ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆವ್ವಗಳಿಲ್ಲದ ಊರು ಒಂದು ಊರೇ...

ಮಂದಹಾಸ
Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ನಮ್ಮ ಊರಲ್ಲಿ ದೆವ್ವಗಳಿಗೂ ಹುಂಚೀಮರಗಳಿಗೂ ಭರಾಟಿ ಪ್ರೀತಿ. ನಮ್ಮ ಹಳ್ಳಿಯ ಸುತ್ತಮುತ್ತ ಧೀರಹೆಂಗಸರು ಯಶಸ್ವಿಯಾಗಿ ಉರುಲು ಹಾಕಿಕೊಂಡದ್ದೂ ಹುಂಚೀಮರದಲ್ಲಿಯೇ!

ಹಾಂ, ನಮ್ಮ ಗೆಳೆಯ ಉಂಡೀಭೀಮಣ್ಣ ಆ ದಿವಸ ಹೇಂತೀಜೋಡಿ ಯಾನಾಡ ಮಾನಾಡ ಗುದ್ದಾಡಿ ಉರುಲು ಹಾಕಿಕೊಳ್ಳಲು ಹುಂಚೀಗಿಡಕ್ಕೇ ಹೋಗಿಬಿಟ್ಟ. ಅಂತೂ ಆತ ಸತ್ತೇಹೋದ ಅಂತ ನಾವು ಬೆಳತನಕಾ ಬಳ್ಳೊಳ್ಳಿ ನಿದ್ದೀ ಮಾಡಿದೆವು. ಆದರೆ ಮರುದಿನ ಆತ ನಮ್ಮ ಎದುರಿಗೇ ಹೊಳ್ಳಿ ಬಂದ.

‘ಯಾಕೋ ಭೀಮಣ್ಣಾ... ಯಾಕ ಸಾಯ್ಲಿಲ್ಲ?’ ಅಂತ ಕೇಳಿದೆ. ಆ ಬಲಭೀಮ ಅಂಜುತ್ತಲೇ ನನಗೆ ಹೇಳಿದ: ‘ಹೌದೋ ಮಾರಾಯಾ... ನಾ ಉರಲ ಹಾಕ್ಕೋಣಾಕ ಹುಂಚೀಗಿಡಾ ಏರೀದೆ. ಚೂಜಿಮೊನಿ ಇಡಾಕ ಸೈತೆ ಜಾಗಾ ಇಲ್ಲಾರದಷ್ಟು ಘನೇರೆ ಕಾಡಿಗ್ಗತ್ಲು ಇತ್ತು. ನಾ ಪುರುಮಾಶಿ ಧೈರೆ ಮಾಡಿ ಹುಂಚೀಗಿಡಕ್ಕ ಹಗ್ಗಾ ಕಟ್ಟಿ... ಇನ್ನೇನು ಕೊಳ್ಳೀಗೆ ಹಗ್ಗದ ಕುಣಿಕಿ ಹಾಕ್ಕೋಬೇಕೂ ಅನ್ನೂದ್ರಾಗ ಒಂದು ಕರೇ ಹೆಣ್ಣಿನ ಕಂಬ್ಳೀದೆವ್ವಾ ನನ್ನ ಮುಂದ ಕವಕ್ಕಂತ ಕಂಡ್ತು. ಅಯ್ಯಯ್ಯೋ... ಸತ್ನೆಪೋ... ಅಂತ ಹುಂಚೀಗಿಡದಿಂದ ಒಂದೇ ಚುಣಿಗೀಗೆ ಚಟ್ನ ಜಿಗಿದು ಪಟ್ನ ಓಡಿಬಂದೆ...’.

ಅಂತೂ ದೆವ್ವವಾಗಲು ಹೋದವನು ದೆವ್ವಕ್ಕೇ ಅಂಜಿ ಓಡಿಬಂದುಬಿಟ್ಟ!

ಒಂದು ರಾತ್ರಿ ಪತ್ರೀಗಿಡದ ಕೆಳಗೆ ಐದು ದೆವ್ವಗಳು ಖುಷಿಯಿಂದ ಕುಂತದ್ದು ನಾನು ಪ್ರತ್ಯಕ್ಷ ಕಂಡು ಹೇಂತೀಗೆ ನಡುಗುತ್ತ ಹೇಳಿದೆ. ತಕ್ಷಣ ಅವಳು ಒಂದು ಹಳೇಕಸಬರಿಗಿ ಹಿಡಕೊಂಡು ಆ ಘೋರ ಘನಮ್ರೀ ಕತ್ತಲಲ್ಲಿ ಪತ್ರೀಗಿಡಕ್ಕೇ ನೇರವಾಗಿ ನುಗ್ಗಿಬಿಟ್ಟಳು. ಆ ದೆವ್ವಗಳು ‘ಸತ್ನೆಪೋ’ ಅಂತ ರಪಾಟಿಕಿತ್ತವು! ದೆವ್ವಕ್ಕೇ ದೆವ್ವವಾದವಳು ಅವಳು!

ನಮ್ಮ ಊರಲ್ಲಿ ಕಂಬ್ಳೀಮೇಲೆ ಕುಂತು ಖೂಬಾಗಿ ಕೂಳು ಬಕ್ಕರಿಸುವವರೆಲ್ಲಾ ಗಂಡಸರು. ಖಡಕು ಬಿಸಿಲಲ್ಲಿ ಕಚ್ಚೀಕಟ್ಟಿ ಹೊಲದಲ್ಲಿ ದುಡಿಯುವವರೆಲ್ಲ ಹೆಂಗಸರು. ಗಂಡಸರ ಚಟಗಳಿಗೆಲ್ಲಾ ಹೆಂಗಸರೇ ರೊಕ್ಕಾ ಕೊಡೋರು.

ಹೆಂಗಸಿಗಿರುವ ಕೂವತ್ತು, ಕರಾಮತ್ತು, ನಿಯತ್ತು, ನೌಬತ್ತು ನಮ್ಮಂಥ ಜಾಣ ಗಂಡೂಗಳಿಗೆ ಗಿಂಡಿಯಷ್ಟಾದ್ರೂ ಇದ್ದಿದ್ರ ನಮ್ಮ ದೇಶಾ ವಜ್ರದುಂಡಿ ಕಲ್ಲಾಗಿ ಇರ್ತಿತ್ತೋ ಏನೋ! ಏನೇ ಆದರೂ ಅವರು ಒನಕೆ ಓಬವ್ವನ ಕುಲದವರು. ನಾವೋ ಒಂದೇ ಏಟಿಗೆ ಓಡಿಹೋಗುವ ಛಲದವರು!

ನಮ್ಮೂರ ಗಂಡಸರು ಸತ್ತು ದೆವ್ವವಾದರೆ ಸುಖದಿಂದ ಕುಂಬಳಕಾಯಿಯಲ್ಲಿ ಕುಂತುಬಿಡುತ್ತಾರೆ. ಕುಂಬಳಕಾಯಿ ಗಂಡುದೆವ್ವಗಳ ಸ್ಲೀಪಿಂಗ್ ಚೇಂಬರ್! ದಾರಿಯಲ್ಲಿ ಯಾವುದಾದರೂ ಬಸ್ಸು ರಾತ್ರಿಯಲ್ಲಿ ಕೆಟ್ಟು ನಿಂತರೆ, ನಮ್ಮ ಕಂಡಕ್ಟರ್ ಮಾಂತಣ್ಣ ಬಸ್ಸಿನ ಜನರಿಗೆ ಕೂಗಿ ಕೇಳುತ್ತಾನೆ:

‘ಯಾರಾದ್ರೂ ಕುಂಬಳಕಾಯಿ ತಂದಿದ್ರ ದಯಮಾಡಿ ಒಡೀರೆಪೋ... ನಿಮಗ ಚಾ ಕುಡಸ್ತೇನಿ...’. ನಂತರ ಆ ದೆವ್ವ ಕುಂತ ಕುಂಬಳಕಾಯಿಯನ್ನು ಬಸ್ಸಿನಲ್ಲಿ ಹುಡುಕಿ ತೆಗೆದು ಆತ ಒಡೆಯುತ್ತಿದ್ದ. ನಂತ್ರ ದೆವ್ವಬಿಟ್ಟ ಬಸ್ಸು ನಿರುಂಬ್ಳಾಗಿ ಓಡುತಿತ್ತು.

ಹೀಂಗಾಗಿ... ನಮ್ಮ ಗಂಡು ದೆವ್ವಗಳಿಗೆ ಕುಂಬಳಕಾಯಿಯೇ ಗೆಸ್ಟಹೌಸ್!  ಹೆಣ್ಣು ದೆವ್ವಗಳಿಗೆ ಹುಂಚೀಮರವೇ ರೆಸ್ಟಹೌಸ್‌!

ಇವತ್ತಿಗೂ ನಮ್ಮ ಕಡೆ ಹುಂಚೀಮರದ ಕೆಳಗ ಅಪ್ಪಿತಪ್ಪಿ ಯಾರೂ ಮಲಗಂಗಿಲ್ಲಾ. ಬೀಗರಿಗೆ ಬಿಜ್ಜರಿಗೆ ಮರೆತೂ ಕುಂಬಳಕಾಯಿ ಕೊಡಂಗಿಲ್ಲ! ಬೇಕಾದರೆ ಹುಂಚೀಮರದ ಕೆಳಗ ಒಮ್ಮೆ ಮಲಗಿ ಪ್ರಯೋಗ ಮಾಡಿ ನೋಡ್ರಿ. ಯಾ ಹೆಣ್ಣದೆವ್ವ ಬಂತು ಅಂತ ಅಪ್ಪಿತಪ್ಪಿಯೂ ಬಾಯ್ಬಿಡಬ್ಯಾಡ್ರಿ!

ಹಾಂ... ಅಮೆರಿಕೆಯ ಜನಾ ತುಂಬಾ ಅಡ್ವಾನ್ಸ್‌... ಅವರು ದೆವ್ವಾ ನಂಬೋದೇ ಇಲ್ಲಾ. ಹೀಗೆಂದು ನಾನು ತಿಳಿದದ್ದು ಅಮೆರಿಕೆಯ ಸ್ಯಾನ್‌ಫ್ರಾನ್ಸಿಸ್ಕೋಕ್ಕೆ ಹೋದಾಗ ಸುಳ್ಳಾಗಿಬಿಟ್ಟಿತು. ಯಾಕೆಂದರೆ ಅಮೆರಿಕೆಯವರು ತುಂಬಾ ಜಾಣರು. ಅವರು ದೆವ್ವಗಳನ್ನು ನಮಗಿಂತ ಹತ್ತುಪಟ್ಟು ನಂಬುತ್ತಾರೆ.

ಕೆಲಿಫೋರ್ನಿಯಾದ ಓಕ್ಲಂಡಿನ ನಮ್ಮ ಮನೆಯಲ್ಲಿ ಒಂದು ದಿನ ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ, ನಾನು ನನ್ನ ಹೇಂತಿ ಜೋಡಿ ಅಲ್ಲಿಯ ಟೀವಿ ನೋಡುತ್ತಿದ್ದಾಗ... ‘ಲೈಟ್ ಹೌಸಿನಲ್ಲಿಯ ದೆವ್ವಗಳು’ ಎಂಬ ಭಯಾನಕ ಸುದ್ದಿ ಟೀವಿ ಪರದೆಯಮೇಲೆ ತೇಲಿಬರುತ್ತಿತ್ತು.

ಯಾವ ಯಾವ ಲೈಟ್‌ ಹೌಸಿನಲ್ಲಿ ಎಂಥಾ ದೆವ್ವಗಳಿವೆ ಅಂಬೋ ಸುದ್ದಿಯನ್ನು ಕ್ಯಾಮೆರಾ ಫೋಟೋ ಸಹಿತ ಬಿತ್ತರಿಸುತ್ತಿದ್ದರು. ಆಗ ನಾನು ಎಷ್ಟೊಂದು ಅಂಜಿದೆನೆಂದರೆ, ಆ ರಾತ್ರಿ ನನ್ನ ಪಕ್ಕದಲ್ಲೇ ಕುಂತ ಹೆಂಡತಿಯೇ ನನಗೆ ದೆವ್ವವಾಗಿ ಕಂಡಳು. ಗದಗುಟ್ಟಿ ನಡುಗಿದೆ!

ನಾವು ಲಾಸ್‌ ಏಂಜಲೀಸ್‌ಗೆ ಹೋದಾಗ ಜಗತ್ತನ್ನೇ ಮೋಡಿ ಮಾಡಿದ ಪಾಪ್ ಡಾನ್ಸರ್ ಮೈಕೆಲ್ ಜಾಕ್ಸನ್ನನ ಸಮಾಧಿ ಮತ್ತು ಮನೆ ನೋಡಲು ಬಯಸಿದೆವು. ಅಲ್ಲಿ ಗೊತ್ತಾತು... ಇಂದಿಗೂ ಮೈಕೆಲ್ ಜಾಕ್ಸನ್ನನ ಮನೆಯಲ್ಲಿ ಅವನ ಭೂತ ಸುತ್ತಾಡುತ್ತಿದೆ ಅಂತ. ಇದು ಬರೀ ಕಲ್ಪನೆಯಲ್ಲ... ಆ ದೆವ್ವದ ಛಾಯಾಚಿತ್ರಗಳೂ ಇಂದು ಲಭ್ಯ. ಮೈಕೆಲ್ ಜಾಕ್ಸನ್ನನೇ ದೆವ್ವ ಆಗಿರಬೇಕಾದರೆ ನಾವೇಕೆ ಬ್ಯಾಡ ಅಂತ?

ಕಡೇ ಮಾತು ಹೇಳಬೇಕೆಂದರೆ ನನಗೆ ಈಗೀಗ ಬೆಂಗ್ಳೂರು ತುಂಬಾ ತುಂಬಾ ಬೋರಾಗುತ್ತಿದೆ. ದೆವ್ವಗಳಿಲ್ಲದ ಬೆಂಗ್ಳೂರು ಬೋರೋ ಬೋರು.
ನಮ್ಮೂರಲ್ಲಿ ಹರೆಯದ ಹುಡಿಗಿಯರು ದೆವ್ವ ಬಂದಾಗ ಎಂಥಾ ಚಂದ ಕುಣಿಯುತ್ತಿದ್ದರು! ಅವರು ತಮ್ಮ ಮೀಸೇ ಮೇಲೆ ಕೈ ಹಾಕಿ ಮೀಸೆ ತಿರುವುತ್ತಿದ್ದರು.

ಕೆಲ ಹೆಂಗಸರು ಸೇದಲು ಚುಟ್ಟಾ ಕೇಳುತ್ತಿದ್ದರು. ಕೆಲವರು ಕೋಮಲ ಹೆಂಗಳೆಯರು ಹೆಂಡವನ್ನೂ ಕೇಳಿದ್ದು ಇದೆ. ಯಾಕೆ ಗೊತ್ತೇ? ಆ ನಾರೀಮಣಿಗಳ ಮೈಯಲ್ಲಿ ಬಂದದೆವ್ವ ಪುರುಷಮಣಿ ಆಗಿತ್ತು!

ಒಂದು ಸಿದ್ಧಾಂತ ನೀವು ತಿಳಿದಿರಲೇಬೇಕು. ಏನೆಂದರೆ ಗಂಡಿಗೆ ಗಂಡು ದೆವ್ವ ಬಡಿದರೆ ಬಿಡಿಸಬಹುದು, ಅಥವಾ ಹೆಣ್ಣಿಗೆ ಹೆಣ್ಣು ದೆವ್ವಾ ಬಡಿದುಕೊಂಡರೂ ಬಿಡಿಸಬಹುದು. ಆದರೆ ಹೆಣ್ಣಿಗೆ ಗಂಡು ದೆವ್ವಾ ಬಡಕೊಂಡರೆ, ಇಲ್ಲವೇ ಗಂಡಿಗೆ ಹೆಣ್ಣು ದೆವ್ವಾ ಬಡಕೊಂಡರೆ ದೆವ್ವ ಜಪ್ಪಯ್ಯ ಅಂದರೂ ಕೀಳಂಗಿಲ್ಲ! ಇದು ‘ದೆವ್ವನ ಸಿದ್ಧಾಂತ’.

ನಾವು ಹುಡುಗರಿದ್ದಾಗ ಯಾವ ಹುಂಚೀಗಿಡದಲ್ಲಿ ಎಂಥಾ ದೆವ್ವಾ ಇದೆ, ಎಷ್ಟು ದೆವ್ವಗಳಿವೆ ಅನ್ನುವದನ್ನು ಲೆಕ್ಕಾ ಇಟ್ಟಿರುತ್ತಿದ್ದೆವು. ಹುಬ್ಬಳ್ಳಿಯ ಯಾವ ಯಾವ ಗಿಡದಲ್ಲಿ ಏಳುಮಕ್ಕಳ ತಾಯಿ ವಾಸಮಾಡಿದ್ದಾಳೆ... ಗಡೇದ ಬಾವಿಯ ಗಂಗವ್ವ ಎಲ್ಲಿದ್ದಾಳೆ... ಗರಡೀಮನಿ ಯಮನವ್ವನ ಬಿಡಾರ ಯಾವುದು... ಇದೆಲ್ಲ ನಮಗೆ ಗ್ಯಾರಂಟಿ ಗೊತ್ತಿತ್ತು.

ಆದರೆ ಈಗ ಈ ಐವತ್ತು ವರ್ಷಗಳಲ್ಲಿ ಹುಬ್ಬಳ್ಳಿಯಲ್ಲಿ ಅಂಕಣ ಅಗಲದ ಭಾರೀ ಗಾತ್ರದ ಸಾವಿರಾರು ಪ್ರಾಚೀನ ಹುಂಚೀಗಿಡಗಳನ್ನೆಲ್ಲಾ ಕಡಿದು ಹಾಕಿ, ಆ ಜಾಗದಲ್ಲಿ ಪುಣ್ಯಾತ್ಮರು ಕಾಂಕ್ರೀಟ್ ಕಟ್ಟಡ ಕಟ್ಟಿಬಿಟ್ಟರು.

ಹೀಗಾಗಿ ಈಗ ನಮ್ಮ ಪ್ರೀತಿಯ ದೆವ್ವಗಳು ಪ್ರವಾಹಪೀಡಿತರಂತೆ ಹೌಸ್‌ಲೆಸ್ ಆಗಿಬಿಟ್ಟವು. ದೆವ್ವಗಳಿಲ್ಲದ ಹುಬ್ಬಳ್ಳಿಯೂ ನನಗೆ ನೀರಸವಾಗಿ ಕಾಣುತ್ತಿದೆ.

ಕನಸುಗಳಿದ್ದರೆ ಜೀವ ಚಂದ! ದೆವ್ವಗಳಿದ್ದರೆ ಊರು ಚಂದ!

ಒಂದು ದಿನ ನಾನು ತುಂಬಾ ನೋವಿನಿಂದ ಕುಂತಿದ್ದೆ. ನನ್ನ ಹೆಂಡತಿ ‘ಯಾಕ್ರೀ ಡಲ್ ಆಗೀರೆಲ್ಲಾ ಇವತ್ತ?’ ಅಂತ ಕೇಳಿದಳು. ‘ಈ ಬೆಂಗ್ಳೂರಲ್ಲಿ ನೆಂಚಿಕೊಳ್ಳಲು ಉಪ್ಪಿನಕಾಯಿಯಷ್ಟೂ ದೆವ್ವಾ ಇಲ್ಲಾ. ದೆವ್ವಗಳಿಲ್ಲದ ಊರು ಬೋರು...’ ಅಂತ ನಿಟ್ಟುಸಿರುಬಿಟ್ಟೆ.

ಜಾಣೆಯಾದ ಅವಳು ತಕ್ಷಣ ಹೇಳಿದಳು: ‘ಯಾಕ ಚಿಂತೀ ಮಾಡ್ತೀರಿ ನೀವು? ಈ ಊರಲ್ಲಿ ಭಾಳಾ ಮಂದಿ ಜೀವಂತ ಜನರೇ ದೆವ್ವ ಆಗಿಬಿಟ್ಟಿದ್ದಾರೆ. ಹೀಗಾಗಿ ಬೇರೆ ದೆವ್ವಗಳ ಆವಶ್ಯಕತೆಯಾದರೂ ಏನ ಐತಿ ಹೇಳ್ರಿ...?’ ನಡುಗತೊಡಗಿದ ನನಗೆ ಹೆಂಡತಿಯೇ ದೆವ್ವವಾಗಿ ಕಂಡಳು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT