ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತಚರಿತ್ರೆಯ ಕೆಂಪು ಗುಲಾಬಿ

Last Updated 9 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟ ಚಳವಳಿಯ ಆರ್ದ್ರ ನೆನಪುಗಳಿವೆ. ಏಪ್ರಿಲ್ 13ಕ್ಕೆ ಇಲ್ಲಿ ಹತ್ಯಾಕಾಂಡ ನಡೆದು 92 ವರ್ಷ. ಈ ನೆಪದಲ್ಲಿ ಜಲಿಯನ್ ವಾಲಾಬಾಗ್‌ನ ರಕ್ತಚರಿತ್ರೆಯ ನೆನಪು. 
 

ಪಂಜಾಬ್‌ನ ಅಮೃತಸರ ಎಂದೊಡನೆ ಸ್ವರ್ಣಮಂದಿರ ನೆನಪಾಗುತ್ತದೆ. ಸ್ವರ್ಣಮಂದಿರದಷ್ಟೇ ಚಾರಿತ್ರಿಕ ಮಹತ್ವದ ಸ್ಥಳ ಜಲಿಯನ್ ವಾಲಾಬಾಗ್. ಆಂಗ್ಲರ ದೌರ್ಜನ್ಯದಿಂದ ಸಾವಿರಾರು ಭಾರತೀಯರು ವೀರಮರಣವನ್ನಪ್ಪಿದ ಜಲಿಯನ್‌ವಾಲಾ ಬಾಗ್ ಸ್ವರ್ಣಮಂದಿರದಿಂದ ಕೇವಲ ಐದು ನಿಮಿಷದ ನಡಿಗೆ ದೂರದಲ್ಲಿದೆ.

ಉದ್ಯಾನದ ಹೊರಭಾಗದಲ್ಲಿ ಕಲಾತ್ಮಕವಾದ ಗೋಡೆಯ ಮೇಲೆ ಬರೆದ ‘ಜಲಿಯನ್ ವಾಲಾ ಬಾಗ್’ ಬರಹ ಥಟ್ಟನೆ ಗಮನ ಸೆಳೆಯುತ್ತದೆ. ಪ್ರವೇಶದ್ವಾರದ ಕಟ್ಟಡ ಕೂಡಾ ಅತ್ಯಾಕರ್ಷಕವಾಗಿದ್ದು ಗಮನವಿಟ್ಟು ನೋಡಬೇಕಾಗುತ್ತದೆ.ಒಳಗೆ ಹೋಗುತ್ತಿದ್ದಂತೆ, ಬ್ರಿಟಿಷ್ ಸೈನಿಕರು 1919ರ ಏಪ್ರಿಲ್ 13ರಂದು ನಿರಾಯುಧರಾಗಿದ್ದ ಸಾವಿರಾರು ಜನರ ಮೇಲೆ ಗುಂಡು ಹಾರಿಸಿದ ಸ್ಥಳದಲ್ಲಿ ನಿರ್ಮಿಸಿರುವ ತ್ರಿಕೋನಾಕೃತಿಯ ಸ್ಮಾರಕವನ್ನು ನೋಡಬಹುದಾಗಿದೆ.

ಬಲಭಾಗದಲ್ಲಿ ಹತ್ಯಾಕಾಂಡದಲ್ಲಿ ಮೃತಪಟ್ಟವರ ಸ್ಮರಣಾರ್ಥ ‘ಅಮರ ಜ್ಯೋತಿ’ಯನ್ನು ಸ್ಥಾಪಿಸಲಾಗಿದೆ. ಇಲ್ಲಿನ ಜ್ಯೋತಿಯನ್ನು ನವದೆಹಲಿಯ ರಾಜ್‌ಘಾಟ್‌ನಲ್ಲಿ ಇರುವಂತೆ ನಿರಂತರವಾಗಿ ಬೆಳಗಲಾಗುತ್ತಿದೆ. ಅಮರ ಜ್ಯೋತಿ ರಕ್ಷಣೆಗಾಗಿ ಉದ್ಯಾನಗಳಲ್ಲಿ ನಿರ್ಮಾಣ ಮಾಡುವ ಬ್ಯಾಂಡ್‌ಸ್ಟ್ಯಾಂಡ್ ರೀತಿಯ ವೇದಿಕೆ ರೂಪಿಸಲಾಗಿದೆ.
 

ಮುಂದೆ ಹೋದರೆ ಎಡಭಾಗದಲ್ಲಿ ಹುಲ್ಲುಹಾಸಿನ ಉದ್ಯಾನ ಕಾಣಿಸುತ್ತದೆ. ಅದೇ ಸ್ಥಳದಲ್ಲಿ ಹತ್ಯಾಕಾಂಡ ನಡೆಯುವ ಮೊದಲು ಸಾವಿರಾರು ಜನರು ಸೇರಿದ್ದರು.ಹತ್ಯಾಕಾಂಡ ನಡೆದ ಮರುವರ್ಷವೇ ಜಲಿಯನ್‌ವಾಲಾ ಬಾಗ್ ಸ್ಮಾರಕ ಟ್ರಸ್ಟ್ ರಚನೆಯಾಗಿದೆ. ಟ್ರಸ್ಟ್‌ನಿಂದ ಅಲ್ಲಿ ಸ್ಮಾರಕ ರೂಪಿಸುವ ಕಾರ್ಯ ಮುಂದಿನ ಮೂರು ವರ್ಷಗಳಲ್ಲಿ ನಡೆಯಿತು. ಟ್ರಸ್ಟ್ ಇಲ್ಲಿ ಭೂಮಿ ಖರೀದಿಸಿದ ನಂತರ ಅಲ್ಲಿ ಭವ್ಯ ಸ್ಮಾರಕ ನಿರ್ಮಿಸಲು ಮುಂದಾಯಿತು. ಇದಕ್ಕಾಗಿ ಅಮೆರಿಕದ ವಾಸ್ತು ವಿನ್ಯಾಸಕ ಬೆಂಜಮಿನ್ ಪೋಲ್ ಅವರನ್ನು ಸಂಪರ್ಕಿಸಲಾಯಿತು. ಆತ ರೂಪಿಸಿದ ವಿನ್ಯಾಸದ ಪ್ರಕಾರ ನಯನ ಮನೋಹರವೆನಿಸಿದ ವಿಶಿಷ್ಟ ರೀತಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಲಾಗಿದೆ.
 

ಸುಮಾರು 40 ಅಡಿ ಎತ್ತರದ ಈ ಸ್ಮಾರಕ ಟೆರಾಕೋಟ್ ಕಲಾಕೃತಿಯಂತೆ ಕಾಣುತ್ತದೆ. ಬೃಹತ್ ಶಿಲಾಶಾಸನದಂತೆಯೂ ಇದು ಕಾಣಬರುತ್ತದೆ. ಇದರ ಎರಡೂ ಬದಿಗಳಲ್ಲಿ ‘ಮರಿ ಕಲಾಕೃತಿ’ಗಳೂ ಇವೆ.ಹತ್ಯಾಕಾಂಡದಲ್ಲಿ ಬ್ರಿಟೀಷ್ ಯೋಧರ ಗುಂಡೇಟು ಅಲ್ಲಿ ಸೇರಿದ್ದ ಜನರ ಮೇಲಷ್ಟೇ ಬೀಳಲಿಲ್ಲ. ಗುಂಡುಗಳು ಅಲ್ಲಿದ್ದ ಗೋಡೆಗಳನ್ನೂ ಹೊಕ್ಕಿವೆ. ಇತಿಹಾಸದ ಘಟನೆಗಳನ್ನು ನೆನಪಿಸುವಂತೆ ಗುಂಡೇಟು ತಗುಲಿದ ಗೋಡೆಗಳನ್ನು ರಕ್ಷಿಸಿಡಲಾಗಿರುವುದನ್ನು ಇಲ್ಲಿ ನೋಡಬಹುದು. ಗುಂಡುಗಳು ಹೊಕ್ಕ ಸ್ಥಳವನ್ನು ಸುಲಭವಾಗಿ ನೋಡಲು ಸಾಧ್ಯವಾಗುವಂತೆ ಅಲ್ಲಿ ಬಿಳಿ ಬಣ್ಣದಿಂದ ಚೌಕಗಳನ್ನು ಗುರುತು ಮಾಡಲಾಗಿದೆ. ಈ ಗೋಡೆಗಳ ಹಿಂದೆ ಸುಂದರವಾದ ‘ಸೌಧ’ ನಿರ್ಮಿಸಲಾಗಿದೆ. ಗೋಡೆಯಲ್ಲಿನ 28 ಗುಂಡುಗಳ ಬಗ್ಗೆ ವಿವರಣೆ ನೀಡುವ ಫಲಕವನ್ನು ಗೋಡೆ ಹೊಂದಿದೆ.
 

ಬೆಂಕಿಯಿಂದ ತಪ್ಪಿಸಿಕೊಳ್ಳಲು ಬಾಣಲೆಗೆ ಹಾರಿದಂತೆ ಎಂಬ ಗಾದೆಯಂತೆ ಗುಂಡೇಟು ತಪ್ಪಿಸಿಕೊಳ್ಳಲು ಹಲವಾರು ಜನರು ಉದ್ಯಾನದಲ್ಲಿರುವ ಬಾವಿಗೆ ಹಾರಿ ಮೃತಪಟ್ಟಿದ್ದರು. ಈ ಬಾವಿ ಇತಿಹಾಸದ ಪುಟಗಳನ್ನು ನೆನಪಿಸುತ್ತದೆ.ಜಲಿಯನ್‌ವಾಲಾಬಾಗ್‌ನಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ವಿವರ ನೀಡುವ ಫಲಕವೂ ಇಲ್ಲಿದೆ. ಅಲ್ಲಿ ಸುಮಾರು ಎರಡು ಸಾವಿರ ಸಂಖ್ಯೆಯಲ್ಲಿ ಅಮಾಯಕ ಹಿಂದೂ, ಸಿಖ್ ಮತ್ತು ಮುಸ್ಲಿಂ ಧರ್ಮೀಯರು ಸೇರಿದ್ದರು. ಅವರ ಮೇಲೆ ಅಮಾನುಷವಾಗಿ ಬ್ರಿಟೀಷ್ ಸೈನಿಕರು ಗುಂಡು ಹಾರಿಸಿದರು ಎಂಬೆಲ್ಲ ವಿವರ ಫಲಕದಲ್ಲಿದೆ. ನಿರಾಯುಧರ ಮೇಲೆ ಈ ಪ್ರಮಾಣದಲ್ಲಿ ನಡೆದ ಹತ್ಯಾಕಾಂಡದ ಉದಾಹರಣೆ ಬಹುಶಃ ಜಗತ್ತಿನಲ್ಲಿ ಬೇರೆಡೆ ಸಿಗುವುದಿಲ್ಲ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ ಪ್ರಮುಖ ಅಧ್ಯಾಯವಾಗಿದೆ. ಬ್ರಿಟೀಷರ ದೌರ್ಜನ್ಯದ ಪರಮಾವಧಿಗೆ ಜಲಿಯನ್‌ವಾಲಾ ಬಾಗ್ ಸಾಕ್ಷಿಯಾಗಿದೆ.

ಮೊಗೆದಷ್ಟೂ ನೆನಪುಗಳು...
ವ್ಯಾಪಾರ ಮಾಡಲು ಭಾರತಕ್ಕೆ ಬಂದ ಬ್ರಿಟೀಷರು ತಮ್ಮ ಕುತಂತ್ರಗಳಿಂದ ನಮ್ಮ ದೇಶವನ್ನೇ ತಮ್ಮ ಕೈವಶ ಮಾಡಿಕೊಂಡರು. ಅವರು ಹೇಳಿದ್ದೇ ಕಾಯಿದೆ. ನಡೆದದ್ದೇ ದಾರಿ. ಭಾರತೀಯರು ದೌರ್ಜನ್ಯವನ್ನು ಎಷ್ಟು ದಿನ ತಾನೇ ಸಹಿಸಿಕೊಳ್ಳಲು ಸಾಧ್ಯವಿತ್ತು? ಬ್ರಿಟೀಷರ ವಿರುದ್ಧ

ದೇಶದಾದ್ಯಂತ ದಂಗೆಗಳು ನಡೆದವು.
ಭಾರತೀಯರ ಸ್ವಾತಂತ್ರ್ಯ ಹೋರಾಟವನ್ನು ನೀರೆರೆದು ಪೋಷಿಸಿದ ಪತ್ರಿಕೆಗಳ ಬಾಯಿ ಮುಚ್ಚಿಸಲು, ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರನ್ನು ಯಾವುದೇ ವಿಚಾರಣೆ ಇಲ್ಲದೆ ಬಂಧಿಸಿ ಸೆರೆಮನೆಗೆ ಅಟ್ಟಲು ರೌಲತ್ ಕಾಯಿದೆಯನ್ನು ಜಾರಿಗೊಳಿಸಲಾಯಿತು.
ಆಂಗ್ಲ ನ್ಯಾಯಾಧೀಶ ಸಿಡ್ನಿ ರೌಲತ್ ನೇತೃತ್ವದಲ್ಲಿ ರಚಿಸಲಾದ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಭಾರತೀಯರನ್ನು ಬಗ್ಗುಬಡಿಯಲು ರೌಲತ್ ಕಾಯಿದೆ ತರಲಾಯಿತು.
 

ಭಾರತೀಯರು ಮತ್ತು ಬ್ರಿಟೀಷರ ನಡುವೆ ಸಂಘರ್ಷಗಳು ಆಗಿಂದಾಗ್ಗೆ ನಡೆಯುತ್ತಲೇ ಇತ್ತು. ಎರಡೂ ಕಡೆ ಸಾವು ನೋವುಗಳು ಸಂಭವಿಸುತ್ತಲೇ ಇತ್ತು. ಗಾಂಧೀಜಿ ನೇತೃತ್ವದಲ್ಲಿ ಅಹಿಂಸಾ ರೂಪದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದರೂ ಮತ್ತೊಂದು ಕಡೆ ಕ್ರಾಂತಿಯ ಹೋರಾಟ ಕೂಡಾ ಜರುಗಿತ್ತು.
 

ಇಂಗ್ಲೆಂಡಿನ ಕ್ರೈಸ್ತ ಧರ್ಮ ಪ್ರಚಾರಕಿ ಮಾರ್ಷೆಲ್ಲಾ ಶ್ರೇವುಡ್ ಅಮೃತಸರದಲ್ಲಿ ಸೈಕಲ್ ಮೇಲೆ ಹೋಗುತ್ತಿದ್ದಾಗ ಸ್ಥಳೀಯರು ಆಕೆಯನ್ನು ಸೈಕಲ್‌ನಿಂದ ಬೀಳಿಸಿ ಥಳಿಸಿದರು. ಮೇಲೆದ್ದು ಆಕೆ ಸೈಕಲ್ ಬಿಟ್ಟು ಓಡಿ ಹೋಗುತ್ತಿದ್ದರೂ ಆಕೆಯನ್ನು ಅಟ್ಟಿಸಿಕೊಂಡು ಹೋಗಿ ಮತ್ತೆ ಥಳಿಸಿದರು. ಆನಂತರ ಆಕೆಗೆ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಈ ಘಟನೆ ನಡೆಯುವ ಮೊದಲು ಸುಮಾರು 20 ಭಾರತೀಯರನ್ನು ಬಿಟೀಷರು ಹತ್ಯೆ ಮಾಡಿದ್ದರು. ಮುಂದಿನ ಎರಡು ದಿನ ಅಮೃತಸರದಲ್ಲಿ ಶಾಂತಿ ನೆಲೆಸಿತ್ತು. ಆದರೆ ಪಂಜಾಬ್‌ನ ಇತರ ಪ್ರದೇಶಗಳಲ್ಲಿ ಕ್ರಾಂತಿಯ ಕಿಚ್ಚು ಜ್ವಾಲಾಮುಖಿಯಾಗಿ ಪ್ರವಹಿಸಿತು. ರೈಲು ಹಳಿಗಳ ಧ್ವಂಸ, ದೂರವಾಣಿ ತಂತಿಗಳ ಕಡಿತ, ಸರ್ಕಾರಿ ಕಚೇರಿಗಳ ನಾಶ ಮಾಡಲಾಯಿತಲ್ಲದೇ ಮೂವರು ಬ್ರಿಟೀಷರನ್ನು ಕೊಲ್ಲಲಾಯಿತು. ಮಾರ್ಷೆಲ್ಲಾ ಪ್ರಕರಣದ ನಂತರ ಪಂಜಾಬ್‌ನಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಯಿತು.
 

ಹಬ್ಬದ ಹೊತ್ತು ನೆತ್ತರ ಓಳಿ
ಸಿಖ್ ಧರ್ಮೀಯರಿಗೆ ಬೈಸಾಕಿ ಹಬ್ಬದ ದಿನ ತುಂಬಾ ಪವಿತ್ರವಾದುದು. ಅಮೃತಸರ ಜಿಲ್ಲೆಯ ಆಸುಪಾಸಿನ ಗ್ರಾಮಗಳ ಸಾವಿರಾರು ಜನರು ವಾಡಿಕೆಯಂತೆ ಅಂದು ಅಂದರೆ ಮಾರ್ಷೆಲ್ಲಾ ಪ್ರಕರಣ ನಡೆದ ಎರಡು ದಿನಗಳ ನಂತರ 1919ರ ಏಪ್ರಿಲ್ 13ರಂದು ಜಲಿಯನ್‌ವಾಲಾ ಬಾಗ್‌ನಲ್ಲಿ ಸೇರಿದ್ದರು. ಬೈಸಾಕಿ ಹಬ್ಬದ ಆಚರಣೆಯ ಜತೆ ರೌಲತ್ ಕಾಯಿದೆಯ ವಿರುದ್ಧ ಪ್ರತಿಭಟನೆ ನಡೆಸುವುದು ಅವರ ಉದ್ದೇಶವಾಗಿತ್ತು. ನಿಷೇಧಾಜ್ಞೆಯ ಅರಿವಿಲ್ಲದ ಗ್ರಾಮದ ಜನತೆ ಅಲ್ಲಿ ಸೇರಿದ್ದರು. ನಿಷೇಧಾಜ್ಞೆ ಪ್ರಕಾರ ಐವರಿಗಿಂತ ಹೆಚ್ಚು ಜನರು ಅಲ್ಲಿ ಸೇರುವಂತಿರಲಿಲ್ಲ. ಆದರೆ ಜಲಿಯನ್‌ವಾಲಾಬಾಗ್‌ನಲ್ಲಿ ಸಾವಿರಾರು ಜನ ಜಮಾಯಿಸಿದ್ದರು.
 

ಇಂತಹುದೇ ಸಮಯಕ್ಕೆ ಕಾಯುತ್ತಿದ್ದ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡೈಯರ್ ಬಂದೂಕುಗಳನ್ನು ಹಿಡಿದಿದ್ದ 90 ಬ್ರಿಟೀಷ್ ಸೈನಿಕರ ಜತೆ ಜಲಿಯನ್‌ವಾಲಾಬಾಗ್ ಪ್ರವೇಶಿಸಿದರು. ಅಲ್ಲಿ ಸೇರಿದ್ದ ಜನರು ತಮ್ಮಿಂದ ತಪ್ಪಿಸಿಕೊಂಡು ಹೋಗಲು ಸಾಧ್ಯವಾಗದಂತೆ ಇದ್ದ ಒಂದು ದ್ವಾರವನ್ನು ಮುಚ್ಚಿದರು.
 

ನಿರಾಯುಧರಾಗಿದ್ದ ಜನರಿಗೆ ಯಾವುದೇ ಮುನ್ಸೂಚನೆ ನೀಡದೆ ಸುಮಾರು 10-15 ನಿಮಿಷಗಳ ಕಾಲ 90 ಸೈನಿಕರು ಬಂದೂಕುಗಳಿಂದ ಗುಂಡು ಹಾರಿಸಿದರು. ಅವರಲ್ಲಿದ್ದ ಮದ್ದುಗುಂಡುಗಳು ಮುಗಿದ ನಂತರವಷ್ಟೇ ಗುಂಡಿನ ಸದ್ದು ನಿಂತಿದ್ದು. ಅವರು ಹಾರಿಸಿದ ಗುಂಡುಗಳೆಷ್ಟು ಗೊತ್ತೇ? 1,650!
ಜನರಿಗೆ ತಪ್ಪಿಸಿಕೊಳ್ಳಲು ದಾರಿಯೇ ಇರಲಿಲ್ಲ. ಉದ್ಯಾನಕ್ಕಿದ್ದ ಒಂದೇ ಒಂದು ದಾರಿಯನ್ನು ಡೈಯರ್ ಬಂದ್ ಮಾಡಿಸಿದ್ದ. ಗುಂಡೇಟು ತಪ್ಪಿಸಿಕೊಳ್ಳಲು ಅಲ್ಲಿದ್ದ ಬಾವಿಗೆ ಜನರು ಹಾರಿದರು. ಈ ಬಾವಿಯಿಂದ 120 ದೇಹಗಳನ್ನು ಹೊರತೆಗೆಯಲಾಗಿದೆ ಎಂದು ಅಲ್ಲಿರುವ ಫಲಕದಲ್ಲಿ ಬರೆಯಲಾಗಿದೆ.
 

ಹತ್ಯಾಕಾಂಡದಲ್ಲಿ ಸತ್ತವರ ಸಂಖ್ಯೆ ಎಷ್ಟು? ಅಧಿಕೃತ ಪ್ರಕಟಣೆ ಪ್ರಕಾರ ಸತ್ತವರು 379 ಜನ. ಆದರೆ ನಿಜವಾಗಿ ಸತ್ತವರ ಸಂಖ್ಯೆ ಸಾವಿರಕ್ಕೂ ಹೆಚ್ಚು ಎಂದು ಅನಧಿಕೃತ ವರದಿಗಳು ತಿಳಿಸಿವೆ.
 

ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡವನ್ನು ಕಣ್ಣಾರೆ ಕಂಡ ಸಿಖ್ ತರುಣ ಉದಾಂಸಿಂಗ್, ಭಾರತೀಯರ ಮೇಲೆ ಕ್ರಮ ತೆಗೆದುಕೊಳ್ಳಲು ಡೈಯರ್‌ಗೆ ಅಧಿಕಾರ ನೀಡಿದ್ದ ಅಂದಿನ ಪಂಜಾಬ್ ಲೆಫ್ಟಿನೆಂಟ್ ಗೌರ್ನರ್ ಮೈಕೆಲ್ ಓಡಯರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ. 1940ರ ಮಾರ್ಚ್ 13ರಂದು ಲಂಡನ್‌ನ ಕಾಕ್ಸ್‌ಟೌನ್ ಸಭಾಂಗಣದಲ್ಲಿ ಸಭೆ ನಡೆಯುತ್ತಿದ್ದಾಗ ಅಲ್ಲಿ ಹಾಜರಿದ್ದ ಉದಾಂಸಿಂಗ್ ಅಲ್ಲಿದ್ದ ಮೈಕೆಲ್ ಓಡಯರ್ ಮೇಲೆ ಪಿಸ್ತೂಲಿನಿಂದ ಐದಾರು ಗುಂಡು ಹಾರಿಸಿದ.
 

ಅದೇ ವರ್ಷ ಜುಲೈ 31ರಂದು ಲಂಡನ್‌ನ ಸೆರೆಮನೆಯಲ್ಲಿ ಉದಾಂಸಿಂಗ್‌ನನ್ನು ಗಲ್ಲಿಗೇರಿಸಲಾಯಿತು. ಇದಕ್ಕೆ ಮುನ್ನ ನಡೆದ ವಿಚಾರಣೆಯ ಸಂದರ್ಭದಲ್ಲಿ ಉದಾಂಸಿಂಗ್ ಉದ್ಘರಿಸಿದ್ದು-  ‘ಮೈಕೆಲ್ ನಿಜವಾದ ಆರೋಪಿ, ಆತನನ್ನು ಕೊಲ್ಲುವ ನನ್ನ ಉದ್ದೇಶ ಸರಿಯಾಗಿದೆ. ಆತ ನನ್ನ ಜನರ ಉತ್ಸಾಹವನ್ನು ಅಡಗಿಸಲು ನಿರ್ಧರಿಸಿದ್ದ. ನಾನು ಆತನನ್ನೇ ಅಡಗಿಸಿದ್ದೇನೆ’.

ಜಲಿಯನ್ ವಾಲಾಬಾಗ್ ಭೇಟಿಯೆಂದರೆ ಚರಿತ್ರೆಯ ನೆನಪುಗಳ ನವೀಕರಣ ಎಂದೇ ಅರ್ಥ. ಅಲ್ಲಿನ ಪರಿಸರ ದೇಶಪ್ರೇಮದ ಆರ್ದ್ರ ನೆನಪುಗಳನ್ನು, ನೋವುಗಳನ್ನು ಪರಿಚಯಿಸುವಂತಹದ್ದು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT