ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Book Review| ಅಸಾಮಾನ್ಯ ಮಹಿಳೆಯರ ಅನನ್ಯ ಕಥನ

Published : 10 ಡಿಸೆಂಬರ್ 2022, 19:31 IST
ಫಾಲೋ ಮಾಡಿ
Comments

ಹಿರಿಯ ಪತ್ರಕರ್ತ- ಲೇಖಕ ಜಗದೀಶ್‌ ಕೊಪ್ಪ ಅವರ ‘ಪದಗಳಿವೆ ಎದೆಯೊಳಗೆ’ ಒಂದು ಅಪರೂಪದ ಸಂಶೋಧನಾ ಕೃತಿ. ಅಧ್ಯಯನಕ್ಕೆ ಆಯ್ಕೆ ಮಾಡಿದ ವಸ್ತು-ವಿಷಯ ಹಾಗೂ ಅದನ್ನು ಗ್ರಹಿಸಿರುವ ರೀತಿ ಅನನ್ಯ. ದೇವರ ಹೆಸರಿನಲ್ಲಿ ’ದಾಸಿ’ಯರಾದ ತಳಸಮುದಾಯದ ಹೆಂಗಳೆಯರು ಸಾಮಾಜಿಕ ಕ್ಷೇತ್ರವೂ ಸೇರಿದಂತೆ ಸಂಗೀತ-ನೃತ್ಯಗಳನ್ನೊಳಗೊಂಡ ಸಾಂಸ್ಕೃತಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಸಾಧಾರಣ. ಇಲ್ಲಿನ ಅಧ್ಯಯನವು ಉಪಶೀರ್ಷಿಕೆಯೇ ಸೂಚಿಸುವಂತೆ ‘ಸಾಂಸ್ಕೃತಿಕ ಪಲ್ಲಟಗಳ ಕಥನ’.

ಭಾರತವೂ ಸೇರಿದಂತೆ ವಿಶ್ವದ ಹಲವು ಸಂಸ್ಕೃತಿಗಳಲ್ಲಿ ದೇವರಿಗೆ ದಾಸಿಯರನ್ನಾಗಿ ಮಾಡುವ ಪದ್ಧತಿಯು ಹುಟ್ಟಿದ ಹಾಗೂ ಬೆಳೆದು ಬಂದ ಬಗೆಯನ್ನು ಲೇಖಕರು ವಿವರಿಸುತ್ತಾರೆ. ಚಾರಿತ್ರಿಕ ಘಟ್ಟ ಹಾಗೂ ಸಾಂಸ್ಕೃತಿಕ ಪಲ್ಲಟಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ.

‘ದೇವರ ಮಕ್ಕಳ ನೆಲೆ ಅರಸುತ್ತಾ’ ಎಂಬ ಮೊದಲ ಅಧ್ಯಾಯದಲ್ಲಿ ಕೊಪ್ಪ ಅವರು ದೇಗುಲ ಸಂಸ್ಕೃತಿ ಹಾಗೂ ಕಲಾ ಪ್ರಕಾರಗಳಾದ ನೃತ್ಯ, ಸಂಗೀತ, ನಾಟ್ಯಶಿಲ್ಪಗಳಲ್ಲಿ ಬೆರೆತುಹೋಗಿರುವ ‘ಅಸಾಮಾನ್ಯ’ ಮಹಿಳೆಯರನ್ನು ಮರೆತು ಕೀಳಾಗಿ ಕಾಣುವ ಏಕಮುಖದ ಚರಿತ್ರೆಯ ಚೌಕಟ್ಟಿನಲ್ಲಿ ಬಂಧಿಸಿಡಲಾಗಿದೆ ಎಂದು ವಿಷಾದಿಸುತ್ತಾರೆ. ಹಿನ್ನೆಲೆ-ಉಗಮ-ಅದರ ಸ್ವರೂಪದ ತಾತ್ವಿಕತೆಯ ಕಟ್ಟಿಕೊಡುವ ಮೂಲಕ ವಿಷಯಕ್ಕೆ ಉತ್ತಮ ಪ್ರವೇಶವನ್ನೂ ಒದಗಿಸಿದ್ದಾರೆ.

ಹದಿನೈದು ಅಧ್ಯಾಯಗಳಲ್ಲಿ ಹರಡಿಕೊಂಡಿರುವ ಈ ‘ಬೃಹತ್‌’ ಗ್ರಂಥದ ವಿಷಯ-ಮಾಹಿತಿ ಸಂಗ್ರಹಕ್ಕಾಗಿ ಲೇಖಕರು ಪಟ್ಟ ಶ್ರಮ ಪ್ರತೀ ಪುಟದಲ್ಲಿಯೂ ಎದ್ದು ಕಾಣುತ್ತದೆ. ಪ್ರತಿಯೊಂದು ಸಂಗತಿಯನ್ನೂ ಆಧಾರ ನೀಡಿಯೇ ವಿವರಿಸುತ್ತಾರೆ. ಆಧಾರರಹಿತ-ತರ್ಕರಹಿತ ವಿವರ ಯಾವುದೂ ಈ ಗ್ರಂಥದಲ್ಲಿಲ್ಲ. ಸಂಶೋಧನಾ ಕೃತಿಯಲ್ಲಿ ‘ಆಧಾರ’ದ ವಿವರ ಇರಬೇಕಾದದ್ದು ಸಹಜ ಹಾಗೂ ಅಪೇಕ್ಷಣೀಯ. ಓದಿಗೆ ಕಿರಿಕಿರಿಯುಂಟು ಮಾಡುವ ಅಡಿಟಿಪ್ಪಣಿಗೆ ಬದಲಾಗಿ ಕೊಪ್ಪ ಅವರು ಈ ಪುಸ್ತಕದಲ್ಲಿ ಪಠ್ಯದ ಸಾಲುಗಳ ಮಧ್ಯದಲ್ಲಿಯೇ ಆಕರದ ವಿವರವನ್ನೂ ನೀಡುತ್ತಾ ಹೋಗುತ್ತಾರೆ. ಇದುವರೆಗೆ ನಡೆದ ಅಧ್ಯಯನ-ಹುಡುಕಾಟಗಳನ್ನು ಗಮನಿಸಿ- ಅಧ್ಯಯನ ನಡೆಸಿ ಅವುಗಳ ಆಧಾರದ ಮೇಲೆ ಕಟ್ಟಲಾದ ಸ್ವಂತ ಕೃತಿಯಿದು. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯ ಹಲವು ಮೂಲ ಆಧಾರಗಳ ಪಟ್ಟಿಯೇ ಅಧ್ಯಯನದ ಗಾಂಭೀರ್ಯವನ್ನು ಸೂಚಿಸುತ್ತದೆ. ಈ ಪುಸ್ತಕದಲ್ಲಿ ನೀಡಲಾಗಿರುವ ಚಿತ್ರಗಳು ಕೂಡ ಲೇಖಕರ ವಿಷಯದ ಬಗೆಗಿನ ಆಸಕ್ತಿ-ಕಾಳಜಿಗಳಿಗೆ ಹಿಡಿದ ಕನ್ನಡಿಯಂತಿವೆ.

ಕಲೆ-ಸಾಂಸ್ಕೃತಿಕ-ಸಾಮಾಜಿಕ ಕ್ಷೇತ್ರಕ್ಕೆ ಈ ಮಹಿಳೆಯರು ನೀಡಿರುವ ಅಗಾಧ ಕೊಡುಗೆಯನ್ನು ಬೆರಗಾಗಿ ನೋಡುವ- ದಾಖಲಿಸುವ ಕೊಪ್ಪ ಅವರು ಅಲ್ಲಿಯೇ ಕಳೆದುಹೋಗುವುದಿಲ್ಲ. ಸಂಶೋಧಕನಿಗೆ ಈ ಬಗೆಯ ಆರಾಧನಾ ಭಾವವು ಬಹುತೇಕ ಸಂದರ್ಭದಲ್ಲಿ ಅಡ್ಡಿಯಾಗುವುದೇ ಹೆಚ್ಚು. ಕೊಪ್ಪ ಅವರು ಈ ‘ಮಿತಿ’ಯನ್ನು ಮೀರಿದ್ದಾರೆ. ಅವರಿಗೆ ತಾವು ಕೈಗೊಂಡ ವಸ್ತುವಿನ ಬಗ್ಗೆ ಪ್ರೀತಿ-ಗೌರವ ಇದೆ. ಹಾಗೆಯೇ ಅದು ರೂಪುಗೊಂಡ ನಂತರ ಬೆಳೆದ ಸ್ವರೂಪದ ಬಗ್ಗೆ ಕಟುವಾದ ಅಭಿಪ್ರಾಯವೂ ಇದೆ.

ಇದೊಂದು ದೇವದಾಸಿ ಸಾಂಸ್ಕೃತಿಕ ಮಹತ್ವ ಸಾರುವ ಆಕರ ಗ್ರಂಥವಾಗುವಂತೆ ಅವರು ನೋಡಿಕೊಂಡಿದ್ದಾರೆ. ಆದರೆ, ಈ ಪುಸ್ತಕ ನಮಗೆ ಪ್ರಿಯವಾಗುವುದು ಅದು ಮಾಹಿತಿಗಳ ಕಣಜ ಆಗಿರುವ ಕಾರಣಕ್ಕೆ ಮಾತ್ರವಲ್ಲದೇ, ಕಟ್ಟಿಕೊಡುವ ನೋಟಕ್ರಮಕ್ಕಾಗಿ ಹಾಗೂ ತಳೆಯುವ ನಿಲುವು-ಅಭಿಪ್ರಾಯಕ್ಕಾಗಿ. ವಿವೇಕ-ವಿವೇಚನೆಗಳು ಪುಸ್ತಕದುದ್ದಕ್ಕೂ ಕೊಪ್ಪ ಅವರ ಕೈ ಹಿಡಿದಿವೆ.

