ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಭಿನ್ನ ರಾಗ ತಂತಿಯ ಕೃತಿ– ‘ಜೋನ್ಪುರಿ ಖಯಾಲ್

Published 7 ಅಕ್ಟೋಬರ್ 2023, 23:16 IST
Last Updated 7 ಅಕ್ಟೋಬರ್ 2023, 23:16 IST
ಅಕ್ಷರ ಗಾತ್ರ

ಎಂದೋ ಬರೆದು ಮುಗಿಸಿದ ಬದುಕಿನ ಪುಟಗಳನ್ನು ಮತ್ತೆ ತಿರುವಿಹಾಕಿದರೆ, ನಮ್ಮೊಳಗಿನ ಅಸಂಖ್ಯಾತ ಭಾವ–ಬುದ್ಧಿ ಒಂದೊಂದಾಗಿ ಬಿಚ್ಚಿಕೊಳ್ಳುತ್ತವೆ. ಮುಗ್ಧ ಕೀಟಲೆಯಿಂದ ಹಿಡಿದು, ಯೌವನದ ಹಸಿ ಬಿಸಿ ಪ್ರೇಮದವರೆಗೂ, ನಂತರದ ಮುಪ್ಪಿನ ಬದುಕಿಗೆ ಹಾತೊರೆಯುವ ನಿತ್ರಾಣ ಜೀವಿಗಳಂತೆ ಬದುಕ ಕಳೆದದ್ದು ಆತ್ಮಕಥೆಯನ್ನು ಬರೆಯಹೊರಟ ಪ್ರತಿಯೊಬ್ಬರಿಗೂ ಆಗುವ ಅನುಭವವೇ ಹೌದಾಗಿರಬೇಕು.

ಕನ್ನಡದಲ್ಲಿ ಸಾಕಷ್ಟು ಆತ್ಮಕಥೆಗಳು ಬಂದಿವೆ. ಆದರೆ, ಲಿಂಗಾಧಾರಿತ ಆತ್ಮಕಥೆಗಳನ್ನು ನೋಡಿದರೆ ಗಂಡಸರದೇ ಮೈಲುಗೈ. ಹೆಂಗಸರದ್ದು ಬರತೊಡಗಿದ್ದರೂ ಅದನ್ನು ಮುಖ್ಯವೆಂದು ಪರಿಗಣಿಸಿದ್ದು ತೀರಾ ಕಡಿಮೆ. ಕಳೆದ ಒಂದು ದಶಕದಿಂದಲೂ ಟ್ರಾನ್ಸ್ ಸಮುದಾಯದ ಆತ್ಮಕಥೆಗಳು ಬೆಳಕಿಗೆ ಬರುತ್ತಿವೆ. ಬಹುತೇಕವು ಗಂಡಿನಿಂದ ಹೆಣ್ಣಾದವರ ಬದುಕಿನ ಪುಟಗಳಾದರೆ, ಹೆಣ್ಣಿಂದ ಗಂಡಾದ ರೂಮಿ ಹರೀಶ್ ಅವರ ‘ಜೋನ್ಪುರಿ ಖಯಾಲ್’ ಮತ್ತೊಂದು ಬಗೆಯ ಆತ್ಮಕಥಾಸಂವೇದನೆ. ಇರುವುದರಲ್ಲಿಯೇ ತೃಪ್ತಿ ಇರದೇಹೋದರೆ ಹೊಸತರೆಡೆಗೆ ತುಡಿಯುವುದು ಮನುಷ್ಯ ಸಹಜವಾದ ಸಂಚಲನವೆಂದೇ ಹೇಳಬೇಕಾಗುತ್ತದೆ. ಅಂತಹ ಸಂಚಾರಿ ಭಾವವೇ ‘ಜೋನ್ಪುರಿ ಖಯಾಲ್’.

ಸುಮತಿಯಿಂದ ರೂಮಿ ಹರೀಶ್ ಆಗುವುದು ದೊಡ್ಡ ಸ್ಥಾನಪಲ್ಲಟ. ತನ್ನೊಳಗಿನ ಮತ್ತು ತನ್ನವರೊಡಗಿನ ನಿರಂತರ ಹೋರಾಟದ ಫಲಶ್ರುತಿಯೂ ಹೌದು. ಈ ಆತ್ಮಕತೆಗೆ ಹಲವು ಆಯಾಮದ ಗ್ರಹಿಕೆಗಳಿವೆ. ಇದು ಏಕಕಾಲಕ್ಕೆ ರೂಮಿ ಜೊತೆಯಲ್ಲಿ ಹಲವರ ಆತ್ಮಕತೆಯ ಭಾಗವೂ ಆಗಿ ಮೂಡಿಬಂದಿದೆ. ಬಹಳ ಮುಖ್ಯವಾಗಿ ರೂಮಿಯವರ ತಾಯಿ, ಶಿಲ್ಪ ಕಲಾವಿದೆ ಕನಕ ಮೂರ್ತಿಯವರ ಬದುಕಿನ ಪುಟಗಳು ಕೂಡ ಇಲ್ಲಿ ಸಿಗುತ್ತವೆ. ರೂಮಿ ಬಾಲ್ಯದಿಂದಲೇ ತಾಯಿಯನ್ನು ಅನುಸರಿಸುತ್ತಾ, ‘ನಾನು ಮಿನಿ ಕನಕ ಮೂರ್ತಿ ಅಂತ ಅನಿಸುತ್ತೆ’ ಎನ್ನುವಾಗ ತಾಯಿಯಂತೆ ‘ಗಟ್ಟಿಗ’ನಾಗಬೇಕು ಎನ್ನುವ ಮನಃಸ್ಥಿತಿ ಆಗಲೇ ಇದ್ದುದು ವೇದ್ಯವಾಗುತ್ತದೆ. ಕನಕ ಮೂರ್ತಿ ಅವರೊಳಗೂ ಒಬ್ಬ ಟ್ರಾನ್ಸ್‌ಮ್ಯಾನ್ ಇರಬೇಕು ಎನ್ನುವ ಅರಿವು ಮೂಡಿದ ಕ್ಷಣದಿಂದ ಸುಮತಿಯಿಂದ ರೂಮಿಯತ್ತ ಹೆಜ್ಜೆ ಹಾಕಿರಬಹುದು ಎಂದೆನ್ನಿಸುತ್ತದೆ.

ಹೆಣ್ಣಿಂದ ಗಂಡಾಗುವ ದೇಹದ ಪುನರ್ ರಚನೆಯಿಂದ ಹಿಡಿದು ಬದುಕಿನ ನ್ಯಾಯಯುತ ಹಕ್ಕಿಗಾಗಿ ನಡೆಸುವ ಹೋರಾಟವು ಸರಳ ರೇಖೆ ಚಲನೆಯಂತೆ ಇರಲಾಗದು. ಸಣ್ಣ ವಯಸ್ಸಿನಿಂದಲೇ ಸಂಗೀತ ಕಲಿತ ಸುಮತಿ ಬಹು ಮುಖ್ಯ ಹಾಡುಗಾರರಾಗಿ ಅನೇಕ ಕಡೆ ಕಾರ್ಯಕ್ರಮ ನೀಡಿ ಕೀರ್ತಿಗಳಿಸಿಕೊಂಡವರು. ರೂಮಿಯಾಗಿ ಬದಲಾಗಿ, ದೈಹಿಕ ಚಿಕಿತ್ಸೆಯ ನಂತರ ಹಾರ್ಮೋನ್‌ಗಳ ಬದಲಾವಣೆ ಆಯಿತು. ಹಾಡುವುದನ್ನು ನಿಲ್ಲಿಸಿ ಚಿತ್ರಕಾರನಾಗಿ, ಕವಿಯಾಗಿ, ರಂಗಕರ್ಮಿಯಾಗಿ ಬದಲಾಗಲು ತುಡಿಯುವುದೇ ಸೃಜನಶೀಲ ಮನಸ್ಸಿನ ಅನಂತ ಸಾಧ್ಯತೆಗೆ ಸಾಕ್ಷಿ.

ರೂಮಿಯ ಬಾಲ್ಯದಲ್ಲಿ ಆಗಿಹೋದ ಲೈಂಗಿಕ ಶೋಷಣೆ, ಸ್ವಲಿಂಗ ಪ್ರೇಮ ಮತ್ತು ತನ್ನ ಹೆಣ್ತತನದ ನಿರಾಕರಣೆಯೊಂದಿಗೆ ಪ್ರೀತಿಗಾಗಿ ಹಂಬಲಿಸುವ, ಸದಾ ಪ್ರೀತಿಸುತ್ತಲೇ ಇರುವ ಉತ್ಕೃಷ್ಟ ಪ್ರೇಮಿಯ ಮತ್ತೊಂದು ಮುಖವೂ ಈ ಆತ್ಮಕತೆಗಿದೆ. ‘ಲೈಂಗಿಕ ಹಿಂಸೆಯಿಂದ ಆಗುವ ಗಾಯ ಸಾವಿನಂತೆ ಕೇವಲ ದೇಹಕ್ಕಷ್ಟೇ ಆಗುವ ಗಾಯವಾಗಿರುವುದಿಲ್ಲ’ ಎನ್ನುವ ರೂಮಿ, ‘ಅತ್ಯಾಚಾರದಂತಹ ಹೀನ ಕೃತ್ಯದಿಂದಾಗಿ ಅದೆಷ್ಟು ಜನರ ಬದುಕು ಛಿದ್ರವಾಗಿದೆ’ ಎಂದು ಪರಿತಪಿಸುತ್ತಾರೆ.

ಟ್ರಾನ್ಸ್‌ಮ್ಯಾನ್ ಆಗಿ ತನ್ನ ಸಂಗಾತಿ ಸುನಿಲ್‌ ಅವರೊಂದಿಗೆ ಎಲ್ಲಾ ಹೋರಾಟಗಳ ಒಡನಾಡಿಯಾಗಿರುವ ರೂಮಿಯ ಬದುಕಿನ ಪುಟಗಳು, ಕನ್ನಡ ಸಾಹಿತ್ಯ ಪರಂಪರೆಗೆ ತೀರಾ ಹೊಸತು. ಈ ಆತ್ಮಕಥೆಯನ್ನು ಪ್ರಾಮಾಣಿಕವಾಗಿ ದಾದಾಪೀರ್ ಜೈಮನ್ ನಿರೂಪಣೆ ಮಾಡಿರುವುದು ಶ್ಲಾಘನೀಯ. ಭಾವಗಳ ತಿರುವುಗಳಂತೆ ಬದುಕಿನ ತಿರುವುಗಳೂ ಪುಟದಿಂದ ಪುಟಕ್ಕೆ ನೆಗೆಯುವುದು ಓದುಗರಲ್ಲಿ ಸ್ವಲ್ಪ ಗೊಂದಲವನ್ನು ಸೃಷ್ಟಿಸುವುದು ಬಿಟ್ಟರೆ, ಇದೊಂದು ವಿಶಿಷ್ಟ ಪ್ರಯೋಗಶೀಲ ಆತ್ಮಕಥನವೇ ಹೌದು. 

ಜೋನ್ಪುರಿ ಖಯಾಲ್–ರೂಮಿ ಹರೀಶ್ ಬದುಕಿನ ಪುಟಗಳು

ಸಂಯೋಜನೆ–ನಿರೂಪಣೆ: ದಾದಾಪೀರ್ ಜೈಮನ್

ಪ್ರ: ಅಹರ್ನಿಶಿ ಪ್ರಕಾಶನ

ಸಂ: 9449174662

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT