ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ | ‘ಮಾಧ್ಯಮಪ್ರಜ್ಞೆ’ಯ ವಿಶಿಷ್ಟ ಕಥನಗಳು

Published 24 ಫೆಬ್ರುವರಿ 2024, 23:30 IST
Last Updated 24 ಫೆಬ್ರುವರಿ 2024, 23:30 IST
ಅಕ್ಷರ ಗಾತ್ರ

ಮೌನೇಶ ಬಡಿಗೇರರ ‘ಶ್ರೀಗಳ ಅರಣ್ಯಕಾಂಡ’ ಸಂಕಲನದ ಕಥೆಗಳು ಮಾಧ್ಯಮಗಳ ಬಯೋಸ್ಕೋಪ್‌ ಮೂಲಕ ಈ ಕಾಲದ ತವಕತಲ್ಲಣಗಳನ್ನು ಪರಿಶೀಲಿಸುವ ಪ್ರಯತ್ನದ ವಿಶಿಷ್ಟ ಕಥೆಗಳು. ಈ ಮಾಧ್ಯಮ ವ್ಯಕ್ತಿ ಅಥವಾ ಸಾಂಸ್ಥಿಕ ಸ್ವರೂಪದಲ್ಲಷ್ಟೇ ನಮ್ಮನ್ನು ಎದುರುಗೊಳ್ಳುವುದಿಲ್ಲ; ನಾವು ಉಳಿಸಿಕೊಳ್ಳಬೇಕಾದ, ಆದರೆ ಕಳೆದುಕೊಳ್ಳುತ್ತಿರುವ ಒಂದು ಮೌಲ್ಯದ ರೂಪದಲ್ಲಿ ಮೌನೇಶರ ಕಥೆಗಳಲ್ಲಿನ ‘ಮಾಧ್ಯಮ’ ನಮಗೆ ಮುಖಾಮುಖಿಯಾಗುತ್ತದೆ.

ಸಂಕಲನದ ಮೊದಲ ಕಥೆ ‘ವೇಗದೊಳಗಿನ ಆವೇಗ’ದಿಂದಲೇ ಈ ಮಾಧ್ಯಮಪಯಣ ಆರಂಭವಾಗುತ್ತದೆ. ನಾವೆಲ್ಲರೂ ಒಂದಲ್ಲಾ ಒಂದು ಬಗೆಯಲ್ಲಿ ವೇಗದ ಬೆನ್ನುಬಿದ್ದು ಬದುಕಿನ ಆರ್ದ್ರತೆಯನ್ನು ಕಳೆದುಕೊಳ್ಳುತ್ತಿರುವುದರ ಬಗ್ಗೆ ಕಥೆ ಗಮನಸೆಳೆಯುತ್ತದೆ. ವಾಹನದ ವೇಗದಲ್ಲಿ ಬದುಕಿನ ಉತ್ಕಟ ಕ್ಷಣಗಳನ್ನು ಅನುಭವಿಸುವ ಚಾಲಕ ಕಥೆಯ ಒಂದು ತುದಿಯಲ್ಲಿದ್ದರೆ, ಇನ್ನೊಂದು ಬದಿಯಲ್ಲಿ, ಸುದ್ದಿಸ್ಫೋಟದಲ್ಲಿ ಸುಖ ಕಾಣುವ ವರದಿಗಾರನಿದ್ದಾನೆ. ವೃತ್ತಿಬದುಕಿನ ವೇಗ ವೈಯಕ್ತಿಕವೂ ಆದಾಗ ಖಾಸಗಿ ಬದುಕೂ ನಲುಗಿಹೋಗುತ್ತದೆನ್ನುವುದಕ್ಕೆ ಇಬ್ಬರೂ ಉದಾಹರಣೆಗಳಾಗಿದ್ದಾರೆ. ಸಣ್ಣಪುಟ್ಟ ಸಂಗತಿಗಳಲ್ಲಿ ಬದುಕಿನ ಸೌಂದರ್ಯ ಕಾಣುವ ಚಂದ್ರಿಕಾ ಎನ್ನುವ ಹೆಣ್ಣುಮಗಳು ತನ್ನ ಸುತ್ತಲಿನವರ ವೇಗದಲ್ಲಿ ಕಳೆದುಹೋಗುವ ವಿಷಾದ, ಸಹೃದಯರ ಮನಸ್ಸಿನ ಚಿತ್ರಸಂಪುಟದ ಯಾವುದಾದರೂ ಆಕೃತಿಯನ್ನು ನೆನಪಿಸುವಷ್ಟು ತೀವ್ರವಾಗಿದೆ.

‘ಒಂಟಿ ಓಲೆಯ ಮುತ್ತು’ ಕಥೆಯಲ್ಲಿ ಕೂಡ ಮಾಧ್ಯಮದ ಕಣ್ಣಿದೆ. ಕಥಾನಾಯಕ, ನಗರಸಾರಿಗೆಯ ಬಸ್ ಕಂಡಕ್ಟರ್ ಮುತ್ತಣ್ಣ ಸ್ನೇಹಜೀವಿ. ಡ್ರೈವರ್ ಫಾರೂಕನಿಗೆ ಕರ್ತವ್ಯದ ಸಮಯದಲ್ಲಿ ಹೃದಯಾಘಾತವಾಗಿ, ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಸಹೋದ್ಯೋಗಿಯನ್ನು ರಕ್ಷಿಸುವ ಮುತ್ತಣ್ಣ ಮಾಧ್ಯಮಗಳ ಗಮನಸೆಳೆಯುತ್ತಾನೆ. ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ನಡೆಯುವ ಈ ಘಟನೆ ಮಾಧ್ಯಮಗಳಿಗೆ ವಿಶೇಷ ವಿದ್ಯಮಾನವಾಗಿ ಕಾಣಿಸುತ್ತದೆ. ಕ್ಯಾಮೆರಾ ಎದುರು ಕೂರುವ ಮುತ್ತಣ್ಣ, ತನ್ನ ಬದುಕಿನಲ್ಲಿ ಸುಳಿದುಹೋದ ಹುಡುಗಿ ಹಾಗೂ ಅವಳ ನೆನಪಾಗಿ ಉಳಿದ ಒಂಟಿ ಓಲೆಯ ಕಥೆಯನ್ನು ಮಾತಿನ ನಡುವೆ ಹೇಳಬೇಕಾಗುತ್ತದೆ. ಆವರೆಗಿನ, ಮುಸ್ಲಿಂ ವ್ಯಕ್ತಿಯನ್ನು ರಕ್ಷಿಸಿದ ಹಿಂದೂವೀರನೀಗ ಅಮರಪ್ರೇಮಿಯಾಗಿ ಮಾಧ್ಯಮಗಳಿಗೆ ಕಾಣಿಸತೊಡಗುತ್ತಾನೆ. ರಮ್ಯ–ಭಾವುಕ ನೆಲೆಗಟ್ಟಿನ ಬಹು ಸೊಗಸಾದ ಈ ಕಥೆ, ವರ್ತಮಾನದ ವಿರೋಧಾಭಾಸಗಳನ್ನು ನಮಗೆ ನೆನಪಿಸುತ್ತ, ಮಾಧ್ಯಮಗಳ ಕಣ್ಣಿನ ವರ್ತಮಾನದಲ್ಲಿ ಯಾವ ಮುಖಕ್ಕೂ ದೀರ್ಘವಾದ ಆಯುಸ್ಸಿಲ್ಲ ಎನ್ನುವ ಸತ್ಯವನ್ನೂ ಕಾಣಿಸುತ್ತದೆ.

‘ಶಾಸ್ತ್ರೀಸಂಗ’ ಕಥೆಯಂತೂ ನೇರವಾಗಿ ಮಾಧ್ಯಮಜಗತ್ತಿಗೆ ಸಂಬಂಧಿಸಿದ ಕಥೆ. ಶಾಸ್ತ್ರಿ ಎನ್ನುವ ಹಿರಿಯ ಹಾಗೂ ಜನಪರ ಪತ್ರಕರ್ತನೊಬ್ಬನ ವೈಯಕ್ತಿಕ ಹಾಗೂ ವೃತ್ತಿಜೀವನದಲ್ಲಿನ ದ್ವಂದ್ವಗಳನ್ನು ಚಿತ್ರಿಸುವ ಕಥೆ, ಶಾಸ್ತ್ರಿಯ ದಾರುಣ ಕೊಲೆಯೊಂದಿಗೆ ಕೊನೆಗೊಳ್ಳುತ್ತದೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ರೂಪದಲ್ಲಿ ನಾಡಿನಲ್ಲಿ ನಡೆದ ಎರಡು ಕೊಲೆಗಳನ್ನು ಈ ಕಥೆ ನೆನಪಿಸುತ್ತದೆ.

ಅಂಗವಿಕಲ ಹುಡುಗನೊಬ್ಬ ಕಣ್ಣು ಹೊಡೆದುದಕ್ಕೆ ಕಸಿವಿಸಿಕೊಳ್ಳುವ ಯುವತಿಯೊಬ್ಬಳು ಪೊಲೀಸ್‌ ಠಾಣೆಯ ಮೆಟ್ಟಿಲೇರುವ ಪ್ರಸಂಗ ‘ಕಣ್ಣಿನ ಕಾಯಿಲೆ’ ಕಥೆಯಲ್ಲಿದೆ. ಠಾಣೆಯಲ್ಲಿ ನ್ಯಾಯ ಸಿಗದೆಹೋದಾಗ ಆ ಯುವತಿ ಫೇಸ್‌ಬುಕ್‌ ಲೈವ್‌ನಲ್ಲಿ ತನ್ನ ಸಂಕಟ ಹೇಳಿಕೊಳ್ಳುತ್ತಾಳೆ. ಈ ದೃಶ್ಯ ಮಾಧ್ಯಮಗಳ ಕಣ್ಣಿಗೆ ಬಿದ್ದು, ಎಲ್ಲರೂ ಆ ಯುವತಿಯ ಬೆನ್ನುಹತ್ತುತ್ತಾರೆ. ‘ಕಣ್ಣಿನ ಕಾಯಿಲೆ’ ಕಥೆ, ವ್ಯವಸ್ಥೆಯಲ್ಲಿನ ಬಹುರೂಪಿ ಟೊಳ್ಳುತನದತ್ತ ಬೆರಳು ಮಾಡುತ್ತದೆ. ದೂರಿನ ಮೂಲಕ ನ್ಯಾಯ ದೊರೆಯುವ ಬದಲು, ಯುವತಿ ಮತ್ತೆ ಮತ್ತೆ ನೋಯುತ್ತಲೇ ಹೋಗುತ್ತಾಳೆ. ‘ಹೆಣ್ಣನ್ನು ಕಣ್ಣಿನಲ್ಲೇ ಸುಲಿದು ನೋಡುವ ಸಮಾಜದ ಎದುರು ಬೆತ್ತಲಾದ ಹೆಣ್ಣೇ ಹೆಚ್ಚು ಸುರಕ್ಷಿತ’ ಎಂದು ಕಥಾನಾಯಕಿಗೆ ಅನ್ನಿಸುವ ಮಟ್ಟಿಗೆ ಅವಳು ಸಮಾಜದ ಕಣ್ಣಿಗೆ ಮಿಕವಾಗುತ್ತಾಳೆ.

‘ಕಣ್ಣಿನ ಕಾಯಿಲೆ’ ಶೀರ್ಷಿಕೆಯ ಧ್ವನಿ, ಸಂಕಲನದ ಎಲ್ಲ ಕಥೆಗಳಿಗೂ ಅನ್ವಯಿಸುವಂತಹದ್ದು. ಹೊರಗಣ್ಣಿಗೂ ಒಳಗಣ್ಣಿಗೂ, ಮಾಧ್ಯಮ ಮತ್ತು ಸಮಾಜದ ಕಣ್ಣಿಗೂ ಕಾಯಿಲೆ ತಗುಲಿರುವುದು ಹಾಗೂ ಅದರ ಪರಿಣಾಮಗಳನ್ನು ವಿಶ್ಲೇಷಿಸುವ ಸೃಜನಶೀಲ ಪ್ರಯತ್ನದ ರೂಪದಲ್ಲಿ ‘ಶ್ರೀಗಳ ಅರಣ್ಯಕಾಂಡ’ ಸಂಕಲನದ ಕಥೆಗಳು ಗಮನಸೆಳೆಯುತ್ತವೆ. ‘ಮಾಯಾಕೋಲಾಹಲ’ ಪ್ರಕಟಗೊಂಡ ಹತ್ತು ವರ್ಷಗಳ ನಂತರ ಪ್ರಕಟಗೊಂಡಿರುವ ಮೌನೇಶರ ಈ ಕಥಾಸಂಕಲನದ ಆರೂ ಕಥೆಗಳು ಕಾಲಕ್ಕೆ ಕನ್ನಡಿಯಾಗುವುದರ ಜೊತೆಗೆ ನಮ್ಮ ಅಂತರಂಗಕ್ಕೂ ಕನ್ನಡಿಯಾಗುವ ಹಂಬಲದ ಕಾರಣದಿಂದಾಗಿ ಬಹು ಮುಖ್ಯವಾದವು. ಕಥೆಯೊಂದನ್ನು ಕಟ್ಟುವ, ಬೆಳೆಸುವ ಸಾಧ್ಯತೆಗಳ ಕುತೂಹಲಿಗಳು ಮೌನೇಶರ ಕಥೆಗಳನ್ನು ಪಠ್ಯದಂತೆಯೂ ಗಮನಿಸಬಹುದು.

ವೈನೋದಿಕ ನೆಲೆಗಟ್ಟಿನಲ್ಲೂ ಗಂಭೀರ ಸಂಗತಿಗಳನ್ನು ಚರ್ಚಿಸಲಿಕ್ಕೆ ಸಾಧ್ಯ ಎನ್ನುವುದಕ್ಕೂ ಈ ಕಥೆಗಳು ಉದಾಹರಣೆಯಾಗಿವೆ. ಕಥೆಗಾರನ ಆತ್ಮವಿಶ್ವಾಸ ಹಾಗೂ ಕಥನಕೌಶಲದ ಕಾರಣದಿಂದಲೂ ಗಮನಸೆಳೆಯುವ ಕಥೆಗಳಿವು. ತಮ್ಮ ಕಥೆಗಳಲ್ಲಿ ಮೌನೇಶ್‌ ಎಷ್ಟು ಮುಳುಗಿಹೋಗಿದ್ದಾರೆಂದರೆ, ಕೆಲವೊಮ್ಮೆ ಕಥೆ ಮುಗಿದ ನಂತರವೂ ಅವರು ಯಾವುದೋ ಒಂದು ಎಳೆಯನ್ನು ಜಗ್ಗಲಿಕ್ಕೆ ಪ್ರಯತ್ನಿಸಿದ್ದಾರೆ, ರೂಪಕಗಳನ್ನು ಹಿಂಜಿದ್ದಾರೆ. ಒಳ್ಳೆಯ ಕಥೆಗಳು ಹೀಗೆ ವಾಚ್ಯವಾಗುವುದು, ಭಾಷೆ ತನ್ನ ಧ್ವನಿಶಕ್ತಿಯನ್ನು ಕಳೆದುಕೊಳ್ಳುತ್ತಿರುವ ಆತಂಕ ದಟ್ಟವಾಗಿರುವ ಸಂದರ್ಭದ ತುರ್ತು ಆಗಿರಬಹುದೆ?

ಶ್ರೀಗಳ ಅರಣ್ಯಕಾಂಡ

ಲೇ: ಮೌನೇಶ ಬಡಿಗೇರ

ಪು: 176;

ಬೆ: ರೂ. 195

ಪ್ರ: ಅಂಕಿತ ಪುಸ್ತಕ ಬೆಂಗಳೂರು.

ಫೋನ್: 90191 90502

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT