ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಜ್ಞಾನ, ಸಂಗೀತದ ಜುಗಲ್‌ಬಂದಿ ‘ಫಣಿವೇಣಿ’

Published : 24 ಆಗಸ್ಟ್ 2024, 0:00 IST
Last Updated : 24 ಆಗಸ್ಟ್ 2024, 0:00 IST
ಫಾಲೋ ಮಾಡಿ
Comments

ಅಪಾರ ಶ್ರಮ, ಆಸಕ್ತಿ ಬೇಡುವ ವಿಜ್ಞಾನ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ಸಾಧನೆ ಸುಲಭದ ಮಾತಲ್ಲ. ಎರಡನ್ನೂ ಒಟ್ಟಿಗೆ ಕೊಂಡೊಯ್ಯುವುದಂತೂ ಸಾಹಸವೇ ಸರಿ. 67ರ ಹರೆಯದ ಭೌತಶಾಸ್ತ್ರಜ್ಞೆ, ಕರ್ನಾಟಕ ಸಂಗೀತ ಗಾಯಕಿ ಫಣಿವೇಣಿ ಉದಯಶಂಕರ್ ಅವರ ಸಾಧನೆ ಈ ಎರಡೂ ಕ್ಷೇತ್ರದಲ್ಲಿ ಮಿಳಿತಗೊಂಡಿದೆ. ನ್ಯಾಷನಲ್ ಸೈನ್ಸ್ ಅಕಾಡೆಮಿಯು ಇತ್ತೀಚೆಗೆ ಬಿಡುಗಡೆಗೊಳಿಸಿದ ‘ವುಮೆನ್ ಶೇಪಿಂಗ್ ಸೈಂಟಿಫಿಕ್ ಫ್ರಾಂಟಿಯರ್ಸ್’ ಪುಸ್ತಕದಲ್ಲಿನ 27 ಸಾಧಕ ಮಹಿಳಾ ವಿಜ್ಞಾನಿಗಳಲ್ಲಿ ಅವರೂ ಒಬ್ಬರೆಂಬುದು ವಿಶೇಷ.

ಸಂಗೀತ ಕ್ಷೇತ್ರದಲ್ಲಿ ಮಹಿಳೆಯರು ಮುಂದಿದ್ದರೂ ವಿಜ್ಞಾನ ಕ್ಷೇತ್ರವನ್ನೂ ವೃತ್ತಿಯಾಗಿಸಿಕೊಂಡ ಗಾಯಕಿಯರೂ ವಿರಳ. ಖಗೋಳ ಭೌತಶಾಸ್ತ್ರದಲ್ಲಿ ಪಿಎಚ್‌ಡಿ, ವಿವಿಧ ಕಾಲೇಜುಗಳಲ್ಲಿ 35 ವರ್ಷಗಳ ಉಪನ್ಯಾಸ ಅನುಭವ, ದೇಶ–ವಿದೇಶಗಳಲ್ಲಿ 46 ಸಂಕಿರಣ, ಸಮಾವೇಶಗಳಲ್ಲಿ ಪಾಲ್ಗೊಂಡಿರುವ, 29 ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಫಣಿವೇಣಿ, ‘ಸೂಪರ್‌ನೋವಾ ಫೌಂಡೇಶನ್‌’ನಲ್ಲಿ ಮಾರ್ಗದರ್ಶಕರಾಗಿ ಭೌತಶಾಸ್ತ್ರ ಕ್ಷೇತ್ರದಲ್ಲಿ ಯುವ ಮಹಿಳೆಯರ ಸಾಧನೆಗೆ ಪ್ರೇರೇಪಿಸುತ್ತಿದ್ದಾರೆ. 54 ಯಶಸ್ವಿ ಸಂಗೀತ ಕಛೇರಿಗಳನ್ನೂ ನೀಡಿದ್ದು, ಆನ್‌ಲೈನ್‌ನಲ್ಲಿ ಸಂಗೀತ ತರಗತಿ ನಡೆಸುತ್ತಾರೆ.

ಎರಡು ಭಿನ್ನ ಹಾದಿಗಳಲ್ಲೂ ಸಮನ್ವಯ ಸಾಧಿಸಿದ್ದು, ಪ್ರಸ್ತುತ ಬೆಂಗಳೂರಿನ ಪೂರ್ಣಪ್ರಜ್ಞ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.‌ ಭಾರತೀಯ ಭೌತಶಾಸ್ತ್ರ ಅಸೋಸಿಯೇಷನ್, ಭಾರತೀಯ ಭೌತಶಾಸ್ತ್ರ ಶಿಕ್ಷಕರ ಅಸೋಸಿಯೇಷನ್ ಮತ್ತು ಭಾರತೀಯ ಖಗೋಳಶಾಸ್ತ್ರ ಸೊಸೈಟಿಯ ಆಜೀವ ಸದಸ್ಯರೂ ಹೌದು. ಅವರ ಮಾರ್ಗದರ್ಶನದಲ್ಲಿ ಕಳೆದ ಜುಲೈನಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪಿಎಚ್‌ಡಿ ಪಡೆದಿದ್ದಾರೆ.

‘ಬಾಲ್ಯದ ದಿನಗಳನ್ನು ಬಳ್ಳಾರಿಯಲ್ಲಿ ಕಳೆದಿದ್ದು, ಅಲ್ಲಿಯೇ ಪದವಿವರೆಗೆ ಶಿಕ್ಷಣ ಪಡೆದೆ. ಬಾಲ್ಯದಿಂದಲೇ ಸಂಗೀತಾಭ್ಯಾಸ ನಡೆಸುತ್ತಿದ್ದೇನೆ. ಬಳ್ಳಾರಿ ಬ್ರದರ್ಸ್ ಎಂದು ಪ್ರಸಿದ್ಧರಾದ ಶೇಷಗಿರಿ ಆಚಾರ್, ವೆಂಕಟೇಶ್ ಆಚಾರ್ ಮನೆಗೆ ಬಂದು ಪಾಠ ಮಾಡುತ್ತಿದ್ದರು. ಅಣ್ಣನ ‘ಬಾಲಾಜಿ ಆರ್ಕೆಸ್ಟ್ರಾ’ದಲ್ಲಿ ಹಾಗೂ ಕೆಲ ಫಿಲ್ಮ್‌ಗಳಿಗೂ ಹಾಡಿದ್ದೆ. ಸಂಗೀತದಲ್ಲೇ ಮುಂದುವರಿಯುವ ಆಸಕ್ತಿಯಿದ್ದರೂ ಪೋಷಕರು ಓದನ್ನು ಮುಂದುವರಿಸುವಂತೆ ತಿಳಿಸಿದ್ದರು’ ಎಂದು ಫಣಿವೇಣಿ ನೆನಪಿಸಿಕೊಳ್ಳುತ್ತಾರೆ.

‘ಉಪನ್ಯಾಸಕ ವೃತ್ತಿ ನಿರ್ವಹಿಸುತ್ತಲೇ, ನೀಲಾ ರಾಮಗೋಪಾಲ್ ಅವರ ಶಿಷ್ಯೆಯಾಗಿ ಇನ್ನಷ್ಟು ಸಂಗೀತ ಅಭ್ಯಾಸ ಮಾಡಿದೆ. ಆಲ್‌ ಇಂಡಿಯಾ ರೇಡಿಯೊಗೂ ಹಾಡಿದ್ದೇನೆ. 1990ರಿಂದ ಸಂಗೀತ ತರಗತಿ, ಕಛೇರಿ ನೀಡುತ್ತಿದ್ದೇನೆ. ಕೋವಿಡ್ ಬಳಿಕ ಆನ್‌ಲೈನ್ ಮೂಲಕ ತರಗತಿ ನಡೆಯುತ್ತಿವೆ. 22 ವರ್ಷಗಳ ಸಂಶೋಧನೆಯ ಅನುಭವವೂ ಇದೆ. ಸಂಗೀತ, ಉಪನ್ಯಾಸ ಮತ್ತು ಸಂಶೋಧನೆಯ ಕೆಲಸಗಳು ಭಿನ್ನವಾದರೂ, ಒತ್ತಡ ನಿವಾರಣೆಯಲ್ಲಿ ಈ ಮೂರರ ಮಿಶ್ರಣ ಸಹಕಾರಿಯಾಗಿದೆ’ ಎನ್ನುತ್ತಾರೆ ಅವರು.

‘ಪತಿ ಉದಯಶಂಕರ್ ಬಿಎಚ್‌ಇಎಲ್ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಇಬ್ಬರು ಪುತ್ರಿಯರು ಉದ್ಯೋಗದಲ್ಲಿದ್ದಾರೆ. ನಾನು ಉದ್ಯೋಗಸ್ಥ ಮಹಿಳೆ. ಹೆಚ್ಚು ಸಮಯ ಬೇಡುವ ಸಂಗೀತದಂಥ ಪ್ರವೃತ್ತಿ ಇದೆ. ಈ ನಡುವೆ ಮನೆ ನಿರ್ವಹಣೆ ಕಷ್ಟವೆನಿಸಿದರೂ, ಸಮಯವನ್ನು ಉತ್ತಮವಾಗಿ ಬಳಸಿಕೊಂಡರೆ ಮತ್ತು ಕುಟುಂಬದ ಸಹಕಾರವಿದ್ದರೆ ಎಲ್ಲವೂ ಸಾಧ್ಯ’ ಎನ್ನುತ್ತಾರೆ.

‘ಭೌತಶಾಸ್ತ್ರ ಮತ್ತು ಸಂಗೀತ ಕ್ಷೇತ್ರದಲ್ಲಿ ಅಂತರಶಿಸ್ತೀಯ ಪಿಎಚ್‌ಡಿ ಮಾಡುವ ಉದ್ದೇಶವೂ ಅವರಿಗಿದೆ. ಸಂಗೀತ ತರಗತಿ, ಕಛೇರಿ ಮತ್ತು ಸಂಶೋಧನೆ ಚಟುವಟಿಕೆಗಳು ನಿರಂತರ ನಡೆಯುತ್ತಿವೆ.

ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅವರು ನೀಡಿದ ಕೊಡುಗೆಗೆ ಇಂದಿರಾಗಾಂಧಿ ಸದ್ಭಾವನ ಪ್ರಶಸ್ತಿ, ರಾಜೀವ್ ಗಾಂಧಿ ಎಕ್ಸಲೆನ್ಸ್ ಚಿನ್ನದ ಪದಕವೂ ದೊರೆತಿದೆ.

ಗಾಯನ ಕಾರ್ಯಕ್ರಮದಲ್ಲಿ ಫಣಿವೇಣಿ ಉದಯಶಂಕರ್
ಗಾಯನ ಕಾರ್ಯಕ್ರಮದಲ್ಲಿ ಫಣಿವೇಣಿ ಉದಯಶಂಕರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT