ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಸಗಾಥೆ: ಫ್ಯಾಂಟಸಿ ಜಗತ್ತಿನ ರಿಯಲಿಸ್ಟಿಕ್ ಸತ್ಯಗಳು

Published 20 ಜನವರಿ 2024, 23:37 IST
Last Updated 20 ಜನವರಿ 2024, 23:37 IST
ಅಕ್ಷರ ಗಾತ್ರ

ಜರ್ಮನಿಯ ಲೇಖಕ ವಿಖಾಯಲ್‌ ಆಂದ್ರೆಯಾಸ್ ಹೆಲ್ಮುಟ್‌ ಎಂಡ ಅವರು ಬರೆದಿರುವ ಕಾದಂಬರಿ ‘ಮೊಮೊ’. ಮೇಲ್ನೋಟಕ್ಕೆ ಮೊಮೊ ಎಂಬ ಹುಡುಗಿಯ ಸಾಹಸಗಾಥೆ ಇದು. ಮಕ್ಕಳಿಗೆ ಖುಷಿಕೊಡುವ ಫ್ಯಾಂಟಸಿ ಕಥೆ ಎನಿಸಿದರೂ, ಇದು ಹಿರಿಯ ಓದುಗರೂ ಓದಲೇಬೇಕಾದ ಕೃತಿ. ಇದನ್ನು ಜಯಶ್ರೀ ಕಾಸರವಳ್ಳಿ ಕನ್ನಡಕ್ಕೆ ಅನುವಾದಿಸಿದ್ದಾರೆ.

‘ಮೊಮೊ’ ಕಾದಂಬರಿಯ ಕೇಂದ್ರದಲ್ಲಿರುವುದು ‘ಸಮಯ’. ನಮ್ಮ ಇಂದಿನ ಆಧುನಿಕ ಬದುಕಿನ ಓಟನಾಟಕದ ಕೇಂದ್ರದಲ್ಲಿರುವುದೂ ಸಮಯವೇ ಅಲ್ಲವೇ? ಫ್ಯಾಂಟಸಿಯ ರೂಪದ ಕಥೆಯನ್ನು ಹೇಳುತ್ತಲೇ ನಮ್ಮ ಬದುಕಿನೊಂದಿಗೇ ಹೆಣೆದುಕೊಂಡಿರುವ ರಿಯಲಿಸ್ಟಿಕ್‌ ಸತ್ಯಗಳನ್ನು ಮನಗಾಣಿಸುತ್ತ ಹೋಗುತ್ತದೆ ಈ ಕಾದಂಬರಿ.

ಈ ಕಥೆ ಪ್ರಾರಂಭವಾಗುವುದೇ ಮಹಾನಗರದಿಂದ ಹೊರಭಾಗದಲ್ಲಿರುವ, ಪಾಳುಬಿದ್ದಿರುವ ಒಂದು ಹಳೆಕಾಲದ ಅರೆ ವೃತ್ತಾಕಾರದ ರಂಗಮಂದಿರದಲ್ಲಿ. ಆ ಊರು, ವಾತಾವರಣವೇ ಗತ ಕಾಲದ ಅವಶೇಷಗಳು ಮತ್ತು ವರ್ತಮಾನದ ಸೌಲಭ್ಯಗಳ ಜೊತೆಗೆ ಭವಿಷ್ಯದ ಕನಸುಗಳೂ ಕೂಡಿರುವಂಥದು. ಇಡೀ ಕಾದಂಬರಿಯ ನಡೆಯನ್ನು ನಿಯಂತ್ರಿಸುವ ಕಾಲದ ಮೂರೂ ಅಂಗಗಳು ಅವು. ಅಲ್ಲಿ ಮೊಮೊ ಎಂಬ ಅನಾಥ ಹುಡುಗಿ ಬಂದು ಉಳಿದುಕೊಂಡಿದ್ದಾಳೆ. ಅವಳನ್ನು ಊರವರೆಲ್ಲ ಆದರದಿಂದ ಬರಮಾಡಿಕೊಳ್ಳುತ್ತಾರೆ. ತಮ್ಮ ಕೈಯಾರೆ ವಸತಿ ಸಿದ್ಧಮಾಡಿಕೊಡುತ್ತಾರೆ. ಅವರಾರೂ ಶ್ರೀಮಂತರಲ್ಲ. ಮತ್ತೊಬ್ಬ ಅತಿಥಿ ಮನೆಗೆ ಬಂದರೆ ತಮ್ಮ ಊಟಕ್ಕೆ ಕುತ್ತು ಬರಬಹುದಾದ ಸ್ಥಿತಿಯಲ್ಲಿರುವವರು. ಆದರೆ ಅವರ ಮನಸ್ಸು ಶ್ರೀಮಂತಿಕೆಯಿಂದ ತುಂಬಿ ತುಳುಕುವಂಥದ್ದು.

ಆ ಊರಿಗೆ ಮೊಮೊ ಒಬ್ಬಳು ಅನಿವಾರ್ಯ ಸದಸ್ಯಳಾಗುತ್ತಾಳೆ. ಹಾಗೆಂದು ಅವಳಿಗೆ ಯಾವ ಮಾಂತ್ರಿಕ ಶಕ್ತಿಯೂ ಇಲ್ಲ. ಮೋಡಿ ಮಾಡುವ ರೂಪ, ಗುಣಗಳಿಲ್ಲ. ಅವಳಿಗಿರುವ ಒಂದೇ ಒಂದು ಶಕ್ತಿ ಎಂದರೆ ಕೇಳಿಸಿಕೊಳ್ಳುವುದು. ಯಾರು ತನ್ನ ಬಳಿ ಬಂದು ಮಾತಾಡಿದರೂ ಅವಳು ಆಸ್ಥೆಯಿಂದ ಕೇಳಿಸಿಕೊಳ್ಳುತ್ತಾಳಷ್ಟೆ. ಅವಳ ಕೇಳಿಸಿಕೊಳ್ಳುವ ಗುಣದಿಂದಲೇ ಆ ಊರಿನಲ್ಲೊಂದು ಬಗೆಯ ಸ್ವಾಸ್ಥ್ಯ ಮನೆಮಾಡಿದೆ. ಯಾರಿಗೆ ಬೇಜಾರಾದರೂ, ತೊಂದರೆಯಾದರೂ, ‘ನೀನೊಮ್ಮೆ ಮೊಮೊಳನ್ನು ನೋಡಿ ಬಾ’ ಅನ್ನುವಷ್ಟು ಅವಳು ಆ ಊರಿನ ಮಾನಸಿಕತೆಯ ಭಾಗವಾಗಿದ್ದಾಳೆ. ಆದರೆ ಮತ್ತೊಂದೆಡೆ ಮಹಾನಗರವನ್ನು ಬೂದು ಬಣ್ಣದ ಸಮಯಗಳ್ಳರು ಆಕ್ರಮಿಸಲಾರಂಭಿಸಿದ್ದಾರೆ. ವ್ಯಕ್ತಿಗಳಿಗೆ ಕಾಣಿಸಿಕೊಂಡು ಅವಳನ್ನು ತಮ್ಮ ಸಮಯ ಠೇವಣಿಯ ಬ್ಯಾಂಕಿನ ಸದಸ್ಯರನ್ನಾಗಿಸಿಕೊಂಡು ಮಾಯವಾಗಿಬಿಡುವ ಠಕ್ಕರು ಅವರು. ಜನರ ಸಮಯವನ್ನು ಕದ್ದಷ್ಟೂ ಅವರ ಬದುಕು ಕ್ಷೇಮ. ಸಮಯ ಠೇವಣಿಯ ಬ್ಯಾಂಕಿನಲ್ಲಿ ಸಮಯ ಉಳಿತಾಮ ಮಾಡಲು ತೊಡಗಿದವರೆಲ್ಲ, ಮನುಷ್ಯ ಸಂಬಂಧಗಳನ್ನು, ತಮ್ಮ ಬದುಕಿನ ಆನಂದವನ್ನು ಕಳೆದುಕೊಳ್ಳತೊಡಗುತ್ತಾರೆ. ಸಮಯ ಉಳಿಸುವ ರೇಸ್‌ನಲ್ಲಿ ಬಿದ್ದ ಬದುಕನ್ನು ಆತಂಕದ, ಉದ್ವೇಗದ ಬೆಂಕಿಯಲ್ಲಿ ಸುಟ್ಟುಕೊಳ್ಳುತ್ತಿರುತ್ತಾರೆ.

ಮೇಲ್ನೋಟಕ್ಕೆ ಒಂದು ಫ್ಯಾಂಟಸಿ ಕಥೆಯನ್ನು ಹೇಳುತ್ತಲೇ ಕಾದಂಬರಿಕಾರ ನಮ್ಮ ಇಂದಿನ ಬದುಕಿನ ಕ್ರಮವನ್ನೂ ಹೇಳುತ್ತಿದ್ದಾರೆ. ಹಾಗಾಗಿಯೇ ಇದು ಮಕ್ಕಳ ಕಥೆಯಷ್ಟೇ ಅಲ್ಲವೇ ಅಲ್ಲ. ಹಿರಿಯರೂ ಓದಲೇಬೇಕಾದ ಕಥನ.

ಜಗತ್ತಿನ ಸಮಯವನ್ನೆಲ್ಲ ಕದ್ದುಬಿಡುವ ಹುನ್ನಾರದಲ್ಲಿರುವ ಬೂದು ಬಣ್ಣದ ಮನುಷ್ಯರನ್ನು, ಅನಾಥ ಹುಡುಗಿಯೊಬ್ಬಳು ಎದುರಿಸುತ್ತಾಳೆ. ಅವಳ ಬಳಿ ಇರುವುದು ಸತ್ಯ, ಪ್ರಾಮಾಣಿಕತೆ ಮತ್ತು ಮುಗ್ಧತೆಯಷ್ಟೆ. ಅದೇ ಅವಳನ್ನು ಮುನ್ನಡೆಸುತ್ತದೆ.

ಥ್ರಿಲ್ಲರ್ ಗುಣವಿರುವ ಕಥೆಯನ್ನು ಹೇಳುತ್ತಲೇ ನಮ್ಮ ಆಧುನಿಕ ಬದುಕಿನ ಬಿಕ್ಕಟ್ಟನ್ನೂ ಕಾಣಿಸುತ್ತ ಹೋಗುತ್ತಾರೆ ಕಾದಂಬರಿಕಾರರು. ಜರ್ಮನಿ ದೇಶದ ಈ ಕಥೆಯನ್ನು ಜಯಶ್ರೀ ಸಮರ್ಥವಾಗಿ ಕನ್ನಡಕ್ಕೆ ತಂದಿದ್ದಾರೆ. ಕೆಲವು ವಾಕ್ಯಗಳು ತುಸು ಕೃತಕ ಎನಿಸುತ್ತವಾದರೂ, ಮೊಮೊಳ ಜಗತ್ತನ್ನು ಪರಿಚಯಿಸಿರುವುದರಲ್ಲಿ ಅವರು ಯಶಸ್ವಿಯಾಗಿದ್ದಾರೆ. ಮುನ್ನೂರು ಪುಟಗಳ ಈ ಕಾದಂಬರಿ ಕೆಲವೊಮ್ಮೆ ಸಮಯದಷ್ಟೇ ವೇಗವಾಗಿಯೂ ಇನ್ನು ಕೆಲವು ಕಡೆಗಳಲ್ಲಿ ಕಥೆಯೊಳಗಿನ ಆಮೆಯಂತೆ ನಿಧಾನವಾಗಿಯೂ ಚಲಿಸುತ್ತದೆ. ಆ ಎರಡೂ ಬಗೆಯ ಓದನ್ನು ದಕ್ಕಿಸಿಕೊಂಡು ಒಂದು ವಿಶಿಷ್ಟವಾದ ಅನುಭವವನ್ನಂತೂ ನೀಡುತ್ತದೆ.

ಹೆಸರು: ಮೊಮೊಮೂಲ

ಲೇಖಕ: ವಿಖಾಯಲ್‌ ಎಂಡ

ಕನ್ನಡಾನುವಾದ: ಜಯಶ್ರೀ ಕಾಸರವಳ್ಳಿ

ಪು: 300

ಬೆ: 450

ಪ್ರಕಾಶನ: ಮಣಿಪಾಲ ಯೂನಿವರ್ಸಿಟಿ ಪ್ರೆಸ್ (ದೂ: 8202922954)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT