ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೊದಲ ಓದು | ಗೊತ್ತಿಲ್ಲದ ಹಕ್ಕಿಗಳ ಗೂಡಿನೆಡೆಗೆ ಪಯಣ

Published 15 ಜೂನ್ 2024, 22:30 IST
Last Updated 15 ಜೂನ್ 2024, 22:30 IST
ಅಕ್ಷರ ಗಾತ್ರ

ನಮಗೆ ಗೊತ್ತೇ ಇಲ್ಲದ ನೂರೆಂಟು ಪಕ್ಷಿಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಅನನ್ಯ ಕೃತಿ ‘ಪಕ್ಷಿಗಳ ವಿಸ್ಮಯ ವಿಶ್ವ’. ಹವ್ಯಾಸಿ ಛಾಯಾಗ್ರಾಹಕ ಶ್ರೀಧರ ತುಮರಿ ಕೃತಿಯ ಲೇಖಕ. ಸುಂದರವಾದ ಚಿತ್ರಗಳೊಂದಿಗೆ 172 ವಿಭಿನ್ನ ಪಕ್ಷಿಗಳನ್ನು ಇಲ್ಲಿ ಅವರು ಪರಿಚಯಿಸಿದ್ದಾರೆ. ಕೃತಿಯಲ್ಲಿನ ಒಂದಷ್ಟು ಚಿತ್ರಗಳು ಕ್ಲೆಮೆಂಟ್‌ ಎಂ.ಫ್ರಾನ್ಸಿಸ್‌ ಅವರದ್ದು. ಗಮಟೇ ಹಕ್ಕಿಯ ಚಿತ್ರದೊಂದಿಗೆ ಪುಸ್ತಕ ಮುಖಪುಟವೇ ಆಕರ್ಷಣೀಯವಾಗಿದೆ. 

‘ಲೇಖಕ ತಮ್ಮ ಅನೇಕ ವರ್ಷಗಳ ಹವ್ಯಾಸವನ್ನು, ಅನುಭವವನ್ನು ಮತ್ತು ಪಕ್ಷಿಗಳ ಕುರಿತಾದ ಜ್ಞಾನ, ವಿಜ್ಞಾನಗಳನ್ನು ಈ ಪುಸ್ತಕದ ಮೂಲಕ ಸೊಗಸಾಗಿ ಹಂಚಿಕೊಂಡಿದ್ದಾರೆ. ಪಕ್ಷಿವೀಕ್ಷಕರು, ಪಕ್ಷಿಗಳ ಫೋಟೋಗ್ರಫಿ ಆಸಕ್ತರಿಗೆ ಆಕರ ಗ್ರಂಥವೆನಿಸುವುದರಲ್ಲಿ ಅನುಮಾನವಿಲ್ಲ’ ಎಂದು ಡಾ.ಶ್ರೀಕಾಂತ್‌ ಅವರು ಮುನ್ನುಡಿಯಲ್ಲಿ ಬರೆದಿದ್ದಾರೆ.

ಕರ್ನಾಟಕದಲ್ಲಿ ಕಾಣಸಿಗುವ ಎಲ್ಲ ಪಕ್ಷಿಗಳನ್ನು ಆಯಾ ಪಕ್ಷಿಗಳ ಗುರುತಿಸುವಿಕೆ, ಸ್ವರೂಪ, ಜೀವನ ಶೈಲಿ, ಕೂಗು, ವಾಸಸ್ಥಳದ ಮಾಹಿತಿ, ಆಹಾರ ಕ್ರಮ, ಗೂಡು ಕಟ್ಟುವಿಕೆ ಮೊದಲಾದ ವಿವರಗಳೊಂದಿಗೆ ‍ಪರಿಚಯಿಸುವ ಯತ್ನ ಮಾಡಿದ್ದಾರೆ. ತಲೆಯ ಮೇಲೆ ಗೆರೆ ಹೊಂದಿರುವ ‘ಗೆರೆತಲೆ ಬಾತು’, ‘ಬೂದು ಜೋಳಿಗೆಕೊಕ್ಕು’, ಮಲೆನಾಡಿನಲ್ಲಿ ದನ, ಎಮ್ಮೆಗಳ ಮೇಲೆ ಕೂರುವ ‘ಜಾನುವಾರು ಬೆಳ್ಳಕ್ಕಿ’ಯಂತಹ ಸಾಮಾನ್ಯವಾಗಿ ತಿಳಿದಿರುವ ಪಕ್ಷಿಗಳ ಕುರಿತಾಗಿನ ಗೊತ್ತಿಲ್ಲದ ಒಂದಷ್ಟು ವಿವರಗಳು ಕೃತಿಯಲ್ಲಿದೆ.

‘ಸಾಮಾನ್ಯ ಡೇಗೆ’, ‘ಎರೆಲಡ್ಡು’, ‘ಮೀನು ಗೂಬೆ’, ‘ಗಾಂಧೀ ಹಕ್ಕಿ’, ‘ಚಂದ್ರಮುಕುಟ’, ‘ತಂತಿಬಾಲದ ಕವಲುತೋಕೆ’ಯಂತಹ ಅಪರೂಪದ ಪಕ್ಷಿಗಳ ಪರಿಚಯವೂ ಕೃತಿಯಲ್ಲಿ ಕಾಣುತ್ತದೆ. ಈ ಪಕ್ಷಿಗಳು ಹೆಚ್ಚಾಗಿ ಎಲ್ಲಿ, ಯಾವಾಗ ಕಂಡುಬರುತ್ತವೆ ಎಂಬ ಮಾಹಿತಿಯೂ ಸಿಗುತ್ತದೆ. ಪ್ರತಿ ಪಕ್ಷಿಗಳ ಸುಂದರ ಚಿತ್ರಗಳು ಗಮನ ಸೆಳೆಯುತ್ತದೆ. ಪರಿಚಯದ ಭಾಷೆ ಸರಳವಾಗಿದೆ. ಮಾಹಿತಿಯೂ ಸಂಕ್ಷಿಪ್ತವಾಗಿದೆ. ವೈಜ್ಞಾನಿಕ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ನೀಡಿರುವುದು ಈ ಪಕ್ಷಿಗಳ ಕುರಿತು ಇನ್ನಷ್ಟು ಮಾಹಿತಿ ಹುಡುಕಾಟವನ್ನು ಸುಲಭವಾಗಿಸಿದೆ. 

book
book

ಪಕ್ಷಿಗಳ ವಿಸ್ಮಯ ವಿಶ್ವ

ಲೇ: ಶ್ರೀಧರ ತುಮರಿ

ಪ್ರ: ನವಕರ್ನಾಟಕ

ಸಂ:08022161900

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT