‘ಸುನಾದ ವಿನೋದಿನಿ...’ ಈ ರಾಗದ ಹೆಸರಿಗೆ ಅನ್ವರ್ಥನಾಮದಂತಿತ್ತು ಬುಧವಾರ ಸಂಜೆ ಸ್ಯಾಕ್ಸೊಫೋನ್ ವಾದಕ ವಿದ್ವಾನ್ ಶ್ರೀಧರ್ ಸಾಗರ್ ಹರಿಸಿದ ನಾದದ ವಿನೋದ. ಮೇಳಕರ್ತ ರಾಗ ಮೇಚಕಲ್ಯಾಣಿಯಲ್ಲಿ ಜನ್ಯವಾಗಿರುವ ಔಡವ–ಔಡವ ಸ್ವರಸಮೂಹವನ್ನು ಹೊಂದಿರುವ ಈ ರಾಗ ನಾದದ ರಂಜನೆಯ ಆಮೋದವನ್ನೇ ಸೃಷ್ಟಿಸಿತ್ತು.

‘ಪ್ರಜಾವಾಣಿ’ ಆಯೋಜಿಸುತ್ತಿರುವ ದಸರಾ ಸಂಗೀತ ಮಹೋತ್ಸವ ಸರಣಿಯ ಐದನೇ ದಿನದ ಕಾರ್ಯಕ್ರಮವಿದು. ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದ ಸ್ಯಾಕ್ಸೊಫೋನ್ ಮಾಂತ್ರಿಕ ಕದ್ರಿ ಗೋಪಾಲನಾಥ್ ಅವರಿಗೆ ‘ನುಡಿ ನಮನ’ ಸಲ್ಲಿಸಲೆಂದೇ ಅವರ ಪಟ್ಟಶಿಷ್ಯ ಶ್ರೀಧರ್ ಸಾಗರ್ ಅವರ ವಾದ್ಯವೈವಿಧ್ಯ ನಡೆಸಿ ಗುರು ಸ್ಮರಣೆ ಮಾಡಿದರು.

ಕನಕದಾಸರ ಜನಪ್ರಿಯ ‘ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ...’ ರಚನೆಯನ್ನು ಆಲಿಸಿ ಆಸ್ವಾದಿಸದ ಸಂಗೀತ ರಸಿಕರಿಲ್ಲ. ಅದು ಗಾಯನವೇ ಆಗಿರಲಿ, ವಾದನವೇ ಆಗಿರಲಿ ‘ಹಂಸಧ್ವನಿ’ ರಾಗದಲ್ಲಿ ಹೊಮ್ಮುವ ಇದರ ನಾದ ಅದ್ಭುತ ರಸಾಸ್ವಾದವನ್ನೇ ಸೃಷ್ಟಿಸುತ್ತದೆ. ಶ್ರೀಧರ್ ಅವರು ಶಾರದೆಯನ್ನು ಮೊತ್ತಮೊದಲ ಬಾರಿಗೆ ಸ್ತುತಿಸಿದರು.

ವಾಗ್ಗೇಯಕಾರ ಸ್ವಾತಿ ತಿರುನಾಳರು ರಚಿಸಿದ ಎಲ್ಲ ಕೃತಿಗಳೂ ಸಂಗೀತಕ್ಕೆ ದಕ್ಕಿದ ಅಮೂಲ್ಯ ರತ್ನಗಳೇ. ಅವರು ರಚಿಸಿದ ‘ದೇವದೇವ ಕಲಯಾಮಿದೇ...’ ಕೃತಿಯನ್ನು ಮೇಳಕರ್ತ ರಾಗ ಮಾಯಾಮಾಳವಗೌಳದಲ್ಲಿ ಅತ್ಯಂತ ಸುಶ್ರಾವ್ಯವಾಗಿ ನುಡಿಸಿದರು. ಅದಾದ ಬಳಿಕ ಕೃಷ್ಣನ ಗುಣಗಾನ ಸ್ಯಾಕ್ಸೊಫೋನ್‌ನಲ್ಲಿ ನಡೆಯಿತು. ಮೈಸೂರು ವಾಸುದೇವಾಚಾರ್ಯರು ಬರೆದ ‘ದೇವಾದಿದೇವ ಶ್ರೀ ವಾಸುದೇವ’ ಕೃತಿ ಸುಪ್ರಸಿದ್ಧ ‘ಸುನಾದ ವಿನೋದಿನಿ’ ರಾಗ ಆದಿತಾಳದಲ್ಲಿ ನುಡಿಸಿ ಕೇಳುಗರಿಗೆ ಸಾಕ್ಷಾತ್ ಶ್ರೀಕೃಷ್ಣನ ದರ್ಶನ ಮಾಡಿಸಿದರು ಈ ಗೋಧೂಳಿ ಸಮಯದಲ್ಲಿ. ಈ ರಾಗಕ್ಕೆ ಸುದೀರ್ಘವಾದ ಆಲಾಪವನ್ನು ಮಾಡುತ್ತಾ ‘ಸಂಗತಿ’ ‘ಸ್ವರಪ್ರಸ್ತಾರ’ವನ್ನೂ ಸೇರಿಸುತ್ತಾ ನುಡಿಸಿದ್ದೂ ಅಲ್ಲದೆ ಪಿಟೀಲು ವಾದಕರಿಗೂ ಸಮಾನ ಅವಕಾಶ ಕಲ್ಪಿಸಿದ್ದು ಶ್ರವಣಾನಂದಕರವಾಗಿತ್ತು.

ಧ್ಯಾನಸ್ಥ ಸ್ಥಿತಿ: ಸ್ಯಾಕ್ಸೊಫೋನ್ ವಾದನದ ಸಾತ್ವಿಕ, ಸೌಮ್ಯ ‘ನಡೆ’ಯ ರಸಗವಳವನ್ನು ಮೆಲ್ಲುತ್ತಾ ಇದ್ದವರಿಗೆ ಕೃತಿಕರ್ತ ದಯಾನಂದ ಸರಸ್ವತಿ ಅವರ ‘ರೇವತಿ’ ರಾಗದ ಕೃತಿ ಅಕ್ಷರಶಃ ಧ್ಯಾನಸ್ಥ ಸ್ಥಿತಿಗೆ ತಲುಪುವಂತೆ ಮಾಡಿತು. ಕರುಣಾ ರಸ ಸೂಸುವ ರೇವತಿ ರಾಗ ಹಿಂದೂಸ್ತಾನಿ ಸಂಗೀತದ ಬೈರಾಗಿ ಭೈರವ್ ರಾಗಕ್ಕೆ ಸರಿಸಮನಾದದ್ದು. ಎರಡನೇ ಮೇಳಕರ್ತರಾಗ ರತ್ನಾಂಗಿಯಲ್ಲಿ ಜನ್ಯರಾಗವಾಗಿರುವ ಈ ರಾಗದಲ್ಲಿ ‘ಭೋ ಶಂಭೋ ಶಿವಶಂಭೋ ಸ್ವಯಂಭೋ..’ ಎನ್ನುತ್ತಾ ವಿದೇಶಿ ಮೂಲದ ವಾದ್ಯದಲ್ಲಿ ಶಿವನನ್ನು ಸ್ಮರಿಸಿದ್ದು ದೇವಾಲಯದ ಮುಂದೆ ಧ್ಯಾನಿಸುತ್ತಾ ಕುಳಿತು ಗಾನ ಆಲಿಸಿದ ಅನುಭೂತಿ ಸೃಷ್ಟಿಸಿತ್ತು. ಈ ಕೃತಿಗೆ ತನಿ ಬಿಟ್ಟು ಪಕ್ಕವಾದ್ಯಗಾರರು ನುಡಿಸಿದ ತನಿವಾದನ ಕೃತಿಯನ್ನು ಮತ್ತಷ್ಟು ‘ತೂಕಬದ್ಧ’ವಾಗಿಸಿತು.

ಕಛೇರಿಯ ಮುಂದಿನ ಭಾಗದಲ್ಲಿ ಪುರಂದರದಾಸರ ‘ಗೋವಿಂದ ನಿನ್ನ ನಾಮವೆ ಚಂದ’, ‘ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ..’ ಎಂಬ ಎರಡು ಜನಪ್ರಿಯ ಕೃತಿಗಳನ್ನು ನುಡಿಸಿ ಕೃಷ್ಣನಿಗೂ ಸುಷಿರ ವಾದ್ಯಕ್ಕೂ ಇರುವ ಸಂಬಂಧವನ್ನು ಮತ್ತೆ ಮತ್ತೆ ನೆನಪಿಸುವಂತೆ ಮಾಡಿದರು.

ಅಯ್ಯಪ್ಪ ಸ್ವಾಮಿಯ ಮೇಲೆ ಇರುವ ಜಗತ್ಪ್ರಸಿದ್ಧ ಕೃತಿ ‘ಹರಿವರಾಸನಂ...’ ಹಾಡು ಕೇಳಿ ಆಸ್ವಾದಿಸದ ಸಹೃದಯರೇ ಇಲ್ಲ. ಹಾಗೆಯೇ ಸ್ಯಾಕ್ಸೊಫೋನ್‌ನಲ್ಲಿ ಕದ್ರಿಗೋಪಾಲನಾಥ್ ಅವರು ಇದನ್ನು ನುಡಿಸದೇ ಇದ್ದ ಕಛೇರಿಗಳೇ ಇಲ್ಲ ಎನ್ನುವಷ್ಟು ಖ್ಯಾತಿ. ಇದನ್ನು ಶ್ರೀಧರ್ ಸಾಗರ್ ಅವರು ತನ್ಮಯತೆಯಿಂದ ನುಡಿಸಿದಾಗ ಕದ್ರಿಯವರ ನೆನಪು ಬಹುವಾಗಿ ಕಾಡಿ ಭಾವುಕರಾಗುವಂತೆ ಮಾಡಿತು.

ದಾಸರಪದ ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಕೃತಿಯಲ್ಲೇ ಎಲ್ಲ ಕಛೇರಿಗಳೂ ಸಂಪನ್ನಗೊಳ್ಳುವುದು ಸಂಪ್ರದಾಯ. ಸ್ಯಾಕ್ಸೊಫೋನ್‌ನಲ್ಲೂ ಶ್ರೀಧರ್ ಲಕ್ಷ್ಮಿ ಕೃತಿಯೊಂದಿಗೆ ಮಂಗಳ ಹಾಡಿದರು.

ಪಿಟೀಲಿನಲ್ಲಿ ಅರ್ಜುನ್, ಮೃದಂಗದಲ್ಲಿ ಗಣೇಶ್, ತಬಲಾದಲ್ಲಿ ನಾಗಭೂಷಣ್, ರಿದಂಪ್ಯಾಡ್‌ನಲ್ಲಿ ಮಂಜುನಾಥ್ ಹಾಗೂ ತಾಳದಲ್ಲಿ ತ್ರಿಧಾತ್ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.