ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಭುತ್ವದ ಮಾಹಿತಿ ಪಿಪಾಸೆ: ನಾಲ್ಕು ಕಥನಗಳು

Last Updated 3 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಹೋಸೆ ಸಾರಮಾಗೋ ಎಂಬ ಲೇಖಕ ತನ್ನ ‘ಆಲ್ ದ ನೇಮ್ಸ್’ ಕಾದಂಬರಿಯಲ್ಲಿ ಪೋರ್ಚುಗಲ್ ದೇಶದ ಯಾವುದೋ ಊರಿನಲ್ಲಿರುವ ಜನನ–ಮರಣಗಳ ನೋಂದಣಿ ಇಲಾಖೆಯ ಕಚೇರಿಯಲ್ಲಿ ನಡೆಯುವ ಕಥೆಯೊಂದನ್ನು ಬಿಚ್ಚಿಡುತ್ತಾನೆ.

ಈ ಕಚೇರಿಯ ಎದುರಿಗೆ ಹತ್ತು ಹನ್ನೆರಡು ಸರಕಾರಿ ನೌಕರರು ತಮ್ಮ ಮೇಜುಗಳ ಮೇಲಿರುವ ರಾಶಿ ರಾಶಿ ಕಡತಗಳ ನಡುವೆ ಕುಳಿತಿರುತ್ತಾರೆ. ಅವರ ಹಿಂದೆ ಅಳತೆಗೂ ಸಿಗದಷ್ಟು ದೊಡ್ಡ ಕಟ್ಟಡದಲ್ಲಿ, ಕಣ್ಣೆತ್ತಿ ನೋಡಿದರೆ ತಲೆ ತಿರುಗುವಷ್ಟು ಎತ್ತರವಿರುವ ರ‍್ಯಾಕ್‌ಗಳಲ್ಲಿ ಆ ಪ್ರಾಂತ್ಯದ ಎಲ್ಲರ ಜನನ ದಿನಾಂಕವನ್ನು ಹೊಂದಿದ ಕಡತಗಳ ಬೃಹತ್ ಭಂಡಾರವೇ ಇದೆ.

ಅವುಗಳಲ್ಲಿ ಯಾವುದೋ ಕಡತವನ್ನು ತೆಗೆದು ನೋಡಬೇಕು ಎಂದರೆ ಎತ್ತರದ ಏಣಿಗಳ ಮೇಲೆ ನಿಂತು, ತಲೆಗೆ ತಾಗುವ ಜೇಡರ ಬಲೆಗಳನ್ನೆಲ್ಲ ಹರಿದುಹಾಕುತ್ತಾ, ಕಡತಗಳನ್ನು ಎಳೆದಾಗ ಉಂಟಾಗುವ ದೂಳಿನ ಮೋಡಗಳಿಂದಾಗಿ ಕೆಮ್ಮುತ್ತಾ, ಮೇಲೆ ಉರಿಯುವ ಸಣ್ಣ ಬಲ್ಬಿನ ಬೆಳಕಿನಲ್ಲಿ ತಮಗೆ ಬೇಕಾಗಿರುವ ಕಡತ ಅದೇ ಹೌದೋ ಎಂದು ಅಲ್ಲಿನ ಕೆಲಸಗಾರರು ಖಾತ್ರಿ ಮಾಡಿಕೊಂಡು ಆ ಕಾಗದ ಪತ್ರವನ್ನು ಕೆಳಗೆ ಇಳಿಸಿಕೊಂಡು ಬರಬೇಕು.

ಅಲ್ಲಿ ಯಾರ ಜನ್ಮದಿನಾಂಕವಿರುತ್ತದೆಯೋ ಆ ವ್ಯಕ್ತಿ ಸಾವಿಗೀಡಾದಾಗ ಅವನ ಜನನದ ದಿನದ ಜೊತೆಗೆ ಆ ಕಡತದಲ್ಲಿ ಅವನ ಸಾವಿನ ದಿನಾಂಕವನ್ನೂ ನಮೂದಿಸಿ ಸತ್ತವರ ಕಡತವನ್ನು ಇಡುವ ಜಾಗದಲ್ಲಿ ಇಡಬೇಕು. ಹಾಗಾಗಿ ಈ ಕಚೇರಿಯಲ್ಲಿನ ಕಡತಗಳನ್ನು ಎರಡು ವಿಭಾಗಗಳನ್ನಾಗಿ ಮಾಡಿ ಇಡುತ್ತಾರೆ: ಇನ್ನೂ ಬದುಕಿರುವವರದು ಮತ್ತು ಈಗಾಗಲೇ ತೀರಿಕೊಂಡವರದು.

ತೀರಿಕೊಂಡವರ ವಿವರಗಳನ್ನೂ ಅವರು ಕಾಪಾಡಿ ಇಡಬೇಕಾದ ಕಾರಣದಿಂದ ಮತ್ತು ಆ ಪ್ರಾಂತ್ಯದಲ್ಲಿ, ಜಗತ್ತಿನ ಎಲ್ಲೆಡೆ ಆಗುವಂತೆ, ಮಕ್ಕಳು ಹುಟ್ಟುತ್ತಲೇ ಇರುವುದರಿಂದ ಅಲ್ಲಿನ ಕಡತಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಹೋಗುತ್ತದೆ.

ಈಗ ಇರುವ ಜಾಗದಲ್ಲಿ ಕಡತಗಳು ಹಿಡಿಯದಿದ್ದಾಗ ಆ ಕಚೇರಿಯ ಹಿಂಭಾಗದ ಗೋಡೆಯನ್ನು ಕೆಡವಿ ಹತ್ತಿಪ್ಪತ್ತು ಅಡಿಗಳಷ್ಟು ವಿಸ್ತರಿಸಿ ಮತ್ತೆ ಗೋಡೆಯನ್ನು ಕಟ್ಟಲಾಗುತ್ತದೆ.ಹೀಗೆ ವಿಸ್ತರಣೆ ನಡೆದಾಗ ಅಲ್ಲಿನ ಎಲ್ಲಾ ಕಡತಗಳನ್ನು ಮರು ಜೋಡಿಸಿ ಇಡಬೇಕು.

ಆದರೆ ಆ ಕೆಲಸವನ್ನು ಮಾಡುವಷ್ಟು ಕೆಲಸಗಾರರು ಆ ಇಲಾಖೆಯಲ್ಲಿ ಇರದ ಕಾರಣ ಕಡತಗಳು ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿ ಇರುವುದಿಲ್ಲ. ಇದರಿಂದಾಗಿ ಕಡತಗಳನ್ನು ಹುಡುಕುವ ಕೆಲಸ ಮತ್ತಷ್ಟು ಕಷ್ಟಕರವಾಗುವುದಷ್ಟೇ ಅಲ್ಲದೆ ಈಗಲೂ ಬದುಕಿರುವವರ ಮತ್ತು ಈಗಾಗಲೇ ಸತ್ತಿರುವವರ ಕಡತಗಳೆಲ್ಲ ಕಲಸಿಹೋಗಿ ಯಾರ ಬಗ್ಗೆ ಮಾಹಿತಿ ಬೇಕಾದರೂ ಆ ಇಲಾಖೆಯ ಕೆಲಸಗಾರರು ಭಾರೀ ಪ್ರಮಾಣದ ಕೆಲಸ ಮಾಡಬೇಕಾಗುತ್ತದೆ.

ಅಗತ್ಯವಿದ್ದಾಗ ಅಲ್ಲಿರುವ ಮಾಹಿತಿ ತಮಗೆ ದೊರಕಲಿ ಬಿಡಲಿ, ಅಲ್ಲಿನ ಸರಕಾರವು ಆ ಜನನ–ಮರಣಗಳ ನೋಂದಣಿ ಇಲಾಖೆಯಲ್ಲಿ ದಾಖಲೆಗಳನ್ನು ಒಟ್ಟುಮಾಡುವ ಕೆಲಸವನ್ನು ಮುಂದುವರೆಸುತ್ತಲೇ ಇರುತ್ತದೆ. ಸರಕಾರದ ಆಜ್ಞಾನುವರ್ತಿ ಪ್ರಜೆಗಳು ತಮ್ಮ ಕುಟುಂಬಗಳಲ್ಲಿ ಆದ ಜನನ–ಮರಣಗಳ ದಾಖಲೆಯನ್ನು ಅವರಿಗೆ ಒದಗಿಸುತ್ತಲೇ ಇರುತ್ತಾರೆ.

***
ಹದಿನೈದನೆಯ ಶತಮಾನ ಐರೋಪ್ಯ ನಾಗರಿಕತೆಯಲ್ಲಿ ದೊಡ್ಡ ಅಲೆಗಳನ್ನು ಎಬ್ಬಿಸಿದ ಕಾಲ. ಕೊಲಂಬಸ್ ತನ್ನ ಹಡಗನ್ನೇರಿ ಜಗತ್ತಿನ ಹಲವು ಪ್ರದೇಶಗಳನ್ನು ಭೇಟಿ ಮಾಡಿದ್ದು ಕೂಡಾ ಇದೇ ಸಂದರ್ಭದಲ್ಲಿ. ಯುರೋಪಿನ ಕೆಲವು ಪ್ರಭುತ್ವಗಳು ತಮ್ಮ ಬಾಹುಗಳನ್ನು ದೂರ ದೂರಕ್ಕೆ ಚಾಚಿ ಆ ನೆಲಗಳೆಲ್ಲವನ್ನೂ ತಮ್ಮ ಅಧಿಕಾರದಂಡದ ಕೆಳಗೆ ತಂದುಕೊಂಡು ತಮ್ಮೆಲ್ಲ ಬೊಕ್ಕಸಗಳನ್ನು ತುಂಬಿಸಿಕೊಂಡ ಕಾಲ ಇದು.

ಇದೇ ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿ ಸ್ಪೇನ್ ದೇಶವನ್ನು ಪ್ರಖ್ಯಾತ ರಾಣಿ ಇಸಾಬೆಲ್ಲಾ ಆಳುತ್ತಿದ್ದಳು. ಆಕೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಪ್ರಬಲ ಇಚ್ಛೆ.

ಹಾಗಾಗಿ ಕೊಲಂಬಸ್ ತನ್ನ ಜಲಯಾನದ ಯೋಜನೆಯನ್ನು ಹಾಕಿಕೊಂಡಾಗ ಈಕೆ ಅವನನ್ನು ಪ್ರೋತ್ಸಾಹಿಸಿ ತನ್ನ ಸಾಮ್ರಾಜ್ಯವಿಸ್ತರಣೆಗೆ ಅವನನ್ನು ಬಳಸಿಕೊಂಡಳು.ಸ್ಪೇನ್‌ನಲ್ಲಿ ಆಗ ಆಂತೋನಿಯೋ ನೆಬ್ರೀಜಾ ಎಂಬ ವಿದ್ವಾಂಸನೊಬ್ಬನಿದ್ದ. ಆಗಲೇ ಲ್ಯಾಟಿನ್ ವ್ಯಾಕರಣದ ಕುರಿತು ಪಾಂಡಿತ್ಯಪೂರ್ಣ ಗ್ರಂಥವೊಂದನ್ನು ರಚಿಸಿದ್ದ ಆತ ಸ್ಪಾನಿಷ್ ಅಥವ ಕಾಸ್ಟಿಲಿಯನ್ ಭಾಷೆಯ ವ್ಯಾಕರಣವನ್ನು ರಚಿಸುವುದಕ್ಕಾಗಿ ರಾಣಿ ಇಸಾಬೆಲ್ಲಾಳ ಬಳಿ ಧನಸಹಾಯವನ್ನು ಕೋರಿದ.

ಆತ ರಾಣಿಗೆ ಬರೆದ ಕೋರಿಕೆಯ ಪತ್ರದಲ್ಲಿ ತನ್ನ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸಿದ್ದ. ಆ ಪತ್ರದ ಕೆಲವು ವಿವರಗಳು ಕಾಸ್ಟಿಲಿಯನ್ ಭಾಷೆಯನ್ನು ಬಳಸದ ಜನರಿಗೂ ಅತ್ಯಂತ ಮಹತ್ತ್ವಪೂರ್ಣ ಸಂಗತಿಗಳನ್ನು ತಿಳಿಸುತ್ತವೆ. ಒಂದು ದೊಡ್ಡ ಯೋಜನೆಗೆ ಹಣವನ್ನು ಕೇಳಬೇಕಾದರೆ ಆ ಯೋಜನೆಯ ಮಹತ್ತ್ವವನ್ನು ರಾಣಿಯ ಗಮನಕ್ಕೆ ತಂದು ಆಕೆಯ ಮನವೊಲಿಸಬೇಕು.

ಆ ಪತ್ರದಲ್ಲಿ ನೆಬ್ರೀಜಾ ಹೀಗೆ ಬರೆಯುತ್ತಾನೆ. ‘‘ಸ್ಪೇನಿನ ಜನರು ಬಳಸುವ ಕಾಸ್ಟಿಲಿಯನ್ ಭಾಷೆಗೆ ಸರಿಯಾದ ಚೌಕಟ್ಟೆಂಬುದು ಇಲ್ಲ. ಇದು ಹಲವಾರು ‘ಗ್ರಾಮ್ಯ’ ಪ್ರಭೇದಗಳಲ್ಲಿ ಒಡೆದುಹೋಗಿದೆ. ಹೀಗಾದರೆ ಸಾಮ್ರಾಜ್ಞಿಯಾದ ನಿಮ್ಮ ಯಶೋಗಾಥೆಗಳು ನಿಮ್ಮ ಪ್ರಜೆಗಳನ್ನು ತಲುಪುವುದಿಲ್ಲ.

ನಾನು ವ್ಯಾಕರಣ ಗ್ರಂಥವೊಂದನ್ನು ರಚಿಸುವ ಮೂಲಕ ಈ ಭಾಷೆಗೆ ಒಂದು ನಿರ್ದಿಷ್ಟ ಸ್ವರೂಪವನ್ನು ನೀಡುತ್ತೇನೆ. ಅದರಿಂದ ಆಗುವ ಪ್ರಯೋಜನಗಳು ಹಲವು. ಪ್ರಜೆಗಳೆಲ್ಲರೂ ಒಂದೇ ಸ್ವರೂಪದ ಭಾಷೆಯನ್ನು ಆಡುವುದರಿಂದ ನಿಮ್ಮ ಯಶಸ್ಸಿನ ಕಥೆಗಳು ಅವರೆಲ್ಲರಿಗೂ ತಲುಪುತ್ತವೆ. ಲ್ಯಾಟಿನ್ ಭಾಷೆಯಲ್ಲಿ ಆದಂತೆ ಈ ಕಥೆಗಳು ಹಲವು ಶತಮಾನಗಳ ಕಾಲ ಉಳಿಯುತ್ತವೆ. ಅಷ್ಟೇ ಅಲ್ಲದೆ ನೀವು ಈಗ ಸಾಮ್ರಾಜ್ಯವನ್ನು ವಿಸ್ತರಿಸುತ್ತಿರುವುದರಿಂದ ಹೊಸ ನೆಲದ ಹೊಸ ಜನರಿಗೆ ಕಾಸ್ಟಿಲಿಯನ್ ಭಾಷೆಯನ್ನು ಕಲಿಸುವುದಕ್ಕೆ ವ್ಯಾಕರಣವು ಅನುಕೂಲ ಮಾಡಿಕೊಡುತ್ತದೆ’’ ಎಂದು ಆತ ಹೇಳುತ್ತಾನೆ.

ನೆಬ್ರೀಜಾನ ಯೋಜನೆಯ ಬಗ್ಗೆ ಚಿಂತಕರು ಹೇಳುವುದೇನೆಂದರೆ, ಇದು ಬರಿಯ ಭಾಷೆಯ ಬಳಕೆ ಮತ್ತು ಕಲಿಕೆಗೆ ಮಿತವಾದ ಯೋಜನೆಯಲ್ಲ. ಬದಲಿಗೆ ಇದು ಒಂದೇ ಭಾಷೆಯನ್ನು ಪ್ರಜೆಗಳೆಲ್ಲರೂ ಆಡುವಂತೆ ಮಾಡಿ ಅವರ ಮೇಲೆ ಹತೋಟಿ ಸಾಧಿಸಲು ಮಾಡಿದ ಯೋಜನೆ ಎಂದು. ಏಕೆಂದರೆ ಎಲ್ಲ ಪ್ರಜೆಗಳೂ ಬಳಸುವ ಒಂದು ಭಾಷೆಯಿದ್ದರೆ ಸಾಮ್ರಾಜ್ಯದ ಆಜ್ಞೆಗಳನ್ನು ಅವರಿಗೆ ತಿಳಿಸುವುದು ಮತ್ತು ಅವರು ಏನು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನುವುದನ್ನು ಸಾಮ್ರಾಜ್ಯವು ತಿಳಿದುಕೊಳ್ಳುವುದು – ಎರಡೂ ಸುಲಭವಾಗಿಬಿಡುತ್ತದೆ.

***
ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಬ್ರಿಟಿಷ್ ತತ್ತ್ವಶಾಸ್ತ್ರಜ್ಞ ಜೆರಮಿ ಬೆಂಥಮ್ ಒಂದು ಕಟ್ಟಡದ ನಕ್ಷೆಯನ್ನು ರೂಪಿಸಿದ. ಅದು ಜೈಲು, ಶಾಲೆ ಅಥವ ಹುಚ್ಚಾಸ್ಪತ್ರೆಯನ್ನು ನಡೆಸಲು ಅನುಕೂಲ ಮಾಡಿಕೊಡುವ ಕಟ್ಟಡದ ನಕ್ಷೆ. ಒಬ್ಬನೇ ಕಾವಲುಗಾರನು ನೂರಾರು ಕೈದಿಗಳನ್ನು ತನ್ನ ಕಣ್ಗಾವಲಿನಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುವಂತಹ ಕಟ್ಟಡದ ಯೋಜನೆ ಇದಾಗಿತ್ತು.

ವೃತ್ತಾಕಾರದ ಈ ಕಟ್ಟಡದಲ್ಲಿ ನೂರಾರು ಕೋಣೆಗಳಿರುತ್ತವೆ. ಈ ಕೋಣೆಗಳಲ್ಲಿ ಇರುವ ಕೈದಿಗಳು ಪರಸ್ಪರ ನೋಡಿಕೊಳ್ಳಲು ಆಗುವುದಿಲ್ಲ. ಹಾಗಾಗಿ ಅವರು ನಿಯೋಜಿತ ಪ್ರತಿಭಟನೆ ಅಥವ ಸಾಮೂಹಿಕ ಪ್ರತಿರೋಧಗಳಲ್ಲಿ ತೊಡಗಲು ಸಾಧ್ಯವಿಲ್ಲ. ಕೈದಿಗಳು ಇರುವ ಎಲ್ಲ ಕೋಣೆಗಳೂ ವೃತ್ತದ ಕೇಂದ್ರದ ದಿಕ್ಕಿನಲ್ಲಿ ತೆರೆದುಕೊಂಡಿರುತ್ತವೆ.

ಕೇಂದ್ರದಲ್ಲಿ ಇರುವ ಎತ್ತರದ ಗೋಪುರದಲ್ಲಿ ನಿಂತ ಕಾವಲುಗಾರನಿಗೆ ಪ್ರತಿಯೊಬ್ಬ ಕೈದಿಯೂ ಕಾಣುತ್ತಾನೆ ಆದರೆ ಯಾವ ಕೈದಿಗೂ ಆ ಕಾವಲುಗಾರ ಕಾಣುವುದಿಲ್ಲ.ನೂರಾರು ಕೈದಿಗಳನ್ನು ಒಬ್ಬ ಕಾವಲುಗಾರ ಸದಾ ನೋಡುತ್ತಿರುವುದು ಸಾಧ್ಯವಿಲ್ಲವಾದರೂ ಕಾವಲುಗಾರ ಕೈದಿಗಳ ಕಣ್ಣಿಗೆ ಕಾಣದೇ ಇರುವುದರಿಂದ ಯಾವತ್ತೂ ಅವರು ಕಾವಲಿನಲ್ಲಿ ಇದ್ದಂತೆಯೇ ವರ್ತಿಸುತ್ತಾರೆ, ತಮ್ಮನ್ನು ತಾವೇ ಕಾಯ್ದುಕೊಳ್ಳುತ್ತಾರೆ.

ನಡುವಿನ ಗೋಪುರದಲ್ಲಿ ನಿಲ್ಲಬೇಕಾದ ಕಾವಲುಗಾರನು ರಜೆ ತೆಗೆದುಕೊಂಡಾಗಲೂ ಕೈದಿಗಳಲ್ಲಿರುವ ಭಯ ಕಡಿಮೆಯಾಗುವುದಿಲ್ಲ, ಏಕೆಂದರೆ ಅಲ್ಲಿ ಕಾವಲುಗಾರನಿದ್ದಾನೋ ಇಲ್ಲವೋ ಎಂಬುದು ಕೈದಿಗಳಿಗೆ ಗೊತ್ತಾಗುವುದೇ ಇಲ್ಲ. ಕಾವಲುಗಾರನು ಅವನಿಗೆ ಯಾರನ್ನು ಬೇಕೋ ಅವರನ್ನು, ಎಷ್ಟು ಹೊತ್ತು ಬೇಕೋ ಅಷ್ಟು ಹೊತ್ತು ಗಮನಿಸಿ ಅವರು ತಪ್ಪು ಮಾಡಿದಾಗ ಹೆಚ್ಚಿನ ಶಿಕ್ಷೆಗೆ ಗುರಿ ಮಾಡಬಹುದು.

ಈ ನಕ್ಷೆಯನ್ನು ಆಧರಿಸಿ ಬ್ರಿಟನ್ನಿನಲ್ಲಿ ಜೈಲೊಂದನ್ನು ಕಟ್ಟಲು ಬೆಂಥಮ್ ಪ್ರಾರಂಭಿಸಿದನಾದರೂ ಅದು ಪೂರ್ಣಗೊಳ್ಳಲಿಲ್ಲ. ಆದರೆ ‘ಪ್ಯಾನಾಪ್ಟಿಕಾನ್’ ಎಂಬ ಈ ಕಟ್ಟಡದ ಪರಿಕಲ್ಪನೆಯು ಪ್ರಸಿದ್ಧಿಯನ್ನು ಪಡೆದು ಅದಕ್ಕೆ ಹಲವು ಚಿಂತಕರು ಪ್ರತಿಕ್ರಿಯಿಸಿದರು.

‘‘ಯಾವುದೇ ಆಧುನಿಕ ಪ್ರಭುತ್ವವು ಶಿಸ್ತು ಮತ್ತು ಶಿಕ್ಷೆಗಳನ್ನು ತನ್ನ ಆಡಳಿತದ ಮೂಲ ಸೂತ್ರವನ್ನಾಗಿಸಿಕೊಂಡು, ತನ್ನ ಪ್ರಜೆಗಳನ್ನು ಮತ್ತು ಅವರ ಚಟುವಟಿಕೆಗಳನ್ನು ಸದಾ ಪರಿಶೀಲನೆಗೆ ಒಳಪಡಿಸುವ ಮತ್ತು ತನಗೆ ತೋಚಿದಾಗ ಪ್ರಜೆಗಳನ್ನು ತನ್ನ ದಾರಿಗೆ ತಂದುಕೊಳ್ಳುವ ಉತ್ಕಟ ಆಸೆಯನ್ನು ತೋರಿಸುವುದರ ಮುಖಾಂತರ ಬೆಂಥಮ್‌ನ ಸೆರೆಮನೆಯಂತೆಯೇ ಕಾರ್ಯನಿರ್ವಹಿಸುತ್ತದೆ’’ ಎಂದು ಫ್ರೆಂಚ್ ತತ್ತ್ವಶಾಸ್ತ್ರಜ್ಞ ಮಿಷೆಲ್ ಫೂಕೋ ಹೇಳುತ್ತಾನೆ.

‘ಪ್ಯಾನಾಪ್ಟಿಕಾನ್‌’ನಂತೆ ಕೆಲಸ ಮಾಡುವ ಸರಕಾರಗಳು ತಮ್ಮ ಪ್ರಜೆಗಳನ್ನು ಸದಾ ಗಮನಿಸುತ್ತಲೇ ಇರುತ್ತವೆ ಎಂಬ ಪ್ರಜ್ಞೆಯನ್ನು ಪ್ರಜೆಗಳಲ್ಲಿ ಹುಟ್ಟುಹಾಕಿದ ನಂತರ ಅವರ ಮೇಲೆ ದಬ್ಬಾಳಿಕೆ ನಡೆಸಲು, ಅವರನ್ನು ಶಿಸ್ತಿನಲ್ಲಿ ಇಡಲು ಲಾಠಿಗಳ, ಕಾಲಿಗೆ ಹಾಕುವ ಸಂಕೋಲೆಗಳ, ಅವಕ್ಕೆ ಜಡಿಯುವ ದೊಡ್ಡ ದೊಡ್ಡ ಬೀಗಗಳ ಅಗತ್ಯವೇ ಬೀಳುವುದಿಲ್ಲ. ಸರಕಾರವೆಂಬುದು ಕಣ್ಣಿಗೆ ಕಾಣದಿರುವ, ಆದರೆ ಎಲ್ಲರನ್ನೂ ನೋಡುವ ಕಾವಲುಗಾರನಾಗಿ ಪ್ರಜೆಗಳಲ್ಲಿ ನನಗೆ ನಿಮ್ಮೆಲ್ಲರ ಚಟುವಟಿಕೆಗಳ ಮಾಹಿತಿಯೂ ದೊರೆಯುತ್ತದೆ ಎಂಬ ಭಯದ ಮೂಲಕ ಮತ್ತು ತನಗೆ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ಪ್ರಜೆಗಳನ್ನು ಹದ್ದುಬಸ್ತಿನಲ್ಲಿಡುತ್ತದೆ.

***
ಹಣದ ಹೊಸ ರೀತಿಯ ಬಳಕೆಯ ಬಗ್ಗೆ ಅಧ್ಯಯನ ಮಾಡಿರುವ ಆರ್ಥಿಕ ತಜ್ಞ ಡಾಮಿನಿಕ್ ಫ್ರಿಸ್ಬೀ, ಈ ಜಗತ್ತು ನಿಧಾನವಾಗಿ ನಗದು ರಹಿತ ವಹಿವಾಟಿನತ್ತ ತೆವಳುತ್ತಿರುವುದರ ಪರಿಣಾಮಗಳ ಬಗ್ಗೆ ಬರೆಯುತ್ತಾರೆ.

‘‘ದೊಡ್ಡ ವಹಿವಾಟುಗಳನ್ನು ನೋಟು ನಾಣ್ಯಗಳ ಮುಖಾಂತರ ನಡೆಸುವವರನ್ನು ಅನುಮಾನದಲ್ಲಿ ನೋಡುವ ಪರಿಪಾಠ ಜಗತ್ತಿನ ಎಲ್ಲೆಡೆ ಬೆಳೆಯುತ್ತಿದೆ ಮತ್ತು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಚೆಕ್ಕು – ಹೀಗೆ ಬ್ಯಾಂಕುಗಳ ಮಧ್ಯಸ್ಥಿಕೆಯಲ್ಲಿಯೇ ನಡೆಯುವ ವಹಿವಾಟುಗಳನ್ನು ಪ್ರೋತ್ಸಾಹಿಸುವ ಮತ್ತು ಆ ರೀತಿಯ ನಗದು ರಹಿತ ಸಮಾಜವೇ ಸರಿಯೆಂದು ಬಿಂಬಿಸುವ ಕ್ರಿಯೆ ನಿಧಾನವಾಗಿ ಪ್ರಾರಂಭವಾಗಿದ್ದು, ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ನಗದನ್ನು ಬಳಸದೆ ನಡೆಸುವ ಎಲ್ಲ ವಹಿವಾಟುಗಳೂ ಸರ್ಕಾರಗಳ ಗಮನಕ್ಕೆ ಬರುತ್ತದೆ.

ಈ ಮಾಹಿತಿಯು ಸರ್ಕಾರಕ್ಕೆ ಸಿಕ್ಕಿದರೆ ಅದನ್ನು ಅವರು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆಯಾದರೂ ಕೆಟ್ಟ ಸರ್ಕಾರಗಳು ಬರಬಾರದೆಂದೇನೂ ಇಲ್ಲವಲ್ಲ’’ ಎಂದು ಫ್ರಿಸ್ಬೀ ಪ್ರಶ್ನಿಸುತ್ತಾರೆ. ‘‘ನಗದಿನ ಮುಖಾಂತರ ವಹಿವಾಟುಗಳನ್ನು ನಡೆಸುವುದು ಹಣದ ಬಳಕೆದಾರನಿಗೆ ಹಲವು ರೀತಿಯಲ್ಲಿ ಉಪಯುಕ್ತವಾಗಬಲ್ಲದು. ನೋಟು ನಾಣ್ಯಗಳು ಕೈಯಲ್ಲಿ ಇರುವಾಗ ಬೇರೆ ಯಾವ ಮಧ್ಯವರ್ತಿಯ ಸಹಾಯವೂ ಇಲ್ಲದೆ ಪಾವತಿಗಳನ್ನು ನಡೆಸಬಹುದು. ಇಲ್ಲಿ ಹಣದ ಬಳಕೆದಾರನು ಸ್ವತಂತ್ರನಾಗಿರುತ್ತಾನೆ.

ಕೊಳ್ಳಲು, ಮಾರಲು ಮತ್ತು ಹಣವನ್ನು ಕೂಡಿಟ್ಟುಕೊಳ್ಳಲು ಆತ ಅಥವ ಆಕೆಗೆ ಯಾರ ಮೇಲಿನ ಅವಲಂಬನೆಯ ಅಗತ್ಯವೂ ಇರುವುದಿಲ್ಲ. ಆದರೆ ನಗದು ರಹಿತ ಸಮಾಜದಲ್ಲಿ ಪ್ರತಿಯೊಂದು ವಹಿವಾಟಿಗೂ ಬ್ಯಾಂಕ್ ಮುಂತಾದ ಮಧ್ಯವರ್ತಿಗಳು ಅನಿವಾರ್ಯವಾಗುತ್ತವೆ. ನೋಟು ನಾಣ್ಯಗಳು ಇಲ್ಲವಾದಲ್ಲಿ ಹೋಟೆಲ್ಲಿನ ಗಲ್ಲಾಪೆಟ್ಟಿಗೆಯ ಮೇಲೆ ಕುಳಿತಿರುವ ದುರಾಸೆಯ ಯಜಮಾನನ ಕಣ್ಣು ತಪ್ಪಿಸಿ ಅಲ್ಲಿನ ಕೆಲಸಗಾರನಿಗೆ ಸಣ್ಣ ಟಿಪ್ ಕೂಡಾ ಕೊಡಲಾಗುವುದಿಲ್ಲ, ಸಣ್ಣ ಪ್ರಮಾಣದ ರೈತರು ರಸ್ತೆ ಬದಿಯಲ್ಲಿ ತರಕಾರಿ ಮಾರಿದರೆ ಮಧ್ಯವರ್ತಿಯಿಲ್ಲದೆ ಅದನ್ನು ತನಗೆ ಕೊಳ್ಳಲೂ ಆಗುವುದಿಲ್ಲ ಎನ್ನುತ್ತಾರೆ’’ ಡಾಮಿನಿಕ್ ಫ್ರಿಸ್ಬೀ.

ನೋಟು ನಾಣ್ಯಗಳ ಚಲಾವಣೆ ಪೂರ್ತಿಯಾಗಿ ನಿಲ್ಲದಿದ್ದಾಗಲೂ ಹೆಚ್ಚಿನ ವಹಿವಾಟುಗಳನ್ನು ನಗದು ರಹಿತವಾಗಿಯೇ ನಡೆಸುವ ಪರಿಸ್ಥಿತಿ ಉಂಟಾದಾಗ ನಾವು ಮಾಡುವ ಎಲ್ಲ ಪಾವತಿಗಳೂ ಸರ್ಕಾರದ ಅಥವ ಸರ್ಕಾರದ ಏಜೆಂಟರ ಕಂಪ್ಯೂಟರುಗಳಲ್ಲಿ ದಾಖಲಾಗುತ್ತದೆ. ಈ ಮಾಹಿತಿಯು ದೊಡ್ಡ ಗುಡ್ಡವಾಗಿ ಸಾರಮಾಗೋನ ಕಾದಂಬರಿಯಲ್ಲಿ ಆದಂತೆ ದಿನದಿನಕ್ಕೂ ಬೆಳೆಯುತ್ತಲೇ ಹೋಗುತ್ತದೆ. ಆದರೆ ಈ ಮಾಹಿತಿಗಳ ದಾಖಲೆಗಳು ಕಚೇರಿಯ ಕಡತಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿರುವುದಿಲ್ಲ.

ಆ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ಹುಡುಕಿ ಬಳಸಲು ಕಂಪ್ಯೂಟರುಗಳು ಸಾಧ್ಯ ಮಾಡಿಕೊಡುತ್ತವೆ. ವ್ಯಕ್ತಿಯೊಬ್ಬನು ತನ್ನ ಆದಾಯವನ್ನು ಎಲ್ಲೆಲ್ಲಿ, ಯಾವುದರ ಕುರಿತಾಗಿ, ಯಾವಾಗ ಖರ್ಚು ಮಾಡಿದ್ದಾನೆ, ಅವನ ಅಗತ್ಯಗಳು, ಅವನ ಆಯ್ಕೆಗಳು, ಅವನ ಆದ್ಯತೆಗಳು ಏನೇನು ಎಂಬುದರ ವಿವರ ಸರ್ಕಾರದವರಿಗೆ ಯಾವಾಗ ಬೇಕೋ ಆಗ ದೊರೆಯುತ್ತದೆ. ಅಥವ ಕ್ಯಾಮೆರಾದಂಥ ಯಾವುದೋ ವಸ್ತುವನ್ನು ದೇಶದ ಯಾವ ಯಾವ ಪ್ರಜೆಗಳು ಖರೀದಿಸಿದ್ದಾರೆಂಬ ಮಾಹಿತಿ ಎಲ್ಲ ವಿವರಗಳೊಂದಿಗೆ ಸಿಗುತ್ತದೆ.

ಜೆರಮಿ ಬೆಂಥಮ್‌ನ ಜೈಲಿನಲ್ಲಿ ಆಗುವಂತೆ ನಗದು ರಹಿತ ಸಮಾಜದಲ್ಲಿ ಅದೃಶ್ಯ ಕಾವಲುಗಾರನೊಬ್ಬನ ಭೂತ ನಮ್ಮನ್ನು ಸದಾ ಕಾಡುತ್ತಿರುತ್ತದೆ. ಆದರೆ ಆ ಜೈಲಿನಲ್ಲಿ ಇರುವಂತೆ ಭೌತ ಶರೀರವನ್ನು ಹೊಂದಿರುವ ಕಟ್ಟಡದ ಅಗತ್ಯ ಗಣಕೀಕೃತ ವಹಿವಾಟಿನಲ್ಲಿ ಇರುವುದಿಲ್ಲ. ಇಲ್ಲಿ ಕಾವಲುಗಾರನು ಎಲ್ಲೆಲ್ಲೂ ಇರುತ್ತಾನೆ, ಆದರೆ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ.

ಜೈಲಿನಲ್ಲಾದರೆ ಆ ಕಾವಲುಗಾರ ಕೆಲವು ಜನರನ್ನು ಮಾತ್ರ ಗಮನಿಸಬಲ್ಲ. ಉಳಿದ ಕೈದಿಗಳು ಆತ ನಮ್ಮನ್ನು ನೋಡುತ್ತಿರಬಹುದು ಎಂಬ ಭಯದಲ್ಲಿ ಮಾತ್ರ ಇರುತ್ತಾರೆ.ನಗದು ರಹಿತ ಸಮಾಜದಲ್ಲಿ ಇರುವ ಕಾವಲುಗಾರ ಸರ್ಕಾರವು ಸಹಸ್ರಾಕ್ಷ ಮಾತ್ರವಲ್ಲ, ಅದು ಹಳೆಯ ದಾಖಲೆಗಳನ್ನೂ ತೆಗೆದು ಶಿಸ್ತು ಶಿಕ್ಷೆಗಳನ್ನು ವಿಧಿಸಬಲ್ಲದು.ಈ ರೀತಿಯ ಸಂದರ್ಭದಲ್ಲಿ ನೆಬ್ರೀಜಾನಂಥವರು ಪ್ರಜೆಗಳಿಗೆ ಭಾಷೆಯನ್ನು ಕಲಿಸಲು ಒದ್ದಾಡಬೇಕಿಲ್ಲ.

ಪ್ರಜೆಗಳು ಆಡುವ ಮಾತು ಯಾವ ಭಾಷೆಯಲ್ಲಿಯೇ ಇರಲಿ ಅವರು ನಡೆಸುವ ವಹಿವಾಟುಗಳು, ಪಾವತಿಗಳು ಸರ್ಕಾರವು ನಿಗದಿಪಡಿಸಿದ ಗಣಕೀಕೃತ ಆರ್ಥಿಕ ವ್ಯವಸ್ಥೆಯ ಪರಿಭಾಷೆಯಲ್ಲಿಯೇ ನಡೆಯುತ್ತದೆ. ಜಗತ್ತಿನೆಲ್ಲೆಡೆಯೂ ವರ್ತಮಾನದ ಪ್ರಭುತ್ವಗಳು ಮಾಹಿತಿ ಕೂಡಿಡುವುದನ್ನು ಮತ್ತು ಅದನ್ನು ಬೇಕೆಂದಾಗ ಬಳಸುವ ಭಯಾನಕ ಶಕ್ತಿಯನ್ನು ರಾಕ್ಷಸೀ ಪ್ರಮಾಣದಲ್ಲಿ ಬೆಳೆಸಿಕೊಂಡಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT