ನಾಲ್ಕು ಸಾಲುಗಳ ಮಕ್ಕಳ ಕವಿತೆಗಳು ಗಮನ ಸೆಳೆಯುವಂತಿವೆ. ಒಂದನೆಯ ತರಗತಿಯಿಂದಲೇ ಸರಳ ಕನ್ನಡ ಕಲಿಯುವ ಯಾವ ಮಗುವಾದರೂ ಓದುವಂತಿವೆ. ಸ್ವಜಾತಿ ಒತ್ತಾಕ್ಷರದ ಪದಗಳನ್ನು ಹೊರತು ಪಡಿಸಿದರೆ ಒತ್ತಾಕ್ಷರಗಳಿಲ್ಲದ, ಓದಲು ಸರಳವೆನಿಸುವ, ತಿಳಿಯಲು ಸುಲಭವೆನಿಸುವ ಕವಿತೆಗಳು ಈ ಸಂಕಲನದಲ್ಲಿವೆ.
ಕೆಲ ಸಾಲುಗಳಲ್ಲಿನ ಆದಿಪ್ರಾಸ, ಕೆಲವು ಕವಿತೆಗಳಲ್ಲಿನ ಅಂತ್ಯಪ್ರಾಸಗಳು ಗಮನಸೆಳೆಯುವುದಲ್ಲದೆ ಪದಗಳ ಲಾಲಿತ್ಯ ಮಕ್ಕಳಿಗೆ ಬಾಯಿಪಾಠವಾಗುವಂತೆ ಸರಳವಾಗಿವೆ.
ಸಮೂಹಗಾನಗಳಿಗೆ ಸರಳವಾಗುವಂಥ ಅನೇಕ ರಚನೆಗಳು ಈ ಪುಸ್ತಕದಲ್ಲಿ ಸಿಗುತ್ತವೆ. ರಾಗ ಸಂಯೋಜನೆ ಮಾಡಿಸಿ, ಮಕ್ಕಳಿಂದಲೇ ಹಾಡಿಸುವಂಥ ಹಲವಾರು ಸರಳ ರಚನೆಗಳು ಈ ಸಂಕಲನದಲ್ಲಿವೆ. ಸೋನೆ ಬಂತು ನಾಡಿಗೆ, ನವ ಪಲ್ಲವ ಹಾಡಿಗೆ ಎಂಬಂಥ ಸರಳ ರಚನೆಗಳು ಮಕ್ಕಳಿಗೆ ಬಲುಬೇಗ ಬಾಯಿಪಾಠವಾಗುತ್ತದೆ.
ಮನೆಯಲ್ಲಿ ಕನ್ನಡವನ್ನು ಕಲಿಯುವ ಮಕ್ಕಳಿದ್ದರೆ, ಎರಡನೆಯ ಮತ್ತು ಮೂರನೆಯ ಭಾಷೆಯಾಗಿ ಕಲಿಯುವ ಮಕ್ಕಳಿಗೆ ಈ ಕವಿತೆಗಳು ಹೊಸ ಹೊಸ ಪದಗಳನ್ನು ಸರಳವಾಗಿ ಕಲಿಸಿಕೊಡುತ್ತವೆ. ಕನ್ನಡದ ಓದು ಸರಾಗ ಎಂಬ ಭರವಸೆಯನ್ನು ಮೂಡಿಸುತ್ತವೆ.