ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪು.ತಿ.ನ ಮಲೆದೇಗುಲ: ಕಾವಳದ ಮುರುಳಿನಾದಕ್ಕೆ ಕಿವಿಯಾಗುವ ಹಂಬಲ

Published 19 ಆಗಸ್ಟ್ 2023, 23:29 IST
Last Updated 19 ಆಗಸ್ಟ್ 2023, 23:29 IST
ಅಕ್ಷರ ಗಾತ್ರ

ಗೌರಿ

ಒಬ್ಬ ಮಹತ್ವದ ಕವಿ ಜನರನ್ನು ತಲುಪದೇ ಹೋದರೆ ನಷ್ಟವಾಗುವುದು ಯಾರಿಗೆ? ಅಥವಾ ಇದನ್ನೇ ಇನ್ನೊಂದು ಬಗೆಯಲ್ಲಿ ಕೇಳಬೇಕು ಅಂದರೆ ಒಂದು ನಿಜವಾದ ಕಾವ್ಯವನ್ನು ತನ್ನ ಅಂತಃಸತ್ವದ ಭಾಗವಾಗಿಸಿಕೊಳ್ಳದೇ ಹೋದರೆ ಸಮಾಜಕ್ಕಾಗುವ ನಷ್ಟ ಯಾವ ರೀತಿಯದ್ದು? ಈ ಪ್ರಶ್ನೆಗಳು ತೀವ್ರವಾಗಿ ಕಾಡಿದ್ದು ಪು.ತಿ.ನ. ಅವರ ‘ಮಲೆದೇಗುಲ’ ಕೃತಿಯ ಬಗ್ಗೆ ಜ.ನಾ. ತೇಜಶ್ರೀ ಅವರು ಬರೆದಿರುವ ‘ಅರಿವು-ಇರವುಗಳ ಸನ್ನೆಗೈ ಪು.ತಿ.ನ. ಮಲೆದೇಗುಲ’ ಪುಸ್ತಕವನ್ನು ಓದುವಾಗ.

ಪು.ತಿ.ನ. ಹೆಸರು ಪರಿಚಯವಿದ್ದಷ್ಟು ಅವರ ಕೃತಿಗಳು ಜನಮಾನಸದಲ್ಲಿ ನೆಲೆಯೂರಿಲ್ಲ. ಅದರಲ್ಲಿಯೂ ಈ ಕಾಲದ ತರುಣ–ತರುಣಿಯರಿಗಂತೂ ಪು.ತಿ.ನ. ಮತ್ತಷ್ಟು ದೂರ. ಈ ಕಂದರಕ್ಕೆ ಕಾರಣಗಳು ಹಲವಿರಬಹುದು. ಆದರೆ ಅದರ ನಡುವೆಯೇ ಅವರ ಕೃತಿಗಳನ್ನು ಜನರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನ ನಡೆಸಿದವರೂ ವಿರಳವೇ. ಅಂಥದ್ದೊಂದು ಪ್ರಯತ್ನದ ಕಾರಣಕ್ಕಾಗಿಯೇ ತೇಜಶ್ರೀ ಅವರ ಈ ಕೃತಿ ಮಹತ್ವದ್ದಾಗಿದೆ. ಖಂಡಿತವಾಗಿ ಅವರು ಈ ಕೃತಿಯ ಮೂಲಕ ಪು.ತಿ.ನ. ಅವರ ಸಾಹಿತ್ಯಕ್ಕೆ ಉಪಕಾರ ಮಾಡುತ್ತಿಲ್ಲ; ಅವರ ಕಾವ್ಯ ಪ್ರವೇಶಕ್ಕೆ ದಾರಿ ತಿಳಿಯದೇ ದೂರವೇ ಉಳಿದ ಆಸಕ್ತರಿಗೆ ಉಪಕಾರ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ನಮ್ಮೊಳಗನ್ನು ಚಿಗುರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಪು.ತಿ.ನ. ಕಾವ್ಯದಿಂದ ನಾವು ಹೇಗೆ ಉಪಕೃತರಾಗಬಹುದು ಎಂಬುದನ್ನು ತೋರಿಸುತ್ತಿದ್ದಾರೆ.

‘ಮಲೆದೇಗುಲ’ದಲ್ಲಿ ದೇಗುಲಧ್ಯಾನದ ಐವತ್ತೊಂದು ಮುಕ್ತಕಗಳಿವೆ. ಒಂದೊಂದು ಮುಕ್ತಕಗಳನ್ನೂ ಇಟ್ಟುಕೊಂಡು ಅದರ ಕುರಿತು ಟಿಪ್ಪಣಿಯನ್ನು ಬರೆದಿದ್ದಾರೆ ತೇಜಶ್ರೀ. ಈ ಟಿಪ್ಪಣಿಗಳು, ಬರಿಯ ಕವಿತೆಯ ಅರ್ಥವನ್ನು ಡಿ ಕೋಡ್ ಮಾಡುವ ಒಣ ಬರಹವಲ್ಲ. ಹಾಗೆಂದು ತನ್ನ ವಿದ್ವತ್ತನ್ನು ಪ್ರದರ್ಶಿಸುವ ವಿಮರ್ಶೆಯ ಭಾಷೆಯಲ್ಲಿಯೂ ಇದು ಇಲ್ಲ. ತಾನು ಕಾವ್ಯದಲ್ಲಿ ಕಂಡ ನೋಟಗಳನ್ನು, ಉಂಡ ಆನಂದವನ್ನು ತನ್ನ ಸಹಜೀವಿಗಳಿಗೂ ಉಣಿಸುವ ಮಮತೆಯಿಂದ, ಅಂತಃಕರಣದ ಒತ್ತಡದಿಂದ ಬರೆದ ಟಿಪ್ಪಣಿಗಳಿವು. ಹಾಗಾಗಿಯೇ ಒಬ್ಬ ಕವಿಗೆ ಮಾತ್ರ ಕಾಣಸಿಗುವ ಹಲವು ನೋಟಗಳು ಇಲ್ಲಿವೆ. ಇದು ಒಳಗಡಿಯಿಡುವ ಬಾಗಿಲಷ್ಟೆ, ಒಳಗಿರುವುದು: ‘ವಿರಮಿಸುವ ಕಾವಳವದು, ಶ್ಯಾಮನೆನೆ ಹೆಸರದಕೆ/ ಅದರ ಕೈಯೊಳು ಜಗವ ನಾದಿಸುವ ಮುರುಳಿ’. ನಮ್ಮೊಳಗನ್ನೂ ಆ ಮುರುಳಿಯ ನಾದ ನಾದಿಸುವಂತೆ ಮಾಡುತ್ತವೆ ಈ ಟಿಪ್ಪಣಿಗಳು.

ಈ ಪುಸ್ತಕಕ್ಕೆ ಲೇಖಕಿ ಬರೆದಿರುವ ಸುದೀರ್ಘವಾದ ಪ್ರಸ್ತಾವನೆಯೂ ಅಷ್ಟೇ ಆಪ್ತವಾಗಿದೆ ಮತ್ತು ಪುತಿನ ಬಗ್ಗೆ, ಅವರ ಕಾವ್ಯದ ಬಗ್ಗೆ ಇರುವ ಹಲವು ಪೂರ್ವಗ್ರಹಗಳನ್ನು ನಿವಾರಿಸುವಂತಿದೆ. ಪುಸ್ತಕದ ಕೊನೆಯಲ್ಲಿ ತೀಕ್ಷ್ಣ ಒಳನೋಟಗಳುಳ್ಳ ಎಸ್‌. ಮಂಜುನಾಥ ಅವರ ಒಂದು ಲೇಖನ ಮತ್ತು ಸ್ವತಃ ಪುತಿನ ಅವರೇ ಬರೆದಿರುವ ಮುನ್ನುಡಿಗಳೂ ಇವೆ.

ಇದು ಪು.ತಿ.ನ. ಮೇಲುಕೋಟೆಯ ದೇಗುಲದ ಕುರಿತು ಬರೆದಿರುವ ಪದ್ಯಗಳು ಎಂಬುದು ಸಾಮಾನ್ಯ ಗ್ರಹಿಕೆ. ಇದು ತಪ್ಪೂ ಅಲ್ಲ. ಆದರೆ ಪು.ತಿ.ನ. ಎದುರಿಗೆ ಕಾಣಿಸುವ ಮಣ್ಣುಕಲ್ಲಿನ ದೇಗುಲಕ್ಕೆ ನಿಂತುಕೊಂಡಿಲ್ಲ. ಅವರು ಕಾಣುತ್ತಿರುವ ದೇಗುಲ, ತಮ್ಮ ಕಾವ್ಯದ ಮೂಲಕ ಕಾಣಿಸುತ್ತಿರುವ ದೇಗುಲ, ‘ಮನೆಯಲ್ಲ ಮಠವಲ್ಲ ರಾಜನರಮನೆಯಲ್ಲ’ ‘ಇರುಳಿನೊಳು ಮಿರುತಾರಗೆಯ ಮಾಲೆಗೊಳುತ/ಮೋಡ ಮುತ್ತುವ ಜಡೆಗೆ ಜಾಹ್ನವಿಯ ಜಾರಿಬರೆ/ಪಕ್ಕಕೆಳವೆರೆಸೆಕ್ಕಿ ಕಣ್ ಸವಿಯ ಕೊಳುತ/ಮೆರೆವಿದರ ದರ್ಶನವೇ ದುಡುಕಿಸುವುದೆನ್ನೆದೆಯ ನಡೆಯ/ಮನುಜಗಿದು ನೆಲೆಯಾಸೆಯೋ ಕಟ್ಟಕಡೆಯ?’-ಪ್ರಕೃತಿಯೇ ಒಂದು ದೇಗುಲವಾಗಿ ರೂಪುಗೊಂಡಿರುವುದನ್ನು ಕಾಣಿಸುವ ಈ ಸಾಲುಗಳ ಬಗ್ಗೆ ತೇಜಶ್ರೀ ಬರೆದ ಟಿಪ್ಪಣಿಯ ಭಾಗ ಹೀಗಿದೆ: ‘ತನ್ನ ಯಾವ ಹುಡುಕಾಟದಿಂದ ಬೆಟ್ಟದ ಕಲ್ಲು ಈ ಬಗೆಯಾಗಿ ಆಯಿತು? ಬೆಟ್ಟದ ಕಲ್ಲು ಇದ್ದಕ್ಕಿದ್ದಂತೆ ಒಬ್ಬರಿಗೆ ದೇವರಾಯಿತು, ಮತ್ತೊಬ್ಬರಿಗೆ ಕಲೆ ಎನಿಸಿತು, ಯಾವ ಅರ್ಥ ಘಟಿಸಿತು ಈ ತೆರನಾಗಿ ಬೆಟ್ಟದ ಕಲ್ಲನ್ನು? ಎನ್ನುವಾಗ ಕವಿಯು ಬಳಸಿರುವುದು ಪ್ರಶ್ನಾರ್ಥಕ ಚಿಹ್ನೆಯಾದರೂ ಅದು ಧ್ವನಿಸುತ್ತಿರುವುದು ಬೆರಗನ್ನು. ಇದೇ ಬೆರಗು ಕವಿತೆಯ ಕೊನೆಯಲ್ಲಿರುವ ಪ್ರಶ್ನಾರ್ಥಕ ಚಿಹ್ನೆಯೆಡೆಗೂ ನಮ್ಮನ್ನು ಸೆಳೆಯುತ್ತದೆ. ‘ಇದೇ ನಮ್ಮಾಸೆಯ ಶಾಶ್ವತ ನೆಲೆಯೋ?’ ಎನ್ನುವಾಗ ಇಲ್ಲಿ ಬೆರಗಿನ ಜೊತೆಗೆ ಸಣ್ಣ ಅನುಮಾನವೂ ಸೇರಿಕೊಂಡಿದೆ. ನನ್ನ ಕಣ್ಣಿನ ಮೂಲಕ ಸೆರೆಸಿಕ್ಕುವ ಗೋಪುರ/ದೇಗುಲದ ‘ನೋಟ’ ಕೂಡ ದೇಗುಲಕ್ಕೆ ನಾನು ನೀಡುವ ಕಾಣಿಕೆ ಎನ್ನುವ ಅತಿಸೂಕ್ಷ್ಮ ಆಯಾಮವನ್ನು ಕವಿತೆ ನಮ್ಮ ಮುಂದಿಡುತ್ತಿದೆ. ಇಲ್ಲಿ, ‘ನೆಲೆಯಾಸೆ’ ಪದವು ಪುತಿನ ಅವರ ಹೊಸಸೃಷ್ಟಿ. ಕವಿತೆಯ ಆರಂಭದಲ್ಲಿ ಪ್ರಸ್ತಾಪಗೊಂಡಿರುವ ಮನೆ, ಮಠ ಇತ್ಯಾದಿ ‘ನೆಲೆ’ಗಳನ್ನು ಈ ಪದವು ಬೃಹತ್ತಾಗಿ ವಿಸ್ತರಿಸುತ್ತಿದೆ.’

ಇದು ಪು.ತಿ.ನ. ಮಲೆದೇಗುಲ ಕೃತಿಯ ವಿಮರ್ಶೆ ಅಲ್ಲ ಎಂದು ಲೇಖಕಿಯೇ ಸ್ಪಷ್ಟಪಡಿಸಿದ್ದಾರೆ. ಪು.ತಿ.ನ. ಕಾವ್ಯಲೋಕದ ಒಡನಾಡಿಗಳಿಗೆ ಇವು ತುಂಬ ಮುಖ್ಯ ಅನಿಸದೆಯೂ ಇರಬಹುದು. ಆದರೆ ಅವರ ಕಾವ್ಯವನ್ನು ದಾಟಲಾಗದೆ, ಅದರೊಳಗನ್ನು ಮುಟ್ಟಲಾಗದೆ ದೂರ ಸರಿದ ಹಲವು ಕಾವ್ಯಾಸಕ್ತರಿಗೆ ಇದು ಖಂಡಿತ ಕೈಹಿಡಿದು ಪುತಿನ ಕಾವ್ಯೋದ್ಯಾನದೊಳಗೆ ಕರೆದೊಯ್ಯುವ ಕೈಪಿಡಿಯಂತೆ ಕೆಲಸ ಮಾಡುತ್ತದೆ. ಸಾಹಿತ್ಯ, ಬದುಕುಗಳೆಲ್ಲವೂ ಮೀಡಿಯೊಕ್ರಸಿಯಿಂದ ತೀವ್ರವಾಗಿ ರೋಗಗ್ರಸ್ತಗೊಳ್ಳುತ್ತಿರುವ ಈ ಹೊತ್ತಿನಲ್ಲಿ ನಿಜದ ಕಾವ್ಯದ ರುಚಿಹತ್ತಿಸುವ ತುರ್ತು ಎಷ್ಟಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಅಂಥದ್ದೊಂದು ಮಹತ್ವದ ಪ್ರಯತ್ನವನ್ನು ಈ ಕೃತಿ ಮಾಡುತ್ತಿದೆ.

ಅರಿವು-ಇರವುಗಳ ಸನ್ನೆಗೈ ಪು.ತಿ.ನ. ಮಲೆದೇಗುಲ

ಲೇ: ಜ.ನಾ.ತೇಜಶ್ರೀ

ಪು: 142

ಬೆ: ₹ 150

ಪ್ರ: ಡಾ. ಪು.ತಿ.ನ. ಟ್ರಸ್ಟ್‌ ಬೆಂಗಳೂರು (ಮೊ: 9483913393)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT