ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪ್ಪತ್ತರ ತಿಟ್ಟೇರಿ...

ಸ್ತ್ರೀಸತ್ವವಾದದ ಉದ್ಘೋಷಕಿ ವೈದೇಹಿ
Last Updated 7 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಕನ್ನಡ ನಾಡುನುಡಿಗೆ ಅತ್ಯಂತ ಮಹತ್ವದ ಕಾಣಿಕೆ ನೀಡಿರುವ ಕರಾವಳಿ ಪ್ರದೇಶದ ನೆಲದ ಸಾರವನ್ನು ಹೊಮ್ಮಿಸುತ್ತಲೇ ಸಂಪನ್ನವಾದ ಸಾಹಿತ್ಯವನ್ನು ರಚಿಸುತ್ತ ಬಂದಿರುವ ವೈದೇಹಿ ನಮ್ಮ ಕಾಲದ ಅತ್ಯಂತ ಮಹತ್ವದ ಲೇಖಕಿಯರಲ್ಲಿ ಒಬ್ಬರು. ಕಳೆದ ನಾಲ್ಕೂವರೆ ದಶಕಗಳಿಂದ ನಿರಂತರವಾಗಿ ಬರಹದಲ್ಲಿ ವಿಕಾಸಶೀಲತೆ, ಸೃಜನ ಚೈತನ್ಯ ಹಾಗೂ ಜೀವಂತಿಕೆಗಳನ್ನು ಕಾಯ್ದುಕೊಂಡು ಬರೆಯುತ್ತಿರುವ ವೈದೇಹಿ ‘ಕುಂದಾಪುರದ ಕುಂದದ ಕುಸುಮ’.

ಸ್ತ್ರೀವಾದದ ತಾತ್ವಿಕತೆಯ ಒಡವೆಯನ್ನು ಎಂದೂ ತೊಡದಿದ್ದರೂ ಅಮ್ಮನ ಸೀರೆಯ ನೂಲಿನೆಳೆಗಳ ಹಾಸುಹೊಕ್ಕಿನ ಹಾಗೆ ಸ್ತ್ರೀವಾದಿ ಚಿಂತನೆಗೆ ವೈದೇಹಿಯವರು ಬರಹಗಾರಿಕೆಯ ಒಳಗಿನಿಂದಲೇ ಹೊಸತೊಂದು ಜೀವನ ದರ್ಶನವನ್ನು ಒದಗಿಸುತ್ತಾ ಬಂದಿದ್ದಾರೆ. ಹೆಣ್ಣಿನ ಅನುಭವಲೋಕದ ಅನಾವರಣದೊಂದಿಗೆ ಹೊರಟ ಅವರ ಸಾಹಿತ್ಯ ಕೃತಿಗಳು ಇಂದು ಸಮಸ್ತ ಮನುಕುಲಕ್ಕೆ ತನ್ನನ್ನು ಕಂಡುಕೊಳ್ಳಬೇಕಾದ ದರ್ಪಣದಷ್ಟು ಚೆಂದವಾಗಿ ಬೆಳೆದಿರುತ್ತವೆ.

ಕುಂದಾಪುರದ ಎ.ವಿ.ಎನ್‌. ಹೆಬ್ಬಾರ್‌ ಮತ್ತು ಮಹಾಲಕ್ಷ್ಮಿಯಮ್ಮನವರ ಮಗಳಾಗಿ 1945ರ ಫೆಬ್ರುವರಿ 12ರಂದು ಜನಿಸಿದ ವೈದೇಹಿಯ ನಿಜವಾದ ಹೆಸರು ಜಾನಕಿ. ಸದಾಕಾಲ ಬಂಧುಗಳು ಬಳಗದವರು, ಅವರ ಹಿಂಡು ಮಕ್ಕಳ ಗದ್ದಲ ಸಡಗರಗಳಿಂದ ತುಂಬಿರುತ್ತಿದ್ದ ದೊಡ್ಡ ಕೌಟುಂಬಿಕ ಪರಿಸರದಲ್ಲಿ ಜಾನಕಿಯ ಬಾಲ್ಯದ ಅವಧಿ ಅಲ್ಲಿನ ಸುಂದರ ಮುಗ್ಧ ಅನುಭವಗಳ ಮಗ್ಗುಲಲ್ಲೇ ನೋವು, ಹಿಂಸೆ, ಅಸ್ವಸ್ಥತೆಗಳನ್ನೂ ಕಂಡು ಬೆಳೆದದ್ದಾಗಿತ್ತು.

ಹಣಕ್ಕಿಂತಲೂ ಮರ್ಯಾದೆಗೆ ತುಂಬ ಬೆಲೆಯಿದ್ದ ಆ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಿಕ್ಷಣ ದೊರೆಯಬೇಕಾದರೂ ಅದೇ ದೊಡ್ಡ ಸಂಗತಿ. ಆದರೆ ವೈದೇಹಿ ಎಸ್‌.ಎಸ್‌.ಎಲ್‌.ಸಿ. ಮುಗಿಸುವ ಹೊತ್ತಿಗೆ ಕುಂದಾಪುರದಲ್ಲಿ ಕಾಲೇಜು ಸ್ಥಾಪನೆಯಾಗಿದ್ದರಿಂದ ಅವರಿಗೆ ಕಾಲೇಜು ಶಿಕ್ಷಣದ ಅವಕಾಶವೂ ದೊರೆಯಿತು. ಬಿ.ಕಾಂ. ಪದವಿಯನ್ನು ಮುಗಿಸಿದ ಕಾಲದಲ್ಲಿ ಎಲ್ಲರಿಗೂ ಅವರು ಪರಿಚಿತರಾಗಿದ್ದದ್ದು ಜಾನಕಿ ಹೆಬ್ಬಾರ್‌ ಎಂದು.

ಆ ದಿನಗಳಲ್ಲೇ ಅವರು ರಚಿಸಿದ್ದ ‘ನೀರೆಯರ ದಿನ’ ಎನ್ನುವ ಲೇಖನ ‘ಸುಧಾ’ ವಾರಪತ್ರಿಕೆಯಲ್ಲಿ ಪ್ರಕಟವಾಗಬೇಕಾದಾಗ ಜಾನಕಿಗೆ ತಮ್ಮ ನಿಜವಾದ ಹೆಸರಿನಿಂದ ಅದನ್ನು ಪ್ರಕಟಿಸುವುದಕ್ಕೆ ಆತಂಕವಿತ್ತು. ಆಗ ಪತ್ರಿಕೆಯ ಸಂಪಾದಕರಾಗಿದ್ದ ಎಂ.ಬಿ. ಸಿಂಗ್‌ ಅವರ ಸಲಹೆಯಂತೆ ‘ಜಾನಕಿ’ ಎಂಬ ಹೆಸರಿನ ಬದಲು ‘ವೈದೇಹಿ’ ಎನ್ನುವ ಕಾವ್ಯನಾಮವನ್ನು ಇಟ್ಟುಕೊಂಡದ್ದಾಯಿತು. ಅಲ್ಲಿಂದೀಚೆಗೆ ಕನ್ನಡನಾಡಿನ ಜನರೆಲ್ಲರಿಗೆ ಅವರು ‘ವೈದೇಹಿ’ ಎಂದೇ ಸುಪರಿಚಿತರಾದರು.

ಬಾಲ್ಯದಿಂದ  ಮನದುಂಬಿದ್ದ ತನ್ನ ತಾಯಿಬೇರಿನ ಪರಿಸರದ ಜನಗಳ ಬದುಕಿನ ಸಡಗರ, ಕೊರಗುಗಳನ್ನು ವೈದೇಹಿ ಕತೆಗಳ  ರೂಪ ಕೊಟ್ಟು, ಅರಳಿಸಲು ಸಾಕಷ್ಟು ಕಾಲ ಕಾಯಬೇಕಾಯಿತು. ‘ನನ್ನೊಳಗಿನ ಓದುಗಳು, ಒಂದರ್ಥದಲ್ಲಿ ನಾನು ಹೇಳುವುದನ್ನು ಆಲಿಸುವವಳು ಮತ್ತು ವಿಮರ್ಶಿಸುವವಳು, ಏಳಬೇಕಾದರೆ ನಾನು ಆ ಎಲ್ಲ ಪರಿಸರವನ್ನು ಬಿಟ್ಟು ಮದುವೆಯಾಗಿ , ನೇರ ಬದುಕಿನ ಒಳಗೆ ಬಂದು ನಿಂತುಕೊಳ್ಳಬೇಕಾಯಿತು. ಮದುವೆ ಎನ್ನುವುದು ನನ್ನ ಪಾಲಿಗೆ ನನ್ನನ್ನು ನಿದ್ದೆಯಿಂದ ಎಚ್ಚರಿಸಿದ ಘಟನೆ’ ಎಂದು ನೆನೆಯುತ್ತಾರೆ ವೈದೇಹಿ.

ಕಳೆದ ಇಪ್ಪತ್ತನೆಯ ಶತಮಾನದಲ್ಲಿ ಸಂಪ್ರದಾಯಸ್ಥ ಜೀವನ ನಿಯಮಗಳ ಒಳಗೆ ಹೆಣ್ಣು ಓದಿ ವಿದ್ಯಾವಂತೆಯಾದ ಮಾತ್ರಕ್ಕೆ ಬದುಕಿನ ತಿಳುವಳಿಕೆಯು ಮೂಡಿಬಿಡುವ ಸಾಧ್ಯತೆಗಳು ಎಳ್ಳಷ್ಟೂ ಇರಲಿಲ್ಲ. ಹೆಣ್ತನದ ನಿಜಸ್ಥಿತಿ ಏನೆಂಬುದಾಗಲಿ, ತನ್ನದೇ ದೇಹದ ಅರಿವಾಗಲಿ ಹುಡುಗಿಗೆ ದೊರೆಯಗೊಡದ ಮಾನಸಿಕ ಮಡಿವಂತಿಕೆಯನ್ನೇ ಆದರ್ಶವೆಂದು ನಂಬಿದ   ಕಾಲ ಅದು. ಈ ಅರ್ಥದಲ್ಲಿ  ತಾನು ಏನು ಎನ್ನುವುದರ ಅರಿವನ್ನು ಹುಟ್ಟಿಸಿದ ಆ ಅವಧಿಯ ಸಾಂಸಾರಿಕ ಬದುಕಿನ ಬಗ್ಗೆ ವೈದೇಹಿ ಈಗ ಸ್ಪಷ್ಟವಾಗಿ ಹೇಳಬಲ್ಲರು. 

ಸಭ್ಯತೆಯ ಆವರಣದಲ್ಲಿ ಹೆಣ್ಣಿಗೆ ತಾನೇನು ಎನ್ನುವ ಅರಿವನ್ನು ತಟ್ಟಿ ಎಬ್ಬಿಸಿದ ಆ ಅವಧಿಯ ಸಾಂಸಾರಿಕ ಜೀವನವನ್ನು ಕುರಿತು ತುಂಬ ಸ್ಪಷ್ಟವಾಗಿ ವೈದೇಹಿ ಈಗ ಹೇಳಬಲ್ಲರು. ‘ಬಸಿರು ಬಾಣಂತನಗಳ ನಡುವೆಯೇ ಇದ್ದಿದ್ದರೂ, ಆ  ಕುರಿತ ಪಿಸು ಮಾತುಗಳನ್ನೆಲ್ಲ ಆಲಿಸುತ್ತಿದ್ದರೂ, ನನಗೆ ಬಸಿರು ಹೇಗೆ ಆಗುತ್ತದೆ ಮತ್ತು ಮಗು ಬರುವ ದಾರಿ ಯಾವುದು ಎಂದೇ ಗೊತ್ತಿರಲಿಲ್ಲ ಎಂಬುದನ್ನು ನಂಬಿ, ನನ್ನಾಣೆ. ಮಾತೇನೋ ಎಲ್ಲ ಗೊತ್ತಿತ್ತು. ಜ್ಞಾನವೇ ಇರಲಿಲ್ಲ.

ಅವೆಲ್ಲ ತಿಳಿಯುವುದೆಂದರೆ ಅಥವಾ ಅವುಗಳ ಕುರಿತು ಓದಿಕೊಳ್ಳುವುದೆಂದರೆ ಹಾಳಾದಂತೆಯೇ ಎಂಬ ಭಾವನೆಯಲ್ಲಿದ್ದೆ. ಈ ರೀತಿ ಮುಗ್ಧವಾಗಿದ್ದು ಎಲ್ಲ ತಿಳಿದಿರುವವಳ ಸೋಗು ಹಾಕಿಕೊಂಡು ಮದುವೆಯಾಗಿ ಬಂದೆ. ಬಂದವಳಿಗೆ ಮದುವೆಯ ನಂತರದಲ್ಲಿ ನನಗೆ ಸಿಕ್ಕಿದ ಅತ್ತೆಮನೆ ನನ್ನನ್ನು ಸಂಪೂರ್ಣ ಗಂಭೀರವಾಗಿಸಿತು. ನನ್ನ ಅಂತರ್ಮುಖತೆಯನ್ನು ಹೆಚ್ಚಿಸಿತು. ನನಗೆ ಬರವಣಿಗೆಯ ಅನಿವಾರ್ಯತೆ ಯನ್ನು ತಂದುಬಿಟ್ಟಿತು’.

ಆಮೇಲೆ ‘ಎರಡು ಮಕ್ಕಳೂ ಆಗಿ ಆ ಬಸಿರು ಬಾಣಂತನ ಮತ್ತು ಮಕ್ಕಳ ಸುಖವನ್ನು ನಾನು ಹನಿಬಿಡದೆ ಅನುಭವಿಸಿದೆ’ ಎನ್ನುವ ವೈದೇಹಿಗೆ ಆ ತಾಯ್ತನವು ಅವರ ಬದುಕಿನ ಅತ್ಯಂತ ಸುಖಗಳಲ್ಲಿ ಒಂದೆನಿಸಿದೆ. ಪ್ರತಿಭೆ, ಸಂವೇದನಾಶೀಲ ಮನಸ್ಸು, ಮೆದುಳಿನ ಮಡಿಲ ತುಂಬ ತುಂಬಿಕೊಂಡ ರಾಶಿ ಅನುಭವಗಳು ಮಿಡಿಯುವ ಒತ್ತಡ ಇವೆಲ್ಲವೂ ಹೊರಬರಲು, ಅದೂ ಚೆಲುವಾದ ಕತೆಗಳ ರೂಪು ತಳೆದು ಹೊರಬರಲು, ಒಬ್ಬ ಬಸಿರು ಹೊತ್ತಾಕೆ ಕೂಸಿನ ಬರವಿಗಾಗಿ ಕಾಯುವ ಹಾಗೆಯೇ ಕಾದರು ವೈದೇಹಿ.

ಅನುಭವಕ್ಕೆ ಕಾವು ಬೇಕು, ಕಾಯಲೂ ಬೇಕು. ಆಗಲೆ ಹದಗೊಂಡು ಸಿದ್ಧವಾದೀತು ಪರಿ–ಪಾಕ. ಮನದ ಒಳತೋಟಿಗೆ, ದುಗುಡಗಳಿಗೆ ಹೇಗಾದರೂ ಉಪಶಮನ ಕಂಡುಕೊಳ್ಳುವ ಹಂಬಲದಲ್ಲಿ ಬರೆಯಲು ಆರಂಭಿಸಿದ ವೈದೇಹಿಗೆ ಆಗ ತುಂಬ ಬೆಂಬಲ ಕೊಟ್ಟಿದ್ದು ಅವರ ಮಾವನವರು ಹಾಗೂ ಪತಿಯಾದ  ಶ್ರೀನಿವಾಸಮೂರ್ತಿಯವರು. ಈ ಪತಿ  ವೈದೇಹಿಯ ಬರಹದ ಪಯಣಕ್ಕೂ ಸಂಗಾತಿಯಾಗಿ ಒದಗಿರುವುದನ್ನು ಕಣ್ತುಂಬಿ ನೆನೆಯುವ ವೈದೇಹಿ ‘ಆತ ಸಜ್ಜನರಲ್ಲಿ ಸಜ್ಜನ’ ಅನ್ನುತ್ತಾರೆ.

ಪತಿಯ ಸಾಂಗತ್ಯದಲ್ಲಿ ವೈದೇಹಿ ಭಾವನಾತ್ಮಕ, ಬೌದ್ಧಿಕ ಹಾಗೂ ಸಾಂಸ್ಕೃತಿಕ ಅರಿವನ್ನು ವಿಸ್ತರಿಸಿಕೊಳ್ಳಲು ಆರಂಭಿಸಿದರು. ಸಾಹಿತ್ಯ, ಸಂಗೀತ, ನಾಟಕ, ಸಭೆ ಸಮಾರಂಭಗಳಿಗೆ ಕರೆದೊಯ್ಯುವ ಮೂಲಕ ಗಂಡನು ನೆರವನ್ನು ಒದಗಿಸಿದ್ದರೆ, ಶಿವಮೊಗ್ಗದಲ್ಲಿ  ಅವರು ನೆಲೆಸಿದ್ದಾಗ ಅಲ್ಲಿನ ಸಾಂಸ್ಕೃತಿಕ ವಾತಾವರಣ ಇವರಿಗೆ ಅಪಾರ ಮಾನಸಿಕ ಬೆಂಬಲವನ್ನು ಒದಗಿಸಿತು. ಅಡಿಗರು, ಕೆ.ವಿ. ಸುಬ್ಬಣ್ಣ, ಲಂಕೇಶರಂಥ ಪ್ರಸಿದ್ಧ ಲೇಖಕರ ಪರಿಚಯ, ಪ್ರೋತ್ಸಾಹಗಳು ವೈದೇಹಿಯವರ ಬರಹದ ಬದುಕಿಗೆ ಹೆಚ್ಚಿನ ಒತ್ತಾಸೆ, ಉತ್ಸಾಹ, ಶಕ್ತಿಯನ್ನು ನೀಡಿದವು.

ಅದರಲ್ಲೂ ಲಂಕೇಶ್ ಹಾಗೂ ಸುಬ್ಬಣ್ಣನವರ ಪ್ರೇರಣೆಯಿಂದಲೇ ವಿವಿಧ ಪ್ರಕಾರಗಳಲ್ಲಿ ತಮ್ಮ ಲೇಖನಿಯ ಪ್ರಯೋಗಗಳನ್ನು ನಡೆಸಲು ವೈದೇಹಿಗೆ ಸಾಧ್ಯವಾಯಿತು. ಕುಟುಂಬವೇ ಲೋಕವಾದ, ಅದರೊಳಗೇ ಬದುಕು ಬಟ್ಟೆಯನ್ನು ನೇಯುವ ಹೆಣ್ಣುಗಳ ಆ ದಿನದಿನದ ಜೀವನ ಪರಿಗಳನ್ನೇ ಸಜೀವವಾಗಿಸಿ ಚಿತ್ರಿಸುತ್ತಾ ಕತೆಗಳನ್ನು ಹೆಣೆದವರು ವೈದೇಹಿ. ಈ ಹೆಣ್ಣುಮಕ್ಕಳ ಬವಣೆಗಳಂತೆಯೇ ಅವರ ಚಿಕ್ಕ ಚಿಕ್ಕ ಸಂಭ್ರಮ, ಆಸೆ, ಕನಸುಗಳನ್ನು, ಅವರು ಅನುಭವಿಸುವ ಪುರುಷ ನಿರ್ಮಿತ ಕ್ರೌರ್ಯ–ಹಿಂಸೆಗಳು ಮಾತ್ರವಲ್ಲದೆ ಅವರವರೇ ಒಬ್ಬರಿಗೊಬ್ಬರು ಕ್ರೂರವಾಗಿ ಬಿಡುವ ಬಗೆಗಳೂ ತುಂಬ ಆಳವಾದ ಧ್ವನಿಗಳಲ್ಲಿ ಇವರ ಕತೆಗಳಲ್ಲಿ ಬಿತ್ತರವಾಗುತ್ತವೆ.

ಆ ಅನುಭವದ ನೂಲನ್ನು ವಿಶಿಷ್ಟ ಮನಶ್ಶಾಸ್ತ್ರೀಯ ಬಣ್ಣಗಳಲ್ಲಿ ಅದ್ದಿ ತಿದ್ದಿ, ತೀಡಿ ಸೊಗಸಾದ ಚಿತ್ತಾರಗಳೊಂದಿಗೆ ಕತೆಯಾಗಿಸುತ್ತಾರೆ ವೈದೇಹಿ. ಆರಂಭ ಕಾಲದಲ್ಲಿ ಅವರ ಕಥನ ಸಾಹಿತ್ಯವನ್ನು ‘ಸ್ತ್ರೀ ಲೋಕದ ವಿಭಿನ್ನ ರೀತಿಯ ಅನಾವರಣ’ ಎಂದು ಅರ್ಥೈಸುವುದು ಪ್ರಚಾರದಲ್ಲಿತ್ತು. ‘ಗಿಡಮರ ಬಳ್ಳಿ’ (1974), ‘ಅಂತರಂಗದ ಪುಟಗಳು’ (1984) ಹಾಗೂ ‘ಗೋಲ’ (1986) ಸಂಕಲನಗಳಲ್ಲಿ ಒಂದು ಕಡೆ ನವ್ಯ ಸಾಹಿತ್ಯದ ಉತ್ಕೃಷ್ಟ ಮಾದರಿಗಳ ಮಾನಸಿಕ ಪ್ರಭಾವ, ಮತ್ತೊಂದು ಕಡೆ ಆ ಪ್ರಭಾವದಿಂದ ಬಿಡಿಸಿಕೊಳ್ಳುತ್ತ ತನ್ನತನವನ್ನು ಹುಡುಕುವ  ಯತ್ನ–ಇವೆರಡನ್ನೂ ಕಾಣಬಹುದು.

ಸ್ತ್ರೀ ಲೋಕದ ಅನುಭವವೆಂದರೆ ಅದು ಕೇವಲ ಸ್ತ್ರೀಯರದಲ್ಲ, ಅವರು ತಮಗಾಗಿ ತಮ್ಮಿಚ್ಛೆಯಿಂದ ರೂಪಿಸಿಕೊಂಡದ್ದೂ ಅಲ್ಲ. ತಮ್ಮನ್ನು ಬಲವಾಗಿ ಆವರಿಸಿರುವ ತಿದ್ದುವ, ನಿಯಂತ್ರಿಸುವ ಗಂಡಾಳ್ತನದ ಪರಿಸರದೊಳಗೆ ಹೀಗೇ ಇಂತಿಷ್ಟೆಂದು ತಮ್ಮ ಪಾಲಿಗೆ ಬಂದದ್ದನ್ನು ಹೆಂಗಸರು ಉಣ್ಣುತ್ತಾರೆನ್ನುವ ಅರಿವು ಹೆಚ್ಚಿದಂತೆ, ವೈದೇಹಿಯವರು ತಾವು ಚಿತ್ರಿಸುತ್ತಿರುವುದು ಪುರುಷರ ಬದುಕನ್ನೂ ಹೌದು ಮತ್ತು ಅವರು ತಮಗಾಗಿಯೂ ಸ್ತ್ರೀಯರಿಗಾಗಿಯೂ ಚಾವಡಿ– ಅಡಿಗೆಮನೆಗಳಲ್ಲಿ ವಿಭಜಿಸಿ ಕಟ್ಟಿ ಬಾಳಿಸುತ್ತಿರುವ ಬದುಕಿನ ಬಗೆ ಇದು ಎಂಬುದನ್ನು ಕಾಣಿಸುವುದು ಮುಖ್ಯವಾಯಿತು. ಆಗ ಅವರು ಉದ್ದೇಶವಿಲ್ಲದಿದ್ದರೂ ಸ್ತ್ರೀವಾದಿಯಾಗಿದ್ದರು.

’ಸಮಾಜಶಾಸ್ತ್ರಜ್ಞೆಯ ಟಿಪ್ಪಣಿಗೆ’ (1991) ಎಂಬ ಕಥಾ ಸಂಕಲನ ಹೀಗೆ ಜಗತ್ತಿನ ಒಳಗಿನ ಅನ್ಯಾಯಗಳನ್ನು ಸಮಾಜಕ್ಕೆ ಕನ್ನಡಿ ಹಿಡಿಯುವ ಮೂಲಕ ತೋರಿಸುವ ಸೂಕ್ಷ್ಮವಾದ ಭಾಷಾ ತಂತ್ರಗಳ ಅರಿವನ್ನು ವೈದೇಹಿ ಗಳಿಸಿಕೊಂಡ ಹಂತವನ್ನು ಸೂಚಿಸುತ್ತದೆ. ಈ ಅವಧಿಯೇ ವೈದೇಹಿಯವರ ಸೃಜನಶೀಲತೆ ತುಂಬ ತೀವ್ರಗೊಂಡ ಅವಧಿ. ‘ಬಿಂದುಬಿಂದಿಗೆ’ ಕವನ ಸಂಕಲನ (1990) ‘ಅಸ್ಪೃಶ್ಯರು’ ಕಾದಂಬರಿ (1992) ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ (1984) ‘ಸೇಡಿಯಾಪು ನೆನಪುಗಳು’, ‘ಮಲ್ಲಿನಾಥನ ಧ್ಯಾನ’,  ‘ಜಾತ್ರೆ’ ಮುಂತಾದ ಬಗೆಬಗೆಯ ರಚನೆಗಳನ್ನು ಈ ಹಂತದಲ್ಲಿ ವೈದೇಹಿ ಹೊರತಂದರು. ಅನುವಾದಗಳು, ಮಕ್ಕಳ ನಾಟಕಗಳು ಇದರಲ್ಲಿ ಸೇರುತ್ತವೆ.

2000 ದಶಕದಿಂದ ಈಚೆಗೆ, ವೈದೇಹಿಯವರು ಹೊಸ ರಚನೆ ತಂತ್ರಗಳ ಪ್ರಯೋಗವನ್ನು ವಿವಿಧ ಪ್ರಕಾರಗಳಲ್ಲಿ ಮುಂದುವರೆಸಿದ್ದು ಈ ರಚನೆಗಳಲ್ಲಿ ಮಹಿಳೆಯ ಸ್ವಂತತನವೊಂದು ನಿಧಾನವಾಗಿ ಆವಿಷ್ಕಾರಗೊಳ್ಳುತ್ತಾ ಗಟ್ಟಿಗೊಳ್ಳುತ್ತಾ ಬಂದಿದೆ. ‘ಅಮ್ಮಚ್ಚಿಯ ನೆನಪು’ (2000) ‘ಕ್ರೌಂಚ ಪಕ್ಷಿಗಳು’ (2005) ‘ಮುಂತಾದ ಕೆಲಪುಟಗಳು’ (2004) ಇತ್ಯಾದಿ ಬರಹಗಳಲ್ಲಿ ಹಾಗೂ ‘ಮೇಜು ಮತ್ತು ಬಡಗಿ’ (2007) ಎಂಬ ಲೇಖನ ಸಂಗ್ರಹದಲ್ಲಿಯೂ ವೈದೇಹಿ ಹೆಣ್ತನ ಎನ್ನುವುದರ ತಮ್ಮದೇ ಆದ ವಿಶ್ಲೇಷಣೆಯನ್ನು ಪ್ರತಿಪಾದಿಸುವುದನ್ನು ಕಾಣಬಹದು.

ಕಳೆದ ನಾಲ್ಕೂವರೆ ದಶಕಗಳ ಅವಧಿಯಲ್ಲಿ ವೈದೇಹಿ ಸಾಹಿತ್ಯ, ಸಂಸ್ಕೃತಿಗಳೊಳಗಿನ ಮಹಿಳೆಯ ಅಸ್ತಿತ್ವ, ಅಸ್ಮಿತೆ, ಅವಳ ಅಮೂಲ್ಯ ಜೀವನಾನುಭವವನ್ನು ಮೌಲಿಕಗೊಳಿಸುವ ನಿರಂತರ ಯತ್ನದಲ್ಲಿ ತೊಡಗಿರುವ, ಅಪರೂಪದ ಬರಹ ಶಕ್ತಿಯನ್ನು ಜೀವಂತವಾಗಿ ಉಳಿಸಿಕೊಂಡಂಥ ಲೇಖಕಿ. ಅವರ ಚಿಂತನೆ, ವಿಚಾರಗಳು ಅನೇಕ ತಲೆಮಾರಿನವರನ್ನು ವಿಚಾರಕ್ಕೆ ತೊಡಗಿಸುತ್ತವೆ. ಮೊನಚು ದೇಸೀ ತನದಿಂದಲೂ ಹೆಣ್ಣಿನ ವಾತ್ಸಲ್ಯದ, ನಗೆಗಾರಿಕೆಯ ಗುಣಗಳಿಂದಲೂ ಅವು ಹೊಮ್ಮುತ್ತವೆ ಎಂಬುದನ್ನು ಗಮನಿಸಬೇಕು.

ಮರ್ಯಾದೆ ತೆಗೆಯುವ ಪುರುಷನಿಂದ ರಕ್ಷಣೆ ಪಡೆಯಲು ಮತ್ತೊಬ್ಬ ಪುರುಷನೇ ಹೆಣ್ಣಿಗೆ ಕಾವಲಾಗಿರುವ ನಮ್ಮ ಸಮಾಜದಲ್ಲಿನ ವಿರೋಧಾಭಾಸಗಳ ಬಗ್ಗೆ ತುಂಬ ಗಂಭೀರವಾಗಿ ಹಾಗೂ ಅಷ್ಟೇ ಹಾಸ್ಯದಿಂದ ವೈದೇಹಿ ಹೇಳುತ್ತಾರೆ: ‘ಪುರುಷನೆಂಬವ ಹಾಗೆ ನೋಡಿದರೆ ವಿರೋಧಾಭಾಸಗಳ ಮೊತ್ತ. ಹಾಯುವವನೂ ಅವನೇ  ಕಾಯುವವನೂ ಅವನೇ. ಮೊನ್ನೆ ಸುರತ್ಕಲ್‌ನಲ್ಲಿ ಘಟನೆ ಆಯಿತಲ್ಲ. ಹೆಂಗಸರೇ ಎಲ್ಲ ಸೇರಿ ಒಬ್ಬ ಧೂರ್ತನನ್ನು ಚಚ್ಚಿ ಹಾಕಿದ ಘಟನೆ. ಇಂತಹ ಪುರುಷರ ವಿರುದ್ಧ ಸತ್ಯವಾಗಿ ನೋಡಿದರೆ ರಿವೋಲ್‌್ಟ ಮಾಡಬೇಕಾದವರು ಗಂಡಸರು, ಗಂಡು ಸಂತತಿಗೇ ಅವಮಾನ ತರುವ ಗಂಡಸರ ವಿರುದ್ಧ.

ದುರದೃಷ್ಟವಶಾತ್‌ ಅವರು ಕಾವಲಿಗೆ ನಿಂತಾರು ಹೊರತು ತಮ್ಮ ವಿರುದ್ಧ ತಾವು ಪ್ರತಿಭಟಿಸುವುದಿಲ್ಲವಲ್ಲ! ಹಾಗೆ ಪ್ರತಿಭಟಿಸಿ ಪ್ರಜ್ಞಾವಂತ ವಾತಾವರಣ ಮೂಡಿಸುವರಾದರೆ ಕಾವಲು ಯಾಕೆ ಬೇಕು? ಎಲ್ಲ ವಿಚಿತ್ರವಾಗಿ ಕಾಣುತ್ತದೆ’. ‘ಹೆಣ್ಣು ಎಂದಿನಿಂದಲೂ ತನ್ನನ್ನು ತಾನು ಅಡಗಿಸಿಕೊಳ್ಳುತ್ತ ಬಂದಿರುವುದು ಹಾಡು, ಹಸೆ, ಕಸೂತಿ, ಕತೆಗಳಲ್ಲಿ. ಆಕೆ ಒಂದು ಹಕ್ಕಿಯ ಚಿತ್ರವನ್ನು ಬಣ್ಣದ ನೂಲಿನಲ್ಲಿ ತುಂಬಿಸುವುದು ಎಂದರೆ ಹಾಗೆಮಾಡುತ್ತ ತನ್ನೊಳಗೆ ಸಂಚರಿಸುತ್ತ ತನ್ನದೇ ಆದ ತರ್ಕ, ವಿತರ್ಕ, ಒಳನೋವು ನಲಿವುಗಳನ್ನೆಲ್ಲಾ ಧ್ಯಾನಿಸುವ ಪ್ರಕ್ರಿಯೆಯಾಗಿರುತ್ತದೆ.

ಅಕ್ಷರದ ಲೋಕದಿಂದ ಬಹುಕಾಲ ದೂರವುಳಿದ ಹೆಣ್ಣಿಗೆ ಈ ಅಮೂರ್ತ, ಮೂರ್ತತೆಗಳ ನೇಯ್ಗೆಯಾದ ಹೆಣಿಗೆ, ಕಸೂತಿ, ಹಾಡುಗಳೇ ತಾಣಗಳು. ಬರಹ ಹೆಚ್ಚು ತಲುಪುವ ಮತ್ತು ತಲುಪಿಸಬೇಕಾದ ಕಲೆಯಾದ್ದರಿಂದ ಬರಹದೊಳಗೆ ಅವಳ ಪ್ರದೇಶ ತಡವಾಯಿತು’ ಎನ್ನುವಾಗ ವೈದೇಹಿ ಸಾಹಿತ್ಯದಲ್ಲಿ ಹೆಣ್ಣು ತನ್ನನ್ನು ತೊಡಗಿಸಿಕೊಳ್ಳುವುದಕ್ಕೂ ಅವಳ ಪಾರಂಪರಿಕ ಕರಕುಶಲತೆಗಳು ಹಾಡುಗಾರಿಕೆಗಳಲ್ಲಿ ತೊಡಗುವುದಕ್ಕೂ ಇರುವ ಅಂತರವನ್ನು ಸ್ಪಷ್ಟವಾಗಿ ಸೂಚಿಸುತ್ತಾರೆ.

‘ಗಂಡಸರು ತಮ್ಮನ್ನು ತಾವೇ ಪ್ರಧಾನರೆಂದು ಭ್ರಮಿಸುತ್ತಾ ತಮ್ಮ ನಿಜವಾದ ಮಹತ್ವ ಯಾವುದೆಂಬುದನ್ನು ಮರೆತು ಮೆರೆಯುತ್ತಾ, ಹೆಂಗಸರೂ ತಮ್ಮನ್ನು ಹಾಗೆಯೇ ದಡ್ಡ ಅಹಂಕಾರ, ಕೆಟ್ಟ ಯಜಮಾನಿಕೆಗಳು ನಿಜವಾದ ಆತ್ಮಾಭಿಮಾನದ ಸತ್ವಕ್ಕಿಂತ ತುಂಬ ದೂರವಾದದ್ದು. ಆದ್ದರಿಂದ ಅಂಥ ಸತ್ವವನ್ನು ಗಳಿಸಿಕೊಳ್ಳುವ ಗತ್ತನ್ನು ನಿಜವಾಗಿ ಗಂಡಸರು ಪಡೆದದ್ದೇ ಆದರೆ ಅವರು ಸ್ತ್ರೀಕುಲಕ್ಕೆ ನಿಜವಾದ ಮಿತ್ರರಾಗುತ್ತಾರೆ. ಹಣ ಸಂಪಾದನೆಯಿಂದ ಆರ್ಥಿಕವಾಗಿ ನಾವು ಸ್ವಾವಲಂಬಿಗಳಾಗಬಹುದು.

ಲೌಕಿಕ ಸುಖ, ಅನುಕೂಲಗಳೂ ಹೆಚ್ಚಬಹುದು. ಆದರೆ ಅದರಿಂದ ಅಸಮಾನತೆ ತೊಲಗುವುದೆಂಬ ಭ್ರಮೆ ಬೇಕಿಲ್ಲ, ಲೌಕಿಕ ಕಾನೂನಿನ ದೃಷ್ಟಿಯಿಂದ ಸ್ತ್ರೀ ಪುರುಷರು ಸರಿಸಮಾನರೇ. ಆದರೆ ತಾತ್ವಿಕವಾಗಿ ಅಲ್ಲ. ಅದರಲ್ಲೂ ಪುರುಷರೇ ಸ್ತ್ರೀಯರಿಗೆ ಸಮರಲ್ಲ’. ಹೆಣ್ಣುತನ ಎನ್ನುವುದನ್ನು ಸರ್ವಾಂಗೀಣವಾದ ಸ್ತ್ರೀಸತ್ವದ ವಿಕಸಿತ ಸ್ಥಿತಿ ಎಂದು ಗ್ರಹಿಸುವ ವೈದೇಹಿ ಸ್ತ್ರೀಯು ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯಗಳೆರಡರಲ್ಲೂ  ಪುರುಷನಿಗಿಂತ ಮೇಲಾಗಿರುತ್ತಾಳೆ. ಆದರೆ ಅದನ್ನು ಒಪ್ಪಲಾರದ ಪುರುಷರೇ ಎಲ್ಲ ಸಮಸ್ಯೆಗಳಿಗೂ ಮೂಲ ಎನ್ನುತ್ತಾರೆ.

ಅಂಥವರ ಭ್ರಮಿತ ವಿಚಾರಗಳನ್ನೇ ತಾವೂ ನಂಬಿ ನಡೆಯುವ ಬದಲಾಗಿ ಮಹಿಳೆಯರು ತಮ್ಮೊಳಗಿನ ಸತ್ವವನ್ನು ಕಂಡುಕೊಳ್ಳುವುದರಲ್ಲೇ ತಮ್ಮ ವ್ಯಕ್ತಿತ್ವವನ್ನೂ ಬಿಡುಗಡೆಗೊಳಿಸಿಕೊಳ್ಳಬೇಕಿದೆ ಎನ್ನುತ್ತಾರೆ. ಹೆಣ್ಣಿನ ತಾಯ್ತನದ ಜೀವಶಾಸ್ತ್ರೀಯ ಸಾಮರ್ಥ್ಯಕ್ಕಷ್ಟೇ ಹೆಣ್ತನವನ್ನು ನಿರ್ವಚಿಸುವುದನ್ನು ಬಿಟ್ಟು, ಮಾತೃತ್ವವೆನ್ನುವ ಆಂತರಿಕ ವಿಕಸಿತ ಶಕ್ತಿಯೆಂದು ಅದನ್ನು  ಅರ್ಥ ಮಾಡಿಕೊಂಡರೆ, ಅದು ಪುರುಷನನ್ನೂ ಜಗತ್ತನ್ನೂ ಕಾಯುತ್ತಲೇ ಬಂದಿರುವ ಅಂತಃಕರಣ ಹಾಗೂ ಶಾಂತಿಯ ಲಲಿತಾಶಕ್ತಿ ಎನ್ನುವುದು ಅರಿವಾಗಬಲ್ಲದು. ಹೀಗೆ ವೈದೇಹಿ ಆಧ್ಯಾತ್ಮಿಕ ಸ್ತರಕ್ಕೇರಿದ ಸ್ತ್ರೀಸತ್ವದಿಂದಲೇ ಜಗತ್ತಿನ ಸ್ತ್ರೀಯರದು ಮಾತ್ರವಲ್ಲ ಪುರುಷರದೂ ವಿಮೋಚನೆ ಸಾಧ್ಯವೆನ್ನುವ ವಿಶಿಷ್ಟ ಸ್ತ್ರೀಮಾನವತಾ ವಾದಿಯಾಗಿದ್ದಾರೆ.

ಸ್ತ್ರೀವಾದದ ಸೈದ್ಧಾಂತಿಕ ಚರ್ಚೆಗಳು, ಮಹಿಳಾ ಚಳವಳಿ ಯಾವುದನ್ನೂ ನೇರವಾಗಿ ತಮ್ಮ ನಿಕಟಕ್ಕೆ ತೆಗೆದುಕೊಂಡವರಲ್ಲ ವೈದೇಹಿ. ಆ ರೀತಿಯ ತಲೆಪಟ್ಟಿಯಡಿ ತಮ್ಮನ್ನು ಗುರುತಿಸಿಕೊಳ್ಳಲೂ ಬಯಸಿದವರಲ್ಲ. ಹಾಗಿದ್ದರೂ ಆ ಚಿಂತನೆ, ಹೋರಾಟಗಳ ಸಾರಪ್ರಭಾವವನ್ನು ಅವರ ಬರಹ ಹಾಗೂ ಚಿಂತನೆಗಳಲ್ಲಿ ಕಾಣುತ್ತೇವೆ. ಆದರೆ ಸ್ತ್ರೀಯರ ವಿಮೋಚನೆ ಎನ್ನುವುದನ್ನು ತೀರ  ಸ್ವಂತ ರೀತಿಯಿಂದ (ಒಂದು ರೀತಿ ಹಿಂದೂ ಸಾಂಪ್ರದಾಯಿಕ/ ಆಧ್ಯಾತ್ಮಿಕ ನಂಬಿಕೆಗಳಿಂದ) ಪುನಃ ರೂಪಿಸಿಕೊಂಡು ತಮ್ಮದನ್ನಾಗಿಸಿ ಅವರು ಪ್ರತಿಪಾದಿಸುತ್ತಾರೆ ಎನಿಸುತ್ತದೆ.

ಪಿತೃಪ್ರಧಾನ ಸಮಾಜದ ಒಳಗಿನದ್ದು, ಅಲ್ಲಿಯ ಪ್ರಚಲಿತ ಜೀವನ ಕ್ರಮದಲ್ಲೂ ತನ್ನದೊಂದು ಅಸ್ತಿತ್ವ, ಸ್ವಂತಿಕೆ, ಅಸ್ಮಿತೆಗಳನ್ನು  ಮಹಿಳೆ ಕಟ್ಟಿಕೊಳ್ಳುತ್ತಲೇ ಇರುವುದನ್ನು ಜಗತ್ತು ಗುರುತಿಸಬೇಕೆನ್ನುವುದನ್ನು ಪರೋಕ್ಷವಾಗಿ ಸೂಚ್ಯ ವಿಧಾನಗಳಿಂದ ಹಕ್ಕೊತ್ತಾಯಿಸುವುದು ಅವರ ವಿಧಾನವಾಗಿದೆ. ‘ಸ್ತ್ರೀ ಜೀವನ ದರ್ಶನ’ ಎಂದು ಇದನ್ನು ಕರೆಯಬಹುದಾದರೆ ಈ ಅಸ್ಮಿತೆ, ಸ್ವಂತಿಕೆಗಳೂ ಸ್ಥಾಪಿತ ತಾಣಗಳಲ್ಲಿ ಉಳಿದುಬಿಡದೆ, ಆ ಪರಿಮಿತಿಗಳನ್ನೂ ಮೀರಬಯಸುವುದು ಇಂಥ ದರ್ಶನವು ಸೂಚಿಸುವ ಮುಕ್ತತೆಯ ನೆಲೆಯೆನ್ನಬಹುದು.

ಸ್ತ್ರೀಯಾಗಿರುವ ಬಗ್ಗೆ ಹೆಮ್ಮೆಯನ್ನೂ ಅಭಿಮಾನವನ್ನು ಪಡುವ ವೈದೇಹಿ ಎಲ್ಲ ರೀತಿಯಿಂದಲೂ ಸ್ತ್ರೀಯರನ್ನೇ ಅವಲಂಬಿಸಿಯೇ ಬದುಕಬೇಕಾದ ಗಂಡಸರೇ ಪರತಂತ್ರದಲ್ಲಿರುವವರು ಎಂದು ಸೂಚಿಸುತ್ತಾರೆ. ಪ್ರೀತಿ, ತಾಯ್ತನ, ಕಾಮ, ಪೋಷಕ ಗುಣ ಕೊನೆಗೆ ಸೇವೆಯೂ ಹೆಣ್ಣಿನ ಸಹಜ ಲಕ್ಷಣವೇ ಆಗಿದ್ದು ಅವೆಲ್ಲವನ್ನೂ ಪರಾಧೀನವಾಗಿಸಲು, ದಮನಿಸಲು ಬಳಸುತ್ತಿರುವ ಲಿಂಗ ರಾಜಕಾರಣದ ವ್ಯವಸ್ಥೆಗೆ ವೈದೇಹಿ ಬರಹದ ಮೂಲಕ ತೋರುವ ಪ್ರತಿರೋಧದ ರೀತಿಯೆಂದರೆ, ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾದ ಸ್ತ್ರೀ ಸತ್ವಕ್ಕೆ ಘನತೆಯನ್ನು ನೀಡಿ ಅದನ್ನು ಮೌಲಿಕಗೊಳಿಸುವುದೇ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT