ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದರ್ಶನ: ಮಾಲಿಕಾ ಪಣಿಕ್ಕರ್ ಎಂಬ ಭರತನಾಟ್ಯದ ಸಿರಿಮಲ್ಲಿಗೆ..

ಸಂದರ್ಶನ: ದಾದಾಪೀರ್‌ ಜೈಮನ್‌
ಸಂದರ್ಶನ: ದಾದಾಪೀರ್‌ ಜೈಮನ್‌
Published 25 ನವೆಂಬರ್ 2023, 20:37 IST
Last Updated 25 ನವೆಂಬರ್ 2023, 20:37 IST
ಅಕ್ಷರ ಗಾತ್ರ

ಹಿಂದೆ ಗಿರೀಶ್‌ ಪಣಿಕ್ಕರ್‌ ಆಗಿದ್ದು, ಆಮೇಲೆ ಮಾಲಿಕಾ ಆಗಿ ಬದಲಾದ ಅಪರೂಪದ ಭರತನಾಟ್ಯ ಕಲಾವಿದೆ ಇತ್ತೀಚೆಗೆ ಬೆಂಗಳೂರಿನಲ್ಲಿ ನೃತ್ಯ ಪ್ರದರ್ಶನ ನೀಡಿ ಹೋದರು. ಅವರ ಬದುಕಿನ ಪುಟಗಳನ್ನು ಚಕಚಕನೆ ತಿರುವಿದಂತೆ ಭಾಸವಾಗುವಂತಿರುವ ಸಂದರ್ಶನ ಇಲ್ಲಿದೆ.

–––––

ಇಷ್ಟು ವರ್ಷಗಳ ನಿಮ್ಮ ಕಲಾಜೀವನವನ್ನೊಮ್ಮೆ ಹಿಂತಿರುಗಿ ನೋಡಿದಾಗ ನಿಮಗೆ ಏನನಿಸುತ್ತದೆ ಎನ್ನುವ ಪ್ರಶ್ನೆಯೊಂದಿಗೆ ಮಾತು ಪ್ರಾರಂಭಿಸಿದಾಗ, ಮಾಲಿಕಾ ಪಣಿಕ್ಕರ್‌ ತಮ್ಮ ಎಂದಿನ ಶಾಂತ, ಗಂಭೀರ, ಲವಲವಿಕೆ ಮತ್ತು ಜೀವನ್ಮುಖಿ ದನಿಯಲ್ಲಿ ಉತ್ತರ ಹೇಳಲಾರಂಭಿಸಿದರು.

‘ಈಗ ಕಲೆಯೇ ಜೀವನ ಎಂದು ಬದುಕುವ ಜನರಿಲ್ಲ. ಕಲೆ ಎನ್ನುವುದು ದಿನನಿತ್ಯದ ಹತ್ತರಲ್ಲಿ ಹನ್ನೊಂದರ ಹಾಗೆ ಈ ತಲೆಮಾರಿನ ಮಕ್ಕಳ ಬದುಕಿನಲ್ಲಿ ಹಾಜರಿ ಹಾಕುತ್ತಿದೆಯಷ್ಟೇ. ಈಗಿನ ಕಾಲಕ್ಕೆ ತಕ್ಕಂತೆ ನಾವೇ ಬದಲಾಗಬೇಕೋ ಅಥವಾ ಈ ತಲೆಮಾರಿನ ಜೀವನಶೈಲಿಯಲ್ಲಿಯೇ ಆ ದೋಷವಿದೆಯೋ ತಿಳಿಯುವುದಿಲ್ಲʼ ಎನ್ನುತ್ತಾ ಮಾತು ಶುರುಮಾಡಿದ ಅವರು, ಥಟ್ಟನೆ ಈ ಕಾಲದ ವೇಗವೂ ಅವರ ಮೇಲೊಂದು ಹೊರೆ ಹೊರೆಸಿಟ್ಟಿದೆಯೇನೋ ಎನ್ನುವ ಕಾರಣವನ್ನೂ ನೀಡಿದರು. ಇಪ್ಪತ್ತೆಂಟು ವರ್ಷಗಳ ಕಾಲ ಸಾವಿರಾರು ಮಕ್ಕಳಿಗೆ ನೃತ್ಯ ಕಲಿಸಿದ ಗುರುವಾಗಿ, ಕಲೆಯ ಆರಾಧಕಿಯಾಗಿ, ತಮ್ಮ ಸೃಜನಶೀಲ ಯೋಚನೆಗಳಿಂದ ಪರಿಪೂರ್ಣತೆ ಮತ್ತು ಶ್ರೇಷ್ಠತೆಗೆ ಸದಾ ಹಾತೊರೆಯುವ ಮಾಲಿಕಾ ಪಣಿಕ್ಕರ್‌ ‘ತಂತ್ರಜ್ಙಾನ ಕ್ಷೇತ್ರ ಇಷ್ಟೊಂದು ಮುಂದುವರೆದಿರುವ ಈ ಕಾಲದಲ್ಲಿ ಈಗಿನ ನೃತ್ಯ ನಿರ್ದೇಶಕರು ಮಾಡುವ ಹೊಸ ಹೊಸ ಪ್ರಯೋಗಗಳನ್ನು ನಾನು ಆ ಕಾಲಕ್ಕೆ ಮಾಡಿಬಿಟ್ಟಿದ್ದೇನೆ’ ಎಂದು ಹೇಳುವಾಗ ಅವರ ದನಿಯಲ್ಲೊಂದು ಗರ್ವ ಮತ್ತು ಆತ್ಮವಿಶ್ವಾಸ ಎದ್ದು ಕಾಣುತ್ತದೆ.  

ಗಿರೀಶ್‌ ಪಣಿಕ್ಕರ್‌ ಆಗಿದ್ದ ಮಾಲಿಕಾ ಅವರು ತಮ್ಮ ಏಳನೇ ವಯಸ್ಸಿನಲ್ಲಿಯೇ ನೃತ್ಯಾಭ್ಯಾಸ ಪ್ರಾರಂಭಿಸಿದರು. ಅವರು ಲಿಂಗತ್ವ ಮರುಹೊಂದಿಸುವಿಕೆ ಶಸ್ತ್ರಚಿಕಿತ್ಸೆಗೆ ತಮ್ಮನ್ನು ಒಡ್ಡಿಕೊಂಡದ್ದು ಅವರ 39ನೆಯ ವಯಸ್ಸಿನಲ್ಲಿ. ಅದನ್ನೂ ಅವರು ‘ಈಗೆಲ್ಲಾ ಆಯುಷ್ಯದ ಗುರಿ 80 ಆಗಿಹೋಗಿದೆ. ಹಾಗೆ ನೋಡಿದರೆ ಹೆಚ್ಚುಕಡಿಮೆ ನನ್ನ ಅರ್ಧ ವಯಸ್ಸಿಗೆ ಹೆಣ್ಣಾಗಿ ರೂಪಾಂತರಗೊಂಡೆ. ಮರುಹುಟ್ಟೇ ನನ್ನ ನಿಜದ ಹುಟ್ಟಾದ್ದರಿಂದ ಈಗ ನನಗೆ ಕೇವಲ ಹನ್ನೆರಡು ವರ್ಷವಷ್ಟೆ!’ ಎಂದು ತಮ್ಮ ಜೀವನದ ಮಹತ್ವದ ನಿರ್ಧಾರವನ್ನು ಯಾವುದೇ ಹಾಸ್ಯಲೇಪಿತ ಮಾತುಗಳಲ್ಲಿ ದಾಟಿಸಿದರು.

ಟ್ರಾನ್ಸಿಶನ್‌ಗೆ ಒಳಗಾಗುವಾಗ ಕುಟುಂಬದವರ ಬೆಂಬಲ ಹೇಗಿತ್ತು ಎಂದು ಕೇಳಿದಾಗ, ‘ಟ್ರಾನ್ಸಿಶನ್‌ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ನಾನಾಗಲೇ ನನ್ನ ಕ್ಷೇತ್ರದಲ್ಲಿ ಹೆಸರು ಮಾಡಿದ್ದೆ. ಹಾಗಾಗಿ ನನಗೆ ತೊಂದರೆಯೇನೂ ಆಗಲಿಲ್ಲ’ ಎಂದು ಉತ್ತರಿಸಿದರು.

‘ಹಾಗಾದರೆ ಕಲಾಜಗತ್ತು ನಿಮ್ಮನ್ನು ಹೇಗೆ ಸ್ವೀಕರಿಸಿತು’ ಎಂಬ ಪ್ರಶ್ನೆಗೂ, ‘ನೋಡಿ, ಕಲೆಗೆ ಜೆಂಡರ್‌ ಅಂತ ಇಲ್ಲ. ನನ್ನ ವಿಷಯದಲ್ಲಿ ಕಲಾಜಗತ್ತು ಏನೂ ವ್ಯತ್ಯಾಸವಿಲ್ಲದಂತೆಯೇ ನಡೆದುಕೊಂಡಿತು. ನಾನು ಚಿಕ್ಕವನಿದ್ದಾಗ ನನ್ನ ಹೆಣ್ಣಿಗ ವರ್ತನೆಗೆ ನನ್ನ ಸ್ನೇಹಿತರು ಆಡಿಕೊಳ್ಳುವುದು ಇದ್ದೇ ಇತ್ತು. ನಾನು ಆ ಹುಡುಗರ ಜೊತೆಗೆ ಆಡಲು ಹೋಗುತ್ತಿರಲಿಲ್ಲ ಎನ್ನುವುದು ಒಂದು ಕಡೆ. ನಾನು ನನ್ನ ಜೀವನದಲ್ಲಿ ಅಧಿಕಾರ ಚಲಾಯಿಸಲು ಯಾರಿಗೂ ಅವಕಾಶ ಕೊಡುವುದಿಲ್ಲ ಇನ್ನುವುದು ಇನ್ನೊಂದು ಕಡೆ. ಹಾಗಾಗಿ ಅವೆಲ್ಲ ನನಗೆ ಸಮಸ್ಯೆ ಎನಿಸಲಿಲ್ಲ.

ಹಾಗೆ ನೋಡಿದರೆ ಭರತನಾಟ್ಯದ ಭಾವ–ಭಂಗಿಗಳಲ್ಲಿ ಹೆಣ್ತನದ ರೂಪಗಳೇ ಹೆಚ್ಚು ಕಾಣುವುದಲ್ಲವೆ! ಭರತನಾಟ್ಯ ನಿತ್ಯವೂ ನನಗೆ ಹೊಸ ಬಿಡುಗಡೆಯನ್ನು ಕೊಡುತ್ತಿತ್ತು’ ಎಂದು ಹೇಳಿದರು ಮಾಲಿಕ. ‘ನನ್ನಮ್ಮ ವಯಸ್ಸಿನಲ್ಲಿರುವಾಗ ನೃತ್ಯ ಮಾಡುತ್ತಿದ್ದರು. ನನ್ನಕ್ಕ ನೃತ್ಯ ಮಾಡುವಾಗ ಬೆರಗುಗಣ್ಣಿನಲ್ಲಿ ನಾನು ಅವಳನ್ನೇ ನೋಡುತ್ತಾ ನಿಲ್ಲುತ್ತಿದ್ದೆ. ಅದೇಕೋ ಏನೋ ಕಾಣೆ. ಅವರು ನೃತ್ಯ ಮಾಡುವುದನ್ನು ನಿಲ್ಲಿಸಿಯೇಬಿಟ್ಟರು. ನಾನು ನೃತ್ಯದ ಕೈ ಹಿಡಿದು ಇಲ್ಲಿಯವರೆಗೂ ಬಂದುಬಿಟ್ಟೆ’ ಎಂದು ಮನುಷ್ಯಪ್ರಯತ್ನದ ಯಶೋಗಾಥೆಗೆ ಬೆನ್ನುಚಪ್ಪರಿಸಿಕೊಂಡರು. ಮರುಕ್ಷಣವೇ, ‘ಶಂಕರಾಚಾರ್ಯರ ಜೀವನವಿಧಿ ಸನ್ಯಾಸಿಯನ್ನೇ ಮಾಡಿದಹಾಗೆ ನನ್ನ ಜೀವನವಿಧಿಯೂ ನೃತ್ಯವೇ ಆಗಿರಬಹುದಲ್ಲವೇ’ ಎಂದು ಒಂದು ಸಣ್ಣ ಸಂದೇಹವನ್ನೂ ಸೇರಿಸಿದರು.

‘ನನಗೆ ಮೊದಲಿನಿಂದಲೂ ನೃತ್ಯವೆಂದರೆ ಮೋಹ. ಮೋಹಿನಿಯಾಟ್ಟಂ, ಕಥಕಳಿ ಪ್ರದರ್ಶನಗಳು ಇವೆ ಎಂದು ಕಿವಿಗೆ ಬಿದ್ದರೆ ಸಾಕು, ನಾನಲ್ಲಿ ಹಾಜರಿರುತ್ತಿದ್ದೆ. ಮೈಯೆಲ್ಲಾ ಕಣ್ಣು ಕಿವಿಯಾಗಿ ಗಮನಿಸುತ್ತಿದ್ದೆ. ನಾನು ಜೀವನದಲ್ಲಿ ಎಷ್ಟೋ ವಿಷಯಗಳನ್ನು ಗಮನವಿಟ್ಟು ಕಾಣುವ ತಂತ್ರದಿಂದಲೇ ಕಲಿತದ್ದಿದೆ. ನನಗೆ ಯಾರೋ ಬಂದು ಹೀಗೆಯೇ ಮಾಡು ಎಂದು ಹೇಳಿದರೆ, ನನಗದನ್ನು ಮಾಡಲು ಸಾಧ್ಯವಾಗುವುದೇ ಇಲ್ಲ. ನಾನು ಬೇರೆ ಬೇರೆ ನೃತ್ಯಪ್ರಕಾರದ ವ್ಯತ್ಯಾಸಗಳನ್ನು ಕಲಿತದ್ದೇ ಗಮನಿಸುವುದರ ಮೂಲಕ. ನಾನೊಬ್ಬಳು ನೃತ್ಯಗಾತಿ ಅಷ್ಟೆ ಅಲ್ಲ, ವಸ್ತ್ರವಿನ್ಯಾಸಕಿಯೂ ಹೌದು. ಚೆನ್ನಾಗಿ ಅಡುಗೆಯನ್ನೂ ಮಾಡುತ್ತೇನೆ. ನನ್ನ ಬಳಿ ಕಲಿಯಲು ಬಂದ ಮಕ್ಕಳೆಲ್ಲರೂ ‘ಟೀಚರ್‌ ಅದು ಮಾಡಿಕೊಡಿ, ಟೀಚರ್‌ ಇದು ಮಾಡಿಕೊಡಿ’ ಎಂದು ಕೇಳುತ್ತಲೇ ಇರುತ್ತಾರೆ. ರುಚಿಯ ನೆನಪು ನಾಲಗೆ ಮೇಲೆ ಅಚ್ಚಳಿಯದೆ ಉಳಿಯುತ್ತದಲ್ಲವೇ’ ಎಂದು ಲವಲವಿಕೆಯೇ ಮೈವೆತ್ತಂತೆ ಮಾತನಾಡುತ್ತಾರೆ ಮಾಲಿಕಾ.

ಸಿಂಗಪೂರಿನಲ್ಲಿನ ತಮ್ಮ ಹದಿನಾಲ್ಕು ವರ್ಷಗಳ ವಾಸವನ್ನು ಅವರು ವನವಾಸ ಎಂದು ಕರೆದುಕೊಳ್ಳುತ್ತಾರೆ. ‘ನನಗೆ ಜಗತ್ತನ್ನು ನೋಡಬೇಕು. ಹೊಸ ಹೊಸ ಅವಕಾಶಗಳನ್ನು ಅಪ್ಪಿಕೊಳ್ಳಬೇಕು ಎನ್ನುವ ಕಾರಣದಿಂದ ಸಿಂಗಪೂರಿಗೆ ಹೋದೆ’ ಎಂದು ಸರಳವಾದ ವಾಕ್ಯದಲ್ಲಿ ಉತ್ತರ ಕೊಟ್ಟರೂ, ಸಿಂಗಪೂರಿನಲ್ಲಿ ಸೆಲೆಬ್ರಿಟಿಯೆಂದೇ ಅವರು ಗುರುತಾಗಿದ್ದಾರೆ. 1996ರಲ್ಲಿ ಸಿಂಗಪೂರಿನಲ್ಲಿರುವ ಭಾರತ ಲಲಿತಕಲಾ ಸಂಘದಲ್ಲಿ ನೃತ್ಯಶಿಕ್ಷಕಿಯಾಗಿ ಸೇರಿಕೊಂಡ ಅವರಿಗೆ ಶ್ರದ್ಧೆ, ಪ್ರತಿಭೆ ಮತ್ತು ಕಲಾಪ್ರಕಾರ ಕುರಿತಾದ ಪ್ರೀತಿ ಅಲ್ಲಿ ದೊಡ್ಡ ಹೆಸರನ್ನು ತಂದುಕೊಟ್ಟಿತು. ಸಿಂಗಪೂರಿನ ವಾಸವೇ ಅವರು ‘ನಾಟ್ಯಂ ಮಾಲಿಕಾ’ ಎನ್ನುವ ಸಂಸ್ಥೆ ಸ್ಥಾಪಿಸಿ ಹನ್ನೆರಡು ವರ್ಷಗಳ ಕಾಲ ನಡೆಸುವಂತೆ ಮಾಡಿತು.

‘ಸಿಂಗಪೂರ್ ಅಬ್ಬಬ್ಬಾ ಅಂದರೆ ಸುಮಾರು ನಲವತ್ತರಿಂದ ಐವತ್ತು ಕಿಲೋಮೀಟರ್‌ ಇದೆಯೇನೋ. ನಾನು ಸಿಂಗಪೂರಿನಲ್ಲಿ ಟ್ರಾನ್ಸಿಷನ್‌ಗೆ ಒಳಗಾದ ಒಂದು ವಾರದಲ್ಲಿಯೇ ಚಕಚಕ ಎಂದು ಎಲ್ಲ ಸರ್ಟಿಫಿಕೇಟ್‌, ಪಾಸ್‌ಪೋರ್ಟ್‌ ಮುಂತಾದ ಎಲ್ಲವೂ ಬದಲಾಗಿ ಬಂದವು. ಇದೆಲ್ಲ ಸಾಧ್ಯವಾಗಿದ್ದು ಅವರು ಸಂವಿಧಾನ ರೂಪಿಸುವಾಗಲೇ ಕ್ವಿಅರ್‌ ಸಮುದಾಯದ ಹಿತವನ್ನು ಪರಿಗಣನೆಗೆ ತೆಗೆದುಕೊಂಡಿದ್ದು’ ಎಂದು ಅವರು ಹೇಳಿದ ಅನುಭವ ಕಣ್ಣರಳಿಸುವಂತೆ ಮಾಡಿತು.

‘ಮೊನ್ನೆ ನಾನೊಂದು ಮದುವೆಗೆ ಹೋಗಿದ್ದೆ. ಸುಮಾರು ಮೂವತ್ತಾರು ವರ್ಷಗಳ ಹಿಂದೆ ನೋಡಿದ ಪರಿಚಿತ ಮುಖಗಳೆಲ್ಲ ಕಂಡವು. ನಾನೊಂದು ಇಪ್ಪತ್ತು ವರ್ಷ ಹಳೆಯ ಜರಿ ಸೀರೆ, ಗಾಜಿನ ಬಳೆ ಹಾಕಿಕೊಂಡು ಹೋಗುವಾಗ ಎಲ್ಲರೂ ನನ್ನತ್ತ ನೋಡಿ ‘ಆಹಾ ಕಣ್ಣನ್‌, ಹೇಗಾಗಿಬಿಟ್ಟಿದ್ದಿ! ಎಷ್ಟು ಚೆನ್ನಾಗಿ ಕಾಣುತ್ತಿ. ಮುಖದಲ್ಲಿ ಎಷ್ಟೊಂದು ತೇಜಸ್ವಿ ಕಳೆಯಿದೆ’ ಎಂದೆಲ್ಲ ಹೊಗಳುತ್ತಿದ್ದರು. ‘ನಾವ್ಯಾರೂ ನೀನು ಇಷ್ಟೊಂದು ಬೆಳೀತೀಯ, ಹೀಗಾಗ್ತೀಯಾ ಅಂತ ಊಹೆಯನ್ನೂ ಮಾಡಿರಲಿಲ್ಲ’ ಎಂದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದರು’ ಎಂದು ಹೇಳುವಾಗ, ನಾವುಗಳು ನಮ್ಮೊಳಗಿನ ದನಿ ನಮಗೆ ಕಾಣಿಸುವ ನಮ್ಮಂತೆಯೇ ಇದ್ದರೆ ಸರಳವಾಗಿ ಕಂಡರೂ ಘನವಾಗಿ ಕಾಣುತ್ತದೆ ಎನ್ನುವ ತತ್ತ್ವವನ್ನೇ ಅವರು ದಾಟಿಸುತ್ತಿದ್ದಾರೆ ಎನಿಸಿತು. ‘ನನ್ನನ್ನು ಸಂದರ್ಶನ ಮಾಡಲು ಬರುವ ಯಾರಿಗೇ ಆದರೂ ಬರೆಯುವುದಾದರೆ ನನ್ನ ಕಲಾಜೀವನದ ಬಗ್ಗೆ ಹೆಚ್ಚು ಬರೆಯಿರಿ ಎಂದು ಒತ್ತಿ ಹೇಳುತ್ತಿರುತ್ತೇನೆ’ ಎಂದು ಮಾತು ಮುಗಿಸಿದರು. 

ಮಾಲಿಕಾ ಪಣಿಕ್ಕರ್
ಮಾಲಿಕಾ ಪಣಿಕ್ಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT