ಶುಕ್ರವಾರ, 23 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಸ್ಫೋಟಕಗುಣದ ಕಾಡುವ ಕಥಾಜಗತ್ತು

ಗೌರಿ
Published 13 ಜನವರಿ 2024, 23:30 IST
Last Updated 13 ಜನವರಿ 2024, 23:30 IST
ಅಕ್ಷರ ಗಾತ್ರ

ಬಾಬುಬಾವ್‌ ಬಾಗುಲ್‌ ಅವರ ‘ವೆನ್ ಐ ಹಿಡ್ ಮೈ ಕ್ಯಾಸ್ಟ್‌’ ಎಂಬ ಸಂಕಲನವನ್ನು ಕನ್ನಡಕ್ಕೆ ಅನುವಾದಿಸಿರುವುದು. ಸರಸ್ವತಿ ಅವರು ತಮ್ಮ ಮಾತುಗಳಿಗೆ ಕೊಟ್ಟಿರುವ ಶೀರ್ಷಿಕೆ ‘ನರನಾಡಿಗಳಲಿ ತಲ್ಲಣ ಹುಟ್ಟಿಸುವ ಕತೆಗಳು’ ಎಂದು. ಅವರ ಮಾತುಗಳಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ ಎಂಬುದನ್ನು ಇಲ್ಲಿನ ಒಂದೊಂದು ಕಥೆಯೂ ಸಾಬೀತುಮಾಡುತ್ತದೆ. ಕಥೆಗಳ ಹೆಸರಿನಲ್ಲಿ ಹತ್ತು ನಿಗಿನಿಗಿ ಕೆಂಡದುಂಡೆಗಳನ್ನು ಹೊತ್ತು ಈ ಪುಸ್ತಕ ಕನ್ನಡಕ್ಕೆ ಬಂದಿದೆ.

ಸಾಮಾಜಿಕ ಅನಿಷ್ಟಗಳ ಬಗ್ಗೆ ವಾಚ್ಯವಾಗಿ ಮಾತಾಡುವುದೇ ಸಾಹಿತ್ಯದ ಪ್ರಧಾನ ಉದ್ದೇಶವಲ್ಲ. ಅಂಥ ಅನಿಷ್ಟಗಳ ನಡುವೆಯೇ ಬದುಕುತ್ತಿರುವ ಮನುಷ್ಯ ಬದುಕಿನ ಪಾಡನ್ನು ಮನಗಾಣಿಸುವ ಕೆಲಸವನ್ನು ಸಾಹಿತ್ಯ ಮಾಡುತ್ತದೆ. ಬರಿ ಮಾತುಗಳಿಂದ, ಭಾಷಣಗಳಿಂದ ಮುಟ್ಟಲಾಗದ ಮನುಷ್ಯನ ಮನಸ್ಸಿನ ಮೂಲೆಗಳನ್ನು ಕಲೆ-ಸಾಹಿತ್ಯಗಳಂಥ ಸೃಜನಶೀಲ ಕೃತಿಗಳು ಮುಟ್ಟಲು ಸಾಧ್ಯವಾಗುವುದು ಅವುಗಳ ಪರೋಕ್ಷಗುಣದಿಂದ ಸಿಗುವ ಧ್ವನಿಶಕ್ತಿಯಿಂದಲೇ. ಅಂಥ ಆಳವಾದ ಧ್ವನಿಶಕ್ತಿಯನ್ನು ಹೊಂದಿರುವ, ನಮ್ಮನ್ನು ಅಲ್ಲಾಡಿಸುವ, ದಿಕ್ಕೆಡಿಸುವ ಹಲವು ಕಥೆಗಳು ಈ ಸಂಕಲನದಲ್ಲಿವೆ.

‘ಇವು ಏನು ಹೇಳುತ್ತವೆ’ ಎಂಬ ಮೇಲುಮೇಲಿನ ಸರಳ ಪ್ರಶ್ನೆಯ ಮೂಲಕ ಈ ಕಥೆಗಳನ್ನು ಎದುರುಗೊಳ್ಳಲು ಸಾಧ್ಯವೇ ಇಲ್ಲ. ನಮ್ಮ ಪೂರ್ವಗ್ರಹದ ಹತ್ಯಾರಗಳನ್ನು ಹಿಡಿದುಕೊಂಡು ಈ ಜಗತ್ತಿನೊಳಗೆ ಹೊಕ್ಕರೆ ಚೀಲ ಹಿಡಿದುಕೊಂಡು ಹಾಲು ತರಲು ಹೋದಂತೆ ಕಕ್ಕಾವಿಕ್ಕಿಯಾಗಬೇಕಾಗುತ್ತದೆ. ಈ ಕಥೆಗಳು, ನಮ್ಮ ಸಿದ್ಧಾಂತಕ್ಕೆ ಒಗ್ಗುವ, ನಮಗೆ ಜಗಿಯಲು, ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಲು ಬೇಕಾಗಿರುವ ಏನೋ ಒಂದನ್ನು ಖಂಡಿತ ಹೇಳುವುದಿಲ್ಲ. ಓದಿಗೆ ತೊಡಗಿಕೊಂಡ ಹಾಗೆ ಸುರಸುರನೇ ಹೊತ್ತಿಕೊಂಡು ಮನಸೊಳಗೆ ಸ್ಫೋಟಗೊಳ್ಳುತ್ತವೆ. ಆ ಆಸ್ಫೋಟದ ಅನುಭವಕ್ಕೆ ಇರುವುದು ಒಂದು ಬಣ್ಣ, ಒಂದು ಮಂತ್ರ, ಒಂದು ಮೆಸೇಜು ಅಲ್ಲವೇ ಅಲ್ಲ. ಅದು ತುಂಬ ಸಂಕೀರ್ಣವಾದದ್ದು. ಅದು ಕುದಿಯುತ್ತಿರುವ ಅಧೋಲೋಕದ ಹಸಿಹಸಿ ತುಣುಕು. ಆ ತುಣುಕಿನ ವಾಸನೆ, ನೆತ್ತರು, ಮಾಂಸಲ ಭಾಗಗಳನ್ನು ಈ ಕಥೆಗಳನ್ನು ಓದುತ್ತೋದುತ್ತ ನಾವು ಮುಟ್ಟುತ್ತೇವೆ, ಮೂಸುತ್ತೇವೆ. ನಮ್ಮ ರಕ್ತದೊಳಕ್ಕೆ ಸೇರಿಹೋಗುವ ಹಾಗೆ ಸೇವಿಸುತ್ತೇವೆ. ನಮ್ಮೊಳಗಿನ ಶಾಂತಸರೋವರವನ್ನು, ಛಿದ್ರ ಛಿದ್ರಗೊಳಿಸುವ ಶಕ್ತಿ ಆ ಆಸ್ಫೋಟಕ್ಕೆ ಇದೆ.

ಮೊದಲ ಕಥೆಯೇ ಬಾಬುರಾವ್ ಅವರ ಕಥನಶಕ್ತಿಗೆ ಸಮರ್ಥವಾದ ಉದಾಹರಣೆ. ಪುರುಷ ಸಮಾಜದೊಳಗಿನ ವಿಕೃತವಿಷವನ್ನು, ಅದು ಹೆಣ್ಣನ್ನು ನೋಡುವ ಕ್ರಮವನ್ನು ಈ ಕಥೆ ಹಲವು ಪದರಗಳಲ್ಲಿ ಹಸಿಹಸಿಯಾಗಿ ಬಿಚ್ಚಿಡುತ್ತ ಹೋಗುತ್ತದೆ. ಈ ಕಥೆಯನ್ನು ಹೇಳಿದರೆ ಏನೂ ಹೇಳಿದಂತಾಗುವುದಿಲ್ಲ. ಯಾಕೆಂದರೆ ಇಲ್ಲಿನ ಕಥೆಗಳ ಶಕ್ತಿ ಇರುವುದು ಕಥೆಯ ‘ಒನ್‌ಲೈನ್‌’ಗಳಲ್ಲಲ್ಲ. ಬದಲಿಗೆ ಅದನ್ನು ಸಂಕೀರ್ಣವಾದ ಅಷ್ಟೇ ದಟ್ಟವಾದ ಅನುಭವವಾಗಿ ಕಟ್ಟಿದ ಕಥನಕ್ರಮದಲ್ಲಿ, ಭಾಷೆಯ ಬಳಕೆಯಲ್ಲಿ. ಅದರಲ್ಲಿಯೂ ‘ಕತ್ತಲ ಬಂಧಿ’ ಕಥೆಯಲ್ಲಿ ಬಳಕೆಯಾದ ಭಾಷೆಯಂತೂ ಇನ್ನೂ ವಿಶೇಷವಾದದ್ದು. ವಿವರಗಳನ್ನು ಹೇಳುವ ಕ್ರಮದಲ್ಲಿಯೇ ವಾತಾವರಣವನ್ನೂ, ವ್ಯಕ್ತಿತ್ವಗಳನ್ನೂ ನಮ್ಮ ಮನಸಲ್ಲಿ ಕಡೆದಿಟ್ಟುಬಿಡುತ್ತಾರೆ ಬಾಬುರಾವ್. ‘ವೈರಿಯನ್ನು ತಿವಿಯಲು ಎಮ್ಮೆ ತನ್ನ ಕೋಡನ್ನು ಬಗ್ಗಿಸುವಂತೆ, ಅವನು ತನ್ನ ತಲೆಯನ್ನು ಮುಂಚಾಚಿದ. ಕೊಲೆ ಮಾಡಬೇಕೆಂಬ ಇಚ್ಛೆ ಅವನ ಮೈಗೊಂದು ಹೊಸ ಆವೇಗವನ್ನು ನೀಡಿತು. ನರಗಳು ಅವನ ತೊಗಲಿನೊಳಗೆ ಸಿಲುಕಿಕೊಂಡ ಹಾವುಗಳಂತೆ ನುಲಿದವು’- ಇಂಥ ಮೈ ಜುಮ್ ಅನ್ನಿಸುವ ವಿವರಗಳು ಓದುಗನನ್ನು ಚಕಿತಗೊಳಿಸಬೇಕೆಂಬ ಆಮಿಷದಿಂದ ಹುಟ್ಟಿದ್ದಲ್ಲ, ಬದಲಿಗೆ ಕಥನಕ್ರಮದ ಅಂತರ್ಗತ ಅಗತ್ಯವಾಗಿ ಬೆಳೆದಿದ್ದು ಎನ್ನುವುದನ್ನು ಗಮನಿಸಬೇಕು.

‘ಹಿತವಾದ, ಸುಂದರ, ಎಳೆ ಹರೆಯದ ಬೆನ್ನಿಗೆ ಜಾಡಿಸಿ ಒದೆಯಬೇಕು; ಮೊಣಕಾಲುದ್ದದ, ರೇಷಿಮೆ ನುಣುಪಿನ ಕಪ್ಪು ಕೂದಲನ್ನು ಸುತ್ತಿಡಿದು ಪ್ರಜ್ಞೆ ತಪ್ಪುವಂತೆ ಎಳೆದಾಡಬೇಕೆಂಬ ಆಸೆಯಿಂದ ಅವನ ಕೈ ತುರಿಸತೊಡಗಿತು. ಅವಳ ಮೇಲೆ ಎಷ್ಟೊತ್ತಿಗೆ ಕೈ ಮಾಡುವೆನು ಎಂಬ ಧಾವಂತದಿಂದ ನಡೆಯುವುದೇ ಯಾತನೆ ಎನಿಸತೊಡಗಿತವನಿಗೆ.’– ಇವು ದೇವರಾಯನೊಳಗೆ ಕ್ರೋಧವನ್ನಷ್ಟೇ ಹೇಳುತ್ತದೆಯೇ? ಖಂಡಿತ ಇಲ್ಲ. ಅದು ಅವನೊಳಗಿನ ಕಾಮವನ್ನೂ ಕಾಣಿಸುತ್ತಿದೆ. ಇದೇ ದೇವರಾಯ ಮುಂದೆ ತನ್ನ ತಂದೆಯ ಜೊತೆಗಿದ್ದ ಬಾನುವಿನ ಮೇಲೆ ಸಾರ್ವಜನಿಕವಾಗಿ ಅತ್ಯಾಚಾರ ಮಾಡಲು ಮುಂದಾಗುತ್ತಾನೆ.

ನಿರ್ಣಯಗಳನ್ನು ಕೊಡುವುದರಲ್ಲಿ, ಹುಸಿ ಆಶಾವಾದಗಳಲ್ಲಿ ಮೈಮರೆಯುವುದರಲ್ಲಿ ಬಾಬುರಾವ್ ಅವರಿಗೆ ಆಸಕ್ತಿಯಿಲ್ಲ. ವಾಸ್ತವವವನ್ನು ದಟ್ಟವಾಗಿ ಕಟ್ಟಿಕೊಡುವುದರ ಮೂಲಕವೇ ನಮ್ಮ ಮನಸ್ಸನ್ನು ಕಂಗೆಡಿಸುವ, ಕಂಫರ್ಟ್‌ ಜೋನ್‌ನ್ನು ಕುಟ್ಟಿ ಕೆಡವುದರ ಮೂಲಕವೇ ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳುವಂತೆ ಒತ್ತಾಯಿಸುವ ಕೆಲಸವನ್ನು ಅವರ ಬಹುತೇಕ ಕಥೆಗಳು ಮಾಡುತ್ತವೆ.

‘ನಮ್ಗೆ ಹಾಡು, ಅದೂ ನರಸಿಮ್ಮನ್ ಹಾಡು ಕೊಡ್ಬೇಕು!’ ಎಂದು ಶುರುವಾಗುವ ‘ಬೋಹಡ’ ಎಂಬ ಹೆಸರಿನ ಕಥೆ ಹೊಲೆಯ ಸಮುದಾಯದವರು ನರಸಿಮ್ಮನ ಹಾಡಿನ ರೂಪದಲ್ಲಿ ತಮ್ಮ ಅಸ್ಮಿತೆಯನ್ನು, ಆತ್ಮಗೌರವವನ್ನು ಹಕ್ಕಿನಿಂದ ಕೇಳಿ ಪಡೆದುಕೊಳ್ಳುವುದನ್ನು ಚಿತ್ರಿಸುತ್ತದೆ. ಆದರೆ ಹಾಡು ಪಡೆದುಕೊಂಡಾಕ್ಷಣ ಎಲ್ಲ ಸರಿಹೋಗಿಲ್ಲ. ಆದರೆ ಅದರಿಂದ ಹೊಲೆಯರ ಮನಸ್ಸಿನಲ್ಲಿ ಬೆಳೆದ ಆತ್ಮವಿಶ್ವಾಸದ ಚಿಗುರೂ ಸಣ್ಣದಲ್ಲ. ಈ ಕಥೆಯ ಕೊನೆಯಲ್ಲಿ ಪಾಟೀಲ, ‘ಇನ್ ಯಾವ ಬೊಹಡನೂ ಇಟ್ಕೋಬಾರ್ದು’ ಎಂದುಕೊಳ್ಳುತ್ತಾನೆ. ಆದರೆ ಹೊಲೆಯರೆಲ್ಲ, ‘ಮುಂದಿನ್ವರ್ಷ ಪಂಚಪಾಂಡವರ ಕುಣ್ತ ಮಾಡೋಣ, ಕೊಂದಾಕ್ತಾರಾ ನಾಶ ಮಾಡ್ತಾರ ನೋಡೇ ಬಿಡನ. ಎಲ್ಲ ಒಂದೆ ನಮ್ಗೆ’ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಈ ಎರಡು ಧ್ರುವಗಳನ್ನು ನಮ್ಮೆದುರಿಗಿಟ್ಟು ಈ ಕಥೆ ಮುಗಿಯುತ್ತದೆ.

‘ದಸ್ರಾ ಬಲಿ’ಯಲ್ಲಿನ ಕೋಣಬಲಿಯ ಚಿತ್ರಣ ನಿಜಕ್ಕೂ ಬೆಚ್ಚಿ ಬೀಳಿಸುವಂಥದ್ದು. ಇದರಲ್ಲಿ ಕುದುರೆಯ ಮೇಲೆ ಕೂತು ಮೆರೆಯುವ ಪುಕ್ಕಲು ಪಾಟೀಲ ಇದ್ದಾನೆ. ಊರ ಮರ್ಯಾದೆಗಾಗಿ ಪ್ರಾಣವನ್ನೂ ಪಣಕ್ಕಿಡುವ ದೇವ, ಶಿವ, ಹರಿಯಂಥ ಹೊಲೆಯರಿದ್ದಾರೆ. ನಾಲ್ಕು ಜನ ಹೊಲೆಯರು ಕಟ್ಟಿ ಹಿಡಿದಾಗ ಕೊಣನ ಕಿವಿ, ಬಾಲಗಳನ್ನು ಕತ್ತರಿಸಿ ಪೌರುಷ ಮೆರೆಯುವ ಪಾಟೀಲ, ಆ ಕೋಣವನ್ನು ಹಿಡಿದು ನಿಲ್ಲಿಸಲು ಹೋಗಿ ಪ್ರಾಣಾಪಾಯಕ್ಕೊಳಗಾಗಿರುವ ಹೊಲೆಯ ಹರಿಯ ರಕ್ತಸಿಕ್ತ ದೇಹವನ್ನು ಅವನ ಎದುರಿಗೆ ತಂದಾಗ, ‘ಅರೆ ಇಲ್ಲಲ್ಲ…’ ಎಂದು ಹೇಳಿ ಕೋಣವನ್ನು ದೇವಸ್ಥಾನಕ್ಕೆ ತಂದಿದ್ದ ಹರಿಯನ್ನು ದೇವಸ್ಥಾನದೊಳಗೆ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಕಥೆಯ ಕೊನೆಯಲ್ಲಿ ಪಾಟೀಲ, ಸಾವನ್ನು ಎದುರಿಸಿ, ಗೆದ್ದು ಬಂದೆನೆಂದು ಬೀಗುವ ಭಂಗಿಯಲ್ಲಿ ನಿಲ್ಲುತ್ತಾನೆ. ಮುಂಡೆಯಾಗುವ ಭೀತಿ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡು ಬಂದ ಹೆಂಡತಿಯು, ಗಂಡ ದೇವನ ನೋಡಿ ಹೆಂಡತಿ ಕಣ್ಣೀರು ಒರೆಸಿಕೊಳ್ಳುತ್ತಾಳೆ. ಕಥೆಯೊಳಗೆ ಎಲ್ಲಿಯೂ ತಾರತಮ್ಯದ ಬಗೆಗಾಗಲಿ, ಜಾತಿ ವ್ಯವಸ್ಥೆಯ ಕ್ರೌರ್ಯದ ಬಗೆಗಾಗಲಿ ವಾಚ್ಯವಾಗಿ ಹೇಳದ ಕಥೆಗಾರರು ಇಡೀ ಕಥೆಯ ಮೂಲಕ ಹೊಲೆಯರು ಪಾಟೀಲನ ಗೆಲುವಿಗಾಗಿ ಹೊಲೆಯರನ್ನು ‘ಬಲಿ’ ಹಾಕುವ ಸಮಾಜವ್ಯವಸ್ಥೆಯ ಕುರಿತು ವಿಷಾದವೂ ಅಸಹ್ಯವೂ ಹುಟ್ಟುವಂತೆ ಮಾಡುತ್ತಾರೆ.

‘ದಂಗೆ’ ಕಥೆಯಲ್ಲಿನ ಚಿತ್ರಕಶಕ್ತಿ ದಿಗಿಲುಬೀಳಿಸುವಂಥದ್ದು. ತನ್ನ ಮಗನಿಗೊಂದು ಕೆಲಸ ಕೊಡಿ ಎಂಬ ಪ್ರಭುವಿನ ಮನವಿಗೆ ಎರಡು ವರ್ಷಗಳ ನಂತರ ಉತ್ತರ ಬಂದಿದೆ. ಕೆಲಸ ಎಂದರೆ ಭಂಗಿ ಕೆಲಸ. ಆದರೆ ಮೆಟ್ರಿಕ್ಯುಲೇಷನ್ ಓದುತ್ತಿರುವ ಜೈ, ನಾನು ಭಂಗಿ ಕೆಲಸ ಮಾಡಲಾರೆ ಎಂದು ಖಡಾಖಂಡಿತವಾಗಿ ಹೇಳಿದ್ದಾನೆ. ವಿದ್ಯೆಯಿಂದ ದೊರೆತ ಸ್ವಾಭಿಮಾನ, ಅರಿವನ್ನು ಪಕ್ಕಕ್ಕಿಟ್ಟು ಕೊನೆಗೂ ಜೈ ಭಂಗಿ ಕೆಲಸಕ್ಕೆ ಹೋಗಬೇಕಾಗುತ್ತದೆ. ಅಲ್ಲಿನ ಪರಿಸರದ ವಿವರಗಳು ಹೀಗಿವೆ: ‘ಒಟ್ಟಿ ಅಲ್ಲಿ ಮೂವತ್ತೆರಡು ಪಾಯಖಾನೆಗಳಿದ್ದವು. ಒಂದೊಂದೂ ಹೇಲಿನಿಂದ ತುಂಬಿತ್ತು, ಕೆಲವುದರಲ್ಲಿ ತುಂಬಿ ಸುರಿದು ಕೊಳೆತು ನಾರುತ್ತಿತ್ತು, ಅದರೊಳಗೆ ಹುಳಹಳು ಹರಿದಾಡುತ್ತಿದ್ದವು, ನೊಣ ಮುತ್ತುತ್ತಿದ್ದವು. ಒಂದೆರಡರೊಳಗೆ ರಕ್ತದ ಬಟ್ಟೆಗಳಿದ್ದವು, ಬಳಸಿದ ಹತ್ತಿ ಉಂಡೆಗಳು, ಬ್ಯಾಂಡೇಜು, ತಂತಿ ಜಾಲರಿ ತುಂಡಗಳಿದ್ದವು. …. ಶಸ್ತ್ರಾಸ್ತ್ರಗಳನ್ನು ಹಿಡಿದ ಶತ್ರುಗಳಿಂದ ಸುತ್ತುವರೆದಿರುವ ಚಕ್ರವ್ಯೂಹದೊಳಗಿನ ಅಭಿಮನ್ಯುವಿನಂತೆ ಅವನಿದ್ದ.’

ಒಂದು ಸಾಲಿನಲ್ಲಿ ಬಂದುಹೋಗುವ ಮಹಾಭಾರತದ ಬಹು ಉಜ್ವಲ ಪಾತ್ರವಾದ ಅಭಿಮನ್ಯುವಿನ ಉಲ್ಲೇಖ ಉಂಟುಮಾಡುವ ಆಘಾತ ಇಡೀ ಕಥೆಯನ್ನೇ ಬೆಳಗಿಸುವಂಥದ್ದು. ಆ ಉಲ್ಲೇಖದ ಪೊಸಿಷನಿಂಗ್‌ ಅನ್ನುವುದೇ ಒಂದು ಸ್ಟೇಟ್‌ಮೆಂಟ್ ಕೂಡ ಆಗಿ ಕಾಡುತ್ತದೆ. ಈ ಕಥೆಯ ಕೊನೆಯಲ್ಲಿ ಜೈ, ತನ್ನದೇ ಸಮುದಾಯದ ಡ್ರೈವರ್‌ನನ್ನು ಬಡಿದು ಕೊಲ್ಲುತ್ತಾನೆ. ಆ ಕಥೆ ಕೊನೆಗೊಳ್ಳುವುದು ಹೀಗೆ: ‘ಜನರು ನಿಂತು ನೋಡುತ್ತಿದ್ದರು. ಆದರೆ ಯಾರಿಗೂ ಜೈ ಒಳಗೆ ಸುಡುತ್ತಿದ್ದ ದಂಗೆಯ ಉರಿ ತಟ್ಟಲೇ ಇಲ್ಲ. ಅರಿವಾಗುವ ದಾರಿಯೂ ಅವರಿಗಿರಲಿಲ್ಲ, ಯಾಕೆಂದರೆ ಅವರ ಮನಸ್ಸುಗಳನ್ನು ಮನು ಎಂದೋ ಕೊಲೆ ಮಾಡಿದ್ದ.’ ಕಥೆಯೊಳಗಿನ ಸತ್ತಂತಿಹ ಜನರಿಗೆ ಯಾವುದು ತಟ್ಟುವುದೋ ಬಿಡುವುದೋ, ಈ ಕಥೆಯನ್ನು ಓದಿದವರಿಗೆ ಮಾತ್ರ ಜೈ ಒಳಗಿನ ದಂಗೆಯ ಉರಿಯಿಂದ ಬಿಡುಗಡೆ ಸುಲಭಸಾಧ್ಯವಲ್ಲ.

ಈ ಸಂಕಲನದ ಎಲ್ಲ ಕಥೆಗಳ ಹೆಸರೂ ಧ್ವನಿಪೂರ್ಣವಾಗಿವೆ, ಕಾವ್ಯಾತ್ಮಕವಾಗಿವೆ. ಆದರೆ ಕೊನೆಯ ಕಥೆ ‘ನನ್ನ ಜಾತಿಯನ್ನು ಮುಚ್ಚಿಟ್ಟಾಗ’ ಮಾತ್ರ ತುಸು ವಾಚ್ಯವಾಗಿ ಕಾಣಿಸುತ್ತದೆ. ಸಂಕಲನದ ಉಳಿದ ಎಲ್ಲ ಕಥೆಗಳಿಗಿಂತಲೂ ಇದರ ಜಾಡು ಭಿನ್ನವಾಗಿದೆ; ತುಸು ನೇರವಾಗಿಯೇ ಇದೆ. ಆದರೆ ನಮ್ಮ ಸೋ ಕಾಲ್ಡ್‌ ನಾಗರಿಕ ಸಮಾಜದ ಪ್ರಿವಿಲೈಜ್ಡ್‌ ವರ್ಗ ಜಾತಿಯಂಥ ವಿಷಯಗಳ ಬಗ್ಗೆ ಮಾತಾಡಲು ಒಂದು ಪರೋಕ್ಷಭಾಷೆಯನ್ನು ರೂಪಿಸಿಕೊಂಡಿರುತ್ತದೆ. ಆ ಭಾಷೆ ಆಡುತ್ತಿರುವುದೇ ಒಂದು, ಅದರ ಹಿಂದಿನ ಅರ್ಥವೇ ಇನ್ನೊಂದಾಗಿರುತ್ತದೆ. ಅಂಥ ಭಾಷೆಯನ್ನೇ, ತನ್ನ ಜಾತಿಯನ್ನು ಅಡಗಿಸಿಡಲು ಬಳಸಿಕೊಳ್ಳುವಂಥ ವಿಚಿತ್ರವಾದ ಕಥನ ಈ ಕಥೆಯಲ್ಲಿದೆ. ಇಲ್ಲಿನ ಕಥಾನಾಯಕ ತನ್ನ ಜಾತಿಯ ಬಗ್ಗೆ ಹೇಳಬೇಕಾದ ಪ್ರಸಂಗದಲ್ಲೆಲ್ಲ ‘ಪ್ರಗತಿಪರ’ವಾಗಿ, ಕಾವ್ಯಾತ್ಮಕವಾಗಿ ಮಾತಾಡಿಬಿಡುತ್ತಾನೆ. ಅದನ್ನು ಕೇಳಿ ಎದುರಿನವರು ಇವನು ಮೇಲುಜಾತಿಯವನೇ ಇರಬೇಕು ಎಂದು ಅಂದುಕೊಂಡುಬಿಡುತ್ತಾನೆ. ಅವನದೇ ಆಫೀಸಿನಲ್ಲಿ ಕೆಲಸ ಮಾಡುವ ಕಾಶಿನಾಥ ಈ ಜಾತಿ ತಾರತಮ್ಯವನ್ನು ಮುಖಾಮುಖಿಯಾಗಿ ಖಂಡಿಸುವಂಥವನು. ಸ್ವಾಭಿಮಾನದಿಂದಲೇ ಎದುರುಗೊಳ್ಳುವವನು. ಜಾತಿಯನ್ನು ಎದುರಿಸುವ ಎರಡು ಮನಸ್ಥಿತಿಗಳನ್ನು ಹೇಳುತ್ತಲೇ ಈ ಕಥೆ, ಶಿಕ್ಷಣದಿಂದ ಜಾತಿನಿರ್ಮೂಲನೆ ಸಾಧ್ಯ ಎಂಬ ವಾದದ ಪೊಳ್ಳುತನವನ್ನೂ ಬಿಚ್ಚಿಡುತ್ತದೆ. ಆದರೆ ಕತ್ತಲಬಂಧಿ ಬೋಹಡ, ದಸ್ರಾ ಬಲಿ ಕಥೆಗಳಲ್ಲಿ ಸಿಗುವ ಗಾಢವಾದ ಅನುಭವ ಈ ಕಥೆಯಲ್ಲಿ ಕಾಣಿಸುವುದಿಲ್ಲ. ಅನುವಾದವೂ ಉಳಿದ ಕಥೆಗಳಿಗೆ ಹೋಲಿಸಿದರೆ ತುಸು ಪೆಡಸಾಗಿದೆ.

ಹೆಣ್ಣಿನ ದೇಹಕ್ಕಾಗಿ ಹಪಹಪಿಸುವ, ಅದಕ್ಕಾಗಿ ಎಂಥ ಲಜ್ಜೆಗೆಡುವ ಸ್ಥಿತಿಗಾದರೂ ಇಳಿಯುವ ಪುರುಷ ಸಮಾಜದ ಮನಸ್ಥಿತಿಯನ್ನೂ, ಹೊಟ್ಟೆಪಾಡಿಗಾಗಿ ಅದನ್ನೇ ಬಂಡವಾಳವಾಗಿಸಿಕೊಳ್ಳಬೇಕಾದ ಹೆಣ್ಣಿನ ದುರ್ಬರ ಸ್ಥಿತಿಯನ್ನೂ ಕಟ್ಟಿಕೊಡುವ ಕಥೆ ‘ಪೈಪೋಟಿ’. ಈ ಕಥೆಯ ಅಂತ್ಯದಲ್ಲಿ ಚಿಮ್ಮುವ ಮಾನವೀಯತೆಯ ಕಣ್ಣು ಎಂಥ ಕಠೋರ ಎದೆಯನ್ನೂ ಹಸಿಗೊಳಿಸುವಂಥದ್ದು. ‘ಬೀದಿ ಹೆಣ್ಣು’ ವೇಶ್ಯೆಯೊಬ್ಬಳ ದಾರುಣ ಬದುಕನ್ನು ಮನಕಲಕುವಂತೆ ಕಟ್ಟಿಕೊಡುವ ಕಥೆ. ಕ್ರೂರ ದರೋಡೆಕೋರನೊಬ್ಬ ಹಿಡಿ ಪ್ರೀತಿಗಾಗಿ ಹಂಬಲಿಸುವ ಕಥೆ ‘ದರೋಡೆಕೋರ. ಈ ಎಲ್ಲ ಕಥೆಗಳೂ ಒಂದಿಲ್ಲೊಂದು ಬಗೆಯಲ್ಲಿ ಧ್ವನಿ ಕಳೆದುಕೊಂಡು ಪರಿತಪಿಸುತ್ತಿರುವ ಜನರ ಧ್ವನಿಯನ್ನು ಮೈನಡುಗುವ ರೀತಿಯಲ್ಲಿ ಹಿಡಿದಿಡುತ್ತವೆ. ಇಲ್ಲಿನ ಕಥೆಗಳಲ್ಲಿ ‘ದಯವಿಟ್ಟು ನೀವು ನಮ್ಮನ್ನು ಅರ್ಥ ಮಾಡಿಕೊಳ್ಳಿ’ ಎಂಬ ಅಂಗಲಾಚುವಿಕೆ, ಹಳಹಳಿಕೆ ಇಲ್ಲ. ‘ಇಂಥದ್ದೊಂದು ಸಮಾಜವ್ಯವಸ್ಥೆಯನ್ನು ಕಟ್ಟಿದ ನಿಮ್ಮ ಹೀನಗುಣವನ್ನು ಅರಿತುಕೊಳ್ಳಿ’ ಎಂಬ ದಿಟ್ಟಧ್ವನಿಯಿದೆ. ಈ ದಿಟ್ಟತನವೇ ಈ ಕಥೆಗಳಿಗೆ ಗುಡುಗಿನಂಥಶಕ್ತಿಯನ್ನು ನೀಡಿದೆ.

ಇವುಗಳನ್ನು ಅನುವಾದ ಎನ್ನುವುದಕ್ಕಿಂತ ಕನ್ನಡದಲ್ಲಿ ಮರುಹುಟ್ಟು ಪಡೆದ ಕಥೆಗಳು ಎಂದರೇ ಸರಿಯಾದೀತೇನೋ. ಅಷ್ಟು ಸಶಕ್ತವಾಗಿ ದು. ಸರಸ್ವತಿ ಕನ್ನಡಿಸಿದ್ದಾರೆ. ಈ ಕಥಾಜಗತ್ತಿನ ಅನುಭವವನ್ನು ಮುಖಪುಟ (ಬಿ. ದೇವರಾಜ) ಮತ್ತು ಒಳಪುಟಗಳಲ್ಲಿನ (ವಿ.ಎಂ. ಮಂಜುನಾಥ) ಚಿತ್ರಗಳು ಇನ್ನಷ್ಟು ಗಾಢಗೊಳಿಸುವಂತಿವೆ. ‘ವೆನ್ ಐ ಹಿಡ್ ಮೈ ಕ್ಯಾಸ್ಟ್’ ಎಂಬ ಪುಸ್ತಕದ ಶೀರ್ಷಿಕೆಯನ್ನು ‘ಬೀದಿ ಹೆಣ್ಣು’ ಎಂದು ಕನ್ನಡದಲ್ಲಿ ಬದಲಾಯಿಸಲು ಬಲವಾದ ಕಾರಣಗಳು ಪುಸ್ತಕದೊಳಗಂತೂ ಕಾಣಿಸುವುದಿಲ್ಲ. ಹಾಗೆ ನೋಡಿದರೆ ಈ ಎರಡೂ ಕಥೆಗಳೂ ಈ ಸಂಕಲನದ ಅತ್ಯುತ್ತಮ ಕಥೆಗಳೇನಲ್ಲ. ಹಿಂಬದಿ ಪುಟದಲ್ಲಿ ‘ಕತ್ತಲ ಬಂಧಿ’ ಕಥೆಯ ಭಾಗವನ್ನು ಹಾಕಿ, ‘ಬೀದಿ ಹೆಣ್ಣು’ ಕತೆಯಿಂದ ಎಂದು ತಪ್ಪಾಗಿ ಉಲ್ಲೇಖಿಸಲಾಗಿದೆ.

ಇಲ್ಲಿನ ಒಂದು ಕಥೆಯೂ ಇನ್ನೊಂದರಂತಿಲ್ಲ. ಯಾವ ಕಥೆಯೂ ‘ಹೇಳುವ’ ಚಟಕ್ಕೆ ಸಿಲುಕಿಕೊಂಡು ವಾಚ್ಯವಾಗಿಲ್ಲ. ಕಥೆ ಕಲಾತ್ಮಕವಾಗಿಯೂ ಗೆಲ್ಲುವುದು ಈ ಕಥೆಗಾರರಿಗೆ ಎರಡನೇ ಆಯ್ಕೆ ಅಲ್ಲವೇ ಅಲ್ಲ. ಹಾಗಾಗಿಯೇ ಇಲ್ಲಿನ ಕಥೆಗಳು ನಮಗೆ ದಾಟಿಸುವ ಅನುಭವದ ಕಾರಣಕ್ಕಷ್ಟೇ ಅಲ್ಲ, ದಾಟಿಸುವ ರೀತಿಯ ಕಾರಣಕ್ಕೆ, ಕಥನವಿನ್ಯಾಸದ ಕಾರಣಕ್ಕೆ, ಭಾಷೆಯ ಬಳಕೆಯ ಕಾರಣಕ್ಕೆ, ಕಥನಕ್ರಮದ ಕಾರಣಕ್ಕೂ ತುಂಬ ಮುಖ್ಯವಾದವುಗಳಾಗಿವೆ. ಹಾಗಾಗಿ ಇವುಗಳ ಓದು ನೀಡುವ ಗಾಢ ಅನುಭವಕ್ಕಾಗಿಯಷ್ಟೇ ಅಲ್ಲ, ಅಂಥ ಅನುಭವವನ್ನು ದಾಟಿಸುವ ಕಥನಗಾರಿಕೆಯ ಕಲಾತ್ಮಕ ಕೌಶಲಗಳ ಅಧ್ಯಯನಕ್ಕಾಗಿಯೂ ನಮ್ಮ ಕಾಲದ ಕಥೆಗಾರರು ಈ ಕೃತಿಯನ್ನು ಓದಬೇಕು. ಇಂಥ ಪ್ರಭಾವಶಾಲಿ ಕಥೆಗಾರನನ್ನು ಕನ್ನಡಕ್ಕೆ ಪರಿಚಯಿಸಿದ್ದಕ್ಕೆ ದು.ಸರಸ್ವತಿ ಮತ್ತು ಬಹುವಚನ ಪ್ರಕಾಶಕರಿಗೆ ಮೆಚ್ಚುಗೆ ಸಲ್ಲಲೇಬೇಕು.

ಕೃತಿ: ಬೀದಿ ಹೆಣ್ಣು
ಮರಾಠಿ ಮೂಲ: ಬಾಬುರಾವ್ ಬಾಗುಲ್, ಕನ್ನಡಕ್ಕೆ: ದು. ಸರಸ್ವತಿ
ಪುಟ: 133 ಬೆಲೆ: ₹ 200
ಪ್ರಕಾಶನ: ಬಹುವಚನ (ದೂ: 6362588659)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT