ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡದ ಕಂದ, ಓದುವುದು ಏನನ್ನ?

Last Updated 12 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅವ್ಳ ಮಾತು ಅಂಗಿರ‌್ಲಿ ಕಣಾ,
ಕೂಸುಬಾಣ್ತಿ ಚೆನ್ನಾಗಿದ್ದಾರ?

ಈ ಮಾತು ದೇವನೂರ ಮಹಾದೇವ ಅವರ `ಕುಸುಮಬಾಲೆ~ ಕಾದಂಬರಿಯ ಆರಂಭದಲ್ಲಿ ಎದುರಾಗುತ್ತದೆ. ನಾವಿರುವಾಗಲೂ ಏನೋ ಆಗಬಾರದ್ದು ಆಗಿಹೋಗಿದೆ ಎಂದು ಕುತೂಹಲದ ಕುಲುಮೆಯ ಮುಂದೆ ಕುಳಿತಿರುವ ಜೋತಮ್ಮದಿರು, ತಲ್ಲಣದ ಕೆಂಡದ ಗುಂಪನ್ನು ಕೆದಕುತ್ತಾ ಇರುವಾಗ ಈ ಒಂದು ಮಾತು ಅಲ್ಲಿದ್ದವರ ತಲೆನೇವರಿಸುವ ಸಂಜೆಗಾಳಿಯ ಹಾಗೆ ಬರುತ್ತದೆ; ಆ ವಾತಾವರಣವನ್ನು ಗಳಿಗೆಯೊಳಗೆ ತಿಳಿಗೊಳಿಸುತ್ತದೆ.
 
ತಲ್ಲಣವು ತಾನು ಕಾಲುಚಾಚಿಕೊಂಡು ನಡುಮನೆಯಲ್ಲಿ ಬಿದ್ದಿರುವಾಗಲೂ, ಇಲ್ಲಿ ಕೂಸು ಮತ್ತು ಬಾಣಂತಿ ಚೆನ್ನಾಗಿರಬೇಕು. ಅವರುಗಳ ಯೋಗಕ್ಷೇಮ ಯಾವತ್ತಿಗೂ ಮುಖ್ಯವೆಂದು ಸಾರುತ್ತದೆ ಈ ಕೃತಿ. ಹೀಗೆ ನಮ್ಮ ಕನ್ನಡದ ಮನಸ್ಸನ್ನು ತೋರುವ ಈ ಕೃತಿಯ ಹೊಸಬೆಳಕಿನಲ್ಲಿ ಇವತ್ತಿನ ನಮ್ಮ ಮಕ್ಕಳನ್ನು ಕಾಣಬೇಕಿದೆ. ಮಕ್ಕಳನ್ನು ವಿಶೇಷವಾಗಿ ಕಾಣಿಸುವ ಸಲುವಾಗಿಯೇ `ಮಕ್ಕಳ ದಿನಾಚರಣೆ~ ಇದೆ. ಈ ದಿನ ನಮ್ಮ ಮಕ್ಕಳನ್ನು ಆದಷ್ಟು ಖುಷಿಯಾಗಿಡಲು ಬಯಸುವ ನಾವು, ಅವರ ಮೇಲಾಗುತ್ತಿರುವ ಕಣ್ಣಿಗೆ ಕಾಣಿಸದ ಗಾಯಗಳನ್ನು ಅವರಿಗೆ ಪರಿಚಯಿಸಬೇಕಿದೆ.

ನಮ್ಮ ಮನೆಯ ಮಕ್ಕಳನ್ನು ಏನೆಲ್ಲವೂ ಸುತ್ತುವರಿದಿದೆ ಎನ್ನುವುದರ ಆಧಾರದ ಮೇಲೆಯೇ ಅವರ ಭವಿಷ್ಯವನ್ನು ನುಡಿಯುವುದು ಕಷ್ಟ. ಆದರೆ ಈ ಮಕ್ಕಳು ತಮ್ಮ ಒಳಕ್ಕೆ ಏನನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ಅವಶ್ಯ ನೋಡಬೇಕಿದೆ, ಕನ್ನಡದ ಹಿತದೃಷ್ಟಿಯಿಂದ. ಇಲ್ಲೊಂದು ಪ್ರಶ್ನೆಯೂ ಮೂಡುತ್ತದೆ. ಮಕ್ಕಳು, ಮಕ್ಕಳಾಗಿರುವ ತನಕ ತೆಗೆದುಕೊಳ್ಳುವುದು ಕಡಿಮೆ. ಪಡೆದುಕೊಳ್ಳುವುದು ಹೆಚ್ಚು. ಈ ಹೆಚ್ಚುಕಡಿಮೆಯ ತೂಗುಮಂಚದಲ್ಲಿ ಮಕ್ಕಳನ್ನು ನಿಂತ ನೆಲವೇ ರೂಪಿಸುತ್ತಿರುತ್ತದೆ. ಇದು ಉತ್ಪ್ರೇಕ್ಷೆ ಅಲ್ಲ; ಈಚೆಗೆ ಆ ನೆಲ ಕುಸಿಯುತ್ತಿದೆ.

ಇಂದು ನಗರದಲ್ಲಿ ತಂಗಿರುವವರ ಪೈಕಿ ಅರ್ಧದಷ್ಟು ಮಂದಿ ಹಳ್ಳಿಯಿಂದ ಬಂದವರು; ಹಳ್ಳಿಯೊಂದಿಗೆ ಸಂಪರ್ಕವನ್ನು ಮೇಲ್ಮೇಲೆ ಉಳಿಸಿಕೊಂಡವರಿದ್ದಾರೆ. ಹಾಗೆ ನಗರಕ್ಕೆ ಬಂದವರು ಇಲ್ಲಿ ಮಕ್ಕಳನ್ನು ಬೆಳೆಸುವುದಕ್ಕಿಂತ ತಯಾರಿಕೆಗೆ ಮಾರಿಹೋಗುತ್ತಿದ್ದಾರೆ. ತಯಾರಿಯನ್ನು ಈ ಮಕ್ಕಳು ಎಲ್ಲಿ? ಹೇಗೆ? ಎಷ್ಟು ಹೊತ್ತು? ಯಾವ ದಿನ? ಯಾರ ಬಳಿ? ಅದಕ್ಕಾಗಿ ವ್ಯಯವಾಗುವ ಹಣವೆಷ್ಟು ಎಂಬುದೆಲ್ಲ ಆವತ್ತಿನ ದಿನಪತ್ರಿಕೆಯ ಕೊನೆಯ ಪುಟದಲ್ಲಿ, ಟೀವಿಯಲ್ಲಿ, ಎಫ್‌ಎಂನಲ್ಲಿ, ಒಂದು ಗಂಟೆಗೊಮ್ಮೆ ಬರುವ ಮೊಬೈಲ್ ಸಂದೇಶದಲ್ಲಿ, ಇಂಟರ್‌ನೆಟ್‌ನಲ್ಲಿ, ಇತರೆ ಬ್ಲಾಗ್‌ಗಳಲ್ಲಿ ಸಿಗುತ್ತದೆ. ಅಷ್ಟರಮಟ್ಟಿಗೆ ಇಲ್ಲಿ ಎಲ್ಲವೂ ಕೈಯಳತೆಯಲ್ಲಿದೆ. ಇಲ್ಲಿಗೆ ಮಕ್ಕಳನ್ನು ನೀಟಾಗಿ ಡ್ರೆಸ್ ಮಾಡಿ ಗಾಡಿ ಮೇಲೆ ಕಳುಹಿಸುವ ಮನೆಯ ಪಾಡು ವಿಚಿತ್ರಗಾಥೆಯಲ್ಲಿ ಸುತ್ತಿಕೊಂಡಿದೆ.

ಮಗನನ್ನು ಶಾಲೆಗೆ ಬಿಡಬೇಕಾಗಿರುವುದು ಅಪ್ಪನೋ ಅಮ್ಮನೋ ಎಂಬ ವಿಷಯ ಮನೆಯಲ್ಲಿ ಇತ್ಯರ್ಥವಾಗದೆ ನ್ಯಾಯಾಲಯದವರೆಗೂ ಹೋಗಿಬರುತ್ತದೆ. ಮಗುವಿಗೆ ಒಂದು ಗುಟುಕು ಟೀ ಕುಡಿಸಿದ ಸಂಗತಿಯೇ ದಂಪತಿಗಳು ಬೇರೆಯಾಗಲು ಕಾರಣವಾಗುತ್ತದೆ. ಮನೆಪಾಠಕ್ಕೆ ಮಗು ಸೇರಿರುವುದನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ತಾಯಂದಿರ ಸಂತತಿ ಹೆಚ್ಚುತ್ತಿದೆ. ಏಕಾಂತಕ್ಕೆ ತೊಡಕಾಗುವುದನ್ನು ಸಹಿಸದ ದಂಪತಿಗಳು ಮಗುವಿನ ಹಾಲಿನಲ್ಲಿ ನಿದ್ರೆ ಮಾತ್ರೆಯನ್ನು ಕರಗಿಸುತ್ತಿದ್ದಾರೆ. ಮಗು ಯಾರೊಂದಿಗೆ ಹೆಚ್ಚುಕಾಲ ಇರುವುದೋ, ಅವರು ಮಗುವನ್ನು ಪೊರೆಯಬೇಕೆಂದು ಒಂದು ಗೌರವ ಒಡಂಬಡಿಕೆಯಾಗಿ ತಲೆಯೆತ್ತುತ್ತಿದೆ. ನಗರದಲ್ಲಿ ಹೀಗಿರುವುದನ್ನು ನೋಡಿ ಕಲಿಯುವ ಉತ್ಸಾಹವನ್ನು ನಮ್ಮ ಹಳ್ಳಿಗರು ತೋರುತ್ತಿದ್ದಾರೆ.

ಈ ಹಳ್ಳಿಗರು ಮಗು ಇಂಗ್ಲಿಷ್‌ನಲ್ಲಿ ಒಂದು ಪದವನ್ನು ಎಸೆದರೆ ಪುಳಕಗೊಳ್ಳುತ್ತಾರೆ. ನಗರಕ್ಕೆ ಕಾಲೇಜಿಗೆಂದು ಹೋಗಿ ಬರುವ ತಮ್ಮ ಮಕ್ಕಳು ಧಾರಾವಾಹಿಗಳನ್ನು ನೋಡನೋಡುತ್ತಲೇ ಊಟಮಾಡುವುದನ್ನು ನೋಡಿ ಸಂತೋಷಪಡುತ್ತಾರೆ. ನಗರದಲ್ಲಿರುವ ಬೋರ್ಡಿಂಗ್‌ಗಳು, ಹಾಸ್ಟಲ್‌ಗಳು ನಮ್ಮ ಮಕ್ಕಳನ್ನು ಜೋಪಾನ ಮಾಡುತ್ತಿವೆ ಎಂಬ ದೃಢವಾದ ನಂಬಿಕೆಯೂ ಕೆಲವು ಹಳ್ಳಿಗರಲ್ಲಿದೆ.
 
ಹಾಗಾಗಿ ಅವರು ಹೊಲವನ್ನು ಮಾರಿಯಾದರೂ ಇಂಗ್ಲೀಷ್ ಮೀಡಿಯಂನಲ್ಲಿ ತಮ್ಮ ಮಕ್ಕಳನ್ನು ಓದಿಸುತ್ತಾರೆ. ಆ ಮಕ್ಕಳಿಗೋ ಒಂದು ದಿನ ಹೊಲದ ಮಣ್ಣನ್ನು ತುಳಿಯದಿದ್ದರೂ, ನಾವು ಮಣ್ಣಿನ ಮಕ್ಕಳೆಂದು ಹೇಳುತ್ತಾ ತಿರುಗುವುದರಲ್ಲಿಯೇ ದೊಡ್ಡಸ್ತಿಕೆ. ಹಾಗೆ ನೋಡಿದರೆ, ಇವತ್ತಿನ ಜಾಹೀರಾತು ಮಾಡುವ ಕೆಲಸಕ್ಕೂ, ನಮ್ಮ ಮಕ್ಕಳ ನಡೆನುಡಿಗೂ ಅಂತಹ ವ್ಯತ್ಯಾಸವೇನಿಲ್ಲ. ಯಾಕೆಂದರೆ, ಈ ಎರಡೂ ಹುಸಿಯ ತಳಹದಿಯ ಮೇಲೆ ನಿಂತುಕೊಂಡಿವೆ. ಸಂದರ್ಭ ಹೀಗಿದ್ದಾಗಲೂ ನಿಜದ ನೆಲೆಯನ್ನು ತೋರಿಸುವ ಕಾರ್ಯವನ್ನು ಮಕ್ಕಳ ಎದೆಭೂಮಿಯನ್ನು ಉಳುವುದರ ಮೂಲಕ ಕನ್ನಡದ ಕವಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಮಾತು (ನುಡಿ) ಮನುಷ್ಯರನ್ನು ಅಭೇದವಾಗಿ ಇಡುವ ಒಂದು ಮಾಂತ್ರಿಕ ಸಾಧನ. ನಮ್ಮ ಕನ್ನಡವನ್ನು ಮನೆಯಿಂದಲೇ ಕಲಿಯುವವರಲ್ಲಿ, ಕಲಿಸುವವರಲ್ಲಿ ಇರಬೇಕಿದೆ ಇನ್ನಾದರೂ ಎಚ್ಚರ:

ಮನ್ಸನ್ ಮಾತು ಅಂದ್ರೆ
ಎಂಗ್ ಇರಬೇಕು
ಕವೆ ಗುರಿ ಇದ್ದಂಗೆ!
ಕೇಳ್ದೋರ್ ಮನಸಿಗೆ ಲಗತ್ತೆ ಆಗಬೇಕ್
ಮಕ್ಕಳ ಮುತ್ತ್ ಇದ್ದಂಗೆ
(ಜಿ.ಪಿ. ರಾಜರತ್ನಂ)

ಈ ಮಾತಿನ ಮೇಲೆಯೇ ಮನೆ ಉಳಿಯುತ್ತದೆ; ಮಕ್ಕಳು ಗೆಲುವಾಗಿರುತ್ತಾರೆ ಎಂಬುದು ಕವಿಗೆ ಅರಿವಿದೆ. ಮಾತಿನ ಆಚೆಗೂ ಏನಿದೆ? ಕವಿ ಹುಡುಕುತ್ತಾನೆ:

ಮಾತಿಗಿಂತ ಏನು ಹೆಚ್ಚು?
ತಾಯಿ ಮಾತಿಗಿಂತ ತಾಯಿ
ಹೆಚ್ಚು ಎಂಬೆ ಅಯ್ಯೋ ಹುಚ್ಚೆ
ಅವಳ ಪ್ರೀತಿ ಅವಳ ರೀತಿ
ಕಾಲು ಪಾಲು ಮೆಚ್ಚು ನಚ್ಚು
ಕಾಲು ಪಾಲು ಮೋಹ ಹುಚ್ಚು:
ಲಕ್ಷಕೋಟಿ ಅಬ್ಜವರ್ಷ
ದಿಂದ ಬಂದ ಜನುಮದೊಂದೆ
ಕಡಲಿನೊಡಲ ಸಿಂಪಿನಂತೆ
ನನ್ನ ನಿನ್ನ ಅವನ ತಾಯಿ
(ದ.ರಾ. ಬೇಂದ್ರೆ)

ಹೀಗೆ ತಾಯಿಯೊಂದಿಗೆ ಮಗುವನ್ನು ಕೈಹಿಡಿದು ನಡೆಸಲು ವಿಚಾರದ ಪದಾರ್ಥವೂ ಸೇರಬೇಕು:
ಶ್ರೀ ರಾಮಾಯಣವನು ವಾಲ್ಮೀಖಿ
ವಿರಚಿಸಿದನೊ ಬಾಲಕ ನಿನಗಾಗಿ!
ವ್ಯಾಸ ಕವೀಶ್ವರ ತಾ ನಿನಗಾಗಿ
ಭಾರತವನು ರಚಿಸಿದ ಚೆಲುವಾಗಿ!
ರಾಮಕೃಷ್ಣ ಗುರು ಕರುಣಿಸಿ ತಾನು
ವ್ಯೋಮಕ್ಕೇರಿಸಿದಾತನೋ ನೀನು!
ಧೀರ ವಿವೇಕಾನಂದನೆ ತಾನು
ಹುರಿದುಂಬಿಸಿದಾ ಕೇಸರಿ ನೀನು!
(ಕುವೆಂಪು)

ಲೋಕವನ್ನು ಅರಿಯುತ್ತಾ ಹೋಗುವ ಮಗುವಿಗೆ ವಿನಯವೂ ಇರಬೇಕು. ಅಂತಹ ವಿನಯ ತೋರಿಕೆಯಾಗದೆ ರಕ್ತಗತವಾಗಬೇಕಿದೆ, ಹೀಗೆ:

ಹಣ್ಣಾಗು ಮಗು
ಮೈಯೆಲ್ಲ ಮಾಗಿ ಹಣ್ಣಿನ
ಸುಕ್ಕು ಬರುವವರೆಗೆ
ಪಕ್ವತನ ಬಿರಿದ ಬಾಳೆ ಹಣ್ಣಿದೆಯಲ್ಲ
ಅದರ ಹಾಗೆ ಕೊಂಚ ಬಾಗಬೇಕು
(ಎಚ್.ಎಸ್. ಶಿವಪ್ರಕಾಶ್)

ಯಾವ ಮಗುವೂ ಸಾಮಾನ್ಯವಲ್ಲ. ಈ ಮಗುವಿನ ಸ್ಪರ್ಶಮಣಿಯಿಂದಲೇ ಅಪ್ಪ-ಅಮ್ಮ ಮರುಹುಟ್ಟು ಪಡೆಯುತ್ತಾರೆ ಇಲ್ಲಿ:

ಮಗುವೇ
ಎದೆಯೊಳಗೊಂದು ಹೂವಿಟ್ಟು ಹೋದೆ
ಗೆಜ್ಜೆ ಕಾಲಿಂದ
ಒದ್ದೂ ಒದ್ದೂ
ಕಲ್ಲ ಮಿದುಗೊಳಿಸಿದೆ
ನಿನ್ನನ್ನು ಅಪ್ಪಿ ಆಡಿಸಿ ತೂಗಿ
ಹಸುಳೆಯಂತೆ ಹೊಸತಾದವು
ಈ ನನ್ನ ಇಂದ್ರಿಯಗಳು
(ಜೀವಯಾನದ ಎಸ್.ಮಂಜುನಾಥ್)

ಮಕ್ಕಳು ಬೆಳೆದಂತೆ ಇಂದ್ರಿಯಗಳು ಬಲಿಯುತ್ತವೆ, ಕಾಲದ ನಿಯಮದಂತೆ. ಈ ಮಕ್ಕಳ ಜ್ಞಾನದ ಆರಂಭ ಸಹಜವಾಗಿ ಬರುವಂತಿರುವ ತನ್ನ ನುಡಿಯಿಂದಲೇ ಹದಗೊಳ್ಳಬೇಕಿದೆ: ವರ್ಣಮಾಲೆಯನ್ನು ಕಲಿತ ಮಾತ್ರಕ್ಕೆ ಮಗುವಿಗೆ ಕನ್ನಡ ಸಿಕ್ಕಿತು ಎನ್ನುವಂತಿಲ್ಲ. ಕನ್ನಡವನ್ನು ಸೃಜಿಸಿದವರನ್ನು ಮಕ್ಕಳ ಮಡಿಲಿಗೆ ಹಾಕುವುದು ಅಷ್ಟು ಸುಲಭವಲ್ಲ. ಕಲಿಸುವವರು ಮಕ್ಕಳಾಗಬೇಕು. ಭಾಷೆ ಮೊದಲಿಗೆ ಸರಳ ಎನಿಸಬೇಕು:

ಹಸಿರು ಗಿಡಕೆ ಮೊಸರು
ಚೆಲ್ಲಿದಂತೆ ಈ ಮಲ್ಲಿಗೆ
ಹೂವು ದುಂಡುದುಂಡಗೆ
ದಂಡೆ ಹೂವು ನನ್ನ ಜಡೆಗೆ
ಘಮಘಮ ಘಮಾರಿಸುತ್ತ
ಬೇಂದ್ರೆ ಕವಿಯ ನೆನೆದಿದೆ
ಮೆಲ್ಲ ಮೆಲ್ಲನರಳುತ
ಕೆ. ಎಸ್. ನ. ಕರೆದಿದೆ
(ಕೃಷ್ಣಮೂರ್ತಿ ಬಿಳಿಗೆರೆ)

ಕವಿತೆಯ ಸಹಚರ್ಯದಲ್ಲಿ ಬೆಳೆಯುವ ಮಗುವಿಗೆ ಈ ಲೋಕದ ಕಟ್ಟಳೆಯನ್ನು ಆಗಾಗ ಪರಿಚಯಿಸಬೇಕು; ಕಿವಿಯ ಮೇಲೆ ಹಾಕಬೇಕು:

ಮನೆಯುಂಟು, ಸಂಸಾರವೆಂಬುದೊಂದುಂಟು
ಮಗಳುಂಟು,
ಮನೆಯೊಳಗೆ ಸಾಮಾನು ಸರಂಜಾಮ
ಮಾಡುವುದಕುಂಟು
ಏನೇನೋ ಓದುವುದಕುಂಟು
ಬರೆಯುವುದಕುಂಟು
ಉಂಟು ಉಂಟು, ಏನೆಲ್ಲ ಉಂಟು
ಈ ಎಲ್ಲವುಗಳ ನಡುವೆ
ಈ ಬಿಚ್ಚಲಾಗದ
ಹಾಗೆಯೆ ಇರಿಸಲಾರದ ಗಂಟು
ಎಲ್ಲ ಅಂಟಂಟು
(ಆನಂದ ವಿ. ಪಾಟೀಲ)

ಇವೆಲ್ಲವನ್ನು ಆಗು ಮಾಡಲು ಮಗುವಿಗೆ ಗುರುವಿನ ಬಲವಿರಬೇಕು. ಕಲಿಯುವ ಶ್ರದ್ಧೆ ಮಕ್ಕಳಲ್ಲಿಯೂ ಚೂರು ಇರಬೇಕು. ಇವರಿಬ್ಬರ ನಡುವೆ ಸಲುಗೆಯೇ ಸೇತುವೆಯೊಂದನ್ನು ಏರ್ಪಡಿಸಬೇಕು:

ಟೀಚರ್, ಒಮ್ಮೆ ನಕ್ಕು ಬಿಡಿ
ಎಲ್ಲಾ ದುಃಖ ಮರೆತುಬಿಡಿ
ಮುಖ ನೋಡೋಕೆ ಆಗ್ತಿಲ್ಲ
ಅಳುವೇ ಬರ‌್ತಿದೆ ನಮಗೆಲ್ಲ!
ಯಾಕೆ ಟೀಚರ್, ಏನಾಯ್ತು
ನಮ್ಮಿಂದೇನು ತಪ್ಪಾಯ್ತು?
ಉತ್ತರ ಪತ್ರಿಕೆ ನೋಡಿದ್ರಾ
ಯಾರೂ ಚೆನ್ನಾಗ್ ಬರ‌್ದಿಲ್ವಾ?
(ರಾಧೇಶ ತೋಳ್ಪಾಡಿ)

ಕನ್ನಡದ ಮಕ್ಕಳು ಹೀಗೆ ತಮ್ಮ ಶಾಲೆಯಲ್ಲಿ ಬಿಡುಬೀಸಾಗಿ ಕೇಳುವಂತಾಗಬೇಕು. ಆದರೆ ಇವತ್ತಿನ ಈ ಸಂದರ್ಭ ಹೇಗಿದೆ ನೋಡಿ: ಅಧ್ಯಾಪಕರು ಮಕ್ಕಳ ಮೇಲೆ ನಡೆಸುತ್ತಿರುವ ಹಿಂಸೆ ಕಡಿಮೆಯಾಗುತ್ತಿಲ್ಲ. ಅಂತರ್ಜಾಲದ ಪುಟಗಳನ್ನು ತೆರೆದು ನೋಡಿದರೆ, ಅಲ್ಲಿ ಮಕ್ಕಳೆಲ್ಲ ಲೈಂಗಿಕತೆಯ ಸರಕುಗಳಾಗಿವೆ. ಎಳೆ ಮಕ್ಕಳಿಗೆ ಮೊಟ್ಟೆ ಕೊಡಬೇಕೇ? ಬೇಡವೇ? ಎಂಬ ವಿಷಯದ ಮೇಲೆ ವಿಚಾರಸಂಕಿರಣವೇ ನಡೆಯುತ್ತದೆ.
 
ಭಗವದ್ಗೀತೆಯನ್ನು ಪಠಿಸುವ ಮನೆಯಿಂದ ಬರುವ ಮಗುವನ್ನು ಗುಂಪಿನಿಂದ ವಿಂಗಡಿಸುವುದು ಹೇಗೆಂದು ಚಿಂತಕರು ಸಭೆ ನಡೆಸುತ್ತಾರೆ. ನಮ್ಮ ಮಗುವಿಗೆ `ಗೋವಿನ ಹಾಡು~ ಪದ್ಯವನ್ನು ಕಲಿಸುವುದಕ್ಕೂ ನಾವು ಹೊರಗಿನವರನ್ನು ಅವಲಂಬಿಸುವಂತಾಗಿದೆ. ಮಹಾಭಾರತದ ಯಾವ ಭಾಗವನ್ನು ಪಠ್ಯವಾಗಿಡಬೇಕೆಂದು ಬಂದುಹೋಗುವ ಸರ್ಕಾರ ನಿರ್ಧರಿಸುತ್ತದೆ. ಕನ್ನಡ ಕಲಿಯುವುದರಿಂದ ಏಳಿಗೆ ಆಗುವುದಿಲ್ಲವೆಂದು ಕನ್ನಡ ಅಧ್ಯಾಪಕರುಗಳು ಬೀದಿಯಲ್ಲಿ ನಿಂತು ಕೂಗುತ್ತಾರೆ. ಇಂತಿರುವ ಕನ್ನಡದ ಸಮಸ್ಯೆಗಳಿಗೆ ಪರಿಹಾರವನ್ನು ಕನ್ನಡದ ಆಚಾರ್ಯ ಆಲೂರು ವೆಂಕಟರಾಯರ ಬರಹಗಳಲ್ಲಿ, ಭಾಷಣಗಳಲ್ಲಿ ಹುಡುಕುತ್ತಿರುವ ಭಾವೋದ್ರೇಕಿಗಳಿದ್ದಾರೆ. ಈ ಅತಿರೇಕಗಳ ನಡುವೆಯೇ ನಾವು ನಮ್ಮ ಮಕ್ಕಳು ಕಲಬೆರಕೆ ಆಗದಂತೆ ಹಾರೈಸಬೇಕಿದೆ, ಆರೈಕೆ ಮಾಡಬೇಕಿದೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT