ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ದೇವರಾಜಕಾರಣದ ವಿಭಿನ್ನ ನೆಲೆಗಳು

Last Updated 31 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ಸ್ವರೂಪದಲ್ಲಿ, ಹಿಂದಿರುಗಿ ಹೋಗಲಾರದಷ್ಟು ನಿರ್ಣಾಯಕವಾದ ಬದಲಾವಣೆಗಳನ್ನು ಮಾಡಿದ ರಾಜಕಾರಣಿಗಳಲ್ಲಿ ದೇವರಾಜ ಅರಸು ಪ್ರಮುಖರು. ಕೆಲವೊಮ್ಮೆ ಇಂದಿರಾ ಗಾಂಧಿಯವರ ನಿರ್ದೇಶನದಂತೆ, ಇನ್ನೆಷ್ಟೋ ಸಲ ಸ್ವಂತದ ವಿವೇಕ ಹಾಗೂ ಜನಪರತೆಗಳಿಂದ ಅವರು ರೂಪಿಸಿದ ಭೂಸುಧಾರಣೆ, ಜೀತನಿರ್ಮೂಲನ, ಮೀಸಲಾತಿ, ಮಲಹೊರುವುದರ ನಿಷೇಧ ಮುಂತಾದ ಕಾರ್ಯಕ್ರಮಗಳು ಅಸಮಾನವಾದವು. ಅವರ ಸಾಧನೆಗಳ ಬೆಲೆಕಟ್ಟುವ ಸಮರ್ಥ ಅಧ್ಯಯನಗಳು ಇನ್ನೂ ನಡೆಯಬೇಕಾಗಿದೆ. ಆ ನಿಟ್ಟಿನಲ್ಲಿ ಬಸವರಾಜು ಮೇಗಲಕೇರಿಯವರು ಸಂಪಾದಿಸಿರುವ, ಪಲ್ಲವ ಪ್ರಕಾಶನದ ‘ನಮ್ಮ ಅರಸು’ ಬಹಳ ಉಪಯುಕ್ತವಾದ ಹೆಜ್ಜೆ.

ಒಂದು ಕಡೆ ಕರ್ನಾಟಕದ ರಾಜಕೀಯವನ್ನು ವಿಕೇಂದ್ರೀಕರಣ ಮಾಡಿ, ನಿರ್ಲಕ್ಷಿತ ಸಮುದಾಯಗಳಿಗೆ ಅಧಿಕಾರವನ್ನು ಹಂಚಲು ಪ್ರಯತ್ನಿಸಿದ ದೇವರಾಜ ಅರಸರು. ಇನ್ನೊಂದು ಕಡೆ, ನಿಜವಾದ ಅಧಿಕಾರವನ್ನು ಪ್ರಮುಖ ಭೂಮಾಲೀಕ ಜಾತಿಗಳಿಗೆ ಹಿಂದಿರುಗಿಸಿದ ರಾಮಕೃಷ್ಣ ಹೆಗಡೆಯವರು. ಮತ್ತೊಂದು ಕಡೆ, ಅರಸು ರಾಜಕಾರಣದಿಂದ ಪಡೆದ ಅಧಿಕಾರವನ್ನು ಒಳಜಗಳ ಮತ್ತು ಸ್ವಾರ್ಥದಿಂದ ಕಳೆದುಕೊಂಡ, ಹಿಂದುಳಿದ ಸಮುದಾಯಗಳ ನಾಯಕರಾಗುವ ಬದಲು, ತಮ್ಮದೇ ಜಾತಿಗಳ ನಾಯಕರಾದ ರಾಜಕಾರಣಿಗಳು. ಮಗದೊಂದು ಕಡೆ, ಪ್ರಭಾವಶಾಲಿಯಾದ ಲಿಕ್ಕರ್/ಗಣಿ/ಮರಳು/ಶಿಕ್ಷಣ ಮುಂತಾದ ಲಾಬಿಗಳು. ಇಂಥ ಸಂಕೀರ್ಣವಾದ ಸನ್ನಿವೇಶದಲ್ಲಿ ಇಂದಿರಾ ಮತ್ತು ಅರಸರ ರಾಜಕಾರಣವನ್ನು ವಿರೋಧಿಸಿದ ಮಾಧ್ಯಮಗಳು ಮತ್ತು ಕರ್ನಾಟಕದ ಸಾಂಸ್ಕೃತಿಕ ಲೋಕದ ಹಲವು ನಾಯಕರು. ಈ ಎಲ್ಲ ವಿದ್ಯಮಾನಗಳಿಂದ ಜನಸಾಮಾನ್ಯರ ಹಿತರಕ್ಷಣೆಯು ಈಗ ಹಿಂದೆ ಸರಿದಿರುವುದು ನಿಜವಾದರೂ, ದೇವರಾಜ ಅರಸು ಕರ್ನಾಟಕದ ಸಾಮುದಾಯಿಕ/ರಾಜಕೀಯ ಭೂಪಟವನ್ನು ನಿರ್ಣಾಯಕವಾಗಿ ಬದಲಾಯಿಸಿದರೆನ್ನುವುದು ಸುಳ್ಳಾಗುವುದಿಲ್ಲ. ಅವರಿಂದ ಅಸ್ಮಿತೆಯನ್ನು ಪಡೆದ ಜಾತಿಗಳು ತಮ್ಮದೇ ಮಠಗಳನ್ನು ಕಟ್ಟಿಕೊಂಡು ಲಾಬಿ ಮಾಡಿಸುವ ದುರಂತವನ್ನು, ಅರಸು ನಿರೀಕ್ಷಿಸಲಿಲ್ಲ. ಅನಂತರ, ಅರಸು ವ್ಯಕ್ತಿತ್ವ ಮತ್ತು ಸಾಧನೆಗಳಿಗೆ ಮಸಿಬಳಿಯುವ ಪ್ರಯತ್ನಗಳೇ ಹೆಚ್ಚಾಗಿ ನಡೆದಿವೆ. ಆದರೂ ರಘುರಾಮ ಶೆಟ್ಟಿ, ಜಾಗೀರ್ದಾರ್, ಕೆ. ಪುಟ್ಟಸ್ವಾಮಿ, ಎನ್.ಎಸ್. ಶಂಕರ್ ಮುಂತಾದವರು ಅರಸರ ಕೆಲಸವನ್ನು ಗುರುತಿಸುವ ದಿಕ್ಕಿನಲ್ಲಿ ಕೆಲಸ ಮಾಡಿದ್ದಾರೆ.

ಈ ಹೆಬ್ಬೊತ್ತಿಗೆಯು ದೇವರಾಜಕಾರಣದ ಧನಾತ್ಮಕ ನೆಲೆಗಳನ್ನು ಅಂತೆಯೇ ಅವರ ವ್ಯಕ್ತಿತ್ವದ ಸಂಕೀರ್ಣತೆಯನ್ನು ದಾಖಲಿಸುವ ಕೆಲಸವನ್ನು ವಿಶಿಷ್ಟವಾದ ರೀತಿಯಲ್ಲಿ ಮಾಡಿದೆ. ಈ ಕೂಡು-ಪುಸ್ತಕವು ಅರಸರನ್ನು ಸನಿಹದಿಂದ ಕಂಡ ರಾಜಕಾರಣಿಗಳು, ಬಂಧು-ಮಿತ್ರ-ಶತ್ರುಗಳು, ಸರ್ಕಾರೀ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಕೀಲರು, ಪತ್ರಕರ್ತರು, ಜನಸಾಮಾನ್ಯರು ಮುಂತಾದ ಸುಮಾರು ಅರವತ್ತು ಜನರು ಪ್ರತಿನಿಧಿಸುವ ವಿಭಿನ್ನ ದೃಷ್ಟಿಕೋನಗಳಿಂದ ಅರಸು ಅವರನ್ನು ನೋಡುತ್ತದೆ. ಅವರೆಲ್ಲರೂ ಅರಸು ಅವರಂತೆಯೇ ತಮಗೂ ಕನ್ನಡಿ ಹಿಡಿದುಕೊಂಡಿದ್ದಾರೆ. ರಾಜಕೀಯದಲ್ಲಿ ಇವರೆಲ್ಲರ ರಾಜಕೀಯ ಬೆಳವಣಿಗೆಯನ್ನು ನೋಡುತ್ತಾ ಬಂದವರಿಗೆ ಹುಸಿ-ದಿಟಗಳನ್ನು ಬೇರೆ ಮಾಡುವ ಕೆಲಸ ಸುಲಭ. ಬಸವರಾಜು ತಮ್ಮ ಪ್ರಶ್ನೆಗಳು ಮತ್ತು ಆ ವ್ಯಕ್ತಿಗಳ ಬಗ್ಗೆ ಬರೆದಿರುವ ಪರಿಚಯದ ಮೂಲಕ ಇಡೀ ಪುಸ್ತಕವನ್ನು ಸತ್ಯಸಮೀಪವಾಗಿ ಮಾಡಿದ್ದಾರೆ. ರಾಜಕಾರಣದಲ್ಲಿ ಕಡುವಿರೋಧಿಗಳಾಗಿದ್ದವರೂ ಸೇರಿದಂತೆ, ಯಾರೂ ಅರಸು ಸಾಧನೆಗಳನ್ನು ಸಾರಾಸಗಟಾಗಿ ತಿರಸ್ಕರಿಸಿಲ್ಲ, ಇವರೆಲ್ಲರ ಮಾತುಗಳನ್ನು ಕೇಳಿಸಿಕೊಂಡಾಗ, ಅರಸು ಅವರ ವ್ಯಕ್ತಿಚಿತ್ರ ಮಾತ್ರವಲ್ಲ, ರಾಜಕಾರಣ’ದ ಒಳಸುಳಿಗಳು ಕೆಲಸಮಾಡುವ ಬಗೆಯ ‘ರಿಂಗ್ ಸೈಡ್ ವ್ಯೂ’ ಕೂಡ ಸಿಗುತ್ತದೆ.

ಈ ಲೇಖಕರಲ್ಲಿ ಸಾಹಿತಿಗಳು ಮತ್ತು ಕಲಾವಿದರು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆ. ಸಾಹಿತಿಗಳೇ ‘ಸರ್ವಜ್ಞ’ರೆಂದು ಇತರರು ಭಾವಿಸಿರುವ ಮತ್ತು ಅವರೂ ಹಾಗೆಯೇ ತಿಳಿದುಕೊಂಡಿರುವ ಕಾಲದಲ್ಲಿ, ಈ ಅವಜ್ಞೆಯು ಸರಿಯೆಂದೇ ನನಗೆ ತೋರುತ್ತದೆ. ಆದರೆ, ಲಂಕೇಶ್ ಅವರು ಬರೆದಿರುವ ‘ನಾಯಕನೊಬ್ಬನ ರಾಜೀನಾಮೆ’ ಕವನವು ಅರಸರ ವ್ಯಕ್ತಿತ್ವ, ಸಾಧನೆಗಳನ್ನು ಸಮರ್ಪಕವಾಗಿ ಕಟ್ಟಿಕೊಡುತ್ತದೆ. ಲಂಕೇಶರು ಅರಸು ಅವರನ್ನು ಕಟುವಾಗಿ ಟೀಕಿಸಿದವರೇ. ಆದರೆ ತಾವೇ ಬೆಂಬಲಿಸಿದ ಅರಸರ ‘ಉತ್ತರಾಧಿಕಾರಿಗಳ’ ಗುಣಗಣಗಳನ್ನು ಕಂಡಾಗ ಅವರ ನಿಲುವು ಸಮಗ್ರವಾಯಿತೆಂದು ತೋರುತ್ತದೆ. ಅರಸು ಅವರು, 1981 ರಲ್ಲಿ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟಾಗ ಬರೆದ ಕವನದ ಕೆಲವು ಸಾಲು ಹೀಗಿವೆ:

ಖಾಲಿ ಅಂಬಲಿ ಚಿಪ್ಪಿನ ಎದುರು ಕೂತ ಮಗುವಿಗೆ

ಅಂಬಲಿ ಸುರಿವವನ ಬಾಯಿಯ

ಸ್ಕಾಚ್ ನಾತ ಅಷ್ಟೇನೂ ಕೆಟ್ಟದಾಗಿ ಅನ್ನಿಸಲಿಲ್ಲ-

ಯಾಕೆಂದರೆ ವಾಸನೆಯ ಪರಂಪರಾಗತ ತತ್ವಕ್ಕೇ

ಹೊರತಾದ ಮಗು

ಕಡೆಗೂ ಒಂದು ನಾತ ಕಾಣ ತೊಡಗಿತ್ತು.

ದೊರೆಗಳ ಹೊಕ್ಕುಳದ ಸಂಗಡದ ನೇರ ತಗುಲಿಕೊಂಡ

ಬೆವರ ಕಪ್ಪು ನಿಟ್ಟುಸಿರ ನಿರುಮ್ಮಳದ

ಅರಸೊನ್ನೆಯ ರೂಹಿನ ನಮ್ಮ ಎಲುಬಿನ ಯೆಂಕ

ಕೊಂಚ ತಲೆಯೆತ್ತಿ ಉಮ್ಮಳದ ಜೀವ ಪಡೆಯಬಹುದು

ಎಂದು ಅಂದುಕೊಳ್ಳುವಲ್ಲಿ

ತನ್ನ ಸ್ಕಾಚ್ ಸಿದ್ಧಾಂತ ಕನಸು ರಸಿಕತೆ

ಕೋಳ ಕೈಬಳೆ ಸಂಗೀತ ಬಂಡಾಯ ಬೇಗುದಿಯ

ಪೈಪಿನ ದಪ್ಪನೆಯ ಆಸಾಮಿ

ತನ್ನ ವಿಚಿತ್ರ ವಾತಾವರಣ ಕಟ್ಟಿಕೊಂಡೇ

ಭ್ರಮೆಗಳಿಂದ ಬೆತ್ತಲೆ ಮಾಡಿಸಿಕೊಂಡವನಂತೆ

ದೂರ ದೂರಕ್ಕೆ ಹೊರಟುಹೋದ.

(‘ಚಿತ್ರ ಸಮೂಹ’, ಪುಟ 99-100)

ಈ ಕವನ ಮತ್ತು ‘ಟೀಕೆ-ಟಿಪ್ಪಣಿ’ಗಳಲ್ಲಿ ಲಂಕೇಶರು ಹೇಳಿರುವ ಮಾತುಗಳು ಅರಸರ ಸಾಧನೆ, ಪರಿಮಿತಿಗಳ ಸಮತೋಲಿತ ಚಿತ್ರ ಕೊಡುತ್ತವೆ. ಅರಸು ಅವರು ರಾಜಕಾರಣದಲ್ಲಿ ಮಾಡಿದುದನ್ನೇ ಲಂಕೇಶರು ಪತ್ರಿಕೋದ್ಯಮದಲ್ಲಿ ಮಾಡಿದರು. ಲಂಕೇಶ್ ಪತ್ರಿಕೆ’ಯಲ್ಲಿ ಬೆಳಕಿಗೆಬರೆದವರ ವೈವಿಧ್ಯ ಹಾಗೂ ಹಿನ್ನೆಲೆಯನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಈ ಪುಸ್ತಕದಲ್ಲಿ ಬರುವ ಹೃದಯಸ್ಪರ್ಶಿಯಾದ, ಒಳನೋಟಗಳಿಂದ ನಿಬಿಡವಾದ, ರೋಚಕವಾದ, ಮುಖವಾಡಗಳನ್ನು ಕಿತ್ತುಹಾಕುವ ಘಟನೆಗಳನ್ನು ಹೇಳಬೇಕು ಎನ್ನಿಸಿದರೂ. ನಾನು ಹಾಗೆ ಮಾಡುವುದಿಲ್ಲ. ಕರ್ನಾಟಕದ ಗತ-ಪ್ರಸ್ತುತಗಳಲ್ಲಿ ಆಸಕ್ತರಾದವರೆಲ್ಲರೂ ಇದನ್ನು ಓದಬೇಕು. ನನ್ನ ಬರವಣಿಗೆ ಅದಕ್ಕೆ ಪರ್ಯಾಯವಲ್ಲ. ಇದರ ಒಟ್ಟು ಓದಿನಿಂದ ಹೊರಹೊಮ್ಮುವ ಮುಖ್ಯ ಸಂಗತಿಗಳನ್ನು ಬಿಡಿಬಿಡಿಯಾಗಿ ಹೇಳುವುದು ನನ್ನ ಆಯ್ಕೆ. ಅದರಿಂದ ಅರಸು ರಾಜಕಾರಣವನ್ನು ಅರ್ಥೈಸಲು ಮಾತ್ರವಲ್ಲ, ನಮ್ಮ ಕಾಲದ ಬಗ್ಗೆ ಯೋಚನೆ ಮಾಡಲೂ ಸಾಧ್ಯವಾಗುತ್ತದೆ.

1ಅರಸು, ಸಮಾಜವಾದ, ಸಮತಾವಾದ, ಗಾಂಧೀವಾದ, ಅಂಬೇಡ್ಕರ್ ವಾದ ಮುಂತಾದ ಸಿದ್ಧಾಂತಗಳ ಪ್ರತಿಪಾದಕರಾಗಿರಲಿಲ್ಲ. ಕಾಂಗ್ರೆಸ್ ಕೂಡಾ ಸಿದ್ಧಾಂತಕ್ಕೆ ಅಂಟಿಕೊಂಡ ಪಕ್ಷವಲ್ಲ. ಆದರೆ, ಅವರಲ್ಲಿ ಮಾರ್ಕ್ಸ್, ಗಾಂಧಿ, ಬಸವಣ್ಣ, ಲೋಹಿಯಾ, ಅಂಬೇಡ್ಕರ್ ಎಲ್ಲರೂ ಇದ್ದುಕೊಂಡು ಬೆಳಕು ನೀಡುತ್ತಿದ್ದರು. ಯಾಕೆಂದರೆ, ಅರಸು ಲೋಕವನ್ನು ಬಡರೈತರ, ಹಿಂದುಳಿದವರ, ಹೆಣ್ಣುಮಕ್ಕಳ, ಕಾರ್ಮಿಕರ ಹೃದಯದಿಂದ ನೋಡುತ್ತಿದ್ದರು. ಅವರೆಲ್ಲರರ ಮೈ-ಮನಸ್ಸು-ಸ್ಥಾನ-ಮಾನಗಳ ಯೋಗಕ್ಷೇಮದ ಬಗ್ಗೆ ಯೋಚಿಸುತ್ತಿದ್ದರು. ಅದಕ್ಕಾಗಿ ‘ಏನು ಬೇಕಾದರೂ’ ಮಾಡಲು ಸಿದ್ಧರಿದ್ದರು. ಅಷ್ಟೇಕೆ, ಅವರು ಅರಮನೆ ಮತ್ತು ಗುಡಿಸಲುಗಳಲ್ಲಿ ನಿರಾತಂಕವಾಗಿ ಇರಬಲ್ಲವರಾಗಿದ್ದರು. ಹಸುಗಳನ್ನು ಸಾಕಿ, ಹಾಲು ಕರೆದು, ಮಾರಿ ಜೀವನ ನಿರ್ವಹಣೆ ಮಾಡಲು ಅವರಿಗೆ ಹಿಂಜರಿಕೆಯಿರಲಿಲ್ಲ. ಅವರು ರಾಜಕೀಯ ವಿಚಾರಧಾರೆಗಳ ‘ಅರ್ಕ’ವನ್ನು ಕಂಡುಕೊಂಡು, ಅದನ್ನು ‘ಪ್ರಾಕ್ಟಿಕಲ್ ರಾಜಕಾರಣ’ದ ತೆಕ್ಕೆಯೊಳಗೆ ಅಳವಡಿಸಿದರು. ‘ಈ ಭಾಗ್ಯ’, ‘ಆ ಭಾಗ್ಯ’ಗಳ ಭಿಕ್ಷೆ ನೀಡುವ ಬದಲು ಕಾನೂನುಗಳನ್ನೇ ಜನಪರವಾಗಿ ಬದಲಿಸಿದರು. ಮಾರ್ಕ್ಸ್ ವಾದದಿಂದ ಅಂಬೇಡ್ಕರಿಸಂವರೆಗೆ ಹಲವು ಹಿನ್ನೆಲೆಗಳಿಂದ ಬಂದವರು ಒಂದಾಗಿ ಜನಪರ ಹೋರಾಟ ನಡೆಸಬೇಕಾದ ಈ ದಿನಗಳಲ್ಲಿ ಅರಸು ಅನುಸರಿಸಿದ ವಿಧಾನ ಮುಖ್ಯವೆನಿಸುತ್ತದೆ.

2ಪ್ರಬಲವಾದ ಭೂಮಾಲೀಕ ಜಾತಿಗಳು ಮತ್ತು ಬ್ರಾಹ್ಮಣರನ್ನು ಪಕ್ಕಕ್ಕಿಟ್ಟು, ಹಿಂದುಳಿದ ಜಾತಿ, ವರ್ಗಗಳನ್ನು ಗುರುತಿಸಿ ಅವಕ್ಕೆ ರಾಜಕೀಯ ಶಕ್ತಿ ಮತ್ತು ಅಸ್ಮಿತೆಯನ್ನು ಕೊಡುವ ಅವರ ಸಫಲ ಪ್ರಯತ್ನವು ಕೇವಲ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ ಹುನ್ನಾರವಾಗಲೀ ಇಂದಿರಾ ಗಾಂಧಿಯವರ ಕಾರ್ಯಕ್ರಮಗಳನ್ನು ಜಾರಿಗೆ ಕೊಡುವ ಹಾದಿಯಾಗಲೀ ಆಗಿರಲಿಲ್ಲ. ಸಂಘಟನೆಗೆ ಅಗತ್ಯವಾದ ಸಂಪನ್ಮೂಲಗಳನ್ನು ಹೊಂದಿರದ, ಸಣ್ಣಪುಟ್ಟ ಜಾತಿಗಳ ವಿದ್ಯಾವಂತ ವಿವೇಕಿಗಳನ್ನು ಗುರುತಿಸಿ, ಅಧಿಕಾರ ಕೊಟ್ಟು ಅಂತ ಸಮುದಾಯಗಳ ಹಿತರಕ್ಷಣೆ ಮಾಡುವುದೇ ಆಗಿತ್ತು. ಆದರೆ, ಹಿಂದುಳಿದ ಜಾತಿಗಳನ್ನು ಒಗ್ಗೂಡಿಸಿ ಹಿಂದುಳಿದ ವರ್ಗವಾಗಿ ಮಾರ್ಪಡಿಸುವ ಅವರ ಉದ್ದೇಶ ಯಶಸ್ವಿಯಾಗಲಿಲ್ಲ. ಇದಕ್ಕೆ ಪ್ರಬಲ ವರ್ಗಗಳ ವಿರೋಧ ಮತ್ತು ಮನುಷ್ಯರ ಸ್ವಾರ್ಥಗಳು ಕಾರಣವಾದವು. ಮುಂದುವರಿದ ಜಾತಿಗಳಲ್ಲೂ ಹೇರಳವಾಗಿದ್ದ ಬಡವರನ್ನು/ಹಿಂದುಳಿದವರನ್ನು, ಅಂತೆಯೇ ಮಹಿಳೆಯರನ್ನು ಜೊತೆಗೆ ತೆಗೆದುಕೊಳ್ಳುವ ಪ್ರಯತ್ನವನ್ನು ಅರಸರು ಗಮನೀಯವಾಗಿ ಮಾಡಲಿಲ್ಲವಾದ್ದರಿಂದ ಅವರೆಲ್ಲರೂ ಇಂದಿರಾ ಜೊತೆಯಲ್ಲಿಯೇ ಉಳಿದು, ಅಂತಿಮವಾಗಿ ಅರಸರ ಸೋಲಿಗೆ ಆಂಶಿಕ ಕಾರಣವಾದರು.

3ಅರಸು ಬಗ್ಗೆ ಮಾತನಾಡುವಾಗ, ಅವರು ಭ್ರಷ್ಟಾಚಾರವನ್ನು ಬೆಳೆಸಿದರೆಂಬ ಮಾತು ಕೇಳಿಬರುತ್ತದೆ. ಇಲ್ಲಿನ ಲೇಖನಗಳೂ ಅದನ್ನು ಮರೆಮಾಚುವುದಿಲ್ಲ. ಆದರೆ, ಅರಸು ಸ್ವಂತಕ್ಕೆ ದುಡ್ಡು/ಆಸ್ತಿ ಮಾಡಿಕೊಳ್ಳಲು ಭ್ರಷ್ಟಾಚಾರ ಮಾಡಲಿಲ್ಲವೆಂಬ ಮಾತನ್ನು ಹೆಚ್ಚುಕಡಿಮೆ ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ‘ಎಲ್ಲ ಅಧಿಕಾರವೂ ಭ್ರಷ್ಟಗೊಳಿಸುತ್ತದೆ’ ಎನ್ನುವುದು ಹಿಂದೆಯೇ ಹೇಳಿದ ಸತ್ಯ. ಅದಲ್ಲದೆ ಅವರು ಆಯ್ದ ನಾಯಕರಲ್ಲಿ ಅನೇಕರಿಗೆ ತಾತ್ವಿಕ ಬದ್ಧತೆಯಾಗಲೀ ರಾಜಕೀಯಕ್ಕೆ ಅಗತ್ಯವಾದ ತರಬೇತಿಯಾಗಲೀ ಸಂಪನ್ಮೂಲಗಳಾಗಲೀ ಇರಲಿಲ್ಲ. ಪ್ರಾಯಶಃ ‘ಹಿರಿಯಕ್ಕನ ಚಾಳಿ’ ಮನೆಮಕ್ಕಳಿಗೆಲ್ಲ ಬಂತು. ಅರಸು ಪೂರ್ವಯುಗದಲ್ಲಿ ಭ್ರಷ್ಟಾಚಾರವೇ ಇರಲಿಲ್ಲವೆಂದು ಹೇಳುವುದೂ ತಪ್ಪು. ಇಲ್ಲಿ ‘ಮೀನ್ಸ್’ ಮತ್ತು ‘ಎಂಡ್ಸ್’ ಎರಡೂ ಶುದ್ಧವಾಗಿರಬೇಕೆಂಬ ಮಾತು ಕೇಳಿಸಬಹುದು. ಆದರೆ, ಬಲಿಷ್ಟರು ಶತಮಾನಗಳಿಂದ ನಡೆಸಿರುವ ಶೋಷಣೆಯನ್ನು ಬರಿಗೈ ಶೂರರು ನಿಲ್ಲಿಸಲಾಗುವುದಿಲ್ಲ. ಹಾಗೆಂದು ಅಳಿಯನೋ ಗೆಳೆಯನೋ ಹೇಳಿದರೆಂದು ಗೂಂಡಾಗಳನ್ನು ಬೆಳೆಸುವುದನ್ನು ಸಮರ್ಥಿಸುವುದೂ ಸರಿಯಲ್ಲ. ಅರಸರ ಬಗ್ಗೆ ಟೀಕೆ ಮಾಡಿದವರೂ ಅದೇ ಕೆಲಸ ಮಾಡಿದರೆನ್ನುವುದಕ್ಕೆ ನಮ್ಮ ಕಾಲವೇ ಸಾಕ್ಷಿ. ಶ್ರೀಮಂತರ ಕೈಗೆ ಮತ್ತು ಧರ್ಮಕಾರಣಿಗಳ ಕೈಗೆ ಅಧಿಕಾರ ಕೊಡಬಾರದೆನ್ನುವ ಮಾತನ್ನು, ಅಂತೆಯೇ ಅಧಿಕಾರದಲ್ಲಿರುವವರು ತಮ್ಮ ಜಾತಿ/ಪಕ್ಷ/ನಂಟರಿಗೆ ಮಾತ್ರ ಅನುಕೂಲ ಮಾಡಿಕೊಡಬಾರದು ಎಂಬ ಮಾತನ್ನು ಅರಸು ಮತ್ತೆ ಮತ್ತೆ ಹೇಳುತ್ತಾರೆ. ಇದು ಇಂದಿಗೂ ಮಾದರಿಯಾದ ವಿವೇಕ.

4ಇಲ್ಲಿನ ಲೇಖನಗಳಲ್ಲಿ ಅರಸರ ವ್ಯಕ್ತಿತ್ವದ ಬಹುಮುಖಿ ಆಯಾಮಗಳು ಬೆಳಕಿಗೆ ಬರುತ್ತವೆ. ಕೇವಲ ರಾಜಕಾರಣದಲ್ಲಿ ಆಸಕ್ತಿಯಿರುವವರು ಬಹಳ ಅಪಾಯಕಾರಿಗಳು. ಲಂಕೇಶರು ಬೇರೊಂದು ಕಡೆ ಹೇಳಿರುವಂತೆ, ಅರಸು, ‘ದುಡಿಮೆಯನ್ನು ಬಯಸುವ, ಜೀವನವನ್ನು ಪ್ರೀತಿಸುವ, ಕಲೆಗಳಲ್ಲಿ ಆಸಕ್ತಿಯಿರುವ ಕುಟುಂಬವತ್ಸಲನಾದ ಮನುಷ್ಯ’. ಶ್ರೀಹರಿ ಖೋಡೆಯವರಿಗೆ ತನ್ನ ಸ್ವಂತ ಶೇವಿಂಗ್ ಬ್ಲೇಡು ಕೊಡುವ, ಶೇಕ್ಸ್‌ಪಿಯರ್ ಪಾಠ ಹೇಳುವ, ರೈತರನ್ನು ಕೂಡಿಸಿಕೊಂಡು ರಷ್ಯನ್ ಕ್ರಾಂತಿಯ ಕಥೆಹೇಳುವ, ಉದ್ಯಾನವನಕ್ಕೆ ಮೀಸಲಾಗಿರುವ ಜಾಗದಲ್ಲಿ ಸೈಟ್ ಕಟ್ಟಿಸಲು ಹೊರಟ ಬಿ.ಟಿ. ಸೋಮಣ್ಣನವರಿಗೆ ಕೋಲಿನಿಂದ ಹೊಡೆದ ಅರಸು ನಮ್ಮ ಮನಸ್ಸಿನಲ್ಲಿ ಉಳಿಯುತ್ತಾರೆ. ಆದರೂ ತೋಂಡಿಯಲ್ಲಿ ನಿರೂಪಿತವಾಗುವ ಘಟನೆಗಳ ವಿಶ್ವಸನೀಯತೆಯ ಬಗ್ಗೆ ಎಚ್ಚರ ಉಳಿಸಿಕೊಳ್ಳಬೇಕು. ಇಲ್ಲಿ ನಿರೂಪಿತವಾಗಿಲ್ಲದ ಘಟನೆಗಳು ಅವರ ವ್ಯಕ್ತಿಚಿತ್ರವನ್ನು ಸಂಪೂರ್ಣಗೊಳಿಸುತ್ತವೆಂಬ ತಿಳಿವಳಿಕೆಯೂ ಇರಬೇಕು. ಆದರೂ ಅವರು ಜನಪರವಾದ ‘ಸ್ಟೇಟ್ಸ್‌ಮನ್’ ಆಗಿದ್ದರೆನ್ನುವುದು ನಿರ್ವಿವಾದ.

5 ಇಂದಿರಾ ಗಾಂಧಿ ಮತ್ತು ದೇವರಾಜ ಅರಸು ಅವರ ನಡುವೆ ಮೂಡಿದ ವೈಮನಸ್ಯ ಮತ್ತು ಅದರ ಪರಿಣಾಮಗಳ ಬಗ್ಗೆ ಬೇರೆ ಬೇರೆಯವರು ತಮ್ಮ ಮೂಗಿನ ನೇರಕ್ಕೆ ಅನುಗುಣವಾಗಿ ಮಾತಾಡಿದ್ದಾರೆ. ಅವರಿಬ್ಬರ ಸಹಮತಕ್ಕಿಂತ ಭಿನ್ನಮತಕ್ಕೆ ಒತ್ತು ಸಿಕ್ಕಿದೆ. ಇಂದಿರಾ ಪ್ರತಿಪಾದಿಸಿದ ಕಾರ್ಯಕ್ರಮಗಳನ್ನು ಮತ್ತು ತುರ್ತು ಪರಿಸ್ಥಿತಿಯನ್ನು ಅರಸು ನಿರ್ವಹಿಸಿದ ಬಗೆಯು ಅತ್ಯುತ್ತಮವಾಗಿತ್ತೆಂದು ಎಲ್ಲರೂ ಒಪ್ಪುತ್ತಾರೆ. ಹಾಗೆ ನೋಡಿದರೆ, ಸಂಜಯ ಗಾಂಧಿ ಮತ್ತು ಅವರ ಕರ್ನಾಟಕದ ಗೆಳೆಯರ ಬಗ್ಗೆ ಅಸಹನೆ ತೋರುವುದಾಗಲೀ ಅಥವಾ ರಾಷ್ಟ್ರಮಟ್ಟದ ನಾಯಕನಾಗಬೇಕೆಂಬ ಮಹತ್ವಾಕಾಂಕ್ಷೆಯಾಗಲೀ ತಪ್ಪೇನೂ ಅಲ್ಲ. ಸಾರ್ವಜನಿಕರ ಚಿಂತನೆಯು ಭಾವಾವೇಶದಿಂದ, ಅನುಕಂಪದಿಂದ ರೂಪಿತವಾಗುವ ಹಾಗೆ ತರ್ಕದಿಂದ ನಿಯಂತ್ರಿತವಲ್ಲ ಅಥವಾ ಅದಕ್ಕೆ ಅದರದೇ ತರ್ಕ ಇರುತ್ತದೆ. ಆದ್ದರಿಂದಲೇ ಅರಸು ಚುನಾವಣೆಯಲ್ಲಿ ಸೋತರು. ಇವರಿಬ್ಬರ ನಡುವೆ ಬಿರುಕು ಮೂಡಲು, ಸೈದ್ಧಾಂತಿಕ ಭಿನ್ನಾಭಿಪ್ರಾಯಕ್ಕಿಂತ ಮಹತ್ವಾಕಾಂಕ್ಷೆ ಹಾಗೂ ಹಿತ್ತಾಳೆ ಕಿವಿಗಳೇ ಕಾರಣ.

6 ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವಿನ ಸಂಬಂಧವನ್ನು ಕುರಿತ ‘ಅರಸು ಮಾದರಿ’ಯೊಂದು ಇಲ್ಲಿ ಮೂಡಿಬರುತ್ತದೆ. ದಕ್ಷ, ಪ್ರಾಮಾಣಿಕ ಅಧಿಕಾರಿಗಳನ್ನು ಆರಿಸಿಕೊಳ್ಳುವುದು, ಅವರನ್ನು ನಂಬಿ, ಸ್ವತಂತ್ರವಾಗಿ ಕೆಲಸ ಮಾಡಲು ಬಿಡುವುದು, ಅವರ ಸಲಹೆ ಕೇಳಿದ ಬಳಿಕ ಸ್ವತಂತ್ರವಾದ ತೀರ್ಮಾನಗಳನ್ನು ಕೈಗೊಳ್ಳುವುದು, ಅಧಿಕಾರಿಗಳಿಗಿಂತ ಜನರ ಹಿತಾಸಕ್ತಿಗಳು ಮುಖ್ಯವೆಂದು ಸದಾ ಹೇಳುವುದು, ಅಗತ್ಯವಿದ್ದಾಗ ಅವರನ್ನು ಕಟುಮಾತುಗಳಿಂದ ನಿಯಂತ್ರಿಸುವುದು ಮುಂತಾದವು ಆ ಮಾದರಿಯ ಮುಖ್ಯ ನೆಲೆಗಳು.

7 ಇಲ್ಲಿ ಮಾತನಾಡಿರುವವರ ರಾಜಕೀಯವು ಮುಂದುವರಿದ ಬಗೆಯನ್ನು ಗಮನಿಸಿದಾಗ ಅವರ ಮಾತುಗಳನ್ನು ಚಿಟಿಕೆ ಉಪ್ಪಿನೊಂದಿಗೆ ತೆಗೆದುಕೊಳ್ಳಬೇಕೆನ್ನುವುದು ಸ್ಪಷ್ಟವಾಗುತ್ತದೆ. ದೇವರಾಜ ಅರಸರನ್ನು ಕೈಬಿಟ್ಟಿದ್ದು ಮಾತ್ರವಲ್ಲ, ಅವರ ಮರಣದ ನಂತರವೂ ಬಿ.ಜೆ.ಪಿ. ಸೇರಿದಂತೆ ಹಲವು ಪಕ್ಷಗಳೊಂದಿಗೆ ಅಧಿಕಾರಕ್ಕಾಗಿ ಚಕ್ಕಂದ ನಡೆಸುತ್ತಿರುವವರನ್ನು ಹೇಗೆ ನಂಬುವುದೋ ತಿಳಿಯದು. ಹಾಗೆಯೇ ಕಾಂಗ್ರೆಸ್ಸಿನಲ್ಲಿ ಉಳಿದರೂ ಮೌನವ್ರತ ತಳೆದಿರುವ ಸರ್ವಶ್ರೀ ಕೆ.ಎಚ್. ಮುನಿಯಪ್ಪ, ವೀರಪ್ಪ ಮೊಯ್ಲಿ, ಜನಾರ್ದನ ಪೂಜಾರಿ, ಆರ್. ಎಲ್. ಜಾಲಪ್ಪ, ಸಿದ್ದರಾಮಯ್ಯ ಮುಂತಾದವರ ಮೌನವು ಅಚ್ಚರಿ ಹುಟ್ಟಿಸುತ್ತದೆ. ಅರಸು ಅವರ ರಾಜಕೀಯ ವಿರೋಧಿಗಳೇ ಮಾತಾಡಿರುವಾಗ ಅವರ ರಾಜಕೀಯದ ಫಲಾನುಭವಿಗಳಾದವರು ಅನಾರೋಗ್ಯದಿಂದಲೋ ಅನಾಸಕ್ತಿಯಿಂದಲೋ ಸುಮ್ಮನೆ ಉಳಿದಿದ್ದಾರೆ. ಅವರನ್ನು ಸಂದರ್ಶನ ಕೊಡಿರೆಂದು ಕೇಳಿದಾಗಲೂ ಮೌನ ವಹಿಸಿದ್ದರೆ ಅದು ಅಕ್ಷಮ್ಯ. ಅವರ ಬಂಧು ಬಾಂಧವರು ಮತ್ತು ಕಲ್ಲಹಳ್ಳಿಯ ಜನರ ಪ್ರತಿಕ್ರಿಯೆಗಳು ಹೃದಯಸ್ಪರ್ಶಿಯಾಗಿದ್ದು ಅರಸು ಅವರ ಮಾನವೀಯತೆಗೆ ಕನ್ನಡಿ ಹಿಡಿಯುತ್ತವೆ. ಅವರು ಆ ಪದದ ನಿಜವಾದ ಅರ್ಥದಲ್ಲಿ ಮಣ್ಣಿನ ಮಗ ಎನ್ನುವುದು ಮತ್ತೆ ಮತ್ತೆ ಕಂಡುಬರುತ್ತದೆ.

ಸಾಹಿತಿಗಳೆಂದು ಅಲ್ಲದಿದ್ದರೂ, ಸಾರ್ವಜನಿಕ ಜೀವನದಲ್ಲಿ ನಿರಂತರವಾದ ಆಸಕ್ತಿಯನ್ನು ತೋರಿಸುತ್ತಾ ಬಂದಿರುವ ಕೆಲವು ಲೇಖಕರನ್ನಾದರೂ ಇಲ್ಲಿ ಸಂದರ್ಶನ ಮಾಡಬಹುದಿತ್ತೆಂದು ನನಗೆ ತೋರುತ್ತದೆ. ಹಾಗೆಯೇ ಈ ಪಟ್ಟಿಯಲ್ಲಿ ಎಡಪಂಥೀಯರೆಂದು ಕರೆಯಬಹುದಾದವರು ಒಬ್ಬರೂ ಇಲ್ಲ. ಅರಸರ ನೇರ ಪರಿಚಯ ಇಲ್ಲದವರೂ ಅವರ ರಾಜಕೀಯದ ಬಗ್ಗೆ ಮಹತ್ವದ ಮಾತುಗಳನ್ನು ಹೇಳಬಹುದಲ್ಲವೇ?

8 ಈ ಪುಸ್ತಕದಲ್ಲಿರುವ ಅರಸು ಅವರ ‘ಮನುಷ್ಯ ಮುಖ’ ನೇರವಾಗಿ ಮನಸ್ಸು ಮುಟ್ಟುತ್ತದೆ. ಒಳ್ಳೆಯ ಮನುಷ್ಯ ಎಂದರೆ ಯಾರು ಎನ್ನುವುದು ನೀತಿಸಂಹಿತೆಯಿಂದ ತೀರ್ಮಾನವಾಗುವುದಿಲ್ಲ. ಅದು ಪ್ರೀತಿಸಂಹಿತೆಯ ವಿಷಯ. ಅಲ್ಲಿ ಜೀವನಪ್ರೀತಿ, ಇಂದ್ರಿಯಸುಖಗಳ ಪ್ರೀತಿ, ಇಲ್ಲದವರ ಬಗೆಗಿನ ಅನುಕಂಪ ಮುಂತಾದ ಹಲವು ಅಂಶಗಳು ಸೇರಿಕೊಳ್ಳುತ್ತವೆ. ಅರಸು ಹೀಗೆ ಬೇರೆಯವರಿಗೆ ಒಳ್ಳೆಯದನ್ನು ಮಾಡುತ್ತಲೇ, ತಾನು ಕೂಡ ಸಂತೋಷವಾಗಿ ತಿಂದು ಉಂಡು, ಕುಡಿದು ಕುಣಿದು ಬಾಳಿದವರೆಂಬ ಸಂಗತಿ ಅವರನ್ನು ಮನುಷ್ಯರ ಹತ್ತಿರ ತರುತ್ತದೆ. ಇದರ ಜೊತೆಗೆ ಸಿಟ್ಟು ಸೆಡವು ಬಿಂಕ ಬಿಗುಮಾನಗಳೂ ಇದ್ದವೆಂದು ತೋರುತ್ತದೆ. ಇದು ಕೇವಲ ಸಹಜ.

ಬಸವರಾಜು ಅವರು ಸಂಪಾದಕನ ಕೆಲಸವನ್ನು ಜಾಣ್ಮೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದಾರೆ. ಇಂಥ ಪುಸ್ತಕವು ಆರಾಧನೆಯಾಗಬಾರದೆಂಬ ಎಚ್ಚರವನ್ನು ಅವರು ಉಳಿಸಿಕೊಂಡಿದ್ದಾರೆ. ಎನ್.ಎಸ್. ಶಂಕರ್ ಅವರ ಮುನ್ನುಡಿ ಪುಸ್ತಕಕ್ಕೆ ಒಳ್ಳೆಯ ಪ್ರವೇಶ ನೀಡುತ್ತದೆ. ಅರಸು ಅವರ ಬಗೆಗಿನ ಉಪಯುಕ್ತವಾದ ಮಾಹಿತಿಯನ್ನು, ಅವರ ಬಗ್ಗೆ ನಡೆದಿರುವ ಕೆಲಸದ ವಿವರಗಳನ್ನು ಅನುಬಂಧದಲ್ಲಿ ಕೊಡಬಹುದಿತ್ತು. ಇದು ಬಹಳ ಒಳ್ಳೆಯ ಆಕರಗ್ರಂಥವೇ ಹೊರತು ಸಾಧನೆಗಳ ವ್ಯವಸ್ಥಿತ ಅಧ್ಯಯನವಲ್ಲ. ಅದು ಸಂಪಾದಕರ ಉದ್ದೇಶವೂ ಅಲ್ಲ. ಕರ್ನಾಟಕದ ಯಾವುದೇ ವ್ಯಕ್ತಿಯ ಬಗ್ಗೆ ಇಂಥದೊಂದು ಪುಸ್ತಕ ಬಂದಿಲ್ಲ. ಇದಕ್ಕೆ ಸಂಬಂಧಪಟ್ಟ ಎಲ್ಲರಿಗೂ ಕರ್ನಾಟಕ ಕೃತಜ್ಞವಾಗಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT