲ್ಲ. ಭರತಮುನಿಯೇ ಈಗಿರುವ ಯಕ್ಷಗಾನ ಬಯಲಾಟಗಳ ಮೂಲ ಪರಿಕಲ್ಪನೆಗಾರನೇ ಎಂಬ ಸಂದೇಹಕ್ಕೊಂದು ಸಾಕ್ಷಿಯಾದರೂ ಸಿಕ್ಕಿತಲ್ಲಾ! ಭರತನ ಆ ತ್ರಿಪುರ ಸಂಹಾರ ಹೇಗಿತ್ತೋ, ಅದರ ಪಠ್ಯ ಸಿಗಲಾರದು; ಬಹುಶಃ ಅವನು ನೀಡಿದ ಲಕ್ಷಣಗಳನ್ನು ಆಧರಿಸಿಯೇ ಕಾಲಾಂತರದಲ್ಲಿ ನಮ್ಮ ಯಕ್ಷಗಾನ ಬಯಲಾಟಗಳೂ ರೂಪುಗೊಂಡಿರಬಹುದು. ಅಸುರ ರಾಣಿಯರ ಪಾತಿವ್ರತ್ಯ ಕೆಡಿಸಲು ಕೃಷ್ಣನು ಸುಂದರ ಬುದ್ಧನರೂಪಿನಲ್ಲಿ ಬಂದ ಎಂಬುದೂ ಬುದ್ಧನ ಬಗ್ಗೆ ಅಸಹನೆ ಇದ್ದ ಪುರಾಣಕಾರರ ಕೈವಾಡವಿರಬಹುದು.

ಇದೇನೇ ಆದರೂ, ನಮ್ಮ ಹಳ್ಳಿಗರು ಬಹು ಉತ್ಸುಕತೆಯಿಂದ ಪ್ರದರ್ಶಿಸುವ ‘ತ್ರಿಪುರ ಸಂಹಾರ’ ಕಥನಕ್ಕೆ ಸರಿಸುಮಾರು ಎರಡುಸಾವಿರ ವರ್ಷಗಳು ಎಂದಾಯಿತು; ಭಲಿರೇ ಶಹಬ್ಬಾಸ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.