ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಸಾಹಸಗಳು....

Last Updated 25 ಮೇ 2013, 19:59 IST
ಅಕ್ಷರ ಗಾತ್ರ

ಅವ್ವನ ಕಣ್ತಪ್ಪಿಸುವುದರಲ್ಲಿ ನನ್ನಷ್ಟು ಚಾಲಾಕಿ ಮತ್ತೊಬ್ಬಳಿರಲಿಲ್ಲವಂತೆ. ಹಾಗೆಂದು ಚಿಕ್ಕಮ್ಮನ ಮಗಳು ಹೇಳುತ್ತಿದ್ದಾಗ ಬೀಗುತ್ತಿದ್ದೆ. ಅದು ನನ್ನನ್ನು ಮತ್ತಷ್ಟು ಕೆಲಸ ಕದಿಯುವಂತೆ ಪ್ರೇರೇಪಿಸುತ್ತಿತ್ತು. ಕುಂಟೆಬಿಲ್ಲೆ, ಲಗೋರಿ, ಬುಗುರಿ, ಜಾರುಗುಪ್ಪೆ, ಗೋಲಿ, ಹಸು-ಹುಲಿ, ಟೋಪಿ ಬೇಕಾ ಟೋಪಿ, ಯಾವ ಆಟವಾದರೂ ಸೈ. ಆದರೆ ಬೇಗ ಮನೆ ಸೇರಬಾರದು! ಆಡಲು ಹುಡುಗಿಯರದು, ಹುಡುಗರದು ಎಂದು ಗುಂಪುಗಾರಿಕೆ ಮಾಡುವವರೆಂದರೆ ಹೊಟ್ಟೆಯಲ್ಲಿ ಬೆಂಕಿ ಬೀಳುತ್ತಿತ್ತು. ಮೂಲೆಯಲ್ಲಿ ಕೂತು ಆಡುವ ಆಟಗಳೇ ಯಾಕೆ ಹುಡುಗಿಯರವು ಆಗಬೇಕೋ? ಬಿಡಿಸದ ಒಗಟು. ಬುಗುರಿಗೆ ದಾರ ಸುತ್ತಿ, ದಾರದ ತುದಿಯ ಗಂಟು ಹಿಡಿದು ಬೀಸಿ ಬಿಟ್ಟರೆ... ಅದನ್ನು ಸುಯ್ಯೆಂದು ಚಣದಲ್ಲಿ ಎತ್ತಿ ಅಂಗೈಗೆ ಬಿಟ್ಟಾಗ ಆಗುವ ಕಚಗುಳಿ... ಇದಕ್ಕೆ ಯಾವುದು ಸರಿಸಾಟಿ.

ಬೋರೆ ಹಣ್ಣಿಗೆ, ನೆಲ್ಲಿಕಾಯಿಗೆ ಕಲ್ಲು ಹೊಡೆಯುವವರು ಹುಡುಗರು; ಆಯುವವರು ನಾವು. ಸೀಬೇಹಣ್ಣಿಗೆ ಮರ ಹತ್ತುವವರು ಅವರು. (ಮೊದಲು ಅವರ ಜೇಬಿಗೆ ತುಂಬಿಸಿಕೊಂಡು ಆಮೇಲೆ ನಮ್ಮ ಕಡೆಗೆ ತಿರುಗುತ್ತಿದ್ದರು), ಕೆಳಗೆ ಟವೆಲ್ ಹಿಡಿದು ಕ್ಯಾಚ್ ಹಿಡಿಯುವವರು ನಾವು ಎಂಬ ನಿಯಮ ಮಾಡಿದವನನ್ನು ಹಿಡಿದು ಒನಕೆಯಲ್ಲಿ ಕುಟ್ಟಬೇಕು ಎಂದು ನಮ್ಮ ಫೀಮೇಲು ಪಡೆಗೆ ಅನ್ನಿಸುತ್ತಿತ್ತು. ಯಾಕೆಂದರೆ, ಅವರಂತೆ ನಾವು ಕಲ್ಲು ಎಸೆದರೂ ಹಣ್ಣು ಬೀಳುತ್ತಿದ್ದವು. ನಮಗೂ ಮರ ಹತ್ತುವುದು ಗೊತ್ತಿತ್ತು. ಆದರೆ ಅಣ್ಣ ಹಾಗೂ ಕೇರಿಯ ಹುಡುಗರು ಮಹಾ ಸಾಹಸಿಗರಂತೆ ಪೋಸು ಕೊಡಲು ನಮ್ಮನ್ನು ದೂರದಲ್ಲಿ ನಿಲ್ಲಿಸುತ್ತಿದ್ದರು.

ಅಣ್ಣ ಗೆದ್ದು ತಂದ ನೀಲಿ, ಕೆಂಪು ಕಣ್ಣು, ಡುಮ್ಮ, ಪೀಚ ಗೋಲಿಗಳನ್ನು ಎಣಿಸಿ ಅಟ್ಟದ ಮೇಲಿನ ಮಡಕೆಯಲ್ಲಿ ಜೋಪಾನವಾಗಿ ಇಡುವ ಕಾಯಕ ನನ್ನದು. ಅದಕ್ಕೆ ಅವನು ಪ್ರತಿಯಾಗಿ ಚಂಪಕ, ಬಾಲಮಂಗಳ, ಚಂದಮಾಮ ಓದಲು ಕೊಡುತ್ತಿದ್ದ. ಒಂದಷ್ಟು ರಾಕ್ಷಸರ ಕತೆ ಇರುವವೆಂದು, ಅದನ್ನು ಓದಿದರೆ ಹೆದರುತ್ತೀಯೆಂದು ಮೊದಲೇ ತಿಳಿಸುತ್ತಿದ್ದ. ನಾನೋ, ಬೇಡವೆಂದಿದ್ದ ಕತೆಗಳನ್ನೇ ಮೊದಲು ಓದಿ, ಹೆದರುವವಳಲ್ಲ ಎಂದು ಖಚಿತಪಡಿಸಿಕೊಳ್ಳುತ್ತಿದ್ದೆ. ಅಣ್ಣನಿಗೆ ಮಾತ್ರ ರಕ್ಕಸರ ಕತೆ ಓದಿದ್ದನ್ನು ಅಪ್ಪಿತಪ್ಪಿಯೂ ಬಾಯಿಬಿಡುತ್ತಿರಲಿಲ್ಲ. ಆತ ಪುಸ್ತಕ ಕೊಡುವುದನ್ನು ನಿಲ್ಲಿಸಿಬಿಟ್ಟಾನೆಂಬ ಭಯ.

ಅಣ್ಣನಿಗೋ ಮೂಗಿನ ತುದಿಯಲ್ಲಿ ಕೋಪ. ಅವನ ಆರ್ಭಟಕ್ಕೆ ಹೆಚ್ಚು ತತ್ತರಿಸಿದವಳು ಮತ್ತು ತತ್ತರಿಸದವಳು ಎರಡೂ ನಾನೇ ಇರಬೇಕು. ಅಷ್ಟೆಲ್ಲ ಹೊಯ್‌ಕೊಯ್‌ಗಳನ್ನು ಮಾಡಿಕೊಂಡರೂ ಅವನ ಸಂಗಡ ಬಿಟ್ಟು ಹೆಚ್ಚು ಹೊತ್ತು ಇರುತ್ತಿರಲಿಲ್ಲ. ಅಣ್ಣನ ಜಗಳ ಚಿಕ್ಕಪ್ಪನ ಮಕ್ಕಳೊಂದಿಗೆ ಒಮ್ಮಮ್ಮೆ ತಾರಕಕ್ಕೇರುತ್ತಿತ್ತು. ಆಗೆಲ್ಲ, ರೂಮಿನಲ್ಲಿ ಕೂಡಿಹಾಕಿ ನೀರಿನ ಪೈಪಿನಿಂದ ಒದೆ ತಿನ್ನುತ್ತಿದ್ದರೂ ಸೆಟೆದು ಕುಳಿತುಕೊಳ್ಳುತ್ತಿದ್ದ. ಹೊಡೆಯುತ್ತಿದ್ದ ಅಯ್ಯನೇ ಸೋತು ಹೋಗುತ್ತಿತ್ತು. ಆ ರುದ್ರಭಯಂಕರ ಸನ್ನಿವೇಶವನ್ನು ಬಿಡಿಸಲು ಹೋದ ಅವ್ವ, ಅಕ್ಕನೂ ಏಟಿಗೆ ತುತ್ತಾಗುತ್ತಿದ್ದರು. ಅಯ್ಯ ಹೊರಬಂದ ತಕ್ಷಣ ಬಾಸುಂಡೆ ಜಾಗಕ್ಕೆ ಅರಳೆಣ್ಣೆ ಹಚ್ಚುತ್ತಿದ್ದ ನನ್ನನ್ನು ಅಣ್ಣ ತಣ್ಣಗೆ ನೋಡುತ್ತಿದ್ದ. ಆಂಜನೇಯನ ಗುಡಿಗೆ ಹೋಗಿ, ನಾಳೆ ಸ್ಕೂಲಿಗೆ ಹೋಗುವುದರೊಳಗೆ ಬಾಸುಂಡೆ ಹೋಗಿಸು ಎಂದು ಬೇಡಿ ಕರ್ಪೂರ ಹಚ್ಚುತ್ತಿದ್ದ.

ಕುಕ್ಕೆ ತುಂಬಾ ಮೈಲಿಗೆ ಬಟ್ಟೆ ಹೊತ್ತು ಕೆರೆಗೆ ಬಟ್ಟೆ ಒಗೆಯಲು ಕೇರಿಯ ದಂಡೇ ಹೊರಡುತ್ತಿತ್ತು. ಅವ್ವನೋ, ಅಕ್ಕಂದಿರೋ ಸೋಪು ಹಚ್ಚಿ, ಕುಕ್ಕಿ, ಬಂಡೆಗೆಬಟ್ಟೆಯೆಂಬ ಕತ್ತಿ ಬೀಸಿ ಯುದ್ಧ ಮಾಡುವವರಂತೆ ಡಬ್‌ಡಬ್ ಒಗೆಯುತ್ತಿದ್ದರೆ ನಾವು ದಡಕ್ಕೆ ಬರುವ ಮೀನುಗಳೊಂದಿಗೆ ಅಟಆಡುತ್ತಾ, ಜಾಲಿಸಲು ಕೊಡುವುದನ್ನೇ ಕಾಯುತ್ತಿದ್ದೆವು. ಜಾಲಿಸಿ ಬಟ್ಟೆ ಒಣಗಿಸುವ ಕೆಲಸ ನಮ್ಮ ಪಾಲಿನದು. ಆದರೆ ಹುಡುಗರ ದಂಡು! ಈಜಲು ತೆರಳುತ್ತಿತ್ತು. ಪಂಥಕಟ್ಟಿ ದೂರದಾರ ಸಾಗುವ ಅವರನ್ನು ಹೊಟ್ಟೆಕಿಚ್ಚಿನಿಂದ ನೋಡುತ್ತಿದ್ದವಳು ನಾನು ಮಾತ್ರ. ಅಣ್ಣನ ಗೆಳೆಯರ ಗುಂಪು ಏರಿ ಹತ್ತಿ ದುಡುಂ ಎಂದು ಬಿದ್ದರೆ ಕೆರೆಯೇ ಅಲುಗಾಡುತ್ತಿತ್ತು. ಪೋಲಿಯೋ ಕುಂಟಣ್ಣ ಇವರನ್ನೂ ಮೀರಿಸಿ ಒಂದೇ ಕಾಲಲ್ಲಿ ಈಜು ಹೊಡೆವ ರಭಸಕ್ಕೆ ಎಂಥವರೂ ಬೆರಗಾಗುತ್ತಿದ್ದರು. ಅಣ್ಣಆಡಿ ಸುಸ್ತಾಗಿ ಬಂದರೂ ಬರಿಗೈಲಿ ಬಂದವನಲ್ಲ. ನನಗೆಂದು ತಾವರೆಯನ್ನು ಕೈಯಲ್ಲಿ ಹಿಡಿದೇ ತರುತ್ತಿದ್ದ.

ಸ್ಕೂಲು ಎನ್ನುವುದನ್ನು ಐದು ಗಂಟೆಗೆ ಮುಚ್ಚಬೇಕು ಎಂದು ರೂಲ್ಸ್ ಮಾಡಿದವರನ್ನು ಹಿಡಿದು ಕೊಲ್ಲಬೇಕು. ಟೀಚರ್‌ಗಳು ಹತ್ತೂವರೆಗೆ ಮೊದಲೇ ಬಾಗಿಲು ತೆಗೆಯಲು ಏನು ಕಷ್ಟ? ಮೈಗಳ್ಳರು ಎಂದು ಬೈದುಕೊಳ್ಳುತ್ತಿದ್ದೆ. ಸ್ಕೂಲೆಂದರೆ ಅಚ್ಚುಮೆಚ್ಚು. ಹಬ್ಬಕ್ಕೋ ಹರಿದಿನಕ್ಕೋ ಮದುವೆಗೋ ಸ್ಕೂಲಿಗೆ ಹೋಗಬೇಡ ಎಂದರೆ ಅತ್ತು ಬಿಡುತ್ತಿದ್ದೆ. ಈ ಕಾರಣಕ್ಕೆ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದಳು ಅವ್ವ. ಒಮ್ಮೆ, ಆಕೆಯ ತವರು ಮನೆಗೆ ಹೋಗಬೇಕಾದ ಸಂದರ್ಭ. ನಾನು ಅತ್ತು ಕರೆದರೂ ಎಳನೀರು, ಜೀರಿಂಬೆ ಆಸೆ ತೋರಿಸಿ ಅಪರೂಪಕ್ಕೆ ಮುದ್ದು ಮಾಡಿ ಕರೆದೊಯ್ದಿತ್ತು ಅವ್ವ. ಅಲ್ಲಿ ನನ್ನನ್ನೇ ಮದುವೆಯಾಗುತ್ತೇನೆಂದು ಹೇಳುತ್ತಿದ್ದ ಮಾಮನ ಮಗ ಇದ್ದದ್ದರಿಂದ ಆ ಊರಿಗೆ ಕಾಲಿಡುವುದಿಲ್ಲ ಎಂದು ಶಪಥಗೈದಿದ್ದೆ. ವಾಯ್ದೆಯಂತೆ ಎರಡನೇ ದಿವಸ ಸಂಜೆ ಹೊರಡೋಣ ಎಂದು ಅವ್ವ ಹೇಳಿದ್ದಳು.

ಆದರೆ ಅವಳು ಮಾತಿನ ಮೋಡಿಯಲ್ಲಿ ಮುಳುಗಿದ್ದಳು. ನಾನು ಪಿಸುಗುಟ್ಟಿದೆ. ಆದರೂ ಜಗ್ಗದೆ ಇದ್ದದ್ದರಿಂದ ಸಾಕಾಗಿ ಜಿಗುಟಿ, `ನಡಿ ಹೋಗೋಣ' ಎಂದೆ. `ಯಾಕಿಂಗಾಡುತ್ತೆ ಇದು' ಎಂದು ಬೆಕ್ಕನ್ನು ನೂಕಿದಂತೆ ತಳ್ಳಿದ್ದರಿಂದ ಸಿಟ್ಟು ಬಂದು `ನಂಗೂ ದಾರಿ ಗೊತ್ತು ಒಬ್ಳೇ ಹೋಗ್ತೀನಿ ನೋಡು' ಅಂದೆ. ಪ್ರತಿಯಾಗಿ ಸುತ್ತ ಇದ್ದವರೂ ದನಿಗೂಡಿಸಿ `ಚೋಟುದ್ದ ಇದೀಯ ನಿಮ್ಮೂರಿಗೆ ಹೆಂಗೆ ಹೋಗ್ತೀಯ ಹೋಗು ನೋಡಾನ' ಎಂದರು. ಅಳುತ್ತಾ ಮನೆಯಿಂದ ಹೊರಬಂದವಳು ಮತ್ತೆ ನಿಂತದ್ದು ಆ ಊರಿಗೆ ಬಸ್ಸು ಬರುವ ರಸ್ತೆ ಸಿಕ್ಕಾಗ. ಸಂಜೆಗತ್ತಲಲ್ಲಿ, ಗುಡ್ಡ ಹತ್ತಿ ಇಳಿದು ದೆವ್ವದಂತೆ ಬಂದಿದ್ದೆ. ಆಂಜನೇಯ ನನಗೊಂದು ಬಸ್ಸು ಕಳಿಸಿಕೊಡು ಎಂದು ಬೇಡಿಕೊಳ್ಳುತ್ತಿದ್ದೆ. ರಾತ್ರಿ ಹತ್ತಾದರೂ ನಾನು ಕಾಣಸಿಗದಾಗ ಅವ್ವನ ಅಳು ತಾರಕ್ಕೇಕೇರಿತ್ತಂತೆ. ಐದಾರು ಜನ ಬಸ್‌ಸ್ಟಾಪ್‌ಗೆ ಬಂದಿದ್ದರು.

ಕತ್ತಲೆಯಲ್ಲಿ ಮರದಡಿ ಕುಳಿತಿದ್ದ ನನ್ನನ್ನು ಅವುಚಿ ಊರಕಡೆ ಹೆಜ್ಜೆಇಟ್ಟರು. ನಾನು ಬರುವುದಿಲ್ಲ ಎಂದು ರಚ್ಚೆ ಹಿಡಿದೆ. ಆಗ, ಅದೇ ಸಮಯಕ್ಕೆ ಬಂದ ಯಾವುದೋ ಲಾರಿಯಲ್ಲಿ ಕೂರಿಸಿಕೊಂಡು ನಮ್ಮೂರಿನತ್ತ ಹೊರಟರು ಕೆಲವರು. ಉಳಿದವರು ಸುದ್ದಿ ಮುಟ್ಟಿಸಲು ಅವ್ವನ ಬಳಿಗೆ ಕದಲಿದರು. ಸರಿ ರಾತ್ರಿ ಅವ್ವನಿಲ್ಲದೆ ಮನೆಗೆ ಬಂದ ನನ್ನನ್ನೂ ನೆಂಟರನ್ನೂ ಕಂಡು ಮನೆಯಲ್ಲಿ ಗಾಬರಿ. ಜೊತೆಯಲ್ಲಿ ಬಂದವರು ನಾನು ಮಾಡಿದ ಮಹಾಕಾರ್ಯವನ್ನು ಬಣ್ಣಿಸಿದರು. ಮಾರನೇ ದಿನ ಬೆಳ್ಳಂಬೆಳಿಗ್ಗೆ ಅವ್ವ ನಾನಿದ್ದಲ್ಲಿಗೆ ಹಾಜರು. ಅಂದೇ ಕೊನೆ. ಅವ್ವ ಅವತ್ತಿನಿಂದ ನನ್ನನ್ನು, ನನ್ನಂತಿರುವ ಯಾವ ಮಕ್ಕಳನ್ನೂ ಊರಿಗೆ ಬನ್ನಿ ಎಂದು ಕರೆದದ್ದು ನೋಡಿಲ್ಲ.

ಐದನೇ ಕ್ಲಾಸಿರಬೇಕು. ಆಶುಭಾಷಣ ಸ್ಪರ್ಧೆ. ನಾನು ಶಿಕ್ಷಣ ಮಂತ್ರಿಯಾದರೆ ಭಾನುವಾರವೂ ಸ್ಕೂಲು ಇರಲಿ ಎಂಬ ಕಾನೂನು ಬರುವಂತೆ ಮಾಡುತ್ತೇನೆ ಎಂದುಬಿಟ್ಟೆ. ಮತ್ತೆ ಮಾತಾಡಲು ಬಿಟ್ಟರೆ ತಾನೇ? ಹೆಡ್‌ಮಾಷ್ಟ್ರು, ಟೀಚರ್ ಹಾಗೂ ನನ್ನ ಫ್ರೆಂಡ್ಸ್ ಸರಿಯಾಗಿ ಉಗಿದಿದ್ದರು.  ಪ್ರೇಯರ್ ನಂತರ ಎಲ್ಲರೆದುರಿಗೆ, ಸುಭಾಷಿತ ಓದುವುದೆಂದರೆ ನನಗೆ ಇನ್ನಿಲ್ಲದ ಉಮೇದು. ಪ್ರತಿವರ್ಷ ಫೇಲಾದವರ ಪಟ್ಟಿ ಓದುವಾಗ ನಮ್ಮ ಹೆಸರು ಕೂಗದ ಟೀಚರ್‌ಗೆ ಚಾಕ್ಲೆಟ್ ಕೊಟ್ಟು ದಾರಿಯುದ್ದಕ್ಕೂ ಹಂಚುತ್ತಾ ಬರುತ್ತಿದ್ದೆವು. ಆದರೆ ಮನೆಗೆ ಬಂದು ಕೊರಗುವವಳಂತೆ ನಟಿಸಿ ಫೇಲ್ ಆಗಿದ್ದೇನೆ ಎನ್ನುತ್ತಿದ್ದೆ. ಅವ್ವ ಮಾತ್ರ ಫೇಲ್ ಆಗುವುದನ್ನೇ ಕಾಯುತ್ತಿರುವಂತೆ `ಒಳ್ಳೆದಾತು ದನ ಇಡ್ಕಂಡ್ ನಡಿ. ಅದೆ ಲಾಯಕ್ಕು ನಿಂಗೆ' ಎನ್ನುತ್ತಿತ್ತು ನಿರುಮ್ಮಳವಾಗಿ.

ನನಗೋ ಭಾನುವಾರವೆಂದರೆ ಬೇಜಾರು. ಎರಡು, ಮೂರು ತಿಂಗಳ ರಜೆ ಬಂದರಂತೂ ದನ ಕಾಯುವ ಕೆಲಸ ಜೋತು ಬೀಳುತ್ತಿತ್ತು. ಇಲ್ಲೂ ಅಣ್ಣನ ಕಾರುಬಾರು. ಅವುಗಳ ಉಸ್ತುವಾರಿ ನನಗೊಪ್ಪಿಸಿ, ಈಜಾಡಲೋ ಗುಡ್ಡ ಹತ್ತಲೋ ತೊಲಗಿ ಸಂಜೆ ಪ್ರತ್ಯಕ್ಷವಾಗುತ್ತಿದ್ದ! ಆಗ ಚಂದಮಾಮಂದಿರು ಸಮಾಧಾನಿಸುತ್ತಿದ್ದರು. ಆಗೆಲ್ಲಾ ಈಚಲ ಮರದ ನೆರಳಲ್ಲಿ ಮುಗುಮ್ಮೋಗಿ ಕುಳಿತಿರುತ್ತಿದ್ದೆ, ಸ್ಕೂಲ್‌ತೆರೆಯುವ ದಿನಕ್ಕಾಗಿ ಕಾಯುತ್ತಾ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT