ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಷ್ಟಿ ಸ್ಥಿತಿ ನಡುವಿನ ಮಾತುಗಳು...

Last Updated 27 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಹೊಸ ತಲೆಮಾರಿನ ಡಾ. ಎಂ.ಎಸ್. ಆಶಾದೇವಿ ಅವರು ಪ್ರಬಂಧ, ಅನುವಾದ, ಸಂಸ್ಕೃತಿ ಚಿಂತನೆ, ವಿಮರ್ಶೆಯಲ್ಲಿ ಕ್ರಿಯಾಶೀಲರು. ಇವರ `ಸ್ತ್ರೀಮತವನುತ್ತರಿಸಲಾಗದೆ?~ ಎನ್ನುವ ವಿಮರ್ಶಾ ಸಂಕಲನ 2006ರಲ್ಲಿ ಪ್ರಕಟವಾಗಿತ್ತು. ಈಗ ಎರಡನೆ ವಿಮರ್ಶಾ ಸಂಕಲನವು `ನಡುವೆ ಸುಳಿವ ಆತ್ಮ~ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿದೆ.

ನಿಂತಿಲ್ಲ
ಹಾದು ಬರುತ್ತಲಿದೆ
ಇದೇನು?
ಬಳಿಯಲ್ಲೇ ಸುಳಿದಾಡುತ್ತಿದೆ
ಹೊಗೆಯೊ? ದಂಡಕಾರ‌್ಯಣವೊ?
ಹೆಜ್ಜೆ ಕಿತ್ತು, ಹೆಜ್ಜೆ ಇಟ್ಟರಷ್ಟೇ
ತಲುಪಬಹುದು ತುದಿಗೆ; ಅಲ್ಲಿಗೆ
ಹೋಗುತ್ತಿದ್ದೇನೆ
ನಡೆಯಬೇಕಿದೆ ನಾನು ಇನ್ನೂ
ನಿಮಗೆ ತಿಳಿಸಿ ಹೋಗುವಷ್ಟು
ನಿರಾಳವ ಉಳಿಸಿದಿರೇನು ನೀವು?

ಅನಿಸುವ ಹಾಗೆ, ಮೊದಲಿಗೆ ಸಂಕಲನದ ಮುಖತೋರದ ಮುಖಪುಟವೇ ಓದುಗರನ್ನು ಜಗ್ಗಿ ಮಾತನಾಡಿಸುತ್ತದೆ. ಸಂಕಲನದ ಬರಹಗಳ ದಿಕ್ಕನ್ನು ಒಂದೇ ಭಂಗಿಯಲ್ಲಿ ಸಮರ್ಥವಾಗಿಯೂ ದಾಟಿಸುತ್ತದೆ.
 
ಬಂಡಾಯೋತ್ತರದ ದೀರ್ಘಾವಧಿಯ ಈ ಹೊತ್ತಿನಲ್ಲಿ ಹೊರಬರುತ್ತಿರುವ `ನಡುವೆ ಸುಳಿವ ಆತ್ಮ~ ಅನೇಕ ಏಳುಬೀಳುಗಳೊಂದಿಗೆ ಸ್ತ್ರೀತ್ವದ ಮುನ್ನಡೆಯನ್ನು ಕಟ್ಟಿಕೊಡುತ್ತದೆ.

ಮುಖ್ಯವಾಗಿ ಪರಂಪರೆಯ ಆಸರೆಯೊಂದಿಗೆ, ತೊಂಬತ್ತರ ದಶಕದಿಂದೀಚೆಗೆ ಏರ್ಪಟ್ಟಿರುವ ಓದು-ವಿಮರ್ಶೆಯನ್ನು ಇಲ್ಲಿನ ಬರಹಗಳು ಮಂಡಿಸುತ್ತವೆ. ಹಾಗೆ ಮಂಡಿಸುತ್ತಿರುವ ಸಂದರ್ಭದಲ್ಲಿ ಕವಿ ಎಚ್.ಎಸ್.ಶಿವಪ್ರಕಾಶ್ ಅವರ ಕಿರುಪದ್ಯವೊಂದನ್ನು ನೆನಪಿಸುತ್ತದೆ:

ನೀನು ಮಲಗಿದ್ದೀಯ
ಮೋಡಗಳ ಕೆಳಗೆ
ಗಿರಿಯ ಹಾಗೆ
ನಿನ್ನೊಳಗೆ ತುಂಬಿಕೊಂಡಿವೆ
ಕಾಡಹೂಗಳು
ಹಸಿರು ಮುಳ್ಳು
ಕ್ರೂರ ಮೃಗಗಳು
ಖನಿಜಗಳು

ಅಕ್ಕರೆಗೆ ಬಿದ್ದವರು ಡಬ್ಬಿ ಸಣ್ಣದಾದರೂ ಅನ್ನವನು ಅದುಮಿಟ್ಟು ತುಂಬಿಸಿದಂತೆ, ಆಡಿಯೂ ಮಿಗುವ ಮಾತು ಸಂಕೋಚದಲಿ ಒಳಸೇರಿಕೊಂಡಂತೆ, ದುಃಖದ ದಡದಲ್ಲಿ ತಂಗಿರುವ ಕವಿ ಜರೂರತ್ತಿನ ಮೇಲೆ ಸುದ್ದಿಯೊಂದನ್ನು ಕಳುಹಿಸುತ್ತಿರುವಂತೆ ಭಾಸವಾಗುವ ಮೇಲಿನ ಕಿರುಪದ್ಯ, ಕಾಲದ ಪಲ್ಲಟವೊಂದನ್ನು ತನ್ನ ಹೊಟ್ಟೆಗೆ ಹಾಕಿಕೊಂಡಿದೆ.

ಕವಿ ಅಡ್ರೆಸ್ ಮಾಡುತ್ತಿರುವ `ನೀನು~ ಅದು ಯಾರು? ಯಾಕಾಗಿ ಎಚ್ಚರವಾಗಿ ಎಂದು ನಿವೇದಿಸುತ್ತಿದ್ದಾರೆ? ಪದ್ಯ ಯಾಕೆ ಗ್ರಾಫ್ ಕೊಡಲು ಆಸಕ್ತವಾಗಿದೆ? ನೀನು ಖಾಲಿಯಲ್ಲ ಎಂದೇಕೆ ಒತ್ತಿ ಹೇಳುತ್ತಿದೆ.
 
ಕರಗುವ, ಕರೆಯುವ ಆವರಣದಲ್ಲೇ ಇರುವ ಹೋರಾಟವನ್ನು ಯಾಕೆ ನೆನಪಿಸುತ್ತಿದೆ?- ಈ ಪ್ರಶ್ನೆಗಳು ಹುಟ್ಟುತ್ತವೆ. `ಅಣುಕ್ಷಣ ಚರಿತೆ~ ಕವನ ಸಂಕಲನದಲ್ಲಿನ ಈ ಕಿರುಪದ್ಯವು ತೊಂಬತ್ತರ ದಶಕದ ಕೊನೆಗೆ ಸಿಗುತ್ತದೆ. ಆ ದಶಕವು ಕನ್ನಡ ಓದುಗ ವಲಯ ವಿಸ್ತರಣೆಯಾದ ಕಾಲವೂ ಆಗಿದೆ.

ಓದುಗರು ಎನ್ನುವ ಜನಸಮುದಾಯದಿಂದ ದೂರಸರಿದು ಸ್ವಂತಮನೆಯೊಳಗೇ ಬಂಧಿಯಾಗಿದ್ದ ನವ್ಯರ `ನಾವೇ ಸರಿತನದ~ ಠೇಂಕಾರ ಕ್ಷೀಣಿಸುತ್ತಿತ್ತು. ದಲಿತ - ಬಂಡಾಯ ಮೂಮೆಂಟಿನ ಬಿಸಿಯನ್ನು ಉಂಡವರು, ಆ ಬಿಸಿಯನ್ನು ದೂರದಿಂದಲೇ ಸೋಕಿಸಿಕೊಂಡವರು ತೂಕೋದ್ರಿಕ್ತ ದನಿಯಲ್ಲಿ ಆರೋಪಿಸಿಕೊಂಡು, ಹೆಬ್ಬೊತ್ತಿಗೆಗಳನ್ನು ಬರೆಯಲಾರಂಭಿಸಿದ್ದರು.

ಆಗಲೇ ಸ್ತ್ರೀ ಸೇರಿದಂತೆ, ಇತರ ದಮನಿತ ಸಮುದಾಯಗಳು ಶಿವಪ್ರಕಾಶರ ಕವಿತೆಯನ್ನು ಓದುವ, ದಕ್ಕಿಸಿಕೊಳ್ಳುವ ಹಂಬಲವನ್ನು ಹೆಚ್ಚಿಸಿಕೊಂಡವು. ಈ ಪ್ರಕ್ರಿಯೆಯ ಅರಿವಿರುವ ಕವಿ ಚರಿತ್ರೆಯಲ್ಲಿ ಸೋತವರಿಗೆ, ಕಣ್ಣೆದುರಾಗುತ್ತಿರುವ ಚರಿತೆಯನ್ನು ಕಾಣಿಸುತ್ತಾರೆ. ಅಲ್ಲಿ ಗತದ ಬಗೆಗೆ ವಿಮರ್ಶೆಯೂ ಕವಿತೆಯ ಸಂರಚನೆಯಲ್ಲಿ ನಡೆಯುತ್ತದೆ. ಹಾಗಾಗಿಯೇ,

ಗಳಿಗೆಗಳಿಗೆಗಳ ಈ ಹಲ್ಲೆಗಳ
ಕೊನೆಗಳಿಗೆ ಎಂದು ಹೇಳೆ
(ಓ ಪ್ರಾಣಶಕ್ತಿದೇವಿ)

ಎಂದು ಕೇಳುತ್ತದೆ ಕವಿತೆ. ಇಲ್ಲಿನ ಆರ್ತಧ್ವನಿಗೆ ಚರಿತ್ರೆಯ ನೆನಪೂ ಇದೆ. ಗಾಯಗಳ ಕಲೆಯೂ ಗೊತ್ತಿದೆ; ಹುಟ್ಟುತ್ತಿರುವ ದುಗುಡದ ಗಳಿಗೆಗಳೂ ಕಾಣುತ್ತಿವೆ. ನಿಟ್ಟುಸಿರಿನ ಲೆಕ್ಕವನ್ನು ಎಣಿಸಿಯೂ, ನಿಟ್ಟುಸಿರನ್ನು ಕಳೆಯುತ್ತಿರುವವರನ್ನು ಚರಿತ್ರೆಯ ಭಿತ್ತಿಯಲ್ಲಿ ದಾಖಲಿಸುತ್ತದೆ. ಈ ಬಗೆಯ ನೋಡು ಮತ್ತು ಓದು ಸಂಕಥನವಾಗುತ್ತಾ, ಇಂದಿನ ಅಗತ್ಯವಾಗಿಯೂ ಮುಂಚೂಣಿಗೆ ಬರುತ್ತಿದೆ.

ಹಾಗೆ ನೋಡಿದರೆ, ಚರಿತ್ರೆಯೇ ಇಲ್ಲದವರಿಗೆ ಅಥವಾ ಚರಿತ್ರೆಯಲ್ಲಿ ಹೆಗಲುಕೊಟ್ಟು ನೊಂದಿರುವವರಿಗೆ ಶಿವಪ್ರಕಾಶರು ಕವಿತೆಯ ಮುಖೇನ ಅಡ್ರೆಸ್ ಮಾಡುತ್ತಾ, ಎಚ್ಚರಿಸುತ್ತಾ ನಿಷ್ಠೆಯನ್ನು ತೋರಿದರೆ, ಆಶಾದೇವಿಯವರು ಪಠ್ಯಗಳ ಓದಿನ ಮೂಲಕ ಚರಿತ್ರೆಯ ಗತಿಯನ್ನು ನಿರೂಪಿಸುತ್ತಾರೆ.

`ನಡುವೆ ಸುಳಿವ ಆತ್ಮ~ ಎಂಬುದು ಲಿಂಗಭೇದವಿರದ, ರಾಜಕಾರಣವಿರದ, ನಿರಾಕಾರವೂ, ಮುಕ್ತವೂ ಆದ ರೂಪಕವೊಂದರ ಹುಡುಕಾಟದ ಯತ್ನವಾಗಿದೆ. ವಚನಕಾಲ ಎದುರಿಸಿದ ತಲ್ಲಣಗಳು ಹೊಸ ಆವೃತ್ತಿಯೊಂದಿಗೆ ಅನೇಕ ವಿನ್ಯಾಸಗಳಲ್ಲಿ ಕಾಡುತ್ತಿರುವುದರಿಂದ ಶೀರ್ಷಿಕೆಯು ಒಂದು ಅಪೇಕ್ಷೆಯಾಗಿ ಓದುಗರ ಮುಂದಿದೆ.

`ಸ್ತ್ರೀ ಸಂಕಥನದ ಚಹರೆಗಳು~ ಎನ್ನುವ ಉಪಶೀರ್ಷಿಕೆಯು ಒಂದು ಅಧ್ಯಯನವನ್ನು ಪರಿಚಯಿಸುತ್ತಲೇ, ಓದಬೇಕಾದ ವಿಧಾನವನ್ನು ಸೂಚಿಸುತ್ತದೆ. ಈ ಸೂಚನೆ ಚೌಕಟ್ಟಿನ ಮಿತಿಯನ್ನು ಹಾಕಿಕೊಂಡಂತಿದೆ.
 
ಸಂಕಥನದ ಚಹರೆಗಳನ್ನು ಹುಡುಕುವ ಪ್ರಯತ್ನದ ಭಾಗವಾಗಿ ಶಿವರಾಮಕಾರಂತ, ಕುವೆಂಪು, ಬೇಂದ್ರೆ, ಜಿ.ಪಿ.ರಾಜರತ್ನಂ, ಲಂಕೇಶ್, ತೇಜಸ್ವಿ ಅವರ ಪಠ್ಯಗಳು ಪರೀಕ್ಷೆಗೆ ಒಳಗಾಗಿವೆ. ಅಲ್ಲಿ ಪಠ್ಯದೊಂದಿಗೆ ಒಡನಾಟವೂ ಆದಂತಿದೆ; ಒಂದು ಅಂತರವೂ ಸಾಧ್ಯವಾಗಿದೆ.

ಆದರೆ ಮಹಿಳಾ ಸಾಹಿತ್ಯದ ಕುರಿತು ಬರೆಯುವಾಗ ಪಠ್ಯ ಇರುವಂತೆ ತೋರಿದರೂ, ಹೈಜಾಕಾಗುತ್ತವೆ. (ಈ ಮಾತನ್ನು ಲಲ್ಲೇಶ್ವರಿ, ಸೀತೆ ಕುರಿತ ಬರಹಗಳನ್ನು ಹೊರತುಪಡಿಸಿ ಹೇಳಬೇಕಿದೆ). ಮಹಿಳಾ ಲೇಖಕಿಯರ ಪಠ್ಯದಲ್ಲಿ ಈ ಕಾಲಕ್ಕೆ ಬೇಕೆನಿಸುವ ಧೋರಣೆ, ಅಗತ್ಯಗಳನ್ನು ತಾತ್ವಿಕತೆಯ ಹೆಸರಿನಲ್ಲಿ ಹುಡುಕುವ ಕಡೆಗೆ ಹೆಚ್ಚು ಒಲವನ್ನು ತೋರಿದೆ.

ಹಾಗೆ ತೋರುವಾಗ ಪಠ್ಯವನ್ನು ಎದುರು ನೋಡಿದರೂ, ಲೇಖಕಿಯರ ರಕ್ಷೆಯ ಗೂಡಲ್ಲಿ ಆಶ್ರಯಿಸಲು ಮುಂದಾಗುತ್ತದೆ. (ಈ ಸಂಗತಿಯನ್ನು `ಕರ್ತೃ ಕಟ್ಟಿಕೊಳ್ಳುವುದು~ ಎನ್ನುತ್ತಾರೆ ಕೆ.ವಿ.ನಾರಾಯಣ).

ಬಂಡಾಯದ ಲೇಖಕರು `ಸಾಮಾಜಿಕ ನ್ಯಾಯ~ವನ್ನು ಕೃತಿಯ ಅಭಿವ್ಯಕ್ತಿಯಲ್ಲಿ ಓದಿನಲ್ಲಿ ತಂದುಕೊಂಡರು. ಆ ದಾರಿಯಲ್ಲಿ ಕರ್ತೃವಿನ ಸಂತತಿ ಹೆಚ್ಚಿಸಿಕೊಳ್ಳಲು ಉತ್ಸಾಹ ತೋರಿದ್ದರು; ಶ್ರಮವನ್ನೂ ಹಾಕಿದ್ದರು.

ಆ ರೀತಿಯಲ್ಲಿ `ನಡುವೆ ಸುಳಿವ ಆತ್ಮ~ವು `ಸಾಮಾಜಿಕ ನ್ಯಾಯ~ವನ್ನು ನೇರ ಪಾಲಿಸದೆ, ಸಂಕಥನದ ಮೂಲಕ ಅಳವಡಿಸಿಕೊಂಡಿದೆ. ಇದರ ಅಡ್ಡಪರಿಣಾಮವನ್ನು ಹಿರಿಯ ಕವಯತ್ರಿಯರ ಕವಿತೆಗಳ ವಿಮರ್ಶೆಯಲ್ಲಿ ಕಾಣಬಹುದಾಗಿದೆ.

`ಬದುಕಿನ ಧಾರಣ ಶಕ್ತಿಯ ಹುಡುಕಾಟ~ವನ್ನು ಸವಿತಾ ನಾಗಭೂಷಣರ ಕವಿತೆಗಳಲ್ಲಿ ಕಂಡಿರುವ ಬರಹ ಇಲ್ಲಿದೆ. ಸವಿತಾರವರ ಮೊದಲ ಸಂಕಲನ 1987ರಲ್ಲಿ ಪ್ರಕಟವಾಗಿದೆ.

ಚಳವಳಿಯ ಕಾವು, ಬೀಸು ಹೇಳಿಕೆಗಳು, ಅನೇಕ ಸಾಮಾಜಿಕ ಒತ್ತಾಯಗಳು ಇದ್ದಾಗಲೂ, `ಬಿಡಿ ನನ್ನ ಪಾಡಿಗೆ ನನ್ನನ್ನು~ ಎಂದು ತಿಳಿಸುವ ಕವಯತ್ರಿ, ತಮ್ಮ ಹಾದಿಯನ್ನು ಸ್ವತಃ ಶೋಧಿಸಿಕೊಂಡವರು.
 
ಕೌಟುಂಬಿಕ ನೆಲೆಯಲ್ಲಿ ನಿಂತುಕೊಂಡೇ ಸ್ವಲೋಕವೊಂದನ್ನು ಸ್ಥಾಪಿಸಿಕೊಂಡದ್ದು, ಆ ನಿಟ್ಟಿನಲ್ಲಿ ಹೆಣ್ಣಿಗೆ ಪರ್ಯಾಯವನ್ನು ಕಟ್ಟಿತೋರಿಸಿದ್ದು ಸವಿತಾರ ಕಾವ್ಯದ ವಿಶಿಷ್ಟತೆಯೇ ಆಗಿದೆ.

ಈ ಮಾತುಗಳನ್ನು ಅವರ ಕಾವ್ಯದ ನಯಗಾರಿಕೆ, ನಿಲುವುಗಳಿಂದ ಹೇಳಬಹುದು. ಆದರೆ `ಮುಖ್ಯ ಕವಯತ್ರಿ~ ಎಂದುಕೊಳ್ಳುವಷ್ಟು ಶಕ್ತಿಯನ್ನು ಅವರ ಕವಿತೆಗಳು ಪಡೆದಿವೆಯೆ?

`ಜೀವಛಲದ ವ್ಯಾಖ್ಯಾನ~ವನ್ನು ಪ್ರತಿಭಾ ನಂದಕುಮಾರ್ ಅವರ ಕವಿತೆಗಳಲ್ಲಿ ಕಂಡುಕೊಂಡಿರುವ ಬರಹವಿದೆ. ಹೆಣ್ಣಿಗೆ ಒಳಗೂ-ಹೊರಗೂ ಎಂಬುದಿಲ್ಲ ಎಂಬ ಘಾಟಿತನದಲ್ಲಿ ಕವಿತೆ ಬರೆದ ಪ್ರತಿಭಾರವರು, ಆ ಕಾರಣದಿಂದ ಹೆಚ್ಚು ಅಥೆಂಟಿಸಿಟಿಯನ್ನು ಪಡೆದುಕೊಂಡರು.
 
ಆದರೆ ಅವರ ಕವಿತೆಗಳು ಆಧುನಿಕ ಸ್ತ್ರೀಯ ಪ್ರಖರತೆಯನ್ನು ತೊಟ್ಟುಕೊಳ್ಳಲು ನಿರತವಾದಂತೆಲ್ಲ, ಕವಿತೆಯ ಕಟ್ಟಡವೂ, ಫಾರ್ಮ್‌ನೊಂದಿಗೆ ಕುಸಿಯುತ್ತಾ ಬಂದಿದೆ. ಹೀಗಿರುವಾಗ, ಇಲ್ಲಿ ಉಲ್ಲೇಖಿಸಿರುವ ಕವಿತೆಗಳನ್ನು ಆಧರಿಸಿಯೂ ಪ್ರತಿಭಾರವರ ಕವಿತೆಗಳಿಗೆ ಕೊಡಮಾಡಿರುವ ಪ್ರಾಶಸ್ತ್ಯ ಪ್ರಶ್ನಾರ್ಹವಾಗಿದೆ.

ಈ ಇಬ್ಬರು ಕವಯತ್ರಿಯರ ಕವಿತೆಗಳ ಸಹಾಯದಿಂದ ಆಶಾದೇವಿಯವರು, ನಮ್ಮ ಕಾಲದ `ಪೊಯೆಟಿಕ್ಸ್~ ಅನ್ನು ಪರೋಕ್ಷವಾಗಿ ಮಂಡಿಸುತ್ತಿದ್ದಾರೆ. ನಮ್ಮ ಕಾಲದ ಪೊಯೆಟಿಕ್ಸ್ ಇಷ್ಟು ದುರ್ಬಲವಾಗಿದೆಯೇ? ಆಗಿರಬೇಕೇ?

`ಹೆಣ್ಣು ಮತ್ತು ಬದುಕಿನ ಕೇಂದ್ರಗಳ ಲೇಖಕಿ~ ಎನ್ನುವ ಬರಹವು ಸಾರಾ ಅಬೂಬಕರ್ ಅವರನ್ನೇ ಉದ್ದೇಶಿಸಿದಂತಿದೆ. `ಐತಿಹಾಸಿಕ ತುರ್ತು~ ಮತ್ತು `ಸನ್ನಿವೇಶ~ವನ್ನು ಪ್ರಧಾನವೆಂದು ಭಾವಿಸುವ ಈ ಬರಹ ಸಾರಾ ಅವರ ಕೃತಿಗಳನ್ನು ನೆಪಮಾತ್ರವಾಗಿ ಇಟ್ಟುಕೊಂಡಿದೆ ಅನಿಸುತ್ತದೆ.

ವೈದೇಹಿಯವರ ಕಥೆಗಳೊಂದಿಗೆ ವೀಣಾರವರ ಕಥೆಗಳನ್ನು ಸಮೀಕರಿಸಿ ಹೇಳುವುದು ಕೂಡ ಮಿಸ್‌ಮ್ಯಾಚ್ ಆಗಿದೆ; ಹೆಚ್ಚು ಔಪಚಾರಿಕ ಎನಿಸುತ್ತದೆ. ಇದಲ್ಲದೆ ಕೆಲವು ಸಾಂದರ್ಭಿಕ ಮುನ್ನುಡಿ ಬರಹಗಳೂ ಇವೆ.

ಈ ಕೃತಿಯಲ್ಲಿ `ಸೃಷ್ಟಿ~ ಮತ್ತು `ಸ್ಥಿತಿ~ ಎಂಬ ಎರಡು ವಿಭಾಗಗಳಿವೆ. ಸ್ತ್ರೀನೋಟದ `ಸೃಷ್ಟಿ~ಯ ಭಾಗದ ಬರಹಗಳಿಗಿಂತಲೂ, ಸ್ತ್ರೀಗೆ ವ್ಯಕ್ತಿತ್ವವನ್ನು ನಿರ್ಮಿಸಿಕೊಡುವಲ್ಲಿ, ಸ್ತ್ರೀ `ಸ್ಥಿತಿ~ಯ ಭಾಗದ ಬರಹಗಳು ಶಕ್ತವಾಗಿವೆ.

ನಡುವೆ ಸುಳಿವ ಆತ್ಮ

ಲೇ: ಡಾ. ಎಂ.ಎಸ್.ಆಶಾದೇವಿ
ಪು: 151; ಬೆ: ರೂ. 105
ಪ್ರ: ಅಹರ್ನಿಶಿ ಪ್ರಕಾಶನ, ವಿದ್ಯಾನಗರ, ಶಿವಮೊಗ್ಗ-577 204

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT