ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಸ್.ವೆಂಕಟಲಕ್ಷ್ಮಿ ನೆನಪು ಮತ್ತು ಪುಸ್ತಕ ಬಿಡುಗಡೆ

B.S.Venkatalakshmi and book release
Last Updated 17 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಬಿ.ಎಸ್.ವೆಂಕಟಲಕ್ಷ್ಮಿ ಅವರದು ವಿಶಿಷ್ಟವೂ ವರ್ಚಸ್ವಿಯೂ ಆದ ದನಿ. ಸಾಹಿತ್ಯ, ಚಿತ್ರಕಲೆ, ರಂಗಭೂಮಿ, ಸಂಗೀತ, ಸಿನಿಮಾ, ಮಾನವಿಕ ಹೀಗೆ ಎಲ್ಲದರಲ್ಲೂ ಕ್ರಿಯಾಶೀಲ ಕೌತುಕವನ್ನು ಹೊಂದಿದ್ದ ಗಟ್ಟಿಗಿತ್ತಿ ಅವರು. ಬೇರು ಮತ್ತು ಕೊಂಬೆಗಳನ್ನು ಪರಿಪೂರಕವಾಗಿ ಚಾಚುತ್ತಾ, ನಿಂತಲ್ಲೇ ಕರ್ಬಗ್ರಹಣ ನಡೆಸಿ ಆವರಣಕ್ಕೆ ಪ್ರಾಣವಾಯುವನ್ನು ಊದುವ ಮರದಂತೆ ಇವರ ಚಿಂತನೆ. ಬರವಣಿಗೆ, ವ್ಯಕ್ತಿತ್ವ, ಮುಕ್ತನಿಲುವು ಮತ್ತು ಮುಲಾಜಿಲ್ಲದ ನಿಲುವಿನ ಇವರ ಬರವಣಿಗೆಯನ್ನು ಓದದ ಕನ್ನಡದ ಓದು ಊನ. ನಾಡಿನ ವಿವಿಧ ನಲವತ್ತು ಪ್ರತಿಭಾಶೀಲ ವ್ಯಕ್ತಿಗಳನ್ನು ಅವರವರ ಬಾಳ ಸಂಗಾತಿಯ ಸಂವೇದನೆಯಿಂದ ಗ್ರಹಿಸಿ ಕೆಲವೇ ತೀವ್ರ ರೇಖೆಗಳಲ್ಲಿ ಮೂಡಿಸುವ ನುಡಿನೋಟಗಳ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಪುಸ್ತಕ ಅದ್ವಿತೀಯವಾದದ್ದು. ಸಾಧಕರ ಸತ್ವಪರೀಕ್ಷೆಗಳಲ್ಲಿ, ಚಡಪಡಿಕೆಗಳಲ್ಲಿ ತಪಸ್ಸಿನಂತೆ ಪಾಲ್ಗೊಂಡ ಸಹಧರ್ಮಿಣಿಯರ ಕರುಳಿನ ಸೊಲ್ಲುಗಳು ಇಲ್ಲಿವೆ.

ಮಹಾನುಭಾವರ ಮಹಿಮಾಸ್ತುತಿಗೆ ಹೋಗದೆ, ಅವರನ್ನು ನೇಪಥ್ಯದಲ್ಲಿದ್ದುಕೊಂಡೇ ರೂಪಿಸಿದ ಹಣ್ಣಾದ ಮಹಿಳೆಯರ ಕಣ್ಣಿಂದ ಅವರನ್ನು ಗ್ರಹಿಸುವ ಕೆಲಸವನ್ನು ವೆಂಕಟಲಕ್ಷ್ಮಿ ಪೂರ್ವಗ್ರಹಿಕೆಯಿಲ್ಲದೆ, ಸಿಲೆಬಸ್ ಇಲ್ಲದೆ ಮಾಡಿದ್ದಾರೆ. ವಾತ್ಸಲ್ಯದಲ್ಲಿ ಅಪಾರ ಘನತೆಯಲ್ಲಿ ನಡೆದ ಸಂವಾದಗಳು ಇವು. ಪ್ರತಿ ಪ್ರಬಂಧದಲ್ಲೂ ವೆಂಕಟಲಕ್ಷ್ಮಿ ಅವ ಜಿಜ್ಞಾಸೆ, ಲವಲವಿಕೆ ಪಾರದರ್ಶಕವಾಗಿ ಹೊಮ್ಮುತ್ತದೆ. ಪ್ರತಿ ಪ್ರಬಂಧವೂ ಬದುಕಿನ ಬೆಳಕಿಗೆ ತೆರೆದ ಕಿಟಕಿಯಂತಿದೆ. ಹೀಗಾಗಿ, ನನಗೆ ರಾಮಾನುಜನ್ ಅವರ ಕವಿತೆಯ ಸಾಲು ನೆನಪಿಗೆ ಬರುತ್ತಿದೆ. ‘ಸೋಫಿಯಾ ಚರ್ಚೆಗೆ ನಲವತ್ತು ಕಿಟಕಿ. ನಲವತ್ತು ಕಿಟಕಿಯಿಂದ ನಲವತ್ತು ನೆರಳು’. ಕಾಣ್ಕೆ ಮತ್ತು ಕೌಶಲ ಎರಡರಲ್ಲೂ ಮಹತ್ವದ್ದಾಗಿರುವ ಈ ಪುಸ್ತಕದ ತುಂಬಾ ಹಬ್ಬಿರುವ ನಾನಾ ನಮೂನೆಯ ನೆರಳು ಬೆಳಕಿನ ವಿನ್ಯಾಸ ನಮ್ಮನ್ನು ವಿನೀತಗೊಳಿಸಿ, ಒರೆಗೆ ಹಚ್ಚಿ ಹೊಳೆಸಿ, ನಮ್ಮ ನಮ್ಮ ಕೆಲಸಕ್ಕೆ ಮರಳಿ ಹಚ್ಚುವಂತಿದೆ. ಇಂಥ ಮಹಾನ್ ಮಹಿಳೆಯರ ಮನಸಿನ ಸಂಪರ್ಕವನ್ನು ನಮಗೆ ಒದಗಿಸಿರುವ ವೆಂಕಟಲಕ್ಷ್ಮಿಗೆ ನಮಸ್ಕಾರ.

***

ಬಿ.ಎಸ್. ವೆಂಕಟಲಕ್ಷ್ಮಿ ನೆನಪು ಮತ್ತು ಅವರ ಕೃತಿ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಬಿಡುಗಡೆ ಕಾರ್ಯಕ್ರಮ: ಅತಿಥಿಗಳು–ಚಿರಂಜೀವಿ ಸಿಂಗ್, ಬಿ.ಎನ್.ಸುಮಿತ್ರಾ ಬಾಯಿ, ಜಯಂತ ಕಾಯ್ಕಿಣಿ, ಶ್ರೀನಿವಾಸ್ ಜಿ. ಕಪ್ಪಣ್ಣ. ಆಯೋಜನೆ– ಅಹರ್ನಿಶಿ ಪ್ರಕಾಶನ, ಸ್ಥಳ–ಜಿ.ವಿ. ಸಭಾಂಗಣ, ಜಯರಾಮ ಸೇವಾ ಮಂಡಳಿ, ಜಯನಗರ 8ನೇ ಬ್ಲಾಕ್. ಭಾನುವಾರ ಬೆಳಿಗ್ಗೆ 10

***

ಬಿ.ಎಸ್. ವೆಂಕಟಲಕ್ಷ್ಮಿ ಪರಿಚಯ

90ರ ದಶಕದಿಂದ ಈಚೆಗೆ ಮಹಿಳಾವಾದ ನಿರ್ದಿಷ್ಟ ಆವರಣವಾಗಿ ರೂಪುಗೊಳ್ಳುವ ಮುನ್ನವೇ 80ರ ದಶಕದಲ್ಲಿ ತೀವ್ರವಾಗಿ ಚಿಂತಿಸಿದವರು ಬಿ.ಎಸ್. ವೆಂಕಟಲಕ್ಷ್ಮಿ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅಧಿಕಾರಿಯಾಗಿ ಎರಡು ದಶಕಕ್ಕೂ ಹೆಚ್ಚು ಕಾಲ ಕೆಲಸ ಮಾಡಿದ ಅವರು ಇಚ್ಛಾ ನಿವೃತ್ತಿ ಪಡೆದು, ‘ಚರ್ಚೆಗೊಂಡು ಚಾವಡಿ’ ಎಂಬ ಕಿರು ಮಾಸ ಪತ್ರಿಕೆಯನ್ನು ಹತ್ತು ವರ್ಷ ಕಾಲ ನಡೆಸಿದರು.

ಹಲವು ಪತ್ರಿಕೆಗಳಲ್ಲಿ ಅವರ ಬರಹಗಳು ಪ್ರಕಟಗೊಂಡಿವೆ. ‘ಮಯೂರ’ ಮಾಸಪತ್ರಿಕೆಯಲ್ಲಿ ಅವರು ಬರೆಯುತ್ತಿದ್ದ ‘ಪತ್ನಿಯರು ಕಂಡಂತೆ ಪ್ರಸಿದ್ಧರು’ ಲೇಖನ ಸರಣಿ ಜನಮನ್ನಣೆ ಪಡೆದಿತ್ತು. ಸಾಹಿತ್ಯ, ಸಂಗೀತ, ಚಿತ್ರಕಲೆಯಲ್ಲಿ ಅಭಿರುಚಿ ಹೊಂದಿದ್ದ ಅವರು 2009ರಲ್ಲಿ ನಿಧನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT