ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ವಿಮರ್ಶೆ: ಕೇಡುಗಾಲದ ಕುರಿತೇ ಕಟ್ಟಿದ ಪದ್ಯಗಳು

Last Updated 25 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ತಮ್ಮ ತಲೆಮಾರಿನ ಬಹುತೇಕ ಬರಹಗಾರರು ಟಾರು ರಸ್ತೆ, ಅಂಚು ಕೊರೆದ ಸಿಮೆಂಟು ರಸ್ತೆಗಳಲ್ಲಿ ‘ಹೊಸ ನುಡಿಗಟ್ಟು’ ಹುಡುಕುವುದರಲ್ಲಿ ಮುಳುಗಿರುವಾಗ, ತಾವು ಮಾತ್ರ ಕಾಡ ನಡುವಿನ ಕಾಲುಹಾದಿಯಲ್ಲಿ, ಜಗದ ನೋವುಗಳನ್ನೆಲ್ಲ ಆಯ್ದು ತನ್ನಷ್ಟಕ್ಕೆ ಹಾಡುತ್ತ ಹೊರಟಿರುವ ಒಬ್ಬಂಟಿ ಹುಡುಗನ ಹಾಗೆ ಕಾಣಿಸುತ್ತಾರೆ ರಮೇಶ ಅರೋಲಿ.

‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟು’ ರಮೇಶರ ಮೂರನೇ ಕವನ ಸಂಕಲನ. ಜನಪದರು, ತತ್ತ್ವಪದಕಾರರು, ವಚನಕಾರರು ಬಳಸಿದ ಕಾವ್ಯದ ‘ರೂಪ’ಗಳನ್ನು ತಮ್ಮ ಅಭಿವ್ಯಕ್ತಿಗೆ ಒಲಿಸಿಕೊಳ್ಳುವ ಪ್ರಯತ್ನವೇ ಇವರನ್ನು ಈ ತಲೆಮಾರಿನ ಬೇರೆ ಕವಿಗಳಿಗಿಂತ ಭಿನ್ನವಾಗಿಸುತ್ತದೆ.

ಈ ಸಂಕಲನದ ಮೊದಲ ಪದ್ಯ ಶುರುವಾಗುವುದು ಹೀಗೆ: ‘ಮುಂಜಾಲೆ ಎದ್ದು ಮುಗಿಲಿಗೆ ಮುಗಿದೇನು / ಮರದಾಗ ಮಲಿಗೆದ್ದ ಗುಬ್ಬಿಗೆ ನಮಿಸೇನು / ಬೇರಿಗೆ ಬೆರಗಾದೆನೋ ಗಿಳಿರಾಮ / ಚಿಗುರಿಗೆ ಋಣಿಯಾದೆನೋ ಗಿಳಿರಾಮ’. ಈ ಸಾಲುಗಳು ಜನಪದ ತ್ರಿಪದಿಯೊಂದನ್ನು ನೆನಪಿಸುತ್ತದೆ. ಪ್ರಕೃತಿಯ ಬೇರು–ಚಿಗುರುಗಳನ್ನು ತಮ್ಮ ಬದುಕಿನ ಭಾಗವಾಗಿಯೇ ಗ್ರಹಿಸಿರುವ ಜನಪದರ ಜೀವನದೃಷ್ಟಿಯನ್ನೂ ನೆನಪಿಸುತ್ತದೆ. ಆದರೆ ಆ ಸಮೃದ್ಧಚಿತ್ರಣ ಹೆಚ್ಚುಕಾಲ ಉಳಿಯುವುದಿಲ್ಲ. ಪ್ರಕೃತಿಯ ನಾಶ, ಅದನ್ನು ನೆಚ್ಚಿಕೊಂಡವರ ಬದುಕಿನ ನಾಶಗಳು ಒಟ್ಟೊಟ್ಟಿಗೇ ನಡೆದು, ಚಿತ್ರದ ಬಣ್ಣಗೆಡತೊಡಗಿ, ‘ಊರ ಮ್ಯಾರಿಗೆಲ್ಲ ಉಕ್ಕಿನ ಗಿಡವಾಗಿ / ಗಾಳಿಯ ಅಲೆಯೆಲ್ಲ ಕಂಪನಿ ಅಡವಾಗಿ / ಚಿಲಿಪಿಲಿ ಸದ್ದಡಗಿತೋ ಗಿಳಿರಾಮ / ಚೀರೋದು ರದ್ದಾಯಿತೋ ಗಿಳಿರಾಮ’ ಎಂಬ ದಾರುಣ ದೃಶ್ಯವಾಗಿಬಿಡುತ್ತದೆ.

ಹಾಡು ಕಟ್ಟುವುದು ಈ ಕವಿಗೆ ಒಂದು ಕಸುಬಷ್ಟೇ ಅಲ್ಲ, ಅದು ಈ ನೆಲದ ನೋವುಗಳನ್ನು, ಬೆಂದವರ ಚೀರುಗಳನ್ನು, ಒಡೆದ ಹೃದಯಗಳನ್ನು ಮಾತೃಹೃದಯದಿಂದ ಅವುಚಿಹಿಡಿದು, ಅದಕ್ಕೆ ಧ್ವನಿಕೊಡುವ ಅನಿವಾರ್ಯ ಅಭಿವ್ಯಕ್ತಿ. ಆ ಅಭಿವ್ಯಕ್ತಿಗೆ ಪೂರ್ವಸೂರಿಗಳಿಂದ ಪಡೆದುಕೊಂಡ ಅಂತಃಕರಣವಿದೆ; ವಸ್ತುಗಳಿಗೂ ಜೀವನೀಡುವ ಮರುಜವಣಿ ಗುಣವಿದೆ. ಅದಕ್ಕೆ ಉದಾಹರಣೆಯಾಗಿ ‘ಕುಮ್ಮಟಿ’ ಪದ್ಯ ನೋಡಬಹುದು. ‘ಕುಮ್ಮಟಿ’ ಎಂದರೆ ತಳ ಒಡೆದ ಮಣ್ಣಿನ ಬಿಂದಿಗೆಯನ್ನು ತಲೆಕೆಳಗೆ ಮಾಡಿ ಕಟ್ಟಿದ ಒಲೆ. ತಾತನ ಕಾಲದ ಈ ‘ಕುಕ್ಕುರುಗಾಲಿನ ಕುಮ್ಮಟಿ’ – ‘ಗುಡಿಸಲ ದುಃಖವ ಬಾನಿಗೆ ಕಕ್ಕಿದ’ ಪ್ರಖರ ಚಿತ್ರವೂ ಕವಿಯ ಕಣ್ಣಿಗೆ ಕಂಡಿದೆ. ಇದುವರೆಗೆ ಒಂದು ವಸ್ತುವಾಗಿದ್ದ ಕುಮ್ಮಟಿ, ‘ಗಾಳಿಗೆ ಅಲುಗಿತ್ತ ಮೂಲೆಗೆ ಮಲಗಿತ್ತ / ಅಮವಾಸೆ ಬಂದಾರೆ ಮೈನೆರೆದು ಕುಂತಿತ್ತು / ಮಳೆನೀರು ಬಿದ್ದರೆ ಕುಮ್ಮಟಿ / ಇದು ಗಳ–ಗಳ ಅತ್ತೀತ ಕುಮ್ಮಟಿ’ ಎಂಬಲ್ಲಿಗೆ ಕವಿ ಕುಮ್ಮಟಿಯ ಬಗ್ಗೆ ಹೇಳುತ್ತಿದ್ದಾನೆಯೇ? ಕುಟುಂಬವ ಸಲುಹುವ ಕೆಲಸದಲ್ಲಿಯೇ ನಲುಗುತ್ತ ಬದುಕ ಸವೆಸುವ ಹೆಣ್ಣಿನ ಬಗ್ಗೆ ಹೇಳುತ್ತಿದ್ದಾನಲ್ಲವೇ ಅನಿಸಿಬಿಡುತ್ತದೆ. ಆದರೆ ಹೀಗೆ ‘ಕುಮ್ಮಟಿ’ ಎಂಬ ವಸ್ತುವೊಂದು ‘ಅಮ್ಮ’ನ ಜೀವಂತ ಚಿತ್ರವಾಗಿ ಮನಸಲ್ಲಿ ಬೆಳೆಯುವಾಗಲೂ, ಗಾಳಿಗೆ ಅಲುಗುವ, ಮೂಲೆಯಲ್ಲಿ ಮಲಗುವ, ಮಳೆನೀರು ಬಿದ್ದಾಗ ನೀರು ಸುರಿದು ಅಳುವಂತೆ ತೋರುವ ಕುಮ್ಮಟಿಯಾಗಿಯೇ ಉಳಿದಿದೆ.

ಇಲ್ಲಿನ ಬಹುತೇಕ ಪದ್ಯಗಳಿಗೆ ಒಂದು ಕಥನಗುಣವಿದೆ. ಅದರಲ್ಲಿ ಕಾಣಿಸಿಕೊಳ್ಳುವ ಪಾತ್ರಗಳಿಗೆ ಹೆಸರಿಲ್ಲದಿರಬಹುದು, ಆದರೆ ಸ್ಪಷ್ಟ ಚಹರೆಯಿದೆ. ಆ ಚಹರೆ ಒಂದು ಪಾತ್ರದ್ದಷ್ಟೇ ಆಗಿರುವುದಿಲ್ಲ. ಒಂದು ಸಮೂಹದ ಚಹರೆಯೂ ಆಗಿರುತ್ತದೆ. ‘ಬರುವ ಹಬ್ಬಕ್ಕೆ ತಯಾರಾದ ಓಣಿ’ಯಲ್ಲಿ ಬರುವ ‘ನನ್ನವ್ವ’ ಬರೀ ಕವಿಯ ಅವ್ವ ಅಷ್ಟೇ ಅಲ್ಲ, ಖಾಲಿ ಕಂದೀಲಿನಲ್ಲಿ ಕಾದು ಕೂತಿರುವ ಮನೆಗಳಿಗೆಲ್ಲ ಮರಳಬೇಕಿರುವ ಅವ್ವ. ಹಾಗಾಗಿಯೇ ಕವಿ, ‘ಇನ್ನು ಹೊತ್ತಾಯಿತು ಮನೆಗೆ ಬರ ಹೇಳಿ / ಕಡ್ಡಿಪೊಟ್ಟಣ ಕಾದಿವೆ ಕಂದೀಲಿಗೆ ಎಣ್ಣೆ ಖಾಲಿ!’ ಎಂದು ಅವ್ವನ ಕರೆಯುವ ಹೊಣೆಯನ್ನು ನಮಗೇ ಬಿಡುತ್ತಾನೆ!

ತನ್ನ ಸುತ್ತಲಿನ ಬರ್ಬರ ವಿದ್ಯಮಾನಗಳಿಗೆ ತುಡಿಯುವ ಹಂಬಲ ಇಲ್ಲಿನ ಬಹುತೇಕ ಪದ್ಯಗಳಲ್ಲಿ ತೀವ್ರವಾಗಿಯೇ ಕಾಣುತ್ತದೆ. ‘ಕಂತಾಗಿ ಕಾಡ್ಯಾವ ಭತ್ತದ ಸಾಲ/ ಅಂಗಡಿ ಹೊಕ್ಕಾವ ಸಗಣಿಯ ಚೀಲ’, ‘ಮೇಕೆಗೆ ಮೇವಿಲ್ಲ ಮೇಕಿನ್ನು–ಇಂಡಿಯ’ ಎಂಬ ರೀತಿಯ ಸಮಕಾಲೀನ ರಾಜಕೀಯಕ್ಕೆ ಪ್ರತಿಕ್ರಿಯಿಸುವ ಸಾಲುಗಳು ಮತ್ತೆ ಮತ್ತೆ ಎದುರಾಗುತ್ತವೆ.

‘ರಂಗೋಲಿ ತುಂಬೆಲ್ಲ ರಗುತಾದ ಚುಕ್ಕಿಯು’ ಸಂಕಲನದ ಕಾಡುವ ಕವಿತೆಗಳಲ್ಲೊಂದು. ‘ಫೋಟೊದ ಸೀತೆಗೆ ಪೂಜೆಯು ನಡೆದಿತ್ತು / ಫೂಟುದ್ದ ಕುಣಿಯಲ್ಲಿ ಅರೆಮುಗಿಲು ಮಲಗಿತ್ತು / ಕೈ ಚಾಚಿ ಆಕಾಶ ತಂಗ್ಯಮ್ಮ / ನಿನ್ನ ಎದೆಗಪ್ಪಿ ಅತ್ತೀತ ತಂಗ್ಯಮ್ಮ’ – ಆಕಾಶವೇ ಕೈ ಚಾಚಿ, ಎದೆಗಪ್ಪಿ ಅಳುತ್ತಿರುವ ಈ ವಿದ್ರಾವಕ ಚಿತ್ರ ಮನಸ್ಸನ್ನು ಆಳವಾಗಿ ಕಲುಕಿಬಿಡುವಂಥದ್ದು, ಬಹುಕಾಲ ಉಳಿಯುವಂಥದ್ದು. ರಂಗೋಲಿಯ ನಡುವಿನ ರಕ್ತದ ಚುಕ್ಕಿಯ ರೂಪಕ ಹುಟ್ಟಿಸುವ ತಳಮಳವೂ ಅಲ್ಲಾಡಿಸಿಬಿಡುತ್ತದೆ. ಈ ಎಲ್ಲ ನೋವುಗಳ ನಡುವೆಯೂ ಕವಿ ಪೂರ್ತಿ ನಿರಾಶರಾಗುವುದಿಲ್ಲ. ‘ಮಗು ಎಸೆದ ಚೆಂಡನು ಆಕಾಶವಾದರೂ ಮರಳಿ ಕೊಟ್ಟಿತಲ್ಲ / ಬಿಡು ಸಾಕು ಇಷ್ಟು ಈ ಕೇಡುಗಾಲಕ್ಕೆ!’ ಎಂಬ ಆಶಾವಾದ ಪದ್ಯ ಕಟ್ಟುವ ಕುರಿತ ಅವರ ನಂಬಿಕೆಯೂ ಹೌದು.

‘ಕೈ ಹೆಂಡ ಕರಾಮತ್ತು...’ ಪದ್ಯದ ಶಂಭುಲಿಂಗ ಗುಡಿಯೊಳಗಿನ ದೇವರಲ್ಲ. ‘ಅರೆಹೊ‌ಟ್ಟೆಲೆ ಮಲಗಿ ಆಯಿತಾರ ನೀನೆದ್ದು/ ಮೇಸ್ತಿರಿ ಮನೆ ಮುಂದ ಬಟವಾಡೆಗೆ ಬಂದು / ಸಿಕ್ಕಕೂಲಿಗಿಷ್ಟು ಚಿಕ್ಕನ್ನು ನೀತಿಂದು / ಕೈಲಿ ಬಿಡಿದು ಬರುವಾಗ ಕದ್ದು ಮುಚ್ಚಿ ಹೋಗಿ / ಮಟಮಟ ಮಧ್ಯಾಹ್ನ ಶಂಭುಲಿಂಗ/ ನೀ ಗಟಗಟ ಎತ್ತಿದ್ದಿ ಶಂಭುಲಿಂಗೋ’ – ಇಂಥ ಶಂಭುಲಿಂಗ ನಮ್ಮೊಳಗೆ ಹಲಬಗೆಯ ರಿಂಗಣಗಳನ್ನು ಎಬ್ಬಿಸುತ್ತಿರುವಾಗಲೇ ಪದ್ಯದ ಕೊನೆಯ ಟಿಪ್ಪಣಿ,ಅವನನ್ನು ವಾಸ್ತವಕ್ಕೆ ಕಟ್ಟಿಹಾಕಿ ನಿರಾಸೆಗೊಳಿಸುತ್ತದೆ.

ಕೆಲವು ಕಡೆ ರಮೇಶ್‌ ಸಂಯಮದ ಗೆರೆ ಮೀರುವುದೂ ಇದೆ. ಹಾಗೆ ಮೀರಿದಾಗೆಲ್ಲ ಅವರ ಹಾಡುಧ್ವನಿ ತುಸು ಗೊಗ್ಗರಾಗುತ್ತದೆ. ಪದ್ಯದ ಒಳಲಯ ತಪ್ಪಿ ಘೋಷಣೆಗಳ ಹಾಗೆ ಭಾಸವಾಗುತ್ತದೆ. ಇವರ ಪದ್ಯಗಳ ವಿಶಿಷ್ಟ ಗುಣವಾದ ಲಯಗಾರಿಕೆಯೇ ಕೆಲವೊಮ್ಮೆ ಕಾವ್ಯದ ಸಹಜ ನಡೆಗೆ ಅಡಚಣೆ ಮಾಡುವುದೂ ಇದೆ. ಹಾಗೆಯೇ ಚಂದದ ಬಿಡಿ ಇಮೇಜ್‌ಗಳ ವ್ಯಾಮೋಹವೂ ಇಡೀ ಪದ್ಯದ ಅನುಭವಕ್ಕೆ ತಡೆಯಾಗಿರುವುದೂ ಇದೆ. ಆದರೆ ಈ ಎಲ್ಲ ಮಿತಿಗಳನ್ನು ಮೀರಿಕೊಳ್ಳುವುದು ರಮೇಶರಿಗೆ ದುಸ್ಸಾಧ್ಯವೇನಲ್ಲ. ಯಾಕೆಂದರೆ ಎದೆದನಿಯನ್ನು ನೆಚ್ಚಿ ಹಾಡುಕಟ್ಟುವ ಕಲೆ ಅವರಿಗೆ ಸಿದ್ಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT