ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿಗೂ ರೇಷನ್ ಬರಬೇಕಲ್ಲವೆ?

Last Updated 28 ಜುಲೈ 2018, 19:30 IST
ಅಕ್ಷರ ಗಾತ್ರ

ಬಹುತೇಕರಿಗೆ ರೇಷನ್ ಪದ್ಧತಿಯ ಅರಿವಿರಬಹುದು. ನಾನು ಚಿಕ್ಕವನಿದ್ದಾಗ ರೇಷನ್ ಚೀಟಿ ಹೊಂದಿದವರಿಗೆಲ್ಲ ಚಿಮಣಿ ಎಣ್ಣೆ, ಅಕ್ಕಿ, ಗೋಧಿ, ಪಾಮ್ ಎಣ್ಣೆ ಸಿಗುತ್ತಿತ್ತು. ಅದಕ್ಕಾಗಿ ಅಂಗಡಿಯವನ ಮರ್ಜಿ ಕಾಯ್ದು, ಆತ ಅಂಗಡಿ ತೆರೆಯುತ್ತಿದ್ದ ಸಮಯಕ್ಕೆ ಹಾಜರಿರುತ್ತಿದ್ದ ಉದ್ದನೆಯ ಸರತಿಯ ಸಾಲಿನಲ್ಲಿ ನಾವೂ ಒಬ್ಬರಾಗಿ, ಅಂಗಡಿಯಾತ ಕೊಡುತ್ತಿದ್ದಷ್ಟನ್ನು ಕಮಕ್ ಕಿಮಕ್ ಅನ್ನದೇ ಹಿಡಿದುಕೊಂಡು ಬರುತ್ತಿದ್ದೆವು. ವಿದ್ಯುತ್‌ ಇದ್ದರೂ ಚಿಮಣಿ, ಲಾಟೀನುಗಳನ್ನು ಉರಿಸಲು ಸೀಮೆ ಎಣ್ಣೆಯ ಅವಲಂಬನೆ ಅನಿವಾರ್ಯವೆನಿಸಿದ್ದ ದಿನಗಳವು. ಸಿಗುತ್ತಿದ್ದ ಮೂರ್ನಾಲ್ಕು ಲೀಟರ್ ಎಣ್ಣೆಯನ್ನು ಜತನದಿಂದ ಮುಂದಿನ ಬಾರಿ ತರುವವರೆಗೂ ನಿಧಿಯಂತೆ ಕಾಪಾಡುತ್ತಿದ್ದಳು ನನ್ನಮ್ಮ. ನಮ್ಮ ಬಳಕೆಗೆ ಎಣ್ಣೆ ಸಾಕಾಗದೆ ಬೇರೆಯವರ ಕೋಟಾದಡಿಯೂ ಎಣ್ಣೆ ತರುತ್ತಿದ್ದ ನೆನಪಿದೆ.

ಈಗ ರೇಷನ್ ಅಂಗಡಿಗಳನ್ನು ಅವಲಂಬಿಸುವವರ ಸಂಖ್ಯೆ ಕಮ್ಮಿಯಾಗಿದೆಯಾದರೂ ಕೆಲವೇ ವರ್ಷಗಳಲ್ಲಿ ದೇಶದಾದ್ಯಂತ ರೇಷನ್ ‘ಅಂಗಡಿ’ಗಳನ್ನು ತೆರೆಯುವ ಪರಿಸ್ಥಿತಿ ಬಂದೇ ಬರುತ್ತದೆ. ವ್ಯತ್ಯಾಸವಿಷ್ಟೇ... ರೇಷನ್ ಪದ್ಧತಿ ಬರುವುದು ನೀರಿಗಾಗಿ! ಹೌದು. ನೀವಿದನ್ನು ನಂಬಲೇಬೇಕು. ಅಮೆರಿಕದ ಕ್ಯಾಲಿಫೋರ್ನಿಯಾ, ಕೆನಡಾದ ಲೆತ್ ಬ್ರಿಜ್, ದಕ್ಷಿಣ ಆಫ್ರಿಕಾದ ಕೇಪ್‌ಟೌನ್, ನ್ಯೂಜಿಲೆಂಡ್, ಬ್ರೆಜಿಲ್ ಸೇರಿದಂತೆ ಮುಂದುವರಿದ ರಾಷ್ಟ್ರಗಳಲ್ಲೇ ನೀರಿನ ರೇಷನ್ ಪದ್ಧತಿ ಶುರುವಾಗಿದೆ... ಶುರುವಾಗುವುದರಲ್ಲಿದೆ. ನಮ್ಮಲ್ಲೂ ಆ ದಿನಗಳು ದೂರವಿಲ್ಲ. ರೇಷನ್ ಪದ್ಧತಿಯನ್ನು ಪ್ರಸ್ತಾಪಿಸಲು ಕಾರಣವಿದೆ.

ತಡವಾಗಿಯಾದರೂ ನಮ್ಮ ಸರ್ಕಾರದಿಂದ ಒಂದು ಉತ್ತಮ ಕಾರ್ಯಕ್ಕೆ ಚಾಲನೆ ದೊರಕಿದೆ. ಕೋರಮಂಗಲ- ಚಲ್ಲಘಟ್ಟ ಕಣಿವೆ ಅಥವಾ ಕೆ.ಸಿ. ವ್ಯಾಲಿ ಯೋಜನೆಯು ಎರಡು ತಿಂಗಳ ಹಿಂದೆ ಅನುಷ್ಠಾನಗೊಂಡಿದೆ. ಈ ಯೋಜನೆಯನ್ವಯ ಕೆ.ಸಿ ಕಣಿವೆ ಪ್ರದೇಶದ ಮತ್ತು ಬೆಳ್ಳಂದೂರಿನ ನೊರೆಕೆರೆಯ ತ್ಯಾಜ್ಯ ನೀರನ್ನು ಸಂಸ್ಕರಿಸಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಬರಪೀಡಿತ 5 ತಾಲ್ಲೂಕುಗಳ ಸುಮಾರು 134 ಕೆರೆಗಳ ಮರುಪೂರಣದ ಬೃಹತ್ ಯೋಜನೆಯಿದು. ದಾಖಲೆಯ ಎರಡು ವರ್ಷಗಳಲ್ಲೇ ಬಹುತೇಕ ಪೂರ್ಣಗೊಂಡ ಯೋಜನೆಯ ವೆಚ್ಚ 1300 ಕೋಟಿಗೂ ಅಧಿಕ. ಕೇವಲ ಎರಡೇ ತಿಂಗಳಲ್ಲಿ ಯೋಜನೆಯ ಲೋಪದೋಷಗಳು ಬಯಲಾಗಿವೆ.

ಗೃಹಬಳಕೆಯ ತ್ಯಾಜ್ಯ ನೀರನ್ನು ಬೂದು (ಗ್ರೇ) ಮತ್ತು ಕಪ್ಪು (ಡಾರ್ಕ್) ನೀರೆಂದು ವಿಂಗಡಿಸುತ್ತಾರೆ. ಶೌಚದ ನೀರು ತ್ಯಾಜ್ಯಕ್ಕೆ ಬಂದು ಸೇರಿದರೆ ಅದು ಕಪ್ಪು ನೀರಾಗುತ್ತದೆ. ಬಚ್ಚಲು,
ಅಡುಗೆ ಮನೆಯ ನೀರಾದರೆ ಅದನ್ನು ಬೂದು ನೀರೆಂದು ಹೇಳುತ್ತಾರೆ. ಬೂದು ನೀರನ್ನು ಶೌಚಲಯದಲ್ಲಿ ಫ್ಲಷ್ ಮಾಡಲು ಪುನರ್ಬಳಕೆ ಮಾಡಬಹುದು. ಕೈತೋಟಗಳಲ್ಲಿ ತರಕಾರಿಗಳನ್ನು ಬೆಳೆಸಲು (ನೆನಪಿಡಿ: ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ನಾವು ತಿನ್ನುವ ತರಕಾರಿ, ಹಣ್ಣಿನ ಭಾಗಕ್ಕೆ ಈ ನೀರು ತಾಗುವಂತಿಲ್ಲ), ಅಥವಾ ಆಲಂಕಾರಿಕ ಸಸ್ಯಗಳನ್ನು ಬೆಳೆಸಲು ಬಳಸಬಹುದು. ಇಲ್ಲಿನ ಪರಿಸ್ಥಿತಿಯಲ್ಲಿ ತ್ಯಾಜ್ಯ ನೀರು ಕಪ್ಪು ಬಣ್ಣದ್ದೇ. ಇಂತಹ ನೀರನ್ನು ಸಂಸ್ಕರಿಸಿ ಹೆಚ್ಚಿನ ನೀರಿನೊಟ್ಟಿಗೆ ಒಂದು ಹಂತದಲ್ಲಿ ಬೆರೆಸಿದರೆ (ಡೈಲ್ಯೂಟ್) ಕ್ರಮೇಣ ಅದು ತನ್ನ ವಿಷಾಂಶಗಳನ್ನು ಕಳೆದುಕೊಳ್ಳುತ್ತದೆ. ಆ ಪ್ರಕ್ರಿಯೆಯಲ್ಲಿ ಸಸ್ಯಗಳ ಬೇರು ಹಾಗೂ ಸೂಕ್ಷ್ಮಾಣುಜೀವಿಗಳು ಪ್ರಮುಖ ಪಾತ್ರವಹಿಸುತ್ತವೆ.

ಆದರೆ ಬೆಂಗಳೂರು ನಗರದ ಕೆರೆಯಂಗಳಕ್ಕೆ ಕೇವಲ ಗೃಹಬಳಕೆಯ ತ್ಯಾಜ್ಯನೀರಷ್ಟೇ ಬಂದು ಸೇರುತ್ತಿಲ್ಲ. ಅನೇಕ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ಬೆರೆತ ನೀರೂ ಬಂದು ಸೇರುತ್ತದೆ. ಇವುಗಳನ್ನು ಬೇರ್ಪಡಿಸುವುದು ಕಷ್ಟಸಾಧ್ಯ. ಇಂತಹ ನೀರನ್ನು ಪುನರ್ಬಳಕೆ ಮಾಡುವುದು ಸುಲಭವಲ್ಲ. ಅವನ್ನೆಲ್ಲ ತೆಗೆಯದೇ ನೀರಿಗೆ ಬಿಟ್ಟರೆ ಅನೇಕ ಅಪಾಯಗಳಿಗೆ ಆಹ್ವಾನ ನೀಡಿದಂತೆ. ಮೂಲದಲ್ಲೇ ನೀರಿಗೆ ಸೇರುವ ತ್ಯಾಜ್ಯಗಳನ್ನು ವಿಂಗಡನೆ ಮಾಡುವುದೊಂದೇ ಅದಕ್ಕಿರುವ ಪರಿಹಾರ.

ಇದೇ ಕೆ.ಸಿ ಕಣಿವೆ ಯೋಜನೆಗಿರುವ ಪ್ರಮುಖ ಸವಾಲು. ಯೋಜನೆ ಜಾರಿಯಾದ ಎರಡೇ ತಿಂಗಳಲ್ಲಿ ಬೆಳ್ಳಂದೂರು ಕೆರೆಯ ನೊರೆಭಾಗ್ಯ ಕೋಲಾರಿಗರಿಗೂ ಸಿಕ್ಕಿದೆ! ಅಪಾಯವನ್ನರಿತ ಅಧಿಕಾರಿಗಳು ಕೂಡಲೇ ನೀರಿನ ಹರಿವನ್ನು ನಿಲ್ಲಿಸಿದ್ದಾರೆ. ಇಂತಹ ಯೋಜನೆಗಳು ಸ್ವಾಗತಾರ್ಹವೇ. ಆದರೆ, ಕಟ್ಟುನಿಟ್ಟಿನ ಮುಂಜಾಗರೂಕತೆಯನ್ನು ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ಕೆರೆಗಳಲ್ಲಿ ಇಂಗುವ ಮಲಿನ ನೀರು ಅಂತರ್ಜಲಕ್ಕೆ ಸೇರಿ ಆ ಪ್ರದೇಶದ ಎಲ್ಲಾ ಶುದ್ಧ ನೀರಿನ ಸಂಪನ್ಮೂಲಗಳನ್ನು ಮಲಿನಗೊಳಿಸುತ್ತದೆ.

ನೀರಿನ ಪುನರ್ಬಳಕೆಯೊಂದಿಗೆ ಮಳೆನೀರು ಸಂಗ್ರಹ, ನೀರಿನ ಸೋರಿಕೆಯನ್ನು ತಡೆಯುವುದು, ಇತ್ಯಾದಿಗಳಲ್ಲದೆ ನೀರಿನ ಪಡಿತರ ವ್ಯವಸ್ಥೆಯನ್ನೂ ಜಾರಿಗೆ ತರಬಹುದು.

ಮೇ 31ರಂದು ಕ್ಯಾಲಿಫೋರ್ನಿಯಾದ ಗವರ್ನರ್ ಜೆರ್ರಿ ಬ್ರೌನ್ ಶಾಶ್ವತ ನೀರಿನ ರೇಷನ್ ವ್ಯವಸ್ಥೆಯ ಕುರಿತಾದ ಎರಡು ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ. ‘ಅಸೆಂಬ್ಲಿ ಬಿಲ್ 1668’ ಮತ್ತು ‘ಸೆನೆಟ್ ಬಿಲ್ 606’ರ ಪ್ರಕಾರ 2022ರಿಂದ ಪ್ರತಿಯೊಬ್ಬ ಕ್ಯಾಲಿಫೋರ್ನಿಯಾ ಪ್ರಜೆಯ ಮನೆಬಳಕೆ ನೀರಿನ ಪ್ರಮಾಣವನ್ನು ಈಗಿನ 90 ಗ್ಯಾಲನ್‌ಗಳಿಂದ 55 ಗ್ಯಾಲನ್‌ಗೆ (ಒಂದು ಗ್ಯಾಲನ್= 3.79 ಲೀಟರ್‌) ತಗ್ಗಿಸುವ ಕಾಯಿದೆಗಳವು. ಇನ್ನೂ ಮುಂದುವರಿದು 2030ರ ವೇಳೆಗೆ ಇದು 50 ಗ್ಯಾಲನ್‌ (190 ಲೀಟರ್)ಗೆ ತಗ್ಗಲಿದೆ.

ಕೈತೋಟ, ತೋಟಗಾರಿಕೆ, ಹೊಲ, ಕೈಗಾರಿಕೆ ಇತ್ಯಾದಿ ಬಳಕೆಯ ಮಿತಿಯ ಕುರಿತಾಗಿ ಚರ್ಚೆಯಿನ್ನೂ ನಡೆಯುತ್ತಿದೆ. ಈ ವಿಧೇಯಕದ ಪ್ರಕಾರ ನೀರನ್ನೊದಗಿಸುವ ಪ್ರತಿ ಪ್ರಾಂತೀಯ ಸಂಸ್ಥೆಯೂ ವಾರ್ಷಿಕ ನೀರಿನ ಬಳಕೆಯ ಕುರಿತು ಬಜೆಟ್ ತಯಾರಿಸಿ ಅದರಂತೆ ನೀರಿನ ಹಂಚಿಕೆಯ ಜವಾಬ್ದಾರಿ ಹೊರಬೇಕು. ಬಳಕೆಯ ಮಿತಿಯನ್ನು ಉಲ್ಲಂಘಿಸಿದರೆ ಅಂತಹ ಸಂಸ್ಥೆಗೆ ದಿನವೊಂದಕ್ಕೆ 1000 ದಿಂದ 10,000 ಡಾಲರ್‌ವರೆಗೂ ದಂಡ ವಿಧಿಸಲು ಅವಕಾಶವಿದೆ. 2013ರಲ್ಲಿ ಕ್ಯಾಲಿಫೋರ್ನಿಯನ್ನರು 109 ಗ್ಯಾಲನ್ ನೀರನ್ನು ಬಳಸುತ್ತಿದ್ದರು.

ನಂತರದ ವರ್ಷಗಳ ಭೀಕರ ಕ್ಷಾಮದಿಂದ ಪಾಠ ಕಲಿತು, ಅವರ ಬಳಕೆಯು ಕಳೆದ ವರ್ಷ 90 ಗ್ಯಾಲನ್ನಿಗಿಳಿದಿತ್ತು. ಆದ್ದರಿಂದ ಕ್ಯಾಲಿಫೋರ್ನಿಯನ್ನರು ವಿಧೇಯಕದ ನಿಯಮ ಮೀರಲಾರರು ಎನ್ನುವುದು ಸ್ಪಷ್ಟವಾಗುತ್ತದೆ. ಅಮೆರಿಕದ ಪರಿಸ್ಥಿತಿಯಲ್ಲಿ 8 ನಿಮಿಷ ಶಾವರಿನ ಅಡಿಯಲ್ಲಿ ನಿಂತರೆ 17 ಗ್ಯಾಲನ್, ಬಟ್ಟೆ ಒಗೆಯಲು 40 ಗ್ಯಾಲನ್ ನೀರು ಖರ್ಚಾಗುತ್ತದೆ.

ಹೀಗಾಗಿ ವಿಧೇಯಕದಲ್ಲಿನ ಗುರಿಯನ್ನು ಮೀರದಂತೆ ದಕ್ಷವಾದ ನೀರಿನ ಸದ್ಬಳಕೆಯ ದಾರಿಗಳನ್ನು ಅವರು ಕಂಡುಕೊಳ್ಳಬೇಕಾಗುತ್ತದೆ.

ತೊಂಭತ್ತರ ದಶಕದಲ್ಲಿ ಬೇರೊಂದು ನೀರಿನ ವ್ಯಾಜ್ಯದಿಂದಾಗಿ ನೀರಿನ ಅಭಾವದ ಭೀತಿಯಲ್ಲಿದ್ದ ನ್ಯೂ ಓರೆಗಾನ್ ಪ್ರಾಂತ್ಯದವರು ತಮ್ಮ ಜೀವನಶೈಲಿಯನ್ನೇ ಬದಲಾಯಿಸಿಕೊಂಡು ನೀರಿನ ಸಮರ್ಥ ನಿರ್ವಹಣೆಯ ಮಾರ್ಗಗಳನ್ನು ಕಂಡುಕೊಂಡಿದ್ದರು. ಹಾಗಾಗಿ, ಹೊಸತೊಂದು ಆಣೆಕಟ್ಟೆ ಕಟ್ಟುವ ಪ್ರಸ್ತಾವವನ್ನೇ ತಪ್ಪಿಸಿ ನೂರಾರು ಕೋಟಿ ರೊಕ್ಕ ಉಳಿಸಿದ್ದ ಜಾಣರವರು. ಅಂತಹುದೇ ಕ್ರಾಂತಿಯನ್ನು ಕ್ಯಾಲಿಫೋರ್ನಿಯನ್ನರೂ ಮಾಡಿಯಾರು.

ಕೆನಡಾ ಎಂದರೆ ನಮ್ಮೆದುರಿಗೆ ಬರೀ ಸುಂದರ ಸ್ವಪ್ನಗಳೇ ಮೂಡುತ್ತವೆಯಲ್ಲವೇ? ಆದರೆ ಅಂತಹ ದೇಶದಲ್ಲೂ ನೀರಿಗೆ ತತ್ವಾರವಿದೆ ಎಂದರೆ ಬಹಳಷ್ಟು ಜನರಿಗೆ ಅಚ್ಚರಿಯಾದೀತು. ಅಲ್ಲಿನ ಲೆತ್ ಬ್ರಿಜ್, ಅಲ್ಬರ್ಟಾದ ಮೂರನೇ ಅತಿದೊಡ್ಡ ಊರು. ನಮ್ಮ ಕಲಬುರ್ಗಿ, ವಿಜಯಪುರ, ಗದಗ, ಬಳ್ಳಾರಿ, ಕೊಪ್ಪಳ ಮುಂತಾದ ಬರಪೀಡಿತ ಪ್ರದೇಶಗಳ ಸರಾಸರಿ ಮಳೆಯ ಪ್ರಮಾಣವು ಲೆತ್ ಬ್ರಿಜ್ಜಿನ ಮಳೆ ಪ್ರಮಾಣಕ್ಕಿಂತ (ಸರಾಸರಿ 350- 450 ಮಿಮಿ. ವಾರ್ಷಿಕ) ಎಷ್ಟೋ ಜಾಸ್ತಿ! ಅಲ್ಲಿ 2014ರಲ್ಲೇ ನೀರಿನ ರೇಷನ್ ಜಾರಿಯಾಗಿತ್ತು ಮತ್ತು ಅತ್ಯಂತ ಸಂಯಮದಿಂದ ಅಲ್ಲಿನವರು ಅದನ್ನು ಯಶಸ್ವಿಗೊಳಿಸಿದ್ದರು. ಆ ಅನುಭವದ ಆಧಾರದಲ್ಲೇ 2015ರಲ್ಲಿ ಅಲ್ಲಿನ ಶಾಸನವು ನೀರಿನ ರೇಷನ್ಬಗ್ಗೆ ಮಾಹಿತಿ ಕೈಪಿಡಿಯನ್ನೇ ಬಿಡುಗಡೆ ಮಾಡಿದೆ. ಬರಗಾಲವಷ್ಟೇ ಅಲ್ಲದೆ ಪ್ರವಾಹ, ತಾಂತ್ರಿಕ ಕಾರಣ ಇತ್ಯಾದಿ ಸಂದರ್ಭಗಳಲ್ಲಿ ನೀರಿನ ರೇಷನ್ ಪದ್ಧತಿ ಜಾರಿಗೊಂಡರೆ ಅನುಸರಿಸಬೇಕಾದ ಕ್ರಮಗಳು ಕೈಪಿಡಿಯಲ್ಲಿವೆ. ಅಲ್ಪಕಾಲೀನ (3 ವಾರಗಳು) ಹಾಗೂ ದೀರ್ಘಕಾಲೀನ (ಮೂರು ವಾರಕ್ಕಿಂತ ಹೆಚ್ಚಿನ ಅವಧಿ) ನೀರಿನ ಅಭಾವದಲ್ಲಿ ಪ್ರಜೆಗಳು ಅನುಸರಿಸಬೇಕಾದ ಕ್ರಮಗಳನ್ನು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಸೋರಿಕೆಯ ತಡೆ, ಶಾವರ್ ಸ್ನಾನದ ಅವಧಿಯ ಕಡಿತ, ಪಾತ್ರೆ- ಬಟ್ಟೆ ತೊಳೆಯಲು ಮೆಷೀನುಗಳ ಬಳಕೆ ಮಾಡದಿರುವುದು, ದುಂದುವೆಚ್ಚ ತಡೆ ಇತ್ಯಾದಿಗಳ ಹೊರತಾಗಿ ಇನ್ನೂ ಹಲವಾರು ಅಚ್ಚರಿಯ ಸೂಚನೆಗಳಿವೆ. ಉದಾಹರಣೆಗೆ, ಕೈತೋಟದಲ್ಲಿ ಹೆಚ್ಚು ನೀರು ಬೇಡುವ ಗಿಡಗಳಿಗಿಂತ ಸ್ಥಳೀಯವಾಗಿ ಬೆಳೆಯುವ ಸಸ್ಯಗಳನ್ನೇ ಬೆಳೆಸಿರಿ. ಜೋಪಾನವಾಗಿ ನೀರುಣಿಸಿ (ತುರ್ತು ಪರಿಸ್ಥಿತಿಯಲ್ಲಿ ವಾರಕ್ಕೊಮ್ಮೆ ಮಾತ್ರ), ನೀರಾವಿಯಾಗದಂತೆ ಕಡ್ಡಾಯವಾಗಿ ಮುಚ್ಚಿಗೆ ಮಾಡಿ ಎನ್ನುತ್ತವೆ ಅವರ ಕಾಯಿದೆಗಳು. ಬರಗಾಲದಂತಹ ದೀರ್ಘಕಾಲೀನ ಸಂದರ್ಭಗಳಲ್ಲಿ ನಾಲ್ಕು ಹಂತದಲ್ಲಿ ನೀರಿನ ರೇಷನ್ ಜಾರಿಯಲ್ಲಿರುತ್ತದೆ. ಈ ಹಂತಗಳಲ್ಲಿ ಶೇ 10- ಶೇ 40ರಷ್ಟು ನೀರಿನ ಕಡಿತವಾಗುತ್ತದೆ. ಇದನ್ನು ಯಾರಾದರೂ ಮೀರಿದರೆ ನೋಟಿಸಿನ ಜೊತೆಗೆ ಭಾರೀ ದಂಡವನ್ನೂ ವಿಧಿಸಲಾಗುತ್ತದೆ. ಅಲ್ಲಿನ ಹೋಟೆಲುಗಳಲ್ಲಿ

ಉಳಿದುಕೊಂಡರೆ ಪ್ರತಿದಿನ ಬಟ್ಟೆ ಒಗೆಯುವುದನ್ನು ವರ್ಜಿಸಲು ಸೂಚಿಸುತ್ತಾರೆ. ತೀರಾ ಕೊಳೆಯಾದ ವಾಹನಗಳನ್ನು ತೊಳೆಯಲೂ ನಿರ್ಬಂಧ ಹೇರುತ್ತಾರೆ. ಪಾತ್ರೆ ಮತ್ತು ಬಟ್ಟೆಗಳು ತುಂಬಾ ಇದ್ದರಷ್ಟೇ ಯಾಂತ್ರಿಕವಾಗಿ ಅವುಗಳನ್ನು ತೊಳೆಯಲು

ಸಲಹೆ ನೀಡಲಾಗುತ್ತದೆ. ಸ್ನಾನದ ಅವಧಿಯನ್ನು ಕೂಡ ಕಡಿಮೆಗೊಳಿಸಲು, ಬಾತ್ ಟಬ್ಬುಗಳಲ್ಲಿ ಮಲಗದಂತೆ ಸೂಚಿಸಲಾಗುತ್ತದೆ! ಇನ್ನು ರೇಷನ್ ಅವಧಿಯಲ್ಲೇ ಚೆನ್ನಾಗಿ ಮಳೆ ಬಂದರೂ ಸ್ಥಳೀಯ ಆಡಳಿತ ಸೂಚಿಸುವವರೆಗೂ ಈ ನಿಯಂತ್ರಣಗಳೆಲ್ಲವೂ ಜಾರಿಯಲ್ಲಿರುತ್ತವೆ. ಹಾಗಂತ ನೀರು ಹೆಚ್ಚು ಲಭ್ಯವಿದ್ದರೆ ಅದರ ಬಳಕೆಗೆ ಯಾವುದೇ ತಡೆಗಳಿಲ್ಲ. ಆಪತ್ಕಾಲೀನ ಪರಿಸ್ಥಿತಿಗಳಲ್ಲಿ ಮಾತ್ರ ಇದು ಅನ್ವಯ ಎನ್ನುತ್ತದೆ ಅಲ್ಲಿನ ಶಾಸನ. ಏನೇ ಆಗಲಿ ಅಲ್ಲಿನವರ ಮುನ್ನೋಟ ಶ್ಲಾಘನೀಯ.

ನೀರಿನ ರೇಷನ್ ದಕ್ಷಿಣ ಆಫ್ರಿಕಾದಲ್ಲೂ ಕಳೆದ ಬೇಸಿಗೆಯಲ್ಲಿ ಜಾರಿಗೆ ಬಂದಿತ್ತು. ಭೀಕರ ಕ್ಷಾಮ, ಧಾರಣ ಶಕ್ತಿಗಿಂತ ಹೆಚ್ಚಾದ ಜನಸಂಖ್ಯೆ ಮತ್ತು ಜೀವನಶೈಲಿಯಿಂದಾಗಿ ಏಪ್ರಿಲ್ 12ರಿಂದ ಕೇಪ್ ಟೌನಿನ ನಲ್ಲಿಗಳಲ್ಲಿ ನೀರು ಬರುವದಿಲ್ಲ ಎಂದು ಘೋಷಣೆಯಾಗಿತ್ತು.

ಅದರಂತೆ ಒಬ್ಬನಿಗೆ ದಿನಕ್ಕೆ ಸ್ನಾನಕ್ಕೆ 15 ಲೀಟರ್ (ಸ್ನಾನದ ಅವಧಿ 90 ಸೆಕೆಂಡುಗಳು!), ಅಡುಗೆಗೆ 2 ಲೀ, ಕುಡಿಯಲು 2 ಲೀ, ಪಾತ್ರೆ- ಬಟ್ಟೆಗೆ 18 ಲೀ ಗೆ ಸೀಮಿತಗೊಳಿಸಲಾಗಿತ್ತು. ಅವರ ಪುಣ್ಯ ಚೆನ್ನಾಗಿತ್ತು. ಮುಂದಿನ ಕೆಲ ಸಮಯದಲ್ಲೇ ಮಳೆಯಾಗಿ ಆಪತ್ತಿನ ಸ್ಥಿತಿಯಿಂದ ಅವರು ಪಾರಾಗಿದ್ದಾರೆ. ಆದರೆ ಎಷ್ಟು ದಿನಗಳ ಕಾಲ ಈ ವೈಭೋಗವೋ ಗೊತ್ತಿಲ್ಲ.

ನಮಗೆ ವಿದೇಶೀ ಜೀವನ, ವೈಭೋಗ, ವಿಲಾಸ ಬೇಕು. ಅಲ್ಲಿನ ಜೀವನ ವಿಧಾನ, ಸ್ವೇಚ್ಛಾಚಾರಗಳನ್ನು ಕಣ್ಣುಮುಚ್ಚಿ ಅನುಭವಿಸಲು ಹಪಹಪಿಸುವ ನಾವು ಅಲ್ಲಿನವರ ಪರಿಸರದ ಕುರಿತಾದ ಕಾಳಜಿಯನ್ನು ಒಪ್ಪಿಕೊಳ್ಳುವಲ್ಲಿ ತುಂಬ ಹಿಂದೆ ಇದ್ದೇವೆ. ವಿಪರ್ಯಾಸವೆಂದರೆ, ನಮಲ್ಲಿ ಬೀಳುವ ಯಥೇಚ್ಛ ಮಳೆನೀರನ್ನು ಇಂಗಿಸಲಾಗುವುದಿಲ್ಲ!

ನೀರಿನ ಪುನರ್ಬಳಕೆಯಂತೂ ಇಲ್ಲವೇ ಇಲ್ಲ. ಶುದ್ಧ ನೀರಿನ ಸಂಪನ್ಮೂಲವೇ ವಿರಳವಾದ ಇಸ್ರೇಲು ಸಮುದ್ರದಿಂದ, ಕೊಳಚೆಯಿಂದ ಶುದ್ಧ ನೀರನ್ನು ತಯಾರಿಸಿ ಪರಮವೈರಿ ಪ್ಯಾಲಸ್ತೈನ್ ದೇಶಕ್ಕೂ ರಫ್ತು ಮಾಡುತ್ತಿದೆ. ದೇವರು ನಮಗೆ ಸಂಪನ್ಮೂಲಗಳನ್ನು ಕೊಟ್ಟಿದ್ದಾನೆ. ಆದರೆ, ಅದರ ಸದ್ಬಳಕೆ ಮಾಡುವ ಬುದ್ಧಿಯನ್ನು ನಾವು ಕಳಕೊಂಡಿದ್ದೇವೆ. ಅಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT