ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಾಧಾರಣ ಕಲಾತಪಸ್ವಿ: ರುಕ್ಮಿಣಿ ದೇವಿ ಅರುಂಡೇಲ್‌

ಡಾ. ವಿ ಆರ್ ದೇವಿಕಾ
Published 6 ಏಪ್ರಿಲ್ 2024, 23:30 IST
Last Updated 6 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ರುಕ್ಮಿಣಿ ದೇವಿ ಅರುಂಡೇಲ್ ಒಂದು ವಿಸ್ಮಯ. ಅಸಾಧ್ಯವಾದದ್ದನ್ನೆಲ್ಲಾ ಸಾಧ್ಯವಾಗಿಸುವ ಮಾಂತ್ರಿಕತೆ ಅವರ ಚೈತನ್ಯದಲ್ಲಿ ಅಡಕವಾಗಿತ್ತು. ಅವರ ಬಹುಮುಖೀ ವ್ಯಕ್ತಿತ್ವದ ಆಳ-ಅಗಲ ಚೆನ್ನೈನ ಥಿಯೊಸೊಫಿಕಲ್ ಸೊಸೈಟಿಯಲ್ಲಿರುವ ಆಲದಮರದಷ್ಟು. ಥಿಯೊಸೊಫಿಸ್ಟ್, ಭರತನಾಟ್ಯ ಕಲಾವಿದೆ, ಶಾಸ್ತ್ರೀಯ ನೃತ್ಯ ಪ್ರಕಾರವನ್ನು, ಸಾಂಪ್ರದಾಯಿಕ ಭಾರತೀಯ ಕಲೆಗಳು ಮತ್ತು ಕರಕುಶಲಗಳನ್ನು ಪುನರುಜ್ಜೀವನಗೊಳಿಸಿದ ಸಾಧಕಿ, ಕಲಾಕ್ಷೇತ್ರ ಫೌಂಡೇಶನ್ ಸ್ಥಾಪಕಿ, ಪ್ರಾಣಿ ಕಲ್ಯಾಣದ ಕಾರ್ಯಕರ್ತೆ, ರಾಜ್ಯಸಭೆಯ ಸದಸ್ಯರಾಗಿ ನಾಮನಿರ್ದೇಶಕಗೊಂಡ ಮೊದಲ ಮಹಿಳೆ–ಹೀಗೆ ಹಲವು ಕ್ಷೇತ್ರಗಳ ಅಸಾಧಾರಣ ಪ್ರತಿಭೆ.

120 ವರ್ಷಗಳ ಹಿಂದೆ ಅಧಿಕ ವರ್ಷದಲ್ಲಿ ಫೆಬ್ರುವರಿ 29ರಂದು ಜನಿಸಿದ ರುಕ್ಮಿಣಿ ದೇವಿ ಅವರನ್ನು, ತಂದೆ ನೀಲಕಂಠ ಶಾಸ್ತ್ರಿಯ ಅಪಾರ ಪಾಂಡಿತ್ಯ, ತಾಯಿ ಶೇಷಮ್ಮಾಳ್ ಅವರ ಸಂಗೀತ ಕಲೆ, ಅಣ್ಣ ನೀಲಕಂಠ ಶ್ರೀರಾಮ್ ಅವರ ಥಿಯೊಸೊಫಿಕಲ್ ಸೊಸೈಟಿಯ ನಂಟು ಜೊತೆಗೆ ಅನ್ನಿ ಬೆಸೆಂಟ್‌ನ ಸಖ್ಯ ಎಲ್ಲವೂ ಪೋಷಿಸಿ ರೂಪಿಸಿದವು. ಆಧುನಿಕ ಭಾರತವನ್ನು ರೂಪಿಸಿದ ನೂರು ಜನರಲ್ಲಿ ರುಕ್ಮಿಣಿ ದೇವಿ ಒಬ್ಬರು ಎಂದು ದಾಖಲಿಸಲಾಗಿದೆ. ವಿಶ್ವಭಾರತಿ ವಿಶ್ವವಿದ್ಯಾಲಯದ ದೇಶಿಕೋತ್ತಮ, ಕಾಳಿದಾಸ ಸಮಾನ, ಪ್ರಾಣಿಮಿತ್ರ ಬಿರುದು, ಕ್ವೀನ್ ವಿಕ್ಟೊರಿಯಾ ಸಿಲ್ವರ್ ಮೆಡಲ್, ಅಮೆರಿಕಾದ ವೈನ್ ಸ್ಟೇಟ್ ಯುನಿರ್ವಸಿಟಿಯ ಗೌರವ ಡಾಕ್ಟರೇಟ್ ಇತ್ಯಾದಿ ಸನ್ಮಾನಗಳಿಗೆ ಬಾಧ್ಯರಾದವರು.

ರುಕ್ಮಿಣಿ ದೇವಿ ಅವರನ್ನು ಬದಲಾವಣೆಯ ಹರಿಕಾರರು ಎಂದೇ ಪರಿಚಯಿಸಲಾಗುತ್ತಿತ್ತು. ಪ್ರಾಚೀನ ಭಾರತೀಯ ಕಲೆ ಮತ್ತು ತತ್ತ್ವಶಾಸ್ತ್ರೀಯ ಪಾಶ್ಚಿಮಾತ್ಯ ದೃಷ್ಟಿಕೋನ ಇವೆರಡರ ಮೇಳೈಕೆಯಿಂದ, ಧಾರ್ಮಿಕ ಸಿದ್ಧಾಂತದ ಕಟ್ಟುಪಾಡುಗಳಿಂದ ಬಿಡಿಸಿಕೊಂಡು ನವ ಆಧ್ಯಾತ್ಮಿಕತೆಯ ದಾರಿಯಲ್ಲಿ ಸಾಗುವ ಧೈರ್ಯ ಮಾಡಿದ ಧೀಮಂತ ಮಹಿಳೆ. ತಮ್ಮ 16ನೇ ವಯಸ್ಸಿನಲ್ಲಿ 42 ವಯಸ್ಸಿನ ಬಿಷಪ್ ಅರುಂಡೇಲ್ ಅವರನ್ನು ಮದುವೆಯಾಗಿ ಥಿಯೊಸೊಫಿಕ್‌ ಹಾದಿಯಲ್ಲಿ ನಡೆಯುತ್ತಾ ಜಗತ್ ಪರ್ಯಟನೆ ಮಾಡಿ ಆ ನೆಲೆಯಲ್ಲಿ ಅನ್ನಾ ಪ್ಲಾವಲೋವಾ, ಮರಿಯಾ ಮಾಂಟೆಸ್ಸರಿ, ಜೇಮ್ಸ್ ಕಸಿನ್ಸ್ ನಂತಹ ವ್ಯಕ್ತಿಗಳ ಸಹವಾಸದಲ್ಲಿ ಸತತವಾಗಿ ಕಲಿಯುತ್ತಾ ಭಾರತೀಯ ಮಹಿಳೆಯರು ಹಿಂದೆಂದೂ ಅನುಭವಿಸದ ಹೊಸ ವಿಮೋಚನೆಗೆ ರುಕ್ಮಿಣಿ ದೇವಿ ಸಂಕೇತವಾದರು.

ಭರತನಾಟ್ಯ ನೃತ್ಯ ನಾಟಕ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಿದ ಕೀರ್ತಿ ರುಕ್ಮಿಣಿ ದೇವಿ ಅವರಿಗೆ ಸಲ್ಲುತ್ತದೆ. ‘ಸೀತಾ ಸ್ವಯಂವರಂ’ ‘ಶ್ರೀರಾಮ ವನಾಗಮನಂ’, ‘ಪಾದುಕಾ ಪಟ್ಟಾಭಿಷೇಕಂ’ ‘ಶಬರಿ ಮೋಕ್ಷಮ್’, ‘ಮಹಾಪಟ್ಟಾಭಿಷೇಕಂ’ಗಳನ್ನು ಸಂಯೋಜಿಸಿ ಅವುಗಳಿಗೆ ಸಂಗೀತಕ್ಕಾಗಿ ಮೈಸೂರು ವಾಸುದೇವಾಚಾರ್ಯ, ಪಾಪನಾಶನ್ ಶಿವನ್ ಮುಂತಾದ ಮಹಾನ್‌ ಪ್ರತಿಭೆಗಳನ್ನು ಆಹ್ವಾನಿಸಿದ್ದು ಚರಿತ್ರೆಯಲ್ಲಿ ಉಲ್ಲೇಖವಾಗಿದೆ. ರುಕ್ಮಿಣಿ ದೇವಿ ನೃತ್ಯ ಸಂಯೋಜಿಸಿದ 25 ನೃತ್ಯ ನಾಟಕಗಳೂ ಇವತ್ತು ಕ್ಲಾಸಿಕ್ ಎಂದು ಪರಿಗಣಿತವಾಗಿವೆ.

ಮೈಸೂರು ವಾಸುದೇವಾಚಾರ್ಯರನ್ನು ಮದ್ರಾಸಿಗೆ ಕರೆಯಲು ರುಕ್ಮಿಣಿ ದೇವಿ ಮೈಸೂರಿಗೆ ಬಂದಾಗ ವಾಸುದೇವಾಚಾರ್ಯರಿಗೆ 88 ವರ್ಷ. ರುಕ್ಮಿಣಿ ದೇವಿಯವರು ಅತ್ಯಂತ ವಿನಯದಿಂದ ‘ಬರುತ್ತೀರಾ’ ಎಂದು ಕೇಳಿದಾಗ, ‘ಮಹಾರಾಜರು ಅನುಮತಿಸಿದರೆ ಖಂಡಿತಾ ಬರುತ್ತೇನೆ. ಆದರೆ ಆಗಲೂ ನನ್ನನ್ನು ನಾನು ಮೈಸೂರಿನ ಆಸ್ಥಾನ ವಿದ್ವಾನ್ ಎಂದು ಪರಿಗಣಿಸುತ್ತೇನೆ’ ಎಂದರು. ರುಕ್ಮಿಣಿ ದೇವಿಯವರು ಮೈಸೂರು ಮಹಾರಾಜರನ್ನೇ ವಿನಂತಿಸಿಕೊಂಡರು. ಕಲಾಭಿಮಾನಿಗಳಾದ ಜಯಚಾಮರಾಜೇಂದ್ರ ಒಡೆಯರ್‌ ಅವರು ರಾಮಾಯಣಕ್ಕೆ ಸಂಗೀತ ಸಂಯೋಜಿಸಲು ವಾಸುದೇವಾಚಾರ್ಯ ಅವರು ಮದ್ರಾಸಿಗೆ ಹೋಗುವುದು ಒಳ್ಳೆಯದು ಎಂದು ಭಾವಿಸಿ ಕಳಿಸಿಕೊಟ್ಟರು. ರುಕ್ಮಿಣಿ ದೇವಿಯವರ ಅಚಲ ಶ್ರದ್ಧೆ ಎಷ್ಟು ಗಟ್ಟಿಯಾಗಿತ್ತೆಂದರೆ ವಾಸುದೇವಾಚಾರ್ಯ ತಮಗೆ ಜೊತೆಯಾಗಿ ಮೊಮ್ಮಗ ರಾಜಾರಾಮ್ ಬರಬೇಕೆಂದು ಕೇಳಿದಾಗ,  ಅವರು ಹರಸಾಹಸದಿಂದ ಧಾರವಾಡ ಆಕಾಶವಾಣಿಯಲ್ಲಿ ಜಲತರಂಗ ಕಲಾವಿದರಾಗಿದ್ದ ರಾಜಾರಾಮ್ ಅವರನ್ನು ಮದ್ರಾಸಿಗೆ ವರ್ಗ ಮಾಡಿಸುವಲ್ಲಿ ಯಶಸ್ವಿಯಾದರು. ವಾಸುದೇವಾಚಾರ್ಯ ಅವರ ಸಂಗೀತ ಸಂಯೋಜನೆ ಇಂದಿಗೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ನೃತ್ಯ ನಾಟಕದ ಹೊಸಪರಿಕಲ್ಪನೆಗೆ ಪೂರಕವಾಗಿ ಸಂಗೀತ ಮಾತ್ರವಲ್ಲಾ, ರಂಗಪರಿಕರ, ವೇಷಭೂಷಣಗಳಲ್ಲೂ ರುಕ್ಮಿಣಿ ದೇವಿ ಕ್ರಾಂತಿಯನ್ನೇ ಮಾಡಿದರು. ಇಂದಿಗೂ ಕಲಾಕ್ಷೇತ್ರದ ಎಲ್ಲಾ ವಿದ್ಯಾರ್ಥಿಗಳಿಗೂ ರುಕ್ಮಿಣಿ ದೇವಿ ‘ಅತ್ತೈ’ ಆಗಿರುವುದು ಬರಿ ಬಾಯಿಮಾತಿಗಲ್ಲ. ಹುಡುಗಿಯರು ಮಾತ್ರ ನರ್ತಿಸುತ್ತಾರೆ, ಹುಡುಗರಲ್ಲ ಎನ್ನುವ ನಂಬಿಕೆ ಇದ್ದ ಕಾಲದಲ್ಲಿ ಅಡ್ಯಾರ್ ಕೆ. ಲಕ್ಷ್ಮಣ್ಣನ್ ನಂತಹ ಹುಡುಗರನ್ನು ‘ಇದು ದೈಹಿಕ ವ್ಯಾಯಾಮ’ ಎಂದು ನಂಬಿಸಿ ನೃತ್ಯಕ್ಕೆ ಕರೆದುತಂದರು. 

ರುಕ್ಮಿಣಿ ದೇವಿ ಅವರ ಮೇಲೆ ನಂತರದ ಪೀಳಿಗೆಯವರು ಹಲವಾರು ಆರೋಪಗಳನ್ನು ಮಾಡಿದರು. ಅವರು ಸಾಂಪ್ರದಾಯಿಕ ಸಾದಿರ್ ನ ಶೃಂಗಾರವನ್ನು ತೆಗೆದುಹಾಕಿ ‘ಶುದ್ಧಗೊಳಿಸಿದರು’ ಎನ್ನುವುದು ಒಂದು. ದೇವದಾಸಿಯರಲ್ಲದೇ ಬೇರೆ ‘ಕುಲೀನ’ ಮನೆತನದ ಹೆಂಗಸರು ನೃತ್ಯವನ್ನು ಕಲಿಯುವುದು ಮತ್ತು ಅದಕ್ಕೂ ಹೆಚ್ಚಾಗಿ ಸಾರ್ವಜನಿಕವಾಗಿ ಪ್ರದರ್ಶಿಸುವುದನ್ನು ಊಹಿಸಿಕೊಳ್ಳಲೂ ಆಗದ ಕಾಲದಲ್ಲಿ ರುಕ್ಮಿಣೀದೇವಿ ಅದನ್ನು ಸಾಧ್ಯವಾಗಿಸಿದರು ಮತ್ತು ನಂತರದ ಪೀಳಿಗೆಯವರಿಗೆ ದಾರಿ ಮಾಡಿಕೊಟ್ಟರು. ಇಲ್ಲದಿದ್ದರೆ ಇವತ್ತು ಸಾದಿರ್ ಕಾಲನ ಕತ್ತಲೆಯಲ್ಲಿ ಕರಗೇ ಹೋಗುತ್ತಿತ್ತು ಎನ್ನುವ ಮಹತ್ವದ ಸಂಗತಿಯನ್ನು ಈ ಟೀಕಾಕಾರರು ಗ್ರಹಿಸಲೇ ಇಲ್ಲ. ರುಕ್ಮಿಣಿ ದೇವಿಯವರ ಸಾಧನೆಗಳ ಬಗ್ಗೆ ಒಂದು ನಿರ್ದಿಷ್ಟ ವಿಶ್ಲೇಷಣೆಯ ಅಗತ್ಯವಿತ್ತು ಮತ್ತು ಟೀಕೆಗಳನ್ನು ಮರುವ್ಯಾಖ್ಯಾನಕ್ಕೆ ಒಳಪಡಿಸುವ ಅನಿವಾರ್ಯವಿತ್ತು ಎನ್ನಿಸಿದ್ದರಿಂದ ‘ರುಕ್ಮಿಣಿ ದೇವಿ ಅರುಂಡೇಲ್‌: ಆರ್ಟ್ಸ್‌ ರಿವೈವಲಿಸ್ಟ್‌ ಆ್ಯಂಡ್‌ ಇನ್‌ಸ್ಟಿಟ್ಯೂಷನ್‌ ಬಿಲ್ಡರ್‌’ ಕೃತಿಯನ್ನು ‘ಪಯನಿರ‍್ಸ್ ಆಫ್ ಮಾರ್ಡನ್‌ ಇಂಡಿಯಾ’ ಸರಣಿಯಲ್ಲಿ ರಚಿಸಲು ನಿಯೋಗಿ ಬುಕ್ಸ್ ನಿಯೋಜಿಸಿತು. ಅವರ ಜೀವನ ಸಾಧನೆ ಕುರಿತು ಹಲವಾರು ಪುಸ್ತಕಗಳು ಪ್ರಕಟವಾಗಿವೆ. ಆದರೂ ಇನ್ನೂ ಬರೆಯಲು ಸರಕು ಬಹಳ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT