ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಾಹಲದ ಮೇಲಮೃತ ಬುರುಗು

ಅಭಿವೃದ್ಧಿ ನಾಗರಿಕತೆಯ ತವಕ ತಲ್ಲಣಗಳು
Last Updated 14 ಜೂನ್ 2014, 19:30 IST
ಅಕ್ಷರ ಗಾತ್ರ

ಇದೀಗ ತಾನೇ ಒಂದು ಮಹಾ ಚುನಾವಣೆಯು ಭಾರತ ದೇಶದಲ್ಲಿ ಮುಗಿದಿದೆ. ಎಲ್ಲಾ ರಾಜಕೀಯ ಪಕ್ಷಗಳೂ ಭರಪೂರವಾಗಿ ಅಭಿವೃದ್ಧಿಯ ಆಶ್ವಾಸನೆಗಳನ್ನು ನೀಡಿದ್ದವು. ಈ ಸಲದ ಕೇಂದ್ರ ಸರ್ಕಾರವು ಒಂದೇ ಪಕ್ಷಕ್ಕೆ ಸೇರಿದ್ದಾದರೂ ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಒಂದಲ್ಲಾ ಒಂದು ರಾಜ್ಯದಲ್ಲಿ ಅಧಿಕಾರವನ್ನು ಹಿಡಿದಿವೆ.

ಈ ಎಲ್ಲಾ ಪಕ್ಷಗಳ ಎಲ್ಲಾ ಆಶ್ವಾಸನೆಗಳೂ ನಿಜವಾದಲ್ಲಿ ಪ್ರಪಂಚದ ಎಲ್ಲಾ ನಾಗರಿಕತೆಗಳು ಭಾರತೀಯರನ್ನು ಕಂಡು ಅಸೂಯೆ ಪಡುವಷ್ಟು ನಮ್ಮ ಜನಜೀವನ ಬದಲಾಗಬಹುದು. ನಗರಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಬಹುದು, ನಗರಗಳ ಭರ್ತೀ ಫ್ಲೈಓವರ್‌ಗಳು ಆಕ್ಟೋಪಸ್‌ನ ಕಾಲುಗಳಂತೆ ಚಾಚಿಕೊಳ್ಳಬಹುದು, ಜಾತಿ ಧರ್ಮ ಸಮಸ್ಯೆಗಳು ಮಂಗಳಾರತಿಯ ಕರ್ಪೂರದಂತೆ ಕುರುಹೂ ಉಳಿಸದಂತೆ ಕರಗಿ ಹೋಗಬಹುದು, ರಾಷ್ಟ್ರದಲ್ಲಿ ಬಡವರೇ ಇಲ್ಲವಾಗಬಹುದು ಅಥವಾ ಇದ್ದರೂ ಅವರನ್ನು ಸರ್ಕಾರ ಸಾಕಬಹುದು.

ರೈತರು ಆತ್ಮಹತ್ಯೆಗೆ ಶರಣಾಗದೆ ‘ಬಂಗಾರದ ಮನುಷ್ಯ’ ಸಿನಿಮಾದ ರಾಜೀವನಂತೆ ಹಾಡು ಹೇಳಿಕೊಂಡು ಉತ್ತಿ ಬಿತ್ತಿ ರಾಶಿರಾಶಿ ತೆನೆ ಬಣವೆಯ ಮುಂದೆ ಹೆಂಡತಿಯೊಂದಿಗೆ ಫೋಟೋ ಪೋಸ್ ಕೊಡಬಹುದು. ಆದರೆ ಹಾಗಾಗುವುದಿಲ್ಲ ಎಂದು ನಮಗೆ ತಿಳಿದಿದೆ. ಚುನಾವಣೆಯ ಮಾತುಗಳು ಮತದಾನದ ದಿನದ ತನಕವಷ್ಟಕ್ಕೇ ಎನ್ನುವುದು ನಮಗಾಗಲೇ ಮನದಟ್ಟಾಗಿದೆ.

ಹಿಂದೊಮ್ಮೆ ಅಂತರರಾಷ್ಟ್ರೀಯ ಪತ್ರಿಕೆಯೊಂದು 2020ರ ಹೊತ್ತಿಗೆ ಭಾರತ ಸೂಪರ್‌ಪವರ್ ಆಗುತ್ತದೆ ಎಂದು ಭವಿಷ್ಯ ನುಡಿದದ್ದೇ ತಡ, ಅಂದು ಆಳುತ್ತಿದ್ದ ಕಾಂಗ್ರೆಸ್ ಪಕ್ಷ ಅದನ್ನು ಟೀವಿ ಜಾಹೀರಾತನ್ನಾಗಿ ಮಾರ್ಪಡಿಸಿಕೊಂಡಿತ್ತು. ಹತ್ತು ವರ್ಷಗಳ ಹಿಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಆಳುವ ಪಕ್ಷವಾಗಿದ್ದ ಬಿಜೆಪಿ ‘ಇಂಡಿಯಾ ಶೈನಿಂಗ್’ ಎಂದು ಪ್ರಚಾರ ಗಿಟ್ಟಿಸಿಕೊಳ್ಳಲು ನೋಡಿತು. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿದರೆ ನಿಮ್ಮ ಮನೆಗಳಿಗೇ ಗುಜರಾತ್ ಮಾದರಿಯ ಅಭಿವೃದ್ಧಿಯನ್ನು ತರುತ್ತೇನೆ ಎಂದು ಮೋದಿಯವರು ಆಶ್ವಾಸನೆ ನೀಡಿದರೆ, ‘ಹೇಗಿದ್ದಿರಿ ನೀವು ಹತ್ತು ವರ್ಷಗಳ ಹಿಂದೆ! ಎಟಿಎಂ ಇರಲಿಲ್ಲ, ಏರ್‌ಪೋರ್ಟ್ ಇರಲಿಲ್ಲ, ರಸ್ತೆಗಳಿರಲಿಲ್ಲ... ಅನಾಗರಿಕ ಕೂಪದಲ್ಲಿದ್ದವರನ್ನು ನಾಗರಿಕರನ್ನಾಗಿಸಿದ್ದೇ ನಾನು. ಅದೇ ಮುಂದುವರೆಯಲು ನನಗೆ ಮತ ನೀಡಿ’ ಎನ್ನುವಂತಹ ಟೀವಿ ಜಾಹೀರಾತುಗಳನ್ನು ಕಾಂಗ್ರೆಸ್ ಪಕ್ಷವು ನೀಡಿತು.

ಯಾವ ಬಗೆಯ ಅಭಿವೃದ್ಧಿ ನಮಗೆ ಬೇಕು ಎನ್ನುವುದನ್ನು ತಾವು ಮಾತ್ರವೇ ತಮ್ಮ ದಿವ್ಯ ದೃಷ್ಟಿಯಿಂದ ಅರಿತುಕೊಂಡವರಂತೆ ನಮ್ಮ ರಾಜಕಾರಣಿಗಳು ಮಾತನಾಡಿದರು. ‘ನಿನಗೇನು ಬೇಕು ಎನ್ನುವುದು ನಿನಗೇನು ಗೊತ್ತು, ಪಾಪ! ಸುಮ್ಮನೆ ನನ್ನ ಮಾತುಗಳನ್ನು ಕೇಳು; ನನಗೆ ಓಟು ಒತ್ತಿ ಬಾ, ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ’ ಎನ್ನುವ ಅಧಿಕಾರದಲ್ಲಿ ಮಾತನಾಡಿದರು. ಇದು ನಮಗೆ ಹೊಸದಲ್ಲ.

ಪ್ರಪಂಚಕ್ಕೂ ಇದು ಹೊಸದಲ್ಲ. ಪ್ರಪಂಚದ ಪ್ರತಿಯೊಂದು ಪ್ರಭುತ್ವಶಾಹಿಯೂ –ಪ್ರಜಾಪ್ರಭುತ್ವವಿರಲಿ ಸರ್ವಾಧಿಕಾರವಿರಲಿ- ಬಂಡವಾಳಶಾಹಿಯಾಗಿರಲಿ ಕಮ್ಯುನಿಷ್ಟ್‌ಶಾಹಿಯಾಗಿರಲಿ- ಮಾತನಾಡುವುದು ಹೀಗೇನೇ. ನಾಗರಿಕತೆಗಳಿಗೆ ಅನುಗುಣವಾಗಿ ಭಾಷೆ ಬದಲಾಗಿರುತ್ತದೆ, ಭಾವಾರ್ಥ ಮಾತ್ರ ಒಂದೇನೇ. 2008ರಲ್ಲಿ ಒಬಾಮಾ ಮತ್ತು ಮೆಕೈನ್‌ರ ನಡುವಿನ ಪ್ರೆಸಿಡೆನ್ಷಿಯಲ್ ಡಿಬೇಟನ್ನು ನಡೆಸಿಕೊಟ್ಟ ಜಿಮ್ ಲೆಹರರ್ ಒಂದು ಬಗೆಯ ನಿರಾಶೆಯಲ್ಲಿ, ‘ಚುನಾವಣೆಯ ಮುನ್ನ ಇಷ್ಟೆಲ್ಲಾ ಮಾತನಾಡುತ್ತೀರಿ. ಆದರೆ ಗೆದ್ದು ಅಧಿಕಾರ ಹಿಡಿದು ವೈಟ್‌ಹೌಸ್ ಸೇರಿದ ಮೇಲೆ ಎಲ್ಲರೂ ಒಂದೇ ಆಗಿ ಕಾಣುತ್ತೀರಿ’ ಎಂದಿದ್ದು ಒಂದು ಸಾರ್ವತ್ರಿಕವಾದ ಅಭಿವ್ಯಕ್ತಿ. ಸಮಸ್ತ ನಾಗರಿಕತೆಗಳಿಗೂ ಅನ್ವಯವಾಗುವಂಥದ್ದು.

ರಾಜಕಾರಣಿಗಳು ಎಷ್ಟು ಆಶ್ವಾಸನೆ ನೀಡಿದರು, ಎಷ್ಟು ಪೂರೈಸಿದರು ಎನ್ನುವುದನ್ನು ಅಳೆಯಲು ಈ ಲೇಖನವನ್ನು ನಾನು ಬರೆಯುತ್ತಿಲ್ಲ. ಬದಲಾಗಿ, ನನ್ನ ಹುಡುಕಾಟವಿರುವುದು ‘ಅಭಿವೃದ್ಧಿ ಎಂದರೇನು’ ಮತ್ತು ‘ಯಾವ ಬಗೆಯ ಅಭಿವೃದ್ಧಿಯು ನಮಗೆ ಬೇಕು’ ಎನ್ನುವ ಮೂಲ ಪ್ರಶ್ನೆಗಳಲ್ಲಿ. ಈ ಪ್ರಶ್ನೆಗಳು ಮೇಲುನೋಟಕ್ಕೆ ಸರಳವಾಗಿದ್ದು, ಒಳಹೊಕ್ಕಂತೆ ಕ್ಲಿಷ್ಟವಾಗುತ್ತ ಸಾಗುವುದರಿಂದ, ಅವರವರ ಭಾವಾರ್ಥಗಳಿಗೆ, ಬುದ್ಧಿಮಟ್ಟಕ್ಕೆ ಮತ್ತು ಅನುಭವ ವಿಶಾಲತೆಗೆ ಅನುಗುಣವಾಗಿ ವಿಶ್ಲೇಷಿಸುವ ಆಸ್ಪದವಿರುವುದರಿಂದ, ಉದ್ದೇಶಪೂರ್ವಕವಾಗಿಯೋ ಉದ್ದೇಶರಹಿತವಾಗಿಯೋ ಸಮಾಜವನ್ನು ಗೊಂದಲದಲ್ಲಿ ಕೆಡಹುವ ಅವಕಾಶಗಳೂ ವಿಪುಲವಾಗಿವೆ.

ಒಂದು ರೂಪಾಯಿಗೆ ಅಕ್ಕಿ ಕೊಡುವುದು ಒಬ್ಬರ ಪಾಲಿಗೆ ಅಭಿವೃದ್ಧಿಯ ಸಂಕೇತವಾದರೆ, ಮನೆಮನೆಗಳಿಗೆ ಟೀವಿ ಸೆಟ್ಟುಗಳನ್ನು ಹಂಚುವುದು ಮತ್ತೊಬ್ಬರಿಗೆ ಪ್ರಗತಿಯಂತೆ ಕಾಣುತ್ತದೆ. ಸ್ಥಿರ ವ್ಯಾಖ್ಯಾನವಿಲ್ಲದ್ದನ್ನು ಹೇಗೆ ಬೇಕಾದರೂ ಅರ್ಥೈಸಬಹುದು.

ಸಾಮಾನ್ಯವಾಗಿ ಎಲ್ಲರೂ ಒಪ್ಪಿಕೊಂಡಂತೆ ಕಾಣುವ ಅಭಿವೃದ್ಧಿಯ ರೂಪುರೇಷೆಗಳನ್ನೇ ತೆಗೆದುಕೊಳ್ಳಿ. ರಸ್ತೆಗಳು, ಫ್ಲೈಓವರ್‌ಗಳು, ಸೇತುವೆಗಳು, ಊರುಗಳ ನಡುವಿನ ರೈಲು ಮತ್ತು ವಿಮಾನ ಜೋಡಣೆಗಳು, ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಒದಗಿಸಬಲ್ಲ ಬೃಹತ್ ಕಾರ್ಖಾನೆಗಳು, ಯುವ ಜನತೆಯನ್ನು ಸೆಳೆಯುತ್ತಿರುವ ಮಲ್ಟಿನ್ಯಾಷನಲ್ ಕಂಪೆನಿಗಳು, ಏರು ಜನಸಂಖ್ಯೆಗೆ ಆಹಾರ ಉತ್ಪಾದಿಸುತ್ತಿರುವ ಕೃಷಿ ತಂತ್ರಜ್ಞಾನಗಳು, ಒಂದು ಕಾಲಕ್ಕೆ ಶ್ರೀಮಂತವರ್ಗಕ್ಕೆ ಮಾತ್ರ ಮೀಸಲಿದ್ದ ಆದರೆ ಈಗ ಮಧ್ಯಮ ಮತ್ತು ಕೆಳ ಆರ್ಥಿಕ ವರ್ಗಗಳನ್ನೂ ತಬ್ಬುತ್ತಿರುವ ಎಲೆಕ್ಟ್ರಾನಿಕ್ ಸಾಧನೋಪಕರಣಗಳು, ಕಾರುಗಳು, ಇನ್ನೂ ಸಾವಿರ ಬೇಕು ಬೇಡಗಳು... ಅಭಿವೃದ್ಧಿಯೇ?

ಅಥವಾ ಅರ್ಥಶಾಸ್ತ್ರಜ್ಞರ ಭಾಷೆಯಲ್ಲಿ ದೇಶದ ಜಿಡಿಪಿಯೇ? ಈಗಾಗಲೇ ಅಭಿವೃದ್ಧಿ ಹೊಂದಿದವೆಂದು ಗುರುತಿಸುವ ರಾಷ್ಟ್ರಗಳ ಆರ್ಥಿಕ ಮಾದರಿಯನ್ನು ಅನುಸರಿಸುವುದೇ? ಅಂತಿಮವಾಗಿ, ರೂಪಾಯಿ ಡಾಲರಿನ ಸಮಕ್ಕೆ ನಿಲ್ಲುವುದೇ ಅಥವಾ ಡಾಲರನ್ನು ಗೆಲ್ಲುವುದೇ?
ಅಭಿವೃದ್ಧಿಯನ್ನು ಮಾತನಾಡುವಾಗ ತಲೆದೋರುವ ಮೂಲಭೂತ ಸಮಸ್ಯೆಯೇ ಇದು. ನಮ್ಮ ಅಳತೆಯ ಪಟ್ಟಿ ಯಾವಾಗಲೂ ಒಂದೇ ಮಾಪನವನ್ನು ತೋರಿಸುತ್ತದೆ– ಅದು ಆರ್ಥಿಕತೆ.

ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ ಬೆಳ್ಳಿಯನ್ನು ಸೇರಿನಲ್ಲಿ ಅಳೆಯುತ್ತಿದ್ದರು ಎನ್ನುವಾಗಲಾಗಲೀ, ದಕ್ಷಿಣ ಅಮೆರಿಕದ ಮೂಲನಿವಾಸಿ ಸಾಮ್ರಾಜ್ಯಗಳನ್ನು ದೂರದಿಂದ ಹಡಗಿನಲ್ಲಿ ಬಂದಿಳಿದ ಯುರೋಪಿಯನ್ನರು ವಶಪಡಿಸಿಕೊಳ್ಳುವಾಗ ‘ಒಂದು ದೊಡ್ಡ ಕೋಣೆ ತುಂಬುವಷ್ಟು ಚಿನ್ನ ಅವರ ಬಳಿಯಿತ್ತು’ ಎಂದು ಇತಿಹಾಸದಲ್ಲಿ ದಾಖಲಾಗುವಾಗಲಾಗಲೀ, ಒಂದು ಸಮಾಜದ ಅಭಿವೃದ್ಧಿಯನ್ನು ಅಳೆಯುವ ಮಾಪನ ಚಿನ್ನವಾಗುತ್ತದೆಯಾಗಲಿ, ಬದುಕಾಗುವುದಿಲ್ಲ. ನಮ್ಮ ಇಂದಿನ ಲೆಕ್ಕಾಚಾರಗಳು ಅದಕ್ಕಿಂತ ಬೇರೆಯಾಗುವುದಿಲ್ಲ. ಜಿಡಿಪಿ ಕೂಡ ಇಂಥದ್ದೇ ಒಂದು ಮಾಪನ.

ಚಿನ್ನದ ಮಾಪನವನ್ನು ಮೀರುವಂಥದ್ದು ಮತ್ತೊಂದಿದೆ– ಅದು ಬಂದೂಕು, ತೋಳ್ಬಲ. ಚಿನ್ನವನ್ನು ಸೇರಿನಲ್ಲಿ ಅಳೆಯುತ್ತಿದ್ದ ವಿಜಯನಗರ ಸಾಮ್ರಾಜ್ಯವನ್ನು ಸುತ್ತಲಿನ ಸುಲ್ತಾನರು ಲೂಟಿ ಹೊಡೆದಾಗ ಚಿನ್ನದ ಮೇಲೆ ಉಕ್ಕಿನ ಕತ್ತಿಯ ಮೊನೆಯು ಗೆಲುವು ಸಾಧಿಸಿತು. ಹಾಗೆಯೇ, ಲೋಹವೆಂದರೆ ಬರೀ ಚಿನ್ನವೆಂದು ತಿಳಿದು ಅದನ್ನು ಮಾತ್ರ ಸಂಗ್ರಹಿಸಿಡುತ್ತಿದ್ದ ಆದರೆ ಯುದ್ಧಕ್ಕೆ ಬಿದಿರಿನ ಬೆತ್ತವನ್ನು ಹಿಡಿದು ಬರುತ್ತಿದ್ದ ದಕ್ಷಿಣ ಅಮೆರಿಕದ ಇಂಕಾ ಯೋಧರನ್ನು ಸ್ಪೇನಿನ ಯೋಧರು ಇರುವೆಗಳನ್ನು ಹೊಸಕಿ ಹಾಕಿದಂತೆ ಸಾಮೂಹಿಕವಾಗಿ ಕೊಂದು ಹಾಕಿದಾಗ ಚಿನ್ನದ ಮೇಲೆ ಬಂದೂಕು ಗೆದ್ದಿತು. ಇಂಕಾ ಅರಸನನ್ನು ಸ್ಪಾನಿಯಾರ್ಡರು ಯುದ್ಧ ಕೈದಿಯನ್ನಾಗಿ ಹಿಡಿದಿಟ್ಟುಕೊಂಡಾಗ ಅವನ ಒಂದು ಕೋಣೆ ತುಂಬಾ ಚಿನ್ನವನ್ನು ವಶಪಡಿಸಿಕೊಂಡಿದ್ದಲ್ಲದೆ ‘ನಮಗೆ ಮತ್ತೊಂದು ಕೋಣೆಯ ಭರ್ತಿ ಚಿನ್ನ ತುಂಬಿಸಿಕೊಡು’ ಎಂದು ಚಿತ್ರಹಿಂಸೆ ಕೊಟ್ಟು, ಅವನು ಕೊಡಲಾಗದಾಗ ಕೊಂದು ಹಾಕಿದರಂತೆ!

ಅಭಿವೃದ್ಧಿಯೆಂಬ ವಿಭ್ರಮೆ ಮನುಷ್ಯನನ್ನು ಹಿಡಿದದ್ದಾದರೂ ಹೇಗೆ? ನಾವು ಈ ಭೂಮಿಯ ಮೇಲೆ ಬಾಳಲು ಆರಂಭಿಸಿ ಲಕ್ಷಾಂತರ ವರ್ಷಗಳಾದರೂ, ನಾಗರಿಕತೆಯ ಹಂತಕ್ಕೆ ಬಂದದ್ದು ಹದಿಮೂರು ಸಾವಿರ ವರ್ಷಗಳಿಂದೀಚೆಗಷ್ಟೇ. ನಾಗರಿಕತೆ ಹಳ್ಳಿ ಪಟ್ಟಣಗಳನ್ನು ನಿರ್ಮಿಸುವ ತನಕ ನಮಗಿದ್ದುದು ನಮ್ಮ ಮೂಲಭೂತ ಅವಶ್ಯಕತೆಗಳನ್ನು ತೀರಿಸಿಕೊಳ್ಳುವ ತವಕಗಳಷ್ಟೇ. ಅದು ಉಳಿದ ಪ್ರಾಣಿವರ್ಗಗಳ ತವಕವೂ ಹೌದು. ಆಹಾರ, ವಸತಿ ಮತ್ತು ಸಂತಾನೋತ್ಪತ್ತಿ!

ಇವಿಷ್ಟೇ ಬದುಕುವ ಉದ್ದೇಶ. ಅದು ಯಾವ ಕಾರಣಕ್ಕೋ, ಪ್ರಕೃತಿ ನಮ್ಮ ವಿಚಾರದಲ್ಲಿ ವಿಶೇಷ ಆಸಕ್ತಿವಹಿಸಿ ದಿನದಿಂದ ದಿನಕ್ಕೆ ನಮ್ಮ ವಿಕಾಸವನ್ನು ತೀವ್ರಗೊಳಿಸಿ ನಮ್ಮನ್ನು ಬೇರೆ ಪ್ರಾಣಿಪಕ್ಷಿಗಳಿಂದ ಬೇರ್ಪಡಿಸಿದಾಗ ‘ಬುದ್ಧಿವಂತ ನಾಗರಿಕ ಮಾನವ’ನ ಸೃಷ್ಟಿಯಾಗುತ್ತದೆ. ಅದರ ಪರಿಣಾಮವಾಗಿ ಗುಂಪುಗೂಡಿ ವ್ಯವಸ್ಥಿತವಾಗಿ ಬೇಟೆಯಾಡುವುದನ್ನು ಕಲಿಯುತ್ತಾನೆ. ಮತ್ತೊಂದು ಹೆಜ್ಜೆ ಮುಂದುಹೋಗಿ ಬೇಟೆಗಿಂತ ವ್ಯವಸಾಯವು ಹೆಚ್ಚು ಅನುಕೂಲಕರವೆಂದು ಮನಗಾಣುತ್ತಾನೆ (ಕೃಷಿಯನ್ನು ಮೊದಲು ಅಳವಡಿಸಿಕೊಂಡಿದ್ದು ಹೆಂಗಸರು ಎನ್ನುವ ವಾದವನ್ನು ಪ್ರಾಚೀನಶಾಸ್ತ್ರಜ್ಞರು ಮುಂದಿಡುತ್ತಾರೆ ಗಂಡಸರು ಬೇಟೆಗೆ ಹೋದಾಗ ಹೆಂಗಸರು ಟೈಮ್ ಪಾಸ್‌ಗಾಗಿ ಕಂಡುಕೊಂಡದ್ದು ವ್ಯವಸಾಯವಂತೆ!), ಪ್ರಾಣಿಗಳನ್ನು ಹಿಡಿದು ಪಳಗಿಸಿಕೊಳ್ಳುತ್ತಾನೆ. ಕೋಟೆ–ಕೊತ್ತಲಗಳು, ಮಂದಿರ ಮಿನಾರುಗಳು, ಹಳ್ಳಿ ನಗರಗಳು ನಿರ್ಮಾಣಗೊಳ್ಳುತ್ತವೆ.

ದೈಹಿಕ ಮತ್ತು ಬೌದ್ಧಿಕ ಅವಶ್ಯಕತೆಗಳು ವಿಸ್ತಾರವಾಗುತ್ತ ಹೋಗುತ್ತವೆ. ಧರ್ಮ ಕರ್ಮಗಳು ಹುಟ್ಟಿಕೊಳ್ಳುತ್ತವೆ. ಈಗವನು ಮೂಲಭೂತ ಅವಶ್ಯಕತೆಗಷ್ಟೇ ಬದುಕುವುದಿಲ್ಲ. ಅವಶ್ಯಕತೆಗಳ ಪದರಗಳು ಬದುಕಿನ ಸುತ್ತ ಈರುಳ್ಳಿಯ ಸಿಪ್ಪೆಯಂತೆ ನಿರ್ಮಾಣಗೊಳ್ಳುತ್ತವೆ. ಉಳಿದ ಜೀವ ಪ್ರಭೇದಗಳಂತೆ ಈ ಮಣ್ಣಿನ ಲೋಕಕ್ಕಷ್ಟೇ ಸೀಮಿತವಾಗಿ ಬದುಕುವುದಿಲ್ಲ ಅವನು. ಬದಲಾಗಿ ಬುದ್ಧಿ ನಿರ್ಮಿಸಿಕೊಟ್ಟ ಭಿನ್ನ ಲೋಕದಲ್ಲೂ ಬದುಕಲಾರಂಭಿಸುತ್ತಾನೆ.

ನಿಜಲೋಕ ಮತ್ತು ಮಾನಸಲೋಕಗಳ ದ್ವಿವಾಸಿಯಾಗುತ್ತಾನೆ.  ಮೂರ್ತ ಅಮೂರ್ತಗಳ ನಡುವೆ, ಸತ್ಯಮಿಥ್ಯಗಳ ನಡುವೆ, ವಾಸ್ತವ ಕಲ್ಪನೆಗಳ ನಡುವೆ ಉಯ್ಯಾಲೆಯ ಬದುಕನ್ನು ಕಟ್ಟಿಕೊಳ್ಳುತ್ತಾನೆ. ಉಳಿದ ಪ್ರಾಣಿ ಪಕ್ಷಿಗಳು ಮಾತ್ರ ಒಂದೇ ಲೋಕದಲ್ಲಿ ಉಳಿಯುತ್ತವೆ. ಆ ಲೋಕದಲ್ಲಿ ಅವಕ್ಕೆ ಮೂಲಭೂತ ಅವಶ್ಯಕತೆಗಿಂತ ಹೆಚ್ಚಿನ ಬದುಕನ್ನು ಜೀವಿಸಬೇಕೆನ್ನಿಸುವುದಿಲ್ಲ; ಬಟ್ಟೆತೊಟ್ಟು ಮಾನ ಮುಚ್ಚಿಕೊಳ್ಳಬೇಕೆನ್ನಿಸುವುದಿಲ್ಲ; ಮತ್ತೊಂದು ಪ್ರಾಣಿಯ ಹಾಲನ್ನು ಕರೆದು ಕಾಯಿಸಿ ಕುಡಿಯಬೇಕೆನ್ನಿಸುವುದಿಲ್ಲ.

ಬುದ್ಧಿ ಪ್ರಪಂಚ ಮಾತ್ರ ತನಗನ್ನಿಸಿದ್ದನ್ನು ಸೃಷ್ಟಿಮಾಡಿಕೊಳ್ಳುತ್ತ ಸಾಗುತ್ತದೆ. ಕುದುರೆ ಏರುವುದನ್ನು ಕಲಿತದ್ದು ಗ್ರಹದಾಚೆಗೆ ಸಾಗಬಲ್ಲ ರಾಕೆಟ್‌ ತಂತ್ರಜ್ಞಾನವನ್ನು ಕಲಿಸುತ್ತದೆ. ಚಿಂಪಾಂಜಿಗಳಂತೆ ಗುಟುರುವಿಕೆಯಲ್ಲಿ ಪ್ರಾರಂಭವಾದ ಸಂವಹನ ಇಂಟರ್‌ನೆಟ್ ಆಗಿ, ಫೇಸ್‌ಬುಕ್ ಆಗಿ ವಿಕಸನಗೊಳ್ಳುತ್ತದೆ. ತಿನ್ನುವ ಗಿಡಮೂಲಿಕೆಗಳಲ್ಲಿ ಚಿಕಿತ್ಸೆಯ ಗುಣವನ್ನು ಹುಡುಕಲು ಹೊರಟಿದ್ದು ಹೃದಯವನ್ನು ಕೈನಲ್ಲಿ ಹಿಡಿದು ಶಸ್ತ್ರಚಿಕಿತ್ಸೆ ಮಾಡುವಷ್ಟರ ಮಟ್ಟಿಗಿನ ಸೂಕ್ಷ್ಮ ಮತ್ತು ಉನ್ನತ ವಿದ್ಯೆಯಾಗುತ್ತದೆ. ಕಲಿತದ್ದು ಒಂದಕ್ಕೊಂದು ಪೂರಕವಾಗುತ್ತ ಯಂತ್ರತಂತ್ರಗಳು ನಿರಂತರವಾಗಿ ನಿರ್ಮಾಣಗೊಳ್ಳುತ್ತವೆ. ಎಲ್ಲವೂ ಮನುಷ್ಯ ಬುದ್ಧಿ ಪ್ರಣೀತ ಅಭಿವೃದ್ಧಿಯ ಮೈಲಿಗಲ್ಲುಗಳಾಗುತ್ತವೆ.

ಜೊತೆಗೇ, ಯುದ್ಧ ಕೂಡ ಬಂತು. ಯಾವ ಬುದ್ಧಿಯು ಮನುಷ್ಯ ಜೀವನವನ್ನು ಹಸನುಗೊಳಿಸುವಲ್ಲಿ ಯಂತ್ರತಂತ್ರಗಳನ್ನು ಸೃಷ್ಟಿಸಿತೋ ಅದೇ ಬುದ್ಧಿಯು ಯುದ್ಧಗಳಿಗಾಗಿ ಆಯುಧಗಳನ್ನೂ ಸೃಷ್ಟಿಸಿತು. ಕಲ್ಲನ್ನು ಮೊನಚು ಮಾಡಿ ಗುರಿಯಿಟ್ಟು ಎಸೆದು ಜಿಂಕೆಯನ್ನು ಕೊಲ್ಲಬಹುದಾದರೆ ಅದೇ ಕಲ್ಲನ್ನು ಗುರಿಯಿಟ್ಟು ಎಸೆದು ಮತ್ತೊಬ್ಬ ಮನುಷ್ಯನನ್ನೇ ಏಕೆ ಕೊಲ್ಲಬಾರದು ಎಂದು ಪ್ರಶ್ನಿಸಿಕೊಳ್ಳುವುದು ಮನುಷ್ಯನಿಗೆ ಕಷ್ಟವಾಗಲೇ ಇಲ್ಲ. ಜೊತೆಜೊತೆಯಲ್ಲೇ ಬೆಳೆಯುತ್ತಿದ್ದ ಅರ್ಥಜ್ಞಾನವು ಹಸನು ಯಂತ್ರಗಳಿಗಿಂತ ಯುದ್ಧಯಂತ್ರಗಳಲ್ಲೇ ಹೆಚ್ಚಿನ ಲಾಭವನ್ನು ಕಾಣತೊಡಗಿತು.

ತಂತ್ರಜ್ಞಾನದ ಮೊದಲ ಅರ್ಪಣೆ ಯುದ್ಧಗಳಿಗಾಗತೊಡಗಿತು. ಲೋಹಗಳ ಉತ್ಖನನವೇ ಯುದ್ಧಗಳಾಯಿತು. ಪುರಾಣ ಪುರುಷ ಪರಶುರಾಮ ತನ್ನ ಕೊಡಲಿಯ ಲೋಹದಂಚಿನಲ್ಲಿ ಕಂಡದ್ದು ಕ್ಷತ್ರಿಯ ವಂಶ ಸಂಹಾರ. ಹೋದ ಶತಮಾನವಷ್ಟೇ ಬಂದ ಹಿಟ್ಲರ್ ತನ್ನ ಲೋಹದ ಬಂದೂಕುಗಳಲ್ಲಿ ಕಂಡದ್ದೂ ಅದೇ ಬಗೆಯ ಕನಸು, ಯಹೂದಿ ವಂಶ ಸಂಹಾರ. ಇವರಿಬ್ಬರ ನಡುವಿರಬಹುದಾದ ಹಲವು ಸಾವಿರ ವರ್ಷಗಳ ‘ನಾಗರಿಕ ಬದುಕು’ ಇದಕ್ಕಿಂತ ಭಿನ್ನವಾಗಿ ನಮಗೇನನ್ನೂ ಕಲಿಸದೆ ಹೋಯಿತು. ದಿನದಿಂದ ದಿನಕ್ಕೆ ರಾಕ್ಷಸರನ್ನಾಗಿಸಿ ಕೊಡಲಿಯ ಅಂಚನ್ನು ನ್ಯೂಕ್ಲಿಯರ್ ಬಾಂಬುಗಳನ್ನಾಗಿಸಿ ನಮ್ಮ ‘ಯುದ್ಧ ದಕ್ಷತೆ’ಯನ್ನು ಗಣನೀಯವಾಗಿ ಹೆಚ್ಚಿಸಿತು.

ಪರಶುರಾಮನು ಸಾವಿರ ಸಂಖ್ಯೆಯಲ್ಲಿ ಕೊಂದಿರಬಹುದಾದರೆ (ತನ್ನ ರಟ್ಟೆ ಸೋಲುವ ತನಕ) ಇಂದು ಒಂದು ಅಣುಬಾಂಬು ಪ್ರಯೋಗಗೊಂಡ ಕ್ಷಣಕ್ಕೇ ಲಕ್ಷ ಸಂಖ್ಯೆಯಲ್ಲಿ ಸಾವನ್ನು ಸೃಷ್ಟಿಸಬಲ್ಲದು. ಅದು ನಮ್ಮ ಬೆಳವಣಿಗೆ! ಇಂದು ಅಮೆರಿಕ, ರಷ್ಯಾ ಮತ್ತು ಫ್ರಾನ್ಸ್ ದೇಶಗಳ ಬಳಿಯಿದೆ ಎಂದು ಹೇಳುವ ಮತ್ತು ಉಳಿದ ದೇಶಗಳೂ ಹೊಂದಲು ನಿರಂತರವಾಗಿ ಹಂಬಲಿಸುತ್ತಿರುವ ನ್ಯೂಟ್ರಾನ್ ಬಾಂಬ್‌ಗಳು ಒಂದು ಬಗೆಯ ವಿಶೇಷವಂತೆ. ಅವು ಸಾಮಾನ್ಯ ಅಣುಬಾಂಬುಗಳಿಗಿಂತ ಹತ್ತುಪಟ್ಟು ವಿಕಿರಣ ಶಕ್ತಿಯನ್ನು ಹೊಂದಿದ್ದರೂ ಸಾಮಾನ್ಯ ಅಣುಬಾಂಬುಗಳಿಗಿಂತ ಹತ್ತುಪಟ್ಟು ಕಡಿಮೆ ಸಿಡಿಯುತ್ತವೆ

ಪರಿಣಾಮವೆಂದರೆ, ಬಾಂಬ್ ಪ್ರಯೋಗವಾದೊಡನೆ ಒಂದು ಪ್ರದೇಶದ ಸಕಲ ಜೀವಜಾತಗಳು ಆ ಕ್ಷಣದಲ್ಲೇ ಸಂಪೂರ್ಣವಾಗಿ ನಿರ್ನಾಮಗೊಂಡರೂ ಅಲ್ಲಿನ ಆಸ್ತಿಪಾಸ್ತಿಗಳಿಗೆ, ಕಟ್ಟಡಗಳಿಗೆ, ‘ಕೋಣೆ ತುಂಬ ಚಿನ್ನ’ಕ್ಕೆ ಸ್ವಲ್ಪವೂ ಧಕ್ಕೆಯಾಗುವುದಿಲ್ಲ. ಇದು ಒಂದು ರೀತಿಯಲ್ಲಿ ತೊಳೆ ಮುರಿಯದ ಹಾಗೆ ಹಲಸಿನಹಣ್ಣು ಕೊಯ್ದಂತೆ. ಯುದ್ಧದ ಖರ್ಚು ಬಾಬ್ತುಗಳು ಆಕ್ರಮಿತ ಪ್ರದೇಶದಿಂದ ತಕ್ಷಣಕ್ಕೇ ಸಂದಾಯವಾಗಿಬಿಡುತ್ತವೆ. ತಂತ್ರಜ್ಞಾನ ಪ್ರಣೀತ ಯುದ್ಧವು ಅರ್ಥಭಾಷೆಯನ್ನು ಮಾತನಾಡುವ ಪರಿಯಿದು.

ಇದು ನಮ್ಮ ಅಭಿವೃದ್ಧಿಯ ಕಥೆ. ಇದು ನಮ್ಮ ನಾಗರಿಕತೆಯ ಕಥೆ ಕೂಡ. ಲಕ್ಷಾಂತರ ವರ್ಷಗಳು ಒಂದೇ ಥರದಲ್ಲಿ ಬದುಕುತ್ತಿದ್ದ ಪ್ರಾಣಿ ಪ್ರಭೇದವೊಂದನ್ನು ಕೇವಲ ಹದಿಮೂರು ಸಾವಿರ ವರ್ಷಗಳ ನಾಗರಿಕ ಬೆಳವಣಿಗೆ ಸಂಪೂರ್ಣವಾಗಿ ಬದಲಿಸಿಬಿಟ್ಟಿತು. ಬುದ್ಧಿ ಪ್ರಪಂಚ ಭ್ರಾಮಕತೆಗಳನ್ನು ಸೃಷ್ಟಿಸಿ ವಾಸ್ತವ ಪ್ರಪಂಚದಿಂದ ಮನುಷ್ಯನನ್ನು ಸಂಪೂರ್ಣವಾಗಿ ದೂರ ಮಾಡಿಬಿಟ್ಟಿತು. ಅಷ್ಟೇ ಅಲ್ಲ, ವಾಸ್ತವ ಜಗತ್ತು ಕಾಣದಂತೆ ಸತ್ಯವನ್ನು ಮರೆಮಾಚುವ ಪರಿಯಲ್ಲೂ ಬುದ್ಧಿ ಪ್ರಪಂಚ ನಿಷ್ಣಾತವಾಯಿತು. ವೇದಾಂತಸಾರವು ಕರೆಯುವ ‘ಆವರಣವಿದು’.

ಇಲ್ಲದಿದ್ದರೆ ಹೇಳಿ, ತಲೆಯ ಮೇಲೆ ತೂಗಾಡುವ ಬಾಂಬುಗಳಿದ್ದರೂ, ನಮ್ಮ ಅಭಿವೃದ್ಧಿಯ ಪರಿಣಾಮವಾಗಿ ಭೂಮಿ ಮಲಿನಗೊಂಡು ವಿನಾಶದ ಅಂಚಿನಲ್ಲಿ ನಿಂತು ಯಾವ ಕ್ಷಣಕ್ಕಾದರೂ ಸಾವು ಎನ್ನುವಂತಾದರೂ, ನಾವು ಮಾತ್ರ ಎಸಿ ಕೋಣೆಯ ಹಿತದಲ್ಲಿ ಲೆದರ್ ಸೋಫಾದ ಮೇಲೆ ಕುಳಿತು ಅಂತರರಾಷ್ಟ್ರೀಯ ಕಂಪೆನಿಯ ಪೊಟ್ಯಾಟೋ ಚಿಪ್ಸ್ ತಿನ್ನುತ್ತ, ಐಪಿಎಲ್ ಕ್ರಿಕೆಟ್ ಮ್ಯಾಚನ್ನು ಆನಂದದಿಂದ ನೋಡುತ್ತ ಮೈ ಮರೆಯಲು ಸಾಧ್ಯವಾಗುತ್ತಿತ್ತೇ? ಗೋಪಾಲಕೃಷ್ಣ ಅಡಿಗರು ನಾಗರಿಕತೆಯ ಮೇಲಿನ ತಮ್ಮ ಕವಿತೆಯಲ್ಲಿ ಹೇಳುತ್ತಾರೆ- ‘ನಮ್ಮ ನಾಗರಿಕತೆಯ ಕತೆ ಹಿರಿದು; ಒಡಕು ಮಡಕೆಗೆ ತುಂಬುತಿರುವ ಬಣ್ಣದ ನೀರು’. ನೀರು ಕಣ್ಣಿಗೆ ಸೊಗಸಾಗಿ ಕಾಣುತ್ತಿದೆ.

ಮಳೆಬಿಲ್ಲುಗಳು ಹುಟ್ಟಿ ಸುಂದರವಾಗಿಸುತ್ತಿವೆ. ಫಳಕ್ಕನೆ ಹೊಳೆಯುವ ಮಿಂಚುಗಳು ಕತ್ತಲನ್ನು ಭೇದಿಸಿ ಕ್ಷಣಕ್ಕೆ ಅದ್ಭುತವನ್ನು ಸೃಷ್ಟಿಸುತ್ತಿವೆ. ಮೈಮರೆಸುವ ಲೋಕವದು, ಮಾಯಾಲೋಕ. ಆದರೆ ನೀರಿನ ತಳದಲ್ಲಿ ಏನಿದೆ? ‘ತಳದ ಹಾಲಾಹಲದ ಮೇಲಮೃತ ಬುರುಗು; ಓ ಇದೋ ನೋಡು ಮಡಕೆ ಬರಿದೋ ಬರಿದು’.

ನಮ್ಮ ನಾಗರಿಕತೆಯು ಒಂದು ಟ್ರಾಪ್‌ನಂತೆ ಕಾಣುವುದು ಹೀಗೆಯೇ. ಯುದ್ಧ ಒಂದೇ ಅಲ್ಲ, ನಾವು ಅಭಿವೃದ್ಧಿ ಎಂದು ಬಗೆಯುವ ಪ್ರತಿಯೊಂದೂ ಅಂತಿಮವಾಗಿ ವಿನಾಶದ ರಸ್ತೆಯನ್ನೇ ಹಿಡಿಯುತ್ತವೆ. ನಾಗರಿಕತೆಯ ಅಡಿಪಾಯದಂತೆ ಕಾಣುವ ಕೃಷಿಯು ಅರಣ್ಯನಾಶದ ಮೊದಲ ಸಾಧನ ಮತ್ತು ಉದ್ದೇಶವಾಯಿತು. ಮಿತಿಮೀರಿ ಬೆಳೆದ ಜನಸಂಖ್ಯೆಯು ಭೂಮಿ ಮತ್ತು ವನ್ಯತೆಯ ನಾಶಕ್ಕೆ ಸಕಾರಣವಾಗಿ ಕಂಡಿತು. ಎಷ್ಟೇ ನದಿಗಳು ಉಣಿಸಿದರೂ ಸಾಲದಷ್ಟು ಭೂಕೃಷಿ ಇಂದು ನಡೆಯುತ್ತಿದೆ.

ಕಳೆದ ನೂರು ವರ್ಷಗಳಲ್ಲಿ ಕಾವೇರಿ ನದಿಯ ಅವಲಂಬಿತ ಕೃಷಿ ಹತ್ತಾರು ಪಟ್ಟು ಬೆಳೆದಿದೆ. ಭಗೀರಥನ ಮಾದರಿಯಲ್ಲೇ ತಪಸ್ಸು ಮಾಡಿ ಮತ್ತೊಂದು ಕಾವೇರಿಯನ್ನು ಈ ಲೋಕಕ್ಕೆ ಹರಿಸಿದರೂ ಕನ್ನಡಿಗರ ಮತ್ತು ತಮಿಳರ ಇಂದಿನ ವ್ಯವಸಾಯಕ್ಕೆ ಮತ್ತು ಬಾಯಾರಿಕೆಗೆ ಅದು ಸಾಲದಾಗುತ್ತದೆ. ಆಸ್ಟ್ರೇಲಿಯಾದ ಮರ್ರೆ-ಡಾರ್ಲಿಂಗ್ ನದಿಗಳು ಮನುಷ್ಯ ಬಳಕೆಯಿಂದ ಎಷ್ಟರ ಮಟ್ಟಿಗೆ ಇಂಗಿವೆಯೆಂದರೆ ಸದ್ಯದಲ್ಲೇ ಆ ಪ್ರದೇಶದಲ್ಲಿ ಒಂದು ದೊಡ್ಡ ಬರಗಾಲವು ಬರಬಹುದಂತೆ.

ಕೈಗಾರಿಕೀಕರಣವು ಹಿಡಿದದ್ದೂ ಇದೇ ಜಾಡೇ. ನೂಲಿನ ಯಂತ್ರದಿಂದ ಪ್ರಾರಂಭವಾದದ್ದು ಇಂದು ಯಾವ ಕ್ಷೇತ್ರವನ್ನೂ ಬಿಡದಂತೆ ಯಂತ್ರ ಜಗತ್ತು ಆಳುತ್ತಿದೆ. ಯುದ್ಧದಂತೆಯೇ ಕೈಗಾರಿಕೆಗಳೂ ಕೂಡ ನಮ್ಮ ಅರ್ಥ ಭಾಷೆಯ ಚೌಕಟ್ಟನ್ನು ಮೀರಲಾರದೆ, ಉತ್ಪಾದನೆ-ಕಾರ್ಯಕ್ಷಮತೆ-ಲಾಭ ಎನ್ನುವ ತ್ರಿಸೂತ್ರ ಮಂತ್ರವನ್ನು ನಿರಂತರವಾಗಿ ಜಪಿಸುತ್ತಿವೆ. ಹೆಚ್ಚು ಹೆಚ್ಚು ಲಾಭವಾಗಬೇಕಿದ್ದರೆ ಹೆಚ್ಚು ಹೆಚ್ಚು ಮಾರಾಟವಾಗಬೇಕು; ಹೆಚ್ಚು ಹೆಚ್ಚು ಮಾರಾಟವಾಗಬೇಕಿದ್ದರೆ ಹೆಚ್ಚು ಹೆಚ್ಚು ಉತ್ಪಾದನೆಯಾಗಬೇಕು. ‘ಅದೆಲ್ಲಿಂದಲೋ ಅನಿಯಮಿತವಾಗಿ ಕಚ್ಚಾಸಾಮಾಗ್ರಿಗಳು ಸರಬರಾಜಾಗುತ್ತಲೇ ಇರಬೇಕು.

ಕಬ್ಬಿಣ, ತಾಮ್ರ, ಸತು, ಚಿನ್ನ, ಬೆಳ್ಳಿ, ಕಲ್ಲಿದ್ದಲು, ಪೆಟ್ರೋಲ್ ಇವೆಲ್ಲಾ ಅನಿಯಮಿತವಾಗಿ ಸರಬರಾಜಾಗುತ್ತಲೇ ಇರಬೇಕು. ಒಂದೇ ಒಂದು ದಿನದ ಮಟ್ಟಿಗೆ ಪ್ರಪಂಚದ ಕಬ್ಬಿಣ ತಯಾರಿಕೆ ನಿಂತರೂ ಎಲ್ಲಾ ಸ್ಟಾಕ್ ಮಾರ್ಕೆಟ್‌ಗಳು ಇನ್ನಿಲ್ಲದಂತೆ ಕುಸಿತ ಕಾಣುತ್ತವೆ. ಕೈಗಾರಿಕೆಗಳು ಭೂಮಿಯ ಲೋಹಾಂಶವನ್ನು ಎಷ್ಟರ ಮಟ್ಟಿಗೆ ಹೊರಗೆಳೆದು ಕರಗಿಸುತ್ತಿವೆ ಎಂದರೆ ಭೂಗರ್ಭದಲ್ಲಿ ಈ ಲೋಹಗಳು ಮುಗಿಯಲು ಇನ್ನು ಶತಮಾನಗಳನ್ನು ಎಣಿಸಬೇಕಿಲ್ಲ. ಈ ಶತಮಾನದೊಳಗೇ ಎಲ್ಲವೂ ಮುಗಿದುಹೋಗುತ್ತದೆ. ಇಂಗ್ಲೆಂಡಿನ ವಿಜ್ಞಾನಿ ಮಾರ್ಟಿನ್ ರೀಸ್ ಈ ಶತಮಾನವನ್ನು ‘ಫೈನಲ್ ಸೆಂಚುರಿ’ ಎಂದು ಕರೆದಿರುವುದು ಈ ಕಾರಣಕ್ಕಾಗಿಯೇ. ಹದಿನೆಂಟನೆಯ ಶತಮಾನವನ್ನೇ The world is too much with us ಎಂದು ಆಕ್ರೋಶದಲ್ಲಿ ಕರೆದ ವರ್ಡ್ಸ್‌ವರ್ಥ್ ಕವಿ ಇಪ್ಪತ್ತೊಂದನೆಯ ಶತಮಾನವನ್ನು ಕಂಡಿದ್ದರೆ ವ್ಯಕ್ತಪಡಿಸಲು ಪದಗಳು ಸಿಗದೆ ಪರಿತಪಿಸುತ್ತಿದ್ದನೇನೋ!

ನಮ್ಮ ಅಭಿವೃದ್ಧಿಯೇ ನಮ್ಮನ್ನು ಮಟ್ಟ ಹಾಕುತ್ತಿದೆ. ‘ತಿಳಿವಳಿಕೆಯುಳ್ಳವನೆನ್ನುವ ಮನುಷ್ಯ ಜೀವಿಗೆ ಅವನ ತಿಳಿವಳಿಕೆಯೂ ಸಮಸ್ಯಾತ್ಮಕವೇ ಆಗಿದೆ’ ಎನ್ನುತ್ತಾರೆ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ, ಭಾಗವತವನ್ನು ಕುರಿತಾದ ತಮ್ಮ ಲೇಖನವೊಂದರಲ್ಲಿ. ಅವರ ಆ ಮಾತುಗಳಿಗೆ ನಮ್ಮ ನಾಗರಿಕತೆ ಮತ್ತು ಅದು ಬೆಳೆದು ಬಂದ ರೀತಿ ಒಂದು ನೇರ ಉದಾಹರಣೆಯಾಗಿ ನಿಲ್ಲುತ್ತದೆ.

ನಮ್ಮ ಬುದ್ಧಿ ಪ್ರಣೀತ ಬದುಕು ಯಾವ ನಾಚಿಕೆಯಿಲ್ಲದೆ ಭವಿಷ್ಯವನ್ನು ಸುಟ್ಟು ವರ್ತಮಾನವನ್ನು ದೇದೀಪ್ಯಗೊಳಿಸುತ್ತಿದೆ. ಹತ್ತು ತಲೆಮಾರುಗಳ ಮಾತು ಆಚೆಗೆ ಹೋಗಲಿ, ಮೊಮ್ಮಕ್ಕಳ ಕಾಲಕ್ಕೂ ಭೂಮಿಯನ್ನು ಉಳಿಸಲಾರದೇ ಹೋಗುತ್ತಿದ್ದೇವೆ. ಆ ಬಗ್ಗೆ ಯಾವ ಸಂಕೋಚವೂ ನಮಗೆ ಕಾಡುತ್ತಿಲ್ಲ. ಸಂಕೋಚ ನಾಚಿಕೆಗಳು ಏಳದಂತೆ ನಮ್ಮ  ಅಭಿವೃದ್ಧಿಶೀಲ ಬದುಕು ನಮ್ಮನ್ನು ಅತಿ ಕಾರ್ಯಭಾರದಲ್ಲಿಟ್ಟಿದೆ.

ನಮ್ಮಲ್ಲಿ ಅನೇಕರಿಗೆ ವಾರಾಂತ್ಯದ ತನಕ ಮಕ್ಕಳ ಮುಖವನ್ನೇ ನೋಡಲಾಗುವುದಿಲ್ಲ, ಇನ್ನು ಗ್ರಹ ನಕ್ಷತ್ರಗಳ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವೆಲ್ಲಿದೆ? ನಮ್ಮ ಅಭಿವೃದ್ಧಿಯ ಆವರಣವಿದು. ಹೊರಗೆಷ್ಟೇ ಹೊತ್ತಿ ಉರಿಯುತ್ತಿರಲಿ ಹವಾನಿಯಂತ್ರಿತ ಕೋಣೆ ನಮ್ಮನ್ನು ತಂಪಾಗಿ ಇಟ್ಟಿರುತ್ತದೆ. ಕಿಟಕಿಯಿಂದಾಚೆಗೆ ನೋಡಿದರಷ್ಟೇ ಸಮಸ್ಯೆ! ಹೊರಗೆ ಇಣುಕಲೇಬೇಡ ಎನ್ನುತ್ತದೆ ಬುದ್ಧಿ. ಭೂಮಿಯನ್ನು ಉಳಿಸುವುದು ಎನ್ನುವುದು ‘ಪರಿಸರವಾದಿಗಳು ಎಂದು ಕರೆಸಿಕೊಂಡವರ ಟೈಮ್‌ಪಾಸ್ ಕ್ರಿಯೆ’ಯಾಗುತ್ತದೆ.

ಇನ್ನು ನಮ್ಮ ಮೂಲಭೂತ ಪ್ರಶ್ನೆಗೆ ವಾಪಸ್ಸು ಬರೋಣ. ‘ಯಾವ ಬಗೆಯ ಅಭಿವೃದ್ಧಿಯು ನಮಗೆ ಬೇಕು?’. ಈ ಪ್ರಶ್ನೆಗೆ ಉತ್ತರದ ಪ್ರಯತ್ನ ಮಾಡಲು ಒಂದು ಸರಳ ರೂಪಕವನ್ನು ಬಳಸುತ್ತೇನೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ನಮಗೆ ಅತಿ ಚೆನ್ನಾಗಿ ಮನದಟ್ಟಾಗುವ ಅರ್ಥ ವ್ಯವಸ್ಥೆಯ ಭಾಷೆಯನ್ನೇ ತೆಗೆದುಕೊಳ್ಳೋಣ. ಒಬ್ಬ ನಿವೃತ್ತ ಗುಮಾಸ್ತ ಎಲ್ಲಿಯ ತನಕ ಆರ್ಥಿಕವಾಗಿ ಸ್ವಾವಲಂಬಿಯಾಗಿ ಬದುಕಬಹುದು? ಎಲ್ಲಿಯ ತನಕ ಅವನು ತನ್ನ ಉಳಿತಾಯ ಮತ್ತು ನಿವೃತ್ತಿಯ ಸಮಯದಲ್ಲಿ ಬಂದ ಒಟ್ಟು ಮೊತ್ತವನ್ನು (ಪಿಎಫ್, ಗ್ರಾಚ್ಯುಯಿಟಿ ಮುಂತಾದವು) ಬ್ಯಾಂಕಿನಲ್ಲಿರಿಸಿ ಬಡ್ಡಿಯ ಹಣದಲ್ಲಿ ಜೀವಿಸುತ್ತಾನೋ ಅಲ್ಲಿಯ ತನಕ ಅವನು ತನ್ನ ಭವಿಷ್ಯವನ್ನು ಕುರಿತು ತೀರಾ ಆತಂಕಗೊಳ್ಳುವ ಅವಶ್ಯಕತೆಯಿಲ್ಲ.

ಸುಸೂತ್ರ ಭವಿಷ್ಯದ ದೃಷ್ಟಿಯಿಂದ ಅವನ ಒಟ್ಟು ಖರ್ಚು ವೆಚ್ಚಗಳು ಬರುವ ಬಡ್ಡಿಯ ಹಣವನ್ನು ಎಂದಿಗೂ ಮೀರಬಾರದು. ಮಗಳ ಮದುವೆ, ಹೃದಯ ಶಸ್ತ್ರಚಿಕಿತ್ಸೆ ಎಂದೆಲ್ಲಾ ಕಾರಣಗಳಿಂದ ಎಂದಿಗೆ ಅವನು ಮೂಲ ಹಣವನ್ನು ಕರಗಿಸಲು ತೊಡಗುತ್ತಾನೋ ಅಂದಿನಿಂದ ಅವನ ಭವಿಷ್ಯದೆಡೆಗಿನ ಅನಿಶ್ಚಿತತೆ ಪ್ರಾರಂಭವಾಗುತ್ತದೆ. ಖರ್ಚುವೆಚ್ಚಗಳು ಮತ್ತೂ ಕೈಮೀರಿದಾಗ ಅವನು ಸಾಲಗಾರನಾಗಿಯೂ ಜೀವನ ಸಾಗಿಸಬೇಕಾಗುತ್ತದೆ. ಸಾಲದ ಹಿಂದಿರುವ ನಿಜ ಅರ್ಥ, ಭವಿಷ್ಯದಲ್ಲಿ ಅದನ್ನು ತೀರಿಸುತ್ತೇನೆಂಬ ಧ್ಯೇಯ.

ಸಾಲವು ವರ್ತಮಾನಕ್ಕಾಗಿ ಭವಿಷ್ಯವನ್ನು ಒತ್ತೆಯಿಟ್ಟುಕೊಳ್ಳುತ್ತದೆ (ಈ ಕಾರಣಕ್ಕಾಗಿಯೇ ನಮ್ಮ ಅನುಭವೀ ಹಿರಿಯರು ಕ್ರೆಡಿಟ್ ಕಾರ್ಡನ್ನು ಇಷ್ಟ ಪಡುವುದಿಲ್ಲ). ವರ್ತಮಾನವು ಭವಿಷ್ಯದ ಹೊರೆಯಾಗುತ್ತದೆ. ತಕ್ಷಣದ ಭವಿಷ್ಯ ತನ್ನಲ್ಲಿರುವುದು ಸಾಲದಾದಾಗ ತನ್ನ ಮುಂದಿನ ಭವಿಷ್ಯದಿಂದ ಎರವಲು ತಂದು ವರ್ತಮಾನಕ್ಕೆ ಕೊಡುತ್ತದೆ. ದಿನದಿಂದ ದಿನಕ್ಕೆ ಬೆಳೆಯುವ ಸಾಲದ ಬಡ್ಡಿ, ಮತ್ತೂ ಹುಟ್ಟಿಕೊಳ್ಳುವ ಖರ್ಚುವೆಚ್ಚಗಳು ಸಾಲದ ಹೊರೆಯನ್ನು ಜಾಸ್ತಿ ಮಾಡುತ್ತಲೇ ಸಾಗುತ್ತವೆ. ಭವಿಷ್ಯ ಕೂಡ ಎಲ್ಲಿಯತನಕ ವರ್ತಮಾನದ ಈ ಬೆಳೆಯುತ್ತಲೇ ಸಾಗುವ ಹೊರೆಯನ್ನು ಹೊತ್ತು ನಿಂತೀತು? ಕೊನೆಯಲ್ಲಿ ನಿವೃತ್ತ ಗುಮಾಸ್ತನ ವರ್ತಮಾನ ಮತ್ತು ಭವಿಷ್ಯಗಳೆರಡೂ ಅವನ ಕಣ್ಮುಂದೆಯೇ ಕುಸಿದು ಬೀಳುತ್ತವೆ.

ಪ್ರಕೃತಿಯೆಡೆಗಿನ ನಮ್ಮ ಇಂದಿನ ಪರಿಸ್ಥಿತಿ ಇದಕ್ಕಿಂತ ಬೇರೆಯಿಲ್ಲ. ಸಾವಿರಾರು ವರ್ಷಗಳ ಭವಿಷ್ಯವನ್ನು ಈಗಾಗಲೇ ಪಣಕ್ಕಿಟ್ಟಿದ್ದೇವೆ. ನಮ್ಮ ಓವರ್‌ಡ್ರಾಫ್ಟ್ ಅಕೌಂಟ್ ಯಾವ ಸ್ಥಿತಿಯನ್ನು ಮುಟ್ಟಿದೆ ಎಂದರೆ ಪ್ರಕೃತಿಯು ಬ್ಯಾಂಕಿನಂತೆ ನಮ್ಮ ಚೆಕ್ಕುಗಳನ್ನು ತಿರಸ್ಕರಿಸುತ್ತಿದೆ. ಅಕೌಂಟಿನಲ್ಲಿ ಹಣವಿದ್ದರೆ ತಾನೇ ಚೆಕ್ಕು ಕೊಡಲು ಸಾಧ್ಯ? ಇಂತಹ ಸಂದರ್ಭದಲ್ಲಿ ಹಳೆಯ ಧಾಟಿಯಲ್ಲೇ ಅಭಿವೃದ್ಧಿಯ ಬಗೆಗೆ ಸರ್ಕಾರಗಳು ಮಾತನಾಡುತ್ತಿವೆ. ಕಂಪನಿಗಳು ವರ್ಷದಿಂದ ವರ್ಷಕ್ಕೆ ಹೀಗೆಯೇ ಬೆಳೆಯುತ್ತಿರುತ್ತೇವೆ ಎನ್ನುವ ಆಶ್ವಾಸನೆಗಳನ್ನು ನೀಡುತ್ತಿವೆ. ಜನಸಂಖ್ಯೆಯನ್ನು ನಿಯಂತ್ರಿಸದೆ ಸರ್ವರಿಗೂ ಆಹಾರ ಉತ್ಪಾದನೆ ಸಾಧ್ಯ, ಎಲ್ಲೋ ಹಂಚುವುದರಲ್ಲಿ ಸಣ್ಣಪುಟ್ಟ ಎಡವಟ್ಟುಗಳಾಗುತ್ತಿವೆ ಅಷ್ಟೇ ಎಂದು ನಮ್ಮನ್ನು ನಂಬಿಸಲಾಗುತ್ತಿದೆ.

ಯಾವ ಬಗೆಯ ಅಭಿವೃದ್ಧಿ ನಮಗೆ ಬೇಕು ಎನ್ನುವ ಪ್ರಶ್ನೆಗೆ ಅತಿ ಸರಳ ಉತ್ತರವೆಂದರೆ– ಅಸಲು ಮುಟ್ಟದೆ, ಸಾಲಗಾರರನ್ನಾಗಿಸದೆ ಕೇವಲ ಬಡ್ಡಿಯಿಂದ ಬದುಕಬಲ್ಲ ಅಭಿವೃದ್ಧಿಯಷ್ಟೇ ನಮಗೆ ಬೇಕು. ನಮ್ಮ ಒಟ್ಟು ಲೋಹ ಬಳಕೆ ಭೂಮಿಯ ಲೋಹ ಸೃಷ್ಟಿ ದರದೊಳಗೆ ಇರಬೇಕು. ಕಾರುಗಳು, ವಿಮಾನಗಳು, ರಾಕೆಟ್‌ಗಳು, ಉತ್ಪಾದನಾ ಯಂತ್ರಗಳು, ಕೊನೆಗೆ ಒಂದು ಗುಂಡುಸೂಜಿಯನ್ನು ತಯಾರಿಸಬೇಕಾದರೂ  ಭೂಮಿಯ ಲೋಹ ಪುನರ್‌ಸೃಷ್ಟಿಯ ಮಿತಿಯೊಳಗಿದ್ದೇವೆಯೆ ಎನ್ನುವ ಅರಿವಿರಬೇಕು. ಅಲ್ಲಿಗೆ ಮುಂದಿನ ಸಾವಿರಾರು ವರ್ಷಗಳು ಈಗಾಗಲೇ ಹೊರತೆಗೆದಿರುವ ಲೋಹದೊಂದಿಗಷ್ಟೇ ಬದುಕಬೇಕಾಗುತ್ತದೆ.

ಭೂಮಿಯನ್ನು ಉಳಿಸಿಕೊಂಡು ನಮ್ಮ ಕೆಲವು ಅಭಿವೃದ್ಧಿಗಳನ್ನು ಉಳಿಸಿಕೊಳ್ಳಬೇಕೆಂದರೆ ಆ ಮಿತಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಪ್ರಕೃತಿಯೆಡೆಗಿನ ನಮ್ಮ ನಿಲುವು ನಮ್ಮ ರಾಜಕೀಯ ಪರಿಸ್ಥಿತಿಗಳನ್ನು ಮೀರುವ ಶಕ್ತಿಯನ್ನು ದಕ್ಕಿಸಿಕೊಳ್ಳಬೇಕು. ಪ್ರಪಂಚದ ಸಮಸ್ತ ರಾಷ್ಟ್ರಗಳು– ಬಂಡವಾಳಶಾಹಿ, ಕಮ್ಯುನಿಸ್ಟ್, ಸರ್ವಾಧಿಕಾರಿ ಆಡಳಿತವೆನ್ನದೆ ಪ್ರಕೃತಿಯ ಮಿತಿಗಳನ್ನು ಒಪ್ಪಿಕೊಳ್ಳಬೇಕು.

ಅಭಿವೃದ್ಧಿಯನ್ನು ಕುರಿತಾದ ಹೊಸ ವ್ಯಾಖ್ಯಾನವು ಹುಟ್ಟಿಬರಬೇಕು. ನಿಮಗೆ ರಸ್ತೆ, ಫ್ಲೈಓವರ್‌ಗಳನ್ನು ನಿರ್ಮಿಸಿಕೊಡುತ್ತೇವೆ ಎನ್ನುವ ರಾಜಕಾರಣಿಗಿಂತ ‘ನಮ್ಮ ಅಭಿವೃದ್ಧಿಯ ಮಿತಿಯನ್ನು ಗುರುತಿಸುವಲ್ಲಿ ಹೋರಾಡುತ್ತೇವೆ. ಅಲ್ಲಿಯ ತನಕ ರಸ್ತೆ, ಫ್ಲೈಓವರ್‌ಗಳು ನಿರ್ಮಾಣವಾಗದಿದ್ದರೆ ಆತಂಕಗೊಳ್ಳಬೇಡಿ’ ಎಂದು ಮಾತನಾಡಬಲ್ಲ ಮತ್ತು ಅದಕ್ಕಾಗಿ ಹೋರಾಡಬಲ್ಲ ರಾಜಕಾರಣಿಗಳು ತಕ್ಷಣಕ್ಕೇ ಬೇಕು. ಎಲ್ಲಕ್ಕಿಂತ ಹಿರಿದಾಗಿ ನಮ್ಮ ಅಭಿವೃದ್ಧಿಯ ವ್ಯಾಖ್ಯಾನ ತುರ್ತಾಗಿ ಬದಲಾಗಬೇಕು. ಇದು ಒಬ್ಬ ವ್ಯಕ್ತಿಯಿಂದಾಗಲಿ ಕೆಲವು ಮಂದಿಯಿಂದಾಗಲಿ ಸಾಧ್ಯವಾಗುವಂತದ್ದಲ್ಲ. ಬದಲಾಗಿ, ಇಡೀ ಮನುಷ್ಯ ಕುಲವೇ ಬದಲಾಗಬೇಕು.

ನಮ್ಮ ಶಿಕ್ಷಣ, ವೃತ್ತಿ, ಕಲೆ, ರಾಜಕಾರಣ ಎಲ್ಲವೂ ಆ ನಿಟ್ಟಿನಲ್ಲಿ ಕೊಂಡೊಯ್ಯುವಂತಿರಬೇಕು. ನಮ್ಮ ನಾಗರಿಕತೆ ತೆಗೆದುಕೊಂಡ ದಾರಿ ತಪ್ಪಾಗಿದ್ದರೆ ಯಾವ ಹಿಂಜರಿಕೆಯೂ ಇಲ್ಲದೆ ಯೂ-ಟರ್ನ್ ಮಾಡಿ ನಾವು ಹಿಂದೆ ಸಾಗಬೇಕಾಗುತ್ತದೆ. ಸರಿ ದಾರಿಯನ್ನು ಹುಡುಕಬೇಕಾಗುತ್ತದೆ. ಹಿಡಿದ ದಾರಿ ಪ್ರಪಾತದತ್ತ ತಳ್ಳುತ್ತಿದೆ ಎಂದು ಗೊತ್ತಾದ ಮೇಲೂ ಅದೇ ದಾರಿಯಲ್ಲಿ ಮುಂದುವರೆಯುವುದು ಆತ್ಮಹತ್ಯೆಯಾಗುತ್ತದೆಯಲ್ಲವೇ?

ಮತ್ತೊಂದು ವಿಚಾರ. ಪ್ರಕೃತಿ ನಾವು ತಿಳಿದಷ್ಟು ಅಸಹಾಯಕಳಲ್ಲ. ಒಂದು ಹಿಮಯುಗ ಅಥವ ಒಂದು ವೈರಸ್ ಸಾಕು ಆಕೆಗೆ ನಮ್ಮನ್ನು ನಾಶಮಾಡಲು. ಏಡ್ಸ್ ವೈರಸ್ ಏನಾದರೂ ಗಾಳಿಯಲ್ಲಿ ಹಬ್ಬುವಂತಿದ್ದರೆ ನಾವೀಗಾಗಲೇ ನಿರ್ನಾಮವಾಗಿ ಅನೇಕ ವರ್ಷಗಳಾಗಿರುತ್ತಿತ್ತು. ನಮ್ಮ ನಾಗರಿಕತೆಯ ಹೆಮ್ಮೆಯ ಭಾಗವಾದ ಮತ್ತು ಭೂಭಾಗಗಳನ್ನು ಅತಿವೇಗದಲ್ಲಿ ಕೂಡಿಸುವ ಸಂಚಾರ ವ್ಯವಸ್ಥೆಯೇ ಆ ಕೆಲಸವನ್ನು ಅವಳ ಪರವಾಗಿ ಮಾಡುತ್ತಿತ್ತು. ಮತ್ತೊಂದು ಹಿಮಯುಗಕ್ಕೆ ದೂಡಿ ಡೈನೊಸರ್‌ಗಳನ್ನು ನಾಶ ಮಾಡಿದಂತೆ ನಮ್ಮನ್ನೂ ನಾಶ ಮಾಡುವುದು ಆಕೆಗೆ ದೊಡ್ಡ ವಿಚಾರವಲ್ಲ. ಭೂಗ್ರಹ ಈಗಾಗಲೇ ಅನೇಕ ಹಿಮಯುಗಗಳನ್ನು ಕಂಡಿದೆ.

ಒಂದು ಜೀವಪ್ರಭೇದವಾಗಿ ನಾವೂ ಅನೇಕ ಹಿಮಯುಗಗಳನ್ನು ದಾಟಿ ಬಂದಿದ್ದೇವೆ.  ಪ್ರಕೃತಿಯೊಂದಿಗಿನ ನಮ್ಮ ಗಾಢ ಅನುಬಂಧವೇ ನಮ್ಮನ್ನು ಹಿಮಯುಗಗಳ ಕಣಿವೆಯಲ್ಲಿ ಪಾರು ಮಾಡಿತ್ತು. ಇಂದಿನ ದೊಡ್ಡ ವಿಷಾದವೆಂದರೆ ನಮ್ಮ ನಾಗರಿಕತೆ ಆ ಅನುಬಂಧವನ್ನು ಮುರಿದು ಪ್ರಕೃತಿಯಿಂದ ನಮ್ಮನ್ನು ದೂರಕ್ಕೆ ಕೊಂಡೊಯ್ದಿದೆ. ನಮ್ಮ ನಾಗರಿಕತೆಯ ದೆಸೆಯಿಂದಲೇ ನಾವು ಮತ್ತೊಂದು ಹಿಮಯುಗವನ್ನು ದಾಟಲಾಗದಿರಬಹುದು.

ಮನುಷ್ಯ ಭಾಷೆ ನಿಸರ್ಗ ಭಾಷೆಯಾಗಿ ಉಳಿದಿಲ್ಲ. ನಮ್ಮದೀಗ ಚಿಂಪಾಂಜಿಯ ಗುಟುರುವಿಕೆಯಲ್ಲ, ಬದಲಾಗಿ ಬುದ್ಧಿಪ್ರೇರಿತ ಶಬ್ದಪುಂಜಗಳು. ನಾಗರಿಕತೆಯ ಭಾಷೆ ಮನುಷ್ಯ ಭಾಷೆ. ಅಭಿವೃದ್ಧಿಯ ಭಾಷೆ ಮನುಷ್ಯ ಭಾಷೆ. ಎಲ್ಲಿಯವರೆಗೆ ನಮ್ಮ ಭಾಷೆಯ ಮಾಯೆಯನ್ನು ನಾವು ಮೀರಲಾಗುವುದಿಲ್ಲವೋ ಅಲ್ಲಿಯವರೆಗೆ ನಾವು ಪ್ರಕೃತಿಯೊಂದಿಗೆ ನೇರವಾಗಿ ಸಂಭಾಷಿಸಲಾಗುವುದಿಲ್ಲ. ಹಿಂದೆ ಮೊರೆಯಿಟ್ಟಂತೆ ‘ಹಿಮಯುಗವನ್ನು ಹೇಗೆ ದಾಟಲೀ, ನನ್ನನ್ನು ರಕ್ಷಿಸು’ ಎಂದು ಮೊರೆಯಿಡಲಾಗುವುದಿಲ್ಲ.

ಎಲ್ಲಿಯವರೆಗೆ ನಾವು ನಮ್ಮ ಭಾಷೆಯನ್ನು ಮೀರಲಾಗುವುದಿಲ್ಲವೋ ಅಲ್ಲಿಯವರೆಗೆ ಅಭಿವೃದ್ಧಿಗೆ ಪೂರ್ಣ ವ್ಯಾಖ್ಯಾನವನ್ನೂ ನೀಡಲಾಗುವುದಿಲ್ಲ. ಭಾಷೆ ಮೀರುವುದು ಸುಲಭದ ವಿಚಾರವಲ್ಲ. ನಾಗರಿಕತೆಯು ನೀಡಿದ ಭಾಷೆಯಿಂದ ಯೋಚಿಸುತ್ತಲೇ ನಾಗರಿಕತೆಯನ್ನು ಮೀರಬೇಕು. ಇಂಟರ್‌ನೆಟ್‌ನಲ್ಲಿ ಸುಳಿದಾಡುವ ಒಂದು ಪೋಸ್ಟಿಂಗ್‌ನಲ್ಲಿ ತಾಯಿಯ ಗರ್ಭದಲ್ಲಿರುವ ಅವಳಿ ಮಕ್ಕಳು ದೇವರು ಇದ್ದಾನೋ ಇಲ್ಲವೋ ಎಂದು ವಾದ ಮಾಡುತ್ತಿರುತ್ತವೆ. ಆಗ ಒಂದು ಮಗು ಹೇಳುತ್ತದೆ– ‘ದೇವರು ಇದ್ದಾನೋ ಇಲ್ಲವೋ ಆಮೇಲೆ ತಲೆಕೆಡಿಸಿಕೊಳ್ಳೋಣ. ಅಮ್ಮ ಇದ್ದಾಳೋ ಇಲ್ಲವೋ ಹೇಳು ನೋಡೋಣ’. ನಮ್ಮ ಪರಿಸ್ಥಿತಿಯೂ ಹಾಗೆಯೇ ಆಗಿದೆ.

ನಾಗರಿಕತೆಯ ಗರ್ಭದಲ್ಲಿದ್ದುಕೊಂಡೇ ನಾಗರಿಕತೆಯನ್ನು ಮೀರಬೇಕಿದೆ. ನಾಗರಿಕತೆ ಕೊಟ್ಟ ಭಾಷೆಯಿಂದಲೇ ನಾಗರಿಕತೆಯನ್ನು ಮೀರಿ ಪ್ರಕೃತಿಯೊಂದಿಗೆ ಸಂಭಾಷಿಸಬೇಕಿದೆ. ಮನುಷ್ಯ ಕೇಂದ್ರಿತ ನಾಗರಿಕತೆಯನ್ನು ಪ್ರಕೃತಿ ಕೇಂದ್ರಿತವಾಗಿಸಬೇಕಿದೆ.

ಎಚ್ಚೆಸ್ವಿಯವರ ‘ಹಕ್ಕಿ ಹಾರುತಿದೆ’ ಎನ್ನುವ ಕವಿತೆಯಲ್ಲಿ ಒಂದು ಹಕ್ಕಿಯ ಖಂಡಾಂತರ ಪಯಣದ ದಾರುಣ ಚಿತ್ರವಿದೆ. ಮೇಲೆ ಬೆಂಕಿಯ ಸೂರ್ಯ, ಕೆಳಗೆ ವಿಶಾಲ ಸಮುದ್ರ; ನಡುವೆ ಹಕ್ಕಿಯೊಂದು ಹಾರುತ್ತಿದೆ ತನ್ನ ಹಿಡಿಗಾತ್ರದ ದೇಹವನ್ನು ದಂಡಿಸಿಕೊಂಡು. ಹಕ್ಕಿಯ ರೆಕ್ಕೆ ಸೋತಂತೆಲ್ಲಾ ಕವಿಯ ಮನಸ್ಸೂ ನೋವಿನಿಂದ ಹಿಂಡುತ್ತದೆ. ಹಕ್ಕಿಯನ್ನುಳಿಸುವುದರಲ್ಲಿ ನಮ್ಮ ಉಳಿವಿದೆ ಎನ್ನುತ್ತಾರೆ. ಜಗತ್ತಿನ ಕರುಣೆ ಮತ್ತು ಸಂಕಲ್ಪಶಕ್ತಿ ಹಕ್ಕಿಯನ್ನು ಕಾಪಾಡಬೇಕು. ಇಡೀ ಕವಿತೆಯ ಕೇಂದ್ರವಿರುವುದು ‘ಹಕ್ಕಿ ಆಕಾಶದ ಹೃದಯ ಅದನ್ನಿಳಿಸು ನೆಲಕ್ಕೆ’ ಎನ್ನುವ ಆರ್ದ್ರ ಕವಿ ಧ್ವನಿಯಲ್ಲಿ. ಕಾವ್ಯವು ನಾಗರಿಕತೆಯ ಕೂಸು. ಅದಕ್ಕೆ ಮಾತನಾಡಲು ಸಾಧ್ಯವಿರುವುದು ನಾಗರಿಕತೆಯ ಭಾಷೆಯನ್ನಷ್ಟೇ.

ಆ ಕವಿತೆಯ ಬಗ್ಗೆ ಬರೆಯುತ್ತ ನಾನು ಕವಿಗಳಿಗೆ ಒಂದು ಪ್ರಶ್ನೆ ಕೇಳಿದ್ದೆ– ‘ಮನುಷ್ಯ ಧ್ವನಿ ಇಲ್ಲದ ಕಾವ್ಯ ನಮ್ಮನ್ನು ಮುಟ್ಟಲಾರದು, ಒಪ್ಪುತ್ತೇನೆ. ನಮ್ಮ ಹೃದಯದ ಆಳಕ್ಕೆ ಇಳಿಯುವ ಶಕ್ತಿ ಇರುವುದು ಮನುಷ್ಯ ಧ್ವನಿಗಷ್ಟೇ, ಒಪ್ಪುತ್ತೇನೆ. ಪ್ರಶ್ನಾತೀತವಾಗಿ ಕವಿತೆ ಮಾನವ ಧ್ವನಿಯ ಸಂವಹನ ಮಾಧ್ಯಮ, ಒಪ್ಪುತ್ತೇನೆ. ಆದರೆ, ಧ್ವನಿ ಅನುಸರಿಸಿದ ಮಾತ್ರಕ್ಕೆ ಮನುಷ್ಯ ಧ್ವನಿಯ ಮಿತಿಯೇ ಕಾವ್ಯದ ಮಿತಿಯೂ ಆಗುವುದು ಸಾಹಿತ್ಯದ ವಿಪರ್ಯಾಸ. ಹಕ್ಕಿ ಕೇಂದ್ರಿತ ನಮ್ಮ ದೃಷ್ಟಿಗೆ ಕೆಳಗೆ ಆಹಾರಕ್ಕಾಗಿ ಕಾಯುವ ಮೀನು ಕಾವ್ಯದ ಭಾಗವಾಗದೇ ಹೋಗುವುದು ದುರಂತ.

ಸೈಬೀರಿಯಾದಿಂದ ಭಾರತಕ್ಕೆ ಹಾರುವ ಹಕ್ಕಿಯ ಕಠೋರ ಪಯಣವನ್ನು ಹೋಲಿಕೆಗಾಗಿ ಮಾನವ ಸಂಪರ್ಕಕ್ಕೆ ತಂದುಕೊಂಡು ಹೆಣ್ಣೊಬ್ಬಳ ಹೆರಿಗೆ ಸಂಕಟಕ್ಕೆ ಸಮೀಕರಿಸಿದಾಗ ನಮ್ಮಲ್ಲಿ ಹರಿವ ಸಹಾನುಭೂತಿ ಹಕ್ಕಿ ಬೀಳಲಿ ಎಂದು ಕಾಯುವ ಮೀನಿನ ದೃಷ್ಟಿಕೋನದಿಂದ ಹುಟ್ಟುವುದಿಲ್ಲ. ನಮ್ಮ ಧ್ವನಿ, ನಮ್ಮ ಭಾಷೆ, ನಮ್ಮ ರಸಗಳು ನಮ್ಮಂತೆಯೇ ಸಾವಯವ. ನಮ್ಮ ರಕ್ತದಲ್ಲಿ ಹುಟ್ಟಿ ನಮ್ಮ ಉಗುಳಿನೊಂದಿಗೆ ಬೆರೆತು ನಮ್ಮ ಗಂಟಲಿಂದಾಚೆಗೆ ಬರುವ ಭಾಷೆ ನಮ್ಮ ಜಗತ್ತನ್ನಷ್ಟೇ ಮಾತನಾಡಬಲ್ಲುದು. ಮಾನವ ಧ್ವನಿಯೇ ಕಾವ್ಯಕ್ಕೆ ಮಿತಿಯಾಗುವುದಾದರೆ ಕಾವ್ಯಕ್ಕೆ ಮತ್ಯಾವ ಭಾಷೆ ಬೇಕು?’.

ಸಾಹಿತ್ಯ ಸಂದರ್ಭದಲ್ಲಿ ಕೇಳಿದ ಪ್ರಶ್ನೆ ವಾಪಸ್ಸು ಬಂದು ನಮ್ಮ ನಾಗರಿಕತೆ ಮತ್ತು ಅಭಿವೃದ್ಧಿಯ ವಿಚಾರದಲ್ಲೂ ನನ್ನನ್ನು ಕಾಡುತ್ತಿದೆ. ಮನುಷ್ಯ ಭಾಷೆಯನ್ನು ಮೀರುವುದೇ ನಮ್ಮ ಉಳಿವಿನ ತುರ್ತು ಅಗತ್ಯವೆಂದು ಪ್ರಶ್ನೆಯಲ್ಲೇ ಒಗಟಿನ ರೂಪದಲ್ಲಿ ಉತ್ತರವನ್ನೂ ತೋರಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT