ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದೊರೆಸ್ವಾಮಿಯ ನೆನಪಿನ ನಾದ

Published : 11 ಆಗಸ್ಟ್ 2024, 0:12 IST
Last Updated : 11 ಆಗಸ್ಟ್ 2024, 0:12 IST
ಫಾಲೋ ಮಾಡಿ
Comments

ಬಾಲ್ಯದಲ್ಲಿ ಸಂಗೀತ ಅಭ್ಯಾಸಕ್ಕೂ ಮುನ್ನವೇ ಶ್ರುತಿಬದ್ಧವಾಗಿ ಹಾಡುತ್ತಿದ್ದ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರ ಜೀವನ ಚರಿತ್ರೆಯನ್ನು ಬರೆಯುವ ಸಂದರ್ಭದಲ್ಲಿ ಲೇಖಕಿಗೆ ಸಿಕ್ಕ ಒಂದಷ್ಟು ಸ್ವಾರಸ್ಯಕರ ಸಂಗತಿಗಳಲ್ಲಿ ಇಲ್ಲಿವೆ..

ವಿ.ದೊರೆಸ್ವಾಮಿ ಅಯ್ಯಂಗಾರ್ ಅವರು ಕನ್ನಡನಾಡು ಕಂಡ ಅಪ್ರತಿಮ ವೀಣಾ ವಾದಕರು. ದೇಶ ವಿದೇಶಗಳಲ್ಲಿ ಮೈಸೂರು ವೀಣೆಯ ಇಂಪನ್ನು ಸುಮಧುರವಾಗಿ ಹರಡಿ ಬಂದವರು. ಅವರ ಜೀವನ ಚರಿತ್ರೆಯನ್ನು ಬರೆಯುವ ಸಂದರ್ಭದಲ್ಲಿ ಲೇಖಕಿ ಒಡನಾಡಿದಾಗ ಕೇಳಿದ ಸ್ವಾರಸ್ಯಕರ ಸಂಗತಿಗಳಲ್ಲಿ ಕೆಲವು ಇಲ್ಲಿವೆ.

ದೊರೆಸ್ವಾಮಿ ಅವರು ಮೈಸೂರಿನ ಲಕ್ಷ್ಮಿಪುರ ಶಾಲೆಯ ಶಿಶುವಿಹಾರಕ್ಕೆ ಹೋಗುತ್ತಿದ್ದರು. ನಂಜುಂಡ ಶಾಸ್ತ್ರಿಯವರು ಹೆಡ್ ಮಾಸ್ತರು. ಅವರಿಗೆ ಈ ಮಗುವಿನ ಮೇಲೆ ಅತಿಶಯ ಪ್ರೀತಿ. ‘ಬಾರೋ ಮರಿ, ಒಂದೆರಡು ಹಾಡು ಹೇಳೋ’ ಎಂದು ಮಗುವನ್ನೆತ್ತಿ ಮೇಜಿನ ಮೇಲೆ ನಿಲ್ಲಿಸುತ್ತಿದ್ದರು. ಪುಟಾಣಿ ಆನಂದದಿಂದ ಕತ್ತೆತ್ತಿ ತನಗೆ ಗೊತ್ತಿದ್ದ ಕೆಲವು ಕೀರ್ತನೆಗಳ ತುಣುಕುಗಳನ್ನು ಹಾಡಿದ್ದೇ ಹಾಡಿದ್ದು! ಸಂಗೀತ ಶಿಕ್ಷಣ ಇನ್ನೂ ಆಗಿರದಿದ್ದರೂ ಮಗು ಎಂದೂ ಶ್ರುತಿ ತಪ್ಪಿಸಿದ್ದೇ ಇಲ್ಲ. ಜೊತೆಗೆ ಆರನೇ ಮನೆಯ ತಾರಸ್ಥಾಯಿಯಲ್ಲಿ ಮಧುರ ಸಂಚಾರ!

ಈ ಹಿರಿಯ ವೈಣಿಕರು ಮಿತಭಾಷಿ. ಅಗತ್ಯಕ್ಕಿಂತ ಹೆಚ್ಚು ಮಾತನಾಡಿದವರೇ ಅಲ್ಲ. ಅವರ ಎಲ್ಲ ಆರ್ದ್ರಭಾವಗಳನ್ನು ಕೋಮಲ ಪುಳಕಗಳನ್ನು ಅವರ ಬೆರಳುಗಳೇ ನುಡಿದು ಬಿಡುತ್ತಿದ್ದವು. ‘ನಾದಾಭಿವ್ಯಕ್ತಿಗೆ ವೈಣಿಕ ನಿಮಿತ್ತ ಮಾತ್ರ. ನಾದಮಾಧುರ್ಯ ವೀಣೆಯ ಆತ್ಮ’ ಎನ್ನುವುದು ಅವರದೇ ಮಾತು. ಒಂದು ಪ್ರತಿಷ್ಠಿತ ಕಛೇರಿಯಲ್ಲಿ ಮೃದಂಗ ವಾದಕರು ಅದ್ಭುತವಾಗಿ ನುಡಿಸಿದರು. ವ್ಯವಸ್ಥಾಪಕರು ಅಯ್ಯಂಗಾರ್ ಅವರ ಬಳಿ ಬಂದು ‘ಈ ಮೃದಂಗ ವಾದಕರ ಬಗ್ಗೆ ಒಂದೆರಡು ಮಾತು ಹೇಳಬೇಕು’ ಎಂದು ನಿವೇದಿಸಿದರು. ಅಯ್ಯಂಗಾರರು ಮುಗುಳುನಗುತ್ತಾ, ‘ಈ ಯುವ ಕಲಾವಿದನ ಬಗ್ಗೆ ನಾನು ಏನು ತಾನೆ ಹೇಳಲಿ? ನನ್ನ ಜೊತೆ ಇನ್ನೊಂದು ವೀಣೆಯನ್ನೇ ನುಡಿಸಿ ಬಿಟ್ಟ!’ ಎಂದಿದ್ದರು.

ಅವರಿಗೆ ಹಿರಿಯ ಸಾಹಿತಿಯೊಬ್ಬರ ಒಡನಾಟ ಇತ್ತು. ಅವರು ಸಂಗೀತ ಕಛೇರಿಗಳಿಗೆ ಬಂದು ‘ಸ್ವಲ್ಪ ಶಂಕರಾಭರಣ ನುಡಿಸಿ... ಇವತ್ತು ಕಾಂಭೋಜಿ ಆಗಲಿ..’ ಎಂದೆಲ್ಲಾ ಕೇಳುತ್ತಿದ್ದರಂತೆ. ಈ ವಿಷಯ ಬಂದಾಗ ನಾನು ಅಯ್ಯಂಗಾರ್ ಅವರನ್ನು ಕೇಳಿದೆ, ‘ಅವರಿಗೆ ಸಂಗೀತ ಚೆನ್ನಾಗಿ ಗೊತ್ತಿತ್ತೇ?’. ‘ಅವರು ಹಾಗಂತ ತಿಳ್ಕೊಂಡಿದ್ರು!’ ಎನ್ನುವುದು ಅಯ್ಯಂಗಾರ್ ಅವರ ಗಂಭೀರ ಉತ್ತರ.

‘ದೈತ್ಯ ಪ್ರತಿಭೆ’ ಅನ್ನುವ ಗುಣವಾಚಕ ಅವರಿಗೆ ಹಿಡಿಸುತ್ತಿರಲಿಲ್ಲ. ನನಗವರು ಹೇಳುತ್ತಿದ್ದರು, ‘ರಾಗ ಭಾವ ಅತ್ಯಂತ ಮೃದುವಾದದ್ದು. ಮಧುರವಾಗಿ ಅರಳಿ ರಸಿಕನ ಹೃದಯವನ್ನು ಸ್ಪರ್ಶಿಸುವಂಥದ್ದು. ಈ ನವಿರನ್ನು ದೈತ್ಯನಿಗೆ ಹೋಲಿಸುವುದು ಸಾಧುವೇ?’

ಅವರಿಗೆ ಒಲ್ಲದ ಇನ್ನೊಂದು ಪದ ಪ್ರಯೋಗ ‘ಪುರುಷ ಸರಸ್ವತಿ’. ‘ನಾದ ದೇವತೆ ಪೂಜ್ಯಳು, ಪರಿಪೂರ್ಣಳು. ನಮಗೆ ನಿಲುಕದವಳು. ನಾವು ಮನುಷ್ಯರು, ನಮ್ಮ ನಮ್ಮ ಮಿತಿಗಳಲ್ಲಿ ಸಾಧನೆ ಮಾಡುವವರು. ನಾದದೇವಿಯೊಂದಿಗೆ ಮನುಷ್ಯನನ್ನು ಸಮೀಕರಿಸುವುದು ಉದ್ಧಟತನ’ ಎಂಬುದು ಅವರ ಅಭಿಪ್ರಾಯ.

ಅವರ ಅತಿ ಸರಳತೆಗೆ ಒಂದು ಉದಾಹರಣೆ ಹೀಗಿದೆ. ‘ವೀಣೆಯ ನೆರಳಿನಲ್ಲಿ’ ಪುಸ್ತಕದ ಪ್ರಕಟಣೆ ಮುಗಿದಿತ್ತು. ಅದಕ್ಕೆ ಫೋಟೊಗಳು ಬೇಕಾಗಿದ್ದವು. ನಾನವರನ್ನು ಕೇಳಿದಾಗ ‘ಫೋಟೊಗಳು ಇಲ್ಲದಿದ್ದರೆ ಆಗೋಲ್ವಂತ್ಯೇ?’ ಎಂದು ರಾಗವಾಗಿ ನುಡಿದರು. ‘ಅವುಗಳ ಅಗತ್ಯವಿದೆ’ ಎಂದು ನಾನು ಹೇಳಿದಾಗ ‘ಬಂದೆ, ಒಂದು ನಿಮಿಷ’ ಅಂತ ಒಳಗೆ ಹೋದರು. ಸ್ವಲ್ಪ ಹೊತ್ತಿನ ಬಳಿಕ ಹಳೆಯದಾದ ಪುಟ್ಟದೊಂದು ಟ್ರಂಕನ್ನು ತಂದರು. ಆ ಟ್ರಂಕು ಅಲ್ಲಲ್ಲಿ ಕೆತ್ತಿ ಹೋಗಿತ್ತು, ಧೂಳು ಮಯವಾಗಿತ್ತು. ಪ್ರಸನ್ನ ವದನರಾಗಿ ಟ್ರಂಕಿನ ಮುಚ್ಚಳವನ್ನು ತೆರೆದು ‘ಬೇಕಾದ್ದನ್ನು ಆರಿಸಿಕೊಳ್ಳಿ’ ಅಂದರು. ಅಲ್ಲಿ ಫೋಟೊಗಳು ಚೆಲ್ಲಾಪಿಲ್ಲಿಯಾಗಿದ್ದವು. ಕೆಲವು ಮಡಿಚಿಕೊಂಡಿದ್ದವು. ಅಮೂಲ್ಯವಾದ ಅನೇಕ ಫೋಟೊಗಳು ಸುಸ್ಥಿತಿಯಲ್ಲೇ ಇದ್ದವು. ಅವುಗಳನ್ನು ತೆಗೆದುಕೊಂಡ ಮೇಲೆ ಮತ್ತೆ ಟ್ರಂಕನ್ನು ಮಗುವಿನಂತೆ ಎತ್ತಿ ಜೋಪಾನವಾಗಿ ಒಳಗೊಯ್ದರು. ಅಲ್ಲೇ ಕುಳಿತಿದ್ದ ಅವರ ಪತ್ನಿ ಶಾರದಮ್ಮ ಅವರು ‘ಈ ಟ್ರಂಕನ್ನು ನಾವು ಯಾರೂ ಮುಟ್ಟುವುದಕ್ಕೂ ಸಹ ಅವರು ಬಿಡುವುದಿಲ್ಲ’ ಎಂದು ಮನಸಾರೆ ನಕ್ಕರು.

ಇವರ ಜೀವನವನ್ನು ಕಟ್ಟಿದ ಇಬ್ಬರು ಮಹನೀಯರು, ತಂದೆ ವೆಂಕಟೇಶ ಅಯ್ಯಂಗಾರ್ ಮತ್ತು ಗುರು ವೆಂಕಟಗಿರಿಯಪ್ಪ. ಇವರಿಬ್ಬರ ವಾತ್ಸಲ್ಯವನ್ನು ಬಣ್ಣಿಸುವಾಗ ಅವರಿಗೆ ಕಣ್ಣೀರು ತಪ್ಪದೆ ಹರಿಯುತ್ತಿತ್ತು. ಸಾಮಾನ್ಯವಾಗಿ ಒಂದು ಬಿಳಿಯ ಕರವಸ್ತ್ರವನ್ನು ಇರಿಸಿಕೊಂಡಿರುತ್ತಿದ್ದರು. ಒಮ್ಮೊಮ್ಮೆ ಮರೆತು ಬಿಡುತ್ತಿದ್ದರು. ಆದರೇನು..ಆ ಹಿರಿಯರಿಬ್ಬರ ಅಂತಃಕರಣವನ್ನು ನೆನೆಯುವಾಗ ಕಂಬನಿ ಸುರಿದೇ ಸುರಿಯುತ್ತಿತ್ತು. ಆಗ ಅವರು ಮೆಲ್ಲನೆ ಬಾಗಿ ಪಂಚೆಯ ಅಂಚನ್ನು ಕೈಗೆ ತೆಗೆದುಕೊಂಡು ಮೃದುವಾಗಿ ಕೆನ್ನೆಗಳನ್ನು ಒರೆಸಿಕೊಳ್ಳುತ್ತಿದ್ದರು. ನಿಟ್ಟುಸಿರಿಡುತ್ತಾ ಅಮೂಲ್ಯವಾದದ್ದೇನನ್ನೋ ಕಳೆದುಕೊಂಡವರಂತೆ ಮೌನವಾಗಿ ಬಿಡುತ್ತಿದ್ದರು. ಆ ಶೋಕ ಮುಗ್ಧ ಮುಖಭಾವ ಇಂದಿಗೂ ಆಗಾಗ ಕಾಡುತ್ತದೆ.

ಕೊನೆಯ ದಿನಗಳಲ್ಲಿ ಅವರು ಆಸ್ಪತ್ರೆಯಲ್ಲಿದ್ದಾಗ ಒಮ್ಮೆ ಹೋಗಿದ್ದೆ. ಪ್ರಶಾಂತವಾಗಿ ಮಲಗಿದ್ದ ಅವರು ಎಲ್ಲ ಬಂಧನಗಳಿಂದ ಮುಕ್ತವಾದ ಯೋಗಿಯ ಹಾಗೆ ಕಂಡರು. ಮುಖದಲ್ಲಿ ಅದೇ ದಿವ್ಯ ಸಮಾಧಾನ ಪ್ರಸನ್ನತೆ! ದಿವ್ಯವಾದುದೊಂದು ಸಮಾಧಿಸ್ಥಿತಿಯಲ್ಲಿರುವಂತೆ ಭಾಸವಾದರು. ಬಹುಶಃ ಅವರೀಗ ತಮ್ಮ ಪ್ರಿಯವಾದ ತತ್ವಪದವನ್ನು( ಯಾಕೆ ಬಂದೆ ಜೀವ) ಸ್ವಲ್ಪ ಬದಲಿಸಿ ಹಾಡಿಕೊಳ್ಳುತ್ತಿದ್ದಿರಬೇಕು. ಆದರೀಗ ಅದು ನಿಶ್ಶಬ್ದಶ್ರುತಿ... ತಲುಪಲಾಗದ ಹಾಡು! ‘ಬಂದೆ ನೀನು ಭೂಮಿಯ ಮೇಲೆ ಓ ನನ್ನ ಜೀವವೇ
ಮುಗಿಯಿತೀಗ ನಿನ್ನೆಲ್ಲ ಸಂಗೀತ ಸಾಧನೆ ಹೊರಡು ನೀನು ಈ ಘಳಿಗೆ ಭಗವಂತನಲ್ಲಿಗೆ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT