ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ಕೊಳ್ಳಕ್ಕೆ ಗ್ರಾಮ ಅರಣ್ಯ ಸಮಿತಿ ರಕ್ಷಣೆ

Last Updated 16 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

‘2000ನೇ ಇಸವಿಗೆ ಮುಂಚೆ ಈ ಕಾಡಿನಿಂದ ಪ್ರತಿದಿನ ಹತ್ತಾರು ಗಾಡಿ ಸೌದೆ ಸಾಗಿಸುತ್ತಿದ್ದರು. ತಲೆಯ ಮೇಲೆ ಸೌದೆ ಹೊರುವವರು ಲೆಕ್ಕಕ್ಕೇ ಇರಲಿಲ್ಲ. ದೊಡ್ಡ ಮರಗಳನ್ನು ಸಾಗಿಸುವವರು, ಬೇಟೆ ಆಡುವವರು ರಾತ್ರಿಹೊತ್ತು ಸಕ್ರಿಯರಾಗುತ್ತಿದ್ದರು’ ಎಂದು ಹೇಳುತ್ತಾ ನಡೆಯುತ್ತಿದ್ದರು ಗುಡ್ಡದ ಮಾದಾಪುರ ನಿವಾಸಿ ಸಿದ್ದಪ್ಪ ದಂಡಿನ. ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲ್ಲೂಕಿನ ಕರಡಿ ಕೊಳ್ಳ ಅರಣ್ಯ ಪ್ರದೇಶದ ಬಗ್ಗೆ ಸಾಗಿತ್ತು ಅವರ ಮಾತು. ಪ್ರತಿವರ್ಷ ಆ ಕಾಡಿಗೆ ಬೆಂಕಿ ಬೀಳುವುದು ಸಾಮಾನ್ಯವಾಗಿತ್ತು ಎಂದು ಹಲವು ಸಲ ಹೇಳಿದರು.

ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ಕಾಡಿಗೆ ಬೆಂಕಿ ಬೀಳುವುದು ಅಪರೂಪ. ಒಂದು ವೇಳೆ ಬಿದ್ದರೂ ಹಳ್ಳಿಯವರೇ ಬೆಂಕಿ ನಂದಿಸಲು ಕೈಜೋಡಿಸುತ್ತಾರೆ. ಆಳೆತ್ತರಕ್ಕೆ ಹುಲ್ಲು ಬೆಳೆದಿದೆ, ಪೊದೆಗಳು ಹಬ್ಬಿಕೊಂಡಿವೆ. ಕಾಡೊಳಗೆ ಸುಲಭವಾಗಿ ಹೋಗುವುದು ಅಸಾಧ್ಯ. ಇನ್ನು ಸೌದೆಗಾಗಿ ಅಥವಾ ಮರಮಟ್ಟುಗಳಿಗಾಗಿ ಅರಣ್ಯಕ್ಕೆ ಯಾರೂ ಕಾಲಿಡುವುದಿಲ್ಲ. ಒಂದುವೇಳೆ ಮರ ಕಡಿದರೆ ದಂಡ ಹಾಕಲಾಗುತ್ತದೆ.

ಈ ಬದಲಾವಣೆ ಸಾಧ್ಯವಾಗಿರುವುದಕ್ಕೆ ಮುಖ್ಯ ಕಾರಣ ಗ್ರಾಮ ಅರಣ್ಯ ಸಮಿತಿ ಸಕ್ರಿಯವಾಗಿರುವುದು. ಮುಖ್ಯವಾಗಿ ಸಮಿತಿ ಅಧ್ಯಕ್ಷ ಕರಿಬಸಪ್ಪ ಕಾಗಿನೆಲ್ಲಿ ಅವರ ಪಾತ್ರ ಈ ಕಾಡು ರಕ್ಷಣೆಯಲ್ಲಿ ಮಹತ್ವದ್ದಾಗಿದೆ. ಅರಣ್ಯ ಇಲಾಖೆಯೊಂದಿಗೆ ಸಮಿತಿ ಹಾಗೂ ಗುಡ್ಡದ ಮಾದಾಪುರ ಗ್ರಾಮದವರ ಸಹಕಾರ ಉತ್ತಮವಾಗಿದೆ. ಅರಣ್ಯ ಇಲಾಖೆ, ಗ್ರಾಮ ಅರಣ್ಯ ಸಮಿತಿ ಹಾಗೂ ಸಮುದಾಯದ ಕೈಜೋಡಿಸುವಿಕೆಯಿಂದ 1,019 ಹೆಕ್ಟೇರ್ ವ್ಯಾಪ್ತಿಯ ಈ ಕರಡಿ ಕೊಳ್ಳ ಕಾಯ್ದಿಟ್ಟ ಅರಣ್ಯ ಪ್ರದೇಶ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡಿದೆ. ಜೊತೆಗೆ ವರ್ಷದಿಂದ ವರ್ಷಕ್ಕೆ ವೃದ್ಧಿಯಾಗುತ್ತಿದೆ.

ಕರಡಿಕೊಳ್ಳ ಅರಣ್ಯದಲ್ಲಿ ಗ್ರಾಮ ಅರಣ್ಯ ಸಮಿತಿಯ ಕಾರ್ಯಕರ್ತರು
ಕರಡಿಕೊಳ್ಳ ಅರಣ್ಯದಲ್ಲಿ ಗ್ರಾಮ ಅರಣ್ಯ ಸಮಿತಿಯ ಕಾರ್ಯಕರ್ತರು

‘ಹಿರೇಕೆರೂರು ವಲಯ ವ್ಯಾಪ್ತಿಯ, ಗುಡ್ಡದ ಮಾದಾಪುರ ಗಸ್ತಿಗೆ ಬರುವ ಈ ಕಾಡಿನಲ್ಲಿ ಮತ್ತಿ, ದಿಂಡಿಲು, ಶ್ರೀಗಂಧ, ಬೂರುಗ ಇತ್ಯಾದಿ ಮರಗಳ ಸಂಖ್ಯೆ ಹೆಚ್ಚಿದೆ. ಜನರ ಸಹಕಾರದಿಂದ ಒತ್ತುವರಿಯ ಸಮಸ್ಯೆಯೂ ಇಲ್ಲ, ಪ್ರಸ್ತುತ ಸುತ್ತಲೂ ತಂತಿ ಬೇಲಿ ಅಳವಡಿಸುವ ಕೆಲಸ ಆರಂಭವಾಗಿದೆ’ ಎನ್ನುತ್ತಾರೆ ಇಲ್ಲಿನ ಅರಣ್ಯ ರಕ್ಷಕ ಅಶೋಕ್.

ರಾಜ್ಯದ ಗ್ರಾಮ ಅರಣ್ಯ ಸಮಿತಿಗಳಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸಕ್ರಿಯವಾಗಿವೆ ಹಾಗೂ ತಮ್ಮ ಮೂಲ ಉದ್ದೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿವೆ.

ಅವುಗಳಲ್ಲಿ ಇಲ್ಲಿನ ಸಿದ್ದೇಶ್ವರ ಗ್ರಾಮ ಅರಣ್ಯ ಸಮಿತಿಯೂ ಒಂದು. 2002ರಲ್ಲಿ ರಚನೆಯಾಗಿದ್ದು 11 ಜನರ ಕಾರ್ಯಕಾರಿ ಸಮಿತಿ ಇದೆ. ಸಮಿತಿಯು ನಿಯಮಿತವಾಗಿ ಸಭೆ ಸೇರುವುದು, ದಾಖಲಾತಿ ನಿರ್ವಹಿಸುವುದು ಮೊದಲಾದ ಕಾರ್ಯಗಳಲ್ಲಿ ನಿರತವಾಗಿದೆ. ಕಾಡಿನಲ್ಲಿ ಯಾರಾದರೂ ಮರ ಕಡಿದರೆ, ಬೇಟೆ ಆಡುತ್ತಿದ್ದಾರೆಂದು ಕಂಡು ಬಂದರೆ ತಕ್ಷಣ ಸಕ್ರಿಯವಾಗುತ್ತದೆ. ಅವರನ್ನು ಹಿಡಿದು ಕಾಡಂಚಿನಲ್ಲಿರುವ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಗ್ರಾಮದ ಮುಖ್ಯಸ್ಥರ ಸಮ್ಮುಖದಲ್ಲಿ ದಂಡ ಹಾಕಲಾಗುತ್ತದೆ, ಇಲ್ಲವೇ ಇಲಾಖೆಗೆ ಒಪ್ಪಿಸಲಾಗುತ್ತದೆ.

ಗ್ರಾಮ ಅರಣ್ಯ ಸಮಿತಿಯ ಸಭೆಯಲ್ಲಿ ಚರ್ಚೆ
ಗ್ರಾಮ ಅರಣ್ಯ ಸಮಿತಿಯ ಸಭೆಯಲ್ಲಿ ಚರ್ಚೆ

ಸಮಿತಿಯು ಹೀಗೆ ಸಕ್ರಿಯವಾಗಿರುವುದಕ್ಕೆ ಕರಿಬಸಪ್ಪ ಅವರ ಬದ್ಧತೆ ಮತ್ತು ನಿಷ್ಠುರತೆಯೇ ಕಾರಣ ಎಂದು ಎಲ್ಲರೂ ಹೇಳುತ್ತಾರೆ. ಇಲಾಖೆಯೊಂದಿಗೆ ಕಾಲ್ನಡಿಗೆಯಲ್ಲಿ, ಜೀಪುಗಳಲ್ಲಿ ಕಾಡಿನ ಗಸ್ತು ಹಾಕುವುದು, ಕಾಡಿನಲ್ಲಿ ಪ್ರಾಣಿಗಳಿಗಾಗಿ ಕುಡಿಯುವ ನೀರಿನ ತೊಟ್ಟಿಗಳನ್ನು ನಿರ್ಮಿಸುವುದು, ಗಿಡ-ಮರಗಳ ದಾಖಲಾತಿಯಲ್ಲಿ ಕೈಜೊಡಿಸುವುದು ಮುಂತಾದ ಅನೇಕ ಕೆಲಸಗಳಲ್ಲಿ ಕರಿಬಸಪ್ಪ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ‘ಗಿಡ ಕಡ್ಯಾವ್ರು ಇಲಾಖೆಗಿಂತಲೂ ನಮ್ ಕರಿಬಸಣ್ಣನಿಗೇ ಜಾಸ್ತಿ ಹೆದರಿತಾರ್ರಿ’ ಎನ್ನುತ್ತಾರೆ ಸಿದ್ದೇಶ್ವರ ದೇವಾಲಯದ ಅರ್ಚಕರು.

ಈ ನಡೆ ಅಧ್ಯಕ್ಷರಿಗೆ ಕೆಲವೊಮ್ಮೆ ಅಪಾಯವನ್ನೂ ತಂದಿದೆ. ಅವರೇ ನೆನಪಿಸಿಕೊಳ್ಳುವಂತೆ. ಕಾಡಿನ ಮತ್ತೊಂದು ಭಾಗದಲ್ಲಿರುವ ಶಿಕಾರಿಪುರದಲ್ಲಿ ಒಮ್ಮೆ ನೆಂಟರ ಮದುವೆಗೆಂದು ಹೋಗಿದ್ದಾಗ ಜನರ ಗುಂಪೊಂದು ಇವರನ್ನು ಹೊಡೆಯಲು ಮುಂದಾಗಿತ್ತಂತೆ. ಕಾರಣ ಮರ ಕಡಿಯುವವರನ್ನು ತಡೆದು ಇಲಾಖೆಗೆ ಹಿಡಿದುಕೊಡುತ್ತಾರೆಂದು ಅವರಿಗೆ ಸಿಟ್ಟು. ಆಗ ಅಲ್ಲಿನ ಹಿರಿಯರೊಬ್ಬರು ಆ ಗುಂಪಿಗೆ ಛೀಮಾರಿ ಹಾಕಿ ‘ನಾಕ್ ಜನಕ್ಕ ಉಪಯೋಗ ಆಗೋ ಕೆಲಸ ಮಾಡ್ತಾ ಇದಾನೆ, ಅವನ ಮನೀಗೆ ಏನೂ ಕೊಂಡೊಯ್ತಿಲ್ಲ’ ಅಂತ ಗದರಿಸಿ ಕಳಿಸಿದರಂತೆ.

‘ಮನೆ ಬಳಕೆಗೆ ಗ್ಯಾಸ್ ಸಿಲಿಂಡರ್ ಬಂದ ಬಳಿಕ ಉರುವಲಿಗಾಗಿ ಯಾರೂ ಕಾಡಿಗೆ ಹೋಗುತ್ತಿಲ್ಲ. ಗ್ಯಾಸ್ ಸಂಪರ್ಕ ಇಲ್ಲದ ಕೆಲವೇ ಮನೆಗಳು ತಮ್ಮ ಹೊಲದಲ್ಲಿ ದೊರೆಯುವ ಸೌದೆಯನ್ನೇ ಬಳಸುತ್ತಿವೆ. ಆದರೆ ಮರಮಟ್ಟುಗಳಿಗೆ ದೊಡ್ಡ ಮರಗಳನ್ನು ಕಡಿಯುವವರು, ಅರಣ್ಯ ಒತ್ತುವರಿ, ಗಣಿಗಾರಿಕೆ ಮಾಡುವವರು ಹಾಗೂ ಪ್ರಾಣಿ ಬೇಟೆ ಆಡುವವರನ್ನು ತಡೆಯುವುದೇ ಸವಾಲಿನ ಕೆಲಸವಾಗಿತ್ತು’ ಎನ್ನುತ್ತಾರೆ ಕರಿಬಸಪ್ಪ.

ಗ್ರಾಮ ಅರಣ್ಯ ರಕ್ಷಣಾ ಪಡೆ
ಗ್ರಾಮ ಅರಣ್ಯ ರಕ್ಷಣಾ ಪಡೆ

ಈ ಭಾಗದ ಅರಣ್ಯ ಉಳಿದಿರುವುದರಿಂದ ಕೆಳಭಾಗದ ಕೃಷಿ ಭೂಮಿಗಳಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ಅಲ್ಲದೆ ದೇವಸ್ಥಾನಕ್ಕೆ ಬರುವವರು ಇಲ್ಲಿನ ವಾತಾವರಣ ತಂಪಾಗಿರುವುದನ್ನು ಗಮನಿಸಿದ್ದಾರೆ. ಸುತ್ತ-ಮುತ್ತಲ ಕಾಡು ಸಮೃದ್ಧವಾಗಿರುವುದೇ ಇದಕ್ಕೆ ಕಾರಣ ಎಂಬುದು ಅವರ ಅನಿಸಿಕೆ.

2002ರಲ್ಲಿ ಈ ಗ್ರಾಮ ಅರಣ್ಯ ಸಮಿತಿ ರಚನೆಯಾಗಲು ಮುತುವರ್ಜಿ ವಹಿಸಿದ್ದು ರಾಣಿಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ. ಈ ಭಾಗದ ಜನರ ಮನವೊಲಿಸಿ ಹಲವು ಗ್ರಾಮ ಅರಣ್ಯ ಸಮಿತಿಗಳ ರಚನೆಯಾಗಲು ಪ್ರೇರೇಪಿಸಿತ್ತು. ‘ನಾವು ಹಾಕಿದ ಶ್ರಮಕ್ಕೆ ಈ ಒಂದು ಸಮಿತಿಯಾದರೂ ಕ್ರಿಯಾಶೀಲವಾಗಿರುವುದು ಸಂತೋಷ, ಆದರೆ ಇವರೂ ಮತ್ತಷ್ಟು ಚುರುಕಾಗಿ ಕೆಲಸ ಮಾಡಬೇಕು, ಈ ಭಾಗದ ಜೀವ ವೈವಿಧ್ಯ ದಾಖಲಾಗಬೇಕು’ ಎನ್ನುತ್ತಾರೆ ಸಂಸ್ಥೆಯ ಎಸ್.ಡಿ. ಬಳಿಗಾರ್.

1988ರ ನೂತನ ಅರಣ್ಯ ನೀತಿ ಮತ್ತು ಅದರ ಫಲಶ್ರುತಿಯಾಗಿ 90ರ ದಶಕದಲ್ಲಿ ಜಾರಿಗೆ ಬಂದ ಸಮುದಾಯ ಸಹಭಾಗಿತ್ವದ ಮಾದರಿಯೇ ಗ್ರಾಮ ಅರಣ್ಯ ಸಮಿತಿ. ಅರಣ್ಯ ಅಭಿವೃದ್ಧಿ ಯೋಜನೆಗಳಲ್ಲಿ ಜನರ ಸಕ್ರಿಯ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುವುದು ಇದರ ಉದ್ದೇಶ. ‘ಅಧಿಕಾರದಲ್ಲಿ ಸಮಪಾಲು, ಜವಾಬ್ದಾರಿಯಲ್ಲಿ ಸಮಪಾಲು, ಫಲಾನುಭವದಲ್ಲೂ ಸಮಪಾಲು- ಇದು ಈ ಯೋಜನೆಯ ಮೂಲತತ್ವ. ಈ ಯೋಜನೆಯಲ್ಲಿ ಅರಣ್ಯಕ್ಕೆ ಅಥವಾ ಅವನತಿ ಹೊಂದಿದ ಅರಣ್ಯ ಭೂಮಿಗೆ ಸಮೀಪವಾಗಿ ವಾಸಿಸುವ ಜನಸಮುದಾಯ ಅರಣ್ಯ ಸಂರಕ್ಷಣೆಯಲ್ಲಿ, ಮರಗಿಡಗಳನ್ನು ಬೆಳೆಸುವುದರಲ್ಲಿ ಜವಾಬ್ದಾರಿಯುತವಾಗಿ ಭಾಗವಹಿಸಬೇಕು. ಈ ಕೆಲಸದ ಒಟ್ಟಾರೆ ಜವಾಬ್ದಾರಿಯನ್ನು ಗ್ರಾಮ ಅರಣ್ಯ ಸಮಿತಿ ಹೊರುತ್ತದೆ.

ಕರಿಬಸಪ್ಪ ಕಾಗಿನೆಲ್ಲಿ
ಕರಿಬಸಪ್ಪ ಕಾಗಿನೆಲ್ಲಿ

1990ರ ಜೂನ್ 1ರಂದು ಭಾರತ ಸರ್ಕಾರ ಜಂಟಿ ಅರಣ್ಯ ಯೋಜನೆ ಕುರಿತು ಆದೇಶ ಹೊರಡಿಸಿತು. ಇದರ ಫಲಶ್ರುತಿಯಾಗಿ ಇಂದು ನಮ್ಮ ದೇಶದ 27 ರಾಜ್ಯಗಳಲ್ಲಿ 65,000 ಗ್ರಾಮ ಅರಣ್ಯ ಸಮಿತಿಗಳು ರಚನೆಯಾಗಿವೆ. ಒಟ್ಟು 1,50,000 ಚದರ ಕಿ.ಮೀಗಳಷ್ಟು ಅರಣ್ಯ ಪ್ರದೇಶವನ್ನು ಆಯಾ ರಾಜ್ಯದ ಅರಣ್ಯ ಇಲಾಖೆಗಳ ಜೊತೆಗೂಡಿ ಸಂರಕ್ಷಿಸಿ ನಿರ್ವಹಿಸುತ್ತಿವೆ.

ಅಂಕಿ-ಅಂಶಗಳ ದೃಷ್ಟಿಯಿಂದ ಇದು ನಿಜಕ್ಕೂ ಉತ್ತಮ ಸಾಧನೆ. ಆದರೆ ವಾಸ್ತವವಾಗಿ ಈ ಜಂಟಿ ಅರಣ್ಯ ಯೋಜನೆ ಅಲ್ಲಲ್ಲಿ ಮಾತ್ರ ಯಶಸ್ವಿಯಾಗಿರುವ ಉದಾಹರಣೆಗಳು ದೊರೆಯುತ್ತವೆ. ಆದರೆ ಗ್ರಾಮದಲ್ಲಿ ಒಬ್ಬರು ಅಥವಾ ಕೆಲವೇ ಆಸಕ್ತರು ಮನಸ್ಸು ಮಾಡಿದರೆ ಕರಡಿ ಕೊಳ್ಳದಂತಹ ಮತ್ತಷ್ಟು ಅರಣ್ಯಗಳು ಉಳಿಯುತ್ತವೆ. ಸರ್ಕಾರ ಗುಡ್ಡದ ಮಾದಾಪುರದಂತಹ ಅತ್ಯುತ್ತಮ ಗ್ರಾಮ ಅರಣ್ಯ ಸಮಿತಿಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಉಳಿದ ಸಮಿತಿಗಳಿಗೂ ಪ್ರೇರಣೆಯಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT