ಕಥೆ! ಸ್ತನ್ಯದಾಯಿನಿ, ಸಾಹಿತ್ಯಕ್ಕೊಂದೇ ಅಲ್ಲ, ನನಗೂ ನನ್ನಂಥ ಗ್ರಾಮೀಣ ಹಿನ್ನೆಲೆ ಇರುವವರಿಗೆಲ್ಲ. ಕಥೆ ಹೇಳುವವರು ಮಾತ್ರವಲ್ಲ ಆಲಿಸುವವರೂ ಧನ್ಯರು. ಈ ನಂದಾದೀವಿಗೆಯನ್ನು ನನ್ನ ಎದೆಯ ಬಟ್ಟಲಲ್ಲಿರಿಸಿದವರು ನೂರಾರು ಮಂದಿ, ಅವರ ಪೈಕಿ ಹಲವರು ನನ್ನ ಪೂರ್ವಜರೆನ್ನುವುದೇ ಅಭಿಮಾನದ ಸಂಗತಿ.

ಮೂರ್ತಸ್ವರೂಪದ ಶಾಲೆಗಳು ಭಯೋತ್ಪಾದಕರ ನೆಲೆಯಂತೆ ಭಾಸವಾಗುತ್ತಿದ್ದ ಆ ದಿವಸಗಳಲ್ಲಿ ಮನೆಯಲ್ಲಿದ್ದ ಅಸಂಖ್ಯಾತ ಹಿರಿಯರು ಕೇಳುವುದನ್ನು, ಆಲಿಸುವುದನ್ನು, ನಿದ್ದೆ ಬರಿಸುವುದನ್ನು, ಕನಸು-ಕನವರಿಕೆಗಳನ್ನು ಕಲಿಸಿದರು. ವೃದ್ಧರು ಜಗದ್ವಂದ್ಯರು. ಅಂಬೆಗಾಲಿನಿಂದ ನಡಿಗೆಯ ಪ್ರಥಮ ಪಾಠಕ್ಕೆ ಅದೇ ತಾನೆ ಬಡ್ತಿ ಪಡೆದಿದ್ದ ನಾವು ಕಣ್ಣುಬಿಟ್ಟು, ಪಿಳಿಪಿಳಿ ಕಣ್ಣುಬಿಟ್ಟು ನೋಡುತ್ತೇವೆ– ಮಣ್ಣಿನರಮನೆಯಲ್ಲಿ ಎಲ್ಲಂದರಲ್ಲಿ ವೃದ್ಧರು, ಅವರ ಪೈಕಿ ಒಂದಿಬ್ಬರು ಮುಪ್ಪಾನು ಮುದುಕರಿದ್ದರೆ ಇನ್ನೂ ಕೆಲವರು ಅದೇ ತಾನೆ ವೃದ್ಧಾಪ್ಯದ ಥಳಥಳ ಹೊಳೆಯುತ್ತಿದ್ದ ಹೊಸ್ತಿಲನ್ನು ಲೀಲಾಜಾಲವಾಗಿ ದಾಟಿದ್ದರು.

ಅವರೆಲ್ಲ ಕುಲುಕುಲು ನಗುತ್ತಿದ್ದರು, ಬಾಯಿ ತುಂಬ ಕಲಕಲ ಮಾತಾಡುತ್ತಿದ್ದರು, ತಮ್ಮ ಮಾತಿನ ಮಾಂತ್ರಿಕತೆಯಿಂದ ಇಲಿಯನ್ನು ಹುಲಿಯನ್ನಾಗಿಯೂ, ಹುಲಿಯನ್ನು ಇಲಿಯನ್ನಾಗಿಯೂ ಮಾರ್ಪಡಿಸುತ್ತಿದ್ದರು. ಕಾಲು ಕೆದರಿ ಜಗಳ ತೆಗೆಯದಿದ್ದರೆ ಮಾತಿಗೆಲ್ಲಿ ಕಿಮ್ಮತ್ತು ಬಂದೀತು! ನೋಡು ನೋಡುವಷ್ಟರಲ್ಲಿ ಕಾವ್ಯಗಂಧಿ ವಾಕ್ಕದನಗಳು ಸಂಭವಿಸಿ ಎಳೆಯರಿದ್ದ ನಮ್ಮನ್ನು ಪುಳಕಗೊಳಿಸುತ್ತಿದ್ದವು.

ಮನೆಯೊಂದೇ ಅಲ್ಲ, ಕೇರಿ ಊರು ದೇಶವನ್ನು ತಮ್ಮ ಮನೆಯೆಂದೇ ಭಾವಿಸಿದ್ದ ಅವರು ಮನುಕುಲಕ್ಕೆ ಲೇಸು ಬಯಸುವ ಶರಣೆಯರೇ ಸರಿ. ನಿಂತರೊಂದು ಕಥೆ, ಕುಂತರೊಂದು ಕವಿತೆ, ನಡೆದಾಡಿದರೆ ಮಹಾಕಾವ್ಯದಂತೆ ಭಾಸವಾಗುತ್ತಿದ್ದರು. ಅವರ ಪೈಕಿ ಕೆಲವರಿಗೆ ನಾವು ಮೊಮ್ಮಕ್ಕಳಾಗಿದ್ದರೆ ಇನ್ನೂ ಕೆಲವರಿಗೆ ಗಿರಿಮೊಮ್ಮಕ್ಕಳಾಗಿದ್ದೆವು. ನಮ್ಮನ್ನು ಎಲ್ಲಾ ಅರ್ಥದಲ್ಲಿ ಪೊರೆಯುವುದಕ್ಕೆ ಸಂಬಂಧಿಸಿದಂತೆ ಅವರ ನಡುವೆ ಆರೋಗ್ಯಕರ ಪೈಪೋಟಿ ಇತ್ತು.

ಉದಾಹರಣೆ ಕೊಡುವುದಾದರೆ ಜುಲುಮಿಯಿಂದ ತುತ್ತು ಮಾಡಿ ಉಣ್ಣಿಸುವುದರಲ್ಲಿ ನಿಂಗಮ್ಮಜ್ಜಿಯೂ, ತನ್ನ ದನಕರುಗಳೊಂದಿಗೆ ಕರೆದೊಯ್ದು ಹೊಲ ಮೇರೆಗಳಲ್ಲಿ ತಿರುಗಾಡಿಸುತ್ತಲೇ ಅಲ್ಲಲ್ಲಿದ್ದ ಗಿಡಮರಗಳನ್ನು, ಕಾರೆ ಬಿಕ್ಕಿಗಳಂಥ ತರಾವರಿ ಹಣ್ಣುಗಳನ್ನು, ವಿವಿಧ ಪಕ್ಷಿಗಳನ್ನು ಪರಿಚಯಿಸುವುದರಲ್ಲಿ ಸಿದ್ದಮ್ಮಜ್ಜಿಯೂ, ತಂದೆ ಅಕಾರಣಿಕವಾಗಿ ನೀಡುತ್ತಿದ್ದ ಶಿಕ್ಷೆಗಳಿಂದ ರಕ್ಷಿಸಲು ಅಭೇದ್ಯಕೋಟೆಯ ರೂಪದವತಾರವೆತ್ತುತ್ತಿದ್ದ ಗೌರಮ್ಮಜ್ಜಿಯೂ, ತನ್ನ ಗೊಂಗಡಿಯೊಳಗೆ ಬರಸೆಳೆದಪ್ಪಿಕೊಂಡು ತರಾವರಿ ಕಥೆಗಳನ್ನು ಹೇಳುತ್ತಿದ್ದ ಹಂಪಮ್ಮಜ್ಜಿಯೂ, ತನ್ನ ಕುಂಕಳಿಗೆ ತೊಡರುಗಾಲು ಹಾಕಿದೊಡನೆ ಮದ್ವಿಯಾಗಿದ್ರೆ ಮಕ್ಳು ದನ ಕಾಯ್ಲಿಕ್ಕೋಯ್ತಿದ್ವು, ನಡ್ಕೊಂಡು ಬಾರಲೋ ಎಂದು ಬೆನ್ನಿಗೆ ಹುಸಿ ಏಟುಗಳೆಂಬ ಬೆಂಡು ಬತ್ತಾಸು ತಿನ್ನಿಸುತ್ತಲೂ, ಮೇಲ್ಗೇರಿ ಕೆಳಗೇರಿಗಳಲ್ಲಿ ದೇವರು ದೆವ್ವಗಳನ್ನು ಅಮಾಸ್ಸೆ ಹುಣ್ಣುಮೆಗಳಲ್ಲಿ ತೋರಿಸುತ್ತಿದ್ದ ನಾಗಮ್ಮಜ್ಜಿಯೂ....

ಹೆಣ್ಣಜ್ಜಿಗಳ ಅಜ್ಜಿ ಹಂಪಮ್ಮಜ್ಜಿಯೂ, ಅಪ್ಪನ ಅಜ್ಜಿ ನಾಗಮ್ಮಜ್ಜಿಯೂ! ಇವರೀರ್ವರು ವೃದ್ಧಾಪ್ಯಕ್ಕೆ ಸಂಬಂಧಿಸಿದ ವಸ್ತುಸಂಗ್ರಹಾಲಗಳಂತೆಯೂ, ಯಮನಿಗೆ ಸೋಲುಣ್ಣಿಸಿದವರಂತೆಯೂ, ಕಥಾಸರಿತ್ಸಾಗರಗಳಂತೆಯೂ ಇದ್ದರು. ತಾನು ಹತ್ತಾರು ಪಿಲೇಗುಗಳನ್ನೂ ನೂರಾರು ವಾಂತಿಬೇಧಿಗಳನ್ನು ಗೆದ್ದಿರುವುದಾಗಿ ಒಬ್ಬ ಅಜ್ಜಿ ಹೇಳಿದರೆ ಅದಕ್ಕೆ ಪ್ರತಿಯಾಗಿ ಇನ್ನೊಂದು ಅಜ್ಜಿ ತಾನು ಅರವತ್ತೆಪ್ಪತ್ತು ಬರಗಾಲಗಳನ್ನು ಕಂಡಿರುವುದಾಗಿಯೂ, ಈ ಪರಪಂಚದಲ್ಲಿರುವ ಹಳ್ಳಕೊಳ್ಳಗಳನ್ನು ಎಂಜಲು ಮಾಡಿರುವುದಾಗಿಯೂ ಹೇಳಿಕೊಂಡು ಇರದಿದ್ದ ಮೀಸೆ ತಿರುವುತ್ತಿತ್ತು.

ಯಾರಾದರೂ ‘ಬೇ ಯವ್ವಾ ನೀನುಟ್ಟಿ ಏಸು ವರ್ಸಾದ್ವು’ ಎಂದು ಕೇಳಿದರೆ ಅವು ಒಂದೊಂದು ಸುಕ್ಕಿಗೆ ಅತ್ತೊರ್ಸದಂಗ ನೀನೇ ಲೆಕ್ಕಾಕ್ಕೊ ಎಂದು ತಮ್ಮ ಸರೀರದ ಸುಕ್ಕುಗಳನ್ನು ಪಣಕ್ಕಿಡುತ್ತಿದ್ದವು. ತಂಗಳಳಸಲುಂಡು, ಬಿಸಿಲು ಮಳೆ ಚಳಿಗಳನ್ನು ಹೊದ್ದು ಸದಾ ರಣವೀಳ್ಯೆ ಕೈಯಲ್ಲಿ ಹಿಡಿದಿರುತ್ತಿದ್ದ ಅವು ಪುಂಖಾನುಪುಂಖವಾಗಿ ಹೇಳುತ್ತಿದ್ದ ಕಥೆಗಳೋ ಸಾವಿರಾರು, ಅದೂ ಹ್ಹು, ಆಮ್ಯಾಲೆ ಎಂಬ ಸಹಪಲ್ಲವಿಗಳಿದ್ದರೆ ಮಾತ್ರ. ಅವೆರಡೂ ಅಜ್ಜಿಗಳು ಸಾವಿರ ಕಥೆಗಳ ಲೇಡಿ ಸರ್ದಾರ್ಗಳೇ ಸರಿ.

ಉಂಡುಗಿಂಡು ತೊಂಬಲ ಹದಮಾಡಲೆಂದು ಕಲ್ಡಬತ್ತಗಳನ್ನು ತಮ್ಮತಮ್ಮ ಕೈಗಳಲ್ಲಿ ಹಿಡಿದು ಕುಟ್ಟಲಾರಂಭಿಸಿದೊಡನೆ ಆ ಸದ್ದನ್ನು ಪಾಂಚಜನ್ಯದ ಮೊಳಗೆಂದೇ ಭಾವಿಸಿ ಕೇರಿಯ ಸಂಕಥಾ ಸಂತ್ರಸ್ತರು ಕ್ರಿಯಾಕಲಾಪಗಳ ಸಹಿತ ಓಡೋಡಿ ಬಂದು ಅಚಂದ್ರಾರ್ಕ ರೀತಿಯಲ್ಲಿ ಕುಳಿತು ಜವಾರಿ ಮಾತುಗಳನ್ನಾರಂಭಿಸಿದರೆಂದರೆ ಅದೊಂದು ಅಪೂರ್ವ ಜುಗಲ್ಬಂಧಿ. ನನ್ನ ಮೊಮ್ಮಗನ ಸೂಳೆಯೇ ಎಂದು ಅದನ್ನಿದು ಸಂಬೋಧಿಸಿತೆಂದರೆ ಅದು ಯಾವುದೋ ಒಂದು ಕಥೆಯ ಆರಂಭದ ಚರಣವೇ ಸರಿ. ಅದೂ ಹ್ಹೂಗುಟ್ಟುವವರನ್ನು ನಿಗದಿಪಡಿಸಿದ ಬಳಿಕವೆ.

ಒಂದೂರಾಗ ಹಂಪಮ್ಮಜ್ಜಿಯಂಥ ಒಂದು ಮುದೇದಿತ್ತಂತೆ, ಅದರ ಗಂಡೆಂಬೋ ಗಂಡ ಬೇ ನಿನ್ ಮದ್ವಿಯಾಗಿ ನೂರ್ ವರ್ಸಾದ್ವು, ತೊಟ್ಲು ಕಟ್ಲಿಲ್ಲಲ್ಲಾ ಎಂದನಂತೆ, ಅದಕ ಆ ಮುದೇಕಿ ಅದಕ್ಯಾಕ ಯಸನ ಮಾಡ್ತಿ, ನಾಳೀ ಹೊತ್ಗೆ ಗಂಡ್ಕೂಸ್ನ ಹಡ್ದು ನಿನ್ ಕೈಗೆ ಕೊಡಲಿಲ್ಲಾಂದ್ರ ನಾನಪ್ಪಗೆ ಹುಟ್ಟಿದ್ಮಗಳೇ ಅಲ್ಲಾಂತ ಸಪತ ಮಾಡಿದ್ಳಂತೆ, ಹಂಪಮ್ಮಜ್ಜಿ ಬೊಸ್ರಾಗಿದ್ದೂ ತಡಾಗ್ಲಿಲ್ಲ, ಒಂಭತ್ಗಿಂಗ್ಳು ತುಂಬಿದ್ದೂ ತಡಾಗ್ಲಿಲ್ಲ, ಮಾರನೆ ದಿವ್ಸ ಇಂಥೆಂಭೋ ಹೊತ್ಗೆ ಬ್ಯಾನೆ ತಿನ್ಲಾಕ ಹತ್ತಿದ್ದೂ ತಡಾಗ್ಲಿಲ್ಲ. ಅದನ್ನು ಕೇಳಿ ಕೊಕ್ಕೊಕ್ಕ ನಗಾಡುತ್ತು ಉಪ್ಪಾರ ಹುಲಿಗೆವ್ವ ಹಂಪಮ್ಮಜ್ಜಿ ಅಡವಣ್ಗಿನ ನೀನೆ ಮಾಡ್ದಿ ಏನಬೇ ಎಂದು ಅಡ್ಡ ಕ್ವೊಚ್ಚೆನ್ನು ಹಾಕಿದಳು ಎಂದಿನಂತೆ.

ಅದಕ್ಕೆಂಥದ್ದೋ ಅಶ್ಲೀಲ ಉತ್ತರ ಬಟವಾಡೆ ಮಾಡಿದಾದ ಬಳಿಕ ನಾಗಮ್ಮಜ್ಜಿ ಕಥೀನ ಮುಂದುವರೆಸಿತು. ಬೊಸುರಿ ನೋವು ತಿಂದ್ಳೂ ತಿಂದ್ಳು, ಹುಣ್ವಿ ಹೋಗಿ ಅಮಾಸ್ಸೆ ಬಂತು, ಅಮಾಸ್ಸೆ ಕತ್ಲಾಗ ಕೂಸು ದೊಬಕ್ಕಂತ ಭೂಮಿ ಮ್ಯಾಲ ಬಿತ್ತು, ಬಾಣಂತಿ ನೋಡ್ತಾಳೆ ಕೂಸಿಗೆ ಗೇಣುದ್ದ ಮೀಸೆ, ಮೊಳವರೆ ಗಡ್ಡ. ಅದು ಯವ್ವೋ ನಾನು ಅಂಬ್ರಾವತಿಗೆ ಹೋಗೋದೈತಿ, ಅಲ್ಲಿರೋ ರಾಜ್ಕುಮಾರೀನ ಮದ್ವಿಯಾಗೋದೈತಿ. ಲಗುಲಗೂನ ಅಡ್ಗೆ ಮಾಡಿ ಬುತ್ತಿ ಕಟ್ಕೊಡು ಅಂತಂತೆ, ಕೇಳಿದವರು ನಗಾಡದೆ ಸುಮ್ಮನಿರಲಾದೀತೆ! ನಿಲುವಂಜಿ ಚವುಡವ್ವ ನಿಂದೊಳ್ಳೆ ಕಥಿ, ಹುಟ್ಟುತ್ಲೆ ಕೂಸಿಗೆ ಮೀಸೆ ಗಡ್ಡಾನ ಸ್ರುಸ್ಟಿಸೋದು ಸರಿ ಯ್ಯೋನು? ಎಂದು ಕ್ವೆಚ್ಚನ್ ಹಾಕಿದಳು.

ಅದಕ್ಕಿದ್ದು ನಾಗಮ್ಮಜ್ಜಿ ತೊಂಬಲವನ್ನು ಬಲದವಡೆಯಿಂದ ಎಡದವಡೆಗೆ ತಳ್ಳಾಡಿ ಈ ನನ್ ಬೀಗ್ತಿ ನಿನ್ನೆ ಹೇಳ್ದ ಕಥೀಲಿ ಬ್ರೆಮ್ಮರಾಕ್ಸಸನಿಂದ ಕಾಪಾಡ್ಲಿಕ್ಕೆ ರಾಜ್ಕೊಮಾರ್ನ ಕುಂಬಳಕಾಯೀಲಿ ಬಚ್ಚಿಟ್ಲೂಂದ್ರ ನಾನ್ಯಾಕ ಕೂಸಿನ ಮೊಕಕ್ಕ ಮೀಸೆ ಗಡ್ಡಾನ ಮುಡುಸಬಾರ್ದು ಎಂದು ಪಕಪಕ ನಗಾಡಿತು. ಅವರಿಬ್ಬರೂ ಯಾವುದೇ ಅಡುಗೂಲಜ್ಜಿಯರಿಗಿಂತ ಕಡಿಮೆ ಇರಲಿಲ್ಲ, ಅವರು ಪೈಪೋಟಿಯಿಂದ ಪುಂಖಾನುಪುಂಖ ಕಥೆಗಳನ್ನು ಸೃಷ್ಟಿಸುತ್ತಿದ್ದರು.

ಒಂದೊಂದು ಕಥೆಯಲ್ಲಿ ತರಾವರಿ ಲೋಕಗಳನ್ನು ಅಳವಡಿಸುತ್ತಿದ್ದರು, ಮರಗಿಡಗಳನ್ನೊಂದೇ ಅಲ್ಲದೆ ಕಾಗಕ್ಕ ಗುಬ್ಬಕ್ಕಗಳಿಗೆ ವ್ಯಕ್ತಿತ್ವವನ್ನು ಆರೋಪಿಸುತ್ತಿದ್ದರು. ಕೇಳಿಸಿಕೊಂಡ ನಮ್ಮೊಳಗೂ ಅವು ಮರುಸೃಷ್ಟಿಗೊಳ್ಳುತ್ತಿದ್ದವು, ಮರುನಿರೂಪಿಸೆಂದು ನಮ್ಮನ್ನು ಪೀಡಿಸುತ್ತಿದ್ದವು, ಆಜ್ಞೆಯನ್ನು ಪಾಲಿಸದಿದ್ದರೆಲ್ಲಿ ಅವುಗಳು ನಮ್ಮನ್ನು ಸಾಯಿಸುವವೋ ಎಂದು ಹೆದರಿಯೋ, ಗೆಳೆಯರೆದುರು ನಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲೆಂದೋ ಶ್ರೋತೃಗಳನ್ನು ಹುಡುಕಿಕೊಂಡು ಅಲೆಯುತ್ತಿದ್ದೆವು.

ಕಥೆ ಹೇಳುವುದರಲ್ಲಿ ನಮ್ಮಪ್ಪ ಮುದುಕಿಯರಿಗಿಂತ ಭಿನ್ನನಿದ್ದ, ಆತ ಹೇಳುತ್ತಿದ್ದ ಕಥೆಗಳಿಗೆ ಅವುಗಳದ್ದೇ ಆದ ನೀತಿಸಂಹಿತೆ ಇರುತ್ತಿತ್ತು. ಅಲ್ಲದೆ ನಮ್ಮ ಬುದ್ಧಿಯನ್ನು ಒರೆಗೆ ಹಚ್ಚುವ ಖಚಿತ ತಾರ್ಕಿಕತೆ ಇರುತ್ತಿತ್ತು, ಆತ ಹೇಳಿದ್ದ ನೂರಾರು ಕಥೆಗಳ ಪೈಕಿ ಇನ್ನೂ ನೆನಪಿರುವ ಕಥೆ ಎಂದರೆ!

ಒಂದೂರಲ್ಲಿ ರಾಮ ಲಕ್ಷ್ಮಣ ಅಂತ ಅಣ್ಣತಮ್ಮ ಇದ್ದರು, ಅವ್ರು ತುಂಬಾ ಬಡವ್ರು, ಕೆಲಸಬದುಕು ಹುಡುಕಿಕೊಂಡು ಬೇರೆ ಊರಿಗೆ ಹೊರಟ್ರು, ದಾರೀಲಿ ಕತ್ಲಾತು, ಅವ್ರ ಪುಣ್ಯಕ್ಕೆ ಅಲ್ಲೇ ಒಂದು ಗುಡಿ ಇತ್ತು, ಅಲ್ಲೇ ರಾತ್ರಿ ಮಲಕ್ಕಂಡಿದ್ದು ಮುಂಜಾನೆ ಹೊಂಟರಾಯ್ತೆಂದು ನಿರ್ಧರಿಸಿದರು. ಗರ್ಭಗುಡೀಲಿ ಶಿವಲಿಂಗ ಇತ್ತಲ್ಲ, ಅಲ್ಲೇ ಬುತ್ತಿರೊಟ್ಟೀ ಉಂಡು ಮಲಕ್ಕಂಡ್ರು, ಒಂದೊತ್ತಿನಾಗ ಅಣ್ಣ ರಾಮಗ ಉಚ್ಚೆ ಜೋರಾತು, ಎದ್ದು ನೋಡಿದ, ಸುತ್ತ ಕತ್ಲು, ಹಂಗ ನಡಕಂತ ದೂರ ಹೋಗಿ ಉಚ್ಚೆ ಉಯ್ದ, ತಿರುಗಿ ಬರುವಾಗ್ಗೆ ಅವ್ನ ಕಾಲ್ಗೆ ಇಷ್ಟುದ್ದನೆ ಮುಳ್ಳು ಚುಚ್ತು, ಕುಂಟುತ್ತ ಬಂದು ಮಲಕ್ಕಂಡ.

ಸ್ವಲ್ಪ ಹೊತ್ತಾದ ಮ್ಯಾಲ ತಮ್ಮ ಲಕ್ಷ್ಮಣಗೆ ಉಚ್ಚೆ ಜೋರಾತು, ಎದ್ದು ನೋಡ್ತಾನೆ ಕತ್ಲಂದ್ರ ಕತ್ಲು, ಪುಕ್ಲು ಬೇರೆ, ಶಿವ್ಲಿಂಗದ ಮ್ಯಾಲ ಉಚ್ಚೆ ಉಯ್ದ, ತಿರುಗುವಾಗ್ಗೆ ಅವ್ನಿಗೊಂದು ವಜ್ರ ಸಿಕ್ತು, ಬೆಳಕಾದ ಮ್ಯಾಲ ತನ್ನಣ್ಣಗೆ ತೋರ್ಸಿದ್ರಾಯ್ತೂಂತ ಮಲಕ್ಕಂಡ. ಇಷ್ಟು ಹೇಳಿದ ಬಳಿಕ ಅಪ್ಪ ಹನಿಡ್ಯು ಸಿಕರೇಟು ಹಚ್ಚಿ ‘ಕಥೀನ ಕೇಳಿದ್ರಲ್ಲ, ಅವ್ನಿಗ್ಯಾಕ ಮುಳ್ಳು ಚುಚ್ತು, ಇವ್ನಿಗ್ಯಾಕ ವಜ್ರ ಸಿಕ್ತು’ ಎಂದು ಕೇಳಿದ. ಮೂರನೆ ತರಗತೀಲಿ ಓದುತ್ತಿದ್ದರೂ ಅದರ ತಳಬುಡ ಅರ್ಥವಾಗಲಿಲ್ಲ.

ಪುನಃ ಅಪ್ಪನೇ ಅದೇ ಸಮಯಕ್ಕೆ ಸರಿಯಾಗಿ ಪರಮೇಶ್ವರ ಪಾರ್ವತಿ ಆಕಾಶ ಮಾರ್ಗವಾಗಿ ಪ್ರಯಾಣ ಹೊರಟಿದ್ದರು, ಗುಡೀಲಿ ನಡೆದದ್ದನ್ನು ನೋಡಿ ಪಾರ್ವತಿಗೆ ಸಿಟ್ಟು ಬಂತು. ಭಯಭಕ್ತಿಯಿಂದ ದೂರ ಹೋಗಿ ಉಚ್ಚಿ ಒಯ್ದ ಅಣ್ಣನ ಕಾಲಿಗೆ ಮುಳ್ಳು ಚುಚ್ಚವಂತೆ ಮಾಡಿದ್ರಿ, ಪವಿತ್ರ ಶಿವಲಿಂಗದ ಮೇಲೆ ಉಚ್ಚೆ ಒಯ್ದ ತಮ್ಮನಿಗೆ ವಜ್ರ ಬಹುಮಾನ ನೀಡಿದ್ರಿ, ಇದ್ಯಾವ ನ್ಯಾಯ ಎಂದು ತರಾಟೆ ತೆಗೆದುಕೊಂಡಳು.

ಅದಕ್ಕೆ ಪರಮೇಶ್ವರ ನಗಾಡಿದ, ಆತ ಏನು ಹೇಳಿದನೆಂದರೆ ಸಿಟ್ಟುಮಾಡ್ಕೋಬ್ಯಾಡ ಆದಿಶಕ್ತಿ, ಅಣ್ಣ ರಾಮನ ಜಾತಕದಲ್ಲಿ ಹಾವು ಕಡಿದು ಸಾಯುತ್ತಾನೆಂದಿತ್ತು, ದೂರ ಹೋಗಿ ಉಚ್ಚೆ ಉಯ್ದಿದಕ್ಕೆ ಮುಳ್ಳು ಚಚ್ಚೋ ಶಿಕ್ಷೆ ನೀಡಿ ಅದನ್ನು ಸರಿಮಾಡಿದೆ, ಇನ್ನು ತಮ್ಮನ ಜಾತಕದಲ್ಲಿ ಅವನು ಮುಂದೆ ಅಷ್ಟೈಶ್ವರ್ಯ ಪಡೀತಾನಂತಿತ್ತು, ಶಿವಲಿಂಗದ ಮ್ಯಾಲ ಉಚ್ಚೆ ಉಯ್ದಿದ್ಕೆ ಒಂದು ವಜ್ರ ಕೊಟ್ಟು ಸರಿ ಮಾಡಿದೆ ಎಂದು ಹೇಳಿ ಸಮಾಧಾನ ಮಾಡಿದ ಎಂದು ಹೇಳಿದ. ತಂದೆ ಅನಕ್ಷರಸ್ಥನಿರಲಿಲ್ಲ, ತಾನು ಓದಿದ್ದ ಕೇಳಿದ್ದ ಸಂಗತಿಗಳನ್ನು ಸೃಜನಶೀಲವಾಗಿ ನಿರೂಪಿಸುತ್ತಿದ್ದ, ಆತ ಹೇಳಿದ ಎಷ್ಟೋ ಕಥೆಗಳಿನ್ನೂ ನನ್ನೆದೆಯಲ್ಲಿ ಬೆಚ್ಚಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.