ಆಲೂರು ದೊಡ್ಡನಿಂಗಪ್ಪನವರ ಎರಡನೇ ಕಾದಂಬರಿ ‘ಚಂದ್ರನ ಚೂರು’, ಅವರ ಮೊದಲ ಕಾದಂಬರಿಯಾದ ‘ಗಿಣಿ ಬಿಸ್ಕತ್ತು’ ರೀತಿಯಲ್ಲೇ, ಗ್ರಾಮೀಣ ಬದುಕನ್ನು ಜಾತೀಯತೆಯ ನೆಲೆಯಲ್ಲಿ ತಣ್ಣಗೆ ಅನಾವರಣಗೊಳಿಸುವ ವಿಶಿಷ್ಟ ಪ್ರಯತ್ನ.
ಕಥನಕಲೆಯಲ್ಲಿ ಲೇಖಕನಿಗೆ ದೊಡ್ಡ ಸವಾಲುಗಳನ್ನು ಒಡ್ಡುವ ಪ್ರಕಾರ ಕಾದಂಬರಿ. ಪಾತ್ರ, ಸನ್ನಿವೇಶಗಳ ಪರಿಧಿಯೊಳಗೇ ನಿಂತು, ಕತೆಯೊಂದನ್ನು ಅವುಗಳಾಚೆಗೆ ಬಿಡಿಸಿ ಇಡಲು ನಿರೂಪಕನಿಗೆ ಅಪಾರ ತಾಳ್ಮೆ, ಪರಿಶ್ರಮ ಮತ್ತು ಜೀವನದ್ರವ್ಯ ಅತ್ಯಗತ್ಯ. ನಿಂಗಪ್ಪ ಅತ್ತಕಡೆಗೆ ಗಟ್ಟಿಹೆಜ್ಜೆ ಇಟ್ಟಿದ್ದಾರೆ.
ಜಾತೀಯತೆಯಿಂದ ಕಟು ಅವಮಾನಗಳನ್ನು ಖುದ್ದು ಎದುರಿಸಿದ್ದರಿಂದಲೇ, ಈ ಕಾದಂಬರಿ ಬರೆಯಲು ಸಾಧ್ಯವಾಯಿತು ಎಂಬ ಮಾತುಗಳನ್ನು ನಿಂಗಪ್ಪ, ‘ನಾನಿಲ್ಲದೇ ಇರುವ ವಸ್ತು‘ ಎಂಬ ಅವರ ನುಡಿಗಳಲ್ಲಿ ಆಡಿ ತೋರಿದ್ದಾರೆ. ಅದು, ಕಾದಂಬರಿಯ ಓದಿಗೆ ಉತ್ತಮ ಪ್ರವೇಶಿಕೆಯೂ ಆಗಿದೆ. ತ್ಯಾಗ, ಆತನ ತಾಯಿ ದ್ಯಾವಕ್ಕ, ಮಲ್ಲ, ಸಿದ್ದ, ಚಂದ್ರ ಸೇರಿ ಐದಾರು ಪ್ರಮುಖ ಪಾತ್ರಗಳನ್ನೇ ಬಳಸಿ, ಎರಡನೇ ಕಾದಂಬರಿಯಲ್ಲಿ ಹೈಜಂಪ್ ಮಾಡಿದ್ದಾರೆ.
ದೊಡ್ಡವರೊಂದಿಗೆ ಮಕ್ಕಳು, ಪ್ರಾಣಿ, ಪಕ್ಷಿಗಳೂ ಇಲ್ಲಿ ಪಾತ್ರಗಳಾಗಿ ಜೀವಿಸಿರುವುದು ವಿಶೇಷ. ಒಟ್ಟಾರೆ ಪ್ರಕೃತಿ ಮತ್ತು ಗ್ರಾಮೀಣ ಪರಿಸರ ಎರಡೂ ಜಾತೀಯತೆಯ ವಿಷಮತೆಯನ್ನು ಬಿಚ್ಚಿಡುವುದಕ್ಕಾಗಿಯೇ ಬಳಕೆಯಾಗಿರುವುದು ನಿಚ್ಚಳವಾಗಿ ತೋರುತ್ತದೆ.
‘ಕುಲೆಂಟು ಜಾತಿಗಳಿರುವ ಈ ಊರಲ್ಲಿ ಸುಮಾರು ನೂರೈವತ್ತು ಮನೆಗಳಿವೆ. ಮುಂದೆ ಮುಂದೆ ಮಕ್ಕಳು ಮರಿ ಬೆಳೆದಂತೆಲ್ಲ ಮನೆಗಳೂ ಹೆಚ್ಚಿ ಈಗ ಊರು ದೊಡ್ಡದಾಗಿ ಊರ ಹೊರಗಿದ್ದ ಕಾಲೊನಿ ಊರ ಮಧ್ಯ ಸೇರಿಕೊಂಡು ಹೊರ ಊರ ಜನರ ಕಣ್ಣಲ್ಲಿ ಹೊಲೆ ಮಾದಿಗರನ್ನ ಊರ ಮಧ್ಯ ಇಟ್ಟುಕೊಂಡಿರುವ ಆದರ್ಶ ಊರಾಗಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ’
–ಹೀಗೆ ವ್ಯಂಗ್ಯದಿಂದ ಶುರುವಾಗುವ ಕಾದಂಬರಿಯು, ಜಾತಿ ಪದ್ಧತಿಗೆ ಜೀವ ತೇಯುವ, ಜೀವವನ್ನೇ ಬಿಟ್ಟುಕೊಡುವ ಪಾತ್ರಗಳನ್ನು 126 ಪುಟಗಳಲ್ಲಿ ನಿರುದ್ವಿಗ್ನವಾಗಿ ಪೋಣಿಸಿ, ವಿಷಾದ ಜಿನುಗಿಸುತ್ತದೆ. ಅದಕ್ಕೆ, ‘ಚಂದ್ರನ ಚೂರು’ ಎಂಬ ರೂಪಕವೂ ಸಾಕ್ಷಿಯಾಗಿ ನಿಲ್ಲುತ್ತದೆ.
ಚಂದ್ರನ ಚೂರು
ಲೇ: ಆಲೂರು ದೊಡ್ಡನಿಂಗಪ್ಪ
ಪ‍್ರ: ಪಂಪ ಸಾಂಸ್ಕೃತಿಕ ವೇದಿಕೆ
ಸಂ: 9632475625
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.