ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ವಿಚಾರ, ಅವರ ಒಲವು–ನಿಲುವುಗಳ ಸೈದ್ಧಾಂತಿಕ ವಿಷಯ ಆಧಾರಿತ ವಿಪುಲ ಸಾಹಿತ್ಯ ಪ್ರಕಟವಾಗಿದೆ. ಕಾವ್ಯ–ಕಥೆಯಂತಹ ಸೃಜನಶೀಲ ಮಾಧ್ಯಮದಲ್ಲಿಯೂ ಅಂಬೇಡ್ಕರ್ ಅನುಸಂಧಾನ ಸಾಕಷ್ಟು ಪ್ರಮಾಣದಲ್ಲಿ ಆಗಿದೆ. ಆದರೆ, ಕಾದಂಬರಿ ಮಾಧ್ಯಮದಲ್ಲಿ ಅದಾಗಿಲ್ಲ. ಪ್ರೊ.ಎಚ್.ಟಿ. ಪೋತೆ ‘ಮಹಾಯಾನ’ದ ಮೂಲಕ ಅಂತಹ ಸಾಧ್ಯತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಕೃತಿಕಾರರು ಈ ಕಥನವನ್ನು ಚಾರಿತ್ರಿಕ ದಾಖಲೆಯಂತೆ ನಿರೂಪಿಸಿಲ್ಲ. ವಸ್ತುವನ್ನು ಕಾವ್ಯಾತ್ಮಕ ಮಾಡುವ ಉದ್ದೇಶವೂ ಅವರಿಗಿಲ್ಲ. ಬಾಬಾಸಾಹೇಬರ ಬದುಕು–ಹೋರಾಟ ಸೃಷ್ಟಿಸಿರುವ ಮನೋತಲ್ಲಣ ಒಂದು ಕಾಲಕ್ಕೆ ಸೀಮಿತವಾಗುವುದಿಲ್ಲ. ಅದು ಅನುದಿನವೂ ಅನುರಣಿಸುತ್ತದೆ. ಅದು ಎದುರಿಸುವ ವೈರುಧ್ಯಗಳಿಗೆ ಲೇಖಕರು ಈ ಕಾದಂಬರಿಯಲ್ಲಿ ಹೊಸದೃಷ್ಟಿಯನ್ನು ಬೀರಿದ್ದಾರೆ.

ಬಾಬಾ ಸಾಹೇಬರ ಸಹಾಯಕ ರತ್ತು ಅನನ್ಯವಾಗಿ ಚಿತ್ರಿತವಾಗಿದ್ದಾರೆ. ‘ಮಹಾಯಾನ’ವನ್ನು ರತ್ತು ದಟ್ಟವಾಗಿ ಆವರಿಸಿದ್ದಾರೆ. ಒಂದು ದಿನ ರಾತ್ರಿ ತಡವಾಗಿ ಮನೆಗೆ ಬರುತ್ತಾರೆ. ಸಹಜವಾಗಿ ಪತ್ನಿ ಅಮೃತಾ ಕೌರ್ ಏಕೆ ತಡ ಎಂದು ಕೇಳುತ್ತಾರೆ. ಆಗ ಸಾಹೇಬರು ‘ಬುದ್ಧ ಮತ್ತು ಧಮ್ಮ’ ಕೃತಿಯನ್ನು ಬರೆದು ಮುಗಿಸಿದ ಸಂಗತಿಯನ್ನೂ ಮತ್ತು ‘ಥಾಟ್ಸ್ ಆನ್ ಪಾಕಿಸ್ತಾನ’ ಕೃತಿಯನ್ನು ರಮಾಬಾಯಿಗೆ ಸಮರ್ಪಿಸಿದ್ದನ್ನು ಹೇಳುತ್ತಾರೆ. ಆಗ ತಾಯಿ ರಮಾಬಾಯಿಯ ಅನುಪಸ್ಥಿತಿಗೆ ಮರುಗುತ್ತಾರೆ. ಸಾಹೇಬರ ಓದು–ಬರಹದ ಮೇಲಿನ ಪ್ರೀತಿ ಪ್ರಕಟವಾಗುತ್ತದೆ. ಆಗ ಕೌರ್ ನಾನೇನು ಅಕ್ಷರ ಬಲ್ಲವಳೇ ಎಂದು ರಾಗ ತೆಗೆಯುತ್ತಾರೆ.

ತಕ್ಷಣ ರತ್ತು ‘ರಾತ್ರಿ ಶಾಲೆಗೆ ಹೋಗಿ ಓದಬಹುದು. ಇದು ಹಳೆಯ ಕಾಲವಲ್ಲ, ಎಲ್ಲಾ ಹೆಣ್ಣುಮಕ್ಕಳು ಓದಬಹುದು, ಇದು ವೇದಾಗಮಗಳ ಕಾಲವೂ ಅಲ್ಲ, ಸಂವಿಧಾನದ ಕಾಲ, ಸಂವಿಧಾನದಲ್ಲೆ ಹಕ್ಕಿದೆ ಗೊತ್ತಿಲ್ಲೇನ’ ಎಂದು ಹೇಳುತ್ತಾರೆ. ಆ ಮೂಲಕ ಅಂಬೇಡ್ಕರ್ ವಿಚಾರ ಸೃಷ್ಟಿಸಿರುವ ಸಾಮಾಜಿಕ ಪರಿವರ್ತನೆ ಮತ್ತು ಅವರು ಅನುಗಾಲವೂ ಪ್ರಸ್ತುತ ಆಗುತ್ತಿರುವ ಪರಿಯನ್ನು ಇದು ತಿಳಿಸುತ್ತದೆ.

ದುಂಡು ಮೇಜಿನ ಸಮ್ಮೇಳನದಲ್ಲಿ ಅಂಬೇಡ್ಕರ್ ಏನು ಮಾತನಾಡಿದರು ಎನ್ನುವುದನ್ನು ರತ್ತು ರಾವ್ಬಹುದ್ದೂರ್ ಶ್ರೀನಿವಾಸ್ ಅವರ ಬಳಿ ಕೇಳುತ್ತಾರೆ. ‘ಸಭೆಯಲ್ಲಿ ಸಿಂಹ ಗರ್ಜನೆ ಮೊಳಗಿದಂತೆ ಇತ್ತು’ ಎಂದು ಹೇಳುತ್ತಿದ್ದರೆ, ರತ್ತು ಮೈಯಲ್ಲಾ ಕಿವಿಯಾಗಿಸಿ ಆಲಿಸುತ್ತಾರೆ. ಸಾಹೇಬರು ಬ್ರಾತೃತ್ವ–ಸಮಾನತೆಯ ಸ್ವಾತಂತ್ರ್ಯವನ್ನು ಬಯಸಿದರು ಎನ್ನುವ ವಿವರವನ್ನು ರಾವ್ ನೀಡುತ್ತಾರೆ.

ಒಮ್ಮೆ ಬಾಬಾ ಸಾಹೇಬರು, ‘ಏನಪ್ಪ ರತ್ತು ನನ್ನನ್ನೇ ನೋಡುತ್ತಿದ್ದೀಯಾ? ಅಂಥದೇನು ಬದಲಾವಣೆ ಆಗಿದೆ ನನ್ನ ಮುಖದಲ್ಲಿ’ ಎಂದು ಕೇಳುತ್ತಾರೆ. ‘ಮುಖದಲ್ಲಿ ರಾಜಕಳೆ ಕಾಣುತ್ತಿದೆ’ ಎನ್ನುವುದು ರತ್ತು ಪ್ರತಿಕ್ರಿಯೆ. ರತ್ತು ಹೊಗಳುವುದನ್ನು ಬಿಟ್ಟುಬಿಡು. ‘ನನ್ನ ಕೆಲಸ ತೃಪ್ತಿ ತಂದರೆ ಸಾಕು’ ಎಂದು ದುಂಡು ಮೇಜಿನ ಸಮ್ಮೇಳನ ಕುರಿತ ಅವರ ಚರ್ಚೆಗೆ ಅಂಬೇಡ್ಕರ್ ಅಂತ್ಯ ಹಾಡುತ್ತಾರೆ. ಅಂತೆಯೇ ಪೂನಾ ಒಪ್ಪಂದಕ್ಕೂ ಮೊದಲಿನ ರಾಜಕೀಯ ಮತ್ತು ಆ ನಂತರದ ಸನ್ನಿವೇಶವನ್ನೂ ಹೇಳುತ್ತಾರೆ. ಅಂಬೇಡ್ಕರ್ ಬದುಕಿನ ಮಹತ್ವದ ಎಲ್ಲ ಘಟನೆಗಳನ್ನೇ ಹೂರಣವಾಗಿಸಿ ಕಲಾತ್ಮಕ ಕಣಕದಲ್ಲಿ ‘ಮಹಾಯಾನ’ ಎಂಬ ಹೋಳಿಗೆಯನ್ನು ಪೋತೆ ಅವರು ನೀಡಿದ್ದಾರೆ.

ಮಹಾಯಾನ

ಲೇ: ಎಚ್.ಟಿ. ಪೋತೆ

ಪ್ರ: ಸಪ್ನ ಬುಕ್ ಹೌಸ್

ಸಂ: 080– 40114455

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.