ವಿಶೇಷ ಮಹಿಳೆಯರಿಗೆ ಇತಿಹಾಸದ ಪುಟಗಳಲ್ಲಿ ಆದ ಅನ್ಯಾಯದ ಬಗ್ಗೆ ದಾಖಲಿಸುತ್ತಲೇ ಅವರ ಔದಾರ್‍ಯ-ಔನ್ನತ್ಯಗಳ ಬಗೆಗೂ ವಿವರಿಸಲಾಗಿದೆ. ದೇಹದೊಂದಿಗೆ ಇರುವ ಹಾಗೂ ಸಮಾಜವು ಬೆಳೆಸುವ ‘ಪುರುಷತ್ವದ ಅಹಂಕಾರ’ದ ಎಳೆಯೂ ಇಲ್ಲದೆ, ಜೀವಪರ-ಜನಪರ ಆಲೋಚನಾ ಕ್ರಮವು ರೂಪಿಸಿದ ಚಿಂತನೆಯ ಕ್ರಮವು ಮುಂಚೂಣಿಗೆ ಬಂದದ್ದು ಈ ಪುಸ್ತಕದ ಮಹತ್ವದ ಅಂಶ. ಕೊಪ್ಪ ಅವರಿಗೆ ಈ ಅಧ್ಯಯನ ವಸ್ತುವು ‘ವಿಷಯ’ ಮಾತ್ರವಲ್ಲ. ಅದರೊಳಗೇ ಸೇರಿಕೊಂಡು- ಅರಿತು ನಡೆಸುವ ಹುಡುಕಾಟ.

‘ದಿವ್ಯಸ್ತ್ರೀಯರ ದುರಂತ’ ಎನ್ನುವ ಶೀರ್ಷಿಕೆಯಲ್ಲಿ ಅಗ್ರಹಾರ ಕೃಷ್ಣಮೂರ್ತಿ ಅವರು ಬರೆದ ಮುನ್ನುಡಿಯು ಪುಸ್ತಕದ ಓದಿಗೆ ಒಳ್ಳೆಯ ಪ್ರವೇಶಿಕೆಯಾಗಿದೆ. ಅಧ್ಯಯನ ರೂಪುಗೊಂಡ ಬಗೆ ಹಾಗೂ ಅದರ ಮಹತ್ವವನ್ನು ಲೇಖಕರು ಮೊದಲ ಮಾತಿನಲ್ಲಿ ವಿವರಿಸಿದ್ದಾರೆ.

ಅಗಾಧ ಅಧ್ಯಯನದ ಮೂಲಕ ಆರಿಸಿ ತಂದ ಮಾಹಿತಿ ಹಾಗೂ ವಿವರಗಳನ್ನು ನಿಭಾಯಿಸಲು ಲೇಖಕರು ಹೆಣಗಾಡಿದ್ದಾರೆ. ಇಡಿಕಿರಿದ ವಿವರಗಳಲ್ಲಿ ಯಾವುದನ್ನು ಕೈಬಿಡಲೂ ಅವರಿಗೆ ಮನಸ್ಸಿಲ್ಲ. ಆದ್ದರಿಂದ ಬರವಣಿಗೆಯ ಶೈಲಿ ಶಿಥಿಲವಾಗಿದೆ. ಹಲವೆಡೆ ಪುನರುಕ್ತಿಯೂ ಆಗುತ್ತದೆ. ಆದರೆ, ಅವು ಆಭಾಸವುಂಟು ಮಾಡುವ ಹಾಗಿಲ್ಲ ಎನ್ನುವ ಅಂಶವೂ ಗಮನಾರ್ಹ.

ಪದಗಳಿವೆ ಎದೆಯೊಳಗೆ
ದೇವದಾಸಿಯರ ಸಾಂಸ್ಕೃತಿಕ ಪಲ್ಲಟಗಳ ಕಥನ
ಎನ್. ಜಗದೀಶ್ ಕೊಪ್ಪ
ಪುಟ: 352; ಬೆಲೆ: ರೂ 390
ನವಕರ್ನಾಟಕ ಪ್ರಕಾಶನ, ಎಂಬೆಸಿ ಸೆಂಟರ್‌, ಕ್ರೆಸೆಂಟ್‌ ರಸ್ತೆ, ಬೆಂಗಳೂರು-೧

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT