ತಾಯಿಯೊಬ್ಬಳ, ಮೊಮ್ಮಕ್ಕಳ ಮುಂದೆ, ಮಕ್ಕಳ ಸಾಹಸ, ಪರಾಕ್ರಮ ಮತ್ತು ಬಾಲ್ಯವನ್ನು ರಸವತ್ತಾಗಿ ಹೇಳುವಂತೆಯೇ ಈ ಪುಸ್ತಕದ ನಿರೂಪಣೆ ಇದೆ. ಪತ್ರಕರ್ತನ ಹೆಂಡ್ತಿಯಾಗಿ ಸಂಸಾರ ನಿಭಾಯಿಸುವುದು ಒಂದು ಕಲೆ ಮತ್ತು ಸವಾಲು ಎಂಬಂತೆ ಅಲ್ಲಲ್ಲಿ ಅವರ ನೆನಪುಗಳು ಧ್ವನಿಸುತ್ತವೆ. ಆದರೆ ಢಾಳಾಗಿ ಕಾಣಿಸಿಕೊಳ್ಳುವುದು, ಎಲ್ಲರಂತಲ್ಲದ ಅಮ್ಮ, ಮಕ್ಕಳನ್ನು ಬೆಳೆಸುವಾಗ ತನ್ನೊಳಗಿನ ಆತಂಕವನ್ನು ಮೀರಿದ ಬಗೆ. ಇಬ್ಬರು ಮಕ್ಕಳನ್ನು ಬೆಳೆಸುವಾಗ ಅವರ ಒಳಜಗಳ, ಯಾರ ಪರವಹಿಸಬೇಕು ಎಂಬುದನ್ನು ಕಣ್ಣಲ್ಲಿಯೇ ಅಳೆಯುವುದು, ಮಕ್ಕಳ ಸ್ನೇಹಿತರಿಗೂ ಅಮ್ಮನಾಗುವ ಬಗೆ ಮೊದಲಾದ ಹೃನ್ಮನ ಸೆಳೆಯುವಂಥ ಸಂಗತಿಗಳು ಇಲ್ಲಿ ದಾಖಲಾಗಿವೆ.