ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹನಾಮಯತೆ

Last Updated 23 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಸಹನಾಮಯತೆ’ ಎಂಬ ಶಬ್ದವು ನನಗೆ ಅರಿವು ಬಂದಾಗಲಿಂದಲೂ ಜೊತೆಯಲ್ಲಿಯೇ ಇದೆ ಅನ್ನಿಸಿಬಿಟ್ಟಿದೆ. ಒಂದು ವಿಧದಲ್ಲಿ ನುಡಿ ಚಿತ್ರವಾಗಿಯೇ ಇದೆ. ಎಲ್ಲಿಯೂ ಒತ್ತಕ್ಷರವಿಲ್ಲ. ಆದ್ದರಿಂದಲೇ ಬಹುಪಾಲು ಮಂದಿ ಹಿಂದು ಮುಂದೆ ನೋಡದೆ ಸರಾಗವಾಗಿ ಬಳಸಿ ಬಿಡ್ತಾರೆ. ಇದು ಅತ್ಯಂತ ನಿರುಪದ್ರವಿ ಎಂಬ ಕಾರಣಕ್ಕಾಗಿಯೂ ಇರಬಹುದು. ಆದರೆ ನಿರಾಡಂಬರ ಸುಂದರಿಯಂತೆ ಅರ್ಥಹೀನವಾಗಿ ಚಲಾವಣೆಗೆ ಒಳಗೊಳ್ಳುವುದೇ ಇಲ್ಲ. ಹಾಗೆ ನೋಡಿದರೆ ನಿರಾಡಂಬರ ಸುಂದರಿಯಂತೆ ಎಂದಾಕ್ಷಣ ಪ್ರಕ್ಷುಬ್ದತೆ, ವಿಕ್ಷಿಪ್ತತೆ, ತಲ್ಲಣ, ಉಗ್ರತೆ ಒಳಗೊಳಗೆ ಇದ್ದರೂ, ಅದನ್ನು ತುಳಿದಿಟ್ಟುಕೊಳ್ಳುವ ಚೈತನ್ಯಮಯತೆಯನ್ನು ಪಡೆದಿರಲು ಸಾಧ್ಯ. ಅಷ್ಟರಮಟ್ಟಿಗೆ ಧ್ಯಾನಸ್ಥತೆಯನ್ನು ಮೈಗೂಡಿಸಿಕೊಂಡಿರುತ್ತದೆ. ಇಲ್ಲದಿದ್ದರೆ, ನನ್ನ ಬಾಲ್ಯ ಕಾಲದಿಂದಲೂ ಹರಿಕಥೆ ದಾಸರಿಂದ, ಸ್ವಾಮಿಗಳಿಂದ, ಹಿರಿಯರಿಂದ ಒಂದೇ ಸಮನೇ ಕೇಳುತ್ತಲೇ ಬಂದಿದ್ದೇನೆ. ತುಂಬಿದ ಕೊಡದಂತಿರುವ ಈ ‘ಸಹನಾಮಯತೆ’ಯನ್ನು ಗೊಂದಲಗೊಳಿಸಲು ಮನಸ್ಸೇ ಬರುವುದಿಲ್ಲ. ಯಾವ ರೂಪದಲ್ಲಿಯಾದರೂ ಗೊಂದಲಗೊಳಿಸಿ ಒತ್ತಕ್ಷರವನ್ನು ಒತ್ತಾಯಪೂರ್ವಕವಾಗಿ ತಂದು ಕೂರಿಸುವುದಕ್ಕೆ ಆಗುವುದಿಲ್ಲ. ಬಹಳಷ್ಟು ಮಂದಿ ಹಿರಿಯರು ಈ ಅಪೂರ್ವ ನುಡಿಯನ್ನು ಕುರಿತು ಮಾತಾಡುವಾಗ ಭೂಮಿತಾಯಿಗೆ ಹೋಲಿಸಿ ಬಿಡ್ತಾರೆ. ಒಂದು ‘ರೂಪಕ’ವಾಗಿಯೂ ಭೂಮಿ ತಾಯಿಯ ಪಕ್ಕದಲ್ಲಿ ನಿಲ್ಲುವುದೆಂದರೆ, ಮೆಚ್ಚಲೇ ಬೇಕಲ್ಲವೇ?.

ಕಾಯುವ ಪರಿಕಲ್ಪನೆಯನ್ನೇ ‘ಸಹನಾಮಯತೆ’ ಶ್ರೀಮಂತಗೊಳಿಸುತ್ತ ಹೋಗುತ್ತದೆ. ಹೀಗೆ ಶುದ್ಧಭಾವದಿಂದ ಕಾಯುತ್ತ ಹೋದವರೇ ಕೆಲವು ಅಮೂಲ್ಯ ಸಂಗತಿಗಳನ್ನು ಬಿಟ್ಟು ಹೋಗಿರುವುದು, ನಮ್ಮ ಮಹಾಕಾವ್ಯಗಳ ನಾಯಕ ನಾಯಕಿಯರೆಲ್ಲ ಸಹನೆ ಬಗ್ಗೆ ಎಂಥ ತಾದಾತ್ಮ್ಯತೆಯನ್ನು ಹೊಂದಿದವರಾಗಿರುತ್ತಾರೆ. ಈ ದೃಷ್ಟಿಯಿಂದ ರಾಮ ಮತ್ತು ಕೃಷ್ಣ ಅವರ ಸೃಷ್ಟಿ ಪ್ರಕ್ರಿಯೆಯೇ ‘ಸಹನಾಮಯತೆ’ಯಿಂದ ಬಂಧಿತವಾಗಿರುವಂಥದ್ದು. ಯಾವುದಕ್ಕೂ ಗಡಿಬಿಡಿ ಮಾಡಿಕೊಳ್ಳುವುದಿಲ್ಲ. ಎಲ್ಲವನ್ನು ನಿರ್ಧರಿಸುವುದು ಕಾಲ ಎಂಬುದನ್ನು ದಟ್ಟವಾಗಿ ನಂಬಿರುತ್ತಾರೆ. ಅದರ ದೊಡ್ಡ ಮೊತ್ತವಾಗಿ ಪ್ರತಿನಿಧಿಗಳಂತೆ ಗೋಚರಿಸುತ್ತಿರುತ್ತಾರೆ. ಎಲ್ಲ ಆಗು ಹೋಗುಗಳನ್ನು ನಿರ್ಧರಿಸುವುದೇ ಕಾಲಘಟ್ಟ. ಅದಕ್ಕೆ ಅತ್ಯಂತ ಅವಿನಾಭಾವದಿಂದ ಕಾಯಬೇಕಾಗುತ್ತದೆ. ಇಂಥ ಸಮಯದಲ್ಲೆಲ್ಲ ಸಹನೆಯೆಂಬುದು ಗುಣಾತ್ಮಕತೆಯಿಂದ ಕಾರ್ಯ ನಿರ್ವಹಿಸುತ್ತಿರುತ್ತದೆ. ವಿಷಾದ ಮತ್ತು ವೇದನೆ ಆವರಿಸಿಕೊಂಡಿದ್ದರೂ, ದುಗುಡಕ್ಕೆ ಒಳಗಾಗದೆ ಸ್ಥಿತಪ್ರಜ್ಞೆಯನ್ನು ಕಾಯ್ದುಕೊಳ್ಳುವುದೂ ಮಹತ್ತರವಾದದ್ದು. ಯಾಕೆಂದರೆ ವರ್ತಮಾನವೆಂಬುದು ನಾಳೆಯ ದಿನಗಳಿಗೆ ಆಶಯಗಳನ್ನು ರವಾನಿಸುವುದೇ ಆಗಿರುತ್ತದೆ. ಹೀಗೆ ಆಗುವುದಕ್ಕೆ ಪೂರ್ವಸಿದ್ಧತೆ ಮಹತ್ವಪೂರ್ಣವಾದದ್ದು. ಒಂದರಿಂದ ಮತ್ತೊಂದನ್ನು ಬಿಡಿಸುವುದು ಎಷ್ಟು ಸಂಕೀರ್ಣವಾಗಿರುತ್ತದೋ, ಅದನ್ನು ಬಂಧಿಸಿಡುವುದು ಕೂಡ ತ್ರಾಸದಾಯಕವಾದದ್ದೇ. ಈ ಅರಿವು ಕಲಸು ಮೇಲೋಗರವಾಗದೆ ಕಾರ್ಯ ನಿರ್ವಹಿಸುವುದು ‘ಸಹನಾಮಯತೆ’ಯಿಂದ. ಜ್ಞಾನದ ತೃಷೆಯೂ ಮುಂದುವರೆಯುತ್ತ ಹೋಗುವುದು ಇದರಿಂದಲೇ. ಅಚ್ಚಕನ್ನಡದ ನಾಣ್ಣುಡಿಯಾದ ‘ತಾಳಿದವನು ಬಾಳಿಯಾನು’ ಕೂಡ, ಸಹನಾಮಯತೆಯ ಬಳುವಳಿಯೇ ಆಗಿದೆ.

ಬಹಳ ಅಚ್ಚರಿಯ ವಿಷಯವೆಂದರೆ, ವಾಲ್ಮೀಕಿಯ ಸೃಷ್ಟಿ, ರಾಮಾಯಣ ರೂಪುಗೊಂಡಿದ್ದು ಎಂಥ ಅಪೂರ್ವವಾದದ್ದು. ಇಷ್ಟು ಸಾವಿರ ವರ್ಷಗಳ ನಂತರವೂ ಆ ಮಹಾಕಾವ್ಯ ಜೀವಂತವಾಗಿರುವುದರ ಜೊತೆಗೆ, ಎಂತೆಂಥ ಮಿಥ್‌ಗಳು ಜನಮಾನಸದಲ್ಲಿ ಆಯಾ ಸಂಸ್ಕೃತಿಗೆ ಅನುಗುಣವಾಗಿ ಹುಟ್ಟಿಕೊಂಡವು ಎಂಬುದು ಕೂಡ ಊಹಿಸಿಕೊಳ್ಳಲು ಆಗದಿರುವಂಥದ್ದು. ಯಾವುದೋ ಒಂದು ಹಿಂಸೆ ಘಟಿಸಿದ್ದಕ್ಕಾಗಿ, ಪಾಪದ ಪ್ರಾಯಶ್ಚಿತ್ತಕ್ಕಾಗಿ ಧ್ಯಾನಸ್ಥನಾಗುವುದು, ಆ ಧ್ಯಾನದ ತೀವ್ರತೆಯು ಎಷ್ಟು ತೀವ್ರವಾದದ್ದು. ಹುತ್ತವೇ ಬೆಳೆದು ಬಿಟ್ಟಿತ್ತು ಎಂಬ ಗಾಢನಂಬಿಕೆಯು ಬೇರೆ ಬೇರೆ ರೂಪಾಂತರಗಳನ್ನು ಪಡೆಯುತ್ತಲೇ ಹೋಗುತ್ತಿದೆ. ಅಷ್ಟೇ ಅಲ್ಲ, ಭಾರತದ ಯಾವುದಾದರೂ ಒಂದು ಭಾಷೆಯಲ್ಲಿ ಪ್ರತಿನಿತ್ಯ ರಾಮಾಯಣ ಮತ್ತು ಮಹಾಭಾರತ ಕುರಿತು ಕೃತಿಯು ಹುಟ್ಟುತ್ತಲೇ ಇರುತ್ತದಂತೆ. ಅಷ್ಟರಮಟ್ಟಿಗೆ ಅರ್ಥಪೂರ್ಣತೆಯನ್ನು ಈ ಎರಡೂ ಕೃತಿಗಳು ಪಡೆದುಬಿಟ್ಟಿವೆ. ವಾಲ್ಮೀಕಿಗೆ ಧ್ಯಾನಸ್ಥ ಪ್ರಕ್ರಿಯೆಯಿಂದ ಅರ್ಥಾತ್ ತಪಸ್ಸಿನಿಂದ ರಾಮಾಯಣ ಸೃಷ್ಟಿಯಾದದ್ದು, ಮಾನಸಿಕ ಸಹನಾಮೂಲದಿಂದಲೇ, ಮಹಾಕಾವ್ಯಗಳ ಎರಡು ಪಾತ್ರಗಳು ನೂರಾರು ವರ್ಷಗಳಿಂದ ಜನಸಮುದಾಯದಲ್ಲಿ ‘ದೇವರು’ ಎಂಬ ಅಸ್ತಿತ್ವವನ್ನು ಪಡೆಯುವುದೇ, ಎಲ್ಲ ಊಹೆಗಳನ್ನು ದಾಟಿ ನಿಲ್ಲುವಂಥದ್ದು. ಹಾಗೆ ನೋಡಿದರೆ, ಈ ಮಹಾಕಾವ್ಯಗಳ ಮೂಲದ್ರವ್ಯವೇ ಸಹನಾಮಯತೆ, ಅದರ ಮುಂದುವರಿದ ಅರ್ಥದಂತೆ ಕಾಯುವುದು. ಒಂದು ರೂಪಕವಾಗಿಯೂ ಎಷ್ಟು ಮನೋಜ್ಞವಾದದ್ದು.

‘ಸಹನಾಮಯತೆ’ ನೂರಾರು ವ್ಯಾಖ್ಯಾನಗಳು ನೆಲೆಗೊಳ್ಳುವ ರೀತಿಯಲ್ಲಿ ಈ ಮಹಾಕಾವ್ಯಗಳ ಪಾತ್ರಗಳು ನಿರ್ವಹಿಸುವ ತಾಳ್ಮೆಯಂತೂ ಅಪೂರ್ವವಾದದ್ದು. ಇದು ‘ನೈತಿಕತೆ’ಯ ಸಂಕೇತವಾಗಿಯೂ ಸಾಂದ್ರಗೊಳ್ಳುತ್ತಾ, ಸಾಮಾಜಿಕ ಸಂದರ್ಭವನ್ನು ನಿಯಂತ್ರಿಸುವ ಮಟ್ಟಿಗೆ ಬೆಳೆದುಬಿಟ್ಟಿದೆ. ವಾಲ್ಮೀಕಿ ಮತ್ತು ವ್ಯಾಸರು ಕೇವಲ ರಾಮ, ಕೃಷ್ಣರನ್ನು ಮಾತ್ರ ಸಹನಾಮಯಿಗಳನ್ನಾಗಿ ರೂಪಿಸಿಲ್ಲ. ರಾವಣ ಕೂಡ ಅತ್ಯಂತ ಗಂಭೀರವಾಗಿ ಸೀತೆಯ ಕಾರಣಕ್ಕಾಗಿ ಸಹನಾಮೂರ್ತಿಯಾಗಿ ಕಾಯುವನು. ಈ ಕಾಯುವಿಕೆಯ ಹಿಂದಿರುವ ಆಶಯವು ಸೀತೆಯು ಇಂದಲ್ಲ ನಾಳೆ ನನ್ನನ್ನು ಒಪ್ಪಿಕೊಳ್ಳಬಹುದು ಎಂಬ ಮನಸ್ಥಿತಿಯನ್ನು ರಾವಣನಂಥ ಪಾತ್ರದಲ್ಲಿ ತುಂಬುವುದಕ್ಕೆ ‘ವಾಲ್ಮೀಕಿ’ಯಂಥ ಧ್ಯಾನಸ್ಥ ಮನಸ್ಥಿತಿಯೇ ಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಕೆಲವು ಉಪಸಂಸ್ಕೃತಿಗಳಲ್ಲಿ ರಾವಣ ನಾಯಕನಾಗಿ ದಟ್ಟಗೊಂಡಿರುವುದು. ಇನ್ನು ಕೃಷ್ಣನ ಜಾಡು ಹಿಡಿದು ಎಲ್ಲೆಲ್ಲಿಗೋ ಹೋಗಬಹುದು. ಆ ಪಾತ್ರವಂತೂ ‘ಸಹನಾಮಯತೆ’ಗೆ ದಂಡಕಾರಣ್ಯವಿದ್ದಂತೆ. ಬಾಲಕ–ಬಾಲಕಿಯರಿಂದ ಮೊದಲ್ಗೊಂಡು ವಯೋವೃದ್ಧದವರೆಗೆ ವಿಭಿನ್ನ ನೆಲೆಗಳಲ್ಲಿ ಆವರಿಸಿಕೊಂಡು ಬಿಟ್ಟಿರುವಂಥವರು.

ಇಲ್ಲಿ ಒಂದು ಹೇಳಿಕೆಯನ್ನು ಉದ್ಧರಿಸಿದರೆ ಅಪ್ರಸ್ತುತವಾಗಲಾರದು ಎಂದು ಭಾವಿಸುವೆ. ಅದು ತೆಲುಗಿನ, ಭಾರತದ ಚಲನಚಿತ್ರರಂಗದ ಮಹಾನ್ ನಟ ನಾಗೇಶ್ವರರಾವ್ ಅವರು ಒಂದು ಅಮೂಲ್ಯ ನುಡಿಯನ್ನು ನುಡಿದಿದ್ದಾರೆ. ಅದು ಅವರು ಕಾಲವಾಗುವುದಕ್ಕೆ ಒಂದು ತಿಂಗಳ ಹಿಂದೆ ತಮ್ಮ ತೊಂಬತ್ತನೆಯ ವಯಸ್ಸಿನಲ್ಲಿ. ‘ನಾನು ನಿರೀಶ್ವರವಾದಿ, ಆದರೆ ವಾಲ್ಮೀಕಿಯನ್ನು ನೆನಪು ಮಾಡಿಕೊಂಡಾಗ ರೋಮಾಂಚನವನ್ನು ಅನುಭವಿಸುವೆ. ನಮ್ಮ ಜನರ ಮನೋಲೋಕಕ್ಕೆ ರಾಮನಂಥ ಪಾತ್ರವನ್ನು ಕೊಟ್ಟು ಅವರು ಸದಾ ಬೊಗಸೆಯಲ್ಲಿಟ್ಟುಕೊಂಡು ಆರಾಧಿಸುವಂತೆ ಮಾಡಿದ್ದಾರಲ್ಲ ಎಂಬುದು. ಹಾಗೆಯೇ ಈಶ್ವರನ ಕಡೆಗೆ ಅರ್ಥಾತ್ ಪರಮಾತ್ಮನ ಕಡೆಗೆ ಸೆಳೆತ ಬೆಳೆಯುವಂತೆ ಮಾಡುವುದಿದೆಯಲ್ಲ ಅದು ನಮ್ಮೆಲ್ಲ ಊಹೆಗಳಿಗೂ ಮೀರಿದ್ದು’ ಎಂದು ಹೇಳುವಾಗಿನ ಮನೋಜ್ಞತೆಯು ನಾವು ಅವಲೋಕಿಸಿಕೊಳ್ಳುವಂಥದ್ದು. ಈ ಚೌಕಟ್ಟಿನಲ್ಲಿ ನಮ್ಮ ಜನರ ಒಟ್ಟು ಮನೋಲೋಕಕ್ಕೆ ನಿರಂತರವಾಗಿ ‘ಸಹನಾಮಯತೆ’ಯನ್ನು ಧಾರೆಯೆರೆಯುತ್ತ ಹೋಗುತ್ತಿರುವುದು, ನಮ್ಮ ಬಹುಮುಖ್ಯ ಸಾಹಿತ್ಯಕೃತಿಗಳ ಮಹತ್ವಪೂರ್ಣ ಪಾತ್ರಗಳು, ಅದು ಕೇವಲ ಭಾರತದ ಸಂದರ್ಭಕ್ಕೆ ಮಾತ್ರ ಸೀಮಿತವಾದದ್ದಲ್ಲ, ವಿಶ್ವವ್ಯಾಪಿಯಾಗಿರುವಂಥದ್ದು.

ಗಾಂಧೀಜಿಯವರು ರಸ್ಕಿನ್‌ನ ಕೃತಿಯಿಂದ ಪ್ರಭಾವಿತರಾದರು. ಆದರೆ ಜೀವನದುದ್ದಕ್ಕೂ ಕಾಡಿದ್ದು ಅಪೂರ್ವ ಸಹನಾಮೂರ್ತಿ ಪಾತ್ರಗಳಾದ ಸತ್ಯಹರಿಶ್ಚಂದ್ರ, ಶ್ರೀರಾಮ, ಶ್ರೀಕೃಷ್ಣ. ನಿರ್ದಾಕ್ಷಿಣ್ಯತೆಗೆ ಹರಿಶ್ಚಂದ್ರ, ಮೌನಕ್ಕೆ ರಾಮ ಮತ್ತು ಹಸನ್ಮುಖತೆಗೆ ಶ್ರೀಕೃಷ್ಣ. ಅವರ ಒಟ್ಟು ವ್ಯಕ್ತಿತ್ವದಲ್ಲಿಯೇ ಎಷ್ಟು ಗಾಢವಾಗಿ ಪ್ರಭಾವ ಪಡೆದರು ಎಂಬುದು ಗೋಚರವಾಗುತ್ತದೆ. ಹಾಗೆಯೇ ಕಾಲಕಾಲಕ್ಕೆ ಈ ಹಿನ್ನೆಲೆಯ ತತ್ವಚಿಂತನೆಯನ್ನು ಪಾಲಿಸುವಲ್ಲಿ ಏನಾದರೂ ಲೋಪದೋಷವಾಗುತ್ತಿದೆಯಾ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಸಾಗುವರು. ಮೌನ ಮತ್ತು ನಗುವಂತೂ ಎಲ್ಲ ವಿಧವಾದ ಹೋರಾಟ ಮತ್ತು ಚಳವಳಿಗಳಲ್ಲಿ ಗಾಢವಾಗಿಯೇ ಕಾರ್ಯನಿರ್ವಹಿಸುತ್ತ ಹೋಗಿದೆ. ಇಲ್ಲದಿದ್ದರೆ ಸ್ವಾತಂತ್ರ್ಯ ಚಳವಳಿಯನ್ನು ಬಹುದೀರ್ಘಕಾಲದವರೆಗೆ ಕರೆದೊಯ್ಯಲು ಆಗುತ್ತಿರಲಿಲ್ಲ. ಯಾಕೆಂದರೆ ಅದು ಕೇವಲ ರಾಜಕೀಯ ಸ್ವಾತಂತ್ರ್ಯವಾಗಿ ಬ್ರಿಟಿಷರನ್ನು ಹೊರಗೆ ಕಳುಹಿಸುವುದು ಮಾತ್ರವಲ್ಲ. ಆ ಸಂದರ್ಭದಲ್ಲಿ ಹುಟ್ಟಿಕೊಂಡ ಸಾಮಾಜಿಕ ಚಳವಳಿಗಳು ಎಂತೆಂಥ ಆಕಾರವನ್ನು ಪಡೆದಿದ್ದವು, ಒಂದೊಂದರ ಸಮಸ್ಯೆಯೂ ಎಷ್ಟು ಸಂಕೀರ್ಣತೆಯಿಂದ ಕೂಡಿದ್ದವು. ಅವುಗಳನ್ನೆಲ್ಲ ನಿಭಾಯಿಸುವುದಕ್ಕೆ ಗಾಂಧೀಜಿಯವರು ‘ಸಹನಾಮಯತೆ’ಯನ್ನು ಪೂರ್ಣಪ್ರಮಾಣದಲ್ಲಿ ಆಲಂಗಿಸಿಕೊಂಡೇ ಬಿಟ್ಟರು. ಯಾಕೆಂದರೆ, ಇಲ್ಲಿಯ ವಿಭಿನ್ನ ಜಾತಿ, ಸಂಸ್ಕೃತಿ, ಭಾಷೆ ಮತ್ತು ಧರ್ಮಸಂಬಂಧಿ ಚಟುವಟಿಕೆಗಳು ಅವರನ್ನು ನಡುಗಿಸುವ ಹಂತಕ್ಕೆ ತಲುಪಿದ್ದವು. ಆಗ ಅವುಗಳೆಲ್ಲದರ ಜೊತೆಗೆ ಸಂತನಂತೆ ನಿರ್ವಹಿಸಿದ ಪಾತ್ರದ ಹಿಂದೆ ಇರುವುದು ಬಹುಮುಖೀ ವ್ಯಾಪಕತೆಗೆ ಬೇಕಾದ ಮನೋಭಾವ. ಇಂದು ಅವರೇನಾದರೂ ಎಲ್ಲ ಹಂತಗಳಲ್ಲಿ ನಿರ್ವಚನಗೊಳ್ಳುತ್ತಿದ್ದರೆ, ಅದರ ಹಿಂದಿರುವ ಚೇತೋಹಾರಿತನವೇ ಕಾರಣವಾಗಿದೆ. ಜೊತೆಗೆ ಪ್ರತಿಕ್ಷಣದಲ್ಲೂ ತಮ್ಮನ್ನು ಪರೀಕ್ಷಿಸಿಕೊಳ್ಳುತ್ತಿದ್ದ ಕ್ರಮವೇ ಅನನ್ಯವಾದದ್ದು, ಸಹನೆ ಮತ್ತು ಅಸಹನೆಯ ನಡುವಿನ ಸಂಘರ್ಷ ಯಾವತೆರನದ್ದು ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಲೇ ಅಂತರ್ಮುಖಿಯಾಗಿಬಿಡುತ್ತಿದ್ದರು. ಇಂಥ ಚಿಂತನೆ ಮುಂದಿನ ಕಾರ್ಯತತ್ಪರತೆಗೆ ಇಂಬಾಗುತ್ತಿತ್ತು.

ರಾಮ ಮನೋಹರ ಲೋಹಿಯಾ ಅವರು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಲಾಹೋರಿನ ಜೈಲಿನಲ್ಲಿ ಸೆರೆಮನೆವಾಸ ಅನುಭವಿಸುತ್ತಿರುತ್ತಾರೆ. ಅದರ ಅನುಭವದ ಭೀಕರತೆಯನ್ನು ಅವರ ‘ಯೋಗದಲ್ಲಿ ಒಂದು ಅಧ್ಯಾಯ’ ಲೇಖನದಲ್ಲಿ ತುಂಬ ಮಾರ್ಮಿಕವಾಗಿ ‘ಯಾವ ಮನಸ್ಸು ಭಯ ಚಪಲ ಎಂಬ ಹತಾಶೆಗಳಿಂದ ಮುಕ್ತವಾಗಿ ಉಳಿದಿದೆಯೋ ಅಂಥದಕ್ಕೆ ಮಾತ್ರ ಸರಿಯಾಗಿ ಯೋಚಿಸುವ ಶಕ್ತಿ ಇರುತ್ತದೆ. ನಾನು ರಾಜಕೀಯದಲ್ಲಿ ಮತ್ತು ಜೀವನದ ಇತರೆ ಕ್ಷೇತ್ರಗಳಲ್ಲಿ ಈ ನನ್ನ ಅನುಭವದಿಂದ ಪ್ರಭಾವಿತನಾದಂತೆ ಕಾಣುತ್ತೇನೋ ಇಲ್ಲವೋ ಅದು ಇಲ್ಲಿ ಅಪ್ರಸ್ತುತ ಹಾಗೂ ನನ್ನ ಮಾತು ಕೇಳಲಿಚ್ಛಿಸುವವರಿಗೆಲ್ಲ ಇಲ್ಲಿ ಒಂದನ್ನು ಹೇಳ ಬಯಸುತ್ತೇನೆ. ಭವಿಷ್ಯದ ಒಡವೆಯಾದ ಭಯ, ಚಪಲಗಳಿಂದ ಮುಕ್ತವಾಗಿ ವರ್ತಮಾನದಲ್ಲೇ ತೀವ್ರ ಬದುಕುವ ಹಾಗೆ ಮನಸ್ಸು ಅಥವಾ ಚಿತ್ತದ ಪ್ರವೃತ್ತಿಗಳನ್ನು ಸಂಯಮಿಸಲು ಪ್ರಯತ್ನಿಸಬೇಕು’ ಎಂದು ಹೇಳುವಲ್ಲಿನ ಹಿಂದಿನ ಬಹುಪಾಲು ವಾಕ್ಯಗಳು ತಲ್ಲಣಗೊಳಿಸುವಂಥವು. ಈ ನೆಲೆಯಲ್ಲಿ ಜಗತ್ತಿನ ಎಲ್ಲ ಶ್ರೇಷ್ಠ ಚಿಂತಕರು ಮತ್ತು ಹೋರಾಟಗಾರರು ಸಹನಾಮಯತೆಯನ್ನು ದಾರಿ ದೀವಿಗೆ ಮಾಡಿಕೊಂಡೇ ಬೆಳೆದವರು. ಮುಂದಿನ ಜನಾಂಗಗಳಿಗೆ ಬೆಳಕಿಂಡಿಯಾದವರು. ಸಹಬಾಳ್ವೆಗೆ ಆಶಯಗಳನ್ನು ವಿಸ್ತರಿಸಿದವರು. ಇದು ನಮ್ಮ ಮನದಾಳದಲ್ಲಿ ಬಾಧಿಸಬೇಕಾದರೆ, ಸ್ವಲ್ಪಮಟ್ಟಿಗಾದರೂ ನಾವು ದಾಟಿ ಬಂದಿರುವ ಅನಾಗರಿಕ ಸಮಾಜದ ಅರಿವು ಇರಲೇಬೇಕಾಗುತ್ತದೆ. ಅದೇ ‘ಸಹನಾಮಯತೆ’ಯನ್ನು ಮುಂದಿನ ಜನಾಂಗಗಳಿಗೆ ತಲುಪಿಸುವಂಥದ್ದು.

ಬಾಲ್ಯ, ಯೌವನ, ವೃದ್ಧಾಪ್ಯ ಇವು ಮೂರೂ ಬದುಕಿನ ಸ್ಥಿತ್ಯಂತರಗಳಲ್ಲಿ ಮಹತ್ವಪೂರ್ಣವಾದಂಥವು. ಇದರ ಅರಿವನ್ನು ಬಂಧಿಸಿಡುವುದೇ ‘ಸಹನಾಮಯತೆ’. ಇದು ಎಂದೂ ವಾಚ್ಯವೂ ಅಲ್ಲ, ಕ್ಲೀಷೆಯೂ ಅಲ್ಲ. ನಿರಾಡಂಬರ ಸುಂದರಿ ಇದ್ದಂತೆ. ಈ ಹಿನ್ನೆಲೆಯಲ್ಲಿ ಕನ್ನಡದ ಎಷ್ಟೋ ಮಹತ್ವಪೂರ್ಣ ಕಾದಂಬರಿಗಳಲ್ಲಿ ಕೆ.ವಿ. ಅಯ್ಯರ್ ಅವರ ‘ರೂಪದರ್ಶಿ’ಯೂ ಒಂದು. ಸುಮಾರು ನಲವತ್ತು ವರ್ಷಗಳ ನಂತರ ಮತ್ತೊಮ್ಮೆ ಓದಿದಾಗ, ತಲ್ಲಣಗೊಂಡೆ. ‘ಓ ದೇವರೇ’ ಎಂದು ನನ್ನ ಪಾಡಿಗೆ ನಾನು ಗುನುಗಿಸಿಕೊಂಡೆ. ಅದಕ್ಕೆ ಮುಖ್ಯ ಕಾರಣ: ಕಲಾವಿದನಾದವನೊಬ್ಬ ಕ್ರಿಸ್ತನ ಜೀವನವನ್ನು ಚಿತ್ರಿಸಲು ತೊಡಗುವನು, ಅದಕ್ಕೆ ಎಲ್ಲೆಲ್ಲೋ ಹುಡುಕಿ ಅತ್ಯಂತ ಪರಿಶ್ರಮದಿಂದ ಅರ್ನೆಸ್ಟ್ ಎಂಬ ಬಾಲಕನನ್ನು ಹುಡುಕುವನು. ಸಂತೃಪ್ತಿಯಿಂದ ಬಾಲ್ಯವನ್ನು ಚಿತ್ರಿಸುವನು. ಇದಾದ ಮೇಲೆ ಕ್ರಿಸ್ತನನ್ನು ಚಿತ್ರಹಿಂಸೆಯಿಂದ ಕೊಂದವನು ಎಷ್ಟು ಕ್ರೂರಿಯಾಗಿರಬಹುದು, ಭೌತಿಕವಾಗಿ ಎಷ್ಟು ವಿಕೃತವಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡು ಹುಡುಕುತ್ತ ಹೋಗುವನು. ಹೀಗೆ ಹುಡುಕುವುದರಲ್ಲಿಯೇ ಎಷ್ಟೋ ಕಾಲ ಸರಿದು ಹೋಗಿದೆ. ಕೊನೆಗೆ ಗರಿಬಾಲ್ಡಿ ಎಂಬುವನು ಸಿಗುವನು. ಇವನೇ ಸೂಕ್ತ ವ್ಯಕ್ತಿ ಎಂದು ತಿಳಿದು ಕ್ರಿಸ್ತನ ಬಾಲ್ಯವನ್ನು ಚಿತ್ರಿಸಿದ ಜಾಗದಲ್ಲಿಯೇ ಗರಿಬಾಲ್ಡಿಯನ್ನು ಕೂರಿಸಿ ಕ್ರೌರ್ಯ ಉತ್ತುಂಗತೆಯನ್ನು ತುಂಬುತ್ತಿರುವ ಸಮಯದಲ್ಲಿ ಗರಿಬಾಲ್ಡಿ ತಾನು ಅರ್ನೆಸ್ಟ್ ಆಗಿದ್ದ ಬಾಲ್ಯವನ್ನು ನೆನಪು ಮಾಡಿಕೊಂಡು ಒದ್ದಾಡುತ್ತಿರುತ್ತಾನೆ. ಮನುಷ್ಯನೊಬ್ಬ ಎಂತೆಂಥ ಕಾಲಘಟ್ಟವನ್ನು ತಲುಪಬಹುದು ಎನ್ನುವುದಕ್ಕೆ ಇದೊಂದು ಅತ್ಯಂತ ಸಾರ್ಥಕ ಉದಾಹರಣೆ. ಆದರೆ ಅರ್ನೆಸ್ಟ್ ಗರಿಬಾಲ್ಡಿಯಾಗಲಿರುವ ಹಂತದವರೆಗಿನ ‘ರೂಪಕತೆ’ ಎಂಥ ಅನನ್ಯತೆಯಿಂದ ಕೂಡಿರುವಂಥದ್ದು, ಇದನ್ನು ಅರ್ಥೈಸುವುದಕ್ಕೆ ಸಮೃದ್ಧಿಯಾದ ಸಾಮಗ್ರಿ ಇದೆ. ಅದು ವೇದನೆಯಿಂದ ಕೂಡಿರುವಂಥದ್ದು ‘ಸಹನಾಮಯತೆ’ಯನ್ನು ಬಾಚಿ ತಬ್ಬಿಕೊಂಡಿರುವಂತದ್ದು.

ಕೊನೆಗೂ ಬದುಕನ್ನು ಆಪ್ತವಾಗಿ ಗ್ರಹಿಸುತ್ತ ಹೋಗುವುದಕ್ಕೆ ‘ಸಹನಾಮಯತೆ’ಯು ಪ್ರತಿಮಾ ರೂಪದಲ್ಲಿರುವಂಥದ್ದು. ಅದನ್ನು ನಾವು ಅನುಭವಿಸಲಿ ಅಥವಾ ಬಿಡಲಿ ಅದು ಭಾಷೆಯು ಹುಟ್ಟಿದಾಗಿನಿಂದಲೂ ಇದೆ. ಅರಿವು ಬಂದಾಗಿನಿಂದಲೂ ಸುಖ–ದುಃಖ ಎಂಬಂತೆ, ಎಲ್ಲ ವಿವರಣೆಗಳಿಗೂ ಮೀರಿ ಇದೆ. ಈ ಪ್ರಬಂಧ ಬಳಸಿಕೊಂಡು ಅಪವಿತ್ರಗೊಳಿಸಿಲ್ಲ ಅನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT