ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾದ ಧ್ಯಾನಸ್ಥನಿಗೆ 'ತಾನ್‌ಸೇನ್‌ ಸಮ್ಮಾನ್'

ಪಂಡಿತ್ ಗಣಪತಿ ಭಟ್‌ ಹಾಸಣಗಿ ಅವರೊಂದಿಗೆ ಸಂದರ್ಶನ
Published 17 ಡಿಸೆಂಬರ್ 2023, 0:30 IST
Last Updated 17 ಡಿಸೆಂಬರ್ 2023, 0:30 IST
ಅಕ್ಷರ ಗಾತ್ರ

ಮಲೆನಾಡಿನ ಅಡಿಕೆ ಸಿಂಗಾರದ ಘಮಲಿನ ಮಧ್ಯೆ ಸಂಗೀತದ ಕಂಪನ್ನು ಪಸರಿಸಿದವರು ಪಂ. ಗಣಪತಿ ಭಟ್‌ ಹಾಸಣಗಿ ಅವರು. ಪ್ರಕೃತಿಯ ಐಸಿರಿ ನಡುವೆ ಸಂಗೀತ ಸಿರಿಯನ್ನು ಜತನವಾಗಿ ಕಾಪಿಟ್ಟುಕೊಂಡ ಈ ಕಲಾವಿದರಿಗೆ ಈಗ ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ತಾನ್‌ಸೇನ್‌ ಸಮ್ಮಾನ್‌ ಪುರಸ್ಕಾರ ಒಲಿದಿದೆ. ಡಿಸೆಂಬರ್ 24ರಂದು ಗ್ವಾಲಿಯರ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ. ಈ ಹಿನ್ನೆಲೆಯಲ್ಲಿ ಕಿರಾಣಾ– ಗ್ವಾಲಿಯರ್‌ ಘರಾಣೆಯ ಪ್ರಬುದ್ಧ ಗಾಯಕ ಪಂ. ಹಾಸಣಗಿ ಅವರು ‘ಭಾನುವಾರ ಪುರವಣಿ’ಯೊಂದಿಗೆ ತಮ್ಮ ಸಂತಸ, ಅನಿಸಿಕೆ ಎರಡನ್ನೂ ಹಂಚಿಕೊಂಡಿದ್ದಾರೆ.

72ರ ತರುಣ!

ಪಂ. ಗಣಪತಿ ಭಟ್‌ ಹಾಸಣಗಿ ಹಿಂದೂಸ್ತಾನಿ ಸಂಗೀತದ ಮಟ್ಟಿಗೆ ಎಂದೂ ಬತ್ತದ ಭಾವ ನದಿ. ಈ ನಾದ ಧ್ಯಾನಸ್ಥನಿಗೆ ವಯಸ್ಸು 72, ಸಾಧನೆಯ ಶಿಖರ. ಮಾತಿಗಿಳಿದರೆ ಹೊಮ್ಮುವ ನವೋಲ್ಲಾಸ ಸಂಗೀತದ ರಾಗ ಕೇಳಿದಷ್ಟೇ ಹಿತಕರ. ಅವರ ಕಂಠದಿಂದ ದಳದಳವಾಗಿ ಅರಳುವ ಚೀಜುಗಳು, ಸ್ವರ ತಾನ್‌ಗಳು, ಆಕಾರ್‌ ತಾನ್‌ಗಳನ್ನು ಕೇಳಿದರೆ ಈ ಸ್ವರಸಂಚಾರಿಯ ಬಗ್ಗೆ ಅಭಿಮಾನ, ಗೌರವ ಇಮ್ಮಡಿಸುತ್ತದೆ.
ಅವರಿಗೆ ಇದೀಗ ದೇಶದ ಪ್ರತಿಷ್ಠಿತ ‘ತಾನ್‌ಸೇನ್‌ ಸಮ್ಮಾನ್‌’ ಗರಿ!

ಪ್ರ

ಒಬ್ಬ ಕಲಾವಿದ ಎಲ್ಲ ರಾಗಗಳನ್ನು ಹಾಡಲು ಸಾಧ್ಯವಿಲ್ಲ. ಕೆಲವು ರಾಗಗಳಿಗೆ ಕೆಲವು ಸ್ವಭಾವ ಇರುತ್ತದೆ. ಮನೋಧರ್ಮವೂ ಕಲಾವಿದರಿಂದ ಕಲಾವಿದರಿಗೆ ಭಿನ್ನವಾಗಿರುತ್ತದೆ. ‘ರಾಗ– ಸ್ವಭಾವ’ದ ಬಗ್ಗೆ ನಿಮ್ಮ ಅಭಿಪ್ರಾಯಗಳೇನು?

ಸಾಧನೆಯನ್ನು ಅಪೇಕ್ಷಿಸುವ ವಿದ್ಯೆ ಸಂಗೀತ. ಒಮ್ಮೆ ನಾವು ಅದನ್ನು ಕರಗತ ಮಾಡಿಕೊಂಡರೆ ಅದೇ ಮುಂದೆ ನಮ್ಮನ್ನು ಮೇಲಕ್ಕೆ ತೆಗೆದುಕೊಂಡು ಹೋಗುತ್ತದೆ. ಸಣ್ಣ ವಯಸ್ಸಿನಲ್ಲೇ ಕೃಷಿ ಹಾಗೂ ಸಂಗೀತಕ್ಕೆ ಆತುಕೊಂಡೇ ನಾನು ಇಷ್ಟು ದೂರ ಸಾಗಿ ಬಂದಿದ್ದೇನೆ. ರಾಗ ಎನ್ನುವುದು ಒಬ್ಬನ ‘ವ್ಯಕ್ತಿತ್ವ’ (personality) ಇದ್ದಹಾಗೆ. ನಮ್ಮ ಗಾಯನ ಶೈಲಿಯಿಂದಲೇ ನಾವು ಒಂದು ‘ಐಡೆಂಟಿಟಿ’ ಗಳಿಸಿಕೊಳ್ಳಬಹುದು. ನನ್ನ ದೃಷ್ಟಿಯಲ್ಲಿ ರಾಗ ಎನ್ನುವುದು ಒಬ್ಬನ ಸ್ವಭಾವ ಇದ್ದ ಹಾಗೆ. ಪರಿಚಯ ಆದವರೆಲ್ಲರೂ ಸ್ನೇಹಿತರಾಗುವುದಿಲ್ಲ. ಹಾಗೆಯೇ ರಾಗವೂ. ರಾಗದ ಬಗ್ಗೆ ತಿಳಿದುಕೊಂಡೆ ಅಂದಾಕ್ಷಣ ಅದನ್ನೇ ಹಾಡಬೇಕು ಎನ್ನುವ ನಿಯಮ ಏನೂ ಇಲ್ಲ. ನೂರಾರು ರಾಗಗಳ ಬಗ್ಗೆ ತಿಳಿದುಕೊಂಡಿದ್ದರೂ ಸಂಗೀತ ಬದುಕಿನ ಅವಧಿಯಲ್ಲಿ 20–25 ರಾಗಗಳನ್ನು ಅಷ್ಟೇ ಹಾಡ್ತೀನಿ. ಅವನ್ನೇ ಜೀವನದಲ್ಲಿ ಅಳವಡಿಸಿಕೊಂಡು ಹೋಗುವಷ್ಟು ಆಳವಾಗಿ ತೊಡಗಿಸಿಕೊಳ್ತೀನಿ. ಇದು ನನ್ನ ಸ್ವಭಾವ. ಹೀಗಾಗಿ ಒಬ್ಬ ಕಲಾವಿದ ಆತನ ಸ್ವಭಾವಕ್ಕೆ ಸರಿಹೊಂದುವ ರಾಗಗಳನ್ನು ಮತ್ತೆ ಮತ್ತೆ ಹಾಡಬೇಕಾಗುತ್ತದೆ. ಹಾಡುವ ರಾಗ ಕೇಳುಗರಲ್ಲಿ ಅನುಭೂತಿ ಮೂಡಿಸಿತೆಂದರೆ ಧನ್ಯರಾದೆವು ಎಂದೇ ಅರ್ಥ.

ಸಾಮಾನ್ಯವಾಗಿ ಕಲ್ಯಾಣ್‌ ಥಾಟ್‌, ತೋಡಿ ಥಾಟ್‌, ಕಾಫಿ ಥಾಟ್‌ ರಾಗಗಳೆಂದರೆ ನನಗೆ ಬಹಳ ಪ್ರೀತಿ. ಭೈರವ್‌ ರಾಗದ ಮೇಲೆ ವಿಶೇಷ ಮೋಹ. ಶಾಸ್ತ್ರೀಯ ಸಂಗೀತ ಅಲ್ಲದೆ ಸುಗಮ ಸಂಗೀತ, ದಾಸರ ಪದಗಳು, ಮೀರಾ ಭಜನ್, ಕಬೀರ್‌ ಭಜನ್, ವಚನಗಳನ್ನೂ ರಾಗಗಳ ಚೌಕಟ್ಟಿನೊಳಗೇ ಹಾಡ್ತೀನಿ. ಇದು ಕೇಳುಗರನ್ನು ತಲುಪುತ್ತೆ. ಮತ್ತೆ ಮತ್ತೆ ಕೇಳಬೇಕೆನಿಸುತ್ತೆ.

ಪ್ರ

ಗುರು– ಶಿಷ್ಯ ಪರಂಪರೆಯ ಸಂಗೀತದಲ್ಲಿ ಅಪಾರ ನಂಬಿಕೆ ಇಟ್ಟವರು ನೀವು. ಗುರುಕುಲ ಪದ್ಧತಿಯಲ್ಲಿ ಅನೇಕ ಶಿಷ್ಯಂದಿರನ್ನು ಬೆಳೆಸಿದವರು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಸಂಗೀತದ ಗುರು–ಶಿಷ್ಯ ಪರಂಪರೆ ಎಂಬ ಪರಿಕಲ್ಪನೆಯೇ ತೆರೆಮರೆಗೆ ಸರಿಯುತ್ತಿದೆ ಅನಿಸುತ್ತಿದೆ. ನಿಮ್ಮ ಅನಿಸಿಕೆ ಏನು?

ಗುರು–ಶಿಷ್ಯ ಪರಂಪರೆ ಎಂಬುದು ಸಂಗೀತದ ಅವಿಭಾಜ್ಯ ಅಂಗ ಎಂಬುದು ನನ್ನ ಭಾವನೆ. ಒಬ್ಬ ಸಂಗೀತಾಸಕ್ತ ಗುರುಮುಖೇನವೇ ಸಂಗೀತ ಅಭ್ಯಾಸ ಮಾಡಬೇಕು. ಆಗಲೇ ರಾಗಜ್ಞಾನ, ಲಯದ ಬಗ್ಗೆ ತಿಳಿವಳಿಕೆ, ಸಂಗೀತದ ಒಟ್ಟಾರೆ ಆಳಗಲವನ್ನು ಅರಿಯಲು ಸಾಧ್ಯ. ನಾನು ಇದೇ ಪರಂಪರೆಯಲ್ಲಿ ಅನೇಕ ಶಿಷ್ಯಂದಿರನ್ನು ತಯಾರು ಮಾಡಿದ್ದು, ಇವರೆಲ್ಲ ಈಗ ದೇಶದಾದ್ಯಂತ ಸಂಗೀತ ಕಛೇರಿ ನೀಡುತ್ತಿದ್ದಾರೆ.
ಆದರೆ, ಈಗ ಜೀವನಶೈಲಿ ಬದಲಾಗಿದೆ. ಅದೇ ರೀತಿ ಸಂಗೀತ ಕಲಿಕೆಯ ಶೈಲಿಯೂ ಮಾರ್ಪಾಡಾಗಿದೆ. ಸಂಗೀತ ಕಲಿಕೆ ಸಮಯ ಬೇಡುತ್ತೆ. ಇಂದಿನ ತಾಂತ್ರಿಕ ಬದುಕಿನಲ್ಲಿ ಬೌದ್ಧಿಕ ಜ್ಞಾನ ಗಳಿಕೆ ಹಿಂದೆ ಬೀಳುತ್ತಿದೆಯಾ ಎಂಬ ಆತಂಕ ಸೃಷ್ಟಿಯಾಗಿದೆ. ಮಕ್ಕಳಿಗೆ ಪ್ರಚಾರ ಬೇಕು, ಎಕ್ಸ್‌ಪೋಷರ್‌ ಬೇಕು. ಆದರೆ ಇವೆಲ್ಲ ಸಂಗೀತದ ಭದ್ರ ಬುನಾದಿ ಪಡೆದ ಮೇಲೆ ಸಿಕ್ಕಿದರೆ ಒಳ್ಳೆಯದು. ಸಾವಕಾಶವಾಗಿ ಸಂಗೀತ ಕಲಿತ ಮೇಲೆ ಈ ಕ್ಷೇತ್ರದಲ್ಲಿ ಹಂತಹಂತವಾಗಿ ಮೇಲೇರಲು ಸಾಧ್ಯ. ಗುಣಮಟ್ಟದ ಸಂಗೀತ ಕೇಳುಗರಿಗೆ ನೀಡಬೇಕಾದರೆ ಪ್ರತಿಭೆ ಜೊತೆಗೆ ತಾಳ್ಮೆ, ಪರಿಶ್ರಮ, ಸಾಧನಾ, ರಿಯಾಜ್‌ ಎಲ್ಲವೂ ಮುಖ್ಯವಾಗುತ್ತದೆ.

ಪ್ರ

ನಿಮ್ಮ ಮನಸ್ಸಿನ ಸಂತೋಷಕ್ಕಾಗಿ, ಪ್ರತಿಫಲಾಪೇಕ್ಷೆಯಿಲ್ಲದೆ ಸಂಗೀತ ಕ್ಷೇತ್ರದಲ್ಲಿ ಹುಲುಸಾದ ವ್ಯವಸಾಯ ನಡೆಸಿದವರು ನೀವು. ಹಲವು ಪ್ರಶಸ್ತಿಗಳು ನಿಮ್ಮನ್ನು ಅರಸಿ ಗೌರವಿಸಿವೆ. ಈಗ ಬಂದಿರುವ ‘ತಾನ್‌ಸೇನ್‌ ಸಮ್ಮಾನ್‌’ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಪ್ರಶಸ್ತಿ ಪಡೆಯುವುದು ಒಬ್ಬ ಕಲಾವಿದನ ಜೀವನದಲ್ಲಿ ಅದ್ಭುತ ಅನುಭವ. ಕಳೆದ ಐವತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಇದ್ದು, ನನ್ನ ಇತಿಮಿತಿಯಲ್ಲಿ ಸಂಗೀತಕ್ಕಾಗಿ ದುಡಿದಿದ್ದೇನೆ. ದೇಶ ವಿದೇಶಗಳಲ್ಲಿ ಕಛೇರಿ ನೀಡಿದ್ದೇನೆ. ಹಲವಾರು ರಾಗಗಳನ್ನು ಹಾಡಿ ರೆಕಾರ್ಡಿಂಗ್‌ಗಳನ್ನು ಹೊರತಂದಿದ್ದೇನೆ. ಸ್ವತಂತ್ರ ಕಛೇರಿ ನೀಡಲು ಸಾಮರ್ಥ್ಯ ಹೊಂದಿರುವ ಹಲವಾರು ಶಿಷ್ಯಂದಿರನ್ನು ತಯಾರು ಮಾಡಿದ್ದೇನೆ. ಇವೆಲ್ಲವನ್ನೂ ಪರಿಗಣಿಸಿ ನನ್ನನ್ನು ಈ ಪ್ರತಿಷ್ಠಿತ ‘ತಾನ್‌ಸೇನ್‌ ಸಮ್ಮಾನ್‌’ಗೆ ಆಯ್ಕೆ ಮಾಡಿರುವುದು ತುಂಬ ಸಂತೋಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT