ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅವಲೋಕನ: ಪಕ್ಷಿ ವೀಕ್ಷಣೆಯ ಆಯಾಮಗಳ ದರ್ಶನ

Last Updated 28 ಮೇ 2022, 19:30 IST
ಅಕ್ಷರ ಗಾತ್ರ

ಪಕ್ಷಿವೀಕ್ಷಣೆ ನಮ್ಮಲ್ಲಿ ಅನಾದಿ ಕಾಲದಿಂದಲೂ ನಡೆದುಬಂದಿದೆ. ಹೆಚ್ಚಿನ ಲಿಖಿತ ದಾಖಲಾತಿಯನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಾಣಬಹುದಾಗಿದೆ. ನಮ್ಮಲ್ಲಿ ಕಳೆದ ದಶಕದವರೆಗೂ ಕೆಲವೇ ಆಸಕ್ತರು ಪಕ್ಷಿವೀಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದರು. ನಮ್ಮ ದೇಶದಲ್ಲಿ ದಾಖಲಾಗಿರುವ ಪಕ್ಷಿಗಳ ವೈವಿಧ್ಯ ಮತ್ತು ಜನಸಂಖ್ಯೆಗೆ ಹೋಲಿಸಿದರೆ ಪಕ್ಷಿ ವೀಕ್ಷಕರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು.

ದಿನದಿಂದ ದಿನಕ್ಕೆ ಹವ್ಯಾಸಿ ಪಕ್ಷಿವೀಕ್ಷಕರ ಸಂಖ್ಯೆ ಏರಿಕೆಯಾಗುತ್ತಿದೆ. ಅಧಿಕಗೊಳ್ಳುತ್ತಿರುವ ಹವ್ಯಾಸಕ್ಕೆ ಒಂದು ವೈಜ್ಞಾನಿಕ ಹಾಗೂ ನಿರ್ದಿಷ್ಟ ಮಾರ್ಗಸೂಚಿಯ ಅಗತ್ಯತೆ ಕಂಡು ಬಂದಿದೆ. ಇದೇ ವೇಳೆ ಮೈಸೂರಿನ ನೇಚರ್ ಕನ್ಸರ್ವೇಷನ್ ಫೌಂಡೇಷನ್ ಸಂಸ್ಥೆಯ, ಅರ್ಲಿ ಬರ್ಡ್ ತಂಡ 2017 ರಿಂದ ನಡೆಸಿಕೊಂಡು ಬಂದ How to be a Birding Buddy ಸರಣಿ ಕಾರ್ಯಾಗಾರದಿಂದ ಪಡೆದ ಅನುಭವದ ವಿವರವನ್ನು ಕೈಪಿಡಿ ರೂಪದಲ್ಲಿ ಹೊರತಂದಿದೆ.

‘ಮುಂದಿನ ಪೀಳಿಗೆ ನಿಜವಾಗಿಯೂ ಸಬಲವಾಗಬೇಕು ಎಂದು ನಾವು ಬಯಸುವುದಾದರೆ ಭೂಮಿಯನ್ನು ಉಳಿಸುವಂತೆ ಅವರನ್ನು ಕೇಳುವ ಮೊದಲು ಅವರಿಗೆ ಅದನ್ನು ಪ್ರೀತಿಸಲು ಅನುವು ಮಾಡಿಕೊಡಬೇಕು’, ಅಮೆರಿಕದ ಶಿಕ್ಷಣ ತಜ್ಞ ಡೆವಿಡ್‌ ಸೊಬೆಲ್ ಅವರ ಮೇಲಿನ ಅಭಿಪ್ರಾಯದೊಂದಿಗೆ Handbook for Bird Educators ಕೈಪಿಡಿ ಓದುಗರನ್ನು ಬರಮಾಡಿಕೊಳ್ಳುತ್ತದೆ. ಸೊಬೆಲ್ ಅವರ ಈ ಮನದಾಳದ ಮಾತು ಕೈಪಿಡಿಯ ಉದ್ದಕ್ಕೂ ಪ್ರತಿಧ್ವನಿಸುತ್ತದೆ.

ಶಾಲಾ ಶಿಕ್ಷಕರು, ಪರಿಸರ ಶಿಕ್ಷಕರು, ಪೋಷಕರು ಅಥವಾ ಯಾರಾದರೂ ಪರಿಸರದ ಬಗ್ಗೆ ಪ್ರೀತಿ ಇದ್ದಲ್ಲಿ ಹಾಗೂ ಅವರು ಅದನ್ನು ಮುಂದಿನ ಪೀಳಿಗೆಗೆ ದಾಟಿಸಲು ಇಚ್ಛಿಸಿದ್ದಲ್ಲಿ ಈ ಕೈಪಿಡಿ ಸಹಾಯ ಮಾಡುತ್ತದೆ. ಹೊಸಬರಿಗೆ ಹಾಗೂ ಪರಿಸರ/ಶಾಲಾ ಶಿಕ್ಷಕರಿಗೆ ಪಕ್ಷಿಗಳ ಹೆಸರು ಅಥವಾ ಅವುಗಳ ವೈಜ್ಞಾನಿಕ ಹೆಸರು ತಿಳಿಯಬೇಕೆಂಬ ಅವಶ್ಯಕತೆ ಇಲ್ಲ. ಬದಲಿಗೆ ಅವುಗಳ ಪರಿಸರದಲ್ಲಿನ ಪಾತ್ರ, ಅವುಗಳ ಚರ್ಯೆ ಬಗ್ಗೆ ತಿಳಿದುಕೊಂಡಿದ್ದರೆ ಸಾಕು ಎಂಬ ತಿಳಿವಳಿಕೆ ಕೈಪಿಡಿಯಲ್ಲಿ ಸ್ಪಷ್ಟವಾಗಿದೆ.

ಕೈಪಿಡಿಯನ್ನು ಪ್ರಮುಖವಾಗಿ ನಾಲ್ಕು ಭಾಗಗಳನ್ನಾಗಿ ವಿಂಗಡಿಸಲಾಗಿದೆ: 1. ಪಕ್ಷಿಗಳ ವೈವಿಧ್ಯ, 2. ಚಟುವಟಿಕೆಗಳು: ಪಕ್ಷಿ ನಡಿಗೆ, ಕ್ರಿಯಾತ್ಮಕ ಚಟುವಟಿಕೆ, ಆಟಗಳು ಇತ್ಯಾದಿ, 3. ಅನಿಸಿಕೆ ಮತ್ತು ಮೌಲ್ಯಮಾಪನ, 4. ದೀರ್ಘಾವಧಿ ಕಾರ್ಯಗಳು, ಯೋಜನೆಗಳು ಮತ್ತು ವಿಷಯ ವಿನಿಮಯ.

4 ರಿಂದ 10 ವರ್ಷದ ಮಕ್ಕಳಿಗೆ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಅವರ ಆಸಕ್ತಿ ಹಾಗೂ ವಯಸ್ಸಿನ ಅನುಸಾರ ನಡೆಸಬಹುದಾದ 60ಕ್ಕೂ ಹೆಚ್ಚು ಚಟುವಟಿಕೆಗಳನ್ನು ವಿಸ್ತಾರವಾಗಿ ವಿವರಿಸಲಾಗಿದೆ. ಚಟುವಟಿಕೆಗಳಿಗೆ ಬೇಕಾದ ಸಾಮಗ್ರಿಗಳು ನಮ್ಮ ಅಕ್ಕಪಕ್ಕ ಸಿಗುವಂಥವು ಹಾಗೂ ಹೆಚ್ಚೇನೂ ವೆಚ್ಚ ಬೇಡದಂಥವು.

ಪಕ್ಷಿಗಳು ವಲಸೆ ಹೋಗುವುದು, ಆಹಾರವನ್ನು ಹುಡುಕಿ ತರುವುದು, ಗೂಡು ಕಟ್ಟುವುದು, ಮೊಟ್ಟೆಯಿಟ್ಟು ಕಾವು ಕೊಡುವುದು, ಮರಿಗಳನ್ನು ಮಾಡಿ ಪೋಷಣೆ ಮಾಡುವುದು – ಹೀಗೆ ನಡೆಯುವ ಹಕ್ಕಿಗಳ ಚಟುವಟಿಕೆಗಳ ಕುರಿತು ಹೇಗೆ ಅಧ್ಯಯನ ಮಾಡಬಹುದು, ಪಕ್ಷಿಗಳ ಕಾಲಿನ ಗುರುತುಗಳನ್ನು ಎಲ್ಲಿ ಹಾಗೂ ಹೇಗೆ ತೆಗೆಯಬಹುದು, ಪಕ್ಷಿವೀಕ್ಷಣೆಗೆ ಉತ್ತಮ ಸಮಯ ಯಾವುದು ಇತ್ಯಾದಿ ವಿಷಯಗಳ ಚರ್ಚೆ ಇಲ್ಲಿದೆ.

ವಯೋಮಿತಿಯನ್ನು ನಿರ್ದೇಶಿಸಲಾಗಿದ್ದರೂ ಎಲ್ಲಾ ವಯಸ್ಸಿನವರು ಕೈಪಿಡಿಯಲ್ಲಿ ತಿಳಿಸಿರುವ ಚಟುವಟಿಕೆಗಳನ್ನು ಸುಲಭವಾಗಿ ಅಳವಡಿಸಿಕೊಳ್ಳ
ಬಹುದಾಗಿದೆ. ಅದರಲ್ಲೂ ಪಕ್ಷಿ ವೀಕ್ಷಣೆಯಲ್ಲಿ ಗಮನಿಸಬೇಕಾದ ಶಿಷ್ಟಾಚಾರ ತಿಳಿಸಿರುವುದು ಬಹುಮುಖ್ಯ. ಕೈಪಿಡಿಯ ತಿಳಿ ನೀಲಿಬಣ್ಣದ ರೇಖಾ ಚಿತ್ರಗಳು ಪಠ್ಯದಷ್ಟೇ ಆಕರ್ಷಕವಾಗಿವೆ.

ಐರಿಷ್‌ ಲೇಖಕ ರಾಬರ್ಟ್‌ ಲಿಂಡ್ ಹೇಳುವ ಹಾಗೆ ‘ಹಕ್ಕಿಗಳನ್ನು ನೋಡಲು ಮೌನದ ಭಾಗವಾಗಬೇಕು’, ಅದು ನಿಜವಷ್ಟೆ. ಕೈಪಿಡಿ ಕೊನೆಯವರೆಗೂ ಪ್ರಸಿದ್ಧ ವ್ಯಕ್ತಿಗಳ ಅಭಿಪ್ರಾಯಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿರುವುದು ಓದುವಾಗ ಮನಸ್ಸಿನ ಮೇಲೆ ಛಾಪು ಬಿಡದೆ ಇರದು.

ಕೊರೊನಾ ಬಂದು ಇಡೀ ಪ್ರಪಂಚವೇ ಗೃಹಬಂಧನದಲ್ಲಿ ಇದ್ದಾಗ ಹಲವರು ಹೊಸ ಹೊಸ ಹವ್ಯಾಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಇಡೀ ಪ್ರಪಂಚದಲ್ಲಿ ತೋಟಗಾರಿಕೆಯ ನಂತರ ಜನಪ್ರಿಯ ಹವ್ಯಾಸವೆಂದರೆ ಪಕ್ಷಿವೀಕ್ಷಣೆ. ಪಕ್ಷಿವೀಕ್ಷಣೆಯು ಗೃಹಬಂಧನದಲ್ಲಿದ್ದ ಮನಸ್ಸುಗಳನ್ನು ಕುಳಿತಲ್ಲಿಂದಲೇ ಸ್ವಚ್ಛಂದವಾಗಿ ಹಾರಾಡುವಂತೆ ಮಾಡಿತ್ತು.

ವಿಶೇಷ ಚೇತನ ಮಕ್ಕಳಿಗೂ ಪರಿಸರವನ್ನು ಅರಿಯಲು ಪ್ರತ್ಯೇಕ ಪುಟಗಳನ್ನು ಮೀಸಲು ಇಡಲಾಗಿದೆ. ಪಕ್ಷಿವೀಕ್ಷಣೆಯ ಮೂಲಕ ಪರಿಸರವನ್ನು ಅನುಭವಿಸಿ, ಅರಿವನ್ನು ಹೆಚ್ಚಿಸಿಕೊಳ್ಳುವಂತೆ ಮಾಡುವಲ್ಲಿ ಈ ಕೈಪಿಡಿ ನೆರವು ನೀಡುತ್ತದೆ.

ಸದ್ಯಕ್ಕೆ ಈ ಕೈಪಿಡಿ ಇಂಗ್ಲಿಷಿನಲ್ಲಿದ್ದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಹೊರತರುವ ಯೋಜನೆಯಿದೆ ಎಂದು ಪ್ರಕಾಶಕರು ತಿಳಿಸಿದ್ದಾರೆ. ಉಚಿತವಾಗಿ ಈ ಕೈಪಿಡಿಯನ್ನು ಪಿಡಿಎಫ್ ರೂಪದಲ್ಲಿ https://www.early-bird.in/handbookನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.

ಕೃತಿ: ಹ್ಯಾಂಡ್‌ಬುಕ್‌ ಫಾರ್‌ ಬರ್ಡ್‌ ಎಜ್ಯುಕೇಟರ್ಸ್‌
ಲೇ: ಗರಿಮ್‌ ಭಾಟಿಯಾ, ಅಭಿಷೇಕಕೃಷ್ಣ ಗೋಪಾಲ್, ಸುಹೇಲ್ ಖಾದರ್
ಚಿತ್ರಗಳು: ಸೌಮಿತ್ರ ದೇಶಮುಖ್
ಪುಸ್ತಕ ವಿನ್ಯಾಸ: ಅದಿತಿ ಎಲೆಸ್ಸೆರಿ
ಪ್ರ: ನೇಚರ್ ಕನ್ಸರ್ವೇಶನ್ ಫೌಂಡೇಶನ್
ಪುಟಗಳು 142 ಬೆಲೆ: 150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT