ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಹನಾಯಕ

Last Updated 12 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಈ ರಾಮಾಯಣದ್ದೊಂದು ವಿಶೇಷ. ಇದು ಆದಿಕಾವ್ಯ. ಆದರೆ ಆದಿಕಾವ್ಯ ಎನ್ನುವ ಸಂಭ್ರಮಕ್ಕಿಂತ ಹೆಚ್ಚಾಗಿ, ತಾನು ಕಾವ್ಯವಾಗಿ ಒಡಮೂಡುವುದಕ್ಕೆ ಬಹಳಕಾಲ ಕಾದಿದ್ದೆ ಎಂದು ತನ್ನೊಳಗಿನಿಂದಲೇ ಸೃಷ್ಟಿಶೀಲತೆಯ ಅದೇನೋ ಒಂದು ರಹಸ್ಯವನ್ನು ಸೂಚಿಸುತ್ತಿರುವ ಕಾವ್ಯ!

ಅಂದರೆ ‘ವಸ್ತು’ ಮೊದಲೇ ಇದ್ದು ಅದು ‘ಕಾವ್ಯವಸ್ತು’ವಾಗಿ ಒಡಮೂಡುವುದಕ್ಕೆ ಬಹುಕಾಲ ಕಾದುಕೊಂಡಿತ್ತು ಎಂದು. ‘ಅಹಲ್ಯೆ’ ಶಾಪಗ್ರಸ್ತಳಾಗಿ, ಲೋಕದ ಕಣ್ಣಿಗೆ ಕಾಣದೆ, ತನ್ನಲ್ಲೇ ನೋಯುತ್ತ, ತನ್ನನ್ನು ಕಾಣಬಲ್ಲ ಕಣ್ಣುಗಳಿಗಾಗಿ, ಅಂಥ ಸೂಕ್ಷ್ಮ ನೋಟಕ್ಕಾಗಿ, ರಾಮನಿಗಾಗಿ – ಜೀವವನ್ನೇ ಪಣಕ್ಕಿಟ್ಟಂತೆ ಕಾದುಕೊಂಡಿದ್ದಳಲ್ಲವೆ? ಅತ್ತ, ಕಾನನದಲ್ಲಿ – ತನ್ನ ಕೊನೆಯ ದಿನಗಳಲ್ಲಿದ್ದ ‘ಶಬರಿ’, ಎಲ್ಲ ಆಸೆಗಳನ್ನೂ ಮೀರಿ ಬದುಕಿದ್ದ ಶಬರಿ, ರಾಮನನ್ನೊಮ್ಮೆ ನೋಡಬೇಕೆಂಬ, ಅದಕ್ಕಾಗಿ ರಾಮ ತನ್ನಲ್ಲಿಗೆ ಬಂದೇ ಬರುವನೆಂಬ ನಿರೀಕ್ಷೆಯನ್ನು ಹೊತ್ತು ಕಾದುಕೊಂಡಿದ್ದಳಲ್ಲವೇ? ಈ ಕಾಯುವಿಕೆ ರಾಮನನ್ನು ತಾನು ನೋಡಬೇಕೆಂಬ ಆಸೆಯ ಜೊತೆಗೆ, ರಾಮನ ಕಾಯುವಿಕೆ ಎಂದರೇನೆಂದು ಜೀವಂತ ಅರ್ಥವಾಗುವುಕ್ಕಾಗಿ ಅವನು ತನ್ನನ್ನು ನೋಡಬೇಕೆಂಬ ಆಸೆಯೂ ಆಗಿತ್ತಲ್ಲವೆ? ಕಾಲವನ್ನು ‘ಕಾಯುವಿಕೆ’ ಎಂದು ಅರ್ಥಮಾಡಿಕೊಳ್ಳುವುದೇ ಸೃಷ್ಟಿಶೀಲತೆಯ ವಿಶೇಷ!

ರಾಮಾಯಣದ ಉದ್ದಕ್ಕೆ ‘ಕಾಯುವಿಕೆ’ಯ ನಾನಾ ರೂಪಗಳು ಕಾಣಸಿಗುತ್ತವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ರಾಮಾಯಣದ ಉದ್ದಕ್ಕೆ ‘ವಿರಹ’ ಇದೆ. ವಿರಹದಿಂದ ಅಂದರೆ, ಅಗಲಿಕೆಯ ನೋವಿನಿಂದ, ಆ ಅಳಲಿಗೆ ಸಂವಾದಿಯಾಗಿ, ವಿರಹಕ್ಕೆ ಸಮಶ್ರುತಿಯಾಗಿ ಕಾವ್ಯ ಹುಟ್ಟಿ ಬಂದಿತು ಎನ್ನುವುದನ್ನು ‘ಕ್ರೌಂಚಪ್ರಸಂಗ’ ಪೂರ್ಣಪ್ರಮಾಣದಲ್ಲಿ ಸೂಚಿಸುತ್ತದೆ.

‘ವಿರಹ’ಕ್ಕೆ ಅನೇಕ ಮುಖಗಳಿವೆ. ಈ ಲೋಕ ಏಕೆ ಹೀಗಿದೆ? ಇಲ್ಲಿ ನಿಜವಾಗಿ ಗುಣಾಢ್ಯ ಯಾರು? ಅರಿವು–ಕ್ರಿಯಾಶೀಲತೆ ಜೊತೆಗೂಡಿದವನಾರು? ನಿಜಕ್ಕಾದರೆ, ಇನ್ನೊಬ್ಬರಿಗಾಗಿ ತಾನು ನೋಯಬಲ್ಲವನಾರು? ಅಂಥವನೊಬ್ಬನಿರಬಲ್ಲನೇ ಎಂಬ ತೀವ್ರವಾದ ಕಾಳಜಿ ಕೂಡ ‘ವಿರಹ’ವೇ. ತನ್ನ ಕಲ್ಪನೆಯ ಪಾತ್ರಕ್ಕಾಗಿ ‘ವಿರಹ’ದಲ್ಲಿ ಬೇಯುವುದೇ ಕವಿಯ ಅದೃಷ್ಟವಾಗಿದೆ! ಆದಿಕಾವ್ಯದಲ್ಲಿ ಇದು ಕಾಣಿಸುತ್ತಿರುವುದು ವಿಶೇಷ!

ವಾಲ್ಮೀಕಿ ತನಗೆ ತಿಳಿಯದೇ ಇಂಥದೊಂದು ಪಾತ್ರಕ್ಕಾಗಿ, ರಾಮನಿಗಾಗಿ ಹಂಬಲಿಸುತ್ತಿದ್ದ. ರಾಮನೆಂಬ ಹೆಸರೂ ವಾಲ್ಮೀಕಿಗೆ ತಿಳಿದಿರಲಿಲ್ಲ. ಅದು ನಾರದನಿಂದ ತಿಳಿದು ಬಂತು! ಇವೆಲ್ಲ ಪ್ರಜ್ಞಾಪೂರ್ವಕವಾಗಿ ಚಿಂತಿಸುವ, ಚಿಂತನೀಯಗೊಳಿಸುವ ದಾರಿ ಇದು. ಆದರೆ ಇದರ ಜೊತೆಗೇ ಇದನ್ನೂ ಮೀರಿ, ತತ್‌ಕ್ಷಣದ ಪ್ರತಿಸ್ಪಂದನದ ಜೀವಂತಿಕೆಯನ್ನು, ಅಪ್ರಜ್ಞಾಪೂರ್ವಕವೆಂಬಂತೆ ನಡೆದ ಸ್ಪಂದನವನ್ನು, ಅದರ ಪುಲಕಗಳನ್ನು ಕಾವ್ಯವು ಹಿಡಿಯಲೇಬೇಕು. ಪ್ರಜ್ಞಾಪೂರ್ವಕವಾಗಿ ನಡೆಯುವುದೆಲ್ಲವೂ – ವಿರಹದ ನೋವಿನ ಅನುಭವವೂ ಸೇರಿ – ಹಠಾತ್ತಾಗಿ, ಅನಿರೀಕ್ಷಿತವಾಗಿ ನಡೆಯುವ ‘ಸಂಭವ’ವನ್ನು ಧ್ಯಾನಿಸುತ್ತಿದೆಯೇನೋ ಅನಿಸುತ್ತದೆ!

ಕ್ರೌಂಚಪ್ರಸಂಗ – ಕವಿಗೆ ನಿರೀಕ್ಷಿತವಲ್ಲ. ಅದೊಂದು ಸಂಭವ! ಸಂಭವಿಸಿಬಿಟ್ಟಿತು ಅಷ್ಟೆ. ಆದರೆ ಆ ‘ಸಂಭವ’ದಿಂದ ಉಂಟಾದ ರೋಮಾಂಚದ ಅಲೆಗಳು ವಾಲ್ಮೀಕಿಯ ಕಾವ್ಯದುದ್ದಕ್ಕೆ ಹರಿದಿದೆ. ಅಹಲ್ಯೆಯ ಪ್ರಕರಣವೂ ಹೀಗೇ ಹಠಾತ್ತಾಗಿ ಸಂಭವಿಸಿದ ವಿದ್ಯಮಾನ. ವಿಶ್ವಾಮಿತ್ರನು ರಾಮನನ್ನು ಕರೆದೊಯ್ದದ್ದು ಯಜ್ಞರಕ್ಷಣೆಗೆಂದು; ಅಹಲ್ಯೋದ್ಧಾರಕ್ಕಲ್ಲ. ಆದರೆ ಮಿಥಿಲೆಯ ದಾರಿಯಲ್ಲಿ ಈ ‘ಸಂಭವ’ ನಡೆದುಬಿಟ್ಟಿತು. ಅಹಲ್ಯೆಯು ನಿರೀಕ್ಷಿಸುತ್ತಿದ್ದಿರಬಹುದೇನೋ? ಆದರೆ ರಾಮನಿಗೆ ಏನೂ ತಿಳಿದಿಲ್ಲ. ಹೀಗೆ ಒಂದೆಡೆ ನಿರೀಕ್ಷೆ – ಇನ್ನೊಂದೆಡೆ ಅನಿರೀಕ್ಷಿತವಾದ ಅನುಭವ – ಇವೆರಡನ್ನೂ ಬೆಸೆಯದೆ, ಬೆಸೆದು ಅಚ್ಚರಿಯೊಂದನ್ನು ಸೃಷ್ಟಿಸದೆ, ನಾವು ಪ್ರಜ್ಞಾಪೂರ್ವಕವಾಗಿ ಉಂಟುಮಾಡಿಕೊಳ್ಳುವ ಮೌಲ್ಯಗಳು ಈ ಅಚ್ಚರಿಯ ಅನುಭವವನ್ನು ಧ್ಯಾನಿಸುವಂತೆ ಮಾಡದೆ ಕಾವ್ಯಕ್ಕೆ ಬಿಡುಗಡೆ ಇಲ್ಲವೇನೋ ಅನಿಸುತ್ತದೆ!

ಭೂಮಿ ಉಳುವಾಗ ನೇಗಿಲ ಮೊನೆಗೆ ಸಿಕ್ಕಿದ – ಯಾರೋ ಎಸೆದಿರಬಹುದಾದ – ಹೆಣ್ಣುಮಗು ಸೀತೆ. ಕಾವ್ಯದ ನಾಯಕಿ! ಅಪ್ಪಟ ಮಣ್ಣಿನ ಮಗಳು! ರಾಮ, ವನವಾಸಕ್ಕೆ ಹೊರಟುನಿಂತಾಗ ತಾನೂ ಬರುವೆನೆಂದು ಹಟ ಹಿಡಿಯುವಳು; ಗದರಿಸುವಳು ಕೂಡ. ಸೀತೆ ರಾಮನನ್ನು ಅಗಲಿರಲಾರಳು.

ಇಂಥ ಸೀತೆ, ಕೊನೆಗೆ ಉತ್ತರಕಾಂಡದಲ್ಲಿ, ಎಲ್ಲವೂ ಸುಮುಖವಾಗಿ ಮುಕ್ತಾಯವಾಗಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾಗ, ಅಂದರೆ ಸೀತೆ ಮತ್ತೆ ಅಯೋಧ್ಯೆಗೆ ಹೊರಟುನಿಲ್ಲುವಳೆಂದು ನಿರೀಕ್ಷೆಯಲ್ಲಿದ್ದಾಗ, ಸೀತೆ ಮತ್ತೆ ತನ್ನ ಮಣ್ಣನ್ನು ನೆನೆಯುವಳು! ರಾಮನ ಮೇಲಿನ ತನ್ನ ಪ್ರೇಮ ನಿಜವಾದುದಾಗಿದ್ದರೆ ತನ್ನ ತವರಿನ ಮಡಿಲು ತನಗೆ ಮತ್ತೆ ಆಸರೆಯಾಗಲಿ ಎನ್ನುವಳು.

‘ಪ್ರೇಮ’ ಸಿಂಹಾಸನದ ಮೇಲೆ ಕೂರಲಾರದು! ಪ್ರೇಮಕ್ಕೆ ಎಂದಿಗೂ ವಿರಹದ ನಂಟು! ಪ್ರೇಮ ಮಣ್ಣಿನಲ್ಲಿದೆ. ಅದು ಮಣ್ಣಿನ ಕೂಸು. ಚಿಗುರುವ ಹಂಬಲ ಹೊತ್ತು ಬಿದ್ದಿರುವ ಬೀಜದಂತೆ! ವಾಲ್ಮೀಕಿಯ ಕಾವ್ಯ ಉತ್ಕಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